Tag: ಉಷಾರಾಣಿ

  • ಕಬಡ್ಡಿ ಕಿತ್ತಾಟ – ಕೋಚ್ ರಮೇಶ್ ವಿರುದ್ಧ ಆಟಗಾರ್ತಿ ಉಷಾರಾಣಿ ದೂರು

    ಕಬಡ್ಡಿ ಕಿತ್ತಾಟ – ಕೋಚ್ ರಮೇಶ್ ವಿರುದ್ಧ ಆಟಗಾರ್ತಿ ಉಷಾರಾಣಿ ದೂರು

    – ಕಾರ್ಯದರ್ಶಿ ರಮೇಶ್ ಸೇರಿ ನಾಲ್ವರಿಂದ ಹಲ್ಲೆ ಆರೋಪ
    – ಪೊಲೀಸ್ ಪ್ರಭಾವ ಬಳಸಿ ದೂರು ನೀಡಿದ್ರಾ?

    ಬೆಂಗಳೂರು: ರಾಜ್ಯ ಕಬಡ್ಡಿ ಅಸೋಸಿಯೇಷನ್ ನಲ್ಲಿನ ಕಿತ್ತಾಟ ಈಗ ಬೀದಿಗೆ ಬಂದಿದೆ. ರಾಷ್ಟ್ರೀಯ ಆಟಗಾರ್ತಿ ಮತ್ತು ಪೇದೆ ಆಗಿರುವ ಉಷಾರಾಣಿ ಅವರು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಬಿ.ಸಿ. ರಮೇಶ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಂಪಂಗಿರಾಮನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬಿ.ಸಿ.ರಮೇಶ್ ಹಾಗೂ ಉಷಾರಾಣಿ ಪರಸ್ಪರ ಕಿತ್ತಾಡಿಕೊಂಡಿದ್ದು ಈಗ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

    ಮಂಗಳವಾರ ಸಂಜೆ ಕಂಠೀರವ ಸ್ಟೇಡಿಯಂನಲ್ಲಿ ಕಬಡ್ಡಿ ಅಸೋಸಿಯೇಷನ್ ಸಭೆ ಇತ್ತು. ಈ ವೇಳೆ ಅಸೋಷಿಯೇಷನ್ ಪ್ರಮುಖರೆಲ್ಲರು ಸೇರಿದ್ದಾಗ ಬಿ.ಸಿ ರಮೇಶ್ ಹಲ್ಲೆ ಮಾಡಿದ್ದಾರೆ ಎಂದು ಉಷಾರಾಣಿ ಆರೋಪಿಸಿದ್ದಾರೆ.

    ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ವಿರುದ್ಧ ಉಷಾರಾಣಿ ದೂರು ನೀಡಿದ್ದಾರೆ. ಸೆಕ್ಷನ್ 354 ಬಿ ಅಡಿ ಪ್ರಕರಣ ದಾಖಲಿಸಿರುವ ಸಂಪಂಗಿರಾಮ ನಗರದ ಠಾಣೆಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಉಷಾರಾಣಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪೊಲೀಸ್ ಪ್ರಭಾವ ಬಳಸಿ ಕೋಚ್ ರಮೇಶ್ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾಳೆ. ಬಿ.ಸಿ. ರಾಮೇಶ್ ಜೊತೆಗೆ ಜಗಳ ತಗೆದು ಉಷಾರಾಣಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆಂದು ಬಿ.ಸಿ.ರಮೇಶ್ ಬೆಂಬಲಿಗ ಶ್ರೀನಿವಾಸ್ ಆರೋಪಿಸಿದ್ದಾರೆ.

    ಸಂಪೂರ್ಣ ಘಟನೆಯ ಸಿಸಿಟಿವಿ ನಮ್ಮ ಬಳಿ ಇದ್ದು ಬಹಿರಂಗ ಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ಕಬಡ್ಡಿ ಅಸೋಸಿಯೇಷನ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಬಿ.ಸಿ.ರಮೇಶ್ ಸ್ಪರ್ಧೆ ಮಾಡಬಾರದೆಂದು ಉಷಾರಾಣಿ ಈ ರೀತಿ ಅವಾಂತರ ಮಾಡಿದ್ದಾಳೆಂದು ಶ್ರೀನಿವಾಸ್ ಆರೋಪಿಸಿದ್ದಾರೆ.

    ಜಗಳಕ್ಕೆ ಕಾರಣ ಏನು?
    ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪಂದ್ಯಾಟಗಳಿಗೆ ತರಬೇತಿ ಶಿಬಿರ ನಡೆಯುತ್ತಿದ್ದು ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಟಗಾರ್ತಿಯರಿಗೆ ಶುಭಕೋರಲು ಶಿಬಿರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಆಗಿರುವ ಉಷಾರಾಣಿ ಅವರು ಅಧಿಕಾರಿಗೆ ಆಟಗಾರ್ತಿಯರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಈ ವಿಚಾರಕ್ಕೆ ಕೋಚ್ ಆಗಿರುವ ರಮೇಶ್ ಆಕ್ಷೇಪ ವ್ಯಕ್ತಪಡಿಸಿ, ನಾವು ಇರುವಾಗ ಅಧಿಕಾರಿಗೆ ಆಟಗಾರ್ತಿಯರನ್ನು ಪರಿಚಯಿಸಿದ್ದು ಸರಿಯಲ್ಲ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆ ಉಷಾರಾಣಿ ಅವರ ಜೊತೆಗಿನ ಮಾತುಕತೆ ಕರೆದಿದ್ದರು. ಈ ವೇಳೆ ಇಬ್ಬರ ಮಾತು ಜೋರಾಗಿ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗುತ್ತಿದೆ.

  • ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    – ಸರ್ಕಾರದಿಂದ ಸನ್ಮಾನ, ಡಿಸಿಎಂ ಅಭಿನಂದನೆ

    ಬೆಂಗಳೂರು: ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು ಆದ್ರೆ ಬೆಳ್ಳಿ ಗೆದ್ದಿದ್ದೇವೆ. ಇಂದು ರಾಜ್ಯ ಸರ್ಕಾರ ನನ್ನನ್ನು ಗೌರವಿಸಿ, ಬಿ ದರ್ಜೆಯ ಪ್ರಮೋಷನ್ ನೀಡಿದೆ ಅಂತ ಏಷ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಉಷಾರಾಣಿ ಹೇಳಿದ್ದಾರೆ.

    ಉಷಾರಾಣಿ ಅವರು ರಾಷ್ಟ್ರಮಟ್ಟದಲ್ಲಿ ಕಬ್ಬಡಿ ತಂಡವನ್ನು ಪ್ರತಿನಿಧಿಸಿ, ಬೆಳ್ಳಿ ಗೆದ್ದಿದ್ದಾರೆ. ಹೀಗಾಗಿ ಸರ್ಕಾರದಿಂದ 15 ಲಕ್ಷ ಚೆಕ್ ನೊಂದಿಗೆ ಸನ್ಮಾನಿತಗೊಂಡರು. ಸನ್ಮಾನದ ನಂತರ ಗೆಲುವಿನ ಖುಷಿ ಹಂಚಿಕೊಂಡ ಅವರು, ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು. ಆದ್ರೆ ಬೆಳ್ಳಿ ಗೆದ್ದಿದ್ದೇವೆ. ರಾಜ್ಯ ಸರ್ಕಾರ ನನ್ನನ್ನು ಗೌರವಿಸಿದ್ದಕ್ಕೆ ಹೆಮ್ಮೆ ಇದೆ. ಹೀಗಾಗಿ ತುಂಬಾ ಖುಷಿಯಾಗುತ್ತಿದೆ. ಬಿ ದರ್ಜೆಯ ಪ್ರಮೋಷನ್ ನೀಡಿದ್ದಾರೆ. ಇಲಾಖೆಯಲ್ಲಿ ಇದೇ ಮೊದಲಿಗೆ ಮುಂಬಡ್ತಿ ಕೊಡುತ್ತಿರುವುದು. ಅದು ನನಗೆ ಸಿಕ್ಕಿರೋದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ ಗೆಲ್ಲುವ ಭರವಸೆ ಇದೆ. ನನ್ನ ಶ್ರಮಕ್ಕೆ ಇಲಾಖೆಯೂ ಸಹಕಾರ ಕೊಟ್ಟಿದೆ ಅಂತ ಅವರು ಹೇಳಿದ್ರು.

    ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಜಿ ನೀಲಮಣಿರಾಜು, ಎಡಿಜಿಪಿ ಭಾಸ್ಕರ್ ರಾವ್ ಮತ್ತು ಕಮಿಷನರ್ ಸುನೀಲ್ ಕುಮಾರ್ ಭಾಗಿಯಾದ್ದರು.  ಇದನ್ನೂ ಓದಿ: ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಡಿಸಿಎಂ ಅಭಿನಂದನೆ:
    ಜಕಾರ್ತ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಪಡೆದಿದೆ. ಮಹಿಳಾ ಕಬ್ಬಡಿ ತಂಡದಲ್ಲಿ ಬೆಂಗಳೂರಿನ ಉಷಾರಾಣಿ ಭಾಗವಹಿಸಿದ್ದರು. ಇವರು ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ನಮ್ಮ ರಾಜ್ಯಕ್ಕೆ ನಮ್ಮ ಇಲಾಖೆಗೆ ಕೀರ್ತಿ ತಂದಿದ್ದಾರೆ. ನಮ್ಮ ಇಲಾಖೆ ಮತ್ತು ಯುವಜನಾ ಕ್ರೀಡಾ ಇಲಾಖೆಯಿಂದ 15 ಲಕ್ಷ ಚೆಕ್ ನೀಡಿದ್ದೇವೆ. ನಮ್ಮ ಪೊಲೀಸ್ ಇಲಾಖೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಂತ ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಹಿಮಾದಾಸ್ ಗೂ 15 ಲಕ್ಷ ರೂ.:
    ಸರ್ಕಾರದಲ್ಲಿ ನಿಯಮಾವಳಿಗಳನ್ನ ಬದಲಾವಣೆ ಮಾಡುತ್ತಿದ್ದೇವೆ. ಉಷಾರಾಣಿ ಅವರಿಗೆ ಬಿ ದರ್ಜೆಗೆ ಪ್ರಮೋಷನ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗಳಿಸಬೇಕು ಅಂತಾ ಆಶಿಸುತ್ತೇನೆ. ಅವರ ತಂದೆ ತಾಯಿ ಮತ್ತು ಕೋಚ್ ಜಗದೀಶ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಬೆಳ್ಳಿ ಪದಕ ಪಡೆದ ಹಿಮಾದಾಸ್ ಅವರಿಗೂ 15 ಲಕ್ಷ ರೂಪಾಯಿ ಬಹುಮಾನ ನೀಡುತ್ತಿದ್ದೇವೆ. ನಮ್ಮ ರಾಜ್ಯದ ಫೋಲ್ಸ್ ಇರ್ಜಾ ಮತ್ತು ರೋಹಣ ಬೋಪಣ್ಣ ಅವ್ರಿಗೂ ಇಲಾಖೆ ವತಿಯಿಂದ ಗೌರವ ಸಮರ್ಪಣೆ ಮಾಡುತ್ತೇವೆ ಅಂತಾ ಪರಮೇಶ್ವರ್ ಅಂದ್ರು. ಇದನ್ನೂ ಓದಿ: 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಇದನ್ನೂ ಓದಿ:  ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

  • ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಬೆಂಗಳೂರು: ಅದೊಂದು ತುಂಬಾ ರೋಮಾಂಚನಕಾರಿ ಪಂದ್ಯ. ಪ್ರತಿಕ್ಷಣಕ್ಕೂ ಎದೆ ಬಡಿತ ಹೆಚ್ಚುತ್ತಿತ್ತು. ಕಳೆದ ಎರಡು ವರ್ಷಗಳಿಂದ ಉತ್ತಮ ಪದರ್ಶನ ನೀಡಿ, ಚಿನ್ನಕ್ಕೆ ಕೊರಳೊಡ್ಡಿದ್ದೇವು. ಆದರೆ ಈ ಬಾರಿ ಬೆಳ್ಳಿ ಪಡೆದಿದ್ದು ಸ್ವಲ್ಪ ಬೇಸರ ತಂದಿದೆ ಎಂದು ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತ ಭಾರತದ ಕಬಡ್ಡಿ ಟೀಂನ ಉಷಾರಾಣಿ ಹೇಳಿದ್ದಾರೆ.

    ಇಂದು ಉಷಾರಾಣಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೊಲೀಸ್ ಪಡೆ, ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಷಾರಾಣಿ ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಸಾಧನೆಯ ಹೆಜ್ಜೆಗಳನ್ನು ಹಂಚಿಕೊಂಡರು.

    ನಾನು ಕ್ರೀಡಾ ಕೋಟಾದಲ್ಲಿ ಪೊಲೀಸ್ ವೃತ್ತಿಗೆ ಸೇರಿದ್ದೆ, ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡಲು ಸಮಯ ಸಿಗುತ್ತಿತ್ತು. ಏಷ್ಯನ್ ಗೇಮ್ಸ್ 2018ರಲ್ಲಿ ಆಡಲು ನನ್ನನ್ನು ಕಬಡ್ಡಿ ಫೆಡರೇಷನ್ ಕರೆಸಿಕೊಂಡಿತ್ತು. ಅಲ್ಲಿ ಕಳೆದ ಆರು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದೇವು. ಗೇಮ್ಸ್‍ನ ಪ್ರತಿ ಪಂದ್ಯವೂ ರೋಮಾಚಕವಾಗಿತ್ತು. ಭಾರತ ಕಬಡ್ಡಿ ಟೀಂ ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಹೀಗಾಗಿ ಈ ಬಾರಿ ಚಿನ್ನದ ಪದಕ ಗೆಲ್ಲುವುದು ಖಚಿತ ಎಂದುಕೊಂಡಿದ್ದೇವು. ಆದರೆ ಬೆಳ್ಳಿಯನ್ನು ಪಡೆಯಬೇಕಾಯಿತು ಎಂದು ಉಷಾ ತಮ್ಮ ಸಾಧನೆಯನ್ನು ತೆರೆದಿಟ್ಟರು. ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಉಷಾರಾಣಿ ಕಬಡ್ಡಿಗೆ ಸೇರುವುದಾಗಿ ಕೇಳಿಕೊಂಡಿದ್ದಳು. ನಾನು ಕೂಡಾ ಕಬಡ್ಡಿ ಆಟಗಾರನಾಗಿದ್ದರಿಂದ ಪುತ್ರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ನನ್ನ ಐದು ಜನ ಮಕ್ಕಳು ಕಬಡ್ಡಿ ಆಟಗಾರರು. ಮಗಳು ಬೆಳ್ಳಿ ಪದಕ ತಂದಿದ್ದು ತುಂಬಾ ಖುಷಿ ತಂದಿದೆ ಎಂದು ಉಷಾರಾಣಿ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    -ಕಬ್ಬಡ್ಡಿಯ ಮಿಂಚು ಕನ್ನಡದ ಕುವರಿ ಉಷಾರಾಣಿ

    ಬೆಂಗಳೂರು: ಪ್ರಸಕ್ತ ಸಾಲಿನ ಏಷ್ಯಾನ್ ಗೇಮ್ಸ್‍ನಲ್ಲಿ ಭಾರತ ಮಹಿಳಾ ಕಬ್ಬಡ್ಡಿ ತಂಡವನ್ನು ಪ್ರತಿನಿಧಿಸಿ ಸಿಲ್ವರ್ ಮೆಡಲ್ ಪಡೆದ ಕನ್ನಡದ ಕುವರಿ ಉಷಾರಾಣಿಯ ಸಂಪೂರ್ಣ ವರದಿ ಇಲ್ಲಿದೆ.

    ಯಶವಂತಪುರ ನಿವಾಸಿ ಉಷಾರಾಣಿ ಅವರು ತಂಡ ಪ್ರತಿನಿಧಿಸಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆ. ನರಸಿಂಹಯ್ಯ ಮತ್ತು ಪುಟ್ಟಮ್ಮನವರ ದಂಪತಿಯ ಎರಡನೇ ಪುತ್ರಿ. ಕಳೆದ 12 ವರ್ಷಗಳಿಂದ ಕಬ್ಬಡ್ಡಿಯಲ್ಲೇ ಜೀವನ ಕಂಡುಕೊಂಡಿರುವ ಉಷಾರಾಣಿ ಕರ್ನಾಟಕದ ತಂಡದ ಪ್ರತಿನಿಧಿಯಾಗಿ ಹಲವಾರು ಪಂದ್ಯಗಳನ್ನ ಆಡಿ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಪ್ರತಿನಿಧಿಸಿದ್ದಾರೆ.

    ಶನಿವಾರ ನಡೆದ ಏಷ್ಯಾನ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ಪಡೆದಿರೋದು ಪೋಷಕರಲ್ಲಿ ಸಂಭ್ರಮ ಮನೆಮಾಡಿದೆ. ವಲ್ರ್ಡ್ ಕಪ್‍ನಲ್ಲಿಯೂ ಮಗಳು ಭಾಗವಹಿಸಿ ಜಯಗಳಿಸಬೇಕೆಂಬ ಎಂಬುವುದು ನಮ್ಮ ಆಸೆ ಎಂದು ತಾಯಿ ಪುಟ್ಟಮ್ಮ ಹೇಳುತ್ತಾರೆ.

    ಉಷಾರಾಣಿಯವರು ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದು, ಇಲಾಖೆಯ ಪ್ರೋತ್ಸಾಹದಿಂದಲೇ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೇ ಉಷಾ ರಾಣಿಯವರಿಗೆ ಇಬ್ಬರು ತಮ್ಮಂದಿರು ಮೂವರು ತಂಗಿಯರಿದ್ದು ಅವರು ಸಹ ಕಬ್ಬಡ್ಡಿ ಆಟಗಾರರಾಗಿದ್ದಾರೆ. ತಮ್ಮ ಅಕ್ಕನ ಪ್ರತಿಭೆಯನ್ನು ಕಂಡು ಸ್ಫೂರ್ತಿಯಾಗಿ ಟೂರ್ನಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಸಿದ್ದಾರೆ. ಆದರೆ ಇಂದು ಅಕ್ಕನ ಸಾಧನೆಯನ್ನ ಕಂಡು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv