Tag: ಊಟ

  • ಪಿನ್ ನುಂಗಿದ್ದ ಬಾಲಕಿ ಸಾವು

    ಪಿನ್ ನುಂಗಿದ್ದ ಬಾಲಕಿ ಸಾವು

    ಕಲಬುರಗಿ: ಊಟ ಮಾಡುವಾಗ ಪಿನ್ ನುಂಗಿದ್ದ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸ್ವಪ್ನಾ (8) ಮೃತ ಬಾಲಕಿ. ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಸ್ವಪ್ನಾ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಯ್ಯಾಳ್ ಗ್ರಾಮದ ನಿವಾಸಿಯಾಗಿದ್ದು, ಇದೇ ತಿಂಗಳು 22 ರಂದು ಮನೆಯಲ್ಲಿ ಊಟ ಮಾಡುವಾಗ ತಿಳಿಯದೆ ಊಟದಲ್ಲಿ ಬಂದಿದ್ದ ಪಿನ್ ನುಂಗಿದ್ದಳು.

    ಈ ಬಗ್ಗೆ ಬಾಲಕಿ ಕೂಡಲೇ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಅಲ್ಲಿ ಬಾಲಕಿಗೆ ಆಪರೇಷನ್ ಮಾಡಿ ಪಿನ್ ತೆಗೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಆಕೆ ಮೃತಪಟ್ಟಿದ್ದಾಳೆ.

    ಈ ಕುರಿತು ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗಳು ನಿದ್ದೆ ನಾಟಕ ಮಾಡಿದಾಗ ಬಯಲಾಯ್ತು ತಂದೆಯ ರಹಸ್ಯ!

    ಮಗಳು ನಿದ್ದೆ ನಾಟಕ ಮಾಡಿದಾಗ ಬಯಲಾಯ್ತು ತಂದೆಯ ರಹಸ್ಯ!

    ಮುಂಬೈ: ಸ್ವಂತ ಮಗಳ ಮೇಲೆಯೇ ಕೆಲವು ತಿಂಗಳಿನಿಂದ ನಿರಂತರ ಅತ್ಯಾಚಾರವೆಸಗಿದ ಆರೋಪದ ಮೇರೆಗೆ 62 ವರ್ಷದ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿ ಸಂತ್ರಸ್ತೆಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ಯಾಚಾರ ಎಸಗುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಎನ್‍ಜಿಓ ಸಂಸ್ಥೆಯ ಸಹಾಯದಿಂದ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ನಗರದ ಮೀರಾ ರೋಡ್‍ನಲ್ಲಿ ವಾಸಿಸುತ್ತಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ:
    ಸಂತ್ರಸ್ತೆ ತನ್ನ ಮಲತಾಯಿ ಮತ್ತು ಸಹೋದರರ ಜೊತೆ ವಾಸಿಸುತ್ತಿದ್ದಳು. ಸಂತ್ರಸ್ತೆ ಮಾಡುತ್ತಿದ್ದ ಊಟದಲ್ಲಿ ಆರೋಪಿ ತಂದೆ ನಿದ್ರೆ ಮಾತ್ರೆಯನ್ನು ಮಿಕ್ಸ್ ಮಾಡಿ ಕೊಡುತ್ತಿದ್ದನು. ಇದನ್ನು ತಿಳಿಯದ ಮಗಳು ಸೇವಿಸಿದ ಕೂಡಲೇ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಳು. ಇದೇ ವೇಳೆ ಆರೋಪಿ ತಂದೆ ಆಕೆಯ ರೂಮಿಗೆ ಹೋಗಿ ಸಂಬಂಧ ಬೆಳೆಸುತ್ತಿದ್ದನು.

    ಇದೇ ರೀತಿ ಅನೇಕ ತಿಂಗಳಿನಿಂದ ಪಾಪಿ ತಂದೆ ಅತ್ಯಾಚಾರ ಎಸಗುತ್ತಿದ್ದನು. ಈ ಬಗ್ಗೆ ಸಂತ್ರಸ್ತೆಗೆ ಅನುಮಾನ ಬಂದಿದ್ದು, ಒಂದು ದಿನ ತನ್ನ ರೂಮಿನಲ್ಲಿ ಊಟ ಮಾಡುವ ನಿರ್ಧಾರ ಮಾಡಿದ್ದಾರೆ. ಆರೋಪಿ ತಂದೆ ರೂಮಿಗೆ ಊಟ ತಂದುಕೊಟ್ಟಿದ್ದಾನೆ. ಆದರೆ ಸಂತ್ರಸ್ತೆ ಅದನ್ನು ತಿನ್ನದೆ ಎಸೆದು ನಿದ್ದೆ ಮಾಡುವಾಗ ಮಲಗಿಕೊಂಡು ನಾಟಕವಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಂದಿನಂತೆ ಆರೋಪಿ ತಂದೆ ಎಲ್ಲರೂ ಮಲಗಿದ ಮೇಲೆ ಮಗಳ ರೂಮಿಗೆ ಹೋಗಿದ್ದು, ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ತಕ್ಷಣ ಎಚ್ಚರಗೊಂಡ ಸಂತ್ರಸ್ತೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೂಗಾಡಿದ್ದಾಳೆ. ಆಗ ತಂದೆ ಆಕೆಯ ಮೇಲೆ ಹಲ್ಲೆ ಮಾಡಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ವೊಡ್ಡಿದ್ದಾನೆ. ಅಷ್ಟೇ ಅಲ್ಲದೆ ನಾಳೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಇದರಿಂದ ನೊಂದ ಸಂತ್ರಸ್ತೆ, ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ತನ್ನ ಸ್ನೇಹಿತರನ್ನು ಸಂಪರ್ಕಿಸಿ ಎಲ್ಲ ವಿಚಾರವನ್ನು ತಿಳಿಸಿದ್ದಾಳೆ. ಬಳಿಕ ಆಕೆಯ ಸ್ನೇಹಿತರು ಎನ್‍ಜಿಓಗೆ ಮಾಹಿತಿ ನೀಡಿದ್ದಾರೆ. ಎನ್‍ಜಿಓ ಅವರ ಸಹಾಯದಿಂದ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ತಂದೆಯ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತಮ್ಮ ಟವೆಲೇ ತಟ್ಟೆ!

    ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತಮ್ಮ ಟವೆಲೇ ತಟ್ಟೆ!

    ರಾಯಚೂರು: ರಾಜಕರಾಣಿಗಳು ಲೋಕಸಮರದಲ್ಲಿ ಬ್ಯುಸಿಯಾದ್ರೆ, ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ.

    ಹೌದು. ರಾಯಚೂರಿನ ಲಿಂಗಸುಗೂರಿನ ತಾಲೂಕಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಒಳರೋಗಿಗಳಿಗೆ ಊಟ ಮಾಡಲು ಕನಿಷ್ಠ ತಟ್ಟೆಯ ವ್ಯವಸ್ಥೆಯೂ ಇಲ್ಲದಿರುವುದು ವಿಪರ್ಯಾಸ.

    ಆಸ್ಪತ್ರೆಯಲ್ಲಿ ಒಳರೋಗಿಯೊಬ್ಬ ತಟ್ಟೆಯಿಲ್ಲದೆ ಟವೆಲ್ ಮೇಲೆ ಅನ್ನ-ಸಾರು ಹಾಕಿಕೊಂಡು ಊಟ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಊಟ ನೀಡಬೇಕು. ಊಟ ನೀಡುವಾಗ ತಟ್ಟೆ ವ್ಯವಸ್ಥೆ ಇಲ್ಲವೆ ಉಪಯೋಗಿಸಿ ಬೀಸಾಡುವ ತಟ್ಟೆಯನ್ನಾದರೂ ನೀಡಬೇಕು. ಆದ್ರೆ ಈ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಹೀಗಾಗಿ ರೋಗಿಗಳು ತಮ್ಮ ಟವೆಲ್ ನಲ್ಲಿಯೇ ಊಟ ಮಾಡಬೇಕಾದ ಪರಸ್ಥಿತಿ ಬಂದೊದಗಿದೆ.

  • ಮದ್ವೆ ಮಂಟಪದಲ್ಲಿಯೇ ವಿವಾಹವಾಗಿ ವಿಚ್ಛೇದನವೂ ಆಯ್ತು!

    ಮದ್ವೆ ಮಂಟಪದಲ್ಲಿಯೇ ವಿವಾಹವಾಗಿ ವಿಚ್ಛೇದನವೂ ಆಯ್ತು!

    ಗಾಂಧಿನಗರ: ಸಾಮಾನ್ಯವಾಗಿ ಮದುವೆಯಾಗಿ ಒಂದು ವರ್ಷ ಅಥವಾ ಕೆಲವು ತಿಂಗಳ ನಂತರ ದಂಪತಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ. ಆದರೆ ಗುಜರಾತ್ ರಾಜ್ಯದಲ್ಲಿ ಮದುವೆಯಾದ ದಿನವೇ ನವಜೋಡಿ ವಿಚ್ಛೇದನ ಪಡೆದುಕೊಂಡಿದೆ.

    ಈ ಘಟನೆ ರಾಜಕೋಟ್ ಜಿಲ್ಲೆಯ ಗೊಂಡಾಲ್ ನಲ್ಲಿ ನಡೆದಿದೆ. ನವಜೋಡಿ ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸಪ್ತಪದಿ ತುಳಿದಿದ್ದರು. ನವಜೋಡಿಗೆ ಸ್ನೇಹಿತರು, ಸಂಬಂಧಿಕರು ಉಡುಗೊರೆ ಕೊಟ್ಟು ಶುಭಾಶಯ ತಿಳಿಸಿದ್ದರು. ಎಲ್ಲ ಕಾರ್ಯಕ್ರಮ ಮುಗಿದ ನಂತರ ನವಜೋಡಿ ಊಟಕ್ಕೆ ಹೋಗಿದ್ದಾರೆ. ಈ ವೇಳೆ ಊಟದ ವಿಚಾರವಾಗಿ ವಧು ಹಾಗೂ ವರನ ಕಡೆಯವರ ಮಧ್ಯೆ ಜಗಳ ಉಂಟಾಗಿದೆ.

    ಜಗಳ ವಿಕೋಪಕ್ಕೆ ತಿರುಗಿ ಎರಡೂ ಕುಟುಂಬಸ್ಥರ ನಡುವೆ ವಾದ-ವಿವಾದ ನಡೆದಿದೆ. ಅಷ್ಟಕ್ಕೂ ಸುಮ್ಮನಾಗದ ಅವರು ಪರಸ್ಪರ ಊಟವನ್ನು ಎಸೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಬ್ಬೊಬ್ಬರ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಕೊನೆಗೆ ಮದುವೆ ಮಂಟಪದಲ್ಲಿದ್ದವರು ಇವರ ಗಲಾಟೆ ನೋಡಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಎರಡು ಕುಟುಂಬಸ್ಥರಿಗೆ ಸಮಾಧಾನ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ವಧು-ವರನ ಕಡೆಯವರು ತಮ್ಮ ತಮ್ಮ ವಕೀಲರನ್ನು ಕರೆಯಿಸಿ ಸ್ಥಳದಲ್ಲಿಯೇ ಕೆಲವು ನಿಮಿಷಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ಅಷ್ಟೇ ಅಲ್ಲದೇ ಸಮಾರಂಭದಲ್ಲಿ ನವಜೋಡಿಗೆ ಬಂದಿದ್ದ ಉಡುಗೊರೆಗಳನ್ನು ಸಹ ಎರಡು ಕುಟುಂಬಸ್ಥರು ಹಿಂದಿರುಗಿಸಿ ಮನೆಗೆ ತೆರಳಿದ್ದಾರೆ. ವರನ ಕುಟುಂಬವು 250 ಕಿಲೋಮೀಟರ್ ದೂರದಲ್ಲಿರುವ ಖೇಡಾದಿಂದ ಮದುವೆಗೆಂದು ಗೊಂಡಾಲ್ ಗೆ ಬಂದಿತ್ತು. ಕೊನೆಗೆ ಅಲ್ಲಿಯೇ ಮದುವೆ ನಡೆದು ಅಲ್ಲಿಯೇ ವಿಚ್ಛೇದನದ ಮೂಲಕ ಕೊನೆಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ- ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

    ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ- ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

    -ಫಳ ಫಳ ಅಂತಿದೆ 300 ಕೆ.ಜಿ ತೂಕದ ಕಂಚಿನ ವಿಗ್ರಹ

    ತುಮಕೂರು: ನಡೆದಾಡುವ ದೇವರು, ಕೋಟಿ ಕೋಟಿ ಭಕ್ತರ ಪ್ರತ್ಯಕ್ಷ ದೇವರಾಗಿದ್ದ, ಲಕ್ಷ ಲಕ್ಷ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಇಂದಿಗೆ 11 ದಿನವಾಗಿದೆ. ಹೀಗಾಗಿ ಇಂದು ಶ್ರೀಗಳ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

    ತಳಿರು ತೋರಣ, ಬಣ್ಣ ಬಣ್ಣದ ಹೂಗಳಿಂದ ಪರಮಪೂಜ್ಯರ ಮಠ ಅಲಂಕೃತಗೊಂಡಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಬರೋಬ್ಬರಿ 5 ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ದೇಶದ ಮೂಲೆ ಮೂಲೆಗಳಿಂದ ಶ್ರೀಗಳ ಭಕ್ತರು ಶ್ರೀ ಮಠಕ್ಕೆ ಆಗಮಿಸ್ತಿದ್ದಾರೆ. ಕಳೆದ ರಾತ್ರಿಯೇ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ಕೆಲವರು ರಾತ್ರಿಯಿಡಿ ಭಜನೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಆವರಣದಲ್ಲೇ ನಿದ್ದೆಗೆ ಜಾರಿದ್ದರು.

    ಸ್ವಾಮೀಜಿಯವರ 11ನೇ ದಿನದ ವಿಧಿವಿಧಾನಗಳು ಗದ್ದುಗೆಯಲ್ಲಿ ಇಂದು ನಸುಕಿನ ಜಾವದಿಂದಲೇ ನೆರವೇರುತ್ತಿವೆ. ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರುತ್ತಿವೆ. ಶ್ರೀಗಳ ಕ್ರಿಯಾ ಸಮಾಧಿ ನಡೆದ ಗದ್ದುಗೆಯನ್ನು ಈಗಾಗಲೇ ಬಣ್ಣ-ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಭಕ್ತರು ನಿರಂತರವಾಗಿ ಆಗಮಿಸಿ, ಗದ್ದುಗೆಗೆ ಪೂಜೆ ಸಲ್ಲಿಸುತ್ತಾ ಇದ್ದಾರೆ. ಶ್ರೀಗಳ ಭಾವಚಿತ್ರವನ್ನು ಮಠದಲ್ಲಿ ಮೆರವಣಿಗೆ ಮಾಡಲಿದ್ದು, ಇದಕ್ಕಾಗಿ ಬೆಳ್ಳಿರಥವನ್ನು ಶುಚಿಗೊಳಿಸಲಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

    ಪುಣ್ಯಾರಾಧನೆಗೆ ಆಗಮಿಸುವ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಅವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇತಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ.

    ಕಾರ್ಯಕ್ರಮ:
    ತ್ರಿವಿಧ ದಾಸೋಹಿಯ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಬೆಳಗ್ಗೆ 10.30ಕ್ಕೆ ಚಾಲನೆ ಸಿಗಲಿದ್ದು, ಶ್ರೀಗಳ ಲಿಂಗ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಯೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಸುತ್ತೂರು ಶ್ರೀಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ವೇದಿಕೆ ಮುಂಭಾಗ ಸುಮಾರು 10 ಸಾವಿರ ಭಕ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ಭಾವಚಿತ್ರವಿರುವ ಟಿ ಶರ್ಟ್ ಹಾಗೂ ಪಂಚೆ ನೀಡಲಾಗಿದೆ.

    ಶ್ರೀಗಳ ಪ್ರತಿಮೆ:
    ಶ್ರೀಗಳ ಕಂಚಿಮೆ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಮೊನ್ನೆಯವರೆಗೂ ಗೊಂದಲ ಇತ್ತು. ಆದರೆ ಬುಧವಾರ ಎಲ್ಲಾ ಗೊಂದಲ ಪರಿಹಾರವಾಗಿದೆ. ಶ್ರೀ ಮಠದ ಪಾರ್ಕ್ ನಲ್ಲಿ ಆಳೇತ್ತರದಲ್ಲಿ ಶ್ರೀಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿರ್ಧಾರ ಮಾಡಲಾಗಿದೆ. 10 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಬರೋಬ್ಬರಿ 300 ಕೆಜಿ ತೂಕದ, 5.6 ಅಡಿ ಎತ್ತರ ಶ್ರೀಗಳ ಕಂಚಿನ ಪ್ರತಿಮೆಯನ್ನು ಇದೀಗ ಗೋಸಲ ಸಿದ್ದೇಶ್ವರ ವೇದಿಕೆಗೆ ತಂದು ಇರಿಸಲಾಗಿದ್ದು, ಪುಣ್ಯಾರಾಧನೆ ವೇಳೆ ಇಂದು ಲೋಕಾರ್ಪಣೆಗೊಳ್ಳಲಿದೆ. ಪಾರ್ಕ್ ನ ಮಂಟಪದಲ್ಲಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದ ಹಾಗೇ, ಇದನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಈ ಕಂಚಿನ ಪ್ರತಿಮೆಯನ್ನು 10 ವರ್ಷಗಳ ಹಿಂದೆಯೇ ರೆಡಿ ಮಾಡಿಸಿದ್ದರು. ಆದರೆ ಪ್ರತಿಮೆ ಸ್ಥಾಪಿಸಲು ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದ ಕಾರಣದಿಂದ ಅದನ್ನು ಎಸ್‍ಐಟಿ ಕಾಲೇಜಿನ ಗೋಡಾನ್‍ನಲ್ಲಿ ಇರಿಸಲಾಗಿತ್ತು. ಇದೀಗ ಅದನ್ನು ಮಠಕ್ಕೆ ತರಲಾಗಿದೆ.

    ಭದ್ರತೆ:
    ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬುಧವಾರವೇ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ. ಎನ್‍ಹೆಚ್ 4ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ.

    ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ತುಮಕೂರು: ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಸಿದ್ದಗಂಗಾ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ 8ನೇ ತರಗತಿ ವಿದ್ಯಾರ್ಥಿ ಶಿವು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜನ ಈಗ ದುಡಿದು ಸಾಹಕಾರರಾಗಿದ್ದಾರೆ. ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.

    ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಬಳಿಕ ಸಿದ್ದಗಂಗಾ ಮಠಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ಮಠದ ಸಿಬ್ಬಂದಿಯ ಜೊತೆ ಮಕ್ಕಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು.

    ಈ ಸಂದರ್ಭದಲ್ಲಿ ಭಕ್ತರ ಜೊತೆಗಿನ ತನ್ನ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಶಿವು, ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಭಕ್ತರು ಮಂಗಳವಾರ ಎಂಟು ಗಂಟೆಯಿಂದ ಅನ್ನವನ್ನು ವ್ಯರ್ಥ ಮಾಡುತ್ತಿದ್ದರು. ಈ ವಿಚಾರ ಮಠದವರಿಗೆ ಗೊತ್ತಾಗಿ ಯಾರೂ ಊಟವನ್ನು ವ್ಯರ್ಥ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದರು. ಈ ಸಮಯದಲ್ಲಿ ಭಕ್ತರೊಬ್ಬರು ಸಾಂಬರ್ ಇಲ್ಲ ಎಂದು ಹೇಳಿ ಅನ್ನ ಚೆಲ್ಲಲು ಬಂದಾಗ ನಾನು ಅನ್ನವನ್ನು ವ್ಯರ್ಥಮಾಡಬೇಡಿ ಎಂದು ಹೇಳಿದೆ ಎಂದು ಘಟನೆಯನ್ನು ವಿವರಿಸಿದ್ದಾನೆ.

    ಮಂಗಳವಾರ ಬಹಳಷ್ಟು ಭಕ್ತರು ಜಾಸ್ತಿ ಅನ್ನ ಬೇಕು ಎಂದು ಹಾಕಿಸಿಕೊಂಡು ಬಳಿಕ ಎಸೆಯುತ್ತಿದ್ದರು. ಅನ್ನವನ್ನು ಎಸೆಯುತ್ತಿದ್ದಾಗ ಎಷ್ಟು ಬೇಕೋ ಅಷ್ಟು ಅನ್ನವನ್ನು ಮಾತ್ರ ಹಾಕಬೇಕು ಎಂದು ಹೇಳುತ್ತಿದ್ದೆ. ಭಕ್ತರು ಎರಡನೇ ಸರಿ ಹೋದರೂ ಅವರಿಗೆ ಊಟ ಕೊಡುತ್ತಿದ್ದರು. ಆದರೆ ಕೆಲವರು ಮತ್ತೆ ಸಾಂಬರ್ ಹಾಕಿಸಿಕೊಳ್ಳಬೇಕೆಂದರೆ ಸರದಿಯಲ್ಲಿ ನಿಲ್ಲಬೇಕು. ಯಾರು ಸರದಿಯಲ್ಲಿ ನಿಲ್ಲುತ್ತಾರೆ ಎಂದು ಭಾವಿಸಿ ಅನ್ನವನ್ನು ಚೆಲ್ಲುತ್ತಿದ್ದರು. ಬಳಿಕ ನಾನೇ ಅವರ ತಟ್ಟೆಗೆ ಸಾಂಬಾರ್ ಹಾಕಿಸಿಕೊಡುತ್ತಿದ್ದೆ. ಕೆಲವರು ನನ್ನ ಜೊತೆ ಅನ್ನ ಸೇವಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು. ತಿನ್ನುವುದಕ್ಕೆ ಶಕ್ತಿ ಇಲ್ಲ ಎಂದು ಭಕ್ತರು ಹೇಳುತ್ತಿದ್ದರೂ ನಾನು ಎಸೆಯಲು ಬಿಡಲಿಲ್ಲ. ನೀವು ಅನ್ನ ತಿನ್ನುವವರೆಗೂ ನಾನು ತಟ್ಟೆಯನ್ನು ಎಸೆಯಲು ಬಿಡಲಿಲ್ಲ ಎಂದು ಭಕ್ತರಿಗೆ ಹೇಳುತ್ತಿದ್ದೆ ಎಂದು ಶಿವು ಆ ಸಂದರ್ಭವನ್ನು ವಿವರಿಸಿದ್ದಾನೆ.


    ನಗರಗಳಲ್ಲಿ ಹೆಚ್ಚು ಹಣ ನೀಡುವುದರಿಂದ ಜನ ಈಗ ಸಾಹುಕಾರರಾಗಿದ್ದಾರೆ. ಹಾಗಾಗಿ ಜನರಿಗೆ ಅನ್ನದ ಬೆಲೆ ಗೊತ್ತಿಲ್ಲ. ಜನಗಳು ಈಗ ನೀರು ಇಲ್ಲ ಎಂದು ಪರದಾಡುತ್ತಾರೆ. ಮುಂದೆ ಅನ್ನಕ್ಕಾಗಿಯೂ ಪರದಾಡಬಹುದು. ಈ ಹಿಂದೆ ಅನ್ನಕ್ಕಾಗಿ ಕಷ್ಟಪಡುತ್ತಿದ್ದರು. ನನ್ನ ಅಣ್ಣ ಓದುತ್ತಿದ್ದ ಕಾಲದಲ್ಲಿ ಆತ ಕೇವಲ ಗಂಜಿ ಕುಡಿದು ಶಾಲೆಗೆ ಹೋಗುತ್ತಿದ್ದ. ನಾವು ಶ್ರವಣಬೆಳಗೊಳಕ್ಕೆ ಹೋದಾಗ ನಮ್ಮ ಸರ್ ಅನ್ನವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದ್ದರು ಎಂದು ಗುರುಗಳು ಹೇಳಿಕೊಟ್ಟ ಪಾಠದ ವಿಚಾರವನ್ನು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವಾಗ ಶಿವು ತಿಳಿಸಿದ್ದಾನೆ.

    https://www.youtube.com/watch?v=5hHFioXJN0M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪ ಊಟ ಕೊಡು ಎಂದು ಅಳುತ್ತಿದ್ದ ಬಾಲಕಿಯ ರೇಪ್ ಮಾಡಿ ಕೊಲೆಗೈದ್ರು!

    ಅಪ್ಪ ಊಟ ಕೊಡು ಎಂದು ಅಳುತ್ತಿದ್ದ ಬಾಲಕಿಯ ರೇಪ್ ಮಾಡಿ ಕೊಲೆಗೈದ್ರು!

    ಭುವನೇಶ್ವರ್: ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳಿಗೆ ಕೊನೆಯಿಲ್ಲ ಎಂಬಂತಾಗಿದೆ. ಇದಕ್ಕೆ ಪೂರಕವೆಂಬಂತೆ ಒಡಿಶಾದಲ್ಲಿ 12 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಅತ್ಯಾವಾರವೆಸಗಿ ಕೊಲೆ ಮಾಡಿದ್ದಾರೆ.

    ಈ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಸದರ್ ಪ್ರದೇಶದಲ್ಲಿ ಭಾನುವಾರ ನಡೆದಿದೆ. ವರದಿಗಳ ಪ್ರಕಾರ, ಬಾಲಕಿಯ ತಂದೆ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಹೀಗಾಗಿ ಬಾಲಕಿ ಅಪ್ಪನ ಅಂಗಡಿ ಬಂದಿದ್ದಳು. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಸಿವಾಗುತ್ತಿದೆ ಊಟ ಹಾಕು ಅಂತ ಅಳುತ್ತಿದ್ದಳು.

    ಆದ್ರೆ ಕೆಲ ಹೊತ್ತಿನ ಬಳಿಕ ಬಾಲಕಿ ಪಕ್ಕದಲ್ಲೇ ಇರುವ ದೇವಸ್ಥಾನದ ಸಮೀಪವಿರುವ ಪೊದೆಯಲ್ಲಿ ನಗ್ನವಾಗಿ ಆಕೆಯ ದೇಹದ ಮೇಲೆ ಚೂರಿಯಿಂದ ಇರಿದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ಶವ ನೋಡಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ರೇಪ್ ವಿಚಾರ ಮನೆಯವರಿಗೆ ತಿಳಿಸುತ್ತಾಳೆ ಎಂಬ ಭಯದಿಂದ ಕಾಮುಕರು ಬಾಲಕಿ ದೇಹವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು ಎಂಬುದಾಗಿ ಶಂಕಿಸಲಾಗಿದೆ.

    ಘಟನೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರಾವಾನಿಸಿದ್ದಾರೆ. ಹೀಗಾಗಿ ಬಾಲಕಿ ಸಾವಿಗೆ ನಿಖರ ಕಾರಣವೇನೆಂದು ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

    ಘಟನೆ ಸಂಬಂಧ ಸ್ಥಳೀಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಸ್ಪೀಟ್ ಆಡೋರಿಗೆ ಕೊಡ್ತಾರೆ ಮೂರು ಹೊತ್ತು ಊಟ ಜೊತೆ 1 ಸಾವಿರ ಟಿಪ್ಸ್!

    ಇಸ್ಪೀಟ್ ಆಡೋರಿಗೆ ಕೊಡ್ತಾರೆ ಮೂರು ಹೊತ್ತು ಊಟ ಜೊತೆ 1 ಸಾವಿರ ಟಿಪ್ಸ್!

    ಕೊಪ್ಪಳ: ಧಾರ್ಮಿಕ ಸ್ಥಳಗಳಲ್ಲಿ ಉಚಿತವಾಗಿ ಮೂರು ಹೊತ್ತು ಆಹಾರ ಸಿಗುವುದನ್ನು ನೀವು ಕೇಳಿರಬಹುದು. ಆದರೆ ನಗರದಲ್ಲಿ ಇಸ್ಪೀಟ್ ಅಡ್ಡಕ್ಕೆ ಬರುವವರಿಗೆ ಮಾತ್ರ ಮೂರು ಊಟದ ಜೊತೆಗೆ ಒಂದು ಸಾವಿರ ರೂ. ಆಡುವುದಕ್ಕೆ ಟಿಪ್ಸ್ ಕೊಡ್ತಾರೆ.

    ಹೌದು, ಕೊಪ್ಪಳದ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿರುವ ಇಸ್ಪೀಟ್ ಅಡ್ಡದಲ್ಲಿ ಆಡಲು ಬಂದವರಿಗೆ ಉಚಿತವಾಗಿ ಮೂರು ಹೊತ್ತು ಊಟ ಕೊಟ್ಟು ಜೊತೆಗೆ 1 ಸಾವಿರ ರೂ. ಟಿಪ್ಸ್ ಕೂಡ ಕೊಡ್ತಾರೆ. ಇಷ್ಟೆಲ್ಲಾ ಸೌಲಭ್ಯಗಳು ಸಿಗುತ್ತದೆ ಅಂತ ಇಸ್ಪೀಟ್ ಆಡಲು ಇಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಾದ ಗದಗ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಹುಬ್ಬಳ್ಳಿ ಇನ್ನೂ ಹಲವೆಡೆಯಿಂದ ಜನರು ಬರುತ್ತಾರೆ. ಕಾರಲ್ಲಿ ಬಂದು ಆಟ ಆಡಿ ಹೋಗಲು ಈ ಇಸ್ಪೀಟ್ ಅಡ್ಡದವರು ಖರ್ಚನ್ನು ಕೂಡ ಕೊಡ್ತಾರೆ.

    ಇಸ್ಪೀಟ್ ಅಡ್ಡ ಮಾಲೀಕರು ಎನ್ನಿಲ್ಲವೆಂದರೂ ದಿನಕ್ಕೆ 40 ರಿಂದ 50 ಸಾವಿರ ರೂ.ವರೆಗೆ ಖರ್ಚು ಮಾಡ್ತಾರೆ. ಇಷ್ಟು ಖರ್ಚು ಮಾಡುವ ಕ್ಲಬ್ ನಲ್ಲಿ ದಿನಕ್ಕೆ ಎಷ್ಟು ಹಣ ದಿನಕ್ಕೆ ಗಳಿಕೆಯಾಗುತ್ತದೆ ಎನ್ನುವುದನ್ನು ನೀವೇ ಲೆಕ್ಕ ಹಾಕಬೇಕು.

    ಈ ರೀತಿಯಾಗಿ ಇಸ್ಪೀಟ್ ಅಡ್ಡಾದ ಹೆಸರನ್ನು ರಿಕ್ರಿಯೆಷನ್ ಅಸೋಷಿಯನ್ ಕ್ಲಬ್ ಮಾಡಲು ಸರ್ಕಾರ ಅನುಮತಿ ನೀಡುತ್ತೆ. ಹಾಗೆಯೇ ಇಂತಹ ಕ್ಲಬ್‍ಗಳಲ್ಲಿ ನೊಂದಣಿಯಾದ ಸದಸ್ಯರು ಬಿಟ್ಟು ಬೇರೆಯವರು ಬರುವಂತಿಲ್ಲ. ಅಲ್ಲದೆ ಇದಕ್ಕೆ ಆಟದ ಮೈದಾನ ಕಡ್ಡಾಯವಾಗಿ ಇರಬೇಕು ಅಷ್ಟೇ ಅಲ್ಲದೇ ಒಳಾಂಗಣ ಕ್ರೀಡಾಂಗಣ ಇರಬೇಕು ಎನ್ನುವ ನಿಯಮವಿದೆ. ಆದರೆ ಈ ಇಸ್ಪೀಟ್ ಕ್ಲಬ್ ನಲ್ಲಿ ಯಾವ ನಿಯಮವನ್ನು ಪಾಲನೆ ಆಗುತ್ತಿಲ್ಲ.

    ಈ ಕ್ಲಬ್‍ನಲ್ಲಿ ಇಸ್ಪೀಟ್ ಆಡಲು ಎಂದು ಮಾಡಿಕೊಂಡಿರುವ ಒಂದಿಷ್ಟು ರೂಮ್‍ಗಳು ಬಿಟ್ಟರೆ ಬೇರೇನೂ ಕಾಣಲು ಸಿಗುವುದಿಲ್ಲ. ಈ ಅಕ್ರಮವನ್ನು ತಡೆಯಬೇಕಾದ ಪೊಲೀಸರಿಗೆ ಎಲ್ಲಾ ಮಾಹಿತಿ ಗೊತ್ತಿದ್ದರೂ ಅವರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿರಿಯಾನಿ ಊಟಕ್ಕಾಗಿ ನೂಕುನುಗ್ಗಲು – ಹರಸಾಹಸಪಟ್ಟ ಪೊಲೀಸರು

    ಬಿರಿಯಾನಿ ಊಟಕ್ಕಾಗಿ ನೂಕುನುಗ್ಗಲು – ಹರಸಾಹಸಪಟ್ಟ ಪೊಲೀಸರು

    ಕೋಲಾರ: ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಬಿರಿಯಾನಿ ಊಟಕ್ಕಾಗಿ ಜನ ತಳ್ಳಾಟ, ನೂಕಾಟ ಮಾಡಿದ್ದಾರೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ನಿಗಮ ಮಂಡಳಿ ಸ್ಥಾನ ಸಿಕ್ಕ ಹಿನ್ನೆಲೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿರಿಯಾನಿ ಊಟಕ್ಕಾಗಿ ಜನ ಮುಗಿಬಿದ್ದಿದ್ದಾರೆ.

    ಕಾರ್ಯಕ್ರಮ ವೇದಿಕೆಯ ಹಿಂಭಾಗ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಬಿರಿಯಾನಿ ಜೊತೆ ಕಬಾಬ್, ಚಿಕನ್ ಚಾಪ್ಸ್ ಊಟ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಜನರು ಬಿರಿಯಾನಿ ತಿನ್ನಲು ನಾ ಮುಂದು ತಾ ಮುಂದು ಎಂದು ಮುಗ್ಗಿಬಿದಿದ್ದಾರೆ.

    ಕಾರ್ಯಕರ್ತರನ್ನು ನಿಯಂತ್ರಿಸಲು ಬಂಗಾರಪೇಟೆ ಪೊಲೀಸರು ಹರಸಾಹಸ ಪಡಬೇಕಾಯಿತು. ಒಂದು ಹಂತದಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರೇ ತಳ್ಳಾಡಬೇಕಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ಆಸ್ಪತ್ರೆ ಬಳಿ ಇರುವ ಬಾಲಮಂದಿರದಲ್ಲಿ ಭಾನುವಾರ ರಾತ್ರಿ ಊಟ ಮಾಡಿದ್ದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಮಾಡಿದ್ದಾರೆ. ಬಳಿಕ 12 ಗಂಟೆಯ ವೇಳೆಗೆ ಒಬ್ಬೊಬ್ಬರಾಗಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 103 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಊಟಕ್ಕೆ ಬಳಸಿದ್ದ ಪದಾರ್ಥಗಳು ಹಳಸಿರಬಹುದಾ ಅಥವಾ ಹಲ್ಲಿ ಬಿದ್ದಿದ್ದರಿಂದ ಈ ರೀತಿ ಆಗಿದೆಯಾ ಎಂಬ ಮಾಹಿತಿಯನ್ನು ಕಲೆ ಹಾಕ್ತಿದ್ದೇವೆ. ಮಕ್ಕಳ ಪರಿಸ್ಥಿತಿ ನೋಡಿ ಇಂದೇ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಎಂದು ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಇಂದಿರಾಗಾಂಧಿ ಆಸ್ಪತ್ರೆಗೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

    ಮಕ್ಕಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯ್ ಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಂಟರ್ ಗ್ರೇಟೆಂಡ್ ಚೈಲ್ಡ್ ಪ್ರೊಟೆಕ್ಟ್ ಸ್ಕೀಂ ನಲ್ಲಿ ಬಾಲಮಂದಿರ ನಡೆಯುತ್ತಿದೆ. ಭಾನುವಾರ ಸಂಜೆ ಅಡುಗೆ ಮಾಡಿ ಮಕ್ಕಳು ರಾತ್ರಿ ಊಟ ಮಾಡಿದ್ದಾರೆ. ನಂತರ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ 103 ಜನ ಮಕ್ಕಳನ್ನೂ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಅಸ್ವಸ್ಥರಾಗಿದ್ದ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸದ್ಯಕ್ಕೆ 40 ಮಕ್ಕಳು ಚಿಕಿತ್ಸೆಯಲ್ಲಿ ಇದ್ದಾರೆ. ಮಕ್ಕಳನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಅಡುಗೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ ಆಹಾರದ ಮಾದರಿಯನ್ನು ಲ್ಯಾಬ್ ಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಶಂಕರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv