ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ನಂತರ ನಾನೇ ರಾಜ್ಯದ ಸಿಎಂ. ಅದಕ್ಕಾಗಿಯೇ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರಾಗಿ ಮುಖ್ಯಮಂತ್ರಿಯಾಗಬೇಕು. ಡಿಸಿಎಂ ಆಗಿ ಅಲ್ಲ. ಡಿಸಿಎಂ ಹುದ್ದೆ ಅಸಂವಿಧಾನಿಕ ಹುದ್ದೆಯಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಬದಲಾವಣೆ ಮಾಡೋದಕ್ಕಾಗೇ ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಸದ್ಯಕ್ಕೆ ಬಿಎಸ್‍ವೈ ಸಿಎಂ ಆಗಿದ್ದಾರೆ. ಅವರ ನಂತರ ನಾನು ಸಿಎಂ ಆಗುವೆ. ನಾನು ಎಕಾಂಗಿ ಎನೂ ಅಲ್ಲ. ನನ್ನ ಹಿಂದೆಯೂ ಸಾಕಷ್ಟು ಜನರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಪರಿಹಾರ ನನಗೆ ಸಮಾಧಾನ ತಂದಿದೆ. ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಕೇಂದ್ರ ಸರ್ಕಾರ ಇನ್ನೂ 400 ಕೋಟಿ ಕೊಡುವುದಾಗಿ ಹೇಳಿದೆ. ಡಿಸಿಎಂ ಲಕ್ಷ್ಮಣ್ ಸವದಿ ನನ್ನ ಆತ್ಮೀಯ ಸ್ನೇಹಿತ. ಯಡಿಯೂರಪ್ಪ ಅವರು ನನ್ಮ ರಾಜಕೀಯ ಗುರುಗಳು ಎಂದು ಕತ್ತಿ ಹೇಳಿದರು. ಇದೇ ವೇಳೆ ಅನರ್ಹ ಶಾಸಕರಿಗೂ ಬಿಜೆಪಿ ಸಂಬಂಧವಿಲ್ಲ ಅನ್ನೋ ವಿಚಾರವಾಗಿ ಮಾತನಾಡಿ, ಅನರ್ಹರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದರು.

ಏಳು ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಉಮೇಶ ಕತ್ತಿ ಏಕಾಂಗಿಯಾಗಿ ಸಾಮಾನ್ಯ ಕಾರ್ಯಕರ್ತರಂತೆ ಹಿಂಭಾಗದಲ್ಲಿ ಕುಳಿತ್ತಿದ್ದು ಕಂಡು ಬಂದಿತು. ವೇದಿಕೆ ಮೇಲಿದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹಾಗೂ ಸಿಎಂ ಬಿಎಸ್‍ವೈ ಸಭೆಗೆ ಆಗಮಿಸಿದ್ದ ಸಂಸದರು ಹಾಗೂ ಶಾಸಕರನ್ನು ಕರೆದು ವೇದಿಕೆ ಮುಂಭಾಗದಲ್ಲಿ ಕುಳಿತುಕೊಳ್ಳಲು ಸೂಚನೆ ನೀಡಿದರು. ಆದರೆ ಉಮೇಶ ಕತ್ತಿಯವರನ್ನು ನೋಡಿಯೂ ಮುಂದೆ ಕರೆಯದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾನು ಸಭೆಯಲ್ಲಿ ಎಲ್ಲಿ ಕೂತರೇ ಎನು? ನಾನು ಎಕಾಂಗಿಯಲ್ಲ, ಹೇಳಬೇಕಾಗಿದ್ದನ್ನು ಹೇಳಿದ್ದೇನೆ ಎಂದು ಕತ್ತಿ ಉತ್ತರಿಸಿದರು.





















