Tag: ಎಂ.ವಿ.ರಾಜಶೇಖರನ್

  • ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅಂತ್ಯಕ್ರಿಯೆ

    ರಾಮನಗರ: ಅನಾರೋಗ್ಯದಿಂದ ಮೃತಪಟ್ಟ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅಂತ್ಯಕ್ರಿಯೆ ಅವರ ಹುಟ್ಟೂರು ಕನಕಪುರ ತಾಲೂಕಿನ ದೊಡ್ಡಮರಳವಾಡಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಲಿಂಗಾಯಿತ ಧರ್ಮದ ವಿಧಿವಿಧಾನಗಳ ಮೂಲಕ ನೆರವೇರಿತು.

    ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅವರ ಆಸೆಯಂತೆಯೇ ಅವರ ಹುಟ್ಟೂರು ಮರಳವಾಡಿಯಲ್ಲಿ ಸೋಮವಾರ ಮಧ್ಯಾಹ್ನ 2.45ರ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇವಲ 20 ನಿಮಿಷಗಳು ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಿಡಿದೇವರಹಳ್ಳಿ ರಸ್ತೆಯ ತೋಟದ ಮನೆಯ ಮುಂಭಾಗ ಸಾರ್ವಜನಿಕರು, ಗಣ್ಯರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

    ಎಂ.ವಿ.ಆರ್ ರವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 2.20ರ ಸುಮಾರಿಗೆ ಅಂಬುಲೆನ್ಸ್ ಮೂಲಕ ಮರಳವಾಡಿಗೆ ಕರೆತರಲಾಯಿತು. ಬಳಿಕ ಅವರದ್ದೇ ತೋಟದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ದೂರದೂರದಲ್ಲೇ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

    ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಎಂಎಲ್‍ಸಿ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಸದಸ್ಯ ಜಿಯಾವುಲ್ಲಾ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಮರಳೇಗವಿ ಮಠದ ಶಿವರುದ್ರ ಸ್ವಾಮೀಜಿ, ಮರಳವಾಡಿಯ ಮೃತ್ಯುಜಯ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ ಸೇರಿದಂತೆ ಇತರ ಗಣ್ಯರು ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ ದೊಡ್ಡ ಮರಳವಾಡಿಯ ದೇವರಹಳ್ಳಿ ರಸ್ತೆಯಲ್ಲಿನ ತೋಟದಲ್ಲಿ ಅಂತ್ಯಕ್ರಿಯೆಯು  ನಡೆಯಿತು.

  • ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ನಿಧನ

    ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ನಿಧನ

    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ (93) ಅವರು ನಿಧನರಾಗಿದ್ದಾರೆ.

    ಎಂ.ವಿ.ರಾಜಶೇಖರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಎಂ.ವಿ.ರಾಜಶೇಖರನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಅವರು ಪತ್ನಿ ಗಿರಿಜಾ ರಾಜಶೇಖರನ್, ಇಬ್ಬರು ಗಂಡು ಮತ್ತು ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಕೃಷಿಕ ಮತ್ತು ಗ್ರಾಮೀಣಾಭಿವೃದ್ಧಿ ಸಲಹೆಗಾರರಾದ ರಾಜಶೇಖರನ್ 1928ರ ಸೆಪ್ಟೆಂಬರ್ 12 ರಂದು ರಾಮನಾಗರ ಜಿಲ್ಲೆಯ ಮರಲವಾಡಿಯಲ್ಲಿ ಜನಿಸಿದ್ದರು. ಎಂಎಲ್‍ಸಿ, ಸಂಸದ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ರಾಜಶೇಖರನ್ ಅವರು ಸರಳತೆ, ನಮ್ರತೆ ಮತ್ತು ದೊಡ್ಡ ಪ್ರಬುದ್ಧತೆ ಹೊಂದಿರುವ ರಾಜಕಾರಣಿಯಾಗಿದ್ದರು.

    ಕೇಂದ್ರದ ಮಾಜಿ ಸಚಿವ ಎಂವಿ ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಂವಿಆರ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣಾಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆ ಸ್ಥಾಪಿಸಿದ್ದರು ಎಂದು ಸ್ಮರಿಸಿದ್ದಾರೆ.

    ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

    ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಅವರ ನಿಧನ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.

    “ಆತ್ಮೀಯರು, ಕೇಂದ್ರದ ಮಾಜಿ ಸಚಿವರಾಗಿದ್ದ ಎಂ ವಿ ರಾಜಶೇಖರನ್ ಅವರ ನಿಧನ ದುಃಖಕರವಾಗಿದೆ. ಸರಳ, ಸಜ್ಜನಿಕೆಗಳ ಎಂ.ವಿ.ಆರ್ ಅವರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.