Tag: ಉಳ್ಳಾಲ

  • ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಮಂಗಳೂರು: ಉಳ್ಳಾಲ ಕಡಲ ತಡಿಯಲ್ಲಿರುವ ಸೋಮೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನವು ಬ್ರಹ್ಮಕಲಶಕ್ಕೆ ಸಜ್ಜುಗೊಂಡಿದೆ. ದೇವಸ್ಥಾನದ ಸ್ವಯಂಸೇವಕರ ಆರೋಗ್ಯದ ಹಿತದೃಷ್ಟಿಯಿಂದ ದಿವಂಗತ ಯು.ಟಿ.ಫರೀದ್ ಫೌಂಡೇಶನ್ ಸುಮಾರು 300 ಫೇಸ್ ಶೀಲ್ಡ್ ನ್ನು ವಿತರಿಸಿ ಸೌಹಾರ್ಧತೆ ಮೆರೆದಿದೆ. ಬ್ರಹ್ಮಕಲಶವು ಸಾರ್ವಜನಿಕ ಕಾರ್ಯಕ್ರಮವನ್ನು ಬದಿಗೊತ್ತಿ ನಿಯಮಿತವಾಗಿ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ನೆರವೇರಲಿದೆ.

    ಕಾರು ಅಪಘಾತಕ್ಕೊಳಗಾಗಿ ಬೆಂಗಳೂರು ನಿವಾಸದಲ್ಲಿರುವ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಅನುಪಸ್ಥಿತಿಯಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫೇಸ್ ಶೀಲ್ಡ್ ವಿತರಿಸಿದರು.

    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಡ್ವೋಕೇಟ್ ರವೀಂದ್ರನಾಥ ರೈ, ಕಮಿಟಿ ಸದಸ್ಯರಾದ ಚಂದ್ರಶೇಖರ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್ ಮೊದಲಾದವರು ಸ್ವೀಕರಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಮಹಮ್ಮದ್ ಮೋನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಪೂಜಾರಿ, ಯುವಕಾಂಗ್ರೆಸ್ ನ ದೀಪಕ್ ಪಿಲಾರ್, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಸದಾಶಿವ ಉಳ್ಳಾಲ್, ಕಿಶೋರ್ ಶೆಟ್ಟಿ, ಪುರುಷೋತ್ತಮ ಅಂಚನ್, ರಾಜೇಂದ್ರ ಉಳಿಯ, ಪದ್ಮನಾಭ ಕೊಣಾಜೆ, ಸುರೇಶ್ ಭಟ್ನಾಗರ್, ವಿಶಾಲ್ ಕೊಲ್ಯ, ರಾಮ ಸೋಮೇಶ್ವರ, ಅಚ್ಯುತ ಗಟ್ಟಿ, ಚಾಂದಿನಿ ಕೋಟೆಕಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇಂಟರ್ ಲಾಕ್, ಮೆಟ್ಟಿಲು ಉದ್ಘಾಟನೆ: ದೇವಸ್ಥಾನ ವಠಾರದಲ್ಲಿ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಾಣಕ್ಕೆ ದೇವಸ್ಥಾನ ಸಮಿತಿಯು ಶಾಸಕರಾದ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿತ್ತು. ಸೂಕ್ತವಾಗಿ ಸ್ಪಂದಿಸಿದ ಯು.ಟಿ.ಖಾದರ್ ತಮ್ಮ ಶಾಸಕ ನಿಧಿಯಿಂದ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನೆಯು ಈ ಸಂದರ್ಭದಲ್ಲಿ ನಡೆಯಿತು.

  • ಉಳ್ಳಾಲದ ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ : ಉಸ್ತಾದ್ ಬಂಧನ

    ಉಳ್ಳಾಲದ ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ : ಉಸ್ತಾದ್ ಬಂಧನ

    ಮಂಗಳೂರು: ಚೈಲ್ಡ್ ಕೇರ್ ಕೇಂದ್ರದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಒಂದು ಚೈಲ್ಡ್ ಕೇರ್ ಕೇಂದ್ರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕನಿಗೆ ಕೇಂದ್ರದ ಉಸ್ತಾದ್ ನಿಂದಲೇ ಕಿರುಕುಳ ಆಗಿದೆ. ಕಿರುಕುಳ ನೀಡಿದ ಕೋಣಾಜೆ ಮೂಲದ ಆರೋಪಿ ಉಸ್ತಾದ್ ಆಯೂಬ್ ಮೇಲೆ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    ಚೈಲ್ಡ್ ಕೇರ್ ಸೆಂಟರ್‌ಗಳಲ್ಲಿ ತಂದೆ ತಾಯಿಯಿಲ್ಲದ ಅನಾಥ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಅನಾಥರಾಗಿರುವ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಜವಾಬ್ದಾರಿಯುತವಾಗಿ ಚೈಲ್ಡ್ ಕೇರ್ ಸೆಂಟರ್ಗಳು ಆರೈಕೆ ಮಾಡಬೇಕಾಗುತ್ತದೆ.

    ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ  ಖಚಿತ ಮಾಹಿತಿ ಕಮೀಷನರ್ ಶಶಿಕುಮಾರ್ ಅವರಿಗೆ ಬಂದಿತ್ತು. ಇದಕ್ಕಾಗಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಅರಿವು ನೆರವು ಎಂಬ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮದ ಹೆಸರಲ್ಲಿ ಚೈಲ್ಡ್ ಕೇರ್ ಸೆಂಟರಿನ ಮಕ್ಕಳನ್ನು ಕರೆಸಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಮನೋವೈದ್ಯರು, ಮಕ್ಕಳ ವೈದ್ಯರನ್ನು ಬಳಸಿಕೊಳ್ಳಲಾಯಿತು.

    ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗೆಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಲಾಯಿತು. ಒಂದಷ್ಟು ಪ್ರಶ್ನೋತ್ತರಗಳ ಪತ್ರಿಕೆಯನ್ನು ನೀಡಿ ಮಕ್ಕಳಿಂದ ಉತ್ತರ ಪಡೆಯಲಾಯಿತು. ಮಕ್ಕಳಿಂದ ಬಂದ ಉತ್ತರದ ಬಳಿಕ ಚೈಲ್ಡ್ ಕೇರ್ ಸೆಂಟರ್‍ನಲ್ಲಿ ನಡೆಯುತ್ತಿದ್ದ ಕರ್ಮಕಾಂಡಗಳು ಗೊತ್ತಾಗಿದೆ.

    ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಚೈಲ್ಡ್ ಕೇರ್ ಸೆಂಟರ್ ಇದ್ದು ಸುಮಾರು 500 ಮಕ್ಕಳು ಇದ್ದಾರೆ. ಇಡೀ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಈ ರೀತಿಯ  ಸೆಂಟರ್‌ಗಳಿದ್ದು 1,024 ಮಕ್ಕಳಿದ್ದಾರೆ. ಸದ್ಯ ಮಂಗಳೂರು ವ್ಯಾಪ್ತಿಯ ನಿಗಾ ಘಟಕಗಳ ಮಕ್ಕಳ ಪರೀಕ್ಷೆ ನಡೆಸಲಾಗಿದ್ದು, ಕಿರುಕುಳ ನೀಡುತ್ತಿದ್ದ  ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ.

  • ಮಂಗಳೂರಿಗರಿಗೆ ಮತ್ತೆ ಆತಂಕ – ಕೇರಳದಿಂದ ಬಂದ 48 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

    ಮಂಗಳೂರಿಗರಿಗೆ ಮತ್ತೆ ಆತಂಕ – ಕೇರಳದಿಂದ ಬಂದ 48 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

    ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಕೊರೊನಾ ಕೇಸ್ ಹತೋಟಿಗೆ ಬಂದರೂ ಈಗ ಕೇರಳದವರಿಂದ ಕೊರೊನಾ ಮತ್ತೆ ಸ್ಫೋಟಗೊಳ್ಳುತ್ತಿದೆ.

    ಮಂಗಳೂರಿನಲ್ಲಿ 26 ನರ್ಸಿಂಗ್ ಕಾಲೇಜುಗಳಿದ್ದು, ದೇಶದ ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಕೇರಳ ರಾಜ್ಯದವರೇ ಅಧಿಕವಾಗಿದ್ದಾರೆ. ಅನ್ಯ ರಾಜ್ಯದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿ ಜಿಲ್ಲೆಗೆ ಪ್ರವೇಶಿಸಬೇಕೆಂಬ ನಿಯಮವನ್ನು ಜಿಲ್ಲಾಡಳಿತ ಹಾಕಿದೆ. ಆದರೆ ನೆರೆಯ ಕೇರಳ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಸುಳ್ಳು ರಿಪೋರ್ಟ್ ಮಾಡಿಸಿ ಕಾಲೇಜಿಗೆ ಪ್ರವೇಶಿಸುತ್ತಿದ್ದಾರೆ.

    ಇಲಿ ಜ್ವರದ ಪರೀಕ್ಷೆ ಮಾಡಿಸಿ ಅದನ್ನೇ ಕಾಲೇಜಿಗೆ ಕೊಟ್ಟು ಪ್ರವೇಶಾತಿ ಪಡೆಯುತ್ತಿದ್ದಾರೆ. ಹೀಗೆ ಪ್ರವೇಶ ಪಡೆದ ಕೇರಳದ ವಿದ್ಯಾರ್ಥಿಗಳಲ್ಲಿ ಮೊದಲು 6 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇದೀಗ ಪಾಸಿಟಿವ್ ಸಂಖ್ಯೆ 48 ಮಂದಿಗೆ ಏರಿಕೆಯಾಗಿದೆ. ಉಳ್ಳಾಲದ ಆಲಿಯಾ ನರ್ಸಿಂಗ್ ಕಾಲೇಜಿನ 100 ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆಯನ್ನು ಜಿಲ್ಲಾಡಳಿತ ಮಾಡಿದ್ದು, 100 ರಲ್ಲಿ 48 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಇವರೆಲ್ಲರೂ ಕಾಲೇಜಿನ ಹಾಸ್ಟೆಲ್ ನಲ್ಲೇ ಉಳಿದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದು, ಸದ್ಯ ಕಾಲೇಜು ಮತ್ತು ಹಾಸ್ಟೆಲ್ ನ್ನು ಸೀಲ್ ಡೌನ್ ಮಾಡಲಾಗಿದೆ. ಎರಡೂ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ನಿರ್ಬಂಧ ಹೇರಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಹೇಳಿದ್ದಾರೆ.

    ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದ್ದರೂ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಹಣದಾಸೆಗೆ ನಿಯಮ ಮುರಿಯೋದು ಕೂಡ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಬೋಗಸ್ ರಿಪೋರ್ಟ್ ತಂದರೂ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುತ್ತಿದೆ. ಜಿಲ್ಲಾಡಳಿತ ಮತ್ತೆ ನಡೆಸುವ ರ್ಯಾಂಡಮ್ ಟೆಸ್ಟ್ ನಲ್ಲಿ ಕೇರಳದ ವಿದ್ಯಾರ್ಥಿಗಳು ಸಿಕ್ಕಿಬೀಳುತ್ತಿದ್ದು, ಮೊದಲೇ ಕಾಲೇಜು ಆಡಳಿತ ಮಂಡಳಿ ಸರಿಯಾಗಿ ಕೆಲಸ ನಿರ್ವಹಿಸಿದರೆ ಅಪಾಯ ತಪ್ಪಿಸಬಹುದಾಗಿದೆ. ಹೀಗಾಗಿ ನಿಯಮ ಮೀರುವ ಕಾಲೇಜು ಗಳ ವಿರುದ್ಧದ ದ.ಕ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡಿದೆ.

    ಕೇರಳದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಅತೀ ಹೆಚ್ಚಾಗುತ್ತಿದ್ದು, ಕೇರಳದಿಂದ ಬರುವವರನ್ನು ನಿಯಂತ್ರಿಸೋದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಅದರಲ್ಲೂ ಕೇರಳ, ಮಂಗಳೂರಿನ ಜೊತೆ ಶೈಕ್ಷಣಿಕ, ಆರೋಗ್ಯ, ವ್ಯವಹಾರಿಕ ಸಂಪರ್ಕವನ್ನು ಪಡೆಯಲೇಬೇಕಾದ ಅನಿವಾರ್ಯತೆಯೂ ಇದೆ. ಇತ್ತ ಸಂಪೂರ್ಣ ಕಡಿವಾಣ ಹಾಕಲೂ ಆಗದೆ, ಕೊರೊನಾ ನಿಯಂತ್ರಣವನ್ನು ಕೂಡ ಮಾಡಬೇಕಾದ ಸಂದಿಗ್ಧತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೆ.

  • ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

    ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

    – ಕೊರಗಜ್ಜನೇ‌ ಶಿಕ್ಷೆ ನೀಡಲಿ‌ ಎಂದು ಪ್ರಾರ್ಥಿಸಿದ ಭಕ್ತರು

    ಮಂಗಳೂರು: ತುಳುವರ ಆರಾಧ್ಯ ದೈವ ಸ್ವಾಮಿ‌ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯಕ್ಷೇತ್ರದ ಕಾಣಿಕೆ‌ ಹುಂಡಿಗೆ ಕಾಂಡೋಮ್ ಹಾಗೂ ನಿಂದನಾರ್ಹ ಬರಹಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ‌ ನಡೆದಿದೆ.

    ಉಳ್ಳಾಲದ ಬಸ್ ನಿಲ್ದಾಣದ ಬಳಿ ಇರುವ‌ ಸಾರ್ವಜನಿಕ‌ ಶ್ರೀ‌ಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿ ಕ್ಷೇತ್ರದಲ್ಲಿರುವ ಕಾಣಿಕೆ‌ ಹುಂಡಿಯಲ್ಲಿ‌ ಇಂದು ಮುಂಜಾನೆ ಈ ವಿಕೃತಿ ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣದಂದು ಕಾಣಿಕೆ‌ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯುತ್ತದೆ. ಈ ಬಾರಿ ಮಾತ್ರ ತಡವಾಗಿ ಕಾಣಿಕೆ‌ಹುಂಡಿಯನ್ನು ಎಣಿಕೆಗೆ ತೆಗೆಯಲಾಗಿದೆ.

    ಎಣಿಕೆಯ ವೇಳೆ ಕಾಂಡೋಮ್‌ಗಳು ಹಾಗೂ ಸಿಎಂ ಬಿಬಿಸ್ ಯಡಿಯೂರಪ್ಪ‌ ಸೇರಿದಂತೆ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ವಿರೋಪಗೊಳಿಸಿ,ಅವಹೇಳನಕಾರಿ ಬರಹಗಳನ್ನು ಬರೆದು ಕಾಣಿಕೆ‌ ಹುಂಡಿಗೆ ಹಾಕಿದ್ದಾರೆ. ಬಳಕೆ ಮಾಡಿದ ಎರಡು ಕಾಂಡೋಮ್‌ ಹಾಕಿದ್ದ ಕಿಡಿಗೇಡಿಗಳು ಅದರ ಜೊತೆಗೆ ಬೆಂಗಳೂರಿನ ಕೆ.ಆರ್‌. ಐಡಿಯಲ್‌ ನಿಗಮಾಧ್ಯಕ್ಷರಾದ ಎಂ ರುದ್ರೇಶ್‌ ಅವರಿಗೆ ಶುಭಕೋರಿದ ಒಂದು ಪೋಸ್ಟರ್ ಹಾಕಿದ್ದಾರೆ. ಪೋಸ್ಟರ್‌ನಲ್ಲಿರುವ ಸಿಎಂ ಬಿಎಸ್‌ವೈ, ಅವರ ಪುತ್ರ ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರ ಫೋಟೋವನ್ನು ವಿರೂಪಗೊಳಿಸಲಾಗಿದೆ.

    ಇದೇ ಪೋಸ್ಟರ್ ನಲ್ಲಿ ”ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂ ಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾಧಿಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದ್ದು, ಜನರು ಸಿದ್ದರಾಗಬೇಕು” ಎಂದು ಪ್ರಚೋದನಕಾರಿಯಾಗಿ ಬರೆಯಲಾಗಿದೆ.

    ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೊರಗಜ್ಜ, ಗುಳಿಗಜ್ಜನ ಸನ್ನಿಧಿಯಲ್ಲಿ ನೂರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ಈ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ದ ಕ್ಷೇತ್ರದ ಕಾರ್ಣಿಕ ಶಕ್ತಿಗಳಾದ ಗುಳಿಗಜ್ಜ ಮತ್ತು ಕೊರಗಜ್ಜ ಶಿಕ್ಷೆಸಬೇಕು ಎಂದು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.

    ಕೆಲ ದಿನಗಳ‌ ಹಿಂದೆ ಮಂಗಳೂರಿನ ಕೊಟ್ಟಾರದ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿ ಕೂಡಾ ಇದೇ ರೀತಿಯ ಅವಹೇಳನಕಾರಿ ಬರಹದ ಪತ್ರಗಳು ಪತ್ತೆಯಾಗಿದ್ದು, ಅದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ‌ ಬೀಸಿದ್ದಾರೆ.

  • ಕಾಲುವೆಗೆ ಕುಸಿದು ಬಿದ್ದ ಮನೆಯ ಆವರಣ ಗೋಡೆ

    ಕಾಲುವೆಗೆ ಕುಸಿದು ಬಿದ್ದ ಮನೆಯ ಆವರಣ ಗೋಡೆ

    – ಮನೆಗಳಿಗೆ ನುಗ್ಗಿದ ನೀರು

    ಮಂಗಳೂರು: ಜಿಲ್ಲೆಯಲ್ಲಿ ಸುರಿದ ಮಳೆಗೆ ಉಳ್ಳಾಲ ನಗರ ವ್ಯಾಪ್ತಿಯ ಬಂಗೇರ ಲೇನ್‍ನ ಅನೂಪ್ ಎಂಬವರ ಮನೆ ಆವರಣದ ಗೋಡೆ ಕುಸಿದು ಕಾಲುವೆಗೆ ಬಿದ್ದಿದೆ. ಪರಿಣಾಮ ಕಾಲುವೆ ಉಕ್ಕಿ ಹರಿದು ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ.

    ಭಾರೀ ಮಳೆಗೆ ಕಾಲುವೆಯ ಅಂಚಿನಲ್ಲಿರುವ ಅನೂಪ್ ಅವರ ಮನೆ ಆವರಣ ಗೋಡೆ ಕುಸಿದಿದ್ದಲ್ಲದೆ ಮನೆಯೂ ಅಪಾಯದಂಚಿನಲ್ಲಿದೆ. ಕಾಲುವೆಗೆ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ನೀರು ಉಕ್ಕಿ ಹರಿದು ಹತ್ತಿರದ ಮನೆಗಳಿಗೆ ನುಗ್ಗಿದ್ದು ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.

    ಸ್ಥಳದಲ್ಲಿ ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಮತ್ತು ಸ್ಥಳೀಯ ಕೌನ್ಸಿಲರ್ ನಮಿತಾ ಗಟ್ಟಿ ಅವರು ಮೊಕ್ಕಾಂ ಹೂಡಿದ್ದು ಜೆಸಿಬಿ ಯಂತ್ರದ ಮೂಲಕ ಕಾಲುವೆಯಲ್ಲಿ ಬಿದ್ದಿರುವ ಕಲ್ಲುಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

  • ಖೋಡೆಸ್ ರಮ್ ಕುಡಿದ್ರೆ ಕೊರೊನಾ ಓಡುತ್ತೆ- ಉಳ್ಳಾಲ ‘ಕೈ’ ಕೌನ್ಸಿಲರ್ ಬಿಟ್ಟಿ ಸಲಹೆ

    ಖೋಡೆಸ್ ರಮ್ ಕುಡಿದ್ರೆ ಕೊರೊನಾ ಓಡುತ್ತೆ- ಉಳ್ಳಾಲ ‘ಕೈ’ ಕೌನ್ಸಿಲರ್ ಬಿಟ್ಟಿ ಸಲಹೆ

    ಮಂಗಳೂರು: ಖೋಡೆಸ್ ರಮ್ ಕುಡಿದ್ರೆ ಕೊರೊನಾ ವೈರಸ್ ಹತ್ತಿರನೇ ಸುಳಿಯೋದಿಲ್ಲ ಎಂದು ಉಳ್ಳಾಲನಗರ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಹೇಳಿದ ಬಿಟ್ಟಿ ಉಪದೇಶ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದೆ.

    ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ, ಮದ್ಯದ ಬಾಟಲಿ ಹಿಡಿದುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ತಾನು ಕುಡಿಯುವುದಿಲ್ಲ ಎಂದು ಹೇಳಿಕೊಂಡು ಮದ್ಯ ತುಂಬಿದ ಬಾಟಲಿ ಹಿಡಿದು ಜನಸಾಮಾನ್ಯರಿಗೆ ಖೋಡೆಸ್ ರಮ್ ಕುಡಿಯಲು ಸಲಹೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

    ಜನಪ್ರತಿನಿಧಿಯಾಗಿರುವ ರವಿ ಅವರು ಮದ್ಯದ ಬಾಟಲಿ ಹಿಡಿದು ಕೊರೊನಾ ವಾಸಿಯಾಗಲು ಮದ್ಯಪಾನ ಮಾಡಿ ಎಂದು ಪ್ರೇರೇಪಿಸುವುದು ತಪ್ಪು ಸಂದೇಶ ರವಾನಿಸುವುದಲ್ಲದೆ, ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಮಕ್ಕಳು ಈ ವೀಡಿಯೋ ನೋಡಿ ಕೊರೊನಾಕ್ಕೆ ಔಷಧವೆಂದು ಕುಡಿದರೆ ಗತಿ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಖೋಡೆಸ್ ರಮ್ ಗೆ ಕರಿಮೆಣಸು ಪೌಡರ್ ಸೇರಿಸಿ ಕುಡಿಯುವ ಜೊತೆಗೆ ಎರಡು ಮೊಟ್ಟೆಗೆ ಕರಿಮೆಣಸು ಪುಡಿ ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ. ನಾನು ಕುಡಿಯೋದಿಲ್ಲ, ಮೀನು ತಿನ್ನೋದಿಲ್ಲ. ಆದ್ರೆ ನಾನು ಹೇಳುವ ಮಾತು ಅನುಭವದ ಮಾತು. ಹೀಗಾಗಿ ಯಾರೂ ಕೊರೊನಾಗೇ ಹೆದರಬೇಡಿ ಖೋಡೆಸ್ ರಮ್ ಕುಡಿಯಿರಿ ಎಂದಿದ್ದಾರೆ.

    ಈ ಹಿಂದೆ ಇದೇ ಪಾನಕ ರವಿ, ತನ್ನದೇ ಪಕ್ಷದ ಶಾಸಕ ಯು.ಟಿ ಖಾದರ್ ವಿರುದ್ಧ ಮಾತನಾಡಿದ ವೀಡಿಯೋ ವೈರಲ್ ಆಗಿತ್ತು. ರವಿಚಂದ್ರ ಗಟ್ಟಿ ಅವರು ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದು ತೊಕ್ಕೊಟ್ಟಿನಲ್ಲಿ ಪಾನಕ ರವಿ ಎಂದೇ ಹೆಸರಾದವರು. ಕಳೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರವಿ ಜಯ ಗಳಿಸಿದ್ದರು.

    ಜಾಗತಿಕ ಮಹಾಮಾರಿ ಕೊರೊನಾವನ್ನು ತಮಾಷೆಗಾಗಿ ಉಪಯೋಗಿಸಿ ಜನರಿಗೆ ಮದ್ಯಪಾನ ಮಾಡಲು ಜನಪ್ರತಿನಿಧಿಗಳೇ ಪ್ರೇರೇಪಿಸುವುದು ಸರಿಯಲ್ಲ ಎಂದು ಕೆಲವರು ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಉಳ್ಳಾಲದಲ್ಲಿ ಕೊರೊನಾ ಆತಂಕ- ರ‌್ಯಾಂಡಮ್‌ ಟೆಸ್ಟ್‌ಗೆ ನಿರ್ಧಾರ

    ಉಳ್ಳಾಲದಲ್ಲಿ ಕೊರೊನಾ ಆತಂಕ- ರ‌್ಯಾಂಡಮ್‌ ಟೆಸ್ಟ್‌ಗೆ ನಿರ್ಧಾರ

    – ಸಾಮೂಹಿಕ ನಮಾಜ್‍ಗೆ ನಿಷೇಧ

    ಮಂಗಳೂರು: ನಗರದ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ವರದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ರ‌್ಯಾಂಡಮ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.

    ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳ್ಳಾಲದಲ್ಲಿ ಓರ್ವ ವೃದ್ಧ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದು, ಜೊತೆಗೆ ಇಬ್ಬರು ಪೊಲೀಸರು ಸೇರಿ ಐದು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇಲ್ಲಿನ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.

    ಈ ಹಿನ್ನಲೆಯಲ್ಲೇ ರ‌್ಯಾಂಡಮ್ ಟೆಸ್ಟ್ ಗೆ ನಿರ್ಧರಿಸಿದ್ದು ಉಳ್ಳಾಲದ ಮೀನುಗಾರರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಸೇರಿ ಎಲ್ಲರ ರ್ಯಾಂಡಮ್ ಟೆಸ್ಟ್ ನಡೆಸಲಾಗುವುದು. ಇದರೊಂದಿಗೆ ಸೊಂಕು ಹೆಚ್ಚಿರುವ ಪ್ರದೇಶದ ಹಲವು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಡೆಸೋದನ್ನೂ ಸ್ಥಗಿತಗೊಳಿಸಲಾಗಿದೆ.

  • ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    – ಸೂಸೈಡ್ ಪಾಯಿಂಟ್‍ನಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ

    ಮಂಗಳೂರು: ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅವರ ಕಾರು ಕೊನೆಯದಾಗಿ ಪತ್ತೆಯಾದ ಮಂಗಳೂರಿನ ನೇತ್ರಾವತಿ ಸೇತುವೆ ಈಗ ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆಯಾಗಿದ್ದು, ಈವರೆಗೆ ಸುಮಾರು 8 ಜನ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಯುವಕನೊಬ್ಬ ಇಂದು ಮುಂಜಾನೆ ಸೇತುವೆ ಮೇಲೆ ತನ್ನ ಬೈಕ್ ನಿಲ್ಲಿಸಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಉಳ್ಳಾಲಬೈಲು ನಿವಾಸಿ ನವೀಶ್ ಕೊಟ್ಟಾರಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

    ನವೀಶ್ ಕೊಟ್ಟಾರಿ ಇಂದು ಬೆಳಗ್ಗೆ ಸುಮಾರು 6.30 ಗಂಟೆಗೆ ಜಪ್ಪಿನಮೊಗರು ಸಮೀಪ ಇರುವ ನೇತ್ರಾವತಿ ಸೇತುವೆಗೆ ತನ್ನ ಬೈಕ್‍ನಲ್ಲಿ ಬಂದಿದ್ದ. ಕೆಲ ಕಾಲ ಸೇತುವೆಯ ಮೇಲೆ ನಿಂತುಕೊಂಡಿದ್ದ ನವೀಶ್ ಬಳಿಕ ಏಕಾಏಕಿ ಜನ ಸಂಚಾರ ಇದ್ದಾಗಲೇ ಸೇತುವೆಯಿಂದ ನದಿಗೆ ಹಾರಿದ್ದಾರೆ. ತಕ್ಷಣ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನವೀಶ್ ಕೊಟ್ಟಾರಿ ಮಾತ್ರ ಪತ್ತೆಯಾಗಲಿಲ್ಲ.

    ಉಳ್ಳಾಲದ ಕೋಟೆಪುರ ಸಮುದ್ರ ಕಿನಾರೆಯಲ್ಲಿ ಮಧ್ಯಾಹ್ನ ನವೀಶ್ ಕೊಟ್ಟಾರಿಯ ಮೃತದೇಹ ಪತ್ತೆಯಾಗಿದೆ. ತೊಕ್ಕೊಟ್ಟು ಸಮೀಪದ ಕುತ್ತಾರು ಎಂಬಲ್ಲಿ ಶಾಮಿಯಾನದ ಅಂಗಡಿ ನಡೆಸುತ್ತಿದ್ದ ನವೀಶ್ ಕೊಟ್ಟಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಪತ್ನಿಯ ಅಣ್ಣನ ಮಗಳಿಗೆ ಆಸ್ತಿ ಬರೆದಿಟ್ಟು ದಂಪತಿ ನೇಣಿಗೆ ಶರಣು

    ಪತ್ನಿಯ ಅಣ್ಣನ ಮಗಳಿಗೆ ಆಸ್ತಿ ಬರೆದಿಟ್ಟು ದಂಪತಿ ನೇಣಿಗೆ ಶರಣು

    ಮಂಗಳೂರು: ವೃದ್ಧ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ತಾಲೂಕಿನ ಕೋಟೆಕಾರಿನ ಬೀರಿಯಲ್ಲಿ ನಡೆದಿದೆ.

    ದೇವರಾಜ್(74), ವಸಂತಿ(64) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ. ಮೂಲತಃ ಮಂಜೇಶ್ವರದವರಾಗಿರುವ ದೇವರಾಜ್ ಗಾಣಿಗ ಅವರು ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದರು. ಇವರು ಆಕಾಶವಾಣಿಯ ನಿವೃತ್ತ ಉದ್ಯೋಗಿಯಾಗಿದ್ದಾರೆ.

    ಮೃತ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಈ ವಿಚಾರದಿಂದ ಅವರು ಸಾಕಷ್ಟು ನೊಂದಿದ್ದರು. ಅಲ್ಲದೆ ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ದಂಪತಿ ಇದೀಗ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ತಮ್ಮ ಆಸ್ತಿಯನ್ನು ವಸಂತಿ ಅವರ ಅಣ್ಣನ ಮಗಳ ಹೆಸರಿಗೆ ಬರೆದಿದ್ದಾರೆ. ಇನ್ನು ಮುಂದೆ ನಾಯಿಯ ಜವಾಬ್ದಾರಿ ಕೂಡ ಆಕೆಗೆ ವಹಿಸಲಾಗುತ್ತದೆ ಎಂದು ಡೆತ್ ನೋಟಿನಲ್ಲಿ ದಂಪತಿ ಉಲ್ಲೇಖಿಸಿದ್ದಾರೆ.

    ಮೃತ ವಸಂತಿ ಸಹೋದರ ಎಂದಿನಂತೆ ಇಂದು ಕೂಡ ಬೆಳಗ್ಗೆ ಹಾಲು ಕೊಡಲೆಂದು ಬಂದಾಗ ಆತ್ಮಹತ್ಮೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಉಳ್ಳಾಲ ಠಾಣಾ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಕರಾವಳಿಯಲ್ಲಿ ಒಮ್ಮಿಂದೊಮ್ಮೆಲೇ ಕಡಲಿನ ಅಬ್ಬರ ಉಂಟಾಗಿದೆ.

    ಮಂಗಳೂರಿನ ಉಳ್ಳಾಲದ ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿ ಕಡಲು ಅಬ್ಬರಿಸುತ್ತಿದ್ದು, ತೀರ ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಹಲವು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.

    ಮಳೆ ಕಡಿಮೆಯಾಗಿ ತೀರದ ನಿವಾಸಿಗಳು ನಿಟ್ಟುಸಿರು ಬಿಟ್ಟಿರುವಾಗಲೇ ಕಡಲಬ್ಬರ ಆತಂಕಕ್ಕೆ ಕಾರಣವಾಗಿದೆ. ಲಕ್ಷದ್ವೀಪ ಸೇರಿದಂತೆ ಸಮುದ್ರ ಮಧ್ಯೆ ಭಾರೀ ಮಳೆಯಾಗಿರುವುದು ಮತ್ತು ಚಂಡಮಾರುತ ಕಾಣಿಸಿಕೊಂಡ ಕಾರಣ ಕಡಲಿನಬ್ಬರ ದಿಢೀರಾಗಿ ಕಾಣಿಸಿಕೊಂಡಿದೆ. ಚಂಡಮಾರುತ ಪರಿಣಾಮ ಮಳೆಯ ಮುನ್ಸೂಚನೆ ಇತ್ತಾದರೂ, ಕರಾವಳಿಯಲ್ಲಿ ಅಷ್ಟೇನು ಮಳೆ ಬಿದ್ದಿಲ್ಲ. ಬಿಸಿಲಿನ ವಾತಾವರಣ ಇದ್ದರೂ, ತೀರದಲ್ಲಿ ಕಡಲಬ್ಬರ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv