Tag: ಉಮೇಶ್ ಕತ್ತಿ

  • ಸಿಎಂ ಮುಂದೆ ಕತ್ತಿ ಸಚಿವ ಸ್ಥಾನಕ್ಕೆ, ಸವದಿ ಪರಿಷತ್ ಲಾಬಿ

    ಸಿಎಂ ಮುಂದೆ ಕತ್ತಿ ಸಚಿವ ಸ್ಥಾನಕ್ಕೆ, ಸವದಿ ಪರಿಷತ್ ಲಾಬಿ

    ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಲಾಬಿಗಳು ಜೋರಾಗಿಯೇ ನಡೆಯುತ್ತಿವೆ. ಮೊದಲ ಅವಧಿಯಲ್ಲಿ ಸ್ಥಾನ ಸಿಗದ ಬೆಳಗಾವಿ ಶಾಸಕ ಉಮೇಶ್ ಕತ್ತಿ ಶತಾಯಗತಾಯ ಈ ಬಾರಿ ಸಚಿವ ಆಗಲೇಬೇಕು ಅಂತ ದೊಡ್ಡ ಮಟ್ಟದಲ್ಲೇ ಲಾಬಿ ಮಾಡುತ್ತಿದ್ದಾರೆ. ಇಂದು ಸಿಎಂ ನಿವಾಸಕ್ಕೆ ಆಗಮಿಸಿದ ಅವರು, ನಂಗೂ ಮಂತ್ರಿ ಸ್ಥಾನ ಕೊಡಿ ಸರ್ ಅಂತ ಯಡಿಯೂರಪ್ಪ ಮೇಲೆ ಮತ್ತೆ ಒತ್ತಡ ಹಾಕಿದ್ದಾರೆ.

    ಉಮೇಶ್ ಕತ್ತಿ ಕೇವಲ ಸಿಎಂ ಬಳಿ ಮಾತ್ರ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಜೊತೆಯೂ ದೊಡ್ಡದಾಗಿಯೇ ಲಾಬಿ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ದೆಹಲಿಗೆ ಹೋಗಿ ಕೇಂದ್ರದ ಹಲವು ನಾಯಕರನ್ನ ಭೇಟಿಯಾಗಿ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಹೈಕಮಾಂಡ್ ಯಾವ ಸಂದೇಶ ಕೊಡುತ್ತೋ ಗೊತ್ತಿಲ್ಲ. ಆದರೆ ತಮ್ಮ ಪ್ರಯತ್ನ ಮಾತ್ರ ತಾವು ಬಿಡದೇ ಸಚಿವ ಸ್ಥಾನಕ್ಕೆ ಲಾಬಿ ಮುಂದುವರಿಸುತ್ತಲೇ ಇದ್ದಾರೆ.

    ಬೆಳಗಾವಿಯ ಕತ್ತಿ ಸ್ಥಿತಿ ಹೀಗಾದರೆ ಮತ್ತೊಬ್ಬ ನಾಯಕ ಡಿಸಿಎಂ ಲಕ್ಷ್ಮಣ ಸವದಿರದ್ದು ಇನ್ನೊಂದು ತಲೆ ನೋವು. ತಾನು ಡಿಸಿಎಂ ಆಗಿ ಉಳಿಯಬೇಕಾದರೆ ಫೆಬ್ರವರಿಯಲ್ಲಿ ನಡೆಯಲಿರೋ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು. ಹೀಗಾಗಿ ಟಿಕೆಟ್ ನನಗೆ ನೀಡಬೇಕು ಅಂತ ಸವದಿ ಲಾಬಿ ಪ್ರಾರಂಭ ಮಾಡಿದ್ದಾರೆ. ಇಂದು ಕೂಡ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟು ನನಗೆ ಸ್ಥಾನ ಕೊಡಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ.

    ಸಂಖ್ಯಾಬಲದ ಪ್ರಕಾರ ಫೆಬ್ರವರಿಯಲ್ಲಿ ನಡೆಯೋ ಒಂದು ಸ್ಥಾನ ಬಿಜೆಪಿಗೆ ಸಿಗಲಿದೆ. ಸವದಿಗೆ ಅಡ್ಡಲಾಗಿರೋದು ಮಾಜಿ ಸಚಿವ ಆರ್.ಶಂಕರ್. ಪರಿಷತ್ ಸದಸ್ಯನ್ನಾಗಿ ಮಾಡಿ ಸಚಿವರಾಗಿ ಮಾಡೋದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ರು. ಹೀಗಾಗಿ ನನಗೆ ಸ್ಥಾನ ಕೊಟ್ಟು ಮಾತು ಉಳಿಸಿಕೊಳ್ಳಿ ಅಂತ ಆರ್ ಶಂಕರ್ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಶಂಕರ್ ಒತ್ತಡವೇ ಸವದಿಗೆ ದೊಡ್ಡ ತಲೆ ನೋವಾಗಿದೆ. ಶಂಕರ್‍ಗೆ ಒಂದೊಮ್ಮೆ ಸ್ಥಾನ ಕೊಟ್ರೆ ನನ್ನ ಸ್ಥಾನ ಹೋಗೋದು ಗ್ಯಾರಂಟಿ ಅಂತ ತಿಳಿದುಕೊಂಡಿರೋ ಸವದಿ ಹೇಗಾದ್ರು ಮಾಡಿ ಪರಿಷತ್ ಟಿಕೆಟ್ ಗಿಟ್ಟಿಸೋಕೆ ಪ್ರಯತ್ನ ಮಾಡ್ತಾನೇ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ನಾನು 2024ರಲ್ಲಿ ಸಿಎಂ ಆಗೇ ಆಗ್ತೀನಿ: ಯತ್ನಾಳ್

    ನಾನು 2024ರಲ್ಲಿ ಸಿಎಂ ಆಗೇ ಆಗ್ತೀನಿ: ಯತ್ನಾಳ್

    ವಿಜಯಪುರ: ಯಾರ ಹಣೆಬರಹದಲ್ಲಿ ಏನಿದೆ ಯಾರಿಗೆ ಗೊತ್ತು? 2024 ರಲ್ಲಿ ನಾನು ಸಿಎಂ ಆಗೋದಿದ್ರೆ ಯಾರಾದರು ಕಸಿದುಕೊಳ್ಳುತ್ತಾರಾ? ಎನ್ನುವ ಮೂಲಕ ತಾವು ಸಿಎಂ ಆಕಾಂಕ್ಷಿ ಎನ್ನುವುದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ಅವರು, ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ ನಾನು 2024ರಲ್ಲಿ ಸಿಎಂ ಆಗೇ ಆಗುತ್ತೇನೆ ಎಂದರು.

    ಲಕ್ಷ್ಮಣ ಸವದಿ ಹಣೆಬರಹದಲ್ಲಿ ಡಿಸಿಎಂ ಆಗಬೇಕು ಎಂದು ಬರೆದಿದೆ ಹಾಗಾಗಿ ಅವರು ಡಿಸಿಎಂ ಆಗಿದ್ದಾರೆ. ಅವರ ಹಣೆಬರಹದಲ್ಲಿ ಡಿಸಿಎಂ ಆಗೆ ಇರಬೇಕು ಅಂತಿದ್ರೆ ಮುಂದುವರೆಯುತ್ತಾರೆ ಎನ್ನುವ ಮೂಲಕ ಡಿಸಿಎಂ ಸವದಿಗೆ ಟಾಂಗ್ ನೀಡಿದರು.

    ಸಚಿವ ಸ್ಥಾನಕ್ಕಾಗಿ ಉಮೇಶ ಕತ್ತಿ ಸಿಎಂ ಸುತ್ತ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ. ಅವರು ಸಚಿವರಾಗೋದು ಗ್ಯಾರೆಂಟಿ. ಅಥಣಿ, ಕಾಗವಾಡ ಗೆಲ್ಲಿಸಿದರೆ ಸಚಿವ ಸ್ಥಾನ ಸಿಗುತ್ತೆ ಎಂದು ಪಕ್ಷದ ನಾಯಕರು, ನಾವೆಲ್ಲ ಹೇಳಿದ್ದೆವು. ಹಾಗಾಗಿ ಅವರು ಆತಂಕ ಪಡುವ ಅವಶ್ಯಕತೆ ಇಲ್ಲ, ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ನಮಗಿದೆ ಎನ್ನುವ ಮೂಲಕ ಕತ್ತಿ ಸಚಿವರಾಗುವುದು ಪಕ್ಕ ಎಂದು ಸ್ಪಷ್ಟಪಡಿಸಿದರು.

    ಮಹಾರಾಷ್ಟ್ರದವರು ಮರಾಠಾ ಭಾಷೆ, ಗಡಿ ವಿಚಾರ ಬಿಟ್ಟು ಅಭಿವೃದ್ಧಿ ಮಾಡಬೇಕು. ಬೆಳಗಾವಿ ನಮ್ಮದು ಅಂದ್ರೆ ನಾವು ಬಿಡೋಕಾಗುತ್ತಾ? ನಾವೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ತೆಗೆದುಕೊಳ್ಳಿ ನೋಡೋಣ. ಐದು ವರ್ಷ ಅಲ್ಲ, ಮುಂದೆ ಮತ್ತೊಬ್ಬರು ಹುಟ್ಟಿಬಂದರೂ ಬೆಳಗಾವಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸವಾಲು ಎಸೆದರು.

    ನನ್ನ ಪರಿಸ್ಥಿತಿ ಸೂಸೈಡ್ ಬಾಂಬರ್ ರೀತಿ ಆಗಿದೆ. ಡಿಸಿಎಂ ಸ್ಥಾನದ ವಿಚಾರ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಎಸ್‍ಎಂಎಸ್ ಮತ್ತು ವಾಟ್ಸಪ್ ಮೂಲಕ ಸಂದೇಶ ಬಂದಿದೆ. ಆದರೆ ನಾನು ನನ್ನ ಮಾತನ್ನು ಹಿಂಪಡೆದಿಲ್ಲ. ನಾನು ವಿಷಾದವನ್ನು ವ್ಯಕ್ತಪಡಿಸಿಲ್ಲ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಮತ್ತೊಮ್ಮೆ ತಮ್ಮ ವಾದವನ್ನು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ.

  • ಸಚಿವ ಸ್ಥಾನಕ್ಕಾಗಿ ಉಮೇಶ್ ಕತ್ತಿ ಕಸರತ್ತು

    ಸಚಿವ ಸ್ಥಾನಕ್ಕಾಗಿ ಉಮೇಶ್ ಕತ್ತಿ ಕಸರತ್ತು

    ಬೆಂಗಳೂರು: ನಾನು ಸಿಎಂ ಆಗಲು ಅರ್ಹತೆ ಇರುವ ವ್ಯಕ್ತಿ. ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡುತ್ತಿಲ್ಲ ಎಂದು ಹೇಳುತ್ತಲೇ ಬೆಳಗಾವಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಪದೇ ಪದೇ ಲಾಬಿ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಮಂತ್ರಿ ಸ್ಥಾನಕ್ಕಾಗಿ ಯಡಿಯೂರಪ್ಪ ಮನೆಗೆ ಸುತ್ತಾಡುತ್ತಿದ್ದಾರೆ. ಇಂದೂ ಕೂಡಾ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಸಿಎಂ ಜೊತೆ ವಾಕಿಂಗ್ ತೆರಳಿ ಮನೆಗೆ ಬಂದು ಅವರ ಜೊತೆಯಲ್ಲೇ ಬೆಳಗ್ಗಿನ ಉಪಹಾರ ಸೇವಿಸಿ ಸಚಿವ ಸ್ಥಾನಕ್ಕೆ ಲಾಬಿ ಮಾಡಿದ್ದಾರೆ.

    ಉಮೇಶ್ ಕತ್ತಿ ಬೆಂಗಳೂರಿಗೆ ಬಂದಾಗಲೆಲ್ಲ ಸಿಎಂ ಅವರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಶತಾಯಗತಾಯ ಮಂತ್ರಿ ಆಗಲೇಬೇಕು ಎಂದು ಕತ್ತಿ ಓಡಾಡುತ್ತಿದ್ದಾರೆ.

    ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದೇ ಉಮೇಶ್ ಕತ್ತಿ ಈಗಾಗಲೇ ಸಿಎಂ ಸೇರಿದಂತೆ ಪಕ್ಷದ ವರಿಷ್ಠರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಕೋಪ ಮಾಡಿಕೊಂಡಿರುವ ಕತ್ತಿಯನ್ನು ಸಿಎಂ ಸಮಾಧಾನ ಮಾಡಿದ್ದಾರೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡುವ ಭರವಸೆಯನ್ನು ಸಿಎಂ ಕೂಡಾ ನೀಡಿದ್ದಾರೆ.

    ಬಿಜೆಪಿ ಶಾಸಕರ ಪೈಕಿ ಉಮೇಶ್ ಕತ್ತಿ ಅತ್ಯಂತ ಹಿರಿಯ ಶಾಸಕರು. ಸಹಜವಾಗಿಯೇ ಸಚಿವ ಸ್ಥಾನ ಸಿಗಬೇಕಾಗಿತ್ತು. ಆದರೆ ಹೈಕಮಾಂಡ್ ಆದೇಶದಿಂದ ಈವರೆಗೂ ಕತ್ತಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ಸಿಎಂಗೂ ಮನಸ್ಸಿದೆ. ಆದರೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಬೇಕು. ಎರಡನೇ ಹಂತದ ಸಂಪುಟ ವಿಸ್ತರಣೆ ಸಂಕ್ರಾಂತಿ ಬಳಿಕ ಆಗಲಿದೆ. ಹೈಕಮಾಂಡ್ ಒಪ್ಪಿದ್ರೆ ಈ ಸಂಕ್ರಾಂತಿ ಉಮೇಶ್ ಕತ್ತಿಗೆ ಶುಭ ತರುವುದಂತು ಸತ್ಯ.

  • ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ನವದೆಹಲಿ: ಸಿಎಂ ಸ್ಥಾನಕ್ಕೆ ನಾನು ಅರ್ಹ ವ್ಯಕ್ತಿ, ಸಿಎಂ ಆಗಲು ಎಲ್ಲ ಕ್ವಾಲಿಫೈಗಳು ನನ್ನಲ್ಲಿದೆ. ಆದರೆ ನಾನು ಬಿ.ಎಸ್ ಯಡಿಯೂರಪ್ಪ ಅವರಿಗೆ ಪೈಪೋಟಿ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಕನೆಕ್ಷನ್ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಯಾಗುತ್ತೇನೆ. ಕ್ಷೇತ್ರದ ಕೆಲವು ಕೆಲಸಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದರು.

    ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಬಿಟ್ಟು ಹೈಕಮಾಂಡ್ ಪೈಕಿ ಯಾರ ಜೊತೆಗೂ ಮಾತನಾಡಲ್ಲ. ನಾನು ಮಂತ್ರಿಗಿರಿ ಕೇಳ್ತಿಲ್ಲ, ಅದು ನನ್ನ ಹಕ್ಕು. ನನಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುವೆ ಎಂದು ಸಿಎಂಗೆ ಗೊತ್ತಿದೆ. ಹೈಕಮಾಂಡ್‍ಗೂ ಮನವಿ ಮಾಡ್ತೇನೆ, ಸಚಿವ ಸ್ಥಾನ ಕೊಡದಿದ್ರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

    ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ, ಎಲ್ಲ ಕ್ವಾಲಿಫೈ ಇದೆ. 8 ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿ 13 ವರ್ಷ ಕೆಲಸ ಮಾಡಿದ ಅನುಭವ ಇದೆ. ಹಾಗಂತ ಮಾತ್ರಕ್ಕೆ ಯಡಿಯೂರಪ್ಪ ಅವರಿಗೆ ನಾನು ಪೈಪೋಟಿ ಅಲ್ಲ, ಮುಂದಿನ ದಿನಗಳಲ್ಲಿ ನಾನು ಸಿಎಂ ಆಗಬಹುದು ಎಂದರು.

    ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಅವರನ್ನು ಮುಂದುವರಿಸುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅತಿ ಹೆಚ್ಚು ಶಾಸಕರು ಬೆಳಗಾವಿಯಲ್ಲಿದ್ದಾರೆ. ಹೆಚ್ಚು ಸಚಿವ ಸ್ಥಾನ ಕೊಟ್ಟರೇ ತಪ್ಪಿಲ್ಲ ಎಂದು ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ನೀಡುವುದನ್ನು ಸಮರ್ಥಿಸಿಕೊಂಡರು.

  • ಯಡಿಯೂರಪ್ಪರನ್ನ ಬ್ಲಾಕ್‍ಮೇಲ್ ಮಾಡುವ ಗಂಡಸು ಹುಟ್ಟಿಲ್ಲ: ಉಮೇಶ್ ಕತ್ತಿ

    ಯಡಿಯೂರಪ್ಪರನ್ನ ಬ್ಲಾಕ್‍ಮೇಲ್ ಮಾಡುವ ಗಂಡಸು ಹುಟ್ಟಿಲ್ಲ: ಉಮೇಶ್ ಕತ್ತಿ

    ಬೆಳಗಾವಿ(ಚಿಕ್ಕೋಡಿ): ಸಿಎಂ ಯಡಿಯೂರಪ್ಪ ಅವರನ್ನ ಬ್ಲಾಕ್‍ಮೇಲ್ ಮಾಡುವ ಗಂಡಸು ಹುಟ್ಟಿಲ್ಲ, ಮುಂದೆಯೂ ಹುಟ್ಟೋದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಅವರು, ಉನ್ನತ ಖಾತೆಗಾಗಿ ಲಾಬಿ ನಡೆಸುತ್ತಿರುವ ಶಾಸಕರಿಗೆ ಟಾಂಗ್ ನೀಡಿದ್ದಾರೆ. ಡಿಸಿಎಂ ಸ್ಥಾನದ ಬಗ್ಗೆಯೂ ಮಾತನಾಡಿ, ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ರಾಜ್ಯದ ಮುಖ್ಯಮಂತ್ರಿಗಳು ಎಲ್ಲವನ್ನೂ ನೀಗಿಸಲು ಸಭಲರಾಗಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನವನ್ನ ನಿರ್ಮಾಣ ಮಾಡಬಾರದು ಎಂದು ನನ್ನ ಒತ್ತಾಯವಾಗಿದೆ. ಡಿಸಿಎಂ ಸ್ಥಾನ ಅವಶ್ಯಕತೆಯಿಲ್ಲ ಎಂದು ಉಮೇಶ ಕತ್ತಿ ತಮ್ಮ ಅನಿಸಿಕೆ ಹಂಚಿಕೊಂಡರು.

    ರಾಮನ ಭಂಟ ಹನುಮನ ಹಾಗೆ ಯಡಿಯೂರಪ್ಪ ಅವರ ಭಂಟ ಕತ್ತಿ ಆಗಿದ್ದಾರೆ. ಯಡಿಯೂರಪ್ಪ ಅವರ ಮನೆಗೆ ದಿನ ನಿತ್ಯ ಹೋಗುವುದರ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ನಮ್ಮ ನಾಯಕರು. ಬೆಳಗ್ಗೆ ಶಾಂತ ರೀತಿಯಾಗಿ ಸಿಗುತ್ತಾರೆ ಎಂದು ಅವರ ಮನೆಗೆ ಹೋಗುತ್ತೇನೆ. ಅಲ್ಲದೇ ಹುಕ್ಕೇರಿ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆ ಅಭಿವೃದ್ಧಿಗಾಗಿ ಅವರನ್ನ ಭೇಟಿ ಆಗುತ್ತೇನೆ ಎಂದು ತಿಳಿಸಿದರು.

    ಇವತ್ತು ಸಚಿವ ಸ್ಥಾನ ನೀಡಿ ಎಂದು ಕೇಳಲು ಅವರನ್ನು ಭೇಟಿಯಾಗುತ್ತಿದ್ದೇನೆ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸವಿದೆ. ಅವರು ಸಚಿವ ಸ್ಥಾನ ಕೊಡುತ್ತಾರೆ ಎಂದು ಬಿಡಲು ಆಗುವದಿಲ್ಲ. ನಾನು ಕೂಡ ಸಚಿವ ಸಂಪುಟ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದಷ್ಟು ಬೇಗ ಸಚಿವನಾಗಿ ರಾಜ್ಯದ ಜನರ ಸೇವೆ ಸಲ್ಲಿಸುತ್ತೇನೆ ಎಂದು ಉಮೇಶ ಕತ್ತಿ ಹೇಳಿದರು.

  • ಸಿಎಂಗೆ ನಿತ್ಯ ಬೆಳಗ್ಗೆ ‘ಕತ್ತಿ’ ದರ್ಶನ

    ಸಿಎಂಗೆ ನಿತ್ಯ ಬೆಳಗ್ಗೆ ‘ಕತ್ತಿ’ ದರ್ಶನ

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದಿದ್ದೇ ತಡ ಸಿಎಂ ಯಡಿಯೂರಪ್ಪ ಅವರು ಅದರ ಸಂಭ್ರಮವನ್ನೂ ಸರಿಯಾಗಿ ಅನುಭವಿಸದೇ ತಳಮಳ ಪಡುತ್ತಿದ್ದಾರೆ. ಭರ್ಜರಿ ಫಲಿತಾಂಶಕ್ಕೆ ಖುಷಿ ಪಡಬೇಕೋ ಇಲ್ಲ ಸಂಪುಟ ತಲೆನೋವು ಕಡಿಮೆ ಮಾಡಿಕೊಳ್ಳಬೇಕೋ ಅಂತ ಗೊತ್ತಾಗದೇ ಸಿಎಂ ತೊಳಲಾಡುತ್ತಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಗೆ ಇನ್ನಷ್ಟು ವಿಳಂಬ ಆಗುವುದರಿಂದ ಸಿಎಂ ಅವರ ತಾಳ್ಮೆಯೂ ಕಮ್ಮಿಯಾಗತೊಡಗಿದೆ. ಇದೆಲ್ಲದರ ನಡುವೆ ಸಚಿವ ಸ್ಥಾನದ ಪ್ರಭಾವೀ ಆಕಾಂಕ್ಷಿ ಹಿರಿಯ ಶಾಸಕ ಉಮೇಶ್ ಕತ್ತಿ, ಸಿಎಂಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದ್ದಾರೆ.

    ಸರ್ಕಾರದ ಮೊದಲ ಸಂಪುಟ ರಚನೆ ಬಳಿಕ ಮುನಿಸಿಕೊಂಡಿದ್ದ ಉಮೇಶ್ ಕತ್ತಿ, ಉಪಚುನಾವಣೆವರೆಗೂ ಸಿಎಂ ಭೇಟಿಗೆ ಅಷ್ಟಾಗಿ ಮನಸ್ಸು ಮಾಡುತ್ತಿರಲಿಲ್ಲ. ಆದರೆ ಯಾವಾಗ ಫಲಿತಾಂಶ ಬಂತೋ ಅಂದು ರಾತ್ರಿಯೇ ಬೆಳಗಾವಿಯಿಂದ ಹೊರಟ ಉಮೇಶ್ ಕತ್ತಿ ಬೆಂಗಳೂರಿನಲ್ಲೇ ಇದ್ದಾರೆ.

    ಫಲಿತಾಂಶ ಬಂದ ನಂತರ ಸಚಿವ ಸ್ಥಾನ ಬೇಕೇ ಬೇಕು ಎಂದು ಶಾಸಕ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಅವತ್ತಿನಿಂದಲೂ ನಿತ್ಯ ಎರಡು-ಮೂರು ಸಲ ಉಮೇಶ್ ಕತ್ತಿ ಸಿಎಂ ಭೇಟಿ ಮಾಡುತ್ತಿದ್ದಾರೆ. ಬೆಳಗ್ಗೆ ಎದ್ದರೆ ಸಾಕು ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರ ಧವಳಗಿರಿ ನಿವಾಸದಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಇಂದು ಸಹ ಬೆಳ್ಳಂಬೆಳಗ್ಗೆ 2 ಬಾರಿ ಉಮೇಶ್ ಕತ್ತಿ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸಿಎಂಗೆ ಬೆಳಗ್ಗೆ ಎದ್ದರೆ ಕತ್ತಿಯವರೇ ದರ್ಶನ ಕೊಡುತ್ತಿದ್ದಾರೆ.

    ಸಿಎಂ ನಿವಾಸ, ವಿಧಾನಸೌಧ, ಗೃಹ ಕಚೇರಿ ಕೃಷ್ಣಾ.. ಹೀಗೆ ಎಲ್ಲೆಂದರಲ್ಲಿ ಉಮೇಶ್ ಕತ್ತಿಯವರು ಸಿಎಂ ಭೇಟಿ ಮಾಡುತ್ತಿದ್ದಾರೆ. ಉಪಚುನಾವಣೆಗೂ ಮುನ್ನ ಕಾಣಿಸಿಕೊಳ್ಳದ ಶಾಸಕ, ಈಗ ನಿತ್ಯ ಸಿಎಂ ಎದುರು ಪ್ರತ್ಯಕ್ಷರಾಗಿ ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಉಮೇಶ್ ಕತ್ತಿ ಕಾಟದಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ಸಿಎಂ ಯೋಚನೆ ಮಾಡಿರೋದರಲ್ಲಿ ಅಚ್ಚರಿಯಿಲ್ಲ. ಸದ್ಯದ ಸನ್ನಿವೇಶದಲ್ಲಿ ಸಚಿವ ಸಂಪುಟ ವಿಸ್ತರಣೆ ಇನ್ನೊಂದು ತಿಂಗಳು ಆಗುವುದಿಲ್ಲ ಎಂಬ ಮಾತುಗಳು ಕೇಳಿಬರ್ತಿವೆ. ಇದು ನಿಜವಾದ್ರೆ ಅಲ್ಲಿಯವರೆಗೂ ಸಿಎಂ ಯಡಿಯೂರಪ್ಪ ಉಮೇಶ್ ಕತ್ತಿಯವರ ಈ ಕೊಸರಾಟವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ.

     

  • ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್

    ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್

    – ನಾನು ಸಿಎಂ ಹುದ್ದೆಯ ಆಕಾಂಕ್ಷಿ
    – ಡಿಎಸಿಂ ಹುದ್ದೆ ಬೇಡವೇ ಬೇಡ

    ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವರು ಇನ್ನೂ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಂದ ಉಪಚುನಾವಣೆ ಫಲಿತಾಂಶದ ಬಳಿಕ ಈ ಪೈಪೋಟಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೊದಲಿಂದಲೂ ಸಚಿವ ಸ್ಥಾನ ಬೇಕು ಎನ್ನುತ್ತಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಈಗ ಹೊಸ ಬಾಂಬ್ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾತಾಡಿದ ಅವರು, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಎಂಟು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಹಿಂದಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಈಗಲೂ ಮತ್ತೆ ಮುಂದೆಯೂ ನಾನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದೇನೆ. ಕೊಡುವುದಾದರೆ ನನಗೆ ಮಂತ್ರಿ ಸ್ಥಾನ ಕೊಡಲಿ. ಇಲ್ಲವಾದರೆ ಮುಖ್ಯಮಂತ್ರಿ ಸ್ಥಾನ ಕೊಡಲಿ. ಆದರೆ ಉಪಮುಖ್ಯಮಂತ್ರಿ ಸ್ಥಾನ ಮಾತ್ರ ಬೇಡವೇ ಬೇಡ ಅಂತ ಉಮೇಶ್ ಕತ್ತಿ ಕಡ್ಡಿ ತುಂಡು ಮಾಡುವಂತೆ ಸ್ಪಷ್ಟಪಡಿಸಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕಣ್ಣಿಟ್ಟ ಉಮೇಶ್ ಕತ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟಿಸಿದೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಇತರೇ ಬಿಜೆಪಿ ಹಿರಿಯ ಶಾಸಕರು ಉಮೇಶ್ ಕತ್ತಿಯವರ ಹೇಳಿಕೆಗೆ ಗಾಬರಿಗೊಂಡಿದ್ದಾರೆ. ಉಮೇಶ್ ಕತ್ತಿ ಅದ್ಯಾವ ಅರ್ಥದಲ್ಲಿ ಸಿಎಂ ಹುದ್ದೆ ಕೇಳುತ್ತಿದ್ದಾರೆ ಅಂತ ಅರ್ಥವಾಗದೇ ಉಳಿದ ಸಚಿವಾಕಾಂಕ್ಷಿಗಳು ಕಣ್ ಕಣ್ ಬಿಡುತ್ತಿದ್ದಾರಂತೆ. ಆದರೆ ಉಮೇಶ್ ಕತ್ತಿ ಹೇಳಿಕೆಯನ್ನು ಯಾರು ಹೇಗೆ ಸ್ವೀಕರಿಸಿದ್ದಾರೋ ಗೊತ್ತಿಲ್ಲ, ಸಿಎಂ ಯಡಿಯೂರಪ್ಪ ಅವರು ಮಾತ್ರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಈ ಹಿಂದೆಯೂ ಕಾಂಗ್ರೆಸ್ ಅವಧಿಯಲ್ಲಿ ಉಮೇಶ್ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಮಾಡುವ ಹೇಳಿಕೆ ಕೊಟ್ಟು ವಿವಾದ ಮೆತ್ತಿಕೊಂಡಿದ್ದರು. ಪ್ರತ್ಯೇಕ ನಾಡಧ್ವಜಕ್ಕೂ ಅವರು ಬೇಡಿಕೆ ಇಟ್ಟಿದ್ದರು. ಶಾಸಕ ಈ ನಡೆಯ ಬಗ್ಗೆ ಇಡೀ ಬಿಜೆಪಿ ನಾಯಕರೇ ಬೆಚ್ಚಿಬಿದ್ದಿದ್ದರು. ಅದಾದ ನಂತರ ಇದೀಗ ಉಮೇಶ್ ಕತ್ತಿ ನನಗೂ ಸಿಎಂ ಹುದ್ದೆ ಕೊಡಿ ಅಂತ ಕೇಳುವ ಮೂಲಕ ಮತ್ತೊಮ್ಮೆ ಬಿಜೆಪಿ ಪಾಳಯಕ್ಕೆ ದಿಗಿಲು ಹುಟ್ಟಿಸಿದ್ದಾರೆ.

    ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬಂದ ನಂತರ ರಚನೆಗೊಂಡ ಸಚಿವ ಸಂಪುಟದಲ್ಲಿ ಉಮೇಶ್ ಕತ್ತಿ ಸ್ಥಾನ ವಂಚಿತರಾಗಿದ್ದರು. ಆಗಲೇ ಬಂಡಾಯ ಏಳುವ ಸೂಚನೆಯನ್ನೂ ಅವರು ಕೊಟ್ಟಿದ್ದರು. ಆದರೆ ಮುಂದಿನ ಬಾರಿ ಸಚಿವ ಸ್ಥಾನ ಕೊಡುವುದಾಗಿ ಅವರನ್ನು ಸಿಎಂ ಯಡಿಯೂರಪ್ಪ ಅವರೇ ಮನವೊಲಿಸಿದ್ದರು. ಈಗ ಉಪಚುನಾವಣೆಯಲ್ಲಿ ಅನರ್ಹರು ಗೆದ್ದು ಶಾಸಕರಾದ ಬಳಿಕ ಮತ್ತೆ ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಮೇಲೆ ಸಚಿವ ಸ್ಥಾನಕ್ಕೆ ಪ್ರಬಲವಾಗಿಯೇ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕೆಂಬ ನಿಲುವನ್ನೂ ಸಿಎಂ ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

    ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚರ್ಚೆಯ ಬಳಿಕ ನಿರ್ಧಾರ ಸ್ಪಷ್ಟವಾಗಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಡಿಸಿಎಂ ಆಗಲ್ಲ, ಮುಖ್ಯಮಂತ್ರಿ ಆಗ್ತೀನಿ: ಉಮೇಶ್ ಕತ್ತಿ

    ಡಿಸಿಎಂ ಆಗಲ್ಲ, ಮುಖ್ಯಮಂತ್ರಿ ಆಗ್ತೀನಿ: ಉಮೇಶ್ ಕತ್ತಿ

    ಬೆಳಗಾವಿ: ನಾನು ಡಿಸಿಎಂ ಆಗಲ್ಲ, ಮುಖ್ಯಮಂತ್ರಿ ಆಗುತ್ತೇನೆ. ಇಲ್ಲವಾದರೆ ಮಂತ್ರಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಉಮೇಶ್ ಕತ್ತಿ, ಕಾರ್ಯಕರ್ತರು ಒಗ್ಗಟ್ಟಾಗಿ ಉಪಚುನಾವಣೆಯಲ್ಲಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಇಲ್ಲಿ ಯಾರು ಅನರ್ಹರಲ್ಲ, ಎಲ್ಲರೂ ಅರ್ಹರು. ರಮೇಶ್ ಜಾರಕಿಹೊಳಿ ಗೆದ್ದರೆ ಡಿಸಿಎಂ ಆಗ್ತೀನಿ ಎಂದು ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನ ಸಿಕ್ಕರೆ ಖುಷಿ. ನಮ್ಮ ಭಾಗದ ನಾಯಕರಿಗೆ ಡಿಸಿಎಂ ಸ್ಥಾನ ಸಿಕ್ಕರೆ ನಮಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು.

    ಮಾಧುಸ್ವಾಮಿ ಕನಕಪೀಠದ ವಿಚಾರವಾಗಿ ಶ್ರೀಗಳನ್ನು ಭೇಟಿಯಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಈ ವಿಚಾರ ಪರಿಣಾಮ ಬೀರಬೇಕು ಎಂಬುವುದು ಸಿದ್ದರಾಮಯ್ಯನವರ ಪ್ಲಾನ್ ಆಗಿದೆ ಎಂದು ಉಮೇಶ್ ಕತ್ತಿ ಆರೋಪಿಸಿದರು.

  • ಆಡಿಯೋ ಲೀಕ್ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳಿ- ಸಿಎಂಗೆ ಕತ್ತಿ ಮನವಿ

    ಆಡಿಯೋ ಲೀಕ್ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳಿ- ಸಿಎಂಗೆ ಕತ್ತಿ ಮನವಿ

    ಬೆಂಗಳೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಲೀಕ್ ಮಾಡಿದವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಉಮೇಶ್ ಕತ್ತಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಇಂದು ಸಿಎಂ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್‌ವೈ ಅವರನ್ನು ಭೇಟಿಯಾದ ಕತ್ತಿ ಸುಮಾರು ಒಂದು ಗಂಟೆಗಳ ಕಾಲ ಜೊತೆ ಚರ್ಚೆ ನಡೆಸಿದರು. ಸಿಎಂ ಹಾಗೂ ಕತ್ತಿ ಚರ್ಚೆ ತೀವ್ರ ಕುತೂಹಲ ಮೂಡಿಸಿದ್ದು, ಆಡಿಯೋ ರೆಕಾರ್ಡ್ ಮಾಡಿದೋರು ಬೆಳಗಾವಿಯ ಅತೃಪ್ತ ಬಣ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿದೆ ಎನ್ನಲಾಗಿದೆ.

    ಚರ್ಚೆಯ ವೇಳೆ ಆಡಿಯೊ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ನಮ್ಮ ಜಿಲ್ಲೆ ಬಗ್ಗೆ ಹೆಚ್ಚು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾರ ಕಡೆಯವರೇ ಆಗಲಿ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಉಮೇಶ್ ಕತ್ತಿ ಮನವಿ ಮಾಡಿದ್ದಾರೆ. ಅಲ್ಲದೆ ಅವರನ್ನು ಸುಮ್ಮನೆ ಬಿಡಬಾರದು ಎಂದು ಇದೇ ವೇಳೆ ಸಿಎಂ ಮೇಲೆ ಕತ್ತಿ ಒತ್ತಡ ಹಾಕಿದ್ದಾರೆ.

    ಬೆಳಗಾವಿ ರಾಜಕೀಯ ಕಿತ್ತಾಟವೇ ಆಡಿಯೋ ಲೀಕ್ ಗೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕತ್ತಿ ಇಂದು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಆಡಿಯೋ ಲೀಕ್ ನಿಂದ ಬೆಳಗಾವಿ ಬಿಜೆಪಿಯಲ್ಲಿ ಮತ್ತಷ್ಟು ಫೈಟ್ ಹೆಚ್ಚಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

    ಆಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
    ಅ.26ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಬಿಎಸ್‌ವೈ, ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈಯಲ್ಲಿರಿಸಿದ್ದರು. ಅವರೆಲ್ಲರು ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನೂ ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ, ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೆ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹೇಳಿದ್ದರು.

    ಸಿಎಂ ಅವರ ಈ ಆಡಿಯೋ ಅಕ್ಟೋಬರ್ 31ರಂದು ಲೀಕ್ ಆಗಿದ್ದು, ದೇಶದ್ಯಾಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಕಾಂಗ್ರೆಸ್ ಕೂಡ ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು ಎಂದು ಮಂಗಳವಾರ ಹೇಳಿತ್ತು.