Tag: ಎಂ ಪಿ ರವೀಂದ್ರ

  • ಉಪಕಾರ ಮಾಡಿದವರನ್ನೇ ಸೋಲಿಸಿದ್ದೀರಿ – ಎಚ್.ಆಂಜನೇಯ

    ಉಪಕಾರ ಮಾಡಿದವರನ್ನೇ ಸೋಲಿಸಿದ್ದೀರಿ – ಎಚ್.ಆಂಜನೇಯ

    -ಮತ್ತೇ ಮತದಾರರ ವಿರುದ್ಧ ಸೋಲಿನ ಬೇಸರ ಹೊರ ಹಾಕಿದ ಮಾಜಿ ಸಚಿವ

    ದಾವಣಗೆರೆ: ಉಪಕಾರ ಮಾಡಿದವರನ್ನೇ ಸೋಲಿಸಿದ್ದೀರಿ. ಹೀಗಿರುವಾಗ ಒಳ್ಳೆಯದನ್ನು ಮಾಡುವುದೇ ತಪ್ಪೇ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

    ಹರಪ್ಪನಹಳ್ಳಿಯ ಎಡಿಬಿ ಕಾಲೇಜು ಮೈದಾನದಲ್ಲಿ ನಡೆದ ಎಂ.ಪಿ.ರವೀಂದ್ರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವರು, ಎಂ.ಪಿ.ರವೀಂದ್ರ ಹಾಗೂ ನಮ್ಮಂತವನ್ನು ಸೋಲಿಸಿದ್ದೀರಿ. ಹೀಗಾಗಿ ಬಡವರಿಗೆ ಉಪಕಾರ ಮಾಡುವುದೇ ಕಷ್ಟವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಅಂತ ಹೇಳುವವರ್ನು ಕೈಬಿಡುತ್ತಿದ್ದೀರಿ. ನಾವು ಹೇಗಪ್ಪ ಬದುಕುವುದು ಎನ್ನುವ ಪ್ರಶ್ನೆಗೆ ಸಿಲುಕಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

    ಎಂ.ಪಿ.ರವೀಂದ್ರ ಒಬ್ಬ ಅಭಿವೃದ್ಧಿ ಹರಿಕಾರ. ಅವರ ತಂದೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸುಗಳನ್ನು ಕಂಡಿದ್ದರು. ಒಂದು ಬಾರಿ ಶಾಸಕರಾಗಿ ಜಯಗಳಿಸಿದ್ದ ಅವರು ಕೆರೆಗಳ ಜೋಡಣೆ ಕಾಮಗಾರಿ ಆರಂಭಿಸಿದ್ದರು. ಕ್ಷೇತ್ರದ ಅಭಿವೃದ್ಧಿಗೆ ನಿತ್ಯವೂ ಶ್ರಮಿಸಿದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಅವರನ್ನು ನೀವು ಸೋಲಿಸಿದ್ದೀರಿ. ಇದೇ ಕಾರಣಕ್ಕೆ ಯಾರಿಗೂ ಉಪಕಾರ ಮಾಡಬಾರದು ಅಂತಾ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಒಂದು ವೇಳೆ ಎಂ.ಪಿ.ರವೀಂದ್ರ ಅವರನ್ನು ನೀವು ಆಯ್ಕೆ ಮಾಡಿದ್ದರೆ ಸಚಿವರಾಗುತ್ತಿದ್ದರು. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು. ಅವರನ್ನು ಹಾಗೂ ನಮ್ಮಂತವರನ್ನು ಸೋಲಿಸುವ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸಲಾಗಿದೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂ ತಾಯಿಯ ಮಡಿಲು ಸೇರಿದ ಮಾಜಿ ಶಾಸಕ ರವೀಂದ್ರ..!

    ಭೂ ತಾಯಿಯ ಮಡಿಲು ಸೇರಿದ ಮಾಜಿ ಶಾಸಕ ರವೀಂದ್ರ..!

    – ಅಂತಿಮ ದರ್ಶನ ಪಡೆದ ಮಠಾಧೀಶರು, ಗಣ್ಯಮಾನ್ಯರು

    ಬಳ್ಳಾರಿ: ಹರಪ್ಪನಹಳ್ಳಿಯ ಮಾಜಿ ಶಾಸಕ ಎಂ.ಪಿ.ರವೀಂದ್ರರ ಅವರ ಅಂತ್ಯಕ್ರಿಯೆ ಇಂದು ಹೂವಿನ ಹಡಗಲಿಯಲ್ಲಿ ನಡೆಯಿತು. ಸಂಬಂಧಿಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಆಪ್ತರು ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

    ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಮೃತಪಟ್ಟಿದ್ದರು. ಅವರ ಹುಟ್ಟುರಾದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಇಂದು ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಪಟ್ಟಣದಲ್ಲಿ ಮೆರವಣಿಗೆ ಮಾಡಿ ಜಿ.ಬಿ.ಆರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ತೋಟದ ಮನೆಯ ಹತ್ತಿರ ತಂದೆ ಎಂ.ಪಿ. ಪ್ರಕಾಶ ಸಮಾದಿ ಪಕ್ಕದಲ್ಲಿಯೇ ವೀರಶೈವ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.

    ಅಪಾರ ಅಭಿಮಾನಿಗಳನ್ನು ಹೊಂದಿದ್ದ ರವೀಂದ್ರರ ಅಂತ್ಯಕ್ರಿಯೆಯಲ್ಲಿ ಪಕ್ಷ ಬೇದ ಮರೆತು ಎಲ್ಲ ನಾಯಕರು, ಮಠಾಧೀಶರು ಹಾಗೂ ಚಲನಚಿತ್ರ ನಟರು ಸೇರಿದಂತೆ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಅಮರೇಗೌಡ ಬೈಯಾಪುರ, ಆನಂದ್ ಸಿಂಗ್, ಭೀಮಾ ನಾಯಕ್, ಮಾಜಿ ಶಾಸಕರು ಹಾಗೂ ಆಪ್ತ ಸ್ನೇಹಿತ ಹುಣಸೂರ್ ಮಂಜುನಾಥ್, ಬಸವರಾಜ ರಾಯರೆಡ್ಡಿ, ಚಿತ್ರನಟ ಶ್ರೀನಗರ ಕಿಟ್ಟಿ, ಅನಿಲ್ ಲಾಡ್, ಜಿ.ಎಸ್.ಗಡ್ಡದೇವರಮಠ ಅವರು ಸೇರಿದಂತೆ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಬಳ್ಳಾರಿಯಲ್ಲಿ  ಎಂ.ಪಿ ರವೀಂದ್ರ ಅಂತ್ಯಕ್ರಿಯೆ- ಅಪ್ಪನ ಸಮಾಧಿ ಪಕ್ಕದಲ್ಲೇ ಮಗನ ಸಮಾಧಿ

    ಇಂದು ಬಳ್ಳಾರಿಯಲ್ಲಿ ಎಂ.ಪಿ ರವೀಂದ್ರ ಅಂತ್ಯಕ್ರಿಯೆ- ಅಪ್ಪನ ಸಮಾಧಿ ಪಕ್ಕದಲ್ಲೇ ಮಗನ ಸಮಾಧಿ

    ದಾವಣಗೆರೆ/ಬಳ್ಳಾರಿ: ಸಜ್ಜನ ರಾಜಕಾರಣಿ ಅಂತಾನೇ ಗುರುತಿಸಿಕೊಂಡಿದ್ದ ಮಾಜಿ ಡಿಸಿಎಂ ಎಂಪಿ ಪ್ರಕಾಶ್ ಪುತ್ರ ಹರಪನಹಳ್ಳಿಯ ಮಾಜಿ ಶಾಸಕ ಎಂ.ಪಿ ರವೀಂದ್ರ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸರಳ ಸಜ್ಜನಿಕೆಯ ರವೀಂದ್ರ ಅವರ ಅಂತ್ಯಸಂಸ್ಕಾರ ಇಂದು ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ.

    ಮೃತರ ಪಾರ್ಥಿವ ಶರೀರವನ್ನು ಶನಿವಾರ ದಾವಣಗೆರೆ ಮತ್ತು ಹರಪನಹಳ್ಳಿಯಲ್ಲಿ ದರ್ಶನಕ್ಕೆ ಇಡಲಾಗಿತ್ತು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸೇರಿದಂತೆ ರಾಜಕೀಯ ಮುಖಂಡರು, ಗಣ್ಯಾತಿಗಣ್ಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮೆಚ್ಚಿನ ನಾಯಕನ ಅಗಲಿಕೆಗೆ ಕಂಬನಿ ಮಿಡಿದ್ರು.

    ಲಿಂಗಾಯತ ಸಂಪ್ರದಾಯದಂತೆ ಬಳ್ಳಾರಿ ಜಿಲ್ಲೆಯ ಹಡಗಲಿಯ ತೋಟದಲ್ಲಿ ಎಂ.ಪಿ ರವೀಂದ್ರರವರ ಅಂತ್ಯಸಂಸ್ಕಾರ ನೆರವೇರಲಿದೆ. ರವೀಂದ್ರ ಅವರ ತಂದೆ ಎಂ.ಪಿ ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲೇ ರವೀಂದ್ರ ಅವರ ಅಂತ್ಯಸಂಸ್ಕಾರ ನಡೆಯಲಿದೆ.

    ಎಂ.ಪಿ ರವೀಂದ್ರರವರು ಹರಪನಹಳ್ಳಿ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಹರಪನಹಳ್ಳಿ ತಾಲೂಕನ್ನು ಕಲಂ 371 ಜೆ ಗೆ ಸೇರ್ಪಡೆ ಮಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಅಲ್ಲದೇ ಸರಳತೆಯಿಂದ ಜನಮನ ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv