Tag: ಉಸಿರಾಟದ ಸಮಸ್ಯೆ

  • ಬಾಲಿವುಡ್ ನಟ ದಿಲೀಪ್ ಕುಮಾರ್​​​ಗೆ ಉಸಿರಾಟದ ಸಮಸ್ಯೆ- ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಟ ದಿಲೀಪ್ ಕುಮಾರ್​​​ಗೆ ಉಸಿರಾಟದ ಸಮಸ್ಯೆ- ಆಸ್ಪತ್ರೆಗೆ ದಾಖಲು

    ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಉಸಿರಾಟದ ಸಮಸ್ಯೆಯಿಂದ ಭಾನುವಾರ ಬೆಳಗ್ಗೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಅವರ ಮ್ಯಾನೇಜರ್ ಮಾಹಿತಿ ನೀಡಿದ್ದು, ನಟನ ಆರೋಗ್ಯದ ಸ್ಥಿತಿಗತಿ ಕುರಿತು ತಿಳಿಸಿದ್ದಾರೆ. ದಿಲೀಪ್ ಅವರು ನಿಯಮಿತ ವೈದ್ಯಕೀಯ ಪರೀಕ್ಷೆಗೆಂದು ಖಾರ್‍ನ ನಾನ್ ಕೋವಿಡ್ ಪಿಡಿ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಇರುವುದು ಪತ್ತೆಯಾಗಿದೆ. ಡಾ.ನಿತಿನ್ ಗೋಖಲೆ ಅವರನ್ನೊಳಗೊಂಡ ವೈದ್ಯಕೀಯ ತಂಡ ನಟನ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದು, ದಿಲೀಪ್ ಅವರಿಗಾಗಿ ಪ್ರಾರ್ಥಿಸಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಹಿರಿಯ ವೈದ್ಯರಾದ ಹೃದ್ರೋಗ ತಜ್ಞ ಡಾ.ನಿತಿನ್ ಗೋಖಲೆ ಹಾಗೂ ಶ್ವಾಸಕೋಶ ತಜ್ಞ ಡಾ.ಜಲೀಲ್ ಪಾರ್ಕರ್ ಅವರು ನಿತಿನ್ ಕುಮಾರ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ನಿಯಮಿತ ಆರೋಗ್ಯ ತಪಾಸಣೆಗೆಂದು 98 ವರ್ಷದ ಹಿರಿಯ ನಟ ಕಳೆದ ತಿಂಗಳು ಸಹ ಆಸ್ಪತ್ರೆಗೆ ದಾಖಲಾಗಿದ್ದರು. 2 ದಿನಗಳ ಬಳಿಕ ಡಿಸ್ಚಾರ್ಜ್ ಆಗಿದ್ದರು.

  • ಮಾಸ್ಕ್ ಧರಿಸುವುದರಿಂದ ಬರುತ್ತೆ ಮಾಸ್ಕ್ ಮೌತ್ ಸಿಂಡ್ರೋಮ್ – ತಡೆಯೋದು ಹೇಗೆ?

    ಮಾಸ್ಕ್ ಧರಿಸುವುದರಿಂದ ಬರುತ್ತೆ ಮಾಸ್ಕ್ ಮೌತ್ ಸಿಂಡ್ರೋಮ್ – ತಡೆಯೋದು ಹೇಗೆ?

    – ಯಾರಿಗೆ ಬರುತ್ತೆ ಈ ಸಿಂಡ್ರೋಮ್?
    – ಗಂಟೆಗೊಮ್ಮೆ 5 ನಿಮಿಷ ವಿರಾಮ ತೆಗೆದುಕೊಳ್ಳಿ

    ಕೊಚ್ಚಿ: ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವಾಗಿ ಹೋಗಿದೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಅಗತ್ಯ ಎಂದು ತಜ್ಞರು ಸಹ ತಿಳಿಸಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ಮಾಸ್ಕ್ ಹಾಕುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಸಹ ತಜ್ಞರು ತಿಳಿಸಿದ್ದಾರೆ. ಹೆಚ್ಚು ಕಾಲ ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತದೆ ಎಂದು ಎಚ್ಚರಿಸಿದ್ದಾರೆ.

    ದೀರ್ಘ ಕಾಲ ಮಾಸ್ಕ್ ಬಳಸುವುದರಿಂದ ದುರ್ವಾಸನೆಯುಂಟಾಗುತ್ತದೆ, ಬಾಯಿ ಒಣಗುತ್ತದೆ, ತಲೆ ನೋವಿನ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಬಳಕೆದಾರರು ಸ್ವಲ್ಪ ಕಾಳಜಿ ವಹಿಸಿದರೆ ಈ ಸಮಸ್ಯೆಗಳು ಬೇಗ ಕಾಡುವುದಿಲ್ಲ ಎಂದಿದ್ದಾರೆ.

    ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಇತರರೊಂದಿಗೆ ಮಾತನಾಡುವಾಗ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಫೇಸ್ ಮಾಸ್ಕ್ ಗಳನ್ನು 8-10 ಗಂಟೆಗಳ ಕಾಲ ಧರಿಸುವ ಅನೇಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರಿದ್ದಾರೆ. ಈ ಸಮಸ್ಯೆಗಳನ್ನು ‘ಮಾಸ್ಕ್ ಮೌತ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾರ್ವಜನಿಕರಲ್ಲಿ ಶೇ.20ಕ್ಕೂ ಹೆಚ್ಚು ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದಂತ ವೈದ್ಯರು ಹೇಳಿದ್ದಾರೆ.

    ಮಾಸ್ಕ್ ಧರಿಸುವುದರಿಂದ ಕಿವಿ ನೋವು, ತಲೆ ನೋವು ಹಾಗೂ ಉಸಿರಾಡಲು ಕಷ್ಟವಾಗುವುದು ಹಾಗೂ ದಂತ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಮಾಸ್ಕ್ ಗಳು ನಮ್ಮ ದೈನಂದಿನ ಜೀವನದ ಭಾಗವಾಗಿವೆ. ಮಾಸ್ಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿಲ್ಲ. ಸೂಕ್ತ ಕ್ರಮಗಳನ್ನು ವಹಿಸಿದರೆ ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವುದನ್ನು ತಪ್ಪಿಸಬಹುದು ಎಂದು ದಂತವೈದ್ಯ ಡಾ.ಮನೋಜ್ ಚಾಂಡಿ ತಿಳಿಸಿದ್ದಾರೆ.

    ಎಂಟು ಗಂಟೆಗೂ ಅಧಿಕ ಕಾಲ ಮಾಸ್ಕ್ ಧರಿಸಿ ಕೆಲಸ ಮಾಡುವ ಹಲವು ಸ್ನೇಹಿತರು ಹಾಗೂ ಸಂಬಂಧಿಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರುತ್ತಿದ್ದಾರೆ. ಇತ್ತೀಚೆಗೆ ನಾನು ನಡೆಸಿದ ಆನ್‍ಲೈನ್ ಅಧ್ಯಯನದ ಪ್ರಕಾರ ಶೇ.16ರಷ್ಟು ಜನ ಕೆಟ್ಟ ವಾಸನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಶೇ.22ರಷ್ಟು ಜನಕ್ಕೆ ಬಾಯಿ ಒಣಗುವ ಅನುಭವವಾಗಿದೆ. ಸುಮಾರು 514 ಜನ ಈ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿದ್ದರೆ, ಸಮಸ್ಯೆ ಎದುರಿಸುತ್ತಿರುವವರ ಶೇಕಡಾವಾರು ಹೆಚ್ಚಾಗುತ್ತಿತ್ತು ಎಂದು ಡಾ.ಮಣಿಕಂಠನ್ ಜಿ.ಆರ್. ತಿಳಿಸಿದ್ದಾರೆ.

    ಸಾಮಾನ್ಯವಾಗಿ ಬಾಯಿಯ ಮೂಲಕ ಉಸಿರಾಡುವ ಜನ ಮತ್ತು ಬಾಯಿಯ ಸ್ವಚ್ಛತೆ ಕಾಪಾಡದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹವರಿಗೆ ಒಸಡುಗಳ ಊರಿಯೂತ ಹಾಗೂ ಹಲ್ಲು ನೋವು ಹೆಚ್ಚಾಗುವ ಸಾಧ್ಯತೆ ಇದೆ. ಬಾಯಿಯ ಮೂಲಕ ಉಸಿರಾಡುವುದರಿಂದ ಒಸಡುಗಳು ಒಣಗಬಹುದು. ಒಣ ಬಾಯಿಯ ಸಂದರ್ಭದಲ್ಲಿ ಲಾಲಾರಸ ಕಡಿಮೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಬಾಯಿಯ ಸಮಸ್ಯೆಗಳು ಉಂಟಾಗುತ್ತವೆ. ಮಾಸ್ಕ್ ಹಾಕಿದಾಗ ಕೆಲವರು ತಮಗೆ ಅರಿವಾಗದಂತೆ ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ.ಮಣಿಕಂಠನ್ ಅಭಿಪ್ರಾಯಪಟ್ಟಿದ್ದಾರೆ.

    ಸಮಸ್ಯೆಗೆ ಪರಿಹಾರವೇನು?
    ಅಂಗಡಿಗಳಲ್ಲಿ ಕೆಲಸ ಮಾಡುವವರು, ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾತ್ರವಲ್ಲ ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರು ಸಹ ಬಾಯಿಯ ಸಮಸ್ಯೆ ಕುರಿತು ದೂರುತ್ತಿದ್ದಾರೆ. ದೈನಂದಿನ ಆಹಾರ ಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೈಡ್ರೆಟೆಡ್ ಹಾಗೂ ಫೈಬರ್‍ಯುಕ್ತ ಆಹಾರ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ. ಅಲ್ಲದೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಒಂದು ಗಂಟೆಗೊಮ್ಮೆ ಮಾಸ್ಕ್ ತೆಗೆದು 5 ನಿಮಿಷಗಳ ವಿರಾಮ ತೆಗೆದುಕೊಳ್ಳಬಹುದು. ಒಬ್ಬರೇ ಇದ್ದಾಗ ಮಾತ್ರ ಈ ರೀತಿ ಮಾಡಬೇಕು ಎಂದು ಡಾ.ಮನೋಜ್ ಸಲಹೆ ನೀಡಿದ್ದಾರೆ.

  • ದಿಢೀರ್‌ ಉಸಿರಾಟದ ಸಮಸ್ಯೆ – ಕೋವಿಡ್‌ 19ಗೆ ಜಿಲ್ಲಾಧಿಕಾರಿ ಬಲಿ

    ದಿಢೀರ್‌ ಉಸಿರಾಟದ ಸಮಸ್ಯೆ – ಕೋವಿಡ್‌ 19ಗೆ ಜಿಲ್ಲಾಧಿಕಾರಿ ಬಲಿ

    ಕೋಲ್ಕತ್ತಾ: ಕೋವಿಡ್‌ 19ಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಐಎಎಸ್‌ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.

    ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷದ ದೇಬದತ್ತ ರೇ ಸೋಮವಾರ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕೊರೊನಾ ಪರೀಕ್ಷೆ ಮಾಡಿಸಿದ್ದರು. ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ ಆಗಿದ್ದರು.

    ಭಾನುವಾರ ಉಸಿರಾಟದ ಸಮಸ್ಯೆ ದಿಢೀರ್‌ ಉಲ್ಬಣವಾಗಿದ್ದರಿಂದ ಅವರನ್ನು ಸೆರಾಂಪೋರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ.

    2010ರ ಬ್ಯಾಚ್‌ ಅಧಿಕಾರಿಯಾಗಿದ್ದ ಇವರು ಪಶ್ಚಿಮ ಬಂಗಾಳ ಮತ್ತು ವಿವಿಧ ರಾಜ್ಯಗಳಿಂದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಡಂಕಣಿಗೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದಾಗ ಸೋಂಕು ತಗುಲಿತ್ತು.

    ದೇಬದತ್ತ ರೇ ಪತಿ ಮತ್ತು ನಾಲ್ಕು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

  • ಪದ್ಮಶ್ರೀ ಸುಕ್ರಜ್ಜಿ ಆಸ್ಪತ್ರೆಗೆ ದಾಖಲು

    ಪದ್ಮಶ್ರೀ ಸುಕ್ರಜ್ಜಿ ಆಸ್ಪತ್ರೆಗೆ ದಾಖಲು

    ಕಾರವಾರ: ಜನಪದ ಕೋಗಿಲೆ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅನಾರೋಗ್ಯದಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅವರನ್ನು ಐಸಿಯು ವಾರ್ಡ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕೋಲಾ ತಾಲೂಕಿನ ತಮ್ಮ ನಿವಾಸದಲ್ಲಿ ಸುಕ್ರಜ್ಜಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    83 ವರ್ಷದ ಸುಕ್ರಿಗೌಡ ಜುಲೈ ತಿಂಗಳಿನಲ್ಲಿ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ನಂತರ ಗುಣಮುಖರಾಗಿದ್ದ ಅವರು ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದರು. ಈಗ ಮತ್ತೆ ಇದೇ ಸಮಸ್ಯೆ ಕಾಣಿಸಿಕೊಂಡಿದ್ದು, ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಅವರನ್ನು ತುರ್ತು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.