Tag: ಎಂಡಿಎಂಎ

  • ಹೈದರಾಬಾದ್‌ | ಬೃಹತ್‌ ಮಾದಕ ವಸ್ತು ಜಾಲ ಪತ್ತೆ – ಬೆಂಗ್ಳೂರಲ್ಲಿ ಖರೀದಿಸಿ ಡೇಟಿಂಗ್‌ ಆ್ಯಪ್‌ನಲ್ಲಿ ಸೇಲ್‌ ಮಾಡ್ತಿದ್ದ ಆರೋಪಿ

    ಹೈದರಾಬಾದ್‌ | ಬೃಹತ್‌ ಮಾದಕ ವಸ್ತು ಜಾಲ ಪತ್ತೆ – ಬೆಂಗ್ಳೂರಲ್ಲಿ ಖರೀದಿಸಿ ಡೇಟಿಂಗ್‌ ಆ್ಯಪ್‌ನಲ್ಲಿ ಸೇಲ್‌ ಮಾಡ್ತಿದ್ದ ಆರೋಪಿ

    – ʻರಾಕೆಟ್‌, ಪಾರಿವಾಳʼ ಕೋಡ್‌ ವರ್ಡ್‌ ಬಳಸಿ ಸೇಲ್‌; 7 ಮಂದಿ ಅರೆಸ್ಟ್‌
    – ಬಂಧಿತರಲ್ಲಿ ಒಬ್ಬನಿಗೆ ಹೆಚ್‌ಐವಿ

    ಹೈದರಾಬಾದ್‌: ಡೇಟಿಂಗ್‌ ಆ್ಯಪ್ (Dating App) ಮೂಲಕ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್‌ ಡ್ರಗ್ಸ್‌ ಮಾರಾಟ ಜಾಲವೊಂದನ್ನ (Huge Drug Racket) ಹೈದರಾಬಾದ್‌ನಲ್ಲಿ ಪತ್ತೆಹಚ್ಚಲಾಗಿದೆ. ಈ ಜಾಲ ನಡೆಸುತ್ತಿದ್ದ ಇಬ್ಬರು ಮಾರಾಟಗಾರರು ಹಾಗೂ 7 ಗ್ರಾಹಕರು ಸೇರಿ 9 ಮಂದಿಯನ್ನ ಹೈದರಾಬಾದ್‌ನ ವಿಶೇಷ ಕಾರ್ಯಪಡೆ ಬಂಧಿಸಿದೆ.

    ಎಂ. ರಮಾಕಾಂತ್ ಅಲಿಯಾಸ್ ಕಿರಣ್ (44) ಮತ್ತು ಮುದವತ್ ಪ್ರಸಾದ್ (30) ಬಂಧಿತ ಡ್ರಗ್ಸ್‌ ಮಾರಾಟಗಾರರು. ರಮಾಕಾಂತ್‌ ಖಾಸಗಿ ಉದ್ಯೋಗಿಯಾಗಿದ್ದರೇ, ಮುದವತ್‌ ವ್ಯಾಕ್ಯೂಮ್ ಕ್ಲೀನರ್ ತಂತ್ರಜ್ಞನಾಗಿದ್ದ. ಇಬ್ಬರೂ ಕಳೆದ ವರ್ಷ ಜುಲೈನಲ್ಲಿ ಡ್ರಗ್ಸ್‌ ಮಾರಾಟ ಕೇಸ್‌ನಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಹಳೇ ಚಾಳಿ ಶುರು ಮಾಡಿಕೊಂಡಿದ್ದರು.

    ಬಂಧಿತರು ಡೇಟಿಂಗ್‌ ಆ್ಯಪ್‌ಗಳ ಮೂಲಕ ತಮ್ಮ ಪ್ರೊಫೈಲ್‌ಗಳಲ್ಲಿ ʻರಾಕೆಟ್‌ʼ & ʻಪಾರಿವಾಳʼ ಎಂಬ ಕೋಡ್‌ ವರ್ಡ್‌ ಬಳಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ನೈಜೀರಿಯಾ ಮೂಲದವರಿಂದ ಪ್ರತಿ ಗ್ರಾಂ MDMAಗೆ 10,000 ರೂ. ಗಳಿಗೆ ಖರೀದಿಸಿ, ಹೈದರಾಬಾದ್‌ನಲ್ಲಿ ಪ್ರತಿ ಗ್ರಾಂಗೆ 15,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಲವರ್‌ ಜೊತೆ ಮೂರು ಮಕ್ಕಳ ತಾಯಿ ಜೂಟ್‌ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು 

    ಹೈದರಾಬಾದ್‌ ವಿಶೇಷ ಕಾರ್ಯಪಡೆಯ ಅಧಿಕಾರಿಗಳು ಕಾರ್ಯಾಚರಣೆ ಸಂದರ್ಭದಲ್ಲಿ ಪತ್ತೆಹಚ್ಚಿದ್ದಾರೆ. ಬಂಧಿತರಿಂದ 100 ಗ್ರಾಂ ಎಂಡಿಎಂಎ, 10 ಮೊಬೈಲ್ ಫೋನ್‌ಗಳು ಹಾಗೂ ಒಂದು ತೂಕದ ಯಂತ್ರವನ್ನ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಒಟ್ಟು 15 ಲಕ್ಷ ರೂ. ಇದೆ.

    ಇದರೊಂದಿಗೆ 7 ಗ್ರಾಹಕರನ್ನೂ ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಹೆಚ್‌ಐವಿ ಸೋಂಕಿತನಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಎಲ್ಲಾ ಆರೋಪಿಗಳನ್ನು ಚಿಲ್ಕಲ್ಗುಡ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಕಾಂಟ್ಯಾಕ್ಟ್‌ನಲ್ಲಿದ್ದ ಬ್ಯೂಟಿ – ಸ್ಟೇಷನ್‌ನಲ್ಲೇ ತಾಳಿ ಕಿತ್ತು ಗಂಡನ ಕೈಗಿಟ್ಟು ಹೋದ ಪತ್ನಿ

  • ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಅರೆಸ್ಟ್

    ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಅರೆಸ್ಟ್

    ಬೆಂಗಳೂರು: ಅಡುಗೆ ಮನೆಯನ್ನೇ ಡ್ರಗ್ಸ್ (Drugs) ತಯಾರಿಸುವ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದ ನೈಜೀರಿಯಾದ ಪ್ರಜೆಯನ್ನು ಸಿಸಿಬಿಯ (CCB) ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ನೈಜೀರಿಯಾ ಪ್ರಜೆ ಬೆಂಜಮಿನ್ ಅವಲಹಳ್ಳಿಯ ತನ್ನ ಮನೆಯ ಕಿಚನ್‌ನಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲಿಟ್ಟು ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್‌ಗೆ (Pressure Cooker) ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ (MDMA) ತಯಾರು ಮಾಡುತ್ತಿದ್ದ.

    ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಬಳಿ 100 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿ ಎಲ್ಲಿಂದ ಎಂಡಿಎಂಎ ತರಿಸುತ್ತಿದ್ದಾನೆ ಎಂದು ಪರಿಶೀಲನೆ ನಡೆಸಿದ ವೇಳೆ ಬೆಂಜಮಿನ್ ವಾಸವಿದ್ದ ಮನೆಯಲ್ಲೇ ಎಂಡಿಎಂಎ ಕ್ರಿಸ್ಟಲ್ ತಯಾರಿಸುತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾತ್ರೆ, ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಐವರ ಬಂಧನ

    ಎಂಡಿಎಂಎ ತಯಾರು ಮಾಡಲು ಬೇಕಿದ್ದ ಕಚ್ಚಾವಸ್ತುಗಳನ್ನು ಖರೀದಿ ಮಾಡುತ್ತಿದ್ದ ಆರೋಪಿ ನಂತರ ಹಂತ ಹಂತವಾಗಿ ಎಂಡಿಎಂಎ ತಯಾರು ಮಾಡುತ್ತಿದ್ದ. ಡ್ರಗ್ಸ್ ಡಿಮಾಂಡ್ ಎಷ್ಟು ಇದೆ, ಅಷ್ಟನ್ನು ತಯಾರು ಮಾಡಿ, ನಂತರ ಅದನ್ನು ಕೇವಲ ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ತಯಾರು ಮಾಡಿಟ್ಟಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್!

  • ಬಿಎಂಡಬ್ಲ್ಯೂ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳ ಬಂಧನ

    ಬಿಎಂಡಬ್ಲ್ಯೂ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳ ಬಂಧನ

    – ಮುಂಬೈನಿಂದ ಮಂಗ್ಳೂರಿಗೆ ಮಾದಕ ವಸ್ತು ಸಾಗಿಸುತ್ತಿದ್ದ ಗ್ಯಾಂಗ್
    – ಕಾಜೇಜು ವಿದ್ಯಾರ್ಥಿಗಳೇ ಟಾರ್ಗೆಟ್

    ಮಂಗಳೂರು: ಎಂಡಿಎಂಎ ಎನ್ನುವ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಮುಂಬೈನಿಂದ ಮಂಗಳೂರಿಗೆ ತರುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸುರತ್ಕಲ್ ನ ಚೊಕ್ಕಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ ಸಿದ್ದಿಕ್ (40), ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಶಾಫಿ ಯಾನೆ ಚಪ್ಪಿ (33) ಹಾಗೂ ಸುರತ್ಕಲ್ ಕಾಟಿಪಳ್ಳ ಜುಮ್ಮಾ ಮಸೀದಿ ಬಳಿ ನಿವಾಸಿ ಮೊಹಮ್ಮದ್ ಅನಾಸ್(27) ಬಂಧಿತರು. ಆರೋಪಿಗಳಿಂದ 87,560 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್ ಫೋನ್ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಐಷಾರಾಮಿ ಬಿಎಂಡಬ್ಲೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 51,12,560 ರೂಪಾಯಿ ಎಂದು ಅಂದಾಜಿಸಲಾಗಿದೆ.

    ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಮುಂಬೈಯಿಂದ ಖರೀದಿಸಿ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಮಂಗಳೂರಿಗೆ ತರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುತ್ತಾರೆ.

    ಮುಂಬೈಯಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಆರೋಪಿಗಳು ಬಂಧನ ಬಳಿಕ ಒಪ್ಪಿಕೊಂಡಿದ್ದಾರೆ.

    ಆರೋಪಿಗಳ ಪೈಕಿ ಮೊಹಮ್ಮದ್ ಶರೀಫ್ ಸಿದ್ದಿಕ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಶಾಫಿ ಚಪ್ಪಿ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಅನಾಸ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ದಾಖಲಾಗಿರುತ್ತು.

    ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಲಕ್ಷ್ಮೀ ಗಣೇಶ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಆರ್.ನಾಯ್ಕ್, ಪಿಎಸ್‍ಐ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ, ಎಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಪಿಎಸ್‍ಐ ಲತಾ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.