Tag: ಉರಗತಜ್ಞ

  • ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ರಾಯಚೂರು: ಉಕ್ರೇನ್‍ನಲ್ಲಿ ನಾನಾ ಕಷ್ಟ ಎದುರಿಸಿ ದೇಶಕ್ಕೆ ಮರಳಿ ಬಂದ ವಿದ್ಯಾರ್ಥಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾನೆ.

    ಬಿಸಿಲನಾಡು ರಾಯಚೂರಿನ ಮೆಡಿಕಲ್ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್, ಉಕ್ರೇನ್ ರಷ್ಯಾ ಯುದ್ದ ಹಿನ್ನೆಲೆ ಮೈನಸ್ 10 ಡಿಗ್ರಿಯಲ್ಲಿ ಗಂಟೆಗಟ್ಟಲೆ ಕಾದು ಉಕ್ರೇನ್ ಗಡಿದಾಟಿ ಭಾರತಕ್ಕೆ ಬಂದಿದ್ದಾನೆ. ರಾಯಚೂರಿಗೆ ಬಂದ ವಿದ್ಯಾರ್ಥಿ ಈಗ ಸಮಾಜಸೇವೆ ಮಡಲು ಮುಂದಾಗಿದ್ದಾನೆ.

    ಹಾವುಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ತಂದೆ ಉರಗತಜ್ಞ ಅಫ್ಸರ್ ಹುಸೇನ್ ಕಳೆದ 32 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ವಿವಿಧ ಬಗೆಯ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಅಸರ್ ಹುಸೇನ್ ಈಗ ತಾನೂ ಸಹ ಹಾವುಗಳ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಯಾರೇ ಫೋನ್ ಕರೆ ಮಾಡಿದರು ಅವರ ಮನೆ, ಕಚೇರಿಗೆ ತೆರಳಿ ಹಾವುಗಳ ಹಿಡಿದು ಕಾಡಿಗೆ ಬಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!

    ಉಕ್ರೇನ್‍ನ ಇವ್ಯಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅಸರ್ ಹುಸೇನ್ ದೇಶಕ್ಕೆ ಮರಳಿರುವುದರಿಂದ ಮುಂದಿನ ಓದಿನ ಬಗ್ಗೆ ಗೊಂದಲದಲ್ಲಿದ್ದಾನೆ. ತಾನು ಸುರಕ್ಷಿತವಾಗಿ ಬಂದ ಹಾಗೇ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

    ಅಸರ್ ಇದ್ದ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ರಷ್ಯಾ ದಾಳಿ ಜೋರಾಗಿತ್ತು. ಸ್ಫೋಟದ ಶಬ್ಧಕ್ಕೆ ಹೆದರಿ ಬಂಕರ್‍ಗೆ ಓಡುತ್ತಿದ್ದದ್ದನ್ನ ನೆನೆದು ಇನ್ನೂ ಉಳಿದವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ. ಉಕ್ರೇನ್ ಗಡಿಯಲ್ಲಿ ಕುಡಿಯಲು ಊಟ, ನೀರು ಸಿಗದೆ ಕಷ್ಟ ಅನುಭವಿಸಿದ್ದು. ಗಡಿಗೆ ತಲುಪಲು 18 ಕಿ.ಮೀ ನಡೆದುಕೊಂಡೆ ಹೋದ ಅನುಭವ ಹಂಚಿಕೊಂಡಿದ್ದಾನೆ. ಇನ್ನೂ ಮಗ ಮನೆಗೆ ಸುರಕ್ಷಿತವಾಗಿ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಂದೆ ಉರಗತಜ್ಞ ತಮ್ಮ ಜೊತೆಯೆ ಮಗನನ್ನು ಹಾವುಗಳ ರಕ್ಷಣಾ ಕಾರ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

    ಒಟ್ಟಿನಲ್ಲಿ, ಯುದ್ದ ಭೂಮಿಯಿಂದ ಜೀವ ಉಳಿಸಿಕೊಂಡು ಬಂದವನು ಈಗ ಹಾವುಗಳ ರಕ್ಷಣೆ ಹಾಗೂ ಹಾವುಗಳಿಂದ ಜನರ ರಕ್ಷಣೆಗೆ ಮುಂದಾಗಿದ್ದಾನೆ.

  • ಲಾಕ್‍ಡೌನ್‍ನಲ್ಲಿ ರೈತ ಕಳ್ಕೊಂಡಿದ್ದ 2 ಲಕ್ಷ ರೂ. ಚೆಕ್ ಹಿಂದಿರುಗಿಸಿದ ಉರಗತಜ್ಞ

    ಲಾಕ್‍ಡೌನ್‍ನಲ್ಲಿ ರೈತ ಕಳ್ಕೊಂಡಿದ್ದ 2 ಲಕ್ಷ ರೂ. ಚೆಕ್ ಹಿಂದಿರುಗಿಸಿದ ಉರಗತಜ್ಞ

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ರೈತರೊಬ್ಬರು ಕಳೆದುಕೊಂಡಿದ್ದ 2 ಲಕ್ಷ ರೂ. ಚೆಕ್ ಅನ್ನು ಬೆಂಗಳೂರು ಹೊರವಲಯ ನೆಲಮಂಗಲದ ಸ್ನೇಕ್ ಲೋಕೇಶ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

    ನೆಲಮಂಗಲದ ರೈತ ಮಹದೇವಪ್ಪ ಅವರು 2 ಲಕ್ಷ ರೂ. ಚೆಕ್ ಅನ್ನು ಕಳೆದುಕೊಂಡಿದ್ದರು. ಇದೇ ಸಮಯದಲ್ಲಿ ಸ್ನೇಕ್ ಲೋಕೇಶ್ ಅವರು ಹಾವೊಂದನ್ನು ರಕ್ಷಣೆ ಮಾಡಿ, ಮನೆಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಸೊಂಡೆಕುಪ್ಪ ಗ್ರಾಮದ ಬಳಿ ಸ್ನೇಕ್ ಲೋಕೇಶ್ ತಮ್ಮ ಬೈಕ್‍ನಲ್ಲಿ ಬರುವಾಗ ದಾರಿ ಮಧ್ಯೆ 2 ಲಕ್ಷ ಮೌಲ್ಯದ ಚೆಕ್ ದೊರೆತ್ತಿದೆ. ಈ ಚೆಕ್ ಹಿಂಬದಿಯಲ್ಲಿ ಇದ್ದ ಪೋನ್ ನಂಬರ್‍ಗೆ ಕರೆಮಾಡಿ ವಿಷಯ ತಿಳಿಸಿ, ಪೊಲೀಸರಿಂದ ಮಹದೇವಪ್ಪ ಅವರಿಗೆ ಚೆಕ್ ಹಸ್ತಾಂತರಿಸಿ ಸಹಾಯ ಮಾಡಿದ್ದಾರೆ.

    ಸ್ನೇಕ್ ಲೋಕೇಶ್ ಕಾರ್ಯಕ್ಕೆ ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಹಾಮಾರಿ ಕೊರೊನಾ ವೈರಸ್‍ನ ಲಾಕ್‍ಡೌನ್ ವೇಳೆ ಜನರು ಹಸಿವು ಹಾಗೂ ನಾನಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಲೋಕೇಶ್ ಸಿಕ್ಕ ಚೆಕ್ ಅನ್ನು ದುರುಪಯೋಗ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಅದನ್ನು ಹಿಂದಿರಿಗಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

  • ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಉಡುಪಿ: ಆಹಾರ ಅರಸುತ್ತಾ ಮನೆಯ ಟೆರೇಸ್ ಹತ್ತಿದ್ದ ಕೆರೆ ಹಾವೊಂದು ಗೇಟಿನ ಮೇಲೆ ಬಿದ್ದು ಹೊಟ್ಟೆ ಸೀಳಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

    ನಗರದ ಮಣಿಪಾಲದ ರಾಘವೇಂದ್ರ ನಾಯ್ಕ್ ಅವರ ಮನೆಗೆ ಇಲಿಯ ಬೆನ್ನತ್ತಿದ ಕೆರೆ ಹಾವು ಬಂದಿತ್ತು. ಇಲಿಯು ಮನೆಯ ಟೆರೇಸ್ ಏರಿ ಹಾರಿ ಹೋಗಿದೆ. ಇಲಿ ಬೆನ್ನಟ್ಟಿದ್ದ ಹಾವು ರಪ್ಪಂತ ಕೆಳಗೆ ಬಿದ್ದಿದೆ. ಗೇಟ್ ಮೇಲೆ ಬಿದ್ದ ಪರಿಣಾಮ ಹಾವಿನ ಹೊಟ್ಟೆ ಎರಡು ಕಡೆ ಸೀಳಿದೆ. ಚೂಪಾದ ರಾಡ್ ಹಾವಿನ ಹೊಟ್ಟೆಗೆ ಹೊಕ್ಕಿದೆ. ಹಾವು ಮೇಲೆ ಎದ್ದು ಬರದಂತಾಗಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಹಸಿದ ಗಂಡು ಕೆರೆ ಹಾವು ವಿಲ ವಿಲ ಒದ್ದಾಡಿತು. ಹಾವಿನ ನೋವು ಕಂಡ ಮನೆಯವರ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿದ್ದಾರೆ. ಗುರುರಾಜ್ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಟಿಕ್ ಹಿಡಿದು ಹಾವನ್ನು ರಕ್ಷಿಸುವ ಪ್ರಯತ್ನ ಶುರು ಮಾಡಿದರು. ನೋವಿನಿಂದ ಅರೆ ಜೀವವಾಗಿದ್ದ ಹಾವು ಗುರುರಾಜ್ ಅವರಿಗೆ ನಾಲ್ಕೈದು ಬಾರಿ ಕಚ್ಚಿದೆ. ಕೆರೆ ಹಾವಿನಲ್ಲಿ ವಿಷ ಇಲ್ಲದೆ ಇರುವುದರಿಂದ ಗುರುರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವನ್ನು ಮನೆಗೆ ತಂದಿರುವ ಗುರುರಾಜ್ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್, ಬೇರೆ ವಿಷಪೂರಿತ ಹಾವಾಗಿದ್ದರೆ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿತ್ತು. ಕೆರೆ ಹಾವಾಗಿದ್ದರಿಂದ ನೇರವಾಗಿ ಕೈಯಿಂದ ಹಿಡಿದೆ. ಚಿಕಿತ್ಸೆ ನಂತರ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.

    ಕೆರೆ ಹಾವೆಂಬ ತಾತ್ಸಾರ ತೋರದೆ, ಅದರ ರಕ್ಷಣೆಗೆ ಕಾಳಜಿ ತೋರಿದ ರಾಘವೇಂದ್ರ ನಾಯ್ಕ್ ಅವರ ಮನೆಮಂದಿಯ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ದನದ ಕೊಟ್ಟಿಗೆಯಲ್ಲಿದ್ದ 14 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ

    ದನದ ಕೊಟ್ಟಿಗೆಯಲ್ಲಿದ್ದ 14 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ದನ ಕೊಟ್ಟಿಗೆಯಲ್ಲಿ ವಾಸವಿದ್ದ 14 ಅಡಿಯ ಬೃಹತ್ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ತಿಪ್ಪಯ್ಯ ಎಂಬುವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ ಹಸುವನ್ನ ಹೊರಗೆ ಕಟ್ಟಲು ತರುವಾಗ ಕೊಟ್ಟಿಗೆಯಲ್ಲಿ ಕಾಳಿಂಗ ಬುಸುಗುಟ್ಟುವ ಶಬ್ದ ಕೇಳಿ ಹುಡುಕಿದ್ದಾರೆ. ಈ ವೇಳೆ ಬೃಹತ್ ಸರ್ಪವನ್ನ ನೋಡಿ ಭಯದಿಂದ ಹೊರ ಓಡಿದ್ದು ಕೂಡಲೇ ಸ್ಥಳಿಯ ಉರಗತಜ್ಞ ಸ್ನೇಕ್ ಹರೀಂದ್ರ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಕಾಳಿಂಗವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಎರಡು ಬಾರಿ ಹರೀಂದ್ರ ಮೇಲೆ ಬಾಯ್ತೆರೆದು ದಾಳಿಗೆ ಮುಂದಾಗಿದೆ. ಆದರೆ, ಒಂದೂವರೆ ಗಂಟೆಯ ಬಳಿಕ ಕಾಳಿಂಗ ಸರ್ಪವನ್ನು ಸೆರೆಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಯಡಿಯೂರು ಗ್ರಾಮದ ಮನೆಯಲ್ಲಿ ಎರಡು ವಿಷಕಾರಿ ಹಾವುಗಳು ಪತ್ತೆಯಾಗಿವೆ.

    ಯಡಿಯೂರು ಗ್ರಾಮದ ಇಂದ್ರಕುಮಾರ್ ಎಂಬವರ ಮನೆಯಲ್ಲಿ ತಡರಾತ್ರಿ ಎರಡು ಜಾತಿಯ ವಿಷಪೂರಿತ ಹಾವುಗಳು ಕಾಣಿಸಿಕೊಂಡಿವೆ. ಒಂದು ನಾಗರಹಾವಿಗಿದ್ದರೆ, ಇನ್ನೊಂದು ಕೊಳಕುಮಂಡಲದ ಹಾವು. ತಡರಾತ್ರಿ ಹಾವುಗಳು ಪರಸ್ಪರ ಬುಸುಗುಡುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಅದೃಷ್ಟವಶಾತ್ ಹಾವುಗಳಿಂದ ಯಾರಿಗೂ ಯಾವುದೇ ಅಪಾಯ ಆಗಿಲ್ಲ.

    ಕೂಡಲೇ ಉರಗತಜ್ಞ ಬಾಬು ಎಂಬವರಿಗೆ ಮನೆಯಲ್ಲಿ ಬೇರೆ ಬೇರೆ ಜಾತಿಯ ಹಾವುಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಬು ಎರಡು ಹಾವುಗಳನ್ನು ಜಾಗರೂಕತೆಯಿಂದ ರಕ್ಷಿಸಿದ್ದಾರೆ. ಬಳಿಕ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

    ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

    ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಕಾರಿನಲ್ಲೇ ಪ್ರಯಾಣಿಸಿದ್ದ ಹಾವನ್ನು ಉರಗ ತಜ್ಞರಾದ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಶಿಕಾರಿಪುರ ತಾಲೂಕಿನ ಬಿದರಕೊಪ್ಪದ ಶಿವಕುಮಾರ್ ನಾಯ್ಕ ಎಂಬವರು ತಮ್ಮ ತೋಟದಿಂದ ಬಾಳೆಗೊನೆ ಹಾಕಿಕೊಂಡು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಶಿವಮೊಗ್ಗಕ್ಕೆ ತಲುಪುತ್ತಿದ್ದಂತೆ ಕಾರಿನಲ್ಲಿ ಹಾವು ಅವಿತುಗೊಂಡಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಉರಗ ತಜ್ಞರಿಗೆ ವಿಷಯ ಮುಟ್ಟಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕಿರಣ್ ಎಂಬವರು, ಮೆಕ್ಯಾನಿಕ್ ಸಹಾಯದಿಂದ ಕಾರಿನ ಡ್ಯಾಶ್ ಬೋರ್ಡ್ ಹಾಗೂ ಸೀಟನ್ನು ತೆಗೆದು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವನ್ನು ಹತ್ತಿರದ ಕಾಡಿನಲ್ಲಿ ಬಿಟ್ಟಿದ್ದು, ಕಾಡಿನಲ್ಲಿ ಕಂಡು ಬರುವ ಕ್ಯಾಟ್ ಸ್ನೇಕ್ ಇದಾಗಿದೆ ಎಂದು ಕಿರಣ್ ತಿಳಿಸಿದ್ದಾರೆ.

  • ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪ ರಕ್ಷಣೆ

    ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪ ರಕ್ಷಣೆ

    ಚಿಕ್ಕಮಗಳೂರು: ಮನೆಯ ಗೋದಾಮಿನಲ್ಲಿ ಅಡಗಿ ಕೂತಿದ್ದ 10 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಉರಗ ತಜ್ಞರ ಸಹಾಯದಿಂದ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಮೇಗರಮಕ್ಕಿ ಗ್ರಾಮದ ಪೃಥ್ವಿ ಎಂಬವರ ಮನೆಯಲ್ಲಿ ಈ ಬೃಹತ್ ಕಾಳಿಂಗ ಸೆರೆಯಾಗಿದೆ. ಹಾವನ್ನು ಕಂಡ ಮನೆ ಮಂದಿ ಗೋದಾಮಿಗೆ ಬೀಗ ಹಾಕಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಕಾಳಿಂಗ ಸರ್ಪದ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಹಾಗೂ ಉರಗ ತಜ್ಞ ಹರೀಂದ್ರ ಅವರು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಸದ್ಯ ರಕ್ಷಣೆ ಮಾಡಿರುವ ಕಾಳಿಂಗ ಸರ್ಪವನ್ನು ಹತ್ತಿರ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಹಾವನ್ನು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಆತ್ರಾಡಿಯ ಶ್ರೀನಿವಾಸ ಆಚಾರ್ಯ ಎಂಬವರ ಮನೆಯ ಬಳಿ ಇರುವ 40 ಅಡಿ ಬಾವಿಗೆ ತಿಂಗಳ ಹಿಂದೆ ನಾಗರಹಾವೊಂದು ಬಿದ್ದಿತ್ತು. ಬೆಳಗ್ಗೆ ನೀರು ಸೇದುವಾಗ ಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಬಾವಿಯಿಂದ ಹೊರ ಹೋಗಬಹುದು ಎಂದು ಕಾದು ಕಾದು ಸುಸ್ತಾದ ಮನೆಯವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿ ಕರೆಸಿದ್ದಾರೆ.

    ಮಾಹಿತಿ ತಿಳಿದು ಇಂದು ಸ್ಥಳಕ್ಕೆ ಬಂದು ಸನಿಲ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು, ಒಂದು ಕೈಯ್ಯಲ್ಲಿ ಹಗ್ಗ, ಮತ್ತೊಂದು ಕೈಯ್ಯಲ್ಲಿ ಕಬ್ಬಿಣದ ಸ್ಟಿಕ್ ಹಿಡಿದು ಬಾವಿಗೆ ಇಳಿದ್ದಾರೆ. ಈ ವೇಳೆ ನೀರಿನಲ್ಲಿ ಈಜಾಡುತ್ತಾ ಹೆಡೆಯೆತ್ತಿ ಬುಸುಗುಡುತ್ತಿದ್ದ ಹಾವನ್ನು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ವೇಳೆ ಹಾವು ಮೂರು ನಾಲ್ಕು ಬಾರಿ ಗುರುರಾಜ್ ಸನಿಲ್ ಅವರಿಗೆ ಕಚ್ಚಲು ಮುಂದಾಗಿದೆ. ಯಾವುದನ್ನು ಲೆಕ್ಕಿಸದ ಗುರುರಾಜ್ ಕೊನೆಗೂ ಹಾವನ್ನು ಬಾವಿಯಿಂದ ರಕ್ಷಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಗುರುರಾಜ್ ಸನಿಲ್ ಅವರು ಇದುವರೆಗೂ ಮೂವತ್ತು ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಇದುವರೆಗೂ ನಡೆಸಿದ ಕಾರ್ಯಾಚರಣೆಗಿಂತ ಈ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.