Tag: ಎಂಇಎಸ್ ಕಾಲೇಜು

  • ಕಾಲೇಜಿನ ಮುಂದೆ KSRP ತುಕಡಿ – ಹಿಜಬ್ ತೆಗೆದು ಕ್ಲಾಸ್‌ಗೆ ಹಾಜರ್

    ಕಾಲೇಜಿನ ಮುಂದೆ KSRP ತುಕಡಿ – ಹಿಜಬ್ ತೆಗೆದು ಕ್ಲಾಸ್‌ಗೆ ಹಾಜರ್

    ಚಿಕ್ಕಮಗಳೂರು: ಹಿಜಬ್ ಬೇಕು ಎಂದು ಬುಧವಾರ ಇಡೀ ದಿನ ಪ್ರತಿಭಟನೆ ನಡೆಸಿದ್ದ ನಗರದ ಎಂಇಎಸ್ ಕಾಲೇಜು ಬಳಿ ಗುರುವಾರ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ತುಕಡಿ ಬೀಡು ಬಿಟ್ಟಿದೆ.

    ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದು ಯಾವುದೇ ಪ್ರತಿಭಟನೆಗೆ ಅವಕಾಶ ಕೊಡದೇ, ಯಾರಾದರೂ ಪ್ರತಿಭಟನೆಗೆ ಮುಂದಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

    ಈಗಾಗಲೇ ಜಿಲ್ಲಾಡಳಿತ ಶಾಲಾ-ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದೆ. ಬುಧವಾರ ಎಂಇಎಸ್ ಕಾಲೇಜಿನ ಆವರಣದಲ್ಲಿ ಇಡೀ ದಿನ ಪ್ರತಿಭಟನೆ ನಡೆಸಿದ್ದರು. ಕಾಲೇಜಿನ ಗೇಟ್ ಒಳಗೆ ವಿದ್ಯಾರ್ಥಿನಿಯರು, ಹೊರಗೆ ಪೋಷಕರು ಹಾಗೂ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

    ತಹಶೀಲ್ದಾರ್, ಪೊಲೀಸರು, ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದರೂ ವಿದ್ಯಾರ್ಥಿನಿಯರು ಕ್ಯಾರೇ ಎಂದಿರಲಿಲ್ಲ. ಬಳಿಕ ಧರ್ಮಗುರು ಹಾಗೂ ಪಿಎಫ್‌ಐ ಸಂಘಟನೆ ಮುಖಂಡರು ಹೇಳಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದರು. ಹೀಗಾಗಿ ಇಂದು ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲವೆಂದು ಕಾಲೇಜು ಬಳಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

    ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಹುದು. ಆದರೆ ಹಿಜಬ್ ತೆಗೆಯಬೇಕು. ಹಿಜಬ್ ತೆಗೆಯುವುದಿಲ್ಲ ಎಂದರೆ ಕಾಲೇಜಿನಲ್ಲಿ ಅವಕಾಶವಿಲ್ಲ. ಹಿಜಬ್ ಧರಿಸುತ್ತೇವೆ, ತೆಗೆಯಲ್ಲ ಎಂದರೆ ಅವರಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ಕೂತು ಹೋಗಬೇಕು. ಆದರೆ ಅಲ್ಲಿ ಯಾವುದೇ ಪಾಠ-ಪ್ರವಚನ ನಡೆಯುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಸುಮ್ಮನೆ ಕೂತು ಹೋಗಬೇಕು. ಇದನ್ನೂ ಓದಿ: ಹಿಜಬ್, ಬುರ್ಕಾ ಪುರುಷ ದಬ್ಬಾಳಿಕೆಯ ಸಂಕೇತ: ತಸ್ಲೀಮಾ ನಸ್ರೀನ್

    ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಲ್ಲಿ ಬಹುತೇಕರು ಶಿಕ್ಷಣ ಮುಖ್ಯ ಎಂದು ಹಿಜಬ್ ತೆಗೆದು ಬರುತ್ತಿದ್ದಾರೆ. ಕಾಲೇಜಿನ ಗೇಟಿನ ಮುಂದೆ ಪೊಲೀಸರು ಹಾಗೂ ಆಡಳಿತ ಮಂಡಳಿಯವರು ಕೂಡ ಕಾವಲು ನಿಂತಿದ್ದಾರೆ.