Tag: ಎಂಡೋಸಲ್ಫಾನ್

  • ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಉಡುಪಿ: ನಾನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಡುಪಿಯ ಸಮಾಜಸೇವಕ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

    ಕಳೆದ ರಾತ್ರಿ ನನಗೆ ಅಧಿಕೃತವಾಗಿರಲಿಲ್ಲ. ಇಂದು ಅಧಿಕೃತವಾಗಿದೆ. ನನಗೆ ನನ್ನ ಸಮಾಜಸೇವೆ ತೃಪ್ತಿ ಆಗಿಲ್ಲ. ನೊಂದ ಜೀವಗಳ ಕಣ್ಣೀರು ಕಣ್ಣಮುಂದೆ ಸುರಿಯುತ್ತಿರುವಾಗ ನಾನು ಯಾವ ಪುರುಷಾರ್ಥಕ್ಕೆ ಪ್ರಶಸ್ತಿ ಸ್ವೀಕರಿಸಲಿ? ಎಂದು ಸರ್ಕಾರಕ್ಕೆ ಡಾ. ಶಾನುಭಾಗ್ ಪ್ರಶ್ನೆ ಮಾಡಿದ್ದಾರೆ.

    ಕರಾವಳಿಯ ಮೂರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ನೂರಾರು ಮಕ್ಕಳ ನೊಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್ ಕೂಡಾ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಅವರ ಮುಖದಲ್ಲಿ ನಗು ಕಾಣಲು ಹೇಗೆ ಸಾಧ್ಯ ಎಂದು ಉತ್ತರಿಸಲಾಗದ ಪ್ರಶ್ನೆ ಹಾಕಿದ್ದಾರೆ.

    ಜನ ಹಗ್ಗ ತೆಗೆದುಕೊಳ್ಳುವಾಗ ನಾನು ಪ್ರಶಸ್ತಿ ತೆಗೆದುಕೊಳ್ಳಲೇ?: ನಾನು ಎಷ್ಟು ಸಮಾಜಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಹಿರಿಯ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಾ ಇದ್ದಾರೆ. ಕೈಹಿಡಿದು ಕಣ್ಣೀರಿಡುತ್ತಿದ್ದಾರೆ. ಯಾರಿಗಾಗಿ, ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ? ಅಸಂಖ್ಯ ಅರ್ಜಿಗಳು ಬರುತ್ತಿದೆ. ಈ ನಡುವೆ ಪ್ರಶಸ್ತಿ ನನಗೆ ಬೇಕಾ? ಸರ್ಕಾರ ಹಿರಿಯ ನಾಗರೀಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಎಂಟು ಜನ ಹಿರಿಯ ನಾಗರೀಕರು ನ್ಯಾಯ ಸಿಗುವ ಮೊದಲೇ ಸತ್ತು ಹೋಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ನಾನು ಅವರ ಆತ್ಮಕ್ಕೆ ಅವಮಾನ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.

    ಐಎಎಸ್ ಅಧಿಕಾರಿಗಳ ಉದ್ಧಟತನ: ರಾಜ್ಯದಲ್ಲಿ ಜಗದೀಶ್, ಡಾ. ವಿಶಾಲ್ ನಂತಹ ಉದ್ಧಟತನದ ಐಎಎಸ್ ಅಧಿಕಾರಿಗಳ ನಡುವೆ ನನಗೆ ಯಾವ ಪ್ರಶಸ್ತಿಯೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ಉಮಾಶ್ರೀ ನನ್ನ ಒಂದು ಪತ್ರಕ್ಕೂ ಉತ್ತರಿಸುವುದು ಬೇಡ. ನೊಂದ ಸಂತ್ರಸ್ಥರಿಗಾದರೂ ಉತ್ತರಿಸುವ ಕನಿಷ್ಟ ಸೌಜನ್ಯವನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೂ ಇಲ್ಲ, ಸಮಸ್ಯೆಯೂ ಪರಿಹಾರವಾಗಿಲ್ಲ. ಎಂಡೋಸಲ್ಫಾನ್ ವಿಚಾರದಲ್ಲಿ ಉಡುಪಿಯ ಡಿಸಿಯಾಗಿದ್ದ ಆರ್ ವಿಶಾಲ್ ನಿಮಗೆಲ್ಲ ಈ ಉಸಾಬರಿ ಯಾಕೆ ಎಂದು ಪ್ರಶ್ನೆ ಮಾಡಿದರು.

    ಟೈಂ ವೇಸ್ಟ್ ಮಾಡಬೇಡಿ: ಯಾರೂ ನನ್ನ ಮನವೊಲಿಸಬೇಡಿ. ಸಂತ್ರಸ್ಥರ ಕಣ್ಣೀರು ಒರೆಸಲು ಸಾಧ್ಯವಾದ್ರೆ ಅದನ್ನು ಮಾಡಿ. ಮಾನವ ಕಳ್ಳಸಾಗಣೆ ನಿಲ್ಲಿಸಿ, ಎಂಡೋಸಲ್ಫಾನ್ ಸಂತ್ರಸ್ಥರ ಕಣ್ಣೀರು ಒರೆಸಿ, ಹಿರಿಯ ನಾಗರೀಕರನ್ನು ಸಾಯುವ ತನಕ ಬದುಕಲು ಬಿಡಿ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕಾನೂನು ಪಾಲಿಸಲೂ ಗೊತ್ತಿಲ್ಲ. ಮಾನವೀಯತೆ ಅಂತೂ ಇಲ್ಲವೇ ಇಲ್ಲ. ನನ್ನದು ಉದ್ಧಟತನವೂ ಅಲ್ಲ, ಪ್ರಶಸ್ತಿಗೆ ಮಾಡುತ್ತಿರುವ ಅಗೌರವವೂ ಅಲ್ಲ. ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಸ್ಪಷ್ಟಪಡಿಸಿದರು.

    ಸ್ವರ್ಗ ಕೊಟ್ಟರೂ ಬೇಡ: ಪ್ರಶಸ್ತಿ ಜೊತೆ ಒಂದು ಲಕ್ಷ, ಒಂದು ಕೋಟಿ, ಬಂಗಾರದ ಪದಕ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನನಗೆ ಒಂದು ನ್ಯಾಯ ಕೊಡಿ. ನನ್ನ ಸಮಾಜ ಸೇವೆ ಪೂರ್ತಿಯಾಗಿಲ್ಲ. ಪೂರ್ತಿಯಾಗಲು ಜನಪ್ರತಿನಿಧಿಗಳು ಬಿಡುವುದಿಲ್ಲ. ಓಟು ಬೇಡಿದವರ ಬಳಿ ಜನ ನ್ಯಾಯ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಇದೆ ಅನ್ನೋದು ನಾಚಿಕೆಗೇಡಿನ ವಿಚಾರ ಎಂದು ಖೇದ ವ್ಯಕ್ತಪಡಿಸಿದ್ರು.

    ಪ್ರಚಾರದ ಅಗತ್ಯವಿಲ್ಲ: ನನಗೆ ಪ್ರಶಸ್ತಿ ತಿರಸ್ಕಾರ ಮಾಡುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕೆಂದು ಹೀಗೆ ಮಾಡುತ್ತಿಲ್ಲ. ಈ ಮೂಲಕವಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದ್ರೆ ಆಗಲಿ. ಜಾಗೃತಿ ಮೂಡಿದ್ರೆ ಮೂಡಲಿ. ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದರು.

    https://www.youtube.com/watch?v=mUP-1N8wHHE

  • ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

    ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಎಂಡೋಸಲ್ಫಾನ್ ನಿಂದಾಗಿ ಮೂವರು ಮಕ್ಕಳಿಗೆ ಬುದ್ದಿಮಾಂದ್ಯತೆ ಆವರಿಸಿದ್ದು ಈ ಕುಟುಂಬದ ಬೆಳಕನ್ನೇ ಕಿತ್ತುಕೊಂಡಿದೆ.

    ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲೂ ತನ್ನ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿರುವ 52 ವರ್ಷದ ತಾಯಿ ವತ್ಸಲಾ. ತಂದೆ ಚಂದ್ರಕಾಂತ್ ಲಕ್ಷ್ಣಣ್ ಶೇಟ್ ವಯಸ್ಸು 60. ವತ್ಸಲಾ ಮತ್ತು ಚಂದ್ರಕಾಂತ್ ದಂಪತಿ ತಮ್ಮ ಮೂವರು ಮಕ್ಕಳಾದ ನಾಗರಾಜ್, ಹೇಮಲತಾ, ಜಗದೀಶ್ ಎಂಬುವವರೊಂದಿಗೆ ವಾಸವಾಗಿದ್ದಾರೆ. ಇನ್ನು ಈ ಕುಟುಂಬ ಜೀವನೋಪಯಾಕ್ಕಾಗಿ ಕೂಲಿ ಕೆಲಸವನ್ನು ನಂಬಿಕೊಂಡಿದೆ. ಲಕ್ಷ್ಮಣ್ ಅವರು ಚೀರೆಕಲ್ಲು ಕೋರೆಯಲ್ಲಿ ಕಲ್ಲು ಕೀಳುವ ಕೆಲಸ ಮಾಡಿದರೆ, ವತ್ಸಲಾ ಸಹ ಮಕ್ಕಳ ಆರೈಕೆ ಜೊತೆ ಕೂಲಿ ಕೆಲಸ ಮಾಡುತ್ತಾರೆ.

    ಈ ಕುಟುಂಬಕ್ಕೆ ಇರಲು ಸಹ ಒಂದು ಸ್ವಂತ ಮನೆಯಿಲ್ಲ. ಅರಣ್ಯ ಒತ್ತುವರಿ ಪ್ರದೇಶದಲ್ಲಿ ಚಿಕ್ಕ ಗೂಡನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಮೊದಲು ಒಂದು ಗಂಡುಮಗುವಿನ ಜನನವಾಯ್ತು. ಆದ್ರೆ ಆ ಮಗು ಎಂಡೋಸಲ್ಫಾನ್ ನಿಂದ ಬುದ್ದಿಮಾಂದ್ಯತೆಯಿಂದ ಹುಟ್ಟಿರುವುದನ್ನ ವೈದ್ಯರು ತಿಳಿಸಿದ್ರು. ಹೀಗಾಗಿ ಒಂದರ ಮೇಲಂತೆ ಮೂರು ಮಕ್ಕಳು ಜನಿಸಿದ್ರೂ ಎಲ್ಲಾ ಮಕ್ಕಳೂ ಬುದ್ದಿಮಾಂದ್ಯರಿದ್ದು ಇದರಲ್ಲಿ 31 ವರ್ಷದ ಹೇಮಲತಾ ಹಾಗೂ 29 ವರ್ಷದ ಜಗದೀಶ್ ಬುದ್ದಿಮಾಂದ್ಯತೆಯ ಜೊತೆಯಲ್ಲಿ ಇರುಳುಗಣ್ಣಿನ ಸಮಸ್ಯೆ ಯಿಂದ ಬಳಲಿದ್ರೆ 33 ವರ್ಷದ ಹಿರಿಯ ಮಗ ನಾಗರಾಜ್ ಬುದ್ದಿಮಾಂದ್ಯತೆಯನ್ನ ಹೊಂದಿದ್ದು ಇವರನ್ನ ನೋಡಿಕೊಳ್ಳುವ ಹೊಣೆಭಾರ ವತ್ಸಲಾ ಮೇಲಿದೆ.

    ವಯೋಸಹಜ ಅನಾರೋಗ್ಯ: ಒಂದರ ನಂತರ ಹುಟ್ಟಿದ ಮೂರು ಮಕ್ಕಳೂ ಸಹ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯ ಯಜಮಾನ ಚಂದ್ರಕಾಂತ್ ಚಿಕ್ಕ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ರಾಡನ್ನ ಹಾಕಿಸಿಕೊಳ್ಳಬೇಕಾಯ್ತು, ಇನ್ನು ಸರ್ಕಾರ ಚೀರೇಕಲ್ಲಿನ ಗಣಿಗಾರಿಕೆ ನಿಷೇಧಿಸಿದ್ದರಿಂದ ಇರುವ ಕೆಲಸವೂ ಇಲ್ಲದಂತಾಗಿದೆ. ಜೊತೆಯಲ್ಲಿ ಇಬ್ಬರಿಗೂ ವಯೋಸಹಜತೆಯಿಂದಾಗಿ ಆರೋಗ್ಯ ಹದಗೆಟ್ಟಿದ್ದು ಇಬ್ಬರೂ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವಂತೆ ಮಾಡಿದೆ. ಒಂದು ಕಡೆ ಬೆಳದು ನಿಂತ ಈ ಮಕ್ಕಳ ಪೋಷಣೆ ಇನ್ನೊಂದೆಡೆ ತಮ್ಮ ನಂತರ ಇವರ ಪಾಲನೆಯ ಚಿಂತೆ ಹೀಗೆ ಎಂದು ಚಂದ್ರಕಾಂತ್ ಮತ್ತು ವತ್ಸಲಾ ದಂಪತಿ ಚಿಂತೆಯಲ್ಲಿದ್ದಾರೆ.

    ಹುಸಿ ಭರವಸೆ: ಇವರಿಗೆ ಸ್ಥಳೀಯ ಶಾಸಕರಿಂದ ಹಿಡಿದು ಕೆಲವು ರಾಜಕಾರಣಿಗಳು ಸಹಾಯ ಮಾಡುವ ಭರವಸೆ ನೀಡಿದ್ರು. ಆದ್ರೆ ಕೇವಲ ಪ್ರಚಾರಕ್ಕೆ ಇವರನ್ನ ಬಳಸಿಕೊಂಡು ನಂತರ ಯಾವ ಸಹಾಯವನ್ನೂ ಮಾಡಲಿಲ್ಲ. ಇನ್ನು ಕೂಲಿ ಕೆಲಸ ಮಾಡುತಿದ್ದ ಇವರಿಗೆ ಆರೋಗ್ಯ ಹದಗೆಟ್ಟು ಜೀವನ ನೆಡೆಸದಷ್ಟು ಸಂಕಷ್ಟ ಎದುರಾಗಿದೆ. ಜೊತೆಯಲ್ಲಿ ಜೀವನ ಸಾಗಿಸಲು ಇದ್ದ ಮನೆಕೂಡ ಶಿಥಿಲಾವಸ್ಥೆ ತಲುಪಿದ್ದು ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದೆ.

    ಪುಟ್ಟ ಅಂಗಡಿಯ ಕನಸು: ಮೂರು ಮಕ್ಕಳ ವೈದ್ಯಕೀಯ ವೆಚ್ಚ ನೋಡಿಕೊಲ್ಳಲು ಕಷ್ಟವಾಗುತಿದ್ದು, ಸರ್ಕಾರದಿಂದ ಬರುತ್ತಿರುವ ಸಹಾಯ ಹಣವೂ ಸಾಲುತಿಲ್ಲ. ತಮ್ಮ ಆರೋಗ್ಯ ಹದಗೆಡುತ್ತಿರುವುದರಿಂದ ಮೂರು ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಇವರನ್ನ ಕಾಡುತ್ತಿದೆ. ಊರಿನಲ್ಲಿ ಚಿಕ್ಕದೊಂದು ಅಂಗಡಿ ಇಟ್ಟು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆ ತಮ್ಮ ಬದುಕು ಕಟ್ಟಿಕೊಳ್ಳು ಹಂಬಲ ಈ ದಂಪತಿಯದು. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯ ಬಯಸಿದ್ದಾರೆ. ಇನ್ನು ಇದೇ ಊರಿನ ವೆಂಕಟರಮಣ ವೈದ್ಯ ಎಂಬುವವರು ಇವರ ಸಹಾಯಕ್ಕೆ ಬಂದಿದ್ದು ಅಂಗಡಿ ನೆಡೆಸಲು ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಲ್ಲದೇ ಗ್ರಾಮ ಪಂಚಾಯ್ತಿಯಿಂದ ಮನೆ ಕಟ್ಟಿಸಿಕೊಡುವ ಪ್ರಯತ್ನದಲ್ಲಿದ್ದಾರೆ.

    ಆರೋಗ್ಯ ಸರಿಯಿಲ್ಲದ ಕಾರಣ ಕೂಲಿ ಕೆಲಸ ಕಷ್ಟಸಾಧ್ಯ. ಹೀಗಾಗಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡರೆ ಕುಳಿತಲ್ಲಿ ಕೆಲಸ ಮಾಡಿಕೊಳ್ಳಬಹುದು. ಜೊತೆಯಲ್ಲಿ ಮಕ್ಕಳನ್ನೂ ಇದರಲ್ಲಿ ತೊಡಗಿಸಿಕೊಂಡು ಕ್ರೀಯಾ ಶೀಲರಾಗಿರುವಂತೆ ನೋಡಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯಿದೆ.