Tag: ಊರು ಸುಟ್ಟು ಹನುಮಪ್ಪ ಹೊರಗೆ ನಾಟಕ

  • ‘ಜೈ ಕೇಸರಿ ನಂದನ’ ಆಡಿಯೋ ಬಿಡುಗಡೆ

    ‘ಜೈ ಕೇಸರಿ ನಂದನ’ ಆಡಿಯೋ ಬಿಡುಗಡೆ

    ಬೆಂಗಳೂರು: ಉತ್ತರ ಕರ್ನಾಟಕದ ಕಂಪ್ಲೀಟ್ ಪ್ಯಾಕೇಜ್ ಇರುವಂತಹ ಸಿನಿಮಾವೊಂದು ಈಗ ತೆರೆಗೆ ಬರುತ್ತಿದೆ. ‘ಜೈ ಕೇಸರಿ ನಂದನ’ ಎಂಬ ಈ ಚಿತ್ರದ ಹಾಡುಗಳ ಸಿಡಿ ಹಾಗೂ ಟ್ರೈಲರ್ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಹನುಮಂತ ಹಾಲಗೇರಿ ಅವರ ಊರು ಸುಟ್ಟು ಹನುಮಪ್ಪ ಹೊರಗೆ ಎಂಬ ಜನಪ್ರಿಯ ನಾಟಕವನ್ನಾಧರಿಸಿ ಈ ಚಿತ್ರವನ್ನು ಶ್ರೀಧರ್ ಜಾವೂರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ನಾಟಕವನ್ನು ಹಲವಾರು ನಾಟಕ ತಂಡಗಳು ಅಭಿನಯಿಸಿವೆ.

    ಶ್ರೀಧರ್ ಜಾವೂರ್ ಈ ಹಿಂದೆ ಕೆಂಗುಲಾಬಿ ಚಿತ್ರವನ್ನು ನಿರ್ದೇಶಿಸಿದ್ದರು. ಜೈ ಕೇಸರಿ ನಂದನ ಅವರ 2ನೇ ಚಿತ್ರ. ಇದೇ ಏಪ್ರಿಲ್ 12 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶಶಿಧರ್ ದಾನಿ, ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲ್ಲೇಶ್ ವರ್ಧನ್ ಹಾಗೂ ಅಮೃತ ಆರ್. ಹಾಗೂ ಅಮೃತ ಕಾಳ ಈ ಚಿತ್ರದ ನಾಯಕ-ನಾಯಕಿಯ ಪಾತ್ರಗಳಲ್ಲಿ ನಿರ್ವಹಿಸಿದ್ದಾರೆ. ಅಶ್ವಿನಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2 ಗ್ರಾಮಗಳ ನಡುವಿನ ಜಗಳದಲ್ಲಿ ಪೊಲೀಸ್ ಠಾಣೆ ಸೇರಿದ ಹನುಮಂತಪ್ಪನ ಕಥೆ ಇದಾಗಿದೆ. ಜನ ಮತ್ತು ಮೂಢನಂಬಿಕೆ ನಡುವೆ ನಡೆಯುವಂತಹ ಕಥೆ ಇದಾಗಿದೆ. ಧರಗಟ್ಟಿ ಮತ್ತು ವಜ್ರಗಟ್ಟಿ ಎಂಬ ಎರಡು ಗ್ರಾಮಗಳ ಊರುಸುಟ್ಟು ಹನುಮಪ್ಪನ ಜಾತ್ರೆ ಸಮಯದಲ್ಲಿ ನಡೆದ ಘೋರ ದುರಂತವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದು ನಿರ್ದೇಶಕ ಶ್ರೀಧರ್ ಜಾವೂರ್ ಹೇಳಿದರು. ಶಶಿಧರ್ ದಾನಿ ಹಾಗೂ ಪ್ರವೀಣ್ ಕತ್ರಿ, ನಾರಾಯಾಣ್ ಷಾ, ಪವಾರ್, ಲಕ್ಷ್ಮಣ್ ಸಿಂಗ್ರಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಮಾ ಹರೀಶ್ ಹಾಗೂ ಸಿದ್ದನಕೊಳ್ಳದ ಮಠದ ಶಿವಕುಮಾರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

    ನಾಯಕ ನಟ ಕಲ್ಲೇಶ್ ವರ್ಧನ್ ಮಾತನಾಡಿ ಗಂಭೀರವಾದ ವಿಷಯವನ್ನು ನಾಜೂಕಾಗಿ ಹೇಳುವ ಪ್ರಯತ್ನ ಇಲ್ಲಿ ನಡೆದಿದೆ. 2 ಊರುಗಳ ನಡುವೆ ಹನುಮಪ್ಪನಿಗಾಗಿ ನಡೆದ ಘಟನೆ ಈ ಚಿತ್ರದ ಕಥಾವಸ್ತು ಎಂದು ಹೇಳಿದರು. ನಾಯಕಿ ಅಮೃತ ಆರ್ ಮಾತನಾಡಿ ತುಂಗ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಭಾಷೆ ನನಗೆ ಸುಲಭವಾಯಿತು. ಬಾಮಾ ಹರೀಶ್ ಮಾತನಾಡಿ ಇದುವರೆಗೆ ಹನುಮಪ್ಪನನ್ನು ಇಟ್ಟುಕೊಂಡು ಮಾಡಿದ ಯಾವ ಚಿತ್ರವೂ ಫೇಲಾಗಿಲ್ಲ. ಒಳ್ಳೆ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.