Tag: ಊಟ

  • ಕೊರೊನಾ ಸೋಂಕಿತರಿಗೆ ಊಟದ ಡಬ್ಬದ ಮೂಲಕ ಸಂದೇಶ ಕೊಟ್ಟ ಬಾಲಕ

    ಕೊರೊನಾ ಸೋಂಕಿತರಿಗೆ ಊಟದ ಡಬ್ಬದ ಮೂಲಕ ಸಂದೇಶ ಕೊಟ್ಟ ಬಾಲಕ

    ಕೋವಿಡ್-19 ರೋಗಿಗಳಿಗಾಗಿ ತನ್ನ ತಾಯಿ ಸಿದ್ಧಪಡಿಸಿದ ಊಟದ ಡಬ್ಬದ ಮೇಲೆ ಬಾಲಕನೋರ್ವ ವಿಶೇಷ ಸಂದೇಶವನ್ನು ಬರೆದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಊಟದ ಪ್ಯಾಕ್ ಮೇಲೆ ಬಾಲಕ ಖುಷಿಯಾಗಿರಿ ಎಂದು ಹಿಂದಿಯಲ್ಲಿ ಬರೆದಿದ್ದು, ಫೋಟೋಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ದೇಶವು ಕೊರೊನಾ ವೈರಸ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಈ ಫೋಟೋ ಅನೇಕ ಜನರ ಹೃದಯ ಗೆಲ್ಲುತ್ತಿದೆ.

    ಫೋಟೋದಲ್ಲಿ ಬಾಲಕ ಹಸಿರು ಬಣ್ಣದ ಶರ್ಟ್ ಧರಿಸಿದ್ದು, ಊಟದ ಡಬ್ಬದ ರಟ್ಟಿನ ಮುಚ್ಚಳದ ಮೇಲೆ ‘ಖುಷ್ ರಹಿಯೆ'(ಸಂತೋಷವಾಗಿರಿ) ಎಂದು ಪ್ರತಿಯೊಂದು ಡಬ್ಬದ ಮೇಲೆ ಹಿಂದಿಯಲ್ಲಿ ಬರೆದುಕೊಂಡು ಬರುತ್ತಿರುತ್ತಾನೆ. ಪದಗಳ ಜೊತೆಗೆ ನಗು ಮುಖದ ಚಿಹ್ನೆಯನ್ನು ಕೂಡ ಬರೆದಿದ್ದಾನೆ.

    ಈ ಫೋಟೋವನ್ನು ಮನೀಷ್ ಸಾರನ್‍ಗಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಫೋಟೋಗೆ 12,000 ಲೈಕ್ಸ್ ಹಾಗೂ ನೂರಕ್ಕೂ ಹೆಚ್ಚು ಕಮೆಂಟ್‍ಗಳು ಹರಿದುಬಂದಿದೆ.

  • ಕೋವಿಡ್ ಕೇರ್ ಸೆಂಟರ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ

    ಕೋವಿಡ್ ಕೇರ್ ಸೆಂಟರ್ ಮೂಲಕ ಕೊಡಗು ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟೇ ಜಾಸ್ತಿಯಾಗುತ್ತಿದ್ದರೂ, ಜಿಲ್ಲಾಡಳಿತ ಎಲ್ಲೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು ಎಲ್ಲರಿಗೂ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಉತ್ತಮ ಆಹಾರವನ್ನು ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಎಲ್ಲವೂ ಚೆನ್ನಾಗಿದ್ದರೂ ಊಟ ತಿಂಡಿ ಚೆನ್ನಾಗಿಲ್ಲ ಎಂದು ಗಲಾಟೆ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.

    ಹೌದು, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಮವಾರ ಬೆಳಿಗ್ಗೆ ತಿಂಡಿಗೆ ಕೊಟ್ಟಿದ್ದ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ. ಹೀಗೆ ಮಾಡಿದರೆ ನಾವು ಚೇತರಿಸಿಕೊಳ್ಳುವುದು ಹೇಗೆ ಎಂದು ಸೋಂಕಿತರು ವೈದ್ಯರ ಮೇಲೆಯೇ ಗಲಾಟೆ ಮಾಡಿದ್ದರು. ವೈದ್ಯರೊಂದಿಗೆ ಗಲಾಟೆ ಮಾಡುವ ವೀಡಿಯೋವನ್ನು ಸೆರೆ ಹಿಡಿದು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಹಾಳಾಗಿರುವ ಉಪ್ಪಿಟ್ಟಿನ ಪ್ಯಾಕ್‍ಗಳ ಫೋಟೋಗಳನ್ನು ವೈರಲ್ ಮಾಡಿದ್ದರು. ಈ ಕುರಿತು ಕೋವಿಡ್ ಕೇರ್ ಸೆಂಟರ್‍ನ ಉಸ್ತುವಾರಿ ಹೊತ್ತಿಕೊಂಡಿರುವ ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಅವರನ್ನು ಕೇಳಿದಾಗ ಕಥೆ ಬೇರೆ ಇರುವುದು ಇರುವುದು ಗೊತ್ತಾಗಿದೆ.

    ಹಿಂದೆ ಹೊರಗಿನಿಂದ ಕೋವಿಡ್ ಕೇರ್ ಗಳಿಗೆ ಊಟ ತಿಂಡಿ ಪಾರ್ಸಲ್ ಮಾಡಿ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸೋಂಕಿತರಿಗೆ ಊಟ ತಿಂಡಿ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಬಂದಿದ್ದರಿಂದ ಜಿಲ್ಲಾಡಳಿತವೇ ಸ್ವತಃ ಅಡುಗೆ ಮಾಡಿಸಿಕೊಡುತ್ತಿದೆ. ನಾವು ಬೆಳಿಗ್ಗೆ ಸೋಂಕಿತರಿಗೆ ಉಪ್ಪಿಟ್ಟು ಕೊಟ್ಟಿರದೇ, ಚಿತ್ರಾನ್ನ ಕೊಟ್ಟಿದ್ದೆವು. ಆದರೆ ಕೊಟ್ಟಿರುವ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ ಎಂದು ಗಲಾಟೆ ಮಾಡಿದ್ದಾರೆ. ಚಿತ್ರಾನ್ನಕ್ಕೆ ಹುಳಿಯನ್ನು ಸರಿಯಾಗಿ ಮಿಕ್ಸ್ ಮಾಡದಿದ್ದರಿಂದ ಕೆಲವು ಪ್ಯಾಕ್‍ಗಳಲ್ಲಿ ಹುಳಿ ಜಾಸ್ತಿಯಾಗಿದ್ದರೆ, ಕೆಲವು ಪ್ಯಾಕ್‍ಗಳಲ್ಲಿ ಸಪ್ಪೆಯಾಗಿತ್ತು ಎನ್ನೋದು ಸತ್ಯ. ಇದು ಗೊತ್ತಾದ ಕೂಡಲೇ, ಅದನ್ನು ಬದಲಾಯಿಸಿ ಚಪಾತಿ ಮತ್ತು ಕೋಸು ಪಲ್ಯ ಕೊಟ್ಟಿದ್ದೇವೆ. ಇಷ್ಟಾದರೂ ಕೆಲವರು ಉದ್ದೇಶ ಪೂರ್ವಕವಾಗಿ ವೈದ್ಯರ ಕೊಠಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೆ ಯಾವುದೋ ಸಂದರ್ಭದ ಉಪ್ಪಿಟ್ಟಿನ ಪ್ಯಾಕ್ ಗಳನ್ನು ವೈರಲ್ ಮಾಡಿ ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ ಎನ್ನುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‍ರವರು ಕೂಡ ನಾನು ಪದೇ ಪದೇ ಕೋವಿಡ್ ಕೇರ್ ಸೆಂಟರ್‍ಗೆ ಹೋಗಿ ಪರಿಶೀಲಿಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿದ್ದರೂ ಒಳ್ಳೆಯ ಕೆಲಸವನ್ನು ಗುರುತಿಸುತ್ತಿಲ್ಲ. ಕೆಲವು ನಾಲ್ಕು ಜನರು ಪದೇ ಪದೇ ಸುಳ್ಳು ವಿಷಯಗಳನ್ನು ಹೇಳುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ.

  • ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ

    ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ

    ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಸ್ಯಾಂಡಲ್‍ವುಡ್ ನಟ ರೊರಿಂಗ್ ಸ್ಟಾರ್ ಶ್ರೀ ಮುರಳಿ ಮಾಡುತ್ತಿದ್ದಾರೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆ ಆಸ್ಪತ್ರೆಗಳು ರೋಗಿಗಳ ಆರೈಕೆಯಲ್ಲಿ ಬ್ಯುಸಿಯಾಗಿವೆ. ಡಾಕ್ಟರ್ಸ್, ನರ್ಸ್ ಹಾಗೇ ಆಸ್ಪತ್ರೆ ಸಿಬ್ಬಂದಿ ದಿನವಿಡೀ ಆಸ್ಪತ್ರೆಯಲ್ಲೇ ಇದ್ದು ಕಾರ್ಯ ಪ್ರವೃತ್ತರಾಗಿದ್ದಾರೆ. ಇದೀಗ ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

    ಕೆ.ಸಿ ಜನರಲ್ ಆಸ್ಪತ್ರೆ, ESI ರಾಜಾಜಿನಗರ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಸಿಬ್ಬಂದಿಗೆ ಮುರುಳಿ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟ ಜೊತೆಗೆ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬಾಲಿವುಡ್, ಸ್ಯಾಂಡಲ್‍ವುಡ್ ಹಲವು ನಟ, ನಟಿಯರು ಕೈಲಾದಷ್ಟು ಸಹಾಯ ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಕೋವಿಡ್ ಆಸ್ಪತ್ರೆಯ ಊಟ ತಿಂದೇ ಆರೋಗ್ಯ ಸಮಸ್ಯೆಯಾಗ್ತಿದೆ – ಅಳಲು ತೋಡಿಕೊಂಡ ಸೋಂಕಿತ

    ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ. ಆದರೆ ಊಟ ಮಾತ್ರ ತಿನ್ನೋಕೆ ಆಗಲ್ಲ, ಈ ಊಟ ತಿಂದು ನಮಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಕೊಡುವ ಊಟ ತಿಂದು ನಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಬೆಳಗ್ಗೆ ಟೊಮೊಟೋ ಬಾತ್ ತಿಂಡಿ ಕೊಟ್ಟಿದ್ದರು ತಿನ್ನುವಂತಿರಲಿಲ್ಲ. ಮಧ್ಯಾಹ್ನ ಕೋಸು-ಬೇಳೆ ಸಾರು ಕೊಟ್ಟಿದ್ದರು. ಈಗಲೂ ಅದನ್ನೇ ಕೊಟ್ಟಿದ್ದಾರೆ. ಸಾಂಬರ್ ಯಾವುದೇ ರುಚಿ ಇಲ್ಲ. ಇಲ್ಲಿ ಊಟವನ್ನೇ ಮಾಡಲು ಆಗುತ್ತಿಲ್ಲ. ವೈದ್ಯರು, ವೈದ್ಯಕೀಯ ಸಲಕರಣೆ ಯಾವುದೇ ತೊಂದರೆ ಇಲ್ಲ. ಊಟದ್ದು ಮಾತ್ರ ತುಂಬಾ ಸಮಸ್ಯೆ ಇದೆ. ಔಷಧಿಯನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದಾರೆ. ಆಗಾಗ ಚೆಕ್ ಅಪ್ ಎಲ್ಲಾ ಮಾಡುತ್ತಾರೆ. ನರ್ಸ್‍ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ. ಕುಡಿಯೋಕೆ ಬಿಸಿ ನೀರು ಸೇರಿದಂತೆ ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ, ಊಟದ ವ್ಯವಸ್ಥೆ ಮಾತ್ರ ಸರಿ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

  • ಹಸಿದವರಿಗೆ ಊಟ ನೀಡ್ತಿದೆ ಧಾರವಾಡದ ಯುವಕರ ತಂಡ

    ಹಸಿದವರಿಗೆ ಊಟ ನೀಡ್ತಿದೆ ಧಾರವಾಡದ ಯುವಕರ ತಂಡ

    ಧಾರವಾಡ: ಕೊರೊನಾ ಸಂಕಷ್ಟದ ಸಮಯದಲ್ಲಿ ಅನ್ನ, ಆಹಾರಕ್ಕಾಗಿ ಪರದಾಡುತ್ತಿರುವ ಜನರಿಗೆ ಯುವಕರ ತಂಡಗಳು ನೆರವಿನ ಹಸ್ತ ಚಾಚಿ ಮಾನವಿಯತೆ ಮೆರೆದಿವೆ.

    ಧಾರವಾಡದ ನಗರದ ಈ ಯುವಕರ ತಂಡಗಳು, ಹಸಿವಿನಿಂದ ಬಳಲುತ್ತಿರುವ ಜನರಿಗೆ ಉಚಿತ ಊಟ ನೀಡುವ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿವೆ. ಒಂದು ಕಡೆ ಭಾರತೀಯ ಯುವ ಸಮೂಹದದಿಂದ ಕೊರೊನಾ ವಾರಿಯರ್ಸ್ ಗಳಿಗೆ ಊಟ ಹಾಗೂ ಮಜ್ಜಿಗೆ ನೀಡುವ ಕೆಲಸ ನಡೆದಿದೆ.

    ಇದೇ ತಂಡ ನಿರ್ಗತಿಕರನ್ನು ಹುಡುಕಿ ಹೊಟ್ಟೆಗೆ ಅನ್ನ ಹಾಕುವ ಕೆಲಸ ಮಾಡುತಿದ್ದರೆ, ಮತ್ತೊಂದು ಕಡೆ ನಾಯಕವಾಡಿ ಪ್ಲಾಟ್ ಯುವಕರ ತಂಡವೊಂದು ಸ್ಲಂಗಳಲ್ಲಿ ಇರುವ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.

    ಕಳೆದ ಎರಡು ದಿನಗಳಿಂದ ಧಾರವಾಡದ ಲಕ್ಷ್ಮಿಸಿಂಗನಕೇರೆ, ಕಂಠಿಗಲ್ಲಿ ಝೋಡಿಗಳಿಗೆ ಹೋಗಿ ಊಟದ ಪ್ಯಾಕೆಟ್ ನೀಡುತ್ತಿವ ಈ ತಂಡ, ಊಟದ ಪ್ಯಾಕೆಟ್ ನೀಡಲು ಹಣ ಕಡಿಮೆ ಇದ್ದರೆ, ಜನರಿಂದ ಹಣ ಕೂಡಿಸಿ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.

  • ಲಾಕ್‍ಡೌನ್- ಬಡವರಿಗೆ, ನಿರ್ಗತಿಕರಿಗೆ ಉಚಿತ ಊಟ ಕೊಟ್ಟ ಯುವಕರು

    ಲಾಕ್‍ಡೌನ್- ಬಡವರಿಗೆ, ನಿರ್ಗತಿಕರಿಗೆ ಉಚಿತ ಊಟ ಕೊಟ್ಟ ಯುವಕರು

    ಯಾದಗಿರಿ: ರಾಜಕಾರಣಿಗಳ ಅಭಿಮಾನಿಗಳು ಅಂದರೆ ಅವರ ಪ್ರಭಾವ ಬಳಸಿಕೊಂಡು ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳುವವರೇ ಹೆಚ್ಚು. ಆದರೆ ಜಿಲ್ಲೆಯ ಕೇಂಭಾವಿ ಪಟ್ಟಣದ ಯುವಕರ ತಂಡವೊಂದು ಲಾಕ್‍ಡೌನ್‍ನಿಂದ ಪರದಾಡುತ್ತಿರುವ ಜನರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಹೊತ್ತು ಊಟ ನೀಡುತ್ತಿದೆ.

    ಶಾಸಕ ರಾಜೂಗೌಡ ಮತ್ತು ಸಾಮಾಜಿಕ ಕಾರ್ಯಕರ್ತರ ಕೃಷ್ಣಾರೆಡ್ಡಿ ಮೂದನೂರ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿರುವ ಯುವಕರು, ಲಾಕ್‍ಡೌನ್ ನಲ್ಲಿ ಸಕಾಲಕ್ಕೆ ಆಹಾರ ಸಿಗದೆ ಪರದಾಡುತ್ತಿರುವ ನಿರ್ಗತಿಕರಿಗೆ, ಆಸ್ಪತ್ರೆಯ ರೋಗಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುತ್ತಿದ್ದಾರೆ. ಜೊತೆಗೆ ಯಾರೇ ದೂರವಾಣಿ ಕರೆ ಮಾಡಿದರೂ ಅವರು ಇರುವ ಸ್ಥಳಕ್ಕೆ ತೆರಳಿ ಬಿಸಿಯಾದ ಮತ್ತು ಶುಚಿಯಾದ ಊಟದ ಜೊತೆಗೆ ಶುದ್ಧ ಕುಡಿಯುವ ನೀರಿನ ಬಾಟಲ್ ಸಹ ನೀಡುತ್ತಾರೆ.

    ಕಳೆದ ಬಾರಿ ಲಾಕ್‍ಡೌನ್ ಹಿನ್ನೆಲೆ ಸುರಪುರ ಶಾಸಕ ರಾಜೂಗೌಡ ಮತ್ತು ಕೃಷ್ಣಾರೆಡ್ಡಿ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹಸಿವಿನಿಂದ ಪರದಾಡುತ್ತಿರುವವರಿಗೆ ಊಟ ನೀಡಿದ್ದರು. ಆದರೆ ಈಗ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರಿಗೆ ಬೇಗ ಗುಣಮುಖವಾಗಲಿ ಮತ್ತು ನಿರ್ಗತಿಕರ ಹೊಟ್ಟೆ ತುಂಬಲಿ ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಜಾತಿ, ಧರ್ಮವನ್ನು ಮೀರಿ ಊಟ ನೀಡುತ್ತಿದ್ದಾರೆ. ಯುವಕರ ಈ ಕಾರ್ಯಕ್ಕೆ ಕೇಂಭಾವಿ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಅದಿರು ಕಂಪನಿ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಮೆಸ್‍ನಲ್ಲಿ ನಡೆದಿದ್ದ ಗಲಾಟೆ ಸಂಬಂಧ 24 ವರ್ಷಗಳ ಬಳಿಕ ಆರೋಪಿಯನ್ನು ಕೇರಳದ ಅಲೆಪ್ಪಿಯಲ್ಲಿ ಬಂಧಿಸಿ ಕರೆತರಲಾಗಿದೆ.

    ಬಂಧಿತನನ್ನು ಅಲೆಕ್ಸಾಂಡರ್ ಎಂದು ಗುರುತಿಸಲಾಗಿದೆ. ಬಂಧಿತ ಅಲೆಕ್ಸಾಂಡರ್ ಕುದುರೆಮುಖ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಕ್ಷುಲ್ಲಕ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು. ಗಲಾಟೆ ವೇಳೆ ಚಾಕು ಹಾಕಿದ್ದ ಆರೋಪಿ ಅಲೆಕ್ಸಾಂಡರ್ 2004ರಲ್ಲಿ ಎಸ್ಕೇಪ್ ಆಗಿ ಕೇರಳಕ್ಕೆ ಪರಾರಿಯಾಗಿದ್ದ.

    1997ರಲ್ಲಿ ನಡೆದ ಗಲಾಟೆ ಕೇಸ್ 2004 ರವರೆಗೂ ನ್ಯಾಯಾಲಯದಲ್ಲಿತ್ತು. ಘಟನೆ ನಡೆದು ಹಲವು ವರ್ಷವಾದರೂ ಪೊಲೀಸರು ಹೋಗದ ಕಾರಣ ನಾನು ಬಚಾವ್ ಆದೆ ಎಂದು ಭಾವಿಸಿದ್ದ. ಆದರೆ, 17 ವರ್ಷಗಳ ಬಳಿಕ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಈ ಮೂಲಕ ಖಾಕಿ ರೆಕಾರ್ಡಲ್ಲಿ ಎಂಟ್ರಿಯಾದರೆ ಪಾತಾಳದಲ್ಲಿದ್ದರೂ ಬಿಡಲ್ಲ ಅನ್ನೋದಕ್ಕೆ ಕಾಫಿನಾಡ ಪೊಲೀಸರು ಸಾಕ್ಷಿಯಾಗಿದ್ದಾರೆ. ಯಾಕೆಂದರೆ, ಅದು 1997ರ ಜೂನ್ ತಿಂಗಳಲ್ಲಿ ನಡೆದ ಗಲಾಟೆ. ಸುಮಾರು 25 ವರ್ಷಗಳ ಸಮೀಪ. ಕುದುರೆಮುಖ ಸಂಸ್ಥೆಯ ಕ್ಯಾಂಟೀನಲ್ಲಿ ಊಟದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಹಾಕಿದ್ದರು. ಕುದುರೆಮುಖ ಠಾಣೆಯಲ್ಲಿ ಕೇಸ್ ದಾಖಲಾಗಿ, ನಾಲ್ವರು ಮೇಲೆ ಎಫ್‍ಐಆರ್ ಆಗಿತ್ತು.

    2004ರಲ್ಲಿ ಅಲೆಕ್ಸಾಂಡರ್ ಎಸ್ಕೇಪ್ ಆಗಿದ್ದ. ಬಳಿಕ ಕುದುರೆಮುಖ ಕಂಪನಿ ಬಾಗಿಲು ಹಾಕಿತು. ಆದರೆ, ಪೊಲೀಸರು ಆರೋಪಿಗಾಗಿ ಹುಡುಕೋದನ್ನು ಬಿಡಲಿಲ್ಲ. 17 ವರ್ಷಗಳ ಕಾಲ ಎಲ್ಲಿದ್ದಾನೆ ಅಂತಾನೆ ಗೊತ್ತಾಗಲಿಲ್ಲ. 17 ವರ್ಷಗಳೇ ಕಳೆದು ಹೋದವು. ಪೊಲೀಸರು ಕೇಸನ್ನು ಮರೆತಿರುತ್ತಾರೆ ನಾನು ಬಚಾವ್ ಅಂತ ಅಂದುಕೊಂಡಿದ್ದ ಆರೋಪಿಗೆ ಕಾಫಿನಾಡ ಪೊಲೀಸರು ಅನ್‍ಎಕ್ಸ್ ಪೆಕ್ಟೆಡ್ ಶಾಕ್ ನೀಡಿ ಕರೆತಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

    ಕುದುರೆಮುಖ ಠಾಣೆಗೆ ಇತ್ತೀಚೆಗೆ ಪಿ.ಎಸ್.ಐ. ಆಗಿ ಕುಮಾರ್ ಚಾರ್ಜ್ ತೆಗೆದುಕೊಂಡು ಈ ಹಳೇ ಕೇಸಿನ ಬೆನ್ನು ಬಿದ್ದಿದ್ದರು. ಸ್ನೇಹಿತನ ಮೂಲಕ ಆರೋಪಿ ಕೇರಳದಲ್ಲಿ ಇರೋದನ್ನು ಖಚಿತಪಡಿಸಿಕೊಂಡು ಪೊಲೀಸ್ ಸಿಬ್ಬಂದಿಯಾದ ಸುರೇಶ್ ರಾವ್, ಯುವರಾಜ್, ಶ್ರೀಧರ್ ಎಂಬುವರನ್ನು ಕಳುಹಿಸಿ ಲಾಕ್ ಮಾಡಿಸಿದ್ದಾರೆ. ಇಬ್ಬರಿಗೆ ಚಾಕು ಹಾಕಿ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. 17 ವರ್ಷಗಳ ಹಿಂದಿನ ಕೇಸು. ಬೇಲ್ ಸಿಗುತ್ತೆ ಎಂದು ಆರೋಪಿ ಅಲೆಕ್ಸಾಂಡರ್ ಕೂಡ ಭಾವಿಸಿದ್ದ. ಆದರೆ, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಚೆನ್ನೈ: ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಒಂದು ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಊಟ ನೀಡುವ ಮೂಲಕವಾಗಿ ತಮಿಳುನಾಡಿನ ದಂಪತಿ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.

    ಪುಷ್ಪರಾಣಿ, ಚಂದ್ರಶೇಖರ್ ದಂಪತಿ ಲಾಕ್‍ಡೌನ್ ವೇಳೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರವಾದ ಆಹಾರವನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವಾಗ ಲಾಕ್‍ಡೌನ್ ಮಾಡಲಾಗಿತ್ತು. ಈ ವೇಳೆ ಎಷ್ಟೋ ಜನ ಊಟವಿಲ್ಲದೆ ಹಸಿದುಕೊಂಡು ಇದ್ದರು. ರಸ್ತೆ ಬದಿಯಲ್ಲಿ ದಿನಗೂಲಿ ಮಾಡುವವರು, ಕೆಲಸ ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಈ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆ ಉತ್ತಮ ಆಹಾರವನ್ನು ಕೊಡಲು ನಿರ್ಧರಿಸಿದ್ದೆವು. 1 ರುಪಾಯಿಗೆ ಇಡ್ಲಿ, ಚಟ್ನಿ ನೀಡುತ್ತೇವೆ ಎಂದು ಪುಷ್ಪರಾಣಿ ಹೇಳಿದ್ದಾರೆ.

    ಲಾಕ್‍ಡೌನ್ ಆಗುವ ಮೊದಲು ಚಂದ್ರಶೇಖರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ನಂತರ ಆರ್ಥಿಕ ಸಮಸ್ಯೆಯಿಂದಾಗಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಪ್ರಾರಂಭಿಸಿದ್ದರು. ಬ್ಯಾಂಕಿನಲ್ಲಿ 50.000 ಸಾಲ ಪಡೆದು ಈ ದಂಪತಿ ಬಡ ಜನರಿಗಾಗಿ ಸಹಾಯವಾಗುವಂತೆ ಊಟವನ್ನು ಕೊಡಲು ಪ್ರಾರಂಭಿಸಿದರು.

    ಪ್ರತಿದಿನ ಸರಿಸುಮಾರು 400 ಮಂದಿ ಊಟವನ್ನು ಮಾಡುತ್ತಾರೆ. ಪ್ರತಿನಿತ್ಯ 4 ಗಂಟೆಗೆ ಎದ್ದು ಅಡುಗೆಯನ್ನು ಪ್ರಾರಂಭಿಸುತ್ತೇವೆ. ಮನೆಯ ಮಕ್ಕಳು ಕೂಡಾ ಸಹಾಯ ಮಾಡುತ್ತಾರೆ. ಬೆಳಗ್ಗೆ 7 ಗಂಟೆಗೆ ತಿಂಡಿ ಮಾರಾಟ ಮಾಡಿದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟವನ್ನು ಮಾರಾಟ ಮಾಡುತ್ತೇವೆ. ಜನರಿಗೆ ನಮ್ಮಿಂದಾದಷ್ಟು ಸಹಾಯವಾಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಕುಟುಂಬ ಹೇಳಿಕೊಂಡಿದೆ.

  • ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ಕೋಲ್ಕತ್ತಾ: 22 ವರ್ಷದ ಮಹಿಳೆಯೊಬ್ಬಳು 56 ವರ್ಷದ ತಂದೆಯನ್ನು ಊಟಕ್ಕೆಂದು ಕರೆದೊಯ್ದು ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಮಹಿಳೆ ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್ ನಿವಾಸಿಯಾಗಿದ್ದು, ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್‍ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ವಿಚಾರಣೆ ವೇಳೆ ಮಹಿಳೆ, ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

    ಮಹಿಳೆ ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು ಎಂದು ತಿಳಿಸಿದ್ದಾಳೆ. ಸದ್ಯ ಮಹಿಳೆಯ ಚಿಕ್ಕಪ್ಪ ಘಟನೆ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಮಹಿಳೆ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಚಿಕ್ಕಮಗಳೂರು: ವಿವಾಹದ ಔತಣಕೂಟದಲ್ಲಿ ಭಾಗವಹಿಸಿದವರ ಹಲ್ಲುಗಳು ಜುಮ್ ಎನ್ನುವಂತಾಗಿದ್ದು, ಉಪ್ಪಿನ ಪಾಕೆಟ್‍ನಲ್ಲಿನ ಭಾರೀ ಪ್ರಮಾಣದ ಕಲ್ಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿಯ ಹೆಮ್ಮದಿ ಗ್ರಾಮದಲ್ಲಿ ಮದುವೆ ನಡೆದಿತ್ತು. ಸರದಿ ಸಾಲಲ್ಲಿ ಊಟಕ್ಕೆ ಕೂತವರು ಕಲ್ಲು ಅನ್ನದಲ್ಲೋ, ಮಟನ್‍ನಲ್ಲೋ ಎಂದು ಗೊಂದಲಕ್ಕೀಡಾಗಿದ್ದರು. ಹೆಮ್ಮದಿ ಗ್ರಾಮದ ರತನ್ ಅವರು ಸ್ನೇಹಿತರು ಹಾಗೂ ನವದಂಪತಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಊಟಕ್ಕೆ ಕೂತಾಗ ಊಟದಲ್ಲಿ ಬರೀ ಕಲ್ಲು ಸಿಕ್ಕಿತ್ತು.

    ಊಟಕ್ಕೆ ಕೂತವರು ಕಲ್ಲು ಅನ್ನದ್ದೋ, ಮಟನ್ನದ್ದೋ ಎಂದು ಹುಡುಕಾಟ ನಡೆಸಿದ್ದರು. ಎಲ್ಲ ಕಡೆ ಹುಡುಕಾಡಿದ ಬಳಿಕ ಕೊನೆಯಲ್ಲಿ ಉಪ್ಪಿನ ಪಾಕೆಟ್ ತೆರದು ನೋಡಿದರೆ ಅದರಲ್ಲಿ ಅರ್ಧ ಕಲ್ಲು. ಇನ್ನರ್ಧ ಉಪ್ಪು. ಕಲ್ಲೆಂದರೆ ನೋಡುವವರ ಕಣ್ಣಿಗೆ ಉಪ್ಪೇ ಎಂದು ಗೋಚರಿಸುತ್ತದೆ. ಆದರೆ ಕಲ್ಲುಗಳನ್ನು ಉಪ್ಪಿನ ಪಾಕೆಟ್‍ನಲ್ಲಿ ತುಂಬಲಾಗಿದೆ. ಉಪ್ಪನ್ನು ನೀರಿನ ಪಾತ್ರೆಗೆ ಹಾಕಿ ಕರಗಿಸಿದರೆ ಅರ್ಧ ಮಾತ್ರ ಕರಗಿದ್ದು ಇನ್ನರ್ಧ ಕರಗಿಲ್ಲ.

    ಕಲ್ಲಿನಿಂದಾಗಿ ಸರದಿ ಸಾಲಲ್ಲಿ ಊಟಕ್ಕೆ ಕೂತವರು ಸರಿಯಾಗಿ ಊಟ ಮಾಡದಂತಾಗಿದೆ. ಸ್ನೇಹಿತರು, ನವದಂಪತಿಗಳನ್ನ ಊಟಕ್ಕೆ ಕರೆದು ಹೀಗಾಯ್ತಲ್ಲ ಎಂದು ಅಂಗಡಿ ಮಾಲೀಕನಿಗೆ ಫೋನ್ ಮಾಡಿದರೆ ಆತ ನಾನು ವ್ಯಾಪಾರಸ್ಥ ಎಂದು ಹೇಳಿದ್ದಾರೆ. ಬಳಿಕ ಆತನಿಂದ ನಂಬರ್ ಪಡೆದು ಮೇನ್ ಡೀಲರ್‍ಗೆ ಕರೆ ಮಾಡಿದರೆ ಆತ ಹಾರಿಕೆ ಉತ್ತರ ನೀಡಿದ್ದಾರೆ. ಚಿಕ್ಕಮಗಳೂರಿನ ಸಬ್ ಡೀಲರ್‍ಗೆ ಕರೆ ಮಾಡಿದರೆ ಆತ ಬೇಕಾಬಿಟ್ಟಿ ಉತ್ತರಿಸಿದ್ದಾರೆಂದು ಔತಣಕೂಟ ಏರ್ಪಡಿಸಿದ್ದ ರತನ್ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನ ಉಪ್ಪಿನ ಬಗ್ಗೆ ಸಂಶಯ ಪಡುವುದಿಲ್ಲ. ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಅಕ್ಕಿ, ರಾಗಿ, ಗೋಧಿಯಲ್ಲಿ ಕಲ್ಲು ಬಂದಿದ್ದಾಯಿತು. ಈಗ ಉಪ್ಪಿನಲ್ಲೂ ಕಲ್ಲು ಬರುವ ಕಾಲ ಬಂದಿದೆ. ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದ ಇರಬೇಕೆಂದು ಘಟನೆಯಿಂದ ನೊಂದ ರತನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೊಡ್ಡವರು ಕಲ್ಲು ಸಿಕ್ಕರೆ ತೆಗೆದು ಹಾಕುತ್ತಾರೆ. ಆದರೆ ಮಕ್ಕಳು ಅವುಗಳನ್ನ ತಿಂದರೆ ಅನಾರೋಗ್ಯ ಗ್ಯಾರಂಟಿ. ಆದ್ದರಿಂದ ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ.