Tag: ಉಲ್ಲಂಘನೆ

  • ಲಾಕ್‍ಡೌನ್ ನಡುವೆಯೂ ಕಚೇರಿಯಲ್ಲೇ ಹುಟ್ಟಹಬ್ಬ ಪಾರ್ಟಿ ಆಯೋಜಿಸಿದ ದಾವಣಗೆರೆ ಮೇಯರ್

    ಲಾಕ್‍ಡೌನ್ ನಡುವೆಯೂ ಕಚೇರಿಯಲ್ಲೇ ಹುಟ್ಟಹಬ್ಬ ಪಾರ್ಟಿ ಆಯೋಜಿಸಿದ ದಾವಣಗೆರೆ ಮೇಯರ್

    ದಾವಣಗೆರೆ: ಲಾಕ್‍ಡೌನ್ ನಡುವೆಯೂ ದಾವಣಗೆರೆ ಪಾಲಿಕೆ ಮೇಯರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.

    ದಾವಣಗೆರೆಯ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಇಂದು ಲಾಕ್‍ಡೌನ್ ನಡುವೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಲಾಕ್‍ಡೌನ್ ನಡುವೆಯೂ ಪಾಲಿಕೆ ಅವರಣಕ್ಕೆ ಬಂದಿರುವ ಮೇಯರ್ ಅಜಯ್ ಕುಮಾರ್ ಅಭಿಮಾನಿಗಳು ಹಾಗೂ ಪಾಲಿಕೆ ಸದಸ್ಯರು ಗುಂಪು ಗುಂಪಾಗಿ ಬಂದು ಮೇಯರ್ ಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಸಂಡೇ ಲಾಕ್‍ಡೌನ್ ವೇಳೆ ಹುಟ್ಟುಹಬ್ಬ ಬೇಕಿತ್ತಾ ಎಂದು ವಿಡಿಯೋ ಮಾಡಿ ಪ್ರಶ್ನಿಸಿದವರಿಗೇ ವ್ಯಂಗ್ಯವಾಗಿ ಉತ್ತರ ನೀಡಿರುವ ಮೇಯರ್ ಇನ್ನೂ ಹೈಲೈಟ್ ಮಾಡಲಿ ಬಿಡಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ದಾವಣಗೆರೆ ಎಸ್‍ಪಿ, ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್ ವಿರುದ್ಧ ತಕ್ಷಣವೇ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ಹೇಳಿದ್ದಾರೆ.

  • ಕ್ವಾರಂಟೈನ್ ನಿಯಮ ಉಲ್ಲಂಘನೆ- ರಾಯಚೂರಿನಲ್ಲಿ 30 ಜನರ ವಿರುದ್ಧ ಕ್ರಮ

    ಕ್ವಾರಂಟೈನ್ ನಿಯಮ ಉಲ್ಲಂಘನೆ- ರಾಯಚೂರಿನಲ್ಲಿ 30 ಜನರ ವಿರುದ್ಧ ಕ್ರಮ

    ರಾಯಚೂರು: ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ 30 ಜನರ ವಿರುದ್ಧ ರಾಯಚೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ. 30 ಜನರ ವಿರುದ್ಧ 29 ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿ ಕ್ರಮಕೈಗೊಳ್ಳಲಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

    ಹೋಂ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಬಂದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 29 ಪ್ರಕರಣ ದಾಖಲಾಗಿವೆ. ಸರ್ಕಾರಿ ಆದೇಶ ಪಾಲನೆ ಮಾಡದ ಜನರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪೊಲೀಸರು ಈ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೂ ಜನ ಮನೆಯಿಂದ ಹೊರಬಂದು ಓಡಾಡಿದ್ದಾರೆ. ಹೀಗಾಗಿ ಜೂನ್ 17ರಂದು 1 ಪ್ರಕರಣ, ಜೂನ್ 18ರಂದು 6, ಜೂನ್ 19ರಂದು 9, ಜೂನ್ 20ರಂದು 13 ಪ್ರಕರಣ ದಾಖಲಿಸಲಾಗಿದೆ.

    ಕ್ವಾರಂಟೈನ್ ನಲ್ಲಿ ಇರುವವರು ಹೊರ ಬರದೆ ಕ್ವಾರಂಟೈನ್‍ನಲ್ಲಿಯೇ ಇದ್ದು ತಮ್ಮ ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಬೇಕು. ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕರಲ್ಲಿ ಕೋರಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ 429 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸದ್ಯ 2451 ಜನ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ, 180 ಜನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. ಮನೆಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಜನ ಕೈಗೆ ಮುದ್ರೆ ಹಾಕಿದರೂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುತ್ತಿರುವುದು ಗಮನಕ್ಕೆ ಬಂದು ಅಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.

  • ಲಾಕ್‍ಡೌನ್ ಉಲ್ಲಂಘಿಸಿದವರ ಕೈಗೆ ಸ್ಲೇಟ್ ಕೊಟ್ಟು ಜಾಗೃತಿ

    ಲಾಕ್‍ಡೌನ್ ಉಲ್ಲಂಘಿಸಿದವರ ಕೈಗೆ ಸ್ಲೇಟ್ ಕೊಟ್ಟು ಜಾಗೃತಿ

    ದಾವಣಗೆರೆ: ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ತಿರುಗುತ್ತಿದ್ದವರನ್ನು ಎಳೆತಂದ ದಾವಣಗೆರೆ ಪೊಲೀಸರು ಅವರ ಕೈಗೆ ಸ್ಲೇಟ್ ಕೊಟ್ಟು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

    ಕೊರೊನಾ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಮನವಿ ಮಾಡುತ್ತಿದ್ದಾರೆ. ಹೀಗಾದರೂ ದಾವಣಗೆರೆಯಲ್ಲಿ ನೂರಕ್ಕೂ ಅಧಿಕ ಮಂದಿ ಹೊರಗೆ ಬಂದು ಕಾನೂನು ಉಲ್ಲಂಘಿಸಿದವರನ್ನು ವಶಕ್ಕೆ ಪಡೆದಿದ್ದಾರೆ.

    ಹೊರಗಡೆ ಬಂದು ಸುಖಾಸುಮ್ಮನೆ ತಿರುಗುತ್ತಿದ್ದ ಜನರನ್ನು ಹೆಡೆಮುರಿ ಕಟ್ಟಿ ಕ್ವಾರಂಟೈನ್ ಘಟಕಕ್ಕೆ ಎಳೆತಂದ ಪೊಲೀಸ್ ಇಲಾಖೆ ಅವರ ಕೈಗೆ ಜಾಗೃತಿ ಬರಹಗಳನ್ನು ಬರೆದಿರುವ ಸ್ಲೇಟ್ ಕೊಟ್ಟು ಜಾಗೃತಿ ಮೂಡಿಸಿದ್ದಾರೆ. “ಮತ್ತೆ ಈ ರೀತಿ ಕಾನೂನು ಉಲ್ಲಂಘಿಸಲ್ಲ, ಕ್ಷಮಿಸಿ ನಾನು ಲಾಕ್‍ಡೌನ್ ಉಲ್ಲಂಘಿಸಿದ್ದೇನೆ” ಎಂಬುದಾಗಿ ಸ್ಲೇಟ್‍ಗಳ ಮೇಲೆ ಬರೆಯಲಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಎಸ್ಪಿ ಹನುಮಂತರಾಯ, ಎಷ್ಟೇ ಜಾಗೃತಿ ಮೂಡಿಸಿದರೂ ಜನ ಹೊರ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅನಗತ್ಯ ತಿರುಗಾಟ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಿದ್ದೇವೆ. ಈಗಾಗಲೇ ಸುಮ್ಮನೆ ಹೊರ ಬಂದ 590 ವಾಹನಗಳನ್ನು ಸೀಜ್ ಮಾಡಿದ್ದೇವೆ. ಅಗತ್ಯ ವಸ್ತು ಕೊಳ್ಳುವವರಿಗೆ ಮಾತ್ರ ಬಿಟ್ಟಿದ್ದೇವೆ. ಉಳಿದವರಿಗೆ ಇದು ಎಚ್ಚರಿಕೆ ಗಂಟೆ ಎಂದು ವಾರ್ನಿಂಗ್ ನೀಡಿದ್ದಾರೆ.

  • ‘ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ’: ಪೊಲೀಸರಿಂದ ಹಣೆಬರಹ

    ‘ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ’: ಪೊಲೀಸರಿಂದ ಹಣೆಬರಹ

    ಭೋಪಾಲ್: ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ ಕೂಲಿ ಕಾರ್ಮಿಕನಿಗೆ ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ ಎಂದು ಪೊಲೀಸರು ಹಣೆಯ ಮೇಲೆ ಬರೆದಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

    ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಪ್ರಧಾನಿ ಮೋದಿ ಅವರು, ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಲಾಕ್‍ಡೌನ್ ಪರಿಣಾಮದಿಂದ ಸಾರಿಗೆ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಇದರಿಂದ ಬೇರೆ ರಾಜ್ಯಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರಿಗೆ ತೊಂದರೆಯಾಗಿದೆ. ತಮ್ಮ ತಮ್ಮ ಊರಿಗೆ ವಾಪಸ್ ಬರಲು ಕೂಲಿ ಕಾರ್ಮಿಕರು ಕಷ್ಟಪಡುತ್ತಿದ್ದು, ಕೆಲವರು ನಡೆದುಕೊಂಡೇ ತಮ್ಮ ಸ್ವಗ್ರಾಮಗಳಿಗೆ ಬರುತ್ತಿದ್ದಾರೆ.

    ಸಾರಿಗೆ ಸಂಚಾರದ ವ್ಯವಸ್ಥೆಯಿಲ್ಲದೆ ಹೀಗೆ ತಮ್ಮ ಸ್ವಗ್ರಾಮಕ್ಕೆ ನಡೆದುಕೊಂಡ ಬಂದ ಓರ್ವ ಕಾರ್ಮಿಕನಿಗೆ ಚ್ಚತರ್‍ಪುರ್‍ನ ಗೋರಿಹಾರ್ ಪ್ರದೇಶದಲ್ಲಿ ಅಲ್ಲಿನ ಲೇಡಿ ಸಬ್ ಇನ್‍ಸ್ಪೆಕ್ಟರ್ ಒಬ್ಬರು ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ ಎಂದು ಹಣೆಯ ಮೇಲೆ ಬರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲ ಕಡೇ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಲಿ ಕಾರ್ಮಿಕರು ಕಷ್ಟದಲ್ಲಿರುವ ಸಮಯದಲ್ಲಿ ಪೊಲೀಸರು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಸಾರ್ವಜಕನಿಕರು ಕಿಡಿಕಾರಿದ್ದಾರೆ.

    ದೇಶದಲ್ಲಿ ಹೆಚ್ಚಿನ ರಾಜ್ಯಗಳು ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತೀವೆ. ಅವರಿಗೆ ತಮ್ಮ ಸ್ವಂತ ಗ್ರಾಮಕ್ಕೆ ತೆರಳಲು ಸಂಚಾರಿ ವ್ಯವಸ್ಥೆ ಮಾಡುತ್ತಿಲ್ಲ. ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇದರ ಜೊತೆಗೆ ಕೊರೊನಾ ಭೀತಿಯಿಂದ ಹೆದರಿರುವ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಲು ಕಷ್ಟಪಡುತ್ತಿದ್ದಾರೆ.

    ಇದರ ನಡುವೆ ಕೆಲ ಕಾರ್ಮಿಕರು ಕಷ್ಟವಾದರು ಪರವಾಗಿಲ್ಲ ನಾವು ನಡೆದುಕೊಂಡೇ ಹೋಗುತ್ತೇವೆ ಎಂದು ಬರುತ್ತಿದ್ದಾರೆ. ಆದರೆ ಕೊರೊನಾ ಭಯದಿಂದ ಅವರನ್ನು ರಾಜ್ಯಗಳು ಒಳಗೆ ಬಿಟ್ಟುಕೊಳ್ಳಲು ಹಿಂದೆ ಮುಂದೆ ನೋಡುತ್ತಿವೆ. ಇದರ ಜೊತೆಗೆ ನಡೆದುಕೊಂಡ ಬರುತ್ತಿರುವ ಕಾರ್ಮಿಕರನ್ನು ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಪೊಲೀಸರು ಬೆನ್ನಟ್ಟುತ್ತಿದ್ದಾರೆ.