Tag: ಉಮೇಶ್ ಕತ್ತಿ

  • ರಾಜ್ಯಸಭಾ ಟಿಕೆಟ್- ಪ್ರಭಾಕರ ಕೋರೆ ಪರ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್

    ರಾಜ್ಯಸಭಾ ಟಿಕೆಟ್- ಪ್ರಭಾಕರ ಕೋರೆ ಪರ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್

    ಚಿಕ್ಕೋಡಿ: ಬಿಜೆಪಿಯಲ್ಲಿ ರಾಜ್ಯಸಭಾ ಟಿಕೆಟ್ ಗೊಂದಲದ ವಿಚಾರವಾಗಿ ಶಾಸಕ ಉಮೇಶ ಕತ್ತಿ ಕುಟುಂಬ ಹಾಗೂ ಸವದಿ ಕುಟುಂಬದ ನಡುವೆ ಯಾವುದೂ ಸರಿಯಿಲ್ಲ ಎಂಬುದನ್ನು ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಸಾಬೀತು ಪಡಿಸಿದ್ದಾರೆ.

    ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಟಿಕೆಟ್‍ನ್ನು ಹಾಲಿ ಇರುವ ಪ್ರಭಾಕರ ಕೋರೆ ಅವರಿಗೆ ನೀಡಬೇಕು ಎಂದು ಕೋರೆ ಪರ ಬ್ಯಾಟ್ ಬೀಸಿದ್ದಾರೆ.ಪ್ರಭಾಕರ ಕೋರೆ ಹಿರಿಯರು, ಅವರ ಬಗ್ಗೆ ಸಹಾನೂಭೂತಿ ಇರಲಿ. ಬೆಳಗಾವಿ, ಬಾಗಲಕೋಟೆ, ವಿಜಯಪೂರದ ಕೆಲ ಶಾಸಕರು ಕೋರೆ ಅವರನ್ನೇ ಮುಂದುವರೆಸುವಂತೆ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ. ಆದರೂ ಈ ಬಗ್ಗೆ ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು
    ಪರೋಕ್ಷವಾಗಿ ಮಾಜಿ ಸಂಸದ ರಮೇಶ ಕತ್ತಿ ರಾಜ್ಯಸಭೆ ಎಂಟ್ರಿಗೆ ಲಕ್ಷ್ಮಣ ಸವದಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಪ್ರಭಾಕರ ಕೋರೆ ಅವರ ರಾಜ್ಯಸಭೆ ಟಿಕೆಟ್ ತಪ್ಪಿಸಿ ಮಾಜಿ ಸಂಸದ, ಸಹೋದರ ರಮೇಶ ಕತ್ತಿಗೆ ನೀಡುವಂತೆ ಶಾಸಕ ಉಮೇಶ ಕತ್ತಿ ಪಟ್ಟು ಹಿಡಿದಿದ್ದು, ಬೆಳಗಾವಿ ರಾಜಕಾರಣ ರಾಜ್ಯ ರಾಜಕಾರಣನ್ನು ಯಾವ ಹಂತಕ್ಕೆ ಕೊಂಡೊಯಲಿದೆ ಎಂಬುವದನ್ನ ಕಾದು ನೋಡಬೇಕಿದೆ.

    ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಉಮೇಶ ಕತ್ತಿ ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಕೇವಲ ಊಟಕ್ಕಾಗಿ ಅವರು ಸಭೆ ನಡೆಸಿದ್ದಾರೆ. ಅದಕ್ಕೆ ರೆಕ್ಕೆಪುಕ್ಕ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

  • ನಾನು ಹಿರಿಯ, ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ನೆಹರು ಓಲೇಕಾರ್

    ನಾನು ಹಿರಿಯ, ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ನೆಹರು ಓಲೇಕಾರ್

    -ಆಂತರಿಕವಾಗಿ ಮಾತಾಡ್ತಾರೆ, ಬಹಿರಂಗವಾಗಿ ಯಾರೂ ಹೇಳ್ತಿಲ್ಲ

    ಹಾವೇರಿ: ನಾನು ಸಹ ಪಕ್ಷದಲ್ಲಿಯ ಹಿರಿಯ ನಾಯಕರಲ್ಲಿ ಒಬ್ಬ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಪಕ್ಷದಲ್ಲಿಯ ಹಿರಿಯರು ಶಮನ ಮಾಡುತ್ತಾರೆ. ನಾನು ಪರಿಶಿಷ್ಠ ಜಾತಿಯ ಬಲಗೈ ಮುಖಂಡ. ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಇದುವರೆಗೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೆ ಅವಕಾಶ ನೀಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲರೂ ಸಚಿವರಾಗಲು ನಾನಾ ತಂತ್ರಗಳನ್ನು ಮಾಡುತ್ತಿದ್ದು, ಅದು ಹೊರಗಡೆ ಭಿನ್ನಾಭಿಪ್ರಾಯದ ರೀತಿಯಲ್ಲಿ ಕಾಣಿಸುತ್ತಿದೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಶಮನವಾಗಲಿದೆ ಎಂದು ಹೇಳಿದರು.

    ಅಧಿಕಾರ ಬೇಕೆಂದಾಗ ಭಿನ್ನಾಭಿಪ್ರಾಯ ಉಂಟಾಗೋದು ಸಹಜ. ತಮಗೆ ಸಚಿವ ಸ್ಥಾನ ನೀಡಲಿಲ್ಲ ಅಂದ್ರೆ ಯಡಿಯೂರಪ್ಪನವರನ್ನು ಕೆಳಗೆ ಇಳಿಸ್ತೀವಿ ಅಂತಾ ಕೆಲವರು ಆಂತರಿಕವಾಗಿ ಹೇಳ್ತಾರೆ. ಆದ್ರೆ ಯಾರು ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ, ಅಸಮರ್ಥರನ್ನು ಕೈಬಿಡಬೇಕು. ಮುಂದಿನ ದಿನಗಳಲ್ಲಿ ಉಮೇಶ್ ಕತ್ತಿಯವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಿಜೆಪಿಯಲ್ಲಿನ ಗೊಂದಲಕ್ಕೆ ಶಾಸಕ ಉಮೇಶ್ ಕತ್ತಿ ಸ್ಪಷ್ಟನೆ

    ಬಿಜೆಪಿಯಲ್ಲಿನ ಗೊಂದಲಕ್ಕೆ ಶಾಸಕ ಉಮೇಶ್ ಕತ್ತಿ ಸ್ಪಷ್ಟನೆ

    ಬೆಂಗಳೂರು: ಉತ್ತರ ಕರ್ನಾಟಕದ ಶಾಸಕರು ನಮ್ಮ ಮನೆಯಲ್ಲಿ ಊಟ ಮಾಡಿದ್ದರು. ಆದರೆ ಈ ವೇಳೆ ಯಾವುದೇ ಬಂಡಾಯದ ಚರ್ಚೆಯಾಗಿಲ್ಲ, ಅಸಮಾಧಾನ ಇಲ್ಲ ಎಂದು ಶಾಸಕ ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಉಮೇಶ್ ಕತ್ತಿ, ಕೊರೊನಾದಿಂದ ಬೆಂಗಳೂರಿನಿಂದ ಬಂದಂತಹ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಶಾಸಕರಿಗೆ ತೊಂದರೆಯಾಗಿದೆ. ಏಳು ದಿನಗಳ ಹಿಂದೆ ನಮ್ಮ ಮನೆಯಲ್ಲಿ ಊಟ ಮಾಡಿದ್ವಿ. ಇದೇ ಗುರುವಾರ ಮತ್ತೆ ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ವಿ. ಇದು ಮುಖ್ಯಮಂತ್ರಿ ಅವರ ಗಮನಕ್ಕೂ ಬಂದಿದೆ ಎಂದರು. ಇದನ್ನೂ ಓದಿ: ಬಿಎಸ್‍ವೈ ಸಿಎಂ ಅಷ್ಟೇ, ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು: ಯತ್ನಾಳ್

    ಕಳೆದ ಮೂರು ದಿನಗಳಿಂದ ಮತ್ತೆ ನಾವು ಭೇಟಿ ಆಗಿಲ್ಲ. ಆದರೆ ಊಟ ಮಾಡುವ ಸಂದರ್ಭದಲ್ಲಿ ನಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೇವೆ. ಈ ವೇಳೆ ಯಾವುದೇ ರಾಜಕೀಯದ ಚರ್ಚೆ ನಡೆದಿಲ್ಲ. ಬಂಡಾಯದ ಚರ್ಚೆಯಾಗಿಲ್ಲ, ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಮೊನ್ನೆ ನನ್ನ ತಮ್ಮನನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆಗೆ ವಿಚಾರವಾಗಿ ಮುಖ್ಯಮಂತ್ರಿ ಮನೆಗೆ ಹೋಗಿ ಮನವಿ ಮಾಡಿದ್ದೇನೆ. ಲೋಕಸಭೆ ವೇಳೆ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಅದನ್ನು ಕೇಳಲು ಸಿಎಂ ಮನೆಗೆ ಹೋಗಿದ್ದೆವು. ಯಾವಾಗ ಮಾಡುತ್ತಾರೋ ಮಾಡಲಿ, ಆದರೆ ಶಿಫಾರಸು ಕರ್ನಾಟಕ ರಾಜ್ಯದಿಂದ ಆಗಲಿ ಎಂದು ಹೇಳಿ ಬಂದಿದ್ದೇನೆ ಎಂದು ಉಮೇಶ್ ಕತ್ತಿ ಹೇಳಿದರು.

    ಅದೇ ರೀತಿ ರಾಜ್ಯದ ಅಧ್ಯಕ್ಷರನ್ನು ಭೇಟಿಯಾಗಲಿದ್ದೇನೆ. ಈ ನಡುವೆ ಬಂಡಾಯ ಶಾಸಕರ ಭೂಜನ ಕೂಟ ಎಂಬ ಗೊಂದಲ ಸೃಷ್ಟಿಯಾಗಿದೆ. ನಾವು ಜವಾಬ್ದಾರಿ ಶಾಸಕರು, ನಾನು ಒಂಭತ್ತು ಬಾರಿ ಶಾಸಕನಾಗಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಹೀಗಾಗಿ ಈ ಕೊರೊನಾ ಸಂದರ್ಭದಲ್ಲಿ ಯಾವುದೇ ಬಂಡಾಯ ಮಾಡಿಲ್ಲ, ಅಸಮಾಧಾನವೂ ಇಲ್ಲ. ಎಲ್ಲಾ ಶಾಸಕರು ಕೂಡಿ ಊಟ ಮಾಡಿದೆವು ವಿನಃ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಕತ್ತಿ ಸ್ಪಷ್ಟನೆ ನೀಡಿದರು.

  • ಉಮೇಶ್ ಕತ್ತಿ ಏನೇನೋ ಆಡ್ತಾನೆ, ಆದ್ರೆ ಪಕ್ಷ ಬಿಡಲ್ಲ: ರಮೇಶ್ ಜಾರಕಿಹೊಳಿ

    ಉಮೇಶ್ ಕತ್ತಿ ಏನೇನೋ ಆಡ್ತಾನೆ, ಆದ್ರೆ ಪಕ್ಷ ಬಿಡಲ್ಲ: ರಮೇಶ್ ಜಾರಕಿಹೊಳಿ

    ಮೈಸೂರು: ಶಾಸಕ ಉಮೇಶ್ ಕತ್ತಿ ಏನೇನೋ ಆಡ್ತಾನೆ. ಆದರೆ ಪಕ್ಷ ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿಯ ಕೆಲ ಶಾಸಕರಿಂದ ರಹಸ್ಯ ಸಭೆ ವಿಚಾರ ಸಂಬಂಧ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಫಿ, ತಿಂಡಿಗೆ ಸೇರುವುದೆಲ್ಲ ತಪ್ಪಲ್ಲ ಎಂದರು.

    ಕೊರೊನಾ ಲಾಕ್‍ಡೌನ್ ಕಾರಣದಿಂದ ಯಾರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಹಳ ದಿನಗಳ ನಂತರ ಎಲ್ಲರೂ ಕೂಡಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡಿದ್ದಾರೆ. ಅದನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ಸಭೆ ಸೇರಿದ ಮಾತ್ರಕ್ಕೆ ಏನೇನೋ ಆಗಿ ಬಿಡುವುದಿಲ್ಲ ಎಂದು ಗುಡುಗಿದರು. ಉಮೇಶ್ ಕತ್ತಿ ನನ್ನ ಸ್ನೇಹಿತ. ಆತ ಏನೇನೋ ಆಡ್ತಾನೆ, ಆದ್ರೆ ಪಕ್ಷ ಬಿಡುವುದಿಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

    ಗುರುವಾರ ಪಬ್ಲಿಕ್ ಟಿವಿ ಜೊತೆ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಟಿಕೆಟ್ ತಪ್ಪಿದಾಗ ನಮ್ಮನ್ನು ಭೇಟಿಯಾಗಿದ್ದ ಯಡಿಯೂರಪ್ಪನವರು ರಾಜ್ಯಸಭೆಯ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅದಕ್ಕಿಂತ 2014ರ ಚುನಾವಣೆಯಲ್ಲಿ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆದರೂ 2019ರ ಚುನಾವಣೆಯಲ್ಲಿ ನನಗೆ ಯಾಕೆ ಟಿಕೆಟ್ ನೀಡಲಿಲ್ಲ ಕಾರಣ ಇದುವರೆಗೂ ಗೊತ್ತಿಲ್ಲ. ನಾವೆಲ್ಲ 15 ಶಾಸಕರು ಒಂದೆಡೆ ಸೇರಿದ ವಿಷಯ ಸಿಎಂ ಯಡಿಯೂರಪ್ಪರಿಗೆ ಗೊತ್ತು ಎಂದು ಹೇಳುವ ಮೂಲಕ ಸಭೆ ನಡೆದಿರೋದು ಸತ್ಯ ಎಂಬುದನ್ನು ಒಪ್ಪಿಕೊಂಡಿದ್ದರು.

    ಸೋದರ ಉಮೇಶ್ ಕತ್ತಿ ಬಿಜೆಪಿಯಲ್ಲಿರುವ ಹಿರಿಯ ನಾಯಕರಲ್ಲಿ ಒಬ್ಬರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ನನಗೆ ರಾಜ್ಯಸಭೆಯ ಟಿಕೆಟ್ ಸಿಗಲೇಬೇಕು. ಯಡಿಯೂರಪ್ಪನವರು ನಮ್ಮ ನಾಯಕರು. ನಾವು ಚಿಕ್ಕವರಿದಾಗಿನಿಂದಲೂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಂದಿದ್ದೇವೆ. ಉಮೇಶ್ ಕತ್ತಿ ಸಚಿವ ಸ್ಥಾನ ಮತ್ತು ನಾನು ರಾಜ್ಯಸಭಾ ಟಿಕೆಟ್ ಕೇಳುವುದು ನಮ್ಮ ಹಕ್ಕು. ಆದರೆ ನಾವು ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದರು.

  • ಕೊರೊನಾ ಮಧ್ಯೆ ಗರಿಗೆದರಿದ ರಾಜಕೀಯ- ಬಿಜೆಪಿಯಲ್ಲಿನ ಒಳಜಗಳದಿಂದ ಲಾಭ ಪಡೆದುಕೊಳ್ಳುತ್ತಾ ಕಾಂಗ್ರೆಸ್?

    ಕೊರೊನಾ ಮಧ್ಯೆ ಗರಿಗೆದರಿದ ರಾಜಕೀಯ- ಬಿಜೆಪಿಯಲ್ಲಿನ ಒಳಜಗಳದಿಂದ ಲಾಭ ಪಡೆದುಕೊಳ್ಳುತ್ತಾ ಕಾಂಗ್ರೆಸ್?

    – ಸಿದ್ದರಾಮಯ್ಯ ಭೇಟಿಯಾಗಿದ್ದ ಉಮೇಶ್ ಕತ್ತಿ?

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎಂಬ ಹೆಮ್ಮಾರಿ ತಾಂಡವವಾಡುತ್ತಿದ್ದು, ಈ ಮಧ್ಯೆ ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಕೆಲ ಶಾಸಕರು ಬಂಡಾಯವೆದ್ದಿದ್ದು, ಪಕ್ಷದ ಈ ಒಳಜಗಳಗಳನ್ನು ಕಾಂಗ್ರೆಸ್ ಎನ್ ಕ್ಯಾಶ್ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಬಿಜೆಪಿಯಲ್ಲಿ ಶಾಸಕರು ಬಂಡಾಯವೇಳುತ್ತಿದ್ದಂತೆಯೇ ವಿರೋಧ ಪಕ್ಷದಲ್ಲಿ ಕೂಡ ರಾಜಕೀಯ ಮೇಲಾಟ ಶುರುವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 15 ದಿನಗಳಿಂದ ಆಪರೇಷನ್ ಯಡಿಯೂರಪ್ಪ ಪ್ಲಾನ್ ನಡೆಯುತ್ತಿದೆ. ಈ ಪ್ಲಾನ್ ತಿಳಿದು ವಿರೋಧ ಪಕ್ಷಗಳು ಕಾದುನೋಡುವ ತಂತ್ರ ಅನುಸರಿಸುತ್ತಿವೆಯಂತೆ. ನಾಲ್ಕೈದು ದಿನದ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿಗೆ ಹೆಚ್.ಡಿ ರೇವಣ್ಣ ತೆರಳಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಕೆಲ ಬಂಡಾಯ ಶಾಸಕರ ಜೊತೆಯೂ ಸಂಪರ್ಕ ಇದೆ ಅನ್ನೋ ಮಾಹಿತಿ ಇದೆ. ಆದರೆ ಸಿದ್ದರಾಮಯ್ಯ ಈಗ ಸಕಾಲ ಅಲ್ಲ, ಕಾಯೋಣ ಎಂದಿದ್ದಾರೆ ಎನ್ನಲಾಗಿದೆ.

    ರೇವಣ್ಣ ಕೂಡ ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನ ನಿರ್ಲಕ್ಷ್ಯ ಮಾಡೋದು ಬೇಡ ಎಂದು ಕಿವಿಮಾತು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಯಿಂದ ಯಾರಿಗೆ ಲಾಭ?, ಯಾರಿಗೆ ನಷ್ಟವಾಗಲಿದೆ ಎಂಬುದು ಕುತೂಹಲವಾಗಿದೆ. ಇತ್ತ ರೇವಣ್ಣ ಭೇಟಿ ಬಳಿಕ ಸಿದ್ದರಾಮಯ್ಯ ಉಮೇಶ್ ಕತ್ತಿಯವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿಯೂ ಲಭಿಸಿದೆ. ನಾಲ್ಕು ದಿನಗಳ ಹಿಂದೆಯೇ ಸಿದ್ದರಾಮಯ್ಯ ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    ನಾವು ಬಂಡಾಯ ಶಾಸಕರಲ್ಲ, ಸರ್ಕಾರವನ್ನು ಬೀಳಿಸುವುದಿಲ್ಲ: ಯತ್ನಾಳ್

    – ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ವಿ

    ಬೆಂಗಳೂರು: ನಾವು ಬಂಡಾಯ ಶಾಸಕರು ಅಲ್ಲ. ನಾವು ನಮ್ಮ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ವಿರುದ್ಧ ಬಂಡಾಯ ಎದ್ದು, ಸಭೆ ಮಾಡಲು ಹೋಗಿರಲಿಲ್ಲ. ಲಾಕ್‍ಡೌನ್‍ನಿಂದ ಹೋಟೆಲ್ ಬಂದ್ ಆಗಿ ರೊಟ್ಟಿ ತಿನ್ನಲು ಆಗಿರಲ್ಲಿಲ್ಲ. ಆದ್ದರಿಂದ ಉಮೇಶ್ ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು. ಅಲ್ಲಿ ಮಾವಿನ ಹಣ್ಣು ತಿಂದು ಲೋಕಾಭಿರಾಮವಾಗಿ ಮಾತಾಡಿದ್ದೇವೆ ಎಂದು ಹೇಳಿದ್ದಾರೆ.

    ನಮಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ಆ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಮನೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ಸರ್ಕಾರ ಕೆಡುವುವ ಕೆಲಸ ಯತ್ನಾಳ್ ಮಾಡುವುದಿಲ್ಲ. ಇನ್ನೂ ಉಳಿದ ವರ್ಷ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ನಾವು ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ನಮಗೆ ಮಾತನಾಡಲು ಮುಕ್ತವಾದ ಸ್ವಾತಂತ್ರ ಇದೆ ಎಂದು ಯತ್ನಾಳ್ ತಿಳಿಸಿದ್ದಾರೆ.

    ನಾನು ಯಾವುದೇ ವಿಚಾರವಾಗಿ ಮಾತನಾಡಲು ಭಯಪಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಬಿಎಸ್‍ವೈ ಇಳಿಸುವ ಕೆಲಸ ನಾವು ಮಾಡಿಲ್ಲ. ಈ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಈ ಸಭೆಯಲ್ಲಿ ಅಭಿವೃದ್ಧಿ ವಿಚಾರ ಚರ್ಚೆ ಆಗಿದೆ. ಕ್ಷೇತ್ರದ ವಿಚಾರ ಚರ್ಚೆ ಆಗಿದೆ. ಕೊರೊನಾದಲ್ಲಿ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಸಣ್ಣ ಪುಟ್ಟ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇವೆ ಎಂದರು.

    ಇದೇ ವೇಳೆ ಉಮೇಶ್ ಕತ್ತಿ ಅವರ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದು, ಈ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದರ ಬಗ್ಗೆ ನಾವು ಮಾತನಾಡಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

  • ಸರ್ಕಾರ ರಚನೆಯಾದ 10 ತಿಂಗ್ಳಲ್ಲಿ ಉಮೇಶ್ ಕತ್ತಿ ಬಂಡೆದ್ದಿದ್ದು ಇದು ಮೂರನೇ ಸಲ!

    ಸರ್ಕಾರ ರಚನೆಯಾದ 10 ತಿಂಗ್ಳಲ್ಲಿ ಉಮೇಶ್ ಕತ್ತಿ ಬಂಡೆದ್ದಿದ್ದು ಇದು ಮೂರನೇ ಸಲ!

    ಬೆಂಗಳೂರು: ಶಾಸಕ ಉಮೇಶ್ ಕತ್ತಿ ಅವರು ಬಂಡಾಯವೆದ್ದಿದ್ದು ಇದು ಮೂರನೇ ಬಾರಿಯಾಗಿದ್ದು, ಕತ್ತಿಯವರ ಮೂರನೇ ಬಂಡಾಯ ಸಕ್ಸಸ್ ಆಗುತ್ತಾ ಅಥವಾ ಫೇಲ್ ಆಗುತ್ತಾ ಎಂಬುದು ಕುತೂಹಲ ಹುಟ್ಟಿಸಿದೆ.

    ಸರ್ಕಾರಕ್ಕೆ ಇನ್ನೆರಡು ತಿಂಗಳಲ್ಲಿ 1 ವರ್ಷ ತುಂಬಲಿದೆ. ಈ ಹತ್ತು ತಿಂಗಳಲ್ಲಿ ಯಡಿಯೂರಪ್ಪ ಆಪ್ತರೇ ಮೂರು ಬಾರಿ ಬಂಡಾಯ ಎದ್ದಿದ್ದಾರೆ. ಈ ಮೂರೂ ಬಂಡಾಯಗಳಲ್ಲೂ ಉಮೇಶ್ ಕತ್ತಿಯೇ ಮುಂಚೂಣಿಯಲ್ಲಿದ್ದಿದ್ದು ವಿಶೇಷವಾಗಿದೆ.

    ಸರ್ಕಾರ ರಚನೆ ಆದಾಗ ಉಮೇಶ್ ಕತ್ತಿ ಬದಲು ಸೋತಿದ್ದ ಲಕ್ಷ್ಮಣ್ ಸವದಿಗೆ ಬಂಪರ್ ಗಿಫ್ಟ್ ನೀಡಲಾಗಿತ್ತು. ಇದರಿಂದ ತಿವ್ರವಾಗಿ ಸಿಟ್ಟಿಗೆದ್ದಿದ್ದ ಕತ್ತಿ, ನಾನು ಬೇರೆ ನಿರ್ಧಾರ ತಗೋಬೇಕಾಗುತ್ತೆ ಅನ್ನೋ ಸಂದೇಶವನ್ನು ಮೊದಲ ಬಾರಿ ಬಂಡಾಯವೆದ್ದ ಸಂದರ್ಭದಲ್ಲಿ ಕೊಟ್ಟಿದ್ದರು. ಅಲ್ಲದೆ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತಕತೆಯನ್ನೂ ನಡೆಸಿದ್ದರು. ಆದರೆ ಆಗ ಯಡಿಯೂರಪ್ಪ ಅವರು ಉಮೇಶ್ ಕತ್ತಿಯನ್ನು ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದರು. ಇದನ್ನೂ ಓದಿ: BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!

    ನಂತರ ವಲಸೆ ಬಂದ ಅನರ್ಹರಿಗೆ ಸಚಿವ ಸ್ಥಾನ ಕೊಟ್ಟಾಗ ಎರಡನೇ ಬಾರಿ ಉಮೇಶ್ ಕತ್ತಿ ಮತ್ತೆ ಬಂಡಾಯ ಎದ್ದಿದ್ದರು. ಆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿ ದೊಡ್ಡ ರಾದ್ಧಾಂತವೇ ನಡೆದಿತ್ತು. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಜೊತೆ ದೆಹಲಿಯಲ್ಲಿ ಮೂರು ದಿನ ಬೀಡು ಬಿಟ್ಟಿದ್ದರು. ಕತ್ತಿಯ ಎರಡನೇ ಬಂಡಾಯ ಹೈಕಮಾಂಡ್ ಗೆ ಹತ್ತಿರ ಇರುವ ನಾಯಕರ ಮನವೊಲಿಕೆಯಿಂದ ಶಮನವಾಗಿತ್ತು. ಈ ಮಧ್ಯೆ ಯಡಿಯೂರಪ್ಪ ಸಹ ವಿಧಾನಪರಿಷತ್ ಚುನಾವಣೆ ಬಳಿಕ ಮಂತ್ರಿ ಸ್ಥಾನ ಕೊಡೋದಾಗಿ ಭರವಸೆ ಕೊಟ್ಟಿದ್ದರು.

    ಇದೀಗ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ವೇಳೆ ಮತ್ತೆ ಕತ್ತಿ ಟೀಮ್ ಕಟ್ಟಿಕೊಂಡು ಬಂಡಾಯವೆದ್ದಿದ್ದಾರೆ. ಉಮೇಶ್ ಕತ್ತಿಯವರ ಮೂರನೇ ಬಂಡಾಯ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.  ಇದನ್ನೂ ಓದಿ: ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

  • 1 ಗಂಟೆಯೊಳಗೆ ಮನೆಗೆ ಬನ್ನಿ- ಉಮೇಶ್ ಕತ್ತಿಗೆ ಸಿಎಂ ಬುಲಾವ್

    1 ಗಂಟೆಯೊಳಗೆ ಮನೆಗೆ ಬನ್ನಿ- ಉಮೇಶ್ ಕತ್ತಿಗೆ ಸಿಎಂ ಬುಲಾವ್

    ಚಿಕ್ಕೋಡಿ(ಬೆಳಗಾವಿ): ಕೊರೊನಾ ವುಹಾಮಾರಿ ಜಂಜಾಟದ ನಡುವೆಯೇ ರಾಜ್ಯ ರಾಜಕೀಯದಲ್ಲಿ ತಲ್ಲಣವೇರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.

    ಉಮೇಶ್ ಕತ್ತಿಗೆ ಕರೆ ಮಾಡಿರುವ ಸಿಎಂ, ಎಲ್ಲಾ ನಿನ್ನಿಂದಲೇ ಆಗುವುದು ಎಂದು ಗರಂ ಆಗಿದ್ದಾರೆ. ಅಲ್ಲದೆ ಒಂದು ಗಂಟೆ ಒಳಗೆ ಮನೆಗೆ ಬರುವಂತೆ ಸಿಎಂ ತಿಳಿಸಿದ್ದಾರೆ. ನಿಮ್ಮ ಸಹೋದರನನ್ನು ರಾಜ್ಯ ಸಭೆ ಸದಸ್ಯ ಹಾಗೂ ನಿಮ್ಮನ್ನ ಸಚಿವರನ್ನಾಗಿ ಮಾಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಬನ್ನಿ ಇಲ್ಲಿಯೇ ಕುಳಿತು ಮಾತಾಡೋಣ ಎಂಬುದಾಗಿ ಸಿಎಂ ಬುಲಾವ್ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಉಮೇಶ್ ಕತ್ತಿ ಆಪ್ತ ಮೂಲಗಳು ಮಾಹಿತಿ ನೀಡಿವೆ.

    ಸಿಎಂ ಬುಲಾವ್ ಬೆನ್ನಲ್ಲೇ ಉಮೇಶ್ ಕತ್ತಿ ಅವರು ಸಿಎಂ ಮನೆಗೆ ತೆರಳಲು ಸಿದ್ಧವಾಗಿದ್ದು, ಈ ಕುರಿತು ಶಾಸಕ ಮುರಗೇಶ್ ನಿರಾಣಿ ಜೊತೆ ಉಮೇಶ್ ಕತ್ತಿ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

  • ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

    ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

    -ಅಣ್ಣ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗಬೇಕು
    -ರಾಜಕಾರಣ ಹರಿಯುತ್ತಿರೋ ನೀರು, ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ
    -ಕೊರೊನಾ ಬಂದ್ರೆ ಊಟ ಬಿಡ್ತೀರಾ? ಹಾಗೆ ರಾಜಕಾರಣ

    ಬೆಂಗಳೂರು: ಇದೇನು ಬಂಡಾಯ ಅಲ್ಲ. ಈ ಹಿಂದೆ ಯಡಿಯೂರಪ್ಪನವರು ಕೊಟ್ಟ ಮಾತನ್ನು ನೆನಪಿಸಿದ್ದೇವೆ ಎಂದು ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ವೇಳೆ ಟಿಕೆಟ್ ತಪ್ಪಿದಾಗ ನಮ್ಮನ್ನು ಭೇಟಿಯಾಗಿದ್ದ ಯಡಿಯೂರಪ್ಪನವರು ರಾಜ್ಯಸಭೆಯ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅದಕ್ಕಿಂತ 2014ರ ಚುನಾವಣೆಯಲ್ಲಿ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆದ್ರೂ 2019ರ ಚುನಾವಣೆಯಲ್ಲಿ ನನಗೆ ಯಾಕೆ ಟಿಕೆಟ್ ನೀಡಲಿಲ್ಲ ಕಾರಣ ಇದುವರೆಗೂ ಗೊತ್ತಿಲ್ಲ. ನಾವೆಲ್ಲ 15 ಶಾಸಕರು ಒಂದೆಡೆ ಸೇರಿದ ವಿಷಯ ಸಿಎಂ ಯಡಿಯೂರಪ್ಪರಿಗೆ ಗೊತ್ತು ಎಂದು ಹೇಳುವ ಮೂಲಕ ಸಭೆ ನಡೆದಿರೋದು ಸತ್ಯ ಎಂದು ಒಪ್ಪಿಕೊಂಡರು. ಇದನ್ನೂ ಓದಿ: ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಸೋದರ ಉಮೇಶ್ ಕತ್ತಿ ಬಿಜೆಪಿಯಲ್ಲಿರುವ ಹಿರಿಯ ನಾಯಕರಲ್ಲಿ ಒಬ್ಬರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ನನಗೆ ರಾಜ್ಯಸಭೆಯ ಟಿಕೆಟ್ ಸಿಗಲೇಬೇಕು. ಯಡಿಯೂರಪ್ಪನವರು ನಮ್ಮ ನಾಯಕರು. ನಾವು ಚಿಕ್ಕವರಿದಾಗಿನಿಂದಲೂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಂದಿದ್ದೇವೆ. ಉಮೇಶ್ ಕತ್ತಿ ಸಚಿವ ಸ್ಥಾನ ಮತ್ತು ನಾನು ರಾಜ್ಯಸಭಾ ಟಿಕೆಟ್ ಕೇಳುವುದು ನಮ್ಮ ಹಕ್ಕು. ಆದ್ರೆ ನಾವು ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ ಎಂದ್ರು. ಇದನ್ನೂ ಓದಿ: ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನದ ಆಸೆ ಇದೆ: ನಿರಾಣಿ

    ಬುಧವಾರ ಮತ್ತು ಒಂದು ವಾರದ ಹಿಂದೆಯೂ ಸಭೆ ನಡೆದಿದೆ. ಸಭೆಯಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದ ಶಾಸಕರು ಭಾಗಿಯಾಗಿದ್ದರು ಎಂಬ ಮಾಹಿತಿ ನನಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ. ರಾಜಕಾರಣ ಅನ್ನೋದು ನಿಂತ ನೀರಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತು. ಕೊರೊನಾ ಬಂದ್ರೆ ರಾಜಕಾರಣ ಮಾಡಬಾರದೆಂದು ಅಂತ ಇದೆನಾ? ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

  • ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ

    ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ

    ಬೆಳಗಾವಿ(ಚಿಕ್ಕೋಡಿ): ಲಾಕ್‍ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ.

    ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು.

    ಹುಕ್ಕೇರಿ ತಾಲೂಕಿನಲ್ಲಿ ಗುರುತಿಸಲಾದ ಒಟ್ಟು 5,500 ಕುಟುಂಬಗಳಿಗೆ 17 ಟನ್ ಜೋಳ, 17 ಟನ್ ಗೋದಿ ಹಿಟ್ಟು, 11 ಟನ್ ರವಾ, 11 ಟನ್ ಅಡುಗೆ ಎಣ್ಣೆ, ಹೆಸರುಕಾಳು 5.5 ಟನ್, 25 ಸಾವಿರ ಮಾಸ್ಕ ಹಾಗೂ 2,500 ಲೀಟರ್ ಸ್ಯಾನಿಟೈಸರ್ , 16,500 ಸೋಪುಗಳನ್ನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಗಳ ಮೂಲಕ ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ 3 ಕೆಜಿ ಜೋಳ, 3 ಕೆಜಿ ಗೋದಿ ಹಿಟ್ಟು, 2 ಲೀಟರ್ ಅಡುಗೆ ಎಣ್ಣೆ, 2 ಕೆಜಿ ರವಾ, ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, 5 ಮಾಸ್ಕ, ಅರ್ಧ ಲೀಟರ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕತ್ತಿ, ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿ ಇರುವ ಬಡವರನ್ನ ಗುರತಿಸಿ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ. ಈಗಾಗಲೇ ಒಂದು ತಿಂಗಳು ಲಾಕ್‍ಡೌನ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ಬಡವರು ಹಸಿವಿನಿಂದ ಬಳಲಬಾರದು. ಹೀಗಾಗಿ ಉಚಿತವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚನ್ನಪ್ಪ ಗಜಬರ, ಜಯಗೌಡ ಪಾಟೀಲ್, ಗುರು ಕುಲಕರ್ಣಿ, ಜಯಸಿಂಗ್, ಸದಾ ಮರಬಸ್ಸನವರ, ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ, ತಹಶೀಲ್ದಾರ್ ಅಶೋಕ್ ಗುರಾಣಿ, ಬಸವರಾಜ್ ಮರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.