Tag: ಊಟ

  • ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಬೆಂಗಳೂರು: ಇಡೀ ಭೂಮಂಡಲವೇ ಮಹಾಮಾರಿ ಕೊರೋನಾ ವೈರಸ್‍ಗೆ ತತ್ತರಿಸಿ ಹೋಗಿದ್ದು, ದೇಶದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲ ಬಡ ಜನತೆ ಊಟ, ಅಗತ್ಯ ವಸ್ತುಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸುತ್ತಿದ್ದು, ನಿತ್ಯ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ತಮ್ಮ ಕ್ಷೇತ್ರದ 50 ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪದಲ್ಲಿ 60 ಜನರ ಬಾಣಸಿಗರ ತಂಡ ಊಟ ತಯಾರು ಮಾಡುತ್ತಿದೆ.

    ಪ್ರತಿನಿತ್ಯ 5 ಸಾವಿರ ಕೆ.ಜಿ ಅಕ್ಕಿ ಬಳಸಿಕೊಂಡು ಆಹಾರ ತಯಾರು ಮಾಡುತ್ತಿದ್ದು, ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಡ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರ ಎಪ್ರಿಲ್ 14ರ ವರಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದೆ. ಜನ ಅನವಶ್ಯಕವಾಗಿ ರಸ್ತೆಗೆ ಬರದೇ ತಮ್ಮ ಮನೆಗಳಲ್ಲೇ ಇದ್ದು ಸೋಂಕು ತಗುಲದಂತೆ ಕಟ್ಟೆಚ್ಚರವಹಿಸಬೇಕಾಗಿದೆ. ದೇಶ ಲಾಕ್ ಡೌನ್ ಆಗಿ ಇವತ್ತಿಗೆ 6 ನೇ ದಿನ. ಉಳ್ಳವರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಅದರೆ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

  • ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಡಿ ಬಾಸ್ ಫ್ಯಾನ್ಸ್

    ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಡಿ ಬಾಸ್ ಫ್ಯಾನ್ಸ್

    – ಹಸಿದವರಿಗೆ ಊಟ, ಉಚಿತ ಅಂಬುಲೆನ್ಸ್ ವ್ಯವಸ್ಥೆ

    ಬೆಂಗಳೂರು: ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಹಸಿದವರಿಗೆ ನೆರವು ನೀಡಲು ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮುಂದೆ ಬಂದಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತು ಹಸಿದವರಿಗೆ ಊಟದ ವ್ಯವಸ್ತೆಯನ್ನು ಮೈಸೂರಿನ ಡಿಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ಆರೋಗ್ಯದ ತೊಂದರೆಯಾದರೆ ಅಂತವರಿಗೆ ನೆರವಾಗಲು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಡಿಬಾಸ್ ಅಭಿಮಾನಿಗಳು ರಾತ್ರಿ ಕೂಡ ಹಸಿದವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

    ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನ ಸಹಕಾರದೊಂದಿಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಮೈಸೂರು ನಾಗರಾಜ್ (ರಾಜ್ಯಉಪಾಧ್ಯಕ್ಷರು) ನೇತೃತ್ವದಲ್ಲಿ ಇಂದು ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ ಜೊತೆಗೆ ತುರ್ತುಪರಿಸ್ಥಿತಿಗಾಗಿ ಅಂಬುಲೆನ್ಸ್ ಸೌಲಭ್ಯ ಸಹ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ರಾತ್ರಿ ಸಮಯದಲ್ಲೂ ಊಟ ಮಾಡದೇ ಇರುವವರ ಸಹಾಯಕ್ಕೆ ಬಂದಿರುವ ಡಿಬಾಸ್ ಅಭಿಮಾನಿಗಳು, ರಾತ್ರಿಯೂ ಸಹ ಊಟ ವಿತರಣೆ ಮಾಡಿದ್ದಾರೆ. ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ -ಮೈಸೂರು ಇವರ ವತಿಯಿಂದ ರಾತ್ರಿಯು ಕೂಡ 500ಕ್ಕೂ ಹೆಚ್ಚು ಜನಕ್ಕೆ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮೈಸೂರಿನಲ್ಲಿ ಮಾಡಲಾಗಿದೆ ಎಂದು ಡಿಬಾಸ್ ಫ್ಯಾನ್ ಗ್ರೂಪ್ ಟ್ವಿಟ್ಟರ್‍ನಲ್ಲಿ ತಿಳಿಸಿದೆ.

    ಜೊತೆಗೆ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರು ನಗರದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಕೂಲಿನಾಲಿಗಾಗಿ ಮೈಸೂರಿಗೆ ಬಂದು ಹೊರಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣ, ರಸ್ತೆಬದಿಯಲ್ಲಿ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು ಮತ್ತು ಮಹಿಳೆಯರಿಗೆ ಚೆಲುವಾಂಬ ಆಸ್ಪತ್ರೆ ಮುಂಭಾಗ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮಾಡಲಾಯಿತು ಎಂದು ತಿಳಿಸಿದ್ದಾರೆ.

    ಇದರ ಜೊತೆಗೆ ಈ ಲಾಕ್‍ಡೌನ್ ಮುಗಿಯುವವರೆಗೂ ಇದೇ ರೀತಿ ಮಾಡಲು ನಿರ್ಧರಿಸಿರುವ ದರ್ಶನ್ ಅಭಿಮಾನಿಗಳು, ಸರ್ಕಾರದ ಆದೇಶದಂತೆ ಲಾಕ್ ಡೌನ್ ಮುಗಿಯುವ ತನಕ ಸಹಾಯ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘ ತೀರ್ಮಾನಿಸಿದೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆವಾದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕೂಡ ಮನವಿ ಮಾಡಲಾಗಿದೆ.

  • ಮಾನವೀಯತೆ ಮೆರೆದ ನೆಲಮಂಗಲ ಪೊಲೀಸರು

    ಮಾನವೀಯತೆ ಮೆರೆದ ನೆಲಮಂಗಲ ಪೊಲೀಸರು

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಬೆಂಗಳೂರಿನಿಂದ ಬಳ್ಳಾರಿಗೆ ನಡೆದುಕೊಂಡೇ ಹೊರಟ್ಟಿದ್ದಾರೆ. ಅವರಿಗೆ ಪೊಲೀಸರು ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆದರೆ ಬೆಂಗಳೂರು ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಬಳ್ಳಾರಿಗೆ ವಾಪಸ್ ಹೋಗಲು ಬಸ್ ಇರಲಿಲ್ಲ. ಕೊನೆಗೆ ಪುಟಾಣಿ ಮಕ್ಕಳ ಜೊತೆ ನೆಲಮಂಗಲ ನಗರದ ಮೂಲಕ ಬಳ್ಳಾರಿ ಜಿಲ್ಲೆಯ ಹಳ್ಳಿಗೆ ತಮ್ಮ ಪಯಣ ಬೆಳೆಸಿದ್ದರು. ಆದರೆ ನೆಲಮಂಗಲ ಬಳಿ ಪೊಲೀಸರ ಕೈಗೆ ಸಿಕ್ಕಿದ್ದಾರೆ.

    ಎರಡು ದಿನದಿಂದ ತಿನ್ನೋಕೆ ಊಟ ಇಲ್ಲ ಸರ್. ಊರಿಗೆ ಹೋಗೋಣ ಎಂದರೆ ಬಸ್ ಇಲ್ಲ, ಹಣವೂ ಇಲ್ಲ. ಜೊತೆಗೆ ಮಕ್ಕಳು ಭಯ ಭೀತರಾಗಿದ್ದಾರೆ. ನಮ್ಮನ್ನ ತಡಿ ಬೇಡಿ ದಯವಿಟ್ಟು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಜನರ ಕಷ್ಟವನ್ನು ಆಲಿಸಿದ ನೆಲಮಂಗಲ ಟೌನ್ ಪೊಲೀಸರು ಕಾರ್ಮಿರಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದರು.

    ನೆಲಮಂಗಲ ಕುಣಿಗಲ್ ಬೈಪಾಸ್ ಬಳಿ ಅವರಿಗೆ ಕುಡಿಯಲು ನೀರು ಮತ್ತು ಊಟವನ್ನು ವಿತರಣೆ ಮಾಡಿದ್ದಾರೆ. ಜೊತೆ ಒಟ್ಟಾಗಿ ಹೋಗಬೇಡಿ, ಒಬ್ಬೊಬ್ಬರಾಗಿ ಹೋಗಿ ಎಂದು ಸೂಚನೆ ಕೊಟ್ಟು ಕಳುಹಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮತ್ತು ಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 21 ದಿನ ನಿರಂತರ ಅನ್ನದಾನ- ಪಬ್ಲಿಕ್ ಟಿವಿ ಮೂಲಕ ಉಡುಪಿಯ ಕಿಣಿ ಫ್ಯಾಮಿಲಿ ಘೋಷಣೆ

    21 ದಿನ ನಿರಂತರ ಅನ್ನದಾನ- ಪಬ್ಲಿಕ್ ಟಿವಿ ಮೂಲಕ ಉಡುಪಿಯ ಕಿಣಿ ಫ್ಯಾಮಿಲಿ ಘೋಷಣೆ

    ಉಡುಪಿ: ಕೊರೊನಾ ಮಹಾಮಾರಿ ಭಾರತಕ್ಕೆ ಬೀಗ ಹಾಕಿಸಿದೆ. ಉಡುಪಿಯಲ್ಲಿ ಕಾರ್ಮಿಕರು, ನಿರ್ಗತಿಕರು ಊಟಕ್ಕಿಲ್ಲದೆ ಪರಿತಪಿಸುವ ಪ್ರಮೇಯ ಬಂದಿದೆ. ಚಾಂದ್ರಮಾನ ಯುಗಾದಿ ಆಚರಿಸುತ್ತಿರುವ ಉಡುಪಿಯ ಕಿಣಿ ಫ್ಯಾಮಿಲಿ ಪ್ರತಿದಿನ ನೂರು ಜನಕ್ಕೆ ಊಟ ಕೊಡಲು ಪಬ್ಲಿಕ್ ಟಿವಿ ಮೂಲಕ ಘೋಷಿಸಿದೆ.

    ಮುಂದಿನ 21 ದಿನ ನಗರದ ಅಲ್ಲಲ್ಲಿ ನೂರು ಊಟ ಕೊಡುವುದಾಗಿ ರಾಘವೇಂದ್ರ ಕಿಣಿ ಘೋಷಿಸಿದ್ದಾರೆ. ಜನರಿದ್ದಲ್ಲಿಗೆ ಪ್ರತಿದಿನ ಊಟ ಪಾರ್ಸೆಲ್ ಆಗಲಿದೆ. ಅಡುಗೆಗೆ, ಸಪ್ಲೈಗೆ ಜನರನ್ನು ಆಯ್ಕೆ ಮಾಡಿದ್ದೇವೆ. ಸ್ವಚ್ಛತೆಗೆ ಅಡ್ಡಿಯಾಗದೆ, ಸರ್ಕಾರದ ಆರೋಗ್ಯ ಇಲಾಖೆಯ ನಿಯಮ ಪಾಲಿಸಿಕೊಂಡು ಊಟ ವಿತರಿಸುವುದಾಗಿ ರಾಘವೇಂದ್ರ ಕಿಣಿ ಹೇಳಿದ್ದಾರೆ.

    ಸಹೋದರ ನರಸಿಂಹ ಕಿಣಿಯವರ ಕಡಿಯಾಳಿಯ ಹೋಟೆಲಿನಲ್ಲಿ ಊಟದ ಪೊಟ್ಟಣ ಪಾರ್ಸೆಲ್ ಕಟ್ಟಲಾಗುತ್ತಿದೆ. ಕಾರು, ಬೈಕ್ ಮೂಲಕ ನಗರದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಅಜ್ಜರಕಾಡು ಪಾರ್ಕ್, ಅಂಬಲಪಾಡಿ, ಸಂತೆಕಟ್ಟೆ ಕಲ್ಯಾಣಪುರದಲ್ಲಿ ಊಟ ಅಗತ್ಯ ಇರುವವರಿಗೆ ವಿತರಿಸುವ ನಿರ್ಧಾರವನ್ನು ಕಿಣಿಯವರ ಟ್ರಸ್ಟ್ ಮೂಲಕ ಮಾಡಲಾಗಿದೆ.

    ಯುಗಾದಿ ಆಚರಿಸುವ ಸಂದರ್ಭ ಕೋವಿಡ್ 19 ಹಬ್ಬದ ಖುಷಿಗೆ ಅಡ್ಡಿಯಾಗಿ ನಿಂತಿದೆ. ನಾವು ಹಬ್ಬ ಮಾಡಬಹುದು, ಒಪ್ಪೊತ್ತು ಊಟ ಇಲ್ಲದವರು ನಮ್ಮ ನಡುವೆ ಕೋಟಿ ಜನರು ಇದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಅಭಿಯಾನಕ್ಕೆ ಕೈ ಜೋಡಿಸಲಿ. ಮನೆ ಪಕ್ಕದಲ್ಲಿ ಊಟಕ್ಕೆ ಕಷ್ಟ ಇರುವ ಮನೆಗೆ ನಾಲ್ಕು ಊಟ ಬಡಿಸಿದರೆ ಅದೊಂದು ಪುಣ್ಯಕಾರ್ಯ ಆಗುತ್ತದೆ ಎಂದು ರಾಘವೇಂದ್ರ ಕಿಣಿ ಹೇಳಿದರು.

    ಸಹೋದರ ನರಸಿಂಹ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಮ್ಮನ ಜನ ಸೇವೆಗೆ ನಾನೂ ಸಹಾಯ ಮಾಡುತ್ತಿರುವುದು ಖುಷಿಯಾಗುತ್ತದೆ. ದೊಡ್ಡ ಸಂಕಷ್ಟ ಜನಕ್ಕೆ ಬಾರದಿರಲಿ ಎಂಬುದು ನನ್ನ ಪ್ರಾರ್ಥನೆ ಎಂದರು. ರಾಜ್ಯದ ಮೂಲೆ ಮೂಲೆಯಲ್ಲಿ ಜನ ಅನ್ನದಾನಕ್ಕೆ ಸಿದ್ಧರಾಗಬೇಕು. ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತರು ಆಹಾರದ ಪೊಟ್ಟಣ ವಿತರಿಸುವ ಕೆಲಸ ಮಾಡಿದರು. ಅಂತರ ಕಾಯ್ದು, ಶುಚಿತ್ವದಲ್ಲಿ ಊಟ ಮಾಡುವಂತೆ ವಿನಂತಿ ಮಾಡಲಾಯಿತು.

  • ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್

    ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್

    – 200 ಮಂದಿಗೆ ಊಟ, ನೀರು ನೀಡಿದ ಇನ್ಸ್‌ಪೆಕ್ಟರ್

    ಮಡಿಕೇರಿ: ರಾಜ್ಯ ಸರ್ಕಾರವು ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಲಾಕ್‍ಡೌನ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಉಪಹಾರ ಗೃಹಗಳು ಬಂದ್ ಆಗಿದೆ. ಆದ್ದರಿಂದ ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ಸೋಂಕು ನಾಗರಿಕರಿಗೆ ಹರಡದಂತೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿದೆ. ಆದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹೆಚ್ಚು ಜನರು ಕೂಲಿ ಕಾರ್ಮಿಕರು, ಭಿಕ್ಷುಕರು ಸೇರಿದಂತೆ ಹಲವಾರು ಮಂದಿ ಹೊಟೇಲ್, ಟೀ ಅಂಗಡಿಗಳು ಮತ್ತು ಕ್ಯಾಂಟೀನ್ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಒಂದೇ ದಿನಕ್ಕೆ ಎಲ್ಲವೂ ಸ್ತಬ್ಧವಾದ ಕಾರಣ ಅವರಲ್ಲಿ ಆತಂಕ ಉಂಟಾಗಿತ್ತು.

    ಊಟ ಮಾಡಲು ಹೋಟೆಲ್‍ಗಳು ಇಲ್ಲದಿರುವುದನ್ನು ಮನಗಂಡ ಪಿರಿಯಾಪಟ್ಟಣ ಪೊಲೀಸರು ನಿರ್ಗತಿಕರಿಗೆ ಆಸರೆಯಾಗುವ ಮನಸ್ಸು ಮಾಡಿದ್ದಾರೆ. ಅದರಂತೆಯೇ ಒಂದು ಹೊತ್ತು ಉಪಹಾರ ನೀಡುವ ಮೂಲಕ ಮಾನವಿಯಂತೆ ಮೆರೆದಿದ್ದಾರೆ.

    ಪಿರಿಯಾಪಟ್ಟಣ ಸುತ್ತಮುತ್ತ ಭೀಕ್ಷಕರು ಊಟವಿಲ್ಲದೆ ಪರದಾಟ ಮಾಡುವುದನ್ನು ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್ ಪ್ರದೀಪ್ ನೋಡಿದ್ದಾರೆ. ನಂತರ ಪಿರಿಯಾಪಟ್ಟಣ ನಿವಾಸಿ ಎಚ್.ಡಿ.ಮೋಹನ್ ಕುಮಾರ್ ಸಹಕಾರದೊಂದಿಗೆ ಭಿಕ್ಷುಕರಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಊಟ ನೀರು ನೀಡಿದ್ದಾರೆ. ಸುಮಾರು 300 ಜನಕ್ಕೆ ಈ ಸೇವೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದ್ದಾರೆ.

  • ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    – ಊಟ ಮಾಡದ ಮಕ್ಕಳು ಸೇಫ್

    ಚಿಕ್ಕಬಳ್ಳಾಪುರ: ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಇಬ್ಬರು ಮಹಿಳೆಯರು, ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕಾಶಾಪುರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕು ದೊಡ್ಡಕಿರಗಂಬಿ ಗ್ರಾಮದ ಗಂಗರಾಜು (35), ಅಂದಾರ್ಲಹಳ್ಳಿ ಗ್ರಾಮದ ಶಿವಮ್ಮ (30) ಮತ್ತು ಗುಡಿಬಂಡೆ ತಾಲೂಕು ಧೂಮಕುಂಟಹಳ್ಳಿ ಗ್ರಾಮದ ಗಾಯತ್ರಿ (30) ಮೃತರು. ಮೃತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇಂದು ಬೆಳಗ್ಗೆ ಊಟದಲ್ಲಿ ಮೆಕ್ಕೆಜೋಳಕ್ಕೆ ಬಳಸುವ ಕ್ರಿಮಿನಾಶಕ ಔಷಧಿ ಬೆರೆಸಿಕೊಂಡು ಮೂವರು ಸೇವಿಸಿದ್ದು ಸಾವನ್ನಪ್ಪಿದ್ದಾರೆ.

    ಇದೇ ಸ್ಥಳದಲ್ಲಿದ್ದ ಗಾಯತ್ರಿಯ ಇಬ್ಬರು ಮಕ್ಕಳು ಊಟ ಮಾಡದೆ ಸಾವಿನಿಂದ ಪಾರಾಗಿದ್ದಾರೆ. ಮೃತ ಮಹಿಳೆಯರು ಸಹೋದರಿಯರಾಗಿದ್ದು, ಅವಿವಾಹಿತ ಗಂಗರಾಜು ಜೊತೆ ಸಂಬಂಧ ಇಟ್ಟುಕೊಂಡಿರಬಹುದು, ಹೀಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

    ಬಾಗೇಪಲ್ಲಿ ಪೊಲೀಸರು ಹಾಗೂ ಪ್ರಭಾರ ಎಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರ ಆಸಲಿ ಸತ್ಯ ಗೊತ್ತಾಗಬೇಕಿದೆ.

  • ನಿಶ್ಚಿತಾರ್ಥದಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ನಿಶ್ಚಿತಾರ್ಥದಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಬೀದರ್: ನಿಶ್ಚಿತಾರ್ಥ ಸಮಾರಂಭದಲ್ಲಿ ಊಟ ಮಾಡಿದ 100ಕ್ಕೂ ಅಧಿಕ ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಾರುತಿ ಪಾಟೀಲ ಎಂಬವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಿಮಿತ್ತ ಮಧ್ಯಾಹ್ನ ಸುಮಾರು 2 ಗಂಟೆಗೆ ಊಟ ಮಾಡಿದ ಜನರಿಗೆ ವಾಂತಿ ಭೇದಿ ಶುರುವಾಗಿದ್ದು, ವಾಂತಿ ಭೇದಿಯಿಂದ ಜನರ ಅಸ್ವಸ್ಥರಾಗಿದ್ದಾರೆ. ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಾದ ಪಾಟೀಲ್ ಆಸ್ಪತ್ರೆ, ರಿಫಾ ಆಸ್ಪತ್ರೆ, ಬಿರಾದಾರ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮುಸ್ತಾಪುರ ಗ್ರಾಮದ ಯುವತಿಯನ್ನು ನಾರಾಯಣಪೂರ ಗ್ರಾಮದ ಯುವಕನೊಂದಿಗೆ ಮದುವೆ ಸಂಬಂಧ ನಿಶ್ಚಿತಾರ್ಥ ನಡೆಸಲಾಗುತ್ತಿತ್ತು. ಮುಸ್ತಾಪುರ ಸೇರಿದಂತೆ ಮುಚಳಂಬ, ನಾರಾಯಣಪೂರ ಗ್ರಾಮದಿಂದ ಆಗಮಿಸಿದ ಸಂಬಂಧಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟ ಮಾಡಿದರು. ಸುಮಾರು 600ರಷ್ಟು ಜನ ಊಟ ಮಾಡಿದ್ದು, ಇದರಲ್ಲಿ ಸುಮಾರು 200ಕ್ಕೂ ಅಧಿಕ ಜನರಿಗೆ ವಾಂತಿ, ಭೇದಿ ಶುರುವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

    ಅಸ್ವಸ್ಥರಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದ ಜನರಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿದು ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತ ಭಂವರಸಿಗ್ ಮೀನಾ, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‍ಐ ಸುನೀಲಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದರು.

  • ಮದುವೆ ಊಟ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ -ಓರ್ವ ಸಾವು

    ಮದುವೆ ಊಟ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ -ಓರ್ವ ಸಾವು

    ಚಿಕ್ಕಬಳ್ಳಾಪುರ: ಮದುವೆಯಲ್ಲಿ ಊಟ ಮಾಡಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಲ್ ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪಾಯಲಹಳ್ಳಿ ಗ್ರಾಮದ 50 ವರ್ಷದ ನಾರಾಯಣಪ್ಪ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಹಾಗೂ ಶುಕ್ರವಾರ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಬಳಿಯ ಕಲ್ಯಾಣಮಂಟಪದಲ್ಲಿ ಎಲ್ ಮುತ್ತಕದಹಳ್ಳಿ ಗ್ರಾಮದ ವಧು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಮನ್ನಾರಪುರ ಗ್ರಾಮದ ವರನೊಂದಿಗೆ ವಿವಾಹ ಜರುಗಿತ್ತು. ಈ ಮದುವೆಯ ಆರತಕ್ಷತೆ ವೇಳೆ ಊಟ ಮಾಡಿದ ಹಲವರು ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    ಗುರುವಾರ ರಾತ್ರಿ ಊಟ ಮಾಡಿದ್ದು ಹಲವರಿಗೆ ಅಂದ್ರೆ ಮದುವೆ ಎಲ್ಲಾ ಮುಗಿದ ಬಳಿಕ ಶುಕ್ರವಾರ ಮಧ್ಯರಾತ್ರಿ ಹಾಗೂ ಶನಿವಾರ ಬೆಳಗ್ಗೆಯಿಂದ ಲೇಟ್ ರಿಯಾಕ್ಷನ್ ಆಗಿ ಅಸ್ವಸ್ಥರಾಗಿದ್ದಾರೆ. ಹಲವು ಮಂದಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮಾಹಿತಿ ಪಡೆದುಕೊಂಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ ಮುತ್ತಕದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಿ ಅಸ್ವಸ್ಥರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ.

    ಶನಿವಾರ ಅಸ್ವಸ್ಥಗೊಂಡಿದ್ದ ನಾರಾಯಣಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ನಾರಾಯಣಪ್ಪ ಸಾವಿನ ನಂತರ ಮದುವೆ ಊಟ ಮಾಡಿದವರೆಲ್ಲಿ ಭೀತಿ ಆವರಿಸಿದೆ. ಹೀಗಾಗಿ ಮದುವೆ ಊಟ ಸವಿದವರು ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    – ಊರಿನ ಜಾತ್ರೆಗೂ ಬರ್ತಾರೆ

    ಬೆಂಗಳೂರು: ಮದುವೆ ಮನೆಗೆ ಅತಿಥಿಗಳು ಬರುವುದು ಸಾಮಾನ್ಯ. ಆದರೆ ಇನ್ಮುಂದೆ ಮದುವೆ ಮನೆಗೆ ಆರೋಗ್ಯಾಧಿಕಾರಿಗಳು ಬರುತ್ತಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಸಮಾರಂಭಗಳಿಗೂ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ  ಕೊಡುತ್ತಾರೆ.

    ಹೌದು..ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗದ ಹಾವಳಿ. ಇದಕ್ಕಾಗಿಯೇ ಈಗ ರಾಜ್ಯ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಅದರಲ್ಲೂ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಹಾಗೂ ನೀರು ಶುದ್ಧವಾಗಿಲ್ಲದೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿಯೇ ಈಗ ಮದುವೆ ಮಂಟಪಗಳಿಗೆ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ವಿಸಿಟ್ ಮಾಡಬೇಕು.

    ಆಶಾ ಕಾರ್ಯಕರ್ತೆಯರು ಕೂಡ ಮದುವೆಯಲ್ಲಿ ಹಂಚುವ ಆಹಾರ ಹಾಗೂ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಅದರ ಕ್ವಾಲಿಟಿ ಚೆಕ್ ಮಾಡಬೇಕು ಅಂತ ಆರೋಗ್ಯಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಮುಂದೆ ಊಟದಲ್ಲಿ ಸ್ವಚ್ಛತೆ ಕಾಪಾಡದೆ ಇದ್ದರೆ ಊಟ ಸಪ್ಲೈ ಮಾಡುವ ಕ್ಯಾಟರಿಂಗ್‍ನವರ ಮೇಲೆ ದೂರು ದಾಖಲಾಗುತ್ತೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಶರೀಫ್ ಹೇಳಿದ್ದಾರೆ.

    ಕೇವಲ ಮದುವೆ ಮಾತ್ರವಲ್ಲದೇ ಊರಿನ ಜಾತ್ರೆಗೂ ಕೂಡ ಆರೋಗ್ಯಾಧಿಕಾರಿಗಳು ಭೇಟಿ ಕೊಡಲಿದ್ದಾರೆ. ಊರಿನ ಜಾತ್ರೆಯಲ್ಲಿ ವಿತರಿಸುವ ಪ್ರಸಾದ, ಅಲ್ಲಿನ ಆಹಾರದ ಶಾಪ್‍ಗಳ ಸ್ವಚ್ಛತೆಯ ಮೇಲೂ ಗಮನಹರಿಸಲಿದ್ದಾರೆ. ಏನಾದರೂ ತೊಂದರೆಯಾದರೆ ಊರಿನ ಜಾತ್ರೆಯ ಮುಖಂಡತ್ವ ವಹಿಸಿರುವವರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ, ಜಾತ್ರೆ ಇಂತಹ ಸಮಾರಂಭದಲ್ಲಿ ಜನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಈ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಾನಾ ಪ್ಲ್ಯಾನ್ ಮಾಡಿದೆ.

  • ಹಸಿದವ್ರ ಪಾಲಿಗೆ ರಾಬಿನ್ ಹುಡ್- ನಿತ್ಯ ಆಹಾರ ಸಂಗ್ರಹಿಸಿ ನಿರ್ಗತಿಕರಿಗೆ ವಿತರಿಸ್ತಿದ್ದಾರೆ ಮೈಸೂರು ವಿದ್ಯಾರ್ಥಿಗಳು

    ಹಸಿದವ್ರ ಪಾಲಿಗೆ ರಾಬಿನ್ ಹುಡ್- ನಿತ್ಯ ಆಹಾರ ಸಂಗ್ರಹಿಸಿ ನಿರ್ಗತಿಕರಿಗೆ ವಿತರಿಸ್ತಿದ್ದಾರೆ ಮೈಸೂರು ವಿದ್ಯಾರ್ಥಿಗಳು

    ಮೈಸೂರು: ಸಿದ್ಧಾಂತದ ಹೆಸರಿನಲ್ಲಿ ಕ್ರಾಂತಿ ಮಾಡ್ತೀವಿ ಅಂತ ಬೀದಿಗೆ ಇಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ್ತಿದೆ. ಆದರೆ, ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸದ್ದಿಲ್ಲದೆ ಬಡವರ ಹಸಿವು ನೀಗಿಸೋ ಕೆಲಸ ಮಾಡ್ತಿದ್ದಾರೆ. ಅನ್ನ ಧರ್ಮದ ಹೆಸರಿನಲ್ಲಿ ದೊಡ್ಡದೊಂದು ತಂಡವನ್ನೇ ಕಟ್ಟುವ ಮೂಲಕ ಪಬ್ಲಿಕ್ ಹೀರೋಗಳು ಎನಿಸಿಕೊಂಡಿದ್ದಾರೆ.

    ಆಹಾರವಿಲ್ಲದೆ ಅದೆಷ್ಟೋ ಜನ ಹಸಿದೇ ಮಲಗುತ್ತಾರೆ. ಇಂತವರ ಹಸಿವು ನೀಗಿಸೋ ಕೆಲಸವನ್ನು ಸ್ನಾತಕೋತ್ತರ ಮತ್ತು ಪಿಎಚ್‍ಡಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾಡುತ್ತಿದ್ದಾರೆ. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪಿಎಚ್‍ಡಿ ಮಾಡುತ್ತಿರುವ ಸುಷ್ಮಾ ಹಾಗೂ ಮಹಾಜನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಹರ್ಷಿತಾ ಅನ್ನಧರ್ಮವೇ ಮಿಗಿಲು ಎನ್ನುತ್ತಿದ್ದಾರೆ.

    ದೆಹಲಿ ಮೂಲದ ರಾಬಿನ್ ಹುಡ್ ಆರ್ಮಿ ಎಂಬ ಎನ್‍ಜಿಓ ಸಂಘಟನೆಯನ್ನು ಈ ವಿದ್ಯಾರ್ಥಿನಿಯರು ಮೈಸೂರಿನಲ್ಲಿ ಬೆಳೆಸುತ್ತಿದ್ದಾರೆ. ಮೈಸೂರು ನಗರದಲ್ಲಿನ ಅನೇಕ ಹೋಟೆಲ್, ಕಲ್ಯಾಣಮಂಟಪಗಳಿಂದ ಪ್ರತಿ ರಾತ್ರಿ ಆಹಾರ ಸಂಗ್ರಹಿಸಿ ಬಡವರು, ನಿರ್ಗತಿಕರ ಹಸಿವು ನೀಗಿಸುತ್ತಿದ್ದಾರೆ.

    ವಾಟ್ಸಪ್ ಗ್ರೂಪ್ ರಚಿಸಿಕೊಂಡು ಆರಂಭದಲ್ಲಿ ಇವರಿಬ್ಬರೇ ಆಹಾರ ಸಂಗ್ರಹಿಸಿ ಜನರಿಗೆ ನೀಡ್ತಿದ್ದರು. ಆದರೆ ಇದೀಗ 50 ಜನ ಸ್ವಯಂಸೇವಕರಿದ್ದಾರೆ. ವಾಟ್ಸಪ್ ಗ್ರೂಪಲ್ಲಿ ತಮ್ಮಲ್ಲಿ ಉಳಿದ ಆಹಾರದ ಬಗ್ಗೆ ಹೋಟೆಲ್ ಮಾಲೀಕರು, ಕಲ್ಯಾಣಮಂಟಪದವರು ಗ್ರೂಪ್ ಸದಸ್ಯರಿಗೆ ಮಾಹಿತಿ ನೀಡ್ತಾರೆ. ಆಗ, ಆಹಾರವನ್ನು ಸಂಗ್ರಹಿಸಿ ವಿತರಿಸುವ ಕಾರ್ಯ ನಡೆಯುತ್ತೆ ಎಂದು ರಾಬಿನ್ ಹುಡ್ ಆರ್ಮಿ ಸದಸ್ಯೆ ಹರ್ಷಿತಾ ಹೇಳುತ್ತಾರೆ.

    ಒಟ್ಟಿನಲ್ಲಿ ನಿರ್ಗತಿಕರು, ಬಡವರ ಹಸಿವು ನೀಗಿಸೋ ಕೆಲಸವನ್ನು ರಾಬಿನ್ ಹುಡ್ ಆರ್ಮಿ ಹೀಗೆ ಮುಂದುವರಿಸಲಿ ಎಂಬುದೇ ಎಲ್ಲರ ಆಶಯವಾಗಿದೆ.