ನಟ, ನಿರ್ದೇಶಕರಾಗಿ ಮಾತ್ರವಲ್ಲದೇ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದ ಮೂಲಕವೂ ಮನೆ ಮಾತಾಗಿರುವವರು ರಮೇಶ್ ಅರವಿಂದ್. ಇತ್ತೀಚೆಗಷ್ಟೇ ಪತ್ತೇದಾರಿಕೆಯ ಗೆಟಪ್ಪಿನಲ್ಲಿ ಮಿಂಚಿ ಗೆದ್ದಿದ್ದ ರಮೇಶ್, ಇದೀಗ ಮತ್ತೆ 100 ಅನ್ನೋ ಸಿನಿಮಾ ಮೂಲಕ ಮತ್ತೊಂದು ಅವತಾರದಲ್ಲಿ ಪ್ರೇಕ್ಷಕರನ್ನು ತಾಕುವ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡ ರಮೇಶ್ ಅರವಿಂದ್ ಅವರ ಬರ್ತ್‍ಡೇ ಸ್ಪೆಷಲ್ ಎಂಬಂತೆ 100 ಚಿತ್ರದ ಚೆಂದದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ.
ಈ ಹಿಂದೆ ಸದಭಿರುಚಿಯ ಸಿನಿಮಾಗಳ ಮೂಲಕ ಹೆಸರಾಗಿದ್ದ ಎಂ.ರಮೇಶ್ ರೆಡ್ಡಿ ನಂಗಲಿ ನಿರ್ಮಾಣದಲ್ಲಿ ‘100’ ಚಿತ್ರ ಮೂಡಿ ಬಂದಿದೆ. ಕೊರೊನಾ ಸಂಕಷ್ಟ ಒಂದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಹೊತ್ತಿಗೆಲ್ಲ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿರುತ್ತಿತ್ತು. ಆ ಹಿನ್ನಡೆಯನ್ನೂ ಲೆಕ್ಕಿಸದೆ ಚಿತ್ರತಂಡ ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ರಮೇಶ್ ಅವರ ಬರ್ತ್‍ಡೇಗಾಗಿ ಈ ಲಿರಿಕಲ್ ವೀಡಿಯೋ ಲಾಂಚ್ ಮಾಡಲಾಗಿದೆ.
ಇದು ಪಾರ್ಟಿ ಮೂಡಿಗೆ ಜಾರಿಸುವಂಥ ಮಜವಾದ ಹಾಡು. ವಿಶೇಷ ಅಂದ್ರೆ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿನ್ನಲ್ ರಾಜ್, ಪ್ರಮೋದ್ ಮರವಂತೆ ಮತ್ತು ಭಾಸ್ಕರ್ ಬಂಗೇರ ಸೇರಿಕೊಂಡು ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ರಮೇಶ್ ಅರವಿಂದ್, ಅನನ್ಯಾ ಭಟ್ ಮತ್ತು ನೀತು ಸುಬ್ರಹ್ಮಣ್ಯ ಅಷ್ಟೇ ಮಜವಾಗಿ ಹಾಡಿದ್ದಾರೆ.
ಈವತ್ತಿಗೆ ಸೋಶಿಯಲ್ ಮೀಡಿಯಾ ಅನ್ನೋದು ಸರ್ವವ್ಯಾಪಿಯಾಗಿದೆ. ಮನಸ್ಥಿತಿ ನೆಟ್ಟಗಿದ್ದರೆ ಇದನ್ನು ಸಕಾರಾತ್ಮಕವಾಗಿಯೇ ಬಳಸಿಕೊಳ್ಳಬಹುದು. ಆದ್ರೆ ಕೆಲ ವಿಕೃತರು ಸಾಮಾಜಿಕ ಜಾಲತಾಣಗಳ ವ್ಯಾಪ್ತಿ, ವಿಸ್ತಾರಗಳನ್ನು ಸಮಾಜ ಬಾಹಿರ ದಂಧೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದುವೇ ಹಲವರ ನೆಮ್ಮದಿಗೆ ಕುತ್ತು ತಂದಿದೆ. ಕೆಲ ಸಂದರ್ಭಗಳಲ್ಲಿ ಜೀವ ಹಾನಿಗಳೂ ಸಂಭವಿಸುತ್ತಿವೆ. ಇದೇ ಕಥಾ ಹಂದರ ಹೊಂದಿರೋ ಚೆಂದದ ಕಥೆಯನ್ನಿಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರಂತೆ.
ಹೆಜ್ಜೆ ಹೆಜ್ಜೆಗೂ ಅಬ್ಬರಿಸುತ್ತಾ ಸಾಗಿ ಬಂದಿದ್ದ ಪಡ್ಡೆಹುಲಿಯೀಗ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಈ ಚಿತ್ರ ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗೋ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಉಳಿದೆಲ್ಲ ಭಾವಗಳ ಜೊತೆಗೆ ಕನ್ನಡತನ, ಸಂಗೀತ ಪ್ರೇಮವನ್ನೂ ಉಸಿರಾಗಿಸಿಕೊಂಡಿರೋ ಮಾಸ್ ಗೆಟಪ್ಪಿನ ಪಡ್ಡೆಹುಲಿ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.
ಗುರುದೇಶಪಾಂಡೆ ನಿರ್ದೇಶನದ ಚಿತ್ರಗಳೆಂದರೇನೇ ನೆಲದ ಘಮಲಿನ ಕಥೆಯ ನಿರೀಕ್ಷೆಗಳೇಳುತ್ತವೆ. ಆದರೆ ಕಾಲೇಜು ಸ್ಟೋರಿ ಎಂಬಂತೆ ಬಿಂಬಿತವಾಗಿದ್ದ ಪಡ್ಡೆಹುಲಿಯೂ ಅಂಥಾದ್ದೇ ಸಾರ ಹೊಂದಿರುತ್ತದಾ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಆದರೆ, ಪಡ್ಡೆಹುಲಿಯ ಕಥೆ ಕಾಲೇಜು ಕಾರಿಡಾರಿನಾಚೆಗೂ ಬಳಸಿ ಬಂದು, ಅಪ್ಪಟ ನೆಲದ ಸೊಗಡಿನ ಘಮಲನ್ನು ಪ್ರೇಕ್ಷಕರೆದೆಗೂ ಮೊಗೆದು ತಂದು ಸುರುವಿದೆ. ಅಂಥಾ ಪುಳಕ, ಥ್ರಿಲ್ಲಿಂಗ್, ಮೈನವಿರೇಳಿಸೋ ಸಾಹಸ, ಹನಿಗಣ್ಣಾಗುವಂಥಾ ತಿರುವುಗಳು, ಗಾಢ ಪ್ರೇಮ ಮತ್ತು ಸಂಗೀತಮಯ ಪಯಣ… ಇದಿಷ್ಟೂ ಭಾವಗಳೊಂದಿಗೆ ಪಡ್ಡೆಹುಲಿ ಅಪರೂಪದ ಚಿತ್ರ ನೋಡಿದ ಅನುಭವವೊಂದಕ್ಕೆ ಪ್ರೇಕ್ಷಕರನ್ನೆಲ್ಲ ವಾರಸುದಾರರನ್ನಾಗಿಸುತ್ತದೆ.
ಶಾಲಾ ಆವರಣದಲ್ಲಿ ಕನ್ನಡ ಪ್ರೇಮದ ಹಿಮ್ಮೇಳದೊಂದಿಗೇ ಪಡ್ಡೆಹುಲಿಯ ಕಥೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕನ್ನಡಕ್ಕೆ ಅವಮಾನಿಸಿದರೆ ಶಾಲೆಯ ಮುಖ್ಯಸ್ಥರ ಕಪಾಳಕ್ಕೆ ಬಾರಿಸಲೂ ಹಿಂದೆ ಮುಂದೆ ನೋಡದ ತಂದೆಯಾಗಿ ಕ್ರೇಜಿóಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಕಥೆಯೆಂಬುದು ಕಾಲೇಜಿನೊಳಗೇ ನಡೆದರೂ ಕೂಡಾ ಅದರ ಭಾವಗಳು ಬದುಕಿನ ನಾನಾ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಕಾಲೇಜೊಂದರ ಭಾವಲೋಕವನ್ನು ಹಸಿ ಹಸಿಯಾಗಿ ಹಿಡಿದಿಡೋ ಚಿತ್ರಗಳು ಸಾಕಷ್ಟು ಬಂದಿರಬಹುದು. ಆದರೆ ಪಡ್ಡೆಹುಲಿಯಷ್ಟು ಪರಿಣಾಮಕಾರಿಯಾದ ಎನರ್ಜಿಟಿಕ್ ಕಥೆಗಳು ತುಂಬಾನೇ ವಿರಳ. ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ಹಾಕಿರುವ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.
ಇಲ್ಲಿ ಕಷ್ಟದಿಂದಲೇ ಕಾಲೇಜು ಕಾರಿಡಾರಿಗೆ ಕಾಲಿಟ್ಟು ಆ ಬಳಿಕ ತಾನೇ ತಾನಾಗಿ ಆ ಲೋಕದ ನಾನಾ ಪಲ್ಲಟಗಳಿಗೆ ಪಕ್ಕಾಗುವ ಮಧ್ಯಮ ವರ್ಗದ ಹುಡುಗನ ಕಥೆಯಿದೆ. ಈ ಹಾದಿಯಲ್ಲೆದುರಾಗೋ ಎಲ್ಲ ಸವಾಲುಗಳನ್ನೂ ಎದುರಿಸುತ್ತಾ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗುವ ಪಕ್ಕಾ ಮಾಸ್ ಪಾತ್ರಕ್ಕೆ ನಾಯಕ ಶ್ರೇಯಸ್ ಜೀವ ತುಂಬಿದ್ದಾರೆ. ಪ್ರತೀ ಫ್ರೇಮಿನಲ್ಲಿಯೂ ಪಳಗಿದ ನಟನಂಥಾ ಪ್ರೌಢ ನಟನೆಯನ್ನೂ ಅವರು ನೀಡಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಅದಕ್ಕೆ ಭರ್ಜರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ರವಿಚಂದ್ರನ್, ಸುಧಾ ರಾಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಪಡ್ಡೆಹುಲಿಯ ಆವೇಗಕ್ಕೆ ಕಸುವು ತುಂಬಿದ್ದಾರೆ.
ಪಡ್ಡೆಹುಲಿಯ ಕಥೆ ತೆರೆದುಕೊಳ್ಳೋದೇ ಚಿತ್ರದುರ್ಗದ ನೆಲದಿಂದ. ಇಲ್ಲಿನ ಮಧ್ಯಮವರ್ಗದ ಕನ್ನಡ ಮೇಷ್ಟರ ಕುಟುಂಬದ ಕೂಸಾದ ನಾಯಕ ಸಂಪತ್ ರಾಜ್ ಪಾಲಿಗೆ ಸಂಗೀತವೆಂದರೆ ಬಾಲ್ಯದಿಂದಲೂ ಪ್ರಾಣ. ತಾನು ಜಗತ್ತೇ ಬೆರಗಾಗಿ ನೋಡುವಂಥಾ ಸಂಗೀತಗಾರನಾಗಬೇಕೆಂಬ ಕನಸು ಆತನ ಮನಸಲ್ಲಿ ಎಳವೆಯಿಂದಲೇ ಮೊಳಕೆಯೊಡೆದು ಬಿಟ್ಟಿರುತ್ತೆ. ಆದರೆ ಹೆತ್ತವರಿಗೆ ಮಗ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ. ಅತ್ತ ಜೀವದಂತೆ ಪ್ರೀತಿಸೋ ಹೆತ್ತವರ ಆಸೆಯನ್ನೂ ಹೊಸಕುವಂತಿಲ್ಲ. ತನ್ನ ಕನಸನ್ನೂ ಕೈ ಬಿಡುವಂತಿಲ್ಲ. ಕಡೆಗೂ ಹೆತ್ತವರ ಆಸೆಯಂತೆಯೇ ದುರ್ಗದಿಂದ ಬೆಂಗಳೂರಿಗೆ ಬಂದು ಇಂಜಿನಿಯರಿಂಗ್ ಕಾಲೇಜಿಗೆ ಅಡಿಯಿರಿಸೋ ದುರ್ಗದ ಪಡ್ಡೆ ಹುಲಿಗೆ ನಾನಾ ಸವಾಲುಗಳೆದುರಾಗುತ್ತವೆ. ಅವಮಾನಗಳು ಎದೆಗಿರಿಯುತ್ತವೆ. ಇದೆಲ್ಲದರಾಚೆಗೆ ಪಡ್ಡೆಹುಲಿ ಸಂಗೀತಗಾರನಾಗೋ ಕನಸನ್ನು ನನಸು ಮಾಡಿಕೊಳ್ತಾನಾ ಎಂಬುದೇ ಅಸಲೀ ಕುತೂಹಲ. ಇದನ್ನಿಟ್ಟುಕೊಂಡು ಯಾರೇ ಚಿತ್ರಮಂದಿರಕ್ಕೆ ತೆರಳಿದರೂ ಪಡ್ಡೆ ಹುಲಿಯ ಕಡೆಯಿಂದ ಅಪೂರ್ವ ಅನುಭವವಾಗೋದು ಗ್ಯಾರೆಂಟಿ!
ದುರ್ಗದಿಂದ ಆರಂಭವಾಗಿ ಕಾಲೇಜು ಕಾರಿಡಾರಿನಲ್ಲಿ ಹರಿದಾಡೋ ಈ ಕಥೆ ಅಪರೂಪದ್ದು. ಫ್ಯಾಮಿಲಿ, ಪ್ರೀತಿ, ಸಾಹಸ, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವ ಹೊಂದಿರೋ ಈ ಕಥೆಯಲ್ಲಿ ಆಪ್ತವಾಗೋದು ಪಡ್ಡೆಹುಲಿಯ ಗೆಲ್ಲುವ ಛಲ. ಈ ಚಿತ್ರವನ್ನು ಯಾರೇ ನೋಡಿದರೂ ಪಡ್ಡೆಹುಲಿಯಾಗಿ ಅಬ್ಬರಿಸಿರೋ ಶ್ರೇಯಸ್ ಪಾತ್ರ ಮನಸೊಳಗೆ ಪ್ರತಿಷ್ಠಾಪಿತವಾಗುತ್ತೆ. ಶ್ರೇಯಸ್ ಅವರಂತೂ ಇದು ಮೊದಲ ಚಿತ್ರವೆಂಬ ಸುಳಿವೇ ಬಿಟ್ಟುಕೊಡದಂತೆ ಅಬ್ಬರಿಸಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ಥರ ಥರದ ಗೆಟಪ್ಪುಗಳಲ್ಲಿ ಅದಕ್ಕೆ ತಕ್ಕುದಾಗಿ ಅಭಿನಯಿಸೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕವೇ ಮಾಸ್ ಹೀರೋ ಆಗಿ ನೆಲೆಗೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಖಂಡ ಹನ್ನೊಂದು ಹಾಡುಗಳು ಹೊರ ಬಂದಿದ್ದಕ್ಕೂ ಕಥೆಗೂ ನೇರಾ ನೇರ ಕನೆಕ್ಷನ್ನುಗಳಿವೆ. ಅದೇನೆಂಬುದೂ ಕೂಡಾ ಈ ಕಥೆಯ ಪ್ರಧಾನ ಸಾರ.
ಹೊಸಾ ನಾಯಕನ ಆಗಮನಕ್ಕೆ ಏನೇನು ಬೇಕೋ ಅಂಥಾ ಎಲ್ಲ ಅಂಶಗಳೊಂದಿಗೆ ಗುರುದೇಶಪಾಂಡೆ ಅವರು ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ರವಿಚಂದ್ರನ್ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ಹೊಸತನವಿದೆ. ನಿರ್ಮಾಪಕ ರಮೇಶ್ ರೆಡ್ಡಿಯವರ ಧಾರಾಳತನವೆಂಬುದು ಪಡ್ಡೆಹುಲಿಯನ್ನು ಪ್ರತೀ ಹಂತದಲ್ಲಿಯೂ ಲಕ ಲಕಿಸುವಂತೆ ಮಾಡಿದೆ. ಕೊಂಚ ಆಚೀಚೆ ಆಗಿದ್ದರೂ ಸಾಮಾನ್ಯ ಕಥೆಯಾಗಬಹುದಾಗಿದ್ದ ಪಡ್ಡೆಹುಲಿಯ ಚಮತ್ಕಾರವನ್ನು ವಿಶೇಷವಾಗಿಸಿರೋದು ನಿರ್ದೇಶಕರ ಜಾಣ್ಮೆ. ಒಟ್ಟಾರೆಯಾಗಿ ಕನ್ನಡಕ್ಕೆ ಮಾಸ್ ಹೀರೋ ಎಂಟ್ರಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಶ್ರೇಯಸ್ ಪಡ್ಡೆಹುಲಿಯಾಗಿ ಖಂಡಿತಾ ಇಷ್ಟವಾಗುತ್ತಾರೆ.
ಸಿನಿಮಾಗಳಲ್ಲಿ ಜನಮೆಚ್ಚಿದ ನಟರ ಪ್ರಭೆಯನ್ನು ಬಳಸಿಕೊಳ್ಳೋದು ಮಾಮೂಲು. ಆದರೆ ಅಂಥಾ ನಟರ ಅಸಲಿ ಅಭಿಮಾನಿಗಳೇ ಥ್ರಿಲ್ ಆಗುವಂತೆ ಚಿತ್ರವೊಂದನ್ನು ರೂಪಿಸೋದು ಸವಾಲಿನ ಸಂಗತಿ. ಈ ವಿಚಾರದಲ್ಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರ ಗೆದ್ದಿದೆ. ಅದರಿಂದಾಗಿಯೇ ಇಡೀ ಕರ್ನಾಟಕದ ಉದ್ದಗಲಕ್ಕೂ ಹರಡಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳೆಲ್ಲ ಪಡ್ಡೆಹುಲಿಯತ್ತ ಆಕರ್ಷಿತರಾಗಿದ್ದಾರೆ.
ಎಂ.ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಈ ಸಿನಿಮಾದೊಳಗಿನ ವಿಷ್ಣು ಅಭಿಮಾನ ಥರ ಥರದಲ್ಲಿ ಅನಾವರಣಗೊಳ್ಳುತ್ತಲೇ ಬಂದಿದೆ. ಈ ಅಭಿಮಾನದ ಹಿಂದೆ ರಿಯಲ್ ಆದ ಕಥಾನಕಗಳೂ ಇವೆ. ಯಾಕಂದ್ರೆ ಈ ಚಿತ್ರದಲ್ಲಿ ವಿಷ್ಣು ಅಭಿಮಾನಿಯಾಗಿ ನಟಿಸಿರೋ ಶ್ರೇಯಸ್ ನಿಜ ಜೀವನದಲ್ಲಿಯೂ ಸಾಹಸ ಸಿಂಹನ ಅಪ್ಪಟ ಅಭಿಮಾನಿ!
ಅಷ್ಟಕ್ಕೂ ಶ್ರೇಯಸ್ ಅವರ ತಂದೆ ನಿರ್ಮಾಪಕರಾದ ಕೆ.ಮಂಜು ಅವರೂ ವಿಷ್ಣು ಅಭಿಮಾನಿಯೇ. ಮಂಜು ಅವರು ವಿಷ್ಣುವರ್ಧನ್ ಅವರ ನಿಕಟ ಸಂಪರ್ಕ ಹೊಂದಿದ್ದವರು. ವಿಷ್ಣು ಮೇಲೆ ಅಪಾರವಾದ ಪ್ರೀತಿ ಹೊಂದಿರೋ ಮಂಜು ತಮ್ಮ ಮಗನ ಮೊದಲ ಚಿತ್ರದ ಮೂಲಕ ಅದನ್ನು ಹೊರಗೆಡವಿದ್ದಾರೆ. ವಿಷ್ಣು ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ರಾಪ್ ಸಾಂಗ್ ಸೇರಿದಂತೆ ಎಲ್ಲದರಲ್ಲಿಯೂ ಪಡ್ಡೆಹುಲಿ ವಿಷ್ಣು ಅಭಿಮಾನದಿಂದಲೇ ಮಿರುಗುತ್ತಿದೆ!
ಬೆಂಗಳೂರು: ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಅದ್ದೂರಿತನ ಎಂಥಾದ್ದೆಂಬುದಕ್ಕೆ ಹಾಡುಗಳೇ ಸೂಕ್ತ ಉದಾಹರಣೆಯಾಗಿ ಎಲ್ಲೆಡೆ ಹರಿದಾಡುತ್ತಿವೆ. ಬಹುಶಃ ಓರ್ವ ಹೊಸಾ ಹೀರೋನನ್ನು ನಂಬಿಕೊಂಡು ಇಷ್ಟು ದೊಡ್ಡ ಮಟ್ಟದ ಬಜೆಟ್ಟಿನಲ್ಲಿ ತಯಾರಾದ ಕನ್ನಡದ ಮೊದಲ ಸಿನಿಮಾ ಪಡ್ಡೆಹುಲಿಯೇ ಇರಬೇಕು!
ಹೊಸಾ ಹೀರೋ ಅಂದರೇನೇ ಬೆಚ್ಚಿಬಿದ್ದು ಹಿಂದೆ ಸರಿಯೋರೇ ಹೆಚ್ಚು. ಆದರೆ ಹೊಸಾ ಹುಡುಗ ಶ್ರೇಯಸ್ ನಾಯಕನಾಗಿರೋ ಪಡ್ಡೆಹುಲಿ ಚಿತ್ರಕ್ಕೆ ನಿರ್ಮಾಪಕ ಎಂ.ರಮೇಶ್ ರೆಡ್ಡಿಯವರು ಹಣ ಖರ್ಚು ಮಾಡುತ್ತಿರೋ ಪರಿ ಕಂಡು ಗಾಂಧಿನಗರದ ಮಂದಿಯೇ ಅವಾಕ್ಕಾಗಿದ್ದಾರೆ. ಪ್ರೇಕ್ಷಕರೂ ಅಚ್ಚರಿಗೊಂಡಿದ್ದಾರೆ. ಆದರೆ ನಿರ್ಮಾಪಕ ರಮೇಶ್ ರೆಡ್ಡಿಯವರದ್ದು ಮಾತ್ರ ಹೇಗಾದರೂ ಸರಿ, ಸಿನಿಮಾ ಅಚ್ಚಕಟ್ಟಾಗಿ, ಅದ್ದೂರಿಯಾಗಿ ಮೂಡಿ ಬರಬೇಕೆನ್ನುವುದೊಂದೇ ಅಚಲ ಉದ್ದೇಶ!
ಚಿತ್ರೀಕರಣಕ್ಕೂ ಮುನ್ನ ಮಾಡಿರೋ ಪ್ಲಾನಿಗಿಂತಲೂ ಕೊಂಚ ಕಾಸು ಖರ್ಚಾದರೂ ಕೊಸರಾಡೋದು ಮಾಮೂಲು. ನಿರ್ಮಾಪಕರ ಬಾಧೆಯೂ ಅಂಥಾದ್ದೇ ಇರುತ್ತೆ. ಆದರೆ ರಮೇಶ್ ರೆಡ್ಡಿಯವರ ಔದಾರ್ಯ ಕಂಡು ನಿರ್ದೇಶಕ ಗುರುದೇಶಪಾಂಡೆ ಸೇರಿದಂತೆ ಇಡೀ ಚಿತ್ರತಂಡವೇ ಅಚ್ಚರಿಗೊಂಡಿದೆ. ಯಾಕೆಂದರೆ ಪಡ್ಡೆಹುಲಿಯನ್ನು ಅಂದಗಾಣಿಸೋ ಯಾವ ಐಡಿಯಾಗಳಿಗೂ ರಮೇಶ್ ರೆಡ್ಡಿಯವರು ಬೇಡ ಅನ್ನಲೇ ಇಲ್ಲ. ಅವರು ಅಷ್ಟೊಂದು ಪ್ರೀತಿ, ಕಾಳಜಿ ತೋರಿಸದೇ ಇದ್ದಿದ್ದರೆ ಬರೋಬ್ಬರಿ ಹನ್ನೊಂದು ಹಾಡುಗಳು ರೂಪುಗೊಳ್ಳೋದೂ ಸಾಧ್ಯವಿರುತ್ತಿರಲಿಲ್ಲ!
ನಿರ್ಮಾಪಕರು ಹೀಗೆ ಪ್ರೀತಿಯಿಂದ ಆರೈಕೆ ಮಾಡಿ ಮೈ ನೇವರಿಸುತ್ತಾ ಬಂದ ಕಾರಣದಿಂದಲೇ ಪಡ್ಡೆಹುಲಿ ಈವತ್ತು ಕೊಬ್ಬಿ ಘರ್ಜಿಸುತ್ತಿದೆ. ಆದ್ದರಿಂದಲೇ ಪ್ರೇಕ್ಷಕರೆಲ್ಲ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಎಮ್. ರಮೇಶ್ ರೆಡ್ಡಿ ನಿರ್ಮಾಣದ, ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಅಭಿನಯಿಸಿರುವ ಪಡ್ಡೆಹುಲಿ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರೀತಿಯಿಂದ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಶುಭ ಕೋರಿದ್ದಾರೆ. ಹೀಗೆ ಯಜಮಾನನ ಕಡೆಯಿಂದ ಹೊರ ಬಂದಿರೋ ಈ ಟ್ರೈಲರ್ ನಿಜಕ್ಕೂ ಬೆರಗಾಗಿಸುವಂತಿದೆ!
ಪಡ್ಡೆಹುಲಿ ಎಂಬ ಹೆಸರು ಕೇಳಿದಾಕ್ಷಣ ಇದು ಯುವ ಆವೇಗ ಹೊಂದಿರೋ ಮಾಸ್ ಸಿನಿಮಾ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದು ಅರ್ಧ ಸತ್ಯ ಎಂಬುದನ್ನು ನಿರೂಪಸುತ್ತಲೇ ಈ ಟ್ರೈಲರ್ ಬೇರೆಯದ್ದೇ ಲೋಕವೊಂದನ್ನು ಎಲ್ಲರ ಮುಂದೆ ತೆರೆದಿಟ್ಟಿದೆ. ಪ್ರಧಾನವಾಗಿ ಹೇಳಬೇಕೆಂದರೆ ಪಡ್ಡೆಹುಲಿ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್. ಇದರೊಳಗೆ ಫ್ಯಾಮಿಲಿ ಸೆಂಟಿಮೆಂಟ್, ಪ್ರೀತಿ, ಮಾಸ್, ಕಾಮಿಡಿ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಸಕಲ ಅಂಶಗಳೂ ಇದ್ದಾವೆ. ಈ ವಿಚಾರವನ್ನ ಟ್ರೈಲರ್ ಸಾಕ್ಷೀಕರಿಸಿದೆ.
ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಟ್ರೈಲರ್ ನಲ್ಲಿ ಶ್ರೇಯಸ್ ಕಾಣಿಸಿಕೊಂಡಿರೋ ರೀತಿ ಎಂಥವರನ್ನೂ ಸೆಳೆಯುವಂತಿವೆ. ಅವರು ಮಾಸ್ ಸನ್ನಿವೇಶಗಳಲ್ಲಿ ಯಾವ ಥರ ವಿಜೃಂಭಿಸಿದ್ದಾರೆಂದರೆ, ಎಂಥವರೂ ಶಿಳ್ಳೆ ಹೊಡೆದು ಕನ್ನಡದ ಟೈಗರ್ ಶ್ರಾಫ್ ಅಂತ ಹೇಳಿ ಬಿಡುವಷ್ಟು ಚೆಂದಗೆ ಕಾಣಿಸಿಕೊಂಡಿದ್ದಾರೆ. ಶ್ರೇಯಸ್‍ಗೆ ಜೋಡಿಯಾಗಿ ನಿಶ್ವಿತಾ ನಾಯ್ಡು ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಅಂದ್ರೆ ಒಂದು ಕಾಲದಲ್ಲಿ ಜೋಡಿಯಾಗಿ ನಟಿಸಿದ್ದ ಸುಧಾರಾಣಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಪಡ್ಡೆಹುಲಿಯಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. ಅವರಿಲ್ಲಿ ಮತ್ತೊಂದು ಸಲ ಮೋಡಿ ಮಾಡೋ ಸೂಚನೆಗಳೂ ಕಾಣಿಸಿವೆ. ಒಟ್ಟಾರೆಯಾಗಿ ಈ ಟ್ರೈಲರ್ ಪಡ್ಡೆಹುಲಿಯ ಅಸಲೀ ಖದರ್ ಏನೆಂಬುದನ್ನ ಸ್ಪಷ್ಟವಾಗಿಯೇ ಜಾಹೀರು ಮಾಡಿದೆ.