Tag: ಊಟ

  • ಕಡಿಮೆ ಆದಾಯವಿದ್ರೂ ಪ್ರತಿದಿನ ಪೊಲೀಸರಿಗೆ ನೀರು, ಊಟ ವಿತರಣೆ

    ಕಡಿಮೆ ಆದಾಯವಿದ್ರೂ ಪ್ರತಿದಿನ ಪೊಲೀಸರಿಗೆ ನೀರು, ಊಟ ವಿತರಣೆ

    – ಬಡ ವ್ಯಕ್ತಿಯಿಂದ ಪೊಲೀಸ್ ಸಿಬ್ಬಂದಿಗೆ ಸಹಾಯ
    – ಒಂದು ಮರ ಹತ್ತಿ ಕಾಯಿ ಕಿತ್ರೆ 100 ರೂ. ಆದಾಯ

    ತಿರುವನಂತಪುರಂ: ಲಾಕ್‍ಡೌನ್ ಆದಾಗಿನಿಂದ ಪೊಲೀಸರು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಹೊಟೇಲ್ ಮುಚ್ಚಿರುವ ಕಾರಣ ಪೊಲೀಸರಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಈ ವೇಳೆ ಕೇರಳ ಮೂಲದ ಬಡ ವ್ಯಕ್ತಿಯೊಬ್ಬ ಪೊಲೀಸರಿಗೆ ನೀರು ಮತ್ತು ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

    ಗಿರೀಶ್ ಕೇರಳದ ಅಲಪ್ಪಿ ಜಿಲ್ಲೆಯ ಕಲವೂರ್ ಗ್ರಾಮದಲ್ಲಿ ಪೊಲೀಸರಿಗೆ ನೀರು ಹಾಗೂ ಆಹಾರ ಸರಬರಾಜು ಮಾಡಿ ಗಮನ ಸೆಳೆಯುತ್ತಿದ್ದಾರೆ. ಗಿರೀಶ್ ತೆಂಗಿನ ಮರ ಹತ್ತಿ ಕಾಯಿಕೀಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ತೆಂಗಿನ ಮರ ಹತ್ತಿ ಕಾಯಿ ಕಿತ್ತು 100 ರೂ. ಆದಾಯ ಗಳಿಸುತ್ತಾರೆ. ಆದರೆ ತಮಗೆ ಬರುವ ಕಡಿಮೆ ಆದಾಯದಲ್ಲಿಯೇ ಗಿರೀಶ್ ಪೊಲೀಸರಿಗೆ ಆಹಾರ ವಿತರಣೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.

    ಗಿರೀಶ್ ಲಾಕ್‍ಡೌನ್ ಪ್ರಾರಂಭವಾದಾಗಿನಿಂದಲೂ ಪೊಲೀಸ್ ಸಿಬ್ಬಂದಿಗೆ ಉಚಿತ ಆಹಾರ ಮತ್ತು ನೀರನ್ನು ನೀಡುತ್ತಿದ್ದಾರೆ. ಪೊಲೀಸರು ನಿರಾಕರಿಸಿದರೂ ಗಿರೀಶ್ ಮಾತ್ರ ತಮ್ಮ ಕೈಲಾದ ತಿಂಡಿಯನ್ನು ತಂದು ನೀಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಲವೂರ್ ಸಬ್ ಇನ್ಸ್ ಪೆಕ್ಟರ್ ಟೋಲ್ಸನ್ ಜೋಸೆಫ್, ಈ ವ್ಯಕ್ತಿಯು ಪ್ರತಿದಿನ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಜೊತೆಗೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಆಹಾರ ನೀಡುತ್ತಿದ್ದರು. ಒಂದು ದಿನ ವ್ಯಕ್ತಿಯ ಬಗ್ಗೆ ವಿಚಾರಿಸಿದೆ. ಆ ವ್ಯಕ್ತಿಯು ಪ್ರತಿದಿನ ನೀರು ಮತ್ತು ತಿಂಡಿಯನ್ನು ಪೊಲೀಸರಿಗೆ ಪೂರೈಸುತ್ತಾರೆ ಎಂದು ಪೊಲೀಸರು ನನಗೆ ಹೇಳಿದರು ಎಂದರು.

    ಗಿರೀಶ್ ಇಡೀ ದಿನ ಕರ್ತವ್ಯದಲ್ಲಿರುವವರಿಗೆ ನೀರು ಮತ್ತು ಬಾಳೆಹಣ್ಣುಗಳನ್ನು ತರುತ್ತಾರೆ. ಈ ಬಿಸಿಲಿನಲ್ಲೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ಈ ಲಾಕ್‍ಡೌನ್ ಸಮಯದಲ್ಲಿ ಯಾವುದೇ ಅಂಗಡಿಗಳು ತೆರೆದಿಲ್ಲ. ನಮ್ಮ ಇಲಾಖೆಯು ಆಹಾರ ಮತ್ತು ನೀರನ್ನು ಪೂರೈಸುತ್ತಿದೆ. ಆದರೂ ಗಿರೀಶ್ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗಿರೀಶ್ ಗೆ ಬರುವ ಕಡಿಮೆ ಆದಾಯದಲ್ಲೂ ನಮಗೆ ಸಹಾಯ ಮಾಡುತ್ತಿದ್ದಾರೆ. ಅವರು ಪೊಲೀಸರು ಕರ್ತವ್ಯದಲ್ಲಿರುವ ಸ್ಥಳಗಳಿಗೆ ಹೋಗಿ ನೀರು ಮತ್ತು ತಿಂಡಿಯನ್ನು ನೀಡುತ್ತಾರೆ. ಹೀಗಾಗಿ ಅವರಿಂದ ನಮಗೆ ತುಂಬಾ ಸಹಾಯವಾಗುತ್ತಿದೆ ಎಂದು ಕಾನ್‍ಸ್ಟೆಬಲ್ ಹೇಳಿದರು.

    ನನ್ನ ಗಳಿಕೆಯಿಂದ ಪೊಲೀಸ್ ಸಿಬ್ಬಂದಿಗೆ ಒಂದು ಭಾಗವನ್ನು ಖರ್ಚು ಮಾಡುತ್ತಿದ್ದೇನೆ. ಅವರು ಕೊರೊನಾ ವೈರಸ್‍ನಿಂದ ಕಾಪಾಡಲು ನಮಗಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಊಟ ಖರೀದಿಸುವಷ್ಟು ಹಣ ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ಬಾಳೆಹಣ್ಣು ಅಥವಾ ಸೋಡಾ ಕೊಡುತ್ತಿದ್ದೇನೆ ಎಂದು ಗಿರೀಶ್ ಹೇಳಿದ್ದಾರೆ.

    https://www.youtube.com/watch?v=IdRZDqGeCO4

     

  • ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಧಾರವಾಡ: ಲಾಕ್‍ಡೌನ್ ನಡುವೆ ಆಹಾರ ಅರಸಿ ಮನೆಗೆ ಬಂದಿದ್ದ ಕೋತಿಗಳಿಗೆ ಆಹಾರ ನೀಡುವ ಮೂಲಕ ಧಾರವಾದ ಗೌಸ್ ಖಾನ್ ಮಾನವೀಯತೆ ಮರೆದಿದ್ದಾರೆ.

    ಧಾರವಾಡದ ಬಸವನಗರದ ನಿವಾಸಿಯಾದ ಗೌಸ್ ಖಾನ್ ನವಲೂರು ಊಟಕ್ಕೆ ಕುಳಿತಾಗ ಮನೆಗೆ ಇಂದು ಎರಡು ಮಂಗಗಳು ಬಂದಿದ್ದವು. ಮಂಗಗಳನ್ನು ನೋಡಿದ ಗೌಸ್ ಖಾನ್ ಶೇಂಗಾ, ಚಪಾತಿ, ಬಾಳೆಹಣ್ಣು ನೀಡಿದ್ದಾರೆ. ಎಂದು ಬರದ ಮಂಗಗಳು ನಮ್ಮ ಮನೆಗೆ ಬಂದಿದ್ದರಿಂದ ಊಟ ನೀಡಿದ್ದೇವೆ ಎಂದು ಗೌಸ್ ಹೇಳುತ್ತಾರೆ.

    ಇಂದು ಶನಿವಾರ ಆಂಜನೇಯನ ವಾರ ಎಂದು ಹೇಳುತ್ತಾರೆ. ಮನೆಗೆ ಅತಿಥಿಗಳ ರೂಪದಲ್ಲಿ ಬಂದಿದ್ದವು. ನಾವು ಮಾಡುತ್ತಿದ್ದ ಊಟವನ್ನೇ ಮಂಗಗಳಿಗೆ ನೀಡಿದ್ದೇವೆ ಎಂದು ಗೌಸ್ ಕುಟುಂಬಸ್ಥರು ಹೇಳುತ್ತಾರೆ. ಇನ್ನು ಮಂಗಗಳು ಬಂದಿರೋದನ್ನು ನೋಡಿದ ಜನ, ಭಾಯಿಜಾನ್ ಮನೆಗೆ ಭಜರಂಗಿಗಳು ಬಂದಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  • ಹೊಟ್ಟೆ ತುಂಬಾ ಊಟವೂ ಸಿಗ್ತಿಲ್ಲ: ಚಿಕ್ಕಮಗಳೂರಲ್ಲಿ ಬಾಣಂತಿ ಗೋಳು

    ಹೊಟ್ಟೆ ತುಂಬಾ ಊಟವೂ ಸಿಗ್ತಿಲ್ಲ: ಚಿಕ್ಕಮಗಳೂರಲ್ಲಿ ಬಾಣಂತಿ ಗೋಳು

    – ಊಟವಿಲ್ಲದೇ ಬಳಲುತ್ತಿರುವ ನಿರಾಶ್ರಿತ ಹಕ್ಕಿ-ಪಿಕ್ಕಿ ಕುಟುಂಬಗಳು

    ಚಿಕ್ಕಮಗಳೂರು: ಕೊರೊನಾ ಎಫೆಕ್ಟ್‍ನಿಂದ ಹೊಟ್ಟೆ ತುಂಬಾ ಊಟ ಸಿಗದೆ ಬಾಣಂತಿಯೊಬ್ಬರು ತನ್ನ ಹಸುಗೂಸಿಗೆ ಹೊಟ್ಟೆ ತುಂಬಾ ಹಾಲು ಕುಡಿಸಲು ಪರಿತಪ್ಪಿಸುತ್ತಿರುವಂತಹ ಸ್ಥಿತಿ ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗಿದೆ.

    ಹಣ್ಣು-ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ಸಿಗದೆ ಬಾಣಂತಿಯೂ ಸೊರಗಿದ್ದು, ಹಸುಗೂಸಿಗೆ ತಾಯಿಯ ಎದೆಹಾಲು ಕೂಡ ಸರಿಯಾಗಿ ಸಿಗುತ್ತಿಲ್ಲ. ನಗರದ ಹಿರೇಮಗಳೂರಿನ ರೈಲ್ವೆ ಬ್ರಿಡ್ಜ್ ಕೆಳಗೆ ಬಯಲಲ್ಲಿ ಶೆಡ್ ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತ ಕುಟುಂಬಗಳು ಶೋಚನಿಯ ಸ್ಥಿತಿ ತಲುಪಿವೆ. ಅಂದೇ ದುಡಿದು ಅಂದೇ ತಿನ್ನುತ್ತಿದ್ದ ಈ ನಿರಾಶ್ರಿತ ಹಕ್ಕಿ-ಪಿಕ್ಕಿ ಕುಟುಂಬಗಳಿಗೆ ಕೊರೊನಾ ಕಾಲದಲ್ಲಿ ಹೊಟ್ಟೆ ತುಂಬಾ ಊಟವೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.

    ಮಗುವಿಗೆ ಜನ್ಮ ನೀಡಿರುವ ಬಾಣಂತಿಯ ಆರೋಗ್ಯದಲ್ಲೂ ಏರುಪೇರಾಗಿದ್ದು ಹೊಟ್ಟೆ ತುಂಬಾ ಊಟವಿಲ್ಲದೆ ಆಕೆ ಬಳಲುತ್ತಿದ್ದರೆ, ಹೊಟ್ಟೆ ತುಂಬಾ ತಾಯಿಯ ಎದೆ ಹಾಲು ಸಿಗದ ಹಸುಗೂಸು ಸೊರಗಿ ಹೋಗಿದೆ. ಆರಂಭದ ದಿನದಲ್ಲಿ ದಿನಕ್ಕೆ ಒಂದು ಹೊತ್ತು ಯಾರಾದರೂ ತಂದುಕೊಟ್ಟರೆ ಊಟ ಮಾಡುತ್ತಿದ್ದರು. ಆದರೆ ಈಗ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ವಾರದ ಹಿಂದೆ ಉಳ್ಳವರು ತಂದು ಕೊಟ್ಟ ಸಾಮಾಗ್ರಿಗಳ ಕಿಟ್ ಮುಗಿದು ಹೋಗಿದ್ದು ಈ ಕುಟುಂಬಗಳು ನಾಳೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

    14 ಕುಟುಂಬಗಳು ವಾಸವಿರುವ ಈ ಬಯಲಲ್ಲಿ 20ಕ್ಕೂ ಹೆಚ್ಚು ಮಕ್ಕಳಿವೆ. ಯಾರಾದರು ಬಂದರೆ ಮಕ್ಕಳು ಏನಾದರು ಕೊಡುತ್ತಾರೆಂದು ಬಂದವರ ಕೈಯನ್ನೆ ನೋಡುತ್ತವೆ. ನಾವು ಕೆಲಸಕ್ಕೆ ಹೋಗಿದ್ದರೆ ಏನೂ ಬೇಡವಾಗಿತ್ತು. ಆದರೆ ಈಗ ತಿಂಗಳಿಂದ ಕೆಲಸಕ್ಕೆ ಹೋಗಿಲ್ಲ. ಆಸ್ಪತ್ರೆಗೆ ಹೋಗಲು ದುಡ್ಡಿಲ್ಲ. ಊಟಕ್ಕೂ ಕಷ್ಟದ ಸ್ಥಿತಿ ಎದುರಾಗಿದೆ. ಯಾರಾದರೂ ರೇಷನ್ ಕೊಟ್ಟರೆ ಬದುಕುತ್ತೇವೆ ಎಂದು ಅಲ್ಲಿನ ಜನರು ಕಷ್ಟವನ್ನು ತೋಡಿಕೊಂಡಿದ್ದಾರೆ.

  • ರಾಗಿಣಿ ಕಿಚನ್‍ನಿಂದ ಸರ್ಕಾರಿ ಆಸ್ಪತ್ರೆಯ 150 ವೈದ್ಯರಿಗೆ ರುಚಿಕರವಾದ ಊಟ

    ರಾಗಿಣಿ ಕಿಚನ್‍ನಿಂದ ಸರ್ಕಾರಿ ಆಸ್ಪತ್ರೆಯ 150 ವೈದ್ಯರಿಗೆ ರುಚಿಕರವಾದ ಊಟ

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ನಟಿ ರಾಣಿಗಿಯವರು ತಮ್ಮ ಮನೆಯಿಂದ ರುಚಿಕರವಾದ ಅಡುಗೆ ತಯಾರಿಸಿ ರವಾನಿಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಮನೆಗೂ ಹೋಗದೆ ದಿನಪೂರ್ತಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಸೇವೆ ಮಾಡುವ ವೈದ್ಯರಿಗಾಗಿ ರಾಗಿಣಿಯವರು ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಗಿಣಿಯವರು, ಆರ್.ಡಿ ಕಿಚ್ಚನ್ ವತಿಯಿಂದ ಆರೋಗ್ಯ ರಕ್ಷಣಾ ಹೀರೋಗಳಿಗೆ ಮನೆಯಲ್ಲೇ ಊಟ ತಯಾರಿಸಿ ನೀಡಲಾಗುತ್ತಿದೆ. ಈ ಮೂಲಕ 150 ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟವನ್ನು ನಾವು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅವರಿಗಾಗಿ ಸ್ವಲ್ಪ ಪ್ರೀತಿಯಿಂದ ಏನಾದರೂ ಮಾಡೋಣ ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ವಿರುದ್ಧ ಯುದ್ಧ ಮಡುತ್ತಿರುವ ಸರ್ಕಾರಿ ವೈದ್ಯರಿಗಾಗಿ ರಾಗಿಣಿ ಮನೆಯಲ್ಲೇ ಊಟವನ್ನು ತಯಾರಿಸಿದ್ದಾರೆ. ರಾಗಿಣಿಯವರ ಈ ಕೆಲಸಕ್ಕೆ ಅವರ ಮನೆಯವರು ಕೂಡ ಸಾಥ್ ನೀಡಿದ್ದಾರೆ. ಮನೆಮಂದಿಯೆಲ್ಲ ಸೇರಿ ರುಚಿಕರವಾದ ಅಡುಗೆ ಮಾಡಿ ಅದನ್ನು ಮಾಸ್ಕ್ ಧರಿಸಿಯೇ ಪ್ಯಾಕ್ ಮಾಡಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಊಟ ಸಿದ್ಧಗೊಳಿಸುತ್ತಿರುವ ಫೋಟೋವನ್ನು ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

    https://www.instagram.com/p/B-4ept2ASbM/

    ಕೊರೊನಾ ವೈರಸ್ ಭೀತಿಯ ಮೊದಲ ದಿನಗಳಿಂದ ಈ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ರಾಗಿಣಿ, ಇತ್ತೀಚೆಗಷ್ಟೇ ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದ್ದರು. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

    https://www.instagram.com/p/B-TuifogBJE/

    ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಈ ಹಿಂದೆ ರಸ್ತೆಗೆ ಇಳಿದಿದ್ದ ರಾಗಿಣಿ, ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್‍ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್‍ಗಳನ್ನು ವಿತರಿಸಿದ್ದರು. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಂಡಿದ್ದರು.

  • ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಭೇಟಿ ನೀಡಿದ್ದಾಗ ಬಡವರಿಗೆ, ನಿರಾಶ್ರಿತರಿಗೆ ತಾವೇ ಊಟ ಪ್ಯಾಕ್ ಮಾಡಿದ್ದಾರೆ.

    ಪ್ರತಿನಿತ್ಯ ಸುಮಾರು 2,000 ಜನಕ್ಕೆ ಊಟ ತಯಾರಿಸುವ ಕೇಂದ್ರ ಇದ್ದಾಗಿದ್ದು, ಬಸವಣ್ಣದೇವರ ಮಠಕ್ಕೆ ಸಂಸದೆ 250 ಕೆ.ಜಿ ಅಕ್ಕಿ, 50 ಕೆ.ಜಿ ಬೇಳೆ ಪ್ಯಾಕೆಟ್ ನೀಡಿ, ಶ್ರೀಗಳ ಹಾಗೂ ಸ್ವಯಂ ಸೇವಕ ತಂಡಕ್ಕೆ ಧನ್ಯವಾದ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಲಾಕ್‍ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ. ದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಗಳು ಕ್ರಮ ಕೈಗೊಳ್ತಾರೆ ಅದನ್ನು ಪಾಲಿಸಬೇಕು ಎಂದಿದ್ದಾರೆ.

    14ನೇ ತಾರೀಖಿಗೆ ಲಾಕ್‍ಡೌನ್ ಮುಗಿಯುವ ವಿಶ್ವಾಸ ಇತ್ತು. ಆದರೆ ದೆಹಲಿಯ ತಬ್ಲಿಘಿ ಸಂಘಟನೆ ಸಮಾವೇಶದಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿದೆ. ಸುಮಾರು 40% ಕೊರೊನಾ ಹಬ್ಬಲು ತಬ್ಲಿಘಿ ಕೊಡುಗೆ ಇದೆ. ತಬ್ಲಿಘಿ ಸಂಘಟನೆಯಲ್ಲಿ ಭಾಗಿಯಾದವರು ಸಾವಿರಾರು ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎಂದರು.

    ಈ ವೇಳೆ ಪವಾಡ ಶ್ರೀ ಬಸವದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ತಹಶಿಲ್ದಾರ್ ಶ್ರೀನಿವಾಸಯ್ಯ, ಪಿಎಸ್‍ಐ ಮಂಜುನಾಥ್ ಹಾಗೂ ಸ್ವಯಂ ಸೇವಕರು ದಾನಿಗಳು ಹಾಜರಿದ್ದರು.

  • ಅಮ್ಮನ ತಿಥಿಗೆ 1,500 ಜನರಿಗೆ ಊಟ ಹಾಕಿಸಿದ ಮಗ – ಮನೆಯ 12 ಮಂದಿಗೀಗ ಕೊರೊನಾ ಪಾಸಿಟಿವ್

    ಅಮ್ಮನ ತಿಥಿಗೆ 1,500 ಜನರಿಗೆ ಊಟ ಹಾಕಿಸಿದ ಮಗ – ಮನೆಯ 12 ಮಂದಿಗೀಗ ಕೊರೊನಾ ಪಾಸಿಟಿವ್

    ಭೋಪಾಲ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ಭಾರತದಲ್ಲಿಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ತನ್ನ ಅಮ್ಮನ ತಿಥಿಗೆ ಬರೋಬ್ಬರಿ 1,500 ಮಂದಿಗೆ ಊಟ ಹಾಕಿಸಿದ್ದು, ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊರೇನಾ ಮೂಲದ ಸುರೇಶ್ ತನ್ನ ಅಮ್ಮ ತೀರಿಹೋದ ಮೇಲೆ ದುಬೈನಿಂದ ವಾಪಸ್ ಬಂದಿದ್ದನು. ಅಮ್ಮನ ತಿಥಿಗೆ ಸುಮಾರು 1,500 ಮಂದಿಗೆ ಆಹ್ವಾನಿಸಿ ಊಟ ಹಾಕಿಸಿದ್ದನು. ದುಬೈನಿಂದ ಬಂದ ಹಿನ್ನೆಲೆ ಆತನನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅಲ್ಲದೇ ತಿಥಿ ಕಾರ್ಯದಲ್ಲಿ ಭಾಗಿಯಾಗಿ ಊಟ ಮಾಡಿ ಹೋಗಿದ್ದ ಇಡೀ ಕಾಲೋನಿಯನ್ನೇ ಸೀಲ್ ಮಾಡಲಾಗಿತ್ತು. ಆದರೆ ಇದೀಗ ಸುರೇಶ್ ಜೊತೆಗೆ ಆತನ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತಿಥಿ ಊಟ ಮಾಡಿದ್ದ 1,500 ಜನರಿಗೂ ಕೊರೊನಾ ಸೋಂಕಿನ ಭಯ ಹುಟ್ಟಿದೆ.

    ದುಬೈನಿಂದ ಅಮ್ಮನ ಅಂತ್ಯಕ್ರಿಯೆಗೆಂದು ಊರಿಗೆ ಬಂದಿದ್ದ ಸುರೇಶ್ ಮಾ. 20ರಂದು ತನ್ನ ಕಾಲೋನಿ ಮತ್ತು ಸಂಬಂಧಿಕರು ಸೇರಿ ಸುಮಾರು 1,500 ಮಂದಿಗೆ ತಿಥಿಯ ಊಟ ಹಾಕಿಸಿದ್ದನು. ಮಾ. 25ರಂದು ಸುರೇಶ್‍ಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದನು. ಈ ವೇಳೆ ಕೊರೊನಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಆತನನ್ನು ಮತ್ತು ಆತನ ಪತ್ನಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಆತನ ಸಂಪರ್ಕದಲ್ಲಿದ್ದ 23 ಸಂಬಂಧಿಕರನ್ನು ವೈದ್ಯರು ತಪಾಸಣೆ ನಡೆಸಿದಾಗ ಈ ಪೈಕಿ 10 ಮಂದಿಯ ವರದಿ ಕೊರೊನಾ ಪಾಸಿಟಿವ್ ಬಂದಿದೆ.

    12 ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಿಥಿಯಲ್ಲಿ ಪಾಲ್ಗೊಂಡಿದ್ದವರೆಲ್ಲರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.

    ದುಬೈನಿಂದ ಬರುವ ಮುನ್ನ ತಪಾಸಣೆಗೆ ಒಳಗಾದಾಗ ತನಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದರೆ ತಾನು ಹಾಗೂ ತನ್ನ ಪತ್ನಿ ಊರಿಗೆ ವಾಪಸ್ ಬರುವ ಎರಡು ದಿನಗಳ ಹಿಂದೆ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಳು ಎಂದು ಸುರೇಶ್ ತಿಳಿಸಿದ್ದಾನೆ.

    ಈಗಾಗಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ 2,547ಕ್ಕೆ ಏರಿದ್ದು, 67 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಸುಮಾರು 154 ಮಂದಿ ಕೊರೊನಾಗೆ ತುತ್ತಾಗಿದ್ದಾರೆ.

    ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಭಾರತದಲ್ಲಿ ವರದಿಯಾಗಿರುವ ಕೊರೊನಾ ಸೋಂಕಿತರಲ್ಲಿ ಬಹುಪಾಲು ಮಂದಿ ಈ ಸಮಾವೇಶದಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ. 2,547 ಕೊರೊನಾ ಸೋಂಕಿತರಲ್ಲಿ 950 ಮಂದಿ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರು ಎಂದು ವರದಿಯಾಗಿದೆ.

  • ನಿರಾಶ್ರಿತರ ಜೊತೆ ಹುಟ್ಟುಹಬ್ಬ – 2000 ಜನರಿಗೆ ಅನ್ನದಾನ ಮಾಡಿದ ನಿವೃತ್ತ ಬ್ಯಾಂಕ್ ಉದ್ಯೋಗಿ

    ನಿರಾಶ್ರಿತರ ಜೊತೆ ಹುಟ್ಟುಹಬ್ಬ – 2000 ಜನರಿಗೆ ಅನ್ನದಾನ ಮಾಡಿದ ನಿವೃತ್ತ ಬ್ಯಾಂಕ್ ಉದ್ಯೋಗಿ

    ಉಡುಪಿ: ದೇಶವೇ ಲಾಕ್‍ಡೌನ್ ಆಗಿರುವುದರಿಂದ ಉಡುಪಿಯಲ್ಲಿರುವ ಬಡವರಿಗೆ, ನಿರಾಶ್ರಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಊಟಕ್ಕೆ ಸಮಸ್ಯೆಯಾಗಿದೆ. ಇದೇ ವೇಳೆ ನಿವೃತ್ತ ಬ್ಯಾಂಕ್ ಉದ್ಯೋಗಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ 2000 ಜನರಿಗೆ ಅನ್ನದಾನ ಮಾಡಿದ್ದಾರೆ.

    ಹಲವಾರು ಸಂಘ ಸಂಸ್ಥೆಗಳು, ಸಮಾಜ ಸೇವಕರು ಮೂರು ಹೊತ್ತಿನ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ನಡುವೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಯಾದ ಜಯರಾಮ್ ರಾವ್ ತಮ್ಮ 63ನೇ ಹುಟ್ಟುಹಬ್ಬವನ್ನು ನಿರಾಶ್ರಿತರ, ಕೂಲಿ ಕಾರ್ಮಿಕರ ಜೊತೆ ಆಚರಿಸಿದರು. ಅಲ್ಲದೇ ಸುಮಾರು 2000 ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದರು.

    ಈ ಸಂದರ್ಭದಲ್ಲಿ ಜಯರಾಮ್ ರಾವ್ ಮಾತನಾಡಿ. ನಾನು ಹುಟ್ಟುಹಬ್ಬ ಆಚರಿಸಿಲ್ಲ. ಆದರೆ ಈಗ ಜನ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಊಟ ಕೊಡುವ ಮನಸ್ಸಾಯ್ತು. ದೇಶ ಹಸಿವಿನಿಂದ ಇರುವಾಗ ನಾವು ಮನೆಯಲ್ಲಿ ಸಿಹಿಯೂಟ ಮಾಡುವುದು ಎಷ್ಟು ಸರಿ ಎಂಬ ಆಲೋಚನೆ ಬಂತು. ಆಗ ಗಣೇಶೋತ್ಸವ ಸಮಿತಿಯನ್ನು ಸಂಪರ್ಕಿಸಿದೆ. ಅವರ ಮೂಲಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.

    ಜಯರಾಮ್ ಅವರಿಂದ ವಿತರಣೆಯಾದ ಊಟ ಹಸಿದ ಹೊಟ್ಟೆಗೆ ಸೇರಿದೆ. ಸಂಕಷ್ಟದ ಈ ಸ್ಥಿತಿಯಲ್ಲಿ ದಾನಿಗಳು ಮುಂದೆ ಬಂದರೆ ಸರ್ಕಾರಕ್ಕೆ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

    ಉಡುಪಿ ನಗರದ 10 ಕಡೆ ಮಧ್ಯಾಹ್ನದ ಅನ್ನದಾನ ಮಾಡಿ ವಿಶೇಷ ರೀತಿಯಲ್ಲಿ ಸದಾಕಾಲ ನೆನಪಿನಲ್ಲಿ ಇರುವಂತೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜಯರಾಮ್ ಅವರ ಪತ್ನಿ ವೀಣಾ ರಾವ್ ಜೊತೆಗಿದ್ದು, ಊಟ ವಿತರಣೆ ಮಾಡಿದರು. ಕಡಿಯಾಳಿ ಗಣೇಶೋತ್ಸವ ಸಮಿತಿ ಮೂಲಕ ಅನ್ನದಾನ ಮಾಡಿದ್ದು, ವ್ಯವಸ್ಥಾಪಕ ಮಂಜುನಾಥ್ ಹೆಬ್ಬಾರ್, ಶಾಸಕ ರಘುಪತಿ ಭಟ್, ಮೇಲ್ವಿಚಾರಕ ರಾಘವೇಂದ್ರ ಕಿಣಿ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆ ರಾಯಚೂರಿನ ಕುಷ್ಟರೋಗಿಗಳ ಕಾಲೋನಿ ಜನಕ್ಕೆ ತುತ್ತು ಅನ್ನಕ್ಕೂ ಕಷ್ಟವಾಗಿದೆ. ಹೊರಗೆ ಭಿಕ್ಷೆ ಬೇಡಿ ಬದುಕುತ್ತಿದ್ದ ಜನರಿಗೆ ರಸ್ತೆಯಲ್ಲಿ ಜನರೇ ಇಲ್ಲದ ಕಾರಣಕ್ಕೆ ಭಿಕ್ಷೆಯೂ ಇಲ್ಲವಾಗಿದೆ.

    ಮಾಶಾಸನ, ರೇಷನ್ ಯಾವುದೂ ಸಿಗದೆ ಇಲ್ಲಿನ ಕುಷ್ಟ ರೋಗಿಗಳು ಹಾಗೂ ಇಲ್ಲಿನ ನೂರಾರು ಜನ ನಿವಾಸಿಗಳು ಊಟಕ್ಕಾಗಿ ಪರದಾಡುತ್ತಿದ್ದಾರೆ. ಊಟ ಕೊಡಿ, ರೇಷನ್ ಕೊಡಿ ಎಂದು ಜಿಲ್ಲಾಡಳಿತಕ್ಕೆ ಇಲ್ಲಿನ ಜನ ಒತ್ತಾಯ ಮಾಡಿದ್ದಾರೆ. ಎಲ್ಲೆಡೆ ಪಡಿತರ ಆರಂಭವಾಗಿದ್ದರೂ ಇವರಿಗೆ ಇನ್ನೂ ಪಡಿತರ ನೀಡುತ್ತಿಲ್ಲ. ಒಂದು ವಾರದಿಂದ ನಮ್ಮ ಬಗ್ಗೆ ವಿಚಾರಿಸುವವರೇ ಇಲ್ಲದಾಗಿದೆ. ನಾವು ಬದುಕುವುದು ಹೇಗೆ ನಮಗೆ ಸಹಾಯ ಮಾಡಿ ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

    ಸರ್ಕಾರ ಇಲ್ಲಿನ ಕುಷ್ಟರೋಗಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಪ್ರತ್ಯೇಕ ಬಡಾವಣೆಯನ್ನೇ ಮಾಡಿದೆ. ಆದರೆ ಕೊರೊನಾ ವೈರಸ್ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಇಲ್ಲಿನ ನಿವಾಸಿಗಳಿಗೆ ಊಟವೇ ಸಿಗುತ್ತಿಲ್ಲ. ಯಾರಾದರೂ ದಾನಿಗಳು ತಂದುಕೊಟ್ಟರೆ ಮಾತ್ರ ಊಟ ಎನ್ನುವಂತ ಪರಿಸ್ಥಿತಿಯಲ್ಲಿದ್ದಾರೆ.

  • ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಮಂಗಳೂರು: ನಿರ್ವಸಿತ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳಿಂದ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆದರೆ ಎ ದರ್ಜೆಯ ಹೆಚ್ಚಿನ ದೇವಸ್ಥಾನಗಳಿಂದ ಈ ಆದೇಶ ಪಾಲನೆಯಾಗುತ್ತಿಲ್ಲ.

    ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಎ ದರ್ಜೆಯ ದೇವಸ್ಥಾನ ಆಗಿರುವ ಕಟೀಲು ದುರ್ಗಾಪರಮೇಶ್ವರಿ ದೇಗುಲದಿಂದ ಖಾಸಗಿ ಕೆಎಂಸಿ ಆಸ್ಪತ್ರೆಗೆ ಗುಪ್ತವಾಗಿ ಊಟ ರವಾನಿಸುತ್ತಿರುವ ವಿಡಿಯೋ ಈಗ ಹರಿದಾಡುತ್ತಿದೆ. ದೇವಸ್ಥಾನದ ಅಕ್ಕಿ ಬಳಸಿ, ಅಲ್ಲಿನ ಅಡುಗೆ ಕಾರ್ಮಿಕರ ಮೂಲಕ ಊಟ ರೆಡಿ ಮಾಡಲಾಗುತ್ತಿದ್ದು ದಿನವೊಂದಕ್ಕೆ ಎರಡು ಸಾವಿರ ಜನರಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ದೇವಸ್ಥಾನದ ದುಡ್ಡಲ್ಲಿ ಊಟ ರೆಡಿ ಮಾಡಿಸಿ, ಕೆಎಂಸಿ ಆಸ್ಪತ್ರೆಗೆ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ.

    ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವ ಸಂದರ್ಭ ಇಷ್ಟೊಂದು ಭೋಜನ ತಯಾರಿಸುತ್ತಿರುವುದಲ್ಲದೆ, ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದೇವಸ್ಥಾನದ ಆಡಳಿತ ವಹಿಕೊಂಡಿರುವ ಆಸ್ರಣ್ಣರ ಕಾರುಬಾರಿನಲ್ಲಿ ಸರ್ಕಾರಿ ದೇವಸ್ಥಾನದಿಂದ ಊಟ ಮಾರಾಟ ಮಾಡಲಾಗುತ್ತಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ.

    ಬಡ ಕೂಲಿ ಕಾರ್ಮಿಕರಿಗೆ ಊಟ ಪೂರೈಸುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ನೆಪ ಹೇಳುತ್ತಾರೆ. ಈಗ ಕೆಎಂಸಿ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

  • 100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್‍ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್‍ನಲ್ಲಿ ಕೂಲಿ ಕಾರ್ಮಿಕರಿಗೆ ಖಾಕಿ ಪಡೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದರು.

    ಧಾರವಾಡದ ಹೊರವಲಯದ ನರೇಂದ್ರ ಕ್ರಾಸ್ ಬಳಿ ಇರುವ ಟೋಲ್ ಗೇಟ್‍ನಲ್ಲಿ ಡಿವೈಎಸ್‍ಪಿ, ಪಿಎಸ್‍ಐ ಅವರಿಂದ ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಅವರನ್ನು ಸ್ಥಳೀಯ ಹಾಸ್ಟೇಲ್‍ನಲ್ಲಿ ಆಶ್ರಯಕ್ಕಾಗಿ ಕಳುಹಿಸಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹೊರಟ 30 ಜನರ ತಂಡ, ಬಿಸಿಲಿನಿಂದ ತೊಂದರೆ ಅನುಭವಿಸುತ್ತಿತ್ತು. ಅವರನ್ನು ಪೊಲೀಸ್ ವಾಹನದಲ್ಲಿ ತೆಗೂರ ಬಳಿ ಕರೆಸಿ ಎಸ್‍ಪಿ ಅವರು ಊಟ ಬಡಿಸಿದ್ದಾರೆ.

    ರಾಜಸ್ಥಾನಕ್ಕೆ ಹೋಗಲು ಚೆನ್ನೈದಿಂದ ಬಂದ ಎರಡು ಕುಟುಂಬ ಎರಡು ದಿನಗಳಿಂದ ಹೋಗೋಕೆ ಆಗದೇ ರಸ್ತೆಯಲ್ಲೇ ಪರದಾಟ ಮಾಡಿತ್ತು. ಇದರ ಜೊತೆಗೆ ಬೆಳಗಾವಿಯ ಸಂಕೇಶ್ವರದಿಂದ ಬೆಂಗಳೂರ ಕಡೆ ಹೊರಟಿದ್ದ 30 ಜನರನ್ನ ಚೆಕ್‍ಪೋಸ್ಟನಲ್ಲಿ ತಡೆದು ಅವರಿಗೂ ಕೂಡ ಊಟಕ್ಕೆ ಹಾಕಲಾಗಿದೆ. ಆದರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ಇಲ್ಲದ ಕಾರಣ ಗಡಿಯಲ್ಲೇ ಅವರನ್ನ ನಿಲ್ಲಿಸಲಾಗುತ್ತಿದೆ. ಸದ್ಯ ಎಸ್‍ಪಿ ವರ್ತಿಕಾ ಕಟಿಯಾರ್ ಈ ಜನರಿಗೆ ಒಂದು ಕಡೆ ಉಳಿಯಲು ಜಿಲ್ಲಾಡಳಿತದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.