Tag: ಎಂ.ಪಿ.ರೇಣುಕಾಚಾರ್ಯ

  • ತಾಕತ್ತಿದ್ರೆ ಈ ರಾಜ್ಯ ಬಂದ್ ಮಾಡು ನೋಡೋಣ – ವಾಟಾಳ್‍ಗೆ ರೇಣುಕಾಚಾರ್ಯ ಸವಾಲ್

    ತಾಕತ್ತಿದ್ರೆ ಈ ರಾಜ್ಯ ಬಂದ್ ಮಾಡು ನೋಡೋಣ – ವಾಟಾಳ್‍ಗೆ ರೇಣುಕಾಚಾರ್ಯ ಸವಾಲ್

    – ಯತ್ನಾಳ್ ವಿರುದ್ಧ ಕಿಡಿ
    – ಸಿ.ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ

    ದಾವಣಗೆರೆ: ತಾಕತ್ತಿದ್ರೆ ಈ ರಾಜ್ಯ ಬಂದ್ ಮಾಡು ನೋಡೋಣ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ಏಕವಚನದಲ್ಲಿಯೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಿಎಂ ಬಗ್ಗೆ ಕೇವಲವಾಗಿ ಮಾತಾಡುತ್ತೀರಾ ಹುಷಾರ್. ಬಂದ್ ಯಶಸ್ವಿ ಆಗದಂತೆ ನೋಡಿಕೊಳ್ಳುತ್ತೇವೆ. ವಾಟಾಳ್ ಬುಟಾಟಿಕೆ ವ್ಯಕ್ತಿ. ಎಷ್ಟು ಅಕ್ರಮ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಮಗಳು ಹಾಗೂ ಅಳಿಯನ ಹೆಸರಿನಲ್ಲಿ ಎಷ್ಟೆಷ್ಟು ಅಕ್ರಮ ಗಳಿಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮವಾಗಿ ವಶ ಪಡಿಸಿಕೊಂಡಿದ್ದಾರೆ. ಅದು ಎಸ್‍ಇಎಸ್‍ಟಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ಜಮೀನಿನಲ್ಲಿ ತಮಿಳರು ಕೆಲಸ ಮಾಡುತ್ತಿರುವುದು. ಆದರೆ ಕನ್ನಡದ ನಾಡು ನುಡಿ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

    ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಸಿಎಂ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ರೆ ಹುಷಾರ್. ಯಾರ್ಯಾರ ಕಾಲು ಹಿಡಿದು ಕೆಲಸ ಮಾಡಿಕೊಂಡಿದ್ದೀರಿ ಎನ್ನುವುದು ಗೊತ್ತಿದೆ. ನಮ್ಮ ಮುಖ್ಯಮಂತ್ರಿಗಳು ಕೆಲಸ ಮಾಡಿಕೊಟ್ಟಾಗ ಕೊಂಡಾಡಿದ್ದೀರಿ ಎಂದು ವಾಟಾಳ್ ವಿರುದ್ಧ ರೇಣುಕಾಚಾರ್ಯ ಸಿಡಿಮಿಡಿಗೊಂಡರು.

    ಸಿಎಂಗೆ ಯತ್ನಾಳ್ ಡೆಡ್ ಲೈನ್ ನೀಡಿದ ಕುರಿತು ಪ್ರತಿಕ್ರಿಯಿಸಿ, ಯತ್ನಾಳ್ ಕೇಂದ್ರ ಮಾಜಿ ಸಚಿವರು ಶಾಸಕರು ಯಾಗಿ ಅನುಭವ ಇದೆ. ಯತ್ನಾಳ್ ಡೆಡ್ ಲೈನ್ ಕೊಡುವುದು ಸರಿಯಲ್ಲ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಬೇಕು. ಹಾದೀಲಿ ಬೀದಿಲಿ ನಿಂತು ಮಾತನಾಡುವುದರಿಂದ ಪಕ್ಷದ ಗೌರವ ಕಡಿಮೆಯಾಗುವುದಿಲ್ಲ. ಯಾರು ಮಾತನಾಡುತ್ತಾರೋ ಅವರ ವರ್ಚಸ್ಸು ಕಡಿಮೆಯಾಗುತ್ತೆ. ಇದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ಬಸ್ಸಿನಲ್ಲಿ ಟವಲ್ ಹಾಕಿ ಅಭ್ಯಾಸ, ಇಲ್ಲಿ ಸೀಟ್ ಖಾಲಿ ಇಲ್ಲ. ಮುಖ್ಯಮಂತ್ರಿಗಳ ಕುರ್ಚಿ ಕೂಡ ಖಾಲಿ ಇಲ್ಲ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

    ಇನ್ನು ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿದ್ದಾರೆ. ಕೊಟ್ಟಿದ್ದು ತಪ್ಪೇನಿಲ್ಲ. ಅಂದು ಬಸವಣ್ಣನವರು ಸಾಮಾಜಿಕ ನ್ಯಾಯ ಕೊಟ್ಟಿದ್ದರು. ಅದೇ ರೀತಿ ಇಂದು ಯಡಿಯೂರಪ್ಪ ನವರು ನೀಡಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

    ಇದೇ ವೇಳೆ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪದೇ ಪದೇ ಆ ವ್ಯಕ್ತಿ ಹೆಸರು ನನ್ನ ಬಾಯಲ್ಲಿ ಹೇಳುಸ್ತಿರಿ. ನಾನು ರಾಜ್ಯದ ಅಧ್ಯಕ್ಷರಿಗೆ ಹಾಗೂ ಸಿಎಂಗೆ ಹೇಳಿದ್ದೇನೆ. ಯಾರು ಎರಡು ಮೂರು ಬಾರಿ ಶಾಸಕರಾಗಿದ್ದಾರೋ ಅವರಿಗೆ ಸಚಿವ ಸ್ಥಾನ ನೀಡಲಿ. ಸಂವಿಧಾನವಾಗಿ ಎಲ್ಲರಿಗೂ ಅವಕಾಶ ನೀಡಿ. ಸೋತವರಿಗೆ ಸಚಿವ ಸ್ಥಾನ ನೀಡಬಾರದು, ಹಾಗಾದ್ರೆ ನಾವು ಸೋಲ್ತಿವಿ ಬಿಡಿ. ಕೊಡುಗೆ ಇದೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಸೋತವರು ಮಾತ್ರ ಸಮರ್ಥರಾ, ನಾವು ಸಮರ್ಥರಲ್ವಾ. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರೆ, ನಾವು 107 ಶಾಸಕರು, ಪಕ್ಷದ ಕಾರ್ಯಕರ್ತರು, ಏನ್ ಮಾಡಿದ್ದೇವೆ. ಪಕ್ಷಕ್ಕಾಗಿ ಶ್ರಮಿಸಿದ್ದಾರೆ ಆದರೆ ಸೋತಂತಹ ಒಬ್ಬ ವ್ಯಕ್ತಿಯಿಂದಲ್ಲ ಎಂದು ಸಿಪಿ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

  • ಶಾಸಕ ಎಂಪಿ ರೇಣುಕಾಚಾರ್ಯಗೆ ಕೊರೊನಾ ಪಾಸಿಟಿವ್

    ಶಾಸಕ ಎಂಪಿ ರೇಣುಕಾಚಾರ್ಯಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ ನಲ್ಲಿದ್ದಾರೆ.

    ಶಾಸಕರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿದೆ. ಇದುವರೆಗೂ ಶಾಸಕರು 10 ಬಾರಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ.

    ಇಂದು ನನಗೆ ಕೊರೊನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಿ. ನಾನು ಆರೋಗ್ಯವಾಗಿದ್ದು, ಕ್ಷೇತ್ರದ ಜನತೆಯ ಆಶಿರ್ವಾದದಿಂದ ಗುಣಮುಖರಾಗಿ ಬರುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

    ಸಮಸ್ಯೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ: ಇಂದು ಬೆಳಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ 10ನೇ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲಾರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ. CBC, RFT, LFT, ECG ಸಿಟಿ ಸ್ಕ್ಯಾನ್, ಡಿ ಡೈಮರ್, Serum Ferricin ಹಾಗೂ CRP ಈ ಎಲ್ಲಾ ಪರೀಕ್ಷೆಗಳನ್ನು ವೈದ್ಯರು ಮಾಡಿದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ ಹಾಗು ವೈದ್ಯರ ಸಲಹೆಯಂತೆ ಬೆಂಗಳೂರಿನ ನನ್ನ ಸರ್ಕಾರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ.

    ಕಳೆದ ಆರು ತಿಂಗಳುಗಳಿಂದ ಕೋವಿಡ್19ರ ವಿರುದ್ಧ ನಾನು ಸಹ ಒಬ್ಬ ಕೊರೊನಾ ವಾರಿಯರ್ ಆಗಿ ನಿರಂತರ ಜನಸೇವೆ ಮಾಡುತ್ತಿದ್ದು, ನನ್ನ ಮತ ಕ್ಷೇತ್ರದ ಬಂಧುಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸಬಹುದು. ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ನಾನು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ, ನನ್ನ ಆರೋಗ್ಯದ ಜೊತೆಗೆ ನಿಮ್ಮೆಲ್ಲರ ಯೋಗಕ್ಷೇಮವು ನನಗೆ ಅಷ್ಟೇ ಮುಖ್ಯವಾಗಿದೆ.

    ನಿನ್ನೆ ಸಹ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಕಾಂಗ್ರೆಸ್ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ವಿಧಾನಸಭಾ ಅಧಿವೇಶನ ಹಿನ್ನೆಲೆ ಜನಪ್ರತಿನಿಧಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ, 20ಜಕ್ಕೂ ಅಧಿಕ ಜನಕ್ಕೆ ಸೋಂಕು ತಗುಲಿತ್ತು.

  • ಅರೆ ದಡ್ಡ ಜಮೀರ್‌ಗೆ ನಟನೆಯ ಚಾಕಚಕ್ಯತೆ ಇದೆ: ರೇಣುಕಾಚಾರ್ಯ

    ಅರೆ ದಡ್ಡ ಜಮೀರ್‌ಗೆ ನಟನೆಯ ಚಾಕಚಕ್ಯತೆ ಇದೆ: ರೇಣುಕಾಚಾರ್ಯ

    – ಜಮೀರ್ ಶಾಸಕರಾಗಲು ನಾಲಾಯಕ್
    – ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ

    ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಬುದ್ಧಿವಂತನಲ್ಲ, ಅರೆ ದಡ್ಡ. ಆತನಿಗೆ ನಟನೆಯ ಚಾಕಚಕ್ಯತೆ ಇದ್ದು, ಆತ ನಂಬರ್ ಒನ್ ದೇಶದ್ರೋಹಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮೀರ್‍ಗೆ ಭಾರತೀಯ ಸಂಸ್ಕೃತಿ ಇಲ್ಲ. ಪಾದರಾಯನಪುರ ಪುಂಡರ ರಕ್ಷಣೆಗೆ ಜಮೀರ್ ನಿಂತಿದ್ದಾರೆ. ಪಾದರಾಯನಪುರ ಪುಂಡರ ರಕ್ಷಣೆ ದೇಶದ್ರೋಹದ ಕೆಲಸ. ರಾಜಕೀಯ ನೆಲೆ ಭದ್ರ ಮಾಡಿಕೊಳ್ಳಲು ಅಂಥವರಿಗೆ ಬೆಂಬಲಿಸುವುದು ಸರಿಯಲ್ಲ. ಜಮೀರ್ ಶಾಸಕರಾಗಲು ನಾಲಾಯಕ್. ಹೀಗಾಗಿ ಶಾಸಕ ಸ್ಥಾನವನ್ನು ವಜಾ ಮಾಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

    ಜಮೀರ್ ಬುದ್ಧಿವಂತನಲ್ಲ, ಅರೆ ದಡ್ಡ. ಜಮೀರ್‍ಗೆ ನಟನೆಯ ಚಾಕಚಕ್ಯತೆ ಇದೆ. ಜಮೀರ್ ನಂಬರ್ ಒನ್ ದೇಶದ್ರೋಹಿ. ಮನಿ, ಮ್ಯಾನ್ ಪವರ್ ಇದೆ ಅಂತ ಜಮೀರ್ ಅನ್ಕೊಂಡಿರಬಹುದು. ಮುಂದಿನ ಚುನಾವಣೆಯಲ್ಲಿ ಜನ ಜಮೀರ್‍ಗೆ ತಕ್ಕ ಪಾಠ ಕಲಿಸ್ತಾರೆ. ಜಮೀರ್ ಅಹಮದ್ 420. ಗುಜರಿ ವ್ಯಾಪಾರ ಮಾಡಿ ರಾಜಕೀಯಕ್ಕೆ ಬಂದು ಜಮೀರ್ ನಟನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೊರೊನಾ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅದು ಬಿಟ್ಟು ಪುಂಡರಿಗೆ ರಕ್ಷಣೆಯಾಗಿ ನಿಲ್ಲೋದು ಸರಿಯಲ್ಲ ಎಂದು ಗರಂ ಆದರು.

    ಇದೇ ವೇಳೆ ಬಿಜೆಪಿಯಲ್ಲಿ ಬಂಡಾಯ ಸಭೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಆನೆಗೆ ಇರೋ ತೂಕ ಆನೆಗೆ ಇದ್ದೇ ಇರುತ್ತೆ. ಯಡಿಯೂರಪ್ಪ ಸಹ ಆನೆಯಂತೆ, ಅವರಿಗೆ ಇರೋ ಮೌಲ್ಯ ಇದ್ದೇ ಇರುತ್ತೆ. ಯಾರೋ ಕೆಲವರು ಯಡಿಯೂರಪ್ಪ ವಿರುದ್ಧ ಪ್ಲಾನ್ ಮಾಡಿ ಸಭೆ ಮಾಡಿದ್ರು. ನಿರಾಣಿ ಆ ಸಭೆಗೆ ಹೋಗಲೇ ಇಲ್ಲ. ನಿರಾಣಿ ವಿರುದ್ಧವೂ ಷಡ್ಯಂತ್ರ ನಡೀತು. ಯಾರೋ ಒಬ್ಬಿಬ್ರು ಈ ರೀತಿ ಮಾಡಿದ್ರೆ ಅವರೇ ವಿಲನ್ ಆಗ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರು ಸಿಎಂ ಆಗಿ ಪೂರ್ಣಾವಧಿ ಮುಗಿಸ್ತಾರೆ ಎಂದರು.

    ಬಂಡಾಯ ಸಭೆಯ ಹಿಂದೆ ಇರೋರ ವಿರುದ್ಧ ಪಕ್ಷ ಕ್ರಮ ತಗೊಳ್ಳುತ್ತೆ. ಈಗಾಗಲೇ ಪಕ್ಷದ ಅಧ್ಯಕ್ಷರು ಎಚ್ಚರಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ವಿರುದ್ಧ ಅವರು ದೆಹಲಿಗೆ ಹೋದ್ರೆ, ನಾವೂ ಅವರ ಪರವಾಗಿ ದೆಹಲಿಗೆ ಹೋಗ್ತೇವೆ. ವಿಜಯೇಂದ್ರರ ವಿರುದ್ಧ ಆರೋಪ ನಿರಾಧಾರ. ವಿನಾಕಾರಣ ವಿಜಯೇಂದ್ರರ ವಿರುದ್ಧ ಆರೋಪ ಮಾಡಲಾಗುತ್ತಿದೆ. ವಿಜಯೇಂದ್ರರ ಹಸ್ತಕ್ಷೇಪವನ್ನು ಸಾಬೀತು ಪಡಿಸಲಿ ಎಂದು ಸವಾಲೆಸೆದರು.

    ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಹಗಲು ಕನಸು ಕಾಣೋದು ಬೇಡ. ಬಿಜೆಪಿಯ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತೇವೆ. ನಮ್ಮ ಪಕ್ಷ ಸಶಕ್ತವಾಗಿದೆ, ಪಕ್ಷದಲ್ಲಿ ಒಗ್ಗಟ್ಟಿದೆ. ಭಿನ್ನಮತ, ಬಂಡಾಯ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ‘ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ’- ರೇಣುಕಾಚಾರ್ಯಗೆ ಡಿಸಿ ಕ್ಲಾಸ್

    ‘ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ’- ರೇಣುಕಾಚಾರ್ಯಗೆ ಡಿಸಿ ಕ್ಲಾಸ್

    ದಾವಣಗೆರೆ: ಬೆಂಬಲಿಗರ ಗುಂಪು ಕಟ್ಟಿಕೊಂಡು ನಗರ ಸುತ್ತಾಟ ನಡೆಸಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮನೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೊರೊನಾ ಜಾಗೃತಿ ಅಂತ ಹೇಳಿ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ದಾವಣಗೆರೆ ನಗರ ಸುತ್ತುತ್ತಿದ್ದಾರೆ.

    ನಗರದ ದುರ್ಗಾಂಬಿಕಾ ದೇವಸ್ಥಾನ ಪ್ರದೇಶದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ರೇಣುಕಾಚಾರ್ಯ ಅವರಿಗೆ ಮೇಯರ್ ಬಿ.ಜೆ.ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್ ಸಾಥ್ ಸೇರಿದಂತೆ ಅನೇಕ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದರು. ಹತ್ತಾರು ಜನ ಬೀದಿಯಲ್ಲಿ ಸುತ್ತಿದ್ದರೂ ಜಿಲ್ಲಾಡಳಿ ಮೌನಕ್ಕೆ ಶರಣಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರೇಣುಕಾಚಾರ್ಯ ಅವರನ್ನ ತರಾಟೆಗೆ ತೆಗೆದುಕೊಂಡರು. ಹೀಗೆ ಗುಂಪು ಕಟ್ಟಿಕೊಂಡು ಜಾಗೃತಿ ಮೂಡಿದುವುದು ಸರಿಯಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಇದು ಪ್ರಚಾರದ ಸಮಯವಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ರೇಣುಕಾಚಾರ್ಯ, ಜನರರಲ್ಲಿ ಜಾಗೃತಿ ಮೂಡಿಸಲು ನಾಲ್ಕು ಜನರೊಂದಿಗೆ ಹೋಗಿದ್ದೆ. ಜಿಲ್ಲಾಧಿಕಾರಿಗಿಂತ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾನೇನು ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದರು.

  • ನಾನ್ ಏನೇ ಮಾತಾಡಿದ್ರೂ ವಿವಾದ ಆಗುತ್ತೆ- ರೇಣುಕಾಚಾರ್ಯ

    ನಾನ್ ಏನೇ ಮಾತಾಡಿದ್ರೂ ವಿವಾದ ಆಗುತ್ತೆ- ರೇಣುಕಾಚಾರ್ಯ

    – ಉಮೇಶ್ ಕತ್ತಿಗೆ ಟಾಂಗ್ ಕೊಡಲ್ಲ

    ದಾವಣಗೆರೆ: ಶಾಸಕ ಉಮೇಶ್ ಕತ್ತಿ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ. ಆದರೆ ಈಡೇರಬೇಕಲ್ವಾ? ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಈ ವಿಚಾರವಾಗಿ ನಾನು ಉಮೇಶ್ ಕತ್ತಿ ಅವರಿಗೆ ಟಾಂಗ್ ಕೊಡುವುದಿಲ್ಲ. ನಾನ್ ಏನೇ ಮಾತನಾಡಿದರೂ ವಿವಾದವಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

    ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ನಾನು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಆತ್ಮೀಯ ಸ್ನೇಹಿತರು. ಒಂದು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದೇನೆ. ಅಭ್ಯರ್ಥಿ ಸೋಲಿಸುವ ಕೀಳು ರಾಜಕೀಯ ಮಾಡಲು ಹೋಗುವುದಿಲ್ಲ. ಪಕ್ಷದ ಅಭ್ಯರ್ಥಿ ಸೋಲಿಸಿದರೆ ತಾಯಿಗೆ ಮೋಸ ಮಾಡಿದಂತೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ. ನಮ್ಮ ಅಭ್ಯರ್ಥಿ ಸೋಲನ್ನು ಯಾವತ್ತೂ ಬಯಸುವುದಿಲ್ಲ ಎಂದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿ ಮಾಡಿಲ್ಲ. ಈ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಆದರೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬಂದಿದೆ. ಇದು ಸತ್ಯಕ್ಕೆ ದೂರವಾದದ್ದು. ಹೊನ್ನಾಳಿಯಲ್ಲಿ ಮುಂದಿನ ತಿಂಗಳು ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದೇನೆ ಅಷ್ಟೇ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಟೆನ್ಶನ್ ಆಗಿಲ್ಲ. ನಾಲ್ಕು ಬಾರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಅಪಾರ ಅನುಭವವಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಲ್ಲಿದೆ. ತಾಳ್ಮೆಯಿಂದ ಎಲ್ಲವನ್ನೂ ಬಗೆಹರಿಸುತ್ತಾರೆ. ನಾನು ರಾಜಕೀಯದಲ್ಲಿ ಚಿಕ್ಕವನು ಎಂದು ಹೇಳಿದರು.

  • ಪಕ್ಷಕ್ಕೆ ಮುಜುಗವಾಗುವ ರೀತಿ ನಡೆದುಕೊಳ್ಳುತ್ತೇನೆ: ರೇಣುಕಾಚಾರ್ಯ ಎಡವಟ್ಟು

    ಪಕ್ಷಕ್ಕೆ ಮುಜುಗವಾಗುವ ರೀತಿ ನಡೆದುಕೊಳ್ಳುತ್ತೇನೆ: ರೇಣುಕಾಚಾರ್ಯ ಎಡವಟ್ಟು

    ಶಿವಮೊಗ್ಗ: ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಶಿಕಾರಿಪುರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾಧನೆ ಮಾತಾಗಬಾರದು. ಮಾತು ಸಾಧನೆ ಆಗಬೇಕು ಎಂದರು. ಆದರೆ ಮಾತಿನ ಭರಾಟೆಯಲ್ಲಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ತಕ್ಷಣೆ ಎಚ್ಚೆತ್ತುಕೊಂಡ ಅವರು, ನಾನು ಸಣ್ಣವನು, ರಾಜಕಾರಣದಲ್ಲಿ ಬೆಳೆಯಬೇಕಿದೆ. ಹಾಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ಮಾತನಾಡುವುದಿಲ್ಲ ಎಂದರು.

    ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ. ಸಚಿವ ಸ್ಥಾನ ಬೇಕು ಅಂತಾ ಮಾಧ್ಯಮದ ಮುಂದೆ ಬಾಯಿ ಬಾಯಿ ಬಡಿದುಕೊಂಡರೆ ನಾವು ಸಚಿವರಾಗಲು ಸಾಧ್ಯವೇ? ಅದಕ್ಕೆ ಇನ್ನು ಮುಂದೆ ಆದಷ್ಟು ಮೌನವಾಗಿ ಇರಬೇಕು ಅಂದುಕೊಂಡಿದ್ದೇನೆ ಎಂದರು.

    ಹೆಚ್ಚು ಮಾತನಾಡಿದರೆ ಖಾಲಿ ಮತನಾಡುತ್ತಾನೆ. ಬೀದಿ ಬಸವ ಅನ್ನುತ್ತಾರೆ. ಅದಕ್ಕಾಗಿ ಮೌನವಾಗಿ ಇದ್ದು ಬಿಡಲು ತೀರ್ಮಾನಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅಷ್ಟೇ ನನ್ನ ಆದ್ಯತೆ ಎಂದು ತಿಳಿಸಿದರು.

    ರೇಣುಕಾಚಾರ್ಯ ಸಚಿವರು ಆಗಬೇಕು ಅಂದಾಗಲಿ ಅಥವಾ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಯಾರು ಕೇಳಿರಲಿಲ್ಲ. ಆದರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಯಾರಾದರೂ ಒಬ್ಬರು ಸಚಿವರಾಗಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯ, ತೀರ್ಮಾನ ಆಗಿತ್ತು ಎಂದು ರೇಣುಕಾಚಾರ್ಯ ಹೇಳಿದರು.

  • ಯಾರಿಗೂ ಹೆದರುವುದಿಲ್ಲ, ಪಕ್ಷಕ್ಕೆ ನನ್ನಿಂದ ಡ್ಯಾಮೇಜ್ ಆಗಿಲ್ಲ: ರೇಣುಕಾಚಾರ್ಯ

    ಯಾರಿಗೂ ಹೆದರುವುದಿಲ್ಲ, ಪಕ್ಷಕ್ಕೆ ನನ್ನಿಂದ ಡ್ಯಾಮೇಜ್ ಆಗಿಲ್ಲ: ರೇಣುಕಾಚಾರ್ಯ

    ದಾವಣಗೆರೆ: ನಾನು ಯಾರಿಗೂ ಹೆದರುವುದಿಲ್ಲ. ಪಕ್ಷಕ್ಕೆ ನನ್ನಿಂದ ಡ್ಯಾಮೇಜ್ ಆಗಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

    ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್‍ನಿಂದ ಯಾವುದೇ ಸೂಚನೆ ಬಂದಿಲ್ಲ. ನಾನೇನೂ ತಪ್ಪೇ ಮಾಡಿಲ್ಲ. ವಾಸ್ತವ ಮಾತನಾಡಿದ್ದೇನೆ ಅಷ್ಟೇ. ನನಗ್ಯಾಕೆ ಸೂಚನೆ ಬರುತ್ತದೆ. ನನ್ನ ಹೇಳಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದರು.

    ಪಕ್ಷಕ್ಕೆ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗರ ತರಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಈ ಬಗ್ಗೆ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಒಳಗಾಗಲು ಇಷ್ಟಪಡುವುದಿಲ್ಲ. ಮಾತೇ ಸಾಧನೆ ಆಗಬಾರದು. ಸಾಧನೆ ಮಾತಾಗಬೇಕು ಎಂದು ತಿಳಿಸಿದರು.

    ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ರಾಜಕೀಯದಲ್ಲಿ ನಾನಿನ್ನು ಚಿಕ್ಕವನು. ಮಾಧ್ಯಮದಲ್ಲಿ ಹೇಳಿದಾಕ್ಷಣ ಸಿಎಂ ಆಗಲು, ಪ್ರಧಾನಿ ಆಗಲು ಸಾಧ್ಯವಿಲ್ಲ. ನಾನು ಆಕಾಶಕ್ಕೆ ಏಣಿ ಹಾಕುವ ವ್ಯಕ್ತಿ ಅಲ್ಲ. ನಾನಿನ್ನು ಕಲಿಯುವುದು ಬಹಳಷ್ಟಿದೆ. ಮುಂದೆ ಅವಕಾಶ ಸಿಗಬಹುದೆಂಬ ವಿಶ್ವಾಸ ಇದೆ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿಮೂಡಿಸಿದರು.

    ಕುದುರೆ ಏರುವುದು ಗೊತ್ತು, ಆಡಳಿತ ನಡೆಸುವುದು ಗೊತ್ತು. ಹೊನ್ನಾಳಿ, ನ್ಯಾಮತಿ ಜನ ಗೆಲ್ಲಿಸಿರುವುದು ಅಭಿವೃದ್ಧಿ ಕೆಲಸ ಮಾಡಲು. ರಾಜಕಾರಣ ಮಾಡಲು ಅಲ್ಲ. ಗಾಂಭೀರ್ಯದಿಂದ ಇರುತ್ತೇನೆ. ಮುಜುಗರ ತರಬಾರದು ಎಂಬ ಕಾರಣಕ್ಕೆ ಏನನ್ನೂ ಮಾತನಾಡಲ್ಲ. ಹೊನ್ನಾಳಿ ಕೇಂದ್ರಬಿಂದು ಪ್ರದೇಶ. ಹಾಗಾಗಿ ಅವಕಾಶ ಕೊಡಬೇಕು ಎಂಬುದಷ್ಟೇ ಅಭಿಪ್ರಾಯ. ಬಿಜೆಪಿಯ ಹಿರಿಯ ಶಾಸಕರು ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು ಎಂದು ರೇಣುಕಾಚಾರ್ಯ ಸ್ವಪಕ್ಷೀಯರಿಗೆ ಕಿವಿಮಾತು ಹೇಳಿದರು.

  • ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

    ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

    ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವದ ಮೌಢ್ಯತೆ ಇನ್ನು ಜೀವಂತವಾಗಿದೆ. ಈ ಆಚರಣೆಗೆ ಹಾಲಿ ಮತ್ತು ಮಾಜಿ ಶಾಸಕರು ಚಾಲನೆ ನೀಡಿದ್ದಾರೆ.

    ಕೆಂಚಿಕೊಪ್ಪ ಗ್ರಾಮದಲ್ಲಿ 10 ವರ್ಷಗಳ ಬಳಿಕ ಮಾಯಮ್ಮ ಹಾಗೂ ಗುಳ್ಳಮ್ಮ ದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ನಿಷೇಧಿತ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಉತ್ಸವಕ್ಕಾಗಿ ಎರಡು ಬಂಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ರೈತರದ್ದು ಮತ್ತೊಂದು ಗೌಡರದ್ದು. ಈ ಎರಡು ಬಂಡಿಗೆ ದಲಿತ ಮಹಿಳೆಯರಿಬ್ಬರನ್ನು ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ಬಳಿಕ ಮಹಿಳೆಯರನ್ನು ಮೇಲಕ್ಕೆ ಏರಿಸಿ ಸುತ್ತಿಸಲಾಗುತ್ತದೆ. ಒಂದು ಬಂಡಿಗೆ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಇನ್ನೊಂದು ಬಂಡಿಗೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ಚಾಲನೆ ನೀಡಿದರು.

    ಇಂತಹ ಅನಿಷ್ಠ ಪದ್ಧತಿಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ, ಇಬ್ಬರು ನಾಯಕರು ಸಿಡಿ ಉತ್ಸವಕ್ಕೆ ಚಾಲನೆ ನೀಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

  • ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ರೈಫಲ್ಸ್ ಸಿಕ್ಕಿದ್ದು ದೇಶದ್ರೋಹ ಅಲ್ವಾ? ಜಮೀರ್​ಗೆ ರೇಣುಕಾಚಾರ್ಯ ಸವಾಲ್

    ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ರೈಫಲ್ಸ್ ಸಿಕ್ಕಿದ್ದು ದೇಶದ್ರೋಹ ಅಲ್ವಾ? ಜಮೀರ್​ಗೆ ರೇಣುಕಾಚಾರ್ಯ ಸವಾಲ್

    ಬೆಂಗಳೂರು: ಜಮೀರ್ ವರ್ಸಸ್ ಬಿಜೆಪಿ ಶಾಸಕರ ನಡುವಿನ ಕಾದಾಟ ಕಾವೇರುತ್ತಿದೆ. ಆರ್‌ಎಸ್‌ಎಸ್‌ ನಿಷೇಧಿಸಬೇಕು ಎಂಬ ಮಾಜಿ ಸಚಿವ ಜಮೀರ್ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಜಮೀರ್ ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ಬಂದೂಕುಗಳು ಸಿಕ್ಕಿದ್ದವು. ಅದು ದೇಶ ದ್ರೋಹ ಅಲ್ವಾ ಅಂತಾ ಕಿಡಿಕಾರಿದ್ದಾರೆ.

    ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರೇಣುಕಾಚಾರ್ಯ, ಜಮೀರ್ ಮತ್ತು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. 2005ರಲ್ಲಿ ಜಮೀರ್ ದುಬೈಗೆ ಹೋಗಿದ್ದರು. ಆಗ ನ್ಯಾಷನಲ್ ಟ್ರಾವೆಲ್ಸ್ ಬಸ್‍ನಲ್ಲಿ ಬಂದೂಕುಗಳು ಸಿಕ್ಕಿದ್ವು, ಅದು ದೇಶ ದ್ರೋಹ ಅಲ್ಲವಾ? ಇನ್ನೊಂದು ಸಾರಿ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಜಮೀರ್, ಖಾದರ್ ದೇಶದ್ರೋಹಿಗಳು. ಆರ್‌ಎಸ್‌ಎಸ್‌ ಬಗ್ಗೆ ಇನ್ನೊಂದು ಸಾರಿ ಮಾತಾಡಬೇಡಿ ಅಂತಾ ಎಚ್ಚರಿಕೆ ಕೊಡ್ತಾ ಇದ್ದೀನಿ ಎಂದು ವಾಗ್ದಾಳಿ ನಡೆಸಿದರು.

    ಇನ್ನು ಹೆಚ್‍ಡಿಕೆ ವಿರುದ್ಧವೂ ಕೆಂಡಕಾರಿದ ರೇಣುಕಾಚಾರ್ಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಮಾತನಾಡಿ ಯುಗಪುರಷ ಎಂಬುದನ್ನ ಸಾಬೀತು ಮಾಡಿದ್ದಾರೆ ಅಂತಾ ವ್ಯಂಗವಾಡಿದರು. ಜೆಡಿಎಸ್ ಕಾರ್ಯಕರ್ತನ ಮೇಲೆ ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ನಡೆದಾಗ ಇದೇ ಕುಮಾರಸ್ವಾಮಿ, ಮಂಡ್ಯ ಎಸ್ ಪಿಗೆ ಶೂಟ್ ಮಾಡಿ ಅಂತ ಹೇಳಿರಲಿಲ್ಲವೇ? ಇವರು ಸಿಎಂ ಆಗಿದ್ದಾಗ ಇದ್ದ ಪೋಲೀಸರೇ ಈಗಲೂ ಇಲ್ಲವೇ? ನಿಮ್ಮ ರಕ್ಷಣೆಗೆ ಪೊಲೀಸರು ಬೇಕು. ಈಗ ಮಂಗಳೂರು ಘಟನೆ ಕುರಿತು ಪೊಲೀಸರ ನೈತಿಕತೆ ಕುಗ್ಗಿಸುವ ಮಾತುಗಳನ್ನು ಯಾಕೆ ಆಡುತ್ತಿದ್ದೀರಿ, ಬಾಂಬ್‍ಗೆ ಬಳಸಿದ್ದು ಮುಖಕ್ಕೆ ಹಾಕುವ ಪೌಡರ್ ಅಂತ ಹೇಳಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾತನಾಡಿದ್ದೀರಿ ಎಂದರು.

  • ರೇಣುಕಾಚಾರ್ಯ ವಿರುದ್ಧ ಮುಸ್ಲಿಂ ಸಂಘಟನೆ ಪ್ರತಿಭಟನೆ

    ರೇಣುಕಾಚಾರ್ಯ ವಿರುದ್ಧ ಮುಸ್ಲಿಂ ಸಂಘಟನೆ ಪ್ರತಿಭಟನೆ

    ಶಿವಮೊಗ್ಗ : ಶಾಸಕ ಎಂ.ಪಿ.ರೇಣುಕಾಚಾರ್ಯ ಮಸೀದಿ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಿಟಿಜನ್ ಯುನೈಟೆಡ್ ಮೂಮೆಂಟ್ ನ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ನಗರದ ಮಹಾವೀರ ವೃತ್ತದಲ್ಲಿ ರೇಣುಕಾಚಾರ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರೇಣುಕಾಚಾರ್ಯ ಅವರು ಮಸೀದಿಗಳು ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳಾಗಿವೆ ಎಂದು ಹೇಳಿಕೆ ನೀಡುವ ಮೂಲಕ ಒಂದು ಕೋಮಿನ ವಿರುದ್ಧ ಇನ್ನೊಂದು ಕೋಮನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕೂಡಲೇ ಶಾಸಕ ರೇಣುಕಾಚಾರ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.