Tag: ಉಮೇಶ್ ಕತ್ತಿ

  • ನಿರ್ಲಕ್ಷ್ಯ ತೋರಿದ್ರೆ ಹೊಡಿತೀನಿ- ಅಧಿಕಾರಿಗೆ ಉಮೇಶ್ ಕತ್ತಿ ತರಾಟೆ

    ನಿರ್ಲಕ್ಷ್ಯ ತೋರಿದ್ರೆ ಹೊಡಿತೀನಿ- ಅಧಿಕಾರಿಗೆ ಉಮೇಶ್ ಕತ್ತಿ ತರಾಟೆ

    ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಸಂದರ್ಭದಲ್ಲಿ ಜಾಗೃತನಾಗಿ ಕಾರ್ಯನಿರ್ವಹಿಸು, ಇಲ್ಲದಿದ್ದರೆ ಹೊಡೆಯುವುದಾಗಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಶಾಸಕ ಉಮೇಶ್ ಕತ್ತಿ ಸಭೆ ನಡೆಸಿದರು. ಈ ವೇಳೆ ಸಮರ್ಪಕ ವಿದ್ಯುತ್ ಕಲ್ಪಿಸದ ಹುಕ್ಕೇರಿ ವಿದ್ಯುತ್ ಸರಬರಾಜು ಸಂಘದ ಅಭಿಯಂತ ನೇಮಿನಾಥ್ ಖೇಮಲಾಪೂರೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

    ನಾನು ಕಳೆದ ಹಲವು ದಿನಗಳಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆ ಸೇರಿದಂತೆ ಕುಡಿಯುವ ನೀರು, ವಿದ್ಯುತ್ ನೀಡುವಲ್ಲಿ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವೆ. ಇದು ಹೀಗೆ ಮುಂದುವರಿದ್ರೆ, ನಿನ್ನ ಅಮಾನತು ಮಾಡಿಸುತ್ತೇನೆ. ಮತ್ತೆ ಲಾಕ್‍ಡೌನ್ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಡೆಯುವುದಾಗಿ ಉಮೇಶ್ ಕತ್ತಿ ಎಚ್ಚರಿಕೆ ನೀಡಿದರು.

    ಅಲ್ಲದೇ ಜನರಿಗೆ ನೀಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ, ಕುಡಿಯುವ ನೀರು ಸರಬರಾಜು, ಕೃಷಿ ಚಟುವಟಿಕೆಗಳು, ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಕಲ್ಪಿಸಲು ಯಾವುದೇ ವ್ಯತ್ಯಯ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಉಮೇಶ್ ಕತ್ತಿ ಸೂಚನೆ ನೀಡಿದರು.

    ಇದಕ್ಕೂ ಮೊದಲು ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಉಮೇಶ್ ಕತ್ತಿ ಮಾಹಿತಿ ಪಡೆದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ದಿನ ಬಳಕೆ ವಸ್ತುಗಳನ್ನ ಮಾರಾಟ ಮಾಡಿದರೆ ಅಂತಹವರ ಮೇಲೆ ಶಿಸ್ತು ಕ್ರಮಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

  • ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಬೆಂಗಳೂರು: ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಕಾಂಗ್ರೆಸ್ ಶಾಸಕರ ನಡುವೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕದನ ಜೋರಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೋಳಿ ಸಹೋದರರ ನಡುವೆ ಶುರುವಾದ ಜಟಾಪಟಿ ಅಂತಿಮವಾಗಿ ಸಮ್ಮಿಶ್ರ ಸರ್ಕಾರದ ಪಥನಕ್ಕೆ ಕಾರಣವಾಗಿತ್ತು.

    ಅದೇ ಬೆಳಗಾವಿಯಲ್ಲಿ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಗರಿಗೆದರಿದೆ. ಅಂದು ಕಾಂಗ್ರೆಸ್ ಶಾಸಕರ ನಡುವೆ ನಡೆದ ಕದನದ ರೀತಿಯಲ್ಲೇ ಬಿಜೆಪಿ ಶಾಸಕರ ನಡಯವೆಯೂ ಇದೀಗ ಫೈಟ್ ಆರಂಭವಾಗಿದೆ. ಬಿಜೆಪಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಪ್ರಭಾಕರ್ ಕೋರೆ ಹಾಗೂ ಸಂಸದ ಸುರೇಶ್ ಅಂಗಡಿ ಒಂದು ಕಡೆಯಾದರೆ ಬಿಜೆಪಿ ಶಾಸಕರು ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೋಳಿ ಮತ್ತೊಂದು ಕಡೆ ನಿಂತಿದ್ದಾರೆ.

    ಎರಡೂ ಬಣದವರು ಬಿಜೆಪಿಯವರೇ ಆಗಿದ್ದರೂ, ಮಾರ್ಚ್ ತಿಂಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣವೇ ಗೆಲ್ಲಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಲಕ್ಷಣ ಸವದಿಯವರನ್ನು ಡಿಸಿಎಂ ಆಗಿ ಮುಂದುವರಿಸಿದ್ದು ಜಾರಕಿಹೊಳಿ ಬಣಕ್ಕೆ ಇಷ್ಟ ಇರಲಿಲ್ಲ. ಅಲ್ಲದೆ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡದಿರುವುದು ಕತ್ತಿ ಬಣದ ಸಿಟ್ಟಿಗೆ ಕಾರಣವಾಗಿದೆ.

    ತಮ್ಮ ವಿರೋಧಿಗಳ ಸಿಟ್ಟನ್ನು ಅರಿತ ಡಿಸಿಎಂ ಲಕ್ಷ್ಮಣ್ ಸವದಿ ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಜೊತೆ ಸೇರಿ ಶತಾಯಗತಾಯ ಕತ್ತಿ ಹಾಗೂ ಜಾರಕಿಹೋಳಿ ಗುಂಪಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಹೀಗೆ ಬೆಳಗಾವಿ ಅಖಾಡದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಜೋರಾಗುವ ಲಕ್ಷಣಗಳು ಕಾಣತೊಡಗಿವೆ. ಮೊದಲೇ ಸಚಿವ ಸ್ಥಾನ ಸಿಗದ ಸಿಟ್ಟು. ಡಿಸಿಎಂ ಪೋಸ್ಟ್ ಗಲಾಟೆ ಎಲ್ಲವೂ ಸೇರಿಕೊಂಡು ಪಿಎಲ್‍ಡಿ ಬ್ಯಾಂಕ್ ಗಲಾಟೆ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಸರ್ಕಾರದ ಪಾಲಿಗೆ ಮಗ್ಗಲ ಮುಳ್ಳಾಗುತ್ತಾ ಎನ್ನುವ ಆತಂಕವಂತೂ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ.

  • ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ: ಉಮೇಶ್ ಕತ್ತಿ

    ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ: ಉಮೇಶ್ ಕತ್ತಿ

    ಚಿಕ್ಕೋಡಿ(ಬೆಳಗಾವಿ): ನಾನಂತೂ ಬಿಜೆಪಿ ಪಕ್ಷ ಬಿಡುವುದಿಲ್ಲ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹುಕ್ಕೇರಿ ಶಾಸಕ ಹಾಗೂ ಬಿಜೆಪಿ ಮುಖಂಡ ಉಮೇಶ್ ಕತ್ತಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಬಿಜೆಪಿ 32 ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಇಬ್ರಾಹಿಂ ಅವರನ್ನೇ ಕೇಳಬೇಕು ಅವರೇ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

    ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತದೆ. ಪಕ್ಷ ನನ್ನ ಸಿಎಂ ಮಾಡಿದರೆ ನಿಭಾಯಿಸುವ ಶಕ್ತಿ ನನ್ನಲ್ಲಿ ಇದೆ. ಇಂದೇ ಸಿಎಂ ಮಾಡಲಿ ಮುಂದೆ ಮಾಡಲಿ ಚಾರ್ಜ್ ತೆಗೆದುಕೊಳ್ಳಲು ನಾನು ಸಿದ್ಧ ಎಂದು ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ನನ್ನನ್ನು ಪರಿಗಣನೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಮಂತ್ರಿ ಮಾಡಿದರೆ ಮಂತ್ರಿಯಾಗುತ್ತೇನೆ ಇಲ್ಲವಾದಲ್ಲಿ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.

    ಇದೇ ವೇಳೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ವಾಗಿ ಮಾತನಾಡಿದ ಅವರು, ಸಹೋದರ ರಮೇಶ್ ಕತ್ತಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಜಾರಕಿಹೊಳಿ ಸಹೋದರರು ಹಾಗೂ ಡಿಸಿಎಂ ಸವದಿ ಅವರ ಬೆಂಬಲ ಹಾಗೂ ಸಹಕಾರ ನೀಡಲು ವಿನಂತಿಸುತ್ತೇನೆ. ಈ ಬಾರಿ ಡಿಸಿಸಿ ಚುನಾವಣೆಯಲ್ಲಿ ನಮ್ಮ ಪೆನಲಿನ್ 16 ಜನ ಆಯ್ಕೆಯಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಉಮೇಶ್ ಕತ್ತಿ ತಿಳಿಸಿದರು.

  • ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಎಲೆಕ್ಷನ್- ರಾಜಕೀಯ ತಲ್ಲಣ

    ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಎಲೆಕ್ಷನ್- ರಾಜಕೀಯ ತಲ್ಲಣ

    -ಪ್ರತಿಷ್ಠೆ ಪಣಕ್ಕಿಟ್ಟ ರಮೇಶ್ ಜಾರಕಿಹೊಳಿ-ಉಮೇಶ್ ಕತ್ತಿ-ಲಕ್ಷ್ಮಣ ಸವದಿ

    ಬೆಳಗಾವಿ: ಕುಂದಾನಗರಿಯಲ್ಲಿ ಡಿಸಿಸಿ ಬ್ಯಾಂಕ್‍ಗೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸುತ್ತಾ ಎಂಬ ಆತಂಕ ಬಿಜೆಪಿ ನಾಯಕರಲ್ಲಿ ಹುಟ್ಟಿಕೊಂಡಿದೆ. ಕಳೆದ ಬಾರಿ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಜಟಾಪಟಿಯಿಂದ ಹೊತ್ತಿಕೊಂಡಿದ್ದ ಸಣ್ಣ ಕಿಡಿ ಮೈತ್ರಿ ಸರ್ಕಾರವನ್ನು ಉರುಳಿಸಿತ್ತು. ಇದೀಗ ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏನಾಗುತ್ತೋ ಅನ್ನೋ ಆತಂಕ ಕಮಲ ನಾಯಕರಲ್ಲಿ ಮನೆ ಮಾಡಿದೆ.

    ಪ್ರತಿಷ್ಠೆ ಪಣಕ್ಕಿಟ್ಟ ನಾಯಕರು: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಳಗಾವಿಯ ಮೂವರು ಬಿಜೆಪಿ ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಆಪ್ತನಾಗಿರುವ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸಲು ಮುಂದಾಗಿದ್ದಾರೆ. ಇತ್ತ ಬೆಳಗಾವಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಶಾಸಕ ಉಮೇಶ್ ಕತ್ತಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಸೋದರ ರಮೇಶ್ ಕತ್ತಿಯನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಉಮೇಶ್ ಕತ್ತಿ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಡಿಸಿಎಂ ಲಕ್ಷ್ಮಣ ಸವದಿ ಸಹ ಇಬ್ಬರಿಗೂ ಅಧ್ಯಕ್ಷ ಸ್ಥಾನ ತಪ್ಪಿಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಕಳೆದ ಬಾರಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಿಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸೋದರರ ನಡುವಿನ ಕಿತ್ತಾಟವೇ ಮೈತ್ರಿ ಸರ್ಕಾರ ಉರಳಲು ಮುನ್ನಡಿ ಬರೆದಿತ್ತು ಎಂದು ಹೇಳಲಾಗುತ್ತದೆ. ಹೀಗಾಗಿ ಸಿಎಂ ಸಹ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಮ್ಮ ಸಹವಾಸಕ್ಕೆ ನಾನು ಬರಲ್ಲ. ಚುನಾವಣೆಗೆ ಸಂಬಂಧಿಸಿದ ವಿಚಾರಗಳಿಗೂ ನನ್ನನ್ನು ಕರೆಯಬೇಡಿ ಎಂಬ ಸಂದೇಶವನ್ನು ಮುಖ್ಯಮಂತ್ರಿಗಳು ಬೆಳಗಾವಿ ನಾಯಕರಿಗೆ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮೂವರು ನಾಯಕರು ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲ ಪಡೆಯಲು ಮುಂದಾಗಿದ್ದು, ಸಿಎಂ ಯಾರಿಗೆ ಜೈ ಅನ್ನೋತ್ತಾರೆ ಅನ್ನೋದು ಸದ್ಯದ ಕುತೂಹಲ.

  • ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಹೆಚ್‍ಡಿಕೆ ಭೇಟಿಯಾದ ಉಮೇಶ್ ಕತ್ತಿ?

    ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಹೆಚ್‍ಡಿಕೆ ಭೇಟಿಯಾದ ಉಮೇಶ್ ಕತ್ತಿ?

    ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದವರು ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ಕೊಡುತ್ತಿದ್ದಾರೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಹಲವು ಶಾಸಕರು ಸಭೆ ಮಾಡಿದ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಈಗ ಅಂತದ್ದೇ ದೊಡ್ಡ ಸಂಚಲನ ಬಿಜೆಪಿಯಲ್ಲಿ ಸೃಷ್ಟಿಯಾಗಿದ್ದು, ಸಚಿವ ಸ್ಥಾನ ಸಿಗದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಾಜಿ ಸಿಎಂ, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

    ಮಂಗಳವಾರ ಸ್ವತಃ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಉಮೇಶ್ ಕತ್ತಿ ಮಾತುಕತೆ ನಡೆಸಿದ್ದಾರೆ ಅಂತ ಜೆಡಿಎಸ್ ಮೂಲಗಳು ಹೇಳುತ್ತಿವೆ. ಸುಮಾರು 15 ನಿಮಿಷಗಳ ಕಾಲ ರಾಜಕೀಯ ಚರ್ಚೆಗಳ ಬಗ್ಗೆ ಇಬ್ಬರು ನಾಯಕರು ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಉಮೇಶ್ ಕತ್ತಿ ಜೊತೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ಗೂಳಿಹಟ್ಟಿ ಶೇಖರ್ ಕೂಡ ಇದ್ದರು ಎನ್ನಲಾಗುತ್ತಿದೆ.

    ಉಮೇಶ್ ಕತ್ತಿಯ ಈ ನಡೆ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಿಢೀರ್ ಅಂತ ಕುಮಾರಸ್ವಾಮಿ ಭೇಟಿ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಭೇಟಿ ಮಾಡೋ ಮೂಲಕ ಸಚಿವ ಸ್ಥಾನಕ್ಕಾಗಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರಾ ಅನ್ನೋ ಅನುಮಾನ ಒಂದು ಕಡೆಯಾದ್ರೆ, ಬಂಡಾಯ ಬಿಜೆಪಿ ಶಾಸಕರ ಗುಂಪು ರಚನೆ ಮಾಡಿಕೊಂಡು ಸರ್ಕಾರದಿಂದ ಹೊರ ಬರುವ ಯತ್ನಗಳು ಮಾಡಬಹುದು ಎನ್ನಲಾಗ್ತಿದೆ. ಇದ್ಯಾವುದು ಆಗದೇ ಹೋದರೆ ಬಿಜೆಪಿ ತ್ಯಜಿಸಿ ಮತ್ತೆ ಜೆಡಿಎಸ್ ಸೇರುವ ಮೂಲಕ ಬಿಜೆಪಿಗೆ ಟಾಂಗ್ ಕೊಡೋ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗ್ತಿದೆ.

    ಕುಮಾರಸ್ವಾಮಿ ಭೇಟಿ ಬಗ್ಗೆ ಸ್ವತಃ ಉಮೇಶ್ ಕತ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಆರು ತಿಂಗಳಿಂದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಭೇಟಿ ಮಾಡಿದ್ರು ತಪ್ಪೇನಿದೆ ಅಂದರು. ನನನ್ನು ಮಂತ್ರಿ ಮಾಡೋರು ಅವರಲ್ಲ. ಯಡಿಯೂರಪ್ಪ ನಮ್ಮನ್ನ ಮಂತ್ರಿ ಮಾಡೋರು. ಕುಮಾರಸ್ವಾಮಿ ಬಳಿ ನಾನ್ಯಾಕೆ ಹೋಗಲಿ ಅಂತ ಪ್ರಶ್ನೆ ಮಾಡಿದ್ರು. ಯಡಿಯೂರಪ್ಪ ನಮ್ಮ ನಾಯಕರು. ಅವರು ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದೇ ಇದ್ದರೆ ಶಾಸಕನಾಗಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಜೆಡಿಎಸ್ ಸೇರೊಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

  • ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಚಿಕ್ಕೋಡಿ: ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರರನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತರಾಟೆಗೆ ತೆಗೆದುಕೊಂಡಿದ್ದರು.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಶಾಸಕ ಉಮೇಶ್ ಕತ್ತಿ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ವ್ಯವಸ್ಥೆ ನೋಡಿ ಗರಂ ಆದ ಶಾಸಕ ಕತ್ತಿ ಅಧಿಕಾರಿಗಳನ್ನ ಹಾಗೂ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರನ್ನ ತರಾಟೆಗೆ ತೆಗೆದುಕೊಂಡರು.

    ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರನನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಬಸ್ ನಿಲ್ದಾಣದ ಅಸ್ವಚ್ಛತೆ ಕಂಡು ಸ್ವಚ್ಛತೆ ಕಾಪಾಡದ ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಲು ಸೂಚನೆ ನೀಡಿದರು. ಜೊತೆಗೆ ಸ್ಥಳೀಯರಿಗೆ ಸ್ವಚ್ಛತೆಯ ಗುತ್ತಿಗೆ ನೀಡುವಂತೆ ಒತ್ತಾಯಿಸಿದರು.

    ಬಸ್ ನಿಲ್ದಾಣದಲ್ಲಿ ವೃದ್ಧರು ಹಾಗೂ ಹಿರಿಯರಿಗೆ ಅನುಕೂಲವಾಗುವ ಆಸನಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಕೇಶ್ವರ ಡಿಪೋ ಮ್ಯಾನೇಜರ್ ನಾಡಗೌಡ, ಬಿಜೆಪಿ ಮುಖಂಡರಾದ ಗುರು ಕುಲಕರ್ಣಿ, ಸದಾ ಮರಬಸ್ಸನವರ, ರಾಜು ಮುನ್ನೋಳಿ, ಶೇಖರ್ ತರೀಕರ ಸೇರಿದಂತೆ ಹಲವರು ಹಾಜರಿದ್ದರು.

  • ನಾನ್ ಏನೇ ಮಾತಾಡಿದ್ರೂ ವಿವಾದ ಆಗುತ್ತೆ- ರೇಣುಕಾಚಾರ್ಯ

    ನಾನ್ ಏನೇ ಮಾತಾಡಿದ್ರೂ ವಿವಾದ ಆಗುತ್ತೆ- ರೇಣುಕಾಚಾರ್ಯ

    – ಉಮೇಶ್ ಕತ್ತಿಗೆ ಟಾಂಗ್ ಕೊಡಲ್ಲ

    ದಾವಣಗೆರೆ: ಶಾಸಕ ಉಮೇಶ್ ಕತ್ತಿ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ. ಆದರೆ ಈಡೇರಬೇಕಲ್ವಾ? ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಈ ವಿಚಾರವಾಗಿ ನಾನು ಉಮೇಶ್ ಕತ್ತಿ ಅವರಿಗೆ ಟಾಂಗ್ ಕೊಡುವುದಿಲ್ಲ. ನಾನ್ ಏನೇ ಮಾತನಾಡಿದರೂ ವಿವಾದವಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

    ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ನಾನು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಆತ್ಮೀಯ ಸ್ನೇಹಿತರು. ಒಂದು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದೇನೆ. ಅಭ್ಯರ್ಥಿ ಸೋಲಿಸುವ ಕೀಳು ರಾಜಕೀಯ ಮಾಡಲು ಹೋಗುವುದಿಲ್ಲ. ಪಕ್ಷದ ಅಭ್ಯರ್ಥಿ ಸೋಲಿಸಿದರೆ ತಾಯಿಗೆ ಮೋಸ ಮಾಡಿದಂತೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ. ನಮ್ಮ ಅಭ್ಯರ್ಥಿ ಸೋಲನ್ನು ಯಾವತ್ತೂ ಬಯಸುವುದಿಲ್ಲ ಎಂದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿ ಮಾಡಿಲ್ಲ. ಈ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಆದರೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬಂದಿದೆ. ಇದು ಸತ್ಯಕ್ಕೆ ದೂರವಾದದ್ದು. ಹೊನ್ನಾಳಿಯಲ್ಲಿ ಮುಂದಿನ ತಿಂಗಳು ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದೇನೆ ಅಷ್ಟೇ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಟೆನ್ಶನ್ ಆಗಿಲ್ಲ. ನಾಲ್ಕು ಬಾರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಅಪಾರ ಅನುಭವವಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಲ್ಲಿದೆ. ತಾಳ್ಮೆಯಿಂದ ಎಲ್ಲವನ್ನೂ ಬಗೆಹರಿಸುತ್ತಾರೆ. ನಾನು ರಾಜಕೀಯದಲ್ಲಿ ಚಿಕ್ಕವನು ಎಂದು ಹೇಳಿದರು.

  • ಮಂತ್ರಿ ಸ್ಥಾನ ನೀಡದ ಹೈಕಮಾಂಡ್ ಮುಂದೆ ಉಮೇಶ್ ಕತ್ತಿ ಹೊಸ ಬೇಡಿಕೆ

    ಮಂತ್ರಿ ಸ್ಥಾನ ನೀಡದ ಹೈಕಮಾಂಡ್ ಮುಂದೆ ಉಮೇಶ್ ಕತ್ತಿ ಹೊಸ ಬೇಡಿಕೆ

    ನವದೆಹಲಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದೆ ನಿರಾಶೆಗೊಂಡಿದ್ದ ಶಾಸಕ ಉಮೇಶ್ ಕತ್ತಿ ಹೊಸ ದಾಳ ಉರುಳಿಸಿದ್ದಾರೆ. ಮಂತ್ರಿ ಮಾಡಿ ಇಲ್ಲ ರಾಜ್ಯಸಭೆಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.

    ದೆಹಲಿಯಲ್ಲಿರುವ ಉಮೇಶ್ ಕತ್ತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಜೂನ್ ನಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಈ ಪೈಕಿ ಎರಡು ಬಿಜೆಪಿ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ಸ್ಥಾನವನ್ನು ತಮ್ಮ ಸಹೋದರನಿಗೆ ನೀಡುವಂತೆ ಮನವಿ ಮಾಡಿದ್ದಾರೆ.

    ಚಿಕ್ಕೋಡಿ ಸಂಸದರಾಗಿದ್ದ ರಮೇಶ್ ಕತ್ತಿ ಲೋಕಸಭಾ ಸೀಟು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎನ್ನುವ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಈ ಮೂಲಕ ಮಂತ್ರಿ ಮಾಡದ ಹೈಕಮಾಂಡ್ ಮುಂದೆ ಮತ್ತೊಂದು ಹೊಸ ಬೇಡಿಕೆಯ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಅವರು, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೇಳಲು ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಮನವಿ ಮಾಡುತ್ತೇನೆ ಎಂದರು. ಸಚಿವ ಸ್ಥಾನಕ್ಕೆ ಬದಲಿಯಾಗಿ ರಾಜ್ಯಸಭೆ ಸ್ಥಾನ ಕೇಳುತ್ತಿಲ್ಲ. ಉಮೇಶ್ ಕತ್ತಿ ಬೇರೆ ರಮೇಶ್ ಕತ್ತಿ ಬೇರೆ, ಇಬ್ಬರು ಸಹೋದರರು ಆದರೆ ಜೀವ ಬೇರೆ, ಮುಂದಿನ ದಿನದಲ್ಲಿ ನನಗೂ ಸಚಿವ ಸ್ಥಾನ ಸಿಗಬಹುದು. ಪ್ರತಿಬಾರಿ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೆ. ಆದರೆ ಕಡೆ ಘಳಿಗೆಯಲ್ಲಿ ಹೆಸರು ಪಟ್ಟಿಯಿಂದ ಹೊರ ಉಳಿಯುತ್ತೆ. ಇದು ಹೊಸದಲ್ಲ ಎಂದು ಬಿಎಸ್‍ವೈ ವಿರುದ್ಧ ಪರೋಕ್ಷವಾಗಿ ಕುಟುಕಿದರು.

    ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಪಕ್ಷದಲ್ಲಿ ಹಿರಿಯನಿದ್ದೇನೆ, ಇನ್ನೂ ಎರಡು ಬಾರಿ ಚುನಾವಣಾಗೆ ಸ್ಪರ್ಧಿಸಲಿದ್ದೇನೆ. ಮುಂದೆ ಮಂತ್ರಿಯಾಗಬಹುದು ಸಿಎಂ ಕೂಡ ಆಗಲೂಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಶಾಸಕರಿಂದ ಮುಂದುವರಿದ ಲಾಬಿ:
    ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿರುವ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಕಳೆದ ಬಾರಿಗೂ ಸಂತೋಷ ಸೇರಿ ಹಲವು ನಾಯಕರನ್ನ ಭೇಟಿ ಮಾಡಿ ಸಂಪುಟ ಸೇರಲು ಕಸರತ್ತು ನಡೆಸಿದ್ದರು. ಆದರೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ಕಡೆ ಘಳಿಗೆಯಲ್ಲಿ ಮಂತ್ರಿ ಮಾಡದಂತೆ ಬಿಎಸ್‍ವೈ ಹೈಕಮಾಂಡ್ ಸೂಚನೆ ನೀಡಿತ್ತು.

  • ಸೋತವರಿಗೆ ಸಚಿವ ಸ್ಥಾನ ಕೊಡುವುದಾದ್ರೆ ಚುನಾವಣೆ ಯಾಕೆ ಬೇಕು- ಕತ್ತಿ ಪ್ರಶ್ನೆ

    ಸೋತವರಿಗೆ ಸಚಿವ ಸ್ಥಾನ ಕೊಡುವುದಾದ್ರೆ ಚುನಾವಣೆ ಯಾಕೆ ಬೇಕು- ಕತ್ತಿ ಪ್ರಶ್ನೆ

    -ನನ್ನ ಯೋಗ್ಯತೆಗೆ ಸಿಎಂ ಸ್ಥಾನ ಸಿಗಲೇಬೇಕು
    -ಹೆಂಡ್ತಿ ಜೊತೆಯೇ ಮುನಿಸಿಕೊಳ್ಳಲ್ಲ, ಬಿಎಸ್‍ವೈ ಜೊತೆ ಮುನಿಸಿಕೊಳ್ತೀನಾ?

    ಬೆಳಗಾವಿ/ಚಿಕ್ಕೋಡಿ: ಸೋತವರನ್ನು ಸಚಿವರನ್ನಾಗಿ ಮಾಡುವುದು ಸರಿಯಲ್ಲ. ಸೋತವರಿಗೆ ಮಂತ್ರಿ ಸ್ಥಾನ ಕೊಡಬಾರದು. ಸೋತವರಿಗೆ ಸಚಿವ ಸ್ಥಾನ ಕೊಡುವದಾದರೆ ಚುನಾವಣೆ ಯಾಕೆ ಬೇಕು ಎಂದು ಹುಕ್ಕೇರಿ ಶಾಸಕ ಹಾಗೂ ಬಿಜೆಪಿ ಮುಖಂಡ ಉಮೇಶ್ ಕತ್ತಿ ಪ್ರಶ್ನಿಸಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನ ಕೊಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಸೋತು ಸಚಿವ ಗಾದಿ ಅನುಭವಿಸುತ್ತಿರುವರಿಗೆ ಟಾಂಗ್ ನೀಡಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಕೊಡದೆ ಇರುವದಕ್ಕೆ ನನ್ನಲ್ಲಿ ಯಾವುದೇ ಅಸಮಾಧಾನವಿಲ್ಲ. 8 ಬಾರಿ ಶಾಸಕನಾಗಿದ್ದೇನೆ ಮುಂದೆ ಮಂತ್ರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದರು.

    ಮಂತ್ರಿ ಆಗಬೇಕಿತ್ತು ಆದರೆ ಆಗಿಲ್ಲ ಅದು ನನ್ನ ನಸೀಬಿನಲ್ಲಿಲ್ಲ. ಮೂರು ವರ್ಷ ಅವಧಿಯಿದೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಂತ್ರಿ ಆಗುತ್ತೇನೆ ಎನ್ನುವ ಆಸೆಯಿದೆ. 8 ಬಾರಿ ಶಾಸಕನಾಗಿದ್ದೇನೆ ಮುಖ್ಯಮಂತ್ರಿ ಆಗುವ ದಿನಗಳು ದೂರಿಲ್ಲ. ಇನ್ನೂ ನನಗೆ ವಯಸ್ಸಿದೆ 10 ವರ್ಷ ರಾಜಕಾರಣ ಮಾಡುತ್ತೇನೆ. ಅಧಿಕಾರ ಇರಲಿ ಬಿಡಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಶಾಸಕನಾಗಿ ಈಗ ಸದ್ಯ ಕೆಲಸ ಮಾಡುತ್ತೇನೆ ಎಂದ ಅವರು ಈ ದಿನಮಾನಗಳಲ್ಲಿ ಯಾರ ಮೇಲೆ ಕೋಪ ಮಾಡಿಕೊಂಡರು ಏನು ಆಗುವದಿಲ್ಲ. ಹೀಗಾಗಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹೈ ಕಮಾಂಡ್ ಮೇಲೆ ನನ್ನ ಕೋಪವಿಲ್ಲ ಎಂದು ತಿಳಿಸಿದರು.

    ಅಥಣಿ ಕ್ಷೇತ್ರದಿಂದ ಗೆದ್ದ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ಸ್ಥಾನ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಯಡಿಯೂರಪ್ಪ ಒಳ್ಳೆಯ ಸರ್ಕಾರ ಕೊಡುತ್ತಿದ್ದಾರೆ. ಈಗಾಗಲೇ 13 ವರ್ಷ ಮಂತ್ರಿಯಾಗಿದ್ದೇನೆ. ಹೀಗಾಗಿ ಹೊಸಬರಿಗೆ ಸಚಿವ ಕೊಟ್ಟಿದ್ದಾರೆ ತಪ್ಪೇನಿದೆ. ಖಾತೆ ಕೊಡದೆ ಇದ್ದುದ್ದಕ್ಕೆ ಮುನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನನ್ನ ಹೆಂಡತಿ ಜೊತೆಗೆ ನಾನು ಮುನಿಸಿಕೊಳ್ಳುವುದಿಲ್ಲ. ಹೀಗಿರುವಾಗ ಯಡಿಯೂರಪ್ಪ ಜೊತೆ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ. ನನ್ನ ಯೋಗ್ಯತೆಗೆ ಯಡಿಯೂರಪ್ಪ ಇರುವ ಸಿಎಂ ಸ್ಥಾನ ಸಿಗಲೇ ಬೇಕು. ಆ ದಿಸೆಯಲ್ಲಿ ನನ್ನ ಪ್ರಯತ್ನ ಇದೆ. ದೇವರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ ಎಂದರು. ಈ ವೇಳೆ ಸೋತ ಸವದಿ ಅವರಿಗೆ ಸಚಿವ ಸ್ಥಾನ ಕೊಟ್ಟ ವಿಚಾರದ ಬಗ್ಗೆ ಮಾತನಾಡಿ ಅವರಿಗೆ ಅನುಭವ ಹೆಚ್ಚಿದೆ. ನಮಗೆ ಕಡಿಮೆ ಇದೆ ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ನೀಡಿದರು.

  • ಹೈಕಮಾಂಡ್ ಜತೆ ಚರ್ಚಿಸಿದ ಬಳಿ ಉಮೇಶ್ ಕತ್ತಿಗೆ ಮಂತ್ರಿಗಿರಿ: ಬಿಎಸ್‍ವೈ

    ಹೈಕಮಾಂಡ್ ಜತೆ ಚರ್ಚಿಸಿದ ಬಳಿ ಉಮೇಶ್ ಕತ್ತಿಗೆ ಮಂತ್ರಿಗಿರಿ: ಬಿಎಸ್‍ವೈ

    – ಕುಮಟಳ್ಳಿಗೆ ಸಚಿವ ಸ್ಥಾನ ಕೊಡೋದು ಕಷ್ಟ

    ಬೆಂಗಳೂರು: ನೂತನ ಸಚಿವ ಪಟ್ಟಿ ಬಿಡುಗಡೆಯಾಗಿದ್ದು ಗುರುವಾರ 10 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಫೋನ್ ಮಾಡಿ 10 ಜನರನ್ನು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ, ಉಳಿದವರಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಿ ಎಂದಿದ್ದಾರೆ. ಅದರಂತೆ 10 ಜನರು ಮಾತ್ರ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ಮಾಜಿ ಸಚಿವ ಉಮೇಶ್ ಕತ್ತಿ ಅವರು ನಾಳೆಯೇ ಪ್ರಮಾಣವಚನ ಸ್ವೀಕಾರ ಮಾಡಬೇಕಿತ್ತು. ಆದರೆ ರಾಜೀನಾಮೆ ಕೊಟ್ಟು ಬಂದಿರುವ ಶಾಸಕರನ್ನಷ್ಟೇ ಸಚಿವರನ್ನಾಗಿ ಮಾಡಿ, ಉಳಿದಂತೆ ಯಾರನ್ನು ಸಂಪುಟಕ್ಕೆ ಸೇರಿಸವುದು ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಉಮೇಶ್ ಕತ್ತಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ. ಅವರು ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತಾರೆ. ಈಗ ಆಗದೆ ಇದ್ದರೂ ಮುಂದೆ ಅವರನ್ನು ಮಂತ್ರಿ ಮಾಡುತ್ತೇವೆ. ಆದರೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೊಡುವುದು ಕಷ್ಟ ಆಗುತ್ತದೆ. ಈ ನಿಟ್ಟಿನಲ್ಲಿ ಅವರನ್ನು ಕರೆದು ಮಾತನಾಡುವ ಪ್ರಯತ್ನ ಮಾಡಿ, ಬೇರೆ ಅವರಿಗೆ ಬೇರೆ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

    ದೆಹಲಿಗೆ ಬನ್ನಿ ಎಂದು ರಾಷ್ಟ್ರೀಯ ನಾಯಕರು ಕರೆದಿದ್ದಾರೆ. ಶೀಘ್ರದಲ್ಲೇ ತೆರಳಿ ಉಳಿದ ನಾಯಕರನ್ನು ಸಚಿವರನ್ನಾಗಿ ಮಾಡುವ ಸಂಬಂಧ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್