Tag: ಊಟ

  • ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡವಿ ಗ್ರಾಮದಲ್ಲಿ ನಡೆದಿದೆ.

    ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ಜನರು ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥಗೊಂಡಿದ್ದು, ಅಸ್ವಸ್ಥಗೊಂಡವರನ್ನು ಕೂಡಲೇ ಸೊರಬದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಂದಲೇ ಸೊರಬ ಆಸ್ಪತ್ರೆಗೆ ಅಸ್ವಸ್ಥರನ್ನು ಸೇರಿಸಲಾಗಿತ್ತು. ಇಂದು ಬೆಳಗ್ಗೆ ಕೂಡ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇನ್ನೂ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇರುವುದರಿಂದ ಆಸ್ಪತ್ರೆಯ ಕಾರಿಡಾರ್ ನಲ್ಲಿ ಜನರನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಹಿಂದೆ ದಾವಣಗೆರೆಯಲ್ಲಿ ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡಿದ್ದರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದರು.

  • ಮದ್ವೆ ಮನೆಯಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಮದ್ವೆ ಮನೆಯಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಶಿವಮೊಗ್ಗ: ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪದ ಜಯಂತಿ ಗ್ರಾಮದ ತಾಂಡದಲ್ಲಿ ನಡೆದಿದೆ.

    ಅಸ್ವಸ್ಥಗೊಂಡವರಲ್ಲಿ 70 ಜನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಶಿವಮೊಗ್ಗ ಗ್ರಾಮದ ಮಂಜಾನಾಯ್ಕ ಎಂಬವರ ಮದುವೆ ದಾವಣಗೆರೆಯಲ್ಲಿ ನಡೆದಿತ್ತು.

    ಈ ಪ್ರಯುಕ್ತ ಗ್ರಾಮದಲ್ಲಿ ಆರತಕ್ಷತೆ ಇಟ್ಟುಕೊಳ್ಳಲಾಗಿತ್ತು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದಾರೆ. ತಕ್ಷಣವೇ ಅಸ್ವಸ್ಥರನ್ನು ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

    ಸದ್ಯ ಮೆಗಾನ್ ಆಸ್ಪತ್ರೆಗೆ ದಾಖಲಾದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

  • ಊಟ ಸಿಗದಕ್ಕೆ ಸೌಟ್, ಪಾತ್ರೆ, ಸಿಕ್ಕ ಸಿಕ್ಕ ವಸ್ತುವಿಂದ ಡಾಬಾ ಮಾಲೀಕರ ಮೇಲೆ 12 ಮಂದಿಯಿಂದ ಹಲ್ಲೆ!

    ಊಟ ಸಿಗದಕ್ಕೆ ಸೌಟ್, ಪಾತ್ರೆ, ಸಿಕ್ಕ ಸಿಕ್ಕ ವಸ್ತುವಿಂದ ಡಾಬಾ ಮಾಲೀಕರ ಮೇಲೆ 12 ಮಂದಿಯಿಂದ ಹಲ್ಲೆ!

    ಮಂಡ್ಯ: ಊಟದ ವಿಚಾರಕ್ಕೆ ಜಗಳ ತೆಗೆದು 12 ಜನರ ಗುಂಪೊಂದು ಡಾಬಾಗೆ ನುಗ್ಗಿ ದಾಂಧಲೆ ನಡೆಸಿದಲ್ಲದೇ ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ ರಾಮನಹಳ್ಳಿ ಬಳಿ ನಡೆದಿದೆ.

    ಲಕ್ಷ್ಮಿ ಡಾಬಾದಲ್ಲೇ ದಾಂಧಲೆ ನಡೆದಿದ್ದು, ಮಾಲೀಕ ದೇವರಾಜು ಹಾಗೂ ಅವರ ಸಹೋದರರ ಮೇಲೆ ಮನಬಂದಂತೆ ಥಳಿಸಿರುವ ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಯ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

    ಇದೇ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಾಗಮಂಗಲ ಪಟ್ಟಣದ ಯುವಕರ ತಂಡವೊಂದು, ನಾಗಮಂಗಲ ಪಟ್ಟಣದ ಸಮೀಪವಿರುವ ಶ್ರೀರಾಮನಹಳ್ಳಿ ಬಳಿಯಿರುವ ಡಾಬಾಗೆ ಬಂದು ಊಟ ಕೇಳಿದ್ದಾರೆ. ಅದಾಗಲೇ ಟೈಂ ಆಗಿದ್ದರಿಂದ ಡಾಬಾದ ಮಾಲೀಕ ದೇವರಾಜು ಅವರು ಇಲ್ಲಿ ಊಟ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆ ಯುವಕರು ಡಾಬಾ ಮಾಲೀಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ, ದೇವರಾಜು ಅವರ ಮೇಲೆ ರೇಗಾಡಿಕೊಂಡು ಅಲ್ಲಿಂದ ತೆರಳಿದ್ದಾರೆ.

    ನಾವು ಬಂದು ಊಟ ಕೇಳಿದರೂ ಕೊಡಲಿಲ್ಲ ಎಂದುಕೊಂಡ ಯುವಕರ ಗುಂಪು ಮತ್ತೆ ಸಂಜೆ ಏಕಾಏಕಿ ಡಾಬಾದ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದಾರೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಡಾಬಾದ ಮಾಲೀಕರಾದ ದೇವರಾಜು ಹಾಗೂ ಅವರ ಸಹೋದರ ರೇವಣ್ಣರ ಮೇಲೆ ಮಾರಕಾಸ್ತ್ರಗಳು ಮತ್ತು ಡಾಬಾದಲ್ಲಿ ಸಿಗುವ ಪಾತ್ರಗಳನ್ನೇ ತೆಗೆದುಕೊಂಡು ಮನಸ್ಸೋ ಇಚ್ಚೆ ದಾಳಿ ನಡೆಸಿ ತಾವು ಬಂದಿದ್ದ ಬೈಕ್ ನಲ್ಲೇ ಅಲ್ಲಿಂದ ತೆರಳಿದ್ದಾರೆ.

    ಸಂಜೆ 6.20 ರ ವೇಳೆಗೆ ಬೈಕಿನಲ್ಲಿ ಬಂದ ಯುವಕರ ಗುಂಪು ಮೊದಲು ಡಾಬಾದ ಒಳಗೆ ಪ್ರವೇಶಿಸಿದ್ದಾರೆ. ಒಳ ಹೋದವರೇ ಕೈಗೆ ಸಿಕ್ಕ ಅಡುಗೆ ಮಾಡುವ ವಸ್ತುಗಳನ್ನ ತೆಗೆದುಕೊಂಡು ದೇವರಾಜು ಹಾಗೂ ರೇವಣ್ಣರ ಮೇಲೆ ಹಲ್ಲೆ ನಡೆಸಿದೆ. ಅಷ್ಟು ಸಾಲದು ಎಂಬಂತೆ ಇಬ್ಬರನ್ನೂ ಡಾಬಾದ ಹೊರಗೆ ಎಳೆದುಕೊಂಡು ಬಂದು ಅಲ್ಲಿಯೂ ಕಾಲಿನಿಂದ ಒದಿದ್ದಾತ್ತಾರೆ. ಸೌಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಇದಿಷ್ಟೂ ಚಿತ್ರಣ ಡಾಬಾದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಈ ಗಲಾಟೆ ನಡೆಯುವ ಕೆಲವೇ ನಿಮಿಷದ ಮುಂಚಿತವಾಗಿ ಶಾಸಕ ಎನ್ ಚಲುವರಾಯಸ್ವಾಮಿ ಅವರು ಡಾಬಾದ ಬಳಿಗೆ ಬಂದು ಹೋಗಿದ್ದರು. ಅವರ ಕಾರು ಅಲ್ಲಿಂದ ಹೋಗುತ್ತಿದ್ದಂತೆ ಯುವಕರು ಆಗಮಿಸಿ ಡಾಬಾದ ಮೇಲೆ ದಾಳಿ ನಡೆಸಿದ್ದು, ನಂತರ ಅವರ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇದೊಂದು ರಾಜಕೀಯ ದ್ವೇಷಕ್ಕೆ ನಡೆದ ಹಲ್ಲೆ ಎಂದೇ ಹೇಳಲಾಗುತ್ತಿದೆ. ಆದರೆ, ಹಲ್ಲೆಗೊಳಗಾದವರೇ ಇದು ರಾಜಕೀಯ ದ್ವೇಷದಿಂದ ನಡೆದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

  • ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

    ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ ಸಂಜೆ ಕಮಲ್ ಢಾಬಾಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ನೀಡಲಾಗಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗೆ ದೂರಿದ್ದರು. ಇದರಿಂದ ಕೋಪಗೊಂಡ ಢಾಬಾ ಸಿಬ್ಬಂದಿ ಪವನ್ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಢಾಬಾ ಮಾಲೀಕ ಹಾಗೂ ಮತ್ತೋರ್ವ ನೌಕರ ಸೇರಿ ಭಾರವಾದ ಪಾತ್ರೆಗಳಿಂದ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ.

    ಪವನ್ ಅವರ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಹೊಡೆಯಲಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು ಎಂದು ವರದಿಯಾಗಿದೆ.

    ಸ್ಥಳೀಯರೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ನಾವು ಸ್ಥಳಕ್ಕೆ ಹೋದೆವು. ಬಳಿಕ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಪವನ್ ಸಾವನ್ನಪ್ಪಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಢಾಬಾ ಸಿಬ್ಬಂದಿಯಾದ ಸಚಿನ್, ಗೋವಿಂದ್ ಹಾಗೂ ಕರಣ್ ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಜ್ಜನಿಂದಾಗಿ ಉಪವಾಸಕ್ಕೆ ಬಿದ್ದು 10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ಅಂದ್ರೆ ನೀವು ನಂಬಲ್ಲ!

    ಅಜ್ಜನಿಂದಾಗಿ ಉಪವಾಸಕ್ಕೆ ಬಿದ್ದು 10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ಅಂದ್ರೆ ನೀವು ನಂಬಲ್ಲ!

    ಟೋಕಿಯೋ: ತನ್ನ ಸ್ವಂತ ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ.

    ಅಜ್ಜ ತನಗೆ ಊಟ ನೀಡದೆ ಹಿಂಸಿಸುತ್ತಿದ್ದರು. ಕದ್ದುಮುಚ್ಚು ಊಟ ಮಾಡಿದ್ರೆ ದೈಹಿಕ ಹಲ್ಲೆ ನಡೆಸುತ್ತಿದ್ದರು ಎಂದು ಯುವತಿ ಆರೋಪ ಮಾಡಿದ್ದಾಳೆ. ತಿನ್ನಲು ಊಟ ನೀಡದ್ದರಿಂದ 16 ಕೆಜಿ ತೂಕಕ್ಕೆ ಇಳಿದಿದ್ದ ಆ ಯುವತಿ ಈಗ ಚೇತರಿಸಿಕೊಂಡಿದ್ದು, ಈಗಿನ ಫೋಟೋಗಳನ್ನೂ ಕೂಡ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಈಗ ಸಂಪೂರ್ಣ ಬದಲಾಗಿದ್ದು, ಹಳೇ ಫೋಟೋದಲ್ಲಿದ್ದಿದ್ದು ಈಕೆನಾ ಎಂದು ಆಶ್ಚರ್ಯವಾಗುತ್ತದೆ.

    10 ವರ್ಷಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಮುನ್ನ ಯುವತಿ ಸಾಕಷ್ಟು ಸೆಲ್ಫೀಗಳನ್ನ ತೆಗೆದುಕೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ತನಗಾದ ದುಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ. ಹಳೇ ಫೋಟೋಗಳಲ್ಲಿ ಯುವತಿ ಸಣಕಲು ದೇಹ ಹೊಂದಿದ್ದು, ಮೂಳೆಗಳು ಕಾಣುವಂತೆ ಸೊರಗಿದ್ದಾಳೆ. 10 ವರ್ಷಗಳ ಹಿಂದೆ ಈಕೆ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಪ್ರತಿದಿನ ಉಪವಾಸದಿಂದಲೇ ಇರಬೇಕಿತ್ತು ಎಂದಿದ್ದಾಳೆ.

    ಒಂದು ವೇಳೆ ಊಟ ಮಾಡುವಾಗ ಸಿಕ್ಕಿಬಿದ್ದರೆ ಅಜ್ಜ ನನ್ನ ಹೊಟ್ಟೆಗೆ ಒದೆಯುತ್ತಿದ್ದರು. ನಂತರ ತಿಂದ ಊಟವನ್ನು ಉಗಿಯುವಂತೆ ಅಥವಾ ವಾಂತಿ ಮಾಡುವಂತೆ ಹೇಳುತ್ತಿದ್ದರು ಎಂದಿದ್ದಾಳೆ. ಮೊದಲಿನ ಫೋಟೋಗಳನ್ನ ಹಂಚಿಕೊಂಡಿರೋ ಯುವತಿ, ಯಾರಾದ್ರೂ ಇದೇ ರೀತಿ ಹಿಂಸೆಗೆ ಒಳಗಾಗಿದ್ದರೆ ಅಥವಾ ತಿನ್ನುವ ಖಾಯಿಲೆ ಇದ್ದರೆ ತಡವಾಗೋ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾಳೆ.

    ಯುವತಿಯನ್ನ ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು, ಆಕೆ ಇನ್ನು 10 ನಿಮಿಷದಲ್ಲಿ ಸಾವನ್ನಪ್ಪುತ್ತಿದ್ದಳು ಎಂದು ಹೇಳಿದ್ದಾಗಿ ವರದಿಯಾಗಿದೆ.

    ಯುವತಿ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ, ಆಕೆ ಸುಳ್ಳು ಹೇಳುತ್ತಿದ್ದಾಳೆ, ಈ ಚಿತ್ರಗಳನ್ನ ಫೋಟೋಶಾಪ್ ಮಾಡಲಾಗಿದೆ ಎಂದು ಜನ ಆರೋಪಿಸಿದ್ದರು.

    ಹೀಗಾಗಿ ತಾನು ಆಸ್ಪತ್ರೆಯಲ್ಲಿದ್ದಾಗ ತೆಗೆದುಕೊಂಡಿದ್ದ ಹಲವಾರು ಫೋಟೋಗಳನ್ನ ಹಂಚಿಕೊಂಡಿದ್ದು, ಈ ಮೂಲಕ ತನ್ನ ತಾನು ಸುಳ್ಳು ಹೇಳುತ್ತಿಲ್ಲ ಹಾಗೂ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ವಿವರಿಸಿದ್ದಾಳೆ. ಕೆಲವು ಫೋಟೋಗಳಲ್ಲಿ, ಯುವತಿಯ ಎದೆ ಹಾಗೂ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಇರೋದನ್ನ ಕಾಣಬಹುದು.

    ಈಗ 20 ವರ್ಷ ವಯಸ್ಸಿನವಳಾದ ಈ ಯುವತಿ ಸಂಪೂರ್ಣ ಗುಣಮುಖಳಾಗಿದ್ದು, ಮುದ್ದು ಗೊಂಬೆಯಂತೆ ಕಾಣುತ್ತಾಳೆ. ಆದ್ರೆ ತನ್ನ ಅಜ್ಜನ ವಿರುದ್ಧ ಕ್ರಮ ಕೈಗೊಳ್ಳಲಾಯಿತಾ ಇಲ್ಲವಾ ಎಂಬ ಬಗ್ಗೆ ಆಕೆ ಯಾವುದೇ ಮಾಹಿತಿ ತಿಳಿಸಿಲ್ಲ.

    https://twitter.com/______410/status/957229424599998464?ref_src=twsrc%5Etfw&ref_url=https%3A%2F%2Fwww.mirror.co.uk%2Fnews%2Fworld-news%2Fbrave-young-woman-shares-shocking-11997928

  • ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

    ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

    ಕೌಲಾಲಂಪುರ: ಬಿದ್ದಿರುವ ಮರದ ಟೊಂಗೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಹಿಡಿದು ಗ್ರಾಮಸ್ಥರು ಫ್ರೈ ಮಾಡಿ ತಿಂದಿರುವ ಘಟನೆ ಮಲೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ನಡೆದಿದೆ.

    ಶನಿವಾರ ದ್ವೀಪದ ಜನರು ಬೇಟೆಗಾಗಿ ಕಾಡಿನಲ್ಲಿ ಸಂಚರಿಸುತ್ತಿರುವಾಗ ಕಾಡಿನಲ್ಲಿ ಬಿದ್ದಿರುವ ಮರದ ಟೊಂಗೆಯಿಂದ ಶಬ್ಧ ಕೇಳಿಸಿದೆ. ಟೊಂಗೆಯಲ್ಲಿ ಚಿಕ್ಕಪುಟ್ಟ ಹಾವುಗಳು ಇರಬಹುದು ಎಂದು ನೋಡಿದಾಗ 20 ಅಡಿ ಉದ್ದದ ಗಂಡು ಹೆಬ್ಬಾವು ಪತ್ತೆಯಾಗಿದೆ.

    ಸ್ಥಳೀಯರೆಲ್ಲ ಮರದ ಟೊಂಗೆಯನ್ನು ಮಧ್ಯಭಾಗದಲ್ಲಿಯೇ ಕಟ್ ಮಾಡಿ ಹೆಬ್ಬಾವನ್ನು ಹೊರ ಎಳೆದಿದ್ದಾರೆ. ಟೊಂಗೆಯಿಂದ ಹೊರಬಂದ ಹೆಬ್ಬಾವಿಗೆ ಶೂಟ್ ಮಾಡಿ ಕೊಂದು ಎಲ್ಲರೂ ಹೆಗಲ ಮೇಲೆ ಹೊತ್ತು ತೆರಳಿದ್ದಾರೆ.

    ಹಬ್ಬದೂಟ ಸಿಕ್ಕಿದ್ದಕ್ಕೆ ಖುಷಿ: ಬಿಂತಲು ಪಟ್ಟಣದ ಕೆಲವಿಟ್ ನದಿ ಬಳಿಯ ಬಿದ್ದಿದ್ದ ಮರದ ಟೊಂಗೆಯಿಂದ ಶಬ್ದ ಕೇಳಿಸಿತು. ಟೊಂಗೆಯಲ್ಲಿ ಇಣುಕಿ ನೋಡಿದಾಗ ಗಂಡು ಹೆಬ್ಬಾವು ಸಣ್ಣ ಹೆಣ್ಣು ಹಾವುಗಳೊಂದಿಗೆ ಸಂಯೋಗದಲ್ಲಿತ್ತು. ಟೊಂಗೆಯನ್ನು ಮಧ್ಯಭಾಗದಲ್ಲಿ ಕತ್ತರಿಸಿ ಹೆಬ್ಬಾವು ಹೊರಗೆಳೆದು ಕೊಲ್ಲಲಾಯಿತು. ಇಂದು ಮತ್ತು ನಾಳೆ ನಮ್ಮ ಗ್ರಾಮದವರಿಗೆಲ್ಲಾ ಹಬ್ಬದೂಟ ಸಿಕ್ಕಿದೆ ಅಂತಾ ಸ್ಥಳೀಯ 60 ವರ್ಷದ ತಿನ್‍ಸಂಗ್ ಉಜಂಗ್ ಹೇಳಿದರು.

    20 ಅಡಿ ಉದ್ದದ ಹೆಬ್ಬಾವು ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾನು ಇದೂವರೆಗೂ 5 ಅಡಿ ಉದ್ದದ ಹೆಬ್ಬಾವುಗಳನ್ನು ನೋಡಿದ್ದೆ. ಸಾಮಾನ್ಯವಾಗಿ ಗಂಡು ಹೆಬ್ಬಾವುಗಳು ಚಿಕ್ಕದಾಗಿರುತ್ತವೆ. 20 ಅಡಿ ಉದ್ದದ ಹೆಬ್ಬಾವು ಹೊರ ಎಳೆದಾಗ ಜೊತೆಯಲ್ಲಿ ಇನ್ನೊಂದು ಹೆಬ್ಬಾವು ಕೂಡ ಬಂದಾಗ ಕೂಡಲೇ ಶೂಟ್ ಮಾಡಿ ಕೊಲ್ಲಲಾಯಿತು. ಹೆಬ್ಬಾವು ಆಹಾರ ನನ್ನ ಹಾಗು ನಮ್ಮ ಸಮುದಾಯದವರ ಫೇವರೇಟ್ ಡಿಶ್ ಆಗಿದೆ.

    ಗ್ರಾಮದ ತುಂಬೆಲ್ಲಾ ಮೆರವಣಿಗೆ: ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ನಮ್ಮ ಜೀಪಿನಲ್ಲಿ ಹಾಕಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಗ್ರಾಮದ ಯುವಕರೆಲ್ಲಾ ಜೋರಾಗಿ ಕೂಗುವ ಮೂಲಕ ತಮ್ಮ ಸಂತೋಷವನ್ನು ಹೊರ ಹಾಕಿದ್ರು ಅಂತಾ ತಿನ್‍ಸಂಗ್ ಉಜಂಗ್ ತಿಳಿಸಿದ್ದಾರೆ.

    ಅರಣ್ಯದಿಂದ ಹೆಬ್ಬಾವನ್ನು ಗ್ರಾಮಕ್ಕೆ ತಂದ ಬಳಿಕ ತರಕಾರಿಗಳೊಂದಿಗೆ ಬೇಯಿಸಿ ಅಡುಗೆ ಸಿದ್ಧ ಮಾಡಲಾಯಿತು. ಇನ್ನು ಅರ್ಧ ಮಾಂಸವನ್ನು ಫ್ರೈ ಮಾಡಿ ಅನ್ನದೊಂದಿಗೆ ಮಿಕ್ಸ್ ಮಾಡಿ ಗ್ರಾಮಸ್ಥರು ಸವಿದಿದ್ದಾರೆ. ಹೆಬ್ಬಾವಿನಿಂದ ಸಿದ್ಧಪಡಿಸಿದ ಆಹಾರವನ್ನು ಸಮನಾಗಿ ವಿಂಗಡಿಸಿ ಹಂಚಲಾಯಿತು. ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ವಿತರಿಸಲಾಯಿತು.

    https://www.youtube.com/watch?v=l4Ly02Y2H80

    https://www.youtube.com/watch?v=UGO27SlMuG4

  • ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಕೋಲ್ಕತ್ತಾ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಪರಿಣಾಮ ಮಹಿಳೆಯೊಬ್ಬರು ಮಧ್ಯಾಹ್ನ ಅಡುಗೆ ಮಾಡಲು ಮರೆತಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಗುರುವಾರ ಕೋಲ್ಕತ್ತಾದ ಚೆಟ್ಲಾ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪತಿ ಸುರಜಿತ್ ಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಆತನ 36 ವರ್ಷದ ಪತ್ನಿಗೆ ಅಕ್ರಮ ಸಂಬಂಧವಿದೆ. ಹೀಗಾಗಿ ಪತ್ನಿ ಟುಂಪಾ ತನ್ನ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯತ್ತಾಳೆ ಅಂತ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನಿದು ಘಟನೆ?:
    ಜನವರಿ 24ರಂದು ಸುರಜಿತ್ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ತನ್ನ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಳು. ಹೀಗಾಗಿ ಅಡುಗೆ ಮಾಡುವುದನ್ನು ಮರೆತಿದ್ದಳು. ಪರಿಣಾಮ ಸಿಟ್ಟುಗೊಂಡ ಪತಿರಾಯ ಚಾಕು ತೋರಿಸಿ ಬೆದರಿಸಿದ್ದಾನೆ. ಆದ್ರೂ ಆಕೆ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಪತಿ ಸುರಜಿತ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆಕೆಯ ತಲೆಗೆ ಹಲವು ಬಾರಿ ಇರಿದ್ದಾನೆ. ಅಲ್ಲದೇ ಟವೆಲ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾನೆ.

    ಹೀಗೆ ಮಾಡಿದ ಬಳಿಕ ತಾನೇನು ಮಾಡುತ್ತಿದ್ದೇನೆಂದು ತಿಳಿದ ಸುರಜಿತ್, ತನ್ನ ಕೈಯ ಮಣಿಕಟ್ಟನ್ನು ಕುಯ್ದುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ನಂತರ ಗಾಯಗಳಾದ ಕಡೆ ಬ್ಯಾಂಡೇಜ್ ಸುತ್ತಿದ್ದಾನೆ. ಅಲ್ಲದೇ ನಗರದ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಈತನ ಮೇಲೆ ಅನುಮಾನಗೊಂಡ ಪೊಲೀಸರು ಬಂಧಿಸಿದ್ದಾರೆ.

     

    ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮದುವೆಗೆಂದು ನಗರದ ಕಡೆ ತೆರಳಿದ್ದನು. ಇನ್ನೋರ್ವ ಕಾಲೇಜು ಓದುತ್ತಿದ್ದು, ಕಾಲೇಜಿನಿಂದ ಬಂದ ಬಳಿಕ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ತಾಯಿಯ ದೇಹವನ್ನು ನೋಡಿ ದಂಗಾಗಿದ್ದಾನೆ.

    ಪತ್ನಿ ಟುಂಪಾ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದುದರಿಂದ ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿದೆಯೆಂದು ಶಂಕಿಸಿ ಪತಿ ಸರ್ಜಿತ್ ಕೃತ್ಯ ಎಸಗಿರಬಹುದು ಅಂತ ಸ್ಥಳಿಯ ನಿವಾಸಿಗಳು ತಿಳಿಸಿದ್ದಾರೆ. ಕೆಲ ದಿನಗಳ ನಾದಿನಿ ಜೊತೆ ಗಂಡನಿಗೆ ಅಕ್ರಮ ಸಂಬಂಧ ಇರುವ ವಿಚಾರ ಟುಂಪಾಗೆ ಗೊತ್ತಾಗಿದೆ ಎನ್ನಲಾಗಿದೆ.

  • ಆಸ್ತಿಗಾಗಿ ಆಹಾರದಲ್ಲಿ ವಿಷ ಬೆರೆಸಿ ಅಣ್ಣ, ಅತ್ತಿಗೆಯನ್ನ ತಮ್ಮ ಕೊಂದೇ ಬಿಟ್ಟ!

    ಆಸ್ತಿಗಾಗಿ ಆಹಾರದಲ್ಲಿ ವಿಷ ಬೆರೆಸಿ ಅಣ್ಣ, ಅತ್ತಿಗೆಯನ್ನ ತಮ್ಮ ಕೊಂದೇ ಬಿಟ್ಟ!

    ಚಿಕ್ಕಮಗಳೂರು: ಆಸ್ತಿಗಾಗಿ ಆಹಾರದಲ್ಲಿ ಇಲಿ ಪಾಷಾಣ ಬೆರೆಸಿ ಸ್ವಂತ ಅಣ್ಣ ಅತ್ತಿಗೆಯನ್ನು ತಮ್ಮನೇ ಕೊಲೆ ಮಾಡಿರೋ ಘಟನೆ ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮದಲ್ಲಿ ನಡೆದಿದೆ.

    ಅಣ್ಣ ವೆಂಕಟೇಶ್ ಮತ್ತು ಅತ್ತಿಗೆ ರುಕ್ಮಿಣಿ ಸಾವನ್ನಪ್ಪಿದ ದುರ್ದೈವಿಗಳು. ಆಸ್ತಿಗಾಗಿ ಕಿತ್ತಾಟ ನಡೆದ ಹಿನ್ನೆಲೆಯಲ್ಲಿ ಸ್ವಂತ ಅಣ್ಣ ಅತ್ತಿಗೆಗೆ ರಾಗಿ ಅಂಬಲಿಯಲ್ಲಿ ತಮ್ಮ ದಿನೇಶ್ 11 ದಿನಗಳ ಹಿಂದೆ ಇಲಿ ಪಾಷಾಣ ಹಾಕಿದ್ದ.

    ವಿಷ ಸೇವಿಸಿದ್ದ ವೆಂಕಟೇಶ್ ಹಾಗೂ ರುಕ್ಮಿಣಿಯನ್ನ ಪಕ್ಕದ ಮನೆಯವರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಭಾನುವಾರ ಸಾವನ್ನಪ್ಪಿದರೆ, ರುಕ್ಮಿಣಿ ಇಂದು ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಗೋಣಿಬೀಡು ಪೊಲೀಸರು ಆರೋಪಿ ದಿನೇಶ್ ವಶಕ್ಕೆ ಪಡೆದು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವೆಂಕಟೇಶ್ ಮತ್ತು ರುಕ್ಮಿಣಿ 14 ವರ್ಷದ ಮಗ ನಿತಿನ್ ಹಾಗೂ 12 ವರ್ಷದ ಪೂಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

  • ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಬೆಂಗಳೂರು: ಬಾವನಿಂದಲೇ ನಾದಿನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ನೆಲಮಂಗಲ ತಾಲೂಕಿನ ಲಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ಪದ್ಮ(40) ಎಂದು ಗುರುತಿಸಲಾಗಿದೆ. ಈಕೆಯ ಬಾವ ಗಂಗಗುಡ್ಡಯ್ಯ ಈ ಕೃತ್ಯವೆಸಗಿರೋ ಆರೋಪಿ. 20 ವರ್ಷಗಳ ಹಿಂದೆ ಪದ್ಮಾ ಅವರ ಗಂಡ ತೀರಿಕೊಂಡಿದ್ದರಿಂದ ಬಾವನ ಮನೆಯಲ್ಲೇ ವಾಸವಿದ್ದರು.

    ಕಳೆದ ರಾತ್ರಿ ಊಟದ ವಿಚಾರದಲ್ಲಿ ನಾದಿನಿ ಪದ್ಮ ಹಾಗೂ ಗಂಗಗುಡ್ಡಯ್ಯ ನಡುವೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಆರೋಪಿ ಗಂಗಗುಡ್ಡಯ್ಯ ಪದ್ಮ ಅವರನ್ನು ದೊಣ್ಣೆಯಿಂದ ಬಡಿದು ಬರ್ಬರವಾಗಿ ಕೊಲೆಗೈದಿದ್ದಾನೆ.

    ಸದ್ಯ ಆರೋಪಿ ಗಂಗಗುಡ್ಡಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಸರ್ಕಾರಿ ದುಡ್ಡಿನಲ್ಲಿ ಕೈ ಸಮಾವೇಶ ಟೀಕೆಗೆ ಮೋದಿ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಸಿಎಂ

    ಸರ್ಕಾರಿ ದುಡ್ಡಿನಲ್ಲಿ ಕೈ ಸಮಾವೇಶ ಟೀಕೆಗೆ ಮೋದಿ ಉದಾಹರಣೆ ಕೊಟ್ಟು ತಿರುಗೇಟು ಕೊಟ್ಟ ಸಿಎಂ

    ಉಡುಪಿ: ಸರ್ಕಾರಿ ದುಡ್ಡಿನಲ್ಲಿ ಸಾಧನಾ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

    ಸರ್ಕಾರಿ ಕಾರ್ಯಕ್ರಮದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಬಂದಿದೆ ಎಂದು ಮಾಧ್ಯಮಗಳು ಉಪ್ಪೂರಿನಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ? ಮೋದಿ ಸ್ವಂತ ದುಡ್ಡಲ್ಲಿ ಓಡಾಡ್ತಾರಾ? ನಾವು ಸರ್ಕಾರಿ ಕಾರ್ಯಕ್ರಮಕ್ಕೆ ಓಡಾಟ ಮಾಡ್ತೇವೆ ಎಂದು ಹೇಳಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ

    ಅಮಿತ್ ಶಾಗೆ ಗಢಗಢ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೋಲಿನ ಭಯ ಶುರುವಾಗಿದೆ. ಉಪಚುನಾವಣೆಯಲ್ಲೇ ರಾಜ್ಯದ ದಿಕ್ಸೂಚಿ ಬಗ್ಗೆ ಅವರಿಗೆ ಅರಿವಾಗಿದೆ. ನಮ್ಮ ರಾಜ್ಯದಲ್ಲಿ ಅಮಿತ್ ಶಾ ಯಾವ ತಂತ್ರವೂ- ರಣತಂತ್ರವೂ ನಡೆಯಲ್ಲ. ಅಮಿತ್ ಶಾ ಎಷ್ಟು ಬೇಕಾದ್ರು ಗೌಪ್ಯ ಸಭೆ ಮಾಡಲಿ. ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿ. ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಪ್ತರ ಮೇಲೆ ಐಟಿ ದಾಳಿ: ನನ್ನ ಆತ್ಮೀಯರನ್ನು, ಆಪ್ತರನ್ನು ಹುಡುಕಿ ಹುಡುಕಿ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡ್ತಿದ್ದಾರೆ. ಮೊನ್ನೆ ಲೋಹಿಯಾ ಸಂಘದ ಮುಖಂಡ ಶಿವಣ್ಣ ಮನೆಗೆ ಕೂಡಾ ದುರುದ್ದೇಶದಿಂದ ಐಟಿ ದಾಳಿಯಾಗಿದೆ. ಜನ ಎಲ್ಲವನ್ನು ನೋಡಿಕೊಳ್ತಾರೆ ಎಂದರು.   ಇದನ್ನೂ ಓದಿ:ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ದೇವೇಗೌಡರಿಗೂ ಟಾಂಗ್: ಇದೇ ವೇಳೆ 2018 ವಿಧಾನಸಭಾ ಚುನಾವಣೆಯಲ್ಲಿ ನಾವೇನು ಮಾಡ್ತೇವೆ ನೋಡಿ ಅಂತ ಸಿಎಂಗೆ ಟಾಂಗ್ ಕೊಟ್ಟಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ಕೊಟ್ಟ ಅವರು, ದೇವೇಗೌಡರನ್ನು ಬಹಳ ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ದೇವೇಗೌಡರು ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪದೇ ಪದೇ ಅವರು ತೋರಿಸೋದಕ್ಕೆ ಏನಿದೆ? ಅವರ ಜೊತೆಗಿದ್ದೂ ಬಹಳ ನೋಡಿದ್ದೇನೆ. ವಿರೋಧ ಪಕ್ಷದಲ್ಲಿದ್ದೂ ಎಲ್ಲಾ ನೋಡಿದ್ದೇನೆ. ಇನ್ನು ಗೌಡರದ್ದು ನೋಡುವಂತಹದ್ದು ಏನಿಲ್ಲ. ಜೆಡಿಸ್ ಎಲ್ಲೂ ಗೆಲ್ಲಲ್ಲ ಎಂದು ಹೇಳಿದರು.   ಇದನ್ನೂ ಓದಿ: 3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಸುರೇಶ್ ಕುಮಾರ್ ಟೀಕೆ: ಸರ್ಕಾರಿ ಖರ್ಚಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಡೆಸುತ್ತಿರುವ “ಸಾಧನಾ ಸಮಾವೇಶ” ಕೇವಲ ರಾಜಕೀಯ ವಿರೋಧಿಗಳನ್ನು ಯದ್ವಾತದ್ವಾ ಬೈಯುವ ಅಸಹ್ಯ ಸಮಾವೇಶಗಳಾಗಿಬಿಟ್ಟಿದೆ ಎಂದು ಮಾಜಿ ಮುಖಂಡ, ಬೆಂಗಳೂರಿನ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಫೇಸ್‍ಬುಕ್ ನಲ್ಲಿ ಜನವರಿ 5 ರಂದು ಬರೆದುಕೊಂಡಿದ್ದರು.

    ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಬೇಲೂರು ಪಟ್ಟಣಗಳಲ್ಲಿ ನಡೆಸಿದ ಸರಕಾರಿ ಖರ್ಚಿನ ಸಾಧನಾ ಸಮಾವೇಶ ಗಳಲ್ಲಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿದ ಸಿದ್ದರಾಮಯ್ಯನವರ ಭಾಷಣದಲ್ಲಿ ವಿರೋಧಿಗಳ ಬಗ್ಗೆ ಕೇವಲ ಏಕವಚನದ ಅಟ್ಟಹಾಸದ ಮಾತುಗಳೇ ಎದ್ದು ಕಾಣುತ್ತಿತ್ತು. ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರಿಗೆ ಕನ್ನಡದ ವ್ಯಾಕರಣದ ಪಾಠ ಹೇಳುವ `ಸಂಧಿ’ ಎಂದರೆ ಏನು ಎಂದು ವಿವರವಾಗಿ ತಿಳಿಸುವ ಈ ಮೇಸ್ಟ್ರಿಗೆ ಪಾಪ “ಏಕವಚನ, ಬಹುವಚನ” ಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಅಷ್ಟೇ ಅಲ್ಲ. ಜೆಡಿಎಸ್ ನಾಯಕರ ವಿರುದ್ಧವೂ ಸರ್ಕಾರಿ ಖರ್ಚಿನಲ್ಲಿ ಬೈದಿದ್ದಾರೆ. ಅದಕ್ಕೋಸ್ಕರ ಬೇಲೂರಿನಲ್ಲಿ ಜೆಡಿಎಸ್ ಜನಪ್ರತಿನಿಧಿಗಳು ಈ ಉದ್ಧಟತನದ ವಿರುದ್ಧ ಪ್ರತಿಭಟಿಸಿ, ಧಿಕ್ಕಾರ ಕೂಗಿ ಸಮಾವೇಶದಿಂದ ಹೊರಬಂದಿದ್ದಾರೆ. ಅಂದ ಹಾಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ `ಮಾನ ಮರ್ಯಾದೆ’ ಇಲ್ಲ. ಎಂದಿರುವ ಸಿದ್ದರಾಮಯ್ಯನವರಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಈ ರೀತಿ ಏಕ ವಚನದ ಮೂಲಕ ದುರುಪಯೋಗ ಪಡಿಸಿಕೊಂಡ ಮೇಲೂ “ಮಾನ ಮರ್ಯಾದೆ ಇದೆ” ಎಂದು ನಾವು ಭಾವಿಸಬೇಕೆ ಎಂದು ಬರೆದುಕೊಂಡಿದ್ದರು.

    ಉಡುಪಿಯ ಬೈಂದೂರಿನಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಸಾಧನಾ ಸಮಾವೇಶ ನಡೆದಿತ್ತು. ಈ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವಾಚಾರ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆಯೇ ಕಲ್ಲಡ್ಕ ಶಾಲೆಗೆ ದೇವಸ್ಥಾನದ ಊಟ ರದ್ದು ಮಾಡಿದ್ದಾರೆ. ಆದ್ರೆ ಸಿಎಂ ಕಾರ್ಯಕ್ರಮಕ್ಕೆ ದೇವಸ್ಥಾನದಿಂದ ಊಟ ತರಿಸಿದ್ದಾರೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ, “ದೇವಸ್ಥಾನದ ಊಟವನ್ನು ಸಮಾವೇಶಕ್ಕೆ ನೀಡಬಹುದು. ಇದು ದೇವಸ್ಥಾನದ ಪ್ರಸಾದ. ಸರ್ಕಾರಿ ಕಾರ್ಯಕ್ರಮಕ್ಕೆ ನೀಡಲು ಅವಕಾಶ ಇದೆ. ಆದಾಗ್ಯೂ ಹೊರೆಯಾಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡು ದಿನದ ಹಿಂದೆಯೇ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿತ್ತು.ಇದನ್ನೂ ಓದಿ:ಬಿಜೆಪಿಯವರನ್ನ ಅಣಕಿಸಲು ಮೋದಿ ಸ್ಟೈಲಲ್ಲಿ ಭಾಷಣ ಮಾಡಿದ ಸಿಎಂ

    ಈ ಕುರಿತು ಸಚಿವ ಡಿವಿ ಸದಾನಂದ ಗೌಡರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಡಿಕಾರಿದ್ದು, ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ ಹಾಕಿದ ಹಣದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಬಡ ಮಕ್ಕಳಿಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ, ಅದೇ ದುಡ್ಡಲ್ಲಿ ರಾಜಕೀಯ ಕಾರ್ಯಕ್ರಮದ ಊಟಕ್ಕೆ ಉಪಯೋಗಿಸಿದ್ದು ವಿಪರ್ಯಾಸ. ಅದಕ್ಕೆ ಸಮರ್ಥನೆ ಬೇರೆ ಕೇಡು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದರು.