Tag: ಉಳುಮೆ

  • ನೇಗಿಲಿಗೆ ಕುದುರೆ ಕಟ್ಟಿ ಉಳುಮೆ ಮಾಡಿದ ರೈತ

    ನೇಗಿಲಿಗೆ ಕುದುರೆ ಕಟ್ಟಿ ಉಳುಮೆ ಮಾಡಿದ ರೈತ

    ಮುಂಬೈ: ಕೃಷಿ ಕೆಲಸಕ್ಕೆ ಹಲವು ಯಂತ್ರಗಳು ಬಂದಿದೆ. ಆದರೂ ರೈತ ಮಾತ್ರ ಸಾಂಪ್ರದಾಯಿಕ ಕೆಲವು ಸಾಧನಗಳನ್ನು ಬಳಸಿಕೊಂಡು ಉಳುಮೆ ಮಾಡುತ್ತಾನೆ. ಇಲ್ಲೊಬ್ಬ ರೈತ ಹಲವು ವರ್ಷಗಳಿಂದ ಸಾಕುತ್ತಿದ್ದ ಕುದುರೆಗಳಿಂದ ಹೊಲ ಉಳುಮೆ ತರಬೇತಿ ಕೊಟ್ಟು ಕೃಷಿ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾನೆ.

    ಹೊಲ ಉಳುಮೆ ಮಾಡಲು ಸಾಮಾನ್ಯವಾಗಿ ಎತ್ತು, ಎಮ್ಮೆ, ಕೋಣಗಳ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ರೈತರೇ ನೇಗಿಲಿಗೆ ಹೆಗಲು ಕೊಟ್ಟು ಉಳುಮೆ ಮಾಡುತ್ತಾರೆ. ಮಹಾರಾಷ್ಟ್ರದ ರೈತ ಎರಡು ಕುದುರೆಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಇದರ ಹಿಂದೆ ಒಂದು ಒಂದು ಕಾರಣವೂ ಇದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್

    ಟ್ರ್ಯಾಕ್ಟರ್ ತಂದು ಹೊಲ ಉಳುಮೆ ಮಾಡಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ರೈತ ತನ್ನ ಸಾಕು ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ನೀಡಿದ್ದಾನೆ. ಅಮರಾವತಿ ಜಿಲ್ಲೆಯ ವಾಸೀಂ ತಾಲೂಕಿನ ಶೆಲ್ಗಾಂವ್ ಘುಗೆ ಗ್ರಾಮದ ಕೃಷಿಕ ಬಾಬುರಾವ್ ಸೂರ್ಯಭಾನ್ ಧಂಗರ್ ಕೃಷಿ ಕಾರ್ಯಕ್ಕೆ ಕುದುರೆ ಬಳಕೆ ಮಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಈ ಕುರಿತಾಗಿ ಮಾತನಾಡಿದ ರೈತ ಬಾಬುರಾವ್, ಟ್ರ್ಯಾಕ್ಟರ್ ಬಳಸಿ ಕೃಷಿ ಮಾಡುವುದು ತುಂಬಾ ದುಬಾರಿ ಹಾಗೂ ಸಮಯಕ್ಕೆ ಸರಿಯಾಗಿ ಟ್ರ್ಯಾಕ್ಟರೂ ಸಿಗುವುದಿಲ್ಲ. ರಾಜ ಮತ್ತು ತುಳಸಾ ಎಂಬ ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ಕೊಟ್ಟು ಅವುಗಳನ್ನು ಬಳಕೆ ಮಾಡುತ್ತಿದ್ದೇನೆ. ಕೆಲ ವರ್ಷಗಳ ಹಿಂದೆ ಈ ಕುದುರೆಗಳನ್ನು ಖರೀದಿಸಿ ಸಾಕುತ್ತಿದ್ದೆನೆ ಎಂದು ಹೇಳಿದ್ದಾರೆ.

  • ರೈತರಿಗೆ ಉಚಿತ ಟ್ರ್ಯಾಕ್ಟರ್ ಸೌಲಭ್ಯ ಕಲ್ಪಿಸಿದ ಕೆಂಪರಾಜು

    ರೈತರಿಗೆ ಉಚಿತ ಟ್ರ್ಯಾಕ್ಟರ್ ಸೌಲಭ್ಯ ಕಲ್ಪಿಸಿದ ಕೆಂಪರಾಜು

    ಚಿಕ್ಕಬಳ್ಳಾಪುರ: ಕೊರೊನಾ ನಮ್ಮೆಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಅನ್ನದಾತರ ಬದುಕು ಸಹ ಆಯೋಮಯವಾಗಿದ್ದು, ಅರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಮುಂಗಾರು ಹಂಗಾಮಿನ ಆರಂಭದಲ್ಲಿ ಜಮೀನು ಉಳುಮೆ ಮಾಡಿ, ಹದ ಮಾಡಿ, ಬಿತ್ತನೆ ಕಾರ್ಯ ಮಾಡೋಕೆ ದುಡ್ಡಿಲ್ಲದೆ ಹಲವು ರೈತರು ಪರದಾಡುವಂತಾಗಿತ್ತು. ಕೆಲವು ರೈತರು ಬಿತ್ತೆನೆ ಮಾಡದೆ ಬೀಳು ಬಿಟ್ಟ ಉದಾಹರಣೆಗಳು ಸಹ ಇವೆ. ಇದನ್ನು ಮನಗಂಡ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಸಮಾಜಸೇವಕ, ರಾಜಕಾರಣಿ ಕೆಂಪರಾಜು ರೈತರು ಜಮೀನು ಉಳುಮೆ ಮಾಡಿಕೊಳ್ಳಲು ರೈತ ಮಿತ್ರ ನೆರವು ಯೋಜನೆ ಜಾರಿ ಮಾಡಿದ್ದಾರೆ.

    ಕಳೆದ 20 ತಿಂಗಳಿಂದ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಮಾಜಸೇವೆ ಮಾಡುವ ಮೂಲಕ ರಾಜಕಾರಣಕ್ಕಿಳಿದಿರುವ ಕೆಂಪರಾಜು, ಕೊರೊನಾ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ರೈತರಿಗೆ ರೈತ ಮಿತ್ರ ನೆರವು ಯೋಜನೆ ಜಾರಿ ಮಾಡಿದ್ದಾರೆ. ಎರಡು ಎಕೆರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ತಮ್ಮ ಜಮೀನು ಉಳುಮೆ ಮಾಡಿಕೊಳ್ಳಲು ಉಚಿತ ಟ್ರ್ಯಾಕ್ಟರ್ ಸೇವೆ ಆರಂಭಿಸಿದ್ದಾರೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಶುರು ಮಾಡಬೇಕಿದೆ. ಆದರೆ ಬಹಳಷ್ಟು ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಬೆಳೆ ಬೆಳೆಯೋದು ಬೇಡ ಅಂತಿದ್ದಾರೆ. ಇದನ್ನು ಅರಿತು ರೈತ ಸಮುದಾಯಕ್ಕೆ ಕೈಲಾದ ಸಹಾಯಹಸ್ತ ಚಾಚಬೇಕೆಂದು ತೀರ್ಮಾನಿಸಿ, ಈ ಯೋಜನೆ ಜಾರಿ ಮಾಡಿದ್ದೇನೆ. ಒಂದು ಎಕರೆ ಉಳುಮೆ ಕಾರ್ಯ ಮಾಡಿಸೋಕೆ ಕನಿಷ್ಟ 1,000 ದಿಂದ 1,500 ರೂ. ಖರ್ಚಾಗಲಿದೆ. ಎರಡು ಎಕರೆ ಎಂದರೂ 3000 ರೂ. ಬೇಕಾಗಬಹುದು ಇದನ್ನು ಭರಿಸಲು ಸಹ ಕೆಲ ರೈತರು ಶಕ್ತರಾಗಿಲ್ಲ. ಹೀಗಾಗಿ ಕೈಲಾದ ಸೇವೆ ಮಾಡಲು ಮುಂದಾಗಿದ್ದೇನೆ ಎಂದು ಕೆಂಪರಾಜು ತಿಳಿಸಿದ್ದಾರೆ.

    ಆ್ಯಪ್ ಮೂಲಕ ನೋಂದಣಿ
    ರೈತ ಮಿತ್ರ ನೆರವು ಯೋಜನೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕೆ.ಆರ್.ನೆರವುಗಳಿಗೆ ಸ್ವಾಗತ ಎಂಬ ವಿಶೇಷ ಆ್ಯಪ್ ರೂಪಿಸಿದ್ದು, ಈ ಆ್ಯಪ್ ಮೂಲಕವೇ ಕ್ಷೇತ್ರದ ರೈತರು ತಮ್ಮ ಹೆಸರು, ಊರು, ಮೊಬೈಲ್ ನಂಬರ್, ನೋಂದಾಯಿಸಿ ಉಚಿತ ಯೋಜನೆಯ ಸೌಲಭ್ಯ ಪಡೆಯಬಹುದು. ಗೌರಿಬಿದನೂರು ಕ್ಷೇತ್ರದಲ್ಲಿ 31 ಗ್ರಾಮಪಂಚಾಯತಿಗಳಿದ್ದು, ಪ್ರತಿ ಗ್ರಾಮಪಂಚಾಯಿತಿಗೆ ಎರಡು ಟ್ರ್ಯಾಕ್ಟರ್ ಎಂಬಂತೆ 62 ಟ್ರ್ಯಾಕ್ಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ನೋಂದಾಯಿತ ರೈತರ ಜಮೀನು ಉಳುಮೆ ಕಾರ್ಯವನ್ನು ನಡೆಯುವಂತೆ ನೋಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರನ್ನು ಕೆಲಸಕ್ಕೆ ನೇಮಿಸಲಾಗಿದೆ.

    ಈ ಯೋಜನೆಗೆ ನಿಯೋಜಿಸಲಾಗಿರುವ 62 ಟ್ರ್ಯಾಕ್ಟರ್ ಗಳನ್ನು ಸಹ ಕ್ಷೇತ್ರದ ರೈತರಿಂದಲೇ 3 ತಿಂಗಳವರೆಗೆ ಬಾಡಿಗೆಗೆ ಪಡೆಯಲಾಗಿದ್ದು, ಟ್ರ್ಯಾಕ್ಟರ್ ಗಳಿಗೆ ಬಾಡಿಗೆ ಹಣ, ಚಾಲಕನಿಗೆ ಸಂಬಳ, ಡೀಸೆಲ್ ಸೌಲಭ್ಯವನ್ನು ಕೆಂಪರಾಜು ಅವರೇ ವಹಿಸಿಕೊಂಡಿದ್ದಾರೆ.

  • ಹಡಿಲು ಗದ್ದೆಯ ಉಳುಮೆ- ಟ್ರ್ಯಾಕ್ಟರ್ ಚಲಾಯಿಸಿ ಉದ್ಘಾಟಿಸಿದ ಭರತ್ ಶೆಟ್ಟಿ

    ಹಡಿಲು ಗದ್ದೆಯ ಉಳುಮೆ- ಟ್ರ್ಯಾಕ್ಟರ್ ಚಲಾಯಿಸಿ ಉದ್ಘಾಟಿಸಿದ ಭರತ್ ಶೆಟ್ಟಿ

    ಮಂಗಳೂರು: ನಗರದ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನದ ಅಂಗವಾಗಿ ಶಾಸಕ ಡಾ.ವೈ.ಭರತ್ ಶೆಟ್ಟಿ ಬಡಗ ಉಳೇಪಾಡಿ ತಮ್ಮಯ್ಯ ಪೂಜಾರಿಯವರ ಜಮೀನಿನಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.

    ಕೃಷಿ ಇಲಾಖೆಯ ಮೂಲಕ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಈಗಾಗಲೇ ಶಾಸಕರು ಈ ಕುರಿತು ವಿವಿಧ ಪಂಚಾಯಿತಿಗಳಲ್ಲಿ ಸರಣಿ ಸಭೆಗಳ ಮೂಲಕ ಜಾಗೃತಿ ಮತ್ತು ಯೋಜನೆಯ ಪ್ರಯೋಜನವನ್ನು ತಿಳಿಸುತ್ತಿದ್ದಾರೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ, ಸ್ಥಳೀಯ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುರುಪುರ, ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ರೈ, ಸಿಎಚ್‍ಎಸ್‍ಸಿ ಕೇಂದ್ರದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

  • ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ದಾವಣಗೆರೆ: ಶಾಸಕ ರೇಣುಕಾಚಾರ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಂಚಿನ ವೇಗದಲ್ಲಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನತೆಯ ಮನ ಗೆದ್ದಿದ್ದಾರೆ. ಅದೇ ರೀತಿ ಇದೀಗ ಉಳುಮೆ ಮಾಡಿ, ಬೀಜ ಬಿತ್ತುವ ಮೂಲಕ ತಮ್ಮ ಅಭಿಮಾನಿಯನ್ನು ಸಂತಸಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ, ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬಿತ್ತನೆ ಕಾರ್ಯ ಮಾಡುತ್ತಿದ್ದರು, ಇವರು ಉಳುಮೆ ಮಾಡುತ್ತಿದ್ದ ಹೊಲದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಎಂ.ಪಿ.ರೇಣುಕಚಾರ್ಯ, ಜಮೀನಿಗೆ ಭೇಟಿ ನೀಡಿ ಅವರ ಅಪೇಕ್ಷೆಯಂತೆ ಜೊತೆಗೂಡಿ ಬೇಸಾಯ ಮಾಡಿ, ಬೀಜ ಬಿತ್ತುವ ಮೂಲಕ ಉತ್ಸಾಹ ತುಂಬಿದರು.

    ಶಾಸಕ ರೇಣುಕಾಚಾರ್ಯ ಮತ್ತೊಂದು ಮನಮುಟ್ಟುವ ಕೆಲಸ ಮಾಡಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈಗಾಗಲೇ ಹಲವು ದಿನಗಳಿಂದ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ಸೋಂಕಿತರ ಸೇವೆ ಮಾಡುತ್ತಿರುವ ರೇಣುಕಾಚಾರ್ಯ, ಕೇರ್ ಸೆಂಟರ್ ನಲ್ಲಿದ್ದ ಇಬ್ಬರು ಬಾಲಕಿಯರ ಹುಟ್ಟುಹಬ್ಬ ಆಚರಿಸಿದ್ದಾರೆ. ತಂದೆ, ತಾಯಿ ಊರಲ್ಲಿದ್ದರಿಂದ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಯಾರೂ ಇಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ. ಬಾಲಕಿಯರಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಕೋರಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಚೆನ್ನೈ: ಕೊರೊನಾ ಲಾಕ್‍ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಆದರೆ ತಮಿಳು ನಟಿಯೊಬ್ಬರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡೋದ್ರಲಿ ಬ್ಯುಸಿಯಾಗಿದ್ದಾರೆ.

    ತಮಿಳು ನಟಿ ಕೀರ್ತಿ ಪಾಂಡಿಯನ್ ಟ್ರ್ಯಾಕ್ಟರ್ ಓಡಿಸುತ್ತಾ ಹೊಲ ಉಳುಮೆ ಮಾಡುತ್ತಾ ತಮ್ಮ ಲಾಕ್‍ಡೌನ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಾ ಲಾಕ್‍ಡೌನ್ ಸಮಯ ಕಳೆಯುತ್ತಿರುವ ನಟಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೃಷಿಯನ್ನು ಪ್ರಾರಂಭಿಸಿದ್ದೇನೆ ಎಂದು ಕ್ಯಾಪ್ಷನ್ ಜೊತೆಗೆ ಕ್ವಾರಂಟೈನ್, ಫಾರ್‍ಮಿಂಗ್ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

    ಮಲಯಾಳಂನಿಂದ ತಮಿಳಿಗೆ ರಿಮೇಕ್ ಆಗುತ್ತಿರುವ ಹೆಲನ್ ಸಿನಿಮಾದಲ್ಲಿ ಕೀರ್ತಿ ಪಾಂಡಿಯನ್ ಸದ್ಯ ನಟಿಸುತ್ತಿದ್ದಾರೆ. ಕೀರ್ತಿ ತಂದೆ ಅರುಣ್ ಪಾಂಡಿಯನ್ ಕೂಡ ನಟರಾಗಿದ್ದು, ಸಾಕಷ್ಟು ತಮಿಳಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

    ಕೀರ್ತಿ ಅವರು ಪಕ್ಕಾ ಹಳ್ಳಿ ಹುಡುಗಿಯಂತೆ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಕೀರ್ತಿ ಅವರ ಹಳ್ಳಿ ಹುಡುಗಿ ಅವತಾರಕ್ಕೆ ಮನಸೋತಿದ್ದಾರೆ.

    https://www.instagram.com/p/B_FS5CTnDDg/

  • ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಸಚಿವ ಸಿ.ಟಿ ರವಿ

    ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಸಚಿವ ಸಿ.ಟಿ ರವಿ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ಸಚಿವರು ಹಾಗೂ ಶಾಸಕರೂ ಕ್ಷೇತ್ರದಲ್ಲೇ ಇಲ್ಲ. ಈ ಮಧ್ಯೆ ಕ್ಷೇತ್ರದ ಅಭಿವೃದ್ಧಿ ಜೊತೆ, ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಚಿಕ್ಕಮಗಳೂರು ಉಸ್ತುವಾರಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಬಿಡುವಿನ ವೇಳೆಯಲ್ಲಿ ಅಪ್ಪಟ ರೈತರಾಗಿದ್ದಾರೆ.

    ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ಟ್ರ್ಯಾಕ್ಟರ್ ಏರಿ ಸಿಟಿ ರವಿ ಅವರು 1 ಗಂಟೆಗಳ ಕಾಲ ಭೂಮಿಯನ್ನ ಹದ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಭೂಮಿ ಕೂಡ ಹಸಿಯಾಗಿರುವುದರಿಂದ ತಾವೇ ಟ್ರ್ಯಾಕ್ಟರ್ ಏರಿ ಭೂಮಿಯನ್ನ ಹದ ಮಾಡುವ ಮೂಲಕ ಸಚಿವರು ಉಳುಮೆ ಮಾಡಿದ್ದಾರೆ.

    ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆಗಾಗಾ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಸಿ.ಟಿ ರವಿ ಅವರು ನಗರದ ನಿರಾಶ್ರಿತರು ಹಾಗೂ ಬಡವರಿಗೆ ಆಹಾರದ ಸಾಮಗ್ರಿ ಕೂಡ ವಿತರಿಸಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿಗೂ ಭೇಟಿ ನೀಡಿ, ಕೊರೊನಾ ನಿಯಂತ್ರಣಕ್ಕೆ ಹಾಗೂ ಈ ಮಹಾಮಾರಿ ಜಿಲ್ಲೆಗೆ ಬಾರದಂತೆ ಸೂಕ್ತ ಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಎತ್ತುಗಳು ಸಿಗದ್ದಕ್ಕೆ ಬೈಕ್ ಸಹಾಯದಿಂದ ಉಳುಮೆ

    ಎತ್ತುಗಳು ಸಿಗದ್ದಕ್ಕೆ ಬೈಕ್ ಸಹಾಯದಿಂದ ಉಳುಮೆ

    ದಾವಣಗೆರೆ: ಒಂದೆಡೆ ಜಿಲ್ಲೆಯಲ್ಲಿ ಮಳೆ ಸಮರ್ಪಕವಾಗಿ ಬಾರದೇ ರೈತರು ಕಂಗೆಟ್ಟಿದ್ದರೆ, ಇನ್ನೊಂದೆಡೆ ಉಳುಮೆ ಮಾಡಲು ಎತ್ತುಗಳು ಸಿಗದೇ ಕಂಗಾಲಾಗಿದ್ದು ಬೈಕ್ ಸಹಾಯದಿಂದ ಉಳುಮೆ ಮಾಡಲು ಮುಂದಾಗಿದ್ದಾರೆ.

    ಭೂಮಿ ಹದವಿದ್ದಾಗಲೇ ಉಳುಮೆ ಮಾಡಬೇಕು. ಆದರೆ, ಎತ್ತುಗಳಿಲ್ಲದ ರೈತರಿಗೆ ಈ ಸಂದರ್ಭದಲ್ಲಿ ಉಳುಮೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಅಲ್ಲದೆ, ಸೀಸನ್‍ನಲ್ಲಿ ಬಾಡಿಗೆಗೆ ಎತ್ತುಗಳೂ ಸಹ ಸಿಗುವುದಿಲ್ಲ. ಹೇಗಾದರೂ ಮಾಡಿ ಉಳುಮೆ ಮಾಡಬೇಕಲ್ಲ ಎಂದು ಚಿಂತಿಸಿದ ರೈತರು ಬೈಕ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತರೊಬ್ಬರು ಎತ್ತುಗಳು ಸಿಗದೇ ಕಂಗಾಲಾಗಿದ್ದು, ಹೀಗಾಗಿ ಮನೆಯಲ್ಲಿದ್ದ ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದಾರೆ. ರೈತ ನೀಲಪ್ಪ ಅವರು ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದು, ಹೊಲ ಉಳುಮೆ ಮಾಡಲು ಎತ್ತುಗಳು ಸಿಗದೇ ಬೈಕ್‍ಗೆ ಮೊರೆ ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಒಬ್ಬರಿಗೆ ಉಳುಮೆ ಮಾಡಲು ಸಾಧ್ಯವಾಗದ ಕಾರಣ ನೀಲಪ್ಪ ಅವರ ಮಗ ಸಹ ತಂದೆಗೆ ಸಹಾಯ ಮಾಡಿದ್ದಾರೆ. ಎತ್ತು ಬಾಡಿಗೆ ಪಡೆದು ಉಳುಮೆ ಮಾಡಲು ಸುಮಾರು ಎರಡು ಸಾವಿರ ರೂ.ಹಣ ಬೇಕು. ಅಲ್ಲದೆ, ಈ ಸಂದರ್ಭದಲ್ಲಿ ಎತ್ತುಗಳೂ ಸಹ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಹೀಗಾಗಿ ಬೈಕ್ ಮೂಲಕ ಉಳುಮೆ ಮಾಡುತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

    ಚನ್ನಗಿರಿ ತಾಲೂಕು ಬರಕ್ಕೆ ಸಿಲುಕಿದ್ದು ಸ್ವಲ್ಪ ಮಳೆಯಾದಾಗಲೂ ಸಹ ಎಲ್ಲರೂ ಉಳುಮೆ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಎತ್ತುಗಳು ಸಿಗುವುದಿಲ್ಲ. ನಮಗೆ ಕೇವಲ ಅರ್ಧ ಎಕರೆ ಜಮೀನು ಇದ್ದು, ಹೀಗಾಗಿ ಬೈಕ್ ಮೂಲಕವೇ ಉಳುಮೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

  • ಎರಡೆಕರೆ ಬಿತ್ತನೆಗೆ ಕೇವಲ 200 ರೂ. ಖರ್ಚು – ಕೋಲಾರ ರೈತನ ಹೈಟೆಕ್ ಐಡಿಯಾ

    ಎರಡೆಕರೆ ಬಿತ್ತನೆಗೆ ಕೇವಲ 200 ರೂ. ಖರ್ಚು – ಕೋಲಾರ ರೈತನ ಹೈಟೆಕ್ ಐಡಿಯಾ

    ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಎದುರಾದ ಎತ್ತುಗಳ ಕೊರತೆ ನೀಗಿಸಲು ಕೋಲಾರದ ರೈತರು ಕಾಳು ಬಿತ್ತನೆಗೆ ತಮ್ಮ ದ್ವಿಚಕ್ರ ವಾಹನಗಳನ್ನೆ ಬಳಸಿಕೊಂಡು ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.

    ತಂತ್ರಜ್ಞಾನ ಬಳಸಿ ಕೃಷಿಯಲ್ಲಿನ ವೆಚ್ಚ ತಗ್ಗಿಸಲು ಕೋಲಾರ ತಾಲೂಕು ತೊಟ್ಲಿ ರೈತ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನ ಬಳಸಿ ಮಾಡಿರುವ ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಅವರ ಶ್ರಮ ಹಾಗೂ ಹೋರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಹಾಗೂ ಬಿತ್ತನೆ ನಂತರದ ಚಟುವಟಿಕೆಗಳಿಗೆ ತನ್ನ ಹೀರೋ ಸ್ಪ್ಲೆಂಡರ್ ಬೈಕ್‍ನ್ನು ಬಳಕೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಕಡಿಮೆ ಸಮಯ, ಕಡಿಮೆ ಖರ್ಚು ಹಿನ್ನೆಲೆ ಹೊಸ ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿರುವ ಕೋಲಾರದ ರೈತ ರಮೇಶ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಾಳು ಬಿತ್ತನೆ ಹಾಗೂ ಬಿತ್ತನೆ ನಂತರ ಮಣ್ಣು ಹಸನು ಮಾಡಲು ತನ್ನ ದ್ವಿಚಕ್ರ ವಾಹನ ಬಳಸಿಕೊಂಡು ಯಶಸ್ವಿಯಾಗಿದ್ದಾರೆ.

    ಕೇವಲ 100 ರೂಪಾಯಿಗೆ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡುವ ಸುಲಭ ವಿಧಾನವನ್ನ ಕಂಡುಕೊಂಡಿದ್ದಾರೆ. ತೀವ್ರ ಮಳೆ ಕೊರತೆ, ಸತತ ಬರಗಾಲ, ಜಾನುವಾರುಗಳ ಪಾಲನೆ ಕಷ್ಟವಾಗಿರುವುದರಿಂದ ರೈತರು ಈ ನೂತನ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ದ್ವಿದಳ ಧಾನ್ಯಗಳಾದ ರಾಗಿ, ಜೋಳ, ಅವರೆ ತೊಗರಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಜಿಲ್ಲೆಯ ರೈತರು ಕೂಡ ಇದೆ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಸತತ ಬರಗಾಲ, ಮಳೆ ಕೊರತೆಯಿಂದ ಕೃಷಿಯನ್ನೇ ಬಿಡುವ ಹಂತಕ್ಕೆ ತಲುಪಿರುವ ಜಿಲ್ಲೆಯ ರೈತರಿಗೆ ರೈತ ರಮೇಶ್ ಮಾಡಿರುವ ಬೈಕ್ ಉಳುಮೆ ಕಾರ್ಯ ಉತ್ತೇಜನ ನೀಡಿದೆ. ಈ ಹೊಸ ಪ್ರಯೋಗಕ್ಕೆ ಸದ್ಯ ಜಿಲ್ಲೆಯ ರೈತರು ಫಿದಾ ಆಗಿದ್ದಾರೆ.

  • ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯ: ಜಮೀನಿನಲ್ಲಿ ಉಳುಮೆ ಮಾಡುವಾಗ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    58 ವರ್ಷದ ಬೋರೆಗೌಡ ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ಮಯೋಗಿ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿತ್ತು. ಹೀಗಾಗಿ ಬೋರೆಗೌಡ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗನಿಗೆ ಬಿತ್ತನೆ ಬೀಜ ತರಲು ಹೇಳಿ, ಜಮೀನಲ್ಲಿ ಉಳುಮೆ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದಿದ್ದಾರೆ.

    ಈ ವೇಳೆ ಅಕ್ಕಪಕ್ಕದ ಜಮೀನಲ್ಲಿ ಕೆಲಸ ಮಾಡ್ತಿದ್ದ ರೈತರು ಬರುವಷ್ಟರಲ್ಲಿ ರೈತ ಬೋರೇಗೌಡ ಸಾವನ್ನಪ್ಪಿದ್ದಾರೆ. ಒಂದು ಕಡೆ ಉಳುಮೆಗೆಂದು ಕಟ್ಟಿದ್ದ ಎತ್ತುಗಳು, ಮತ್ತೊಂದು ಕಡೆ ಹೃದಯಾಘಾತದಿಂದ ಜಮೀನಲ್ಲೇ ಮೃತಪಟ್ಟ ರೈತನ ದೃಶ್ಯ ಎಂತಹವರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು.