Tag: ಎಎನ್32

  • ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ನವದೆಹಲಿ: ಜೂ. 11 ರಂದು ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿದ್ದ ಸ್ಥಳಕ್ಕೆ ಭಾರತೀಯ ವಾಯುಸೇನೆಯ ಸಿಬ್ಬಂದಿ ತೆರಳಿದ್ದು, ವಿಮಾನಲ್ಲಿದ್ದವರು ಯಾರು ಬದುಕುಳಿದಿಲ್ಲ ಎಂದು ಸ್ಪಷ್ಟನೆ ನೀಡಿದೆ.

    ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ದಟ್ಟ ಅರಣ್ಯದ ನಡುವೆ ವಿಮಾನ ಪತನವಾಗಿತ್ತು. ಒಂದು ವಾರಗಳ ಕಾಲ ವಿಮಾನವನ್ನು ಹುಡುಕಾಟ ನಡೆಸಿದ ವಾಯುಸೇನೆ ಸಿಬ್ಬಂದಿ ಜೂ.11 ರಂದು ದುರಂತ ನಡೆದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಆದರೆ ಈ ವೇಳೆ ಸ್ಥಳಕ್ಕೆ ತೆರಳಲು ಹವಾಮಾನ ವೈಪರಿತ್ಯ ಹಾಗೂ ದಟ್ಟ ಅರಣ್ಯ ನಡುವೆ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ಭೂಮಾರ್ಗದ ಮೂಲಕವೇ ಸ್ಥಳವನ್ನು ತಲುಪುವ ಕಾರ್ಯ ಮಾಡಲಾಗಿತ್ತು. ಆ ಬಳಿಕ ಘಟನಾ ಸ್ಥಳಕ್ಕೆ ಹತ್ತಿರ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ಅಲ್ಲಿಂದ ಸ್ಥಳಕ್ಕೆ ತೆರಳಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ವಾಯಸೇನೆ, ಘಟನೆಯಲ್ಲಿ ಯಾರು ಬದುಕುಳಿದಿಲ್ಲ. ದುರಂತದಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಕುಟುಂಬದೊಂದಿಗೆ ವಾಯಸೇನೆ ಇರಲಿದೆ ಎಂದು ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದೆ.

    ಇಂದು ಬೆಳಗ್ಗೆ 8 ಸದಸ್ಯರ ವಾಯುಸೇನೆಯ ತಂಡ ಸ್ಥಳವನ್ನು ತಲುಪಿ ಪರಿಶೀಲನೆ ನಡೆಸಿತ್ತು. ಜೂನ್ 3 ರಂದು ಎಎನ್ -32 ವಿಮಾನ ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿ ಅರುಣಾಚಲ ಪ್ರದೇಶದ ಮೆನಸುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ಎಂಟು ಸಿಬ್ಬಂದಿ, ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ಮೃತರನ್ನ ವಿಂಗ್ ಕಮಾಂಡ್ ಜಿಎಂ ಚಾಲ್ರ್ಸ್, ಸ್ಕ್ವಾಡ್ರನ್ ಲೀಡರ್ ಎಚ್ ವಿನೋದ್, ಫ್ಲೇಟ್ ಲೆಫ್ಟನೆಂಟ್ ಗಳಾಗಿದ್ದ ಆರ್ ಥಾಪಾ ಹಾಗೂ ಎ ತನ್ವರ್, ಎಸ್ ಮೊಹಾಂತಿ, ಎಂಕೆ ಗರ್ಗ್, ವಾರಂಟ್ ಆಫೀಸರ್ ಕೆಕೆ ಮಿಶ್ರಾ, ಸರ್ಗೆಂಟ್ ಅನೂಪ್ ಕುಮಾರ್, ಕಾರ್ಪೋರಲ್ ಶೆರಿನ್, ಲೀಡ್ ಏರ್ ಕ್ರಾಫ್ಟ್ ಮನ್ ಎಸ್ ಕೆ ಸಿಂಗ್ ಹಾಗೂ ಮನ್ ಪಂಕಜ್, ಪುತಲಿ, ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. 2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಷಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.