Tag: ಎಂಜನಿಯರ್

  • ಲೋಕಾಯುಕ್ತ ದಾಳಿ- ಎಂಜನಿಯರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಲೋಕಾಯುಕ್ತ ದಾಳಿ- ಎಂಜನಿಯರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಭೋಪಾಲ್: ಮಧ್ಯಪ್ರದೇಶದ ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಉಪ ಎಂಜನಿಯರ್ ಮನೆಯ ಮೇಲೆ ಇಂದು ಲೋಕಾಯುಕ್ತ ತಂಡ ದಾಳಿ ಮಾಡಿದ್ದು, ಕಂತೆ ಕಂತೆ ಹಣ ಪತ್ತೆಯಾಗಿದೆ.

    ಲೋಕಾಯುಕ್ತ ತಂಡವು ಇಂದು ಬೆಳಗ್ಗೆ ಎಂಜನಿಯರ್ ಗಜಾನನ ಪಾಟೀದಾರ್ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಸಹೋದರ ಬಿಲ್ಡರ್, ರಮೇಶ್ ಚಂದ್ರ ಪಾಟೀದಾರ್ ಮನೆ ಸೇರಿದಂತೆ 9 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 25 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು 3 ಕೆ.ಜಿ ಚಿನ್ನ ಪತ್ತೆಯಾಗಿದೆ.

    ಗಜಾನನ್ ಪಾಟೀದಾರ ಮಾಸಿಕ ಆದಾಯ 55,000 ರೂ. ಆಗಿದೆ. ಆದರೆ ಅವರ ಬಳಿ ಈಗ ಪತ್ತೆಯಾದ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಗಜಾನನ್ ಪಾಟೀದಾರ ಐದು ವರ್ಷಗಳ ಹಿಂದೆ ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಆಗಿ ನೇಮಕವಾಗಿದ್ದರು.

    ಲೋಕಾಯುಕ್ತ ಅಧಿಕಾರಿಗಳು ಗಜಾನನ ಪಾಟೀದಾರ್ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಗಜಾನನ ಅವರು ಸಹೋದರ, ಬಿಲ್ಡರ್ ರಮೇಶ್ ಚಂದ್ರಗೆ ಎಷ್ಟು ಸರ್ಕಾರಿ ಯೋಜನೆಗಳನ್ನು ಒದಗಿಸಿದ್ದರು ಎನ್ನುವ ಕುರಿತು ತನಿಖೆ ಆರಂಭವಾಗಿದೆ. ಅಕ್ರಮವಾಗಿ ಪತ್ತೆಯಾದ ಹಣ, ಬೆಳ್ಳಿ, ಬಂಗಾರ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಭೀಕರ ಅಪಘಾತ: ನಿವೃತ್ತಿಯ ದಿನವೇ ಕುಟುಂಬದ ಐವರನ್ನು ಕಳೆದುಕೊಂಡ ಮೆಸ್ಕಾಂ ಎಂಜಿನಿಯರ್

    ಭೀಕರ ಅಪಘಾತ: ನಿವೃತ್ತಿಯ ದಿನವೇ ಕುಟುಂಬದ ಐವರನ್ನು ಕಳೆದುಕೊಂಡ ಮೆಸ್ಕಾಂ ಎಂಜಿನಿಯರ್

    ಶಿವಮೊಗ್ಗ: ಮೆಸ್ಕಾಂ ಎಂಜಿನಿಯರ್ ಒಬ್ಬರು ನಿವೃತ್ತಿಯ ದಿನವೇ ಭೀಕರ ಅಪಘಾತದಲ್ಲಿ ಕುಟುಂಬದ ಐವರನ್ನು ಕಳೆದುಕೊಂಡ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಪ್ಪ ಅವರ ಕುಟುಂಬದ ಐವರು ಸದಸ್ಯರನ್ನು ಕಳೆದುಕೊಂಡ ಮೆಸ್ಕಾಂ ನಿವೃತ್ತ ಎಂಜಿನಿಯರ್. ಚಂದ್ರಪ್ಪ ಅವರ ಪತ್ನಿ ಮಂಗಳಾ (55), ಪುತ್ರ ಮಂಜುನಾಥ (38), ಅಳಿಯ ನೀಲಕಂಠ, ಪುತ್ರಿ ಉಷಾ ಹಾಗೂ ಮೊಮ್ಮಗ ನಂದೀಶ್ ಮೃತಪಟ್ಟಿದ್ದಾರೆ.

    ಭದ್ರಾವತಿ ತಾಲೂಕು ಮಂಗೋಟೆಯವರಾದ ಚಂದ್ರಪ್ಪ ಶಿವಮೊಗ್ಗದ ಗೋಪಾಳದಲ್ಲಿ ಮನೆ ಮಾಡಿದ್ದರು. ಕುಂಸಿ ಗ್ರಾಮದಲ್ಲಿ ಮೆಸ್ಕಾಂ ಎಂಜಿನಿಯರ್ ಸೇವೆ ಸಲ್ಲಿಸಿದ್ದ ಚಂದ್ರಪ್ಪ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಪ್ರಯುಕ್ತ ಮೆಸ್ಕಾಂ ಸಿಬ್ಬಂದಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೀಗಾಗಿ ಚಂದ್ರಪ್ಪ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಿಫ್ಟ್ ಕಾರಿನಲ್ಲಿ ಕುಂಸಿ ಗ್ರಾಮಕ್ಕೆ ತೆರಳುತ್ತಿದ್ದರು.

    ಶಿವಮೊಗ್ಗ ತಾಲೂಕು ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಚಂದ್ರಪ್ಪ ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ವೇಗವಾಗಿ ಸಂಚರಿಸುತ್ತಿದ್ದ ಲಾರಿ ಕಾರಿನ ಮೇಲೆ ಹರಿದಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ನಿವೃತ್ತಿಯ ಸಮಾರಂಭಕ್ಕೆ ಕುಟುಂಬದವರ ನಿರೀಕ್ಷೆಯಲ್ಲಿದ್ದ ಚಂದ್ರಪ್ಪ ಅವರು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ.

    ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.