Tag: ಉಮಾ ಭಾರತಿ

  • ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

    ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

    – ಹೇಳಿಕೆ ವಿವಾದಕ್ಕೀಡಾದ ನಂತ್ರ ವಿಷಾದವ್ಯಕ್ತಪಡಿಸಿದ ಮಾಜಿ ಸಿಎಂ

    ಭೋಪಾಲ್: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಉಮಾ ಭಾರತಿ ಅವರ ಈ ವಿವಾದಾತ್ಮಕ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಅಧಿಕಾರಿಗಳು ಏನೂ ಅಲ್ಲ, ಅವರು ಇರುವದೇ ನಮ್ಮ ಚಪ್ಪಲ್‍ಗಳನ್ನು (ಚಪ್ಪಲಿ) ತೆಗೆದುಕೊಳ್ಳಲು. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ, ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ನಂತರ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

    ನಾವು(ರಾಜಕಾರಣಿಗಳು) ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಉಮಾ ಭಾರತಿ ಅವರು ಶನಿವಾರ ಭೋಪಾಲ್ ನ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ. ವಿವಾದಾತ್ಮಕ ಹೇಳಿಕೆಯ ವೀಡಿಯೋ ಸೋಮವಾರ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದಂತೆ ಬಿಜೆಪಿ ನಾಯಕಿ ವಿಷಾದ ವ್ಯಕ್ತಪಡಿಸಿದ್ದಾರೆ.

    ನನ್ನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅಸಮಂಜಸವಾದ ಭಾಷೆ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ನನ್ನ ಅನುಭವದಿಂದ, ಪ್ರಾಮಾಣಿಕ ಅಧಿಕಾರಶಾಹಿ ಯಾವಾಗಲೂ ಬಲವಾದ ಮತ್ತು ಪ್ರಾಮಾಣಿಕ ರಾಜಕಾರಣಿಗಳಿಗೆ ಉತ್ತಮ ಕಂಪನಿ ನೀಡುತ್ತದೆ ಎಂದು ಹೇಳಬಲ್ಲೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

    ಉಮಾ ಭಾರತಿ ಹೇಳಿಕೆ ನಾಚಿಕೆಗೇಡು ಎಂದು ಟೀಕಿಸಿರುವ ಕಾಂಗ್ರೆಸ್, ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.

  • ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗುತ್ತಿದೆ. ಆದರೆ ಇತ್ತ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಹೌದು. ಕೊರೊನಾ ವೈರಸ್ ಭೀತಿಯಿಂದ ಉಮಾ ಭಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಈ ಬಗ್ಗೆ ಈಗಾಗಲೇ ಅತಿಥಿಗಳ ಪಟ್ಟಿಯಿಂದ ತನ್ನ ಹೆಸರು ಹೊರಗಿಡುವಂತೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಶುರುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಸುದ್ದಿ ಕೇಳಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆತಂಕ ಎದುರಾಗಿದೆ. ಅಮಿತ್ ಶಾ ಹಾಗೂ ಬಿಜೆಪಿ ನಾಯಕರಿಗೆ ಕೊರೊನಾ ಪಾಸಿಟಿವ್ ಎಂದು ಸುದ್ದಿ ಕೇಳಿದ ಬಳಿಕ ಭಯ ಶುರುವಾಗಿದೆ. ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗುವವರ ಅದರಲ್ಲೂ ಮೋದಿ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಇಂದು ನಾನು ಭೋಪಾಲ್ ನಿಂದ ಹೊರಟು ನಾಳೆ ಸಂಜೆ ಅಯೋಧ್ಯೆ ಸೇರುತ್ತೇನೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಯಾಕಂದರೆ ಒಂದು ವೇಳೆ ನಾನು ಈ ಶುಭಕಾರ್ಯದಲ್ಲಿ ಪಾಲ್ಗೊಂಡರೆ ನನಗೂ ಸೋಂಕು ಹರಡಬಹುದು. ಪ್ರಧಾನಿ ಮೋದಿಯವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ನಾನು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇನೆ. ಕಾರ್ಯಕ್ರಮ ಮುಗಿಸಿ ಪ್ರಧಾನಿಯವರು ದೆಹಲಿಗೆ ಹೊರಟ ನಂತರ ನಾನು ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿಯವರೆಗೆ ಸರಯೂ ನದಿಯ ತಟದಲ್ಲಿ ವಿಹರಿಸುವುದಾಗಿ ಉಮಾ ಭಾರತಿ ಮಾಹಿತಿ ನೀಡಿದ್ದಾರೆ.

  • ಉಮಾಭಾರತಿಯನ್ನು ಅಪ್ಪಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್ – ವಿಡಿಯೋ

    ಉಮಾಭಾರತಿಯನ್ನು ಅಪ್ಪಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್ – ವಿಡಿಯೋ

    ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಿಂದ ಸ್ಪರ್ಧೆ ಮಾಡಿರುವ ಸಾಧ್ವಿ ಪ್ರಜ್ಞಾಸಿಂಗ್ ಇಂದು ಮಾಜಿ ಸಿಎಂ ಉಮಾಭಾರತಿ ಅವರನ್ನು ಭೇಟಿ ಮಾಡಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಈ ವೇಳೆ ಪ್ರಜ್ಞಾಸಿಂಗ್ ಉಮಾ ಭಾರತಿ ಅವರನ್ನು ಅಪ್ಪಿ ಕಣ್ಣೀರಿಟ್ಟಿದ್ದಾರೆ.

    ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕಣಕ್ಕೆ ಇಳಿದಿರುವ ಪ್ರಜ್ಞಾಸಿಂಗ್, ಉಮಾ ಭಾರತಿ ಅವರನ್ನು ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಲು ಅವರ ನಿವಾಸದ ಬಳಿ ತೆರಳಿದ್ದರು. ಈ ಭೇಟಿ ಬಳಿಕ ಉಮಾ ಭಾರತಿ ಅವರು ಪ್ರಜ್ಞಾ ಅವರನ್ನು ಕಾರಿನವರೆಗೂ ಬಂದು ಕಳುಹಿಸಿಕೊಟ್ಟರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಪ್ರಜ್ಞಾಸಿಂಗ್ ಕಣ್ಣೀರಿಟ್ಟಿದ್ದಾರೆ.

    ಇತ್ತೀಚಿನ ಸಂದರ್ಭದಲ್ಲಿ ಉಮಾ ಭಾರತಿ ಹಾಗೂ ಪ್ರಜ್ಞಾ ಮಧ್ಯೆ ವೈಮನಸ್ಸು ಮೂಡಿತ್ತು ಎಂದು ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಮಾಧ್ಯಮಗಳು ಉಮಾ ಭಾರತಿ ಅವರನ್ನು ಪ್ರಶ್ನೆ ಮಾಡಿದ ವೇಳೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಅವರು, ಪ್ರಜ್ಞಾ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ಅವರು ಮಹಾನ್ ಸ್ವಾಧಿ, ನಾನು ಸಾಮಾನ್ಯ ವ್ಯಕ್ತಿ. ಮೂರ್ಖ ಜೀವಿ ಎಂದು ಪ್ರತಿಕ್ರಿಯೆ ನೀಡಿದ್ದರು.

    ಘಟನೆ ಬಳಿಕ ಮಾತನಾಡಿದ ಉಮಾ ಭಾರತಿ ಅವರು, ಇದು ಒಂದು ಭಾವನಾತ್ಮಕ ಸನ್ನಿವೇಶ ಅಷ್ಟೇ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಉಮಾ ಭಾರತಿ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತು ಚುನಾವಣೆಗೂ ಮುನ್ನವೇ ಕೇಳಿ ಬಂದಿತ್ತು.

  • ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಉಮಾ ಭಾರತಿ ನಿರ್ಧಾರ

    ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಉಮಾ ಭಾರತಿ ನಿರ್ಧಾರ

    – ಗಂಗಾ ತೀರದಲ್ಲಿ ತೀರ್ಥಯಾತ್ರೆ ಕೈಗೊಳ್ಳಲು ನಿರ್ಧಾರ

    ನವದೆಹಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಬಿಜೆಪಿಯ ನಾಯಕಿ, ಕೇಂದ್ರ ಸಚಿವೆ ಉಮಾ ಭಾರತಿ ನಿರ್ಧರಿಸಿದ್ದಾರೆ.

    ಕೇವಲ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ಹೊಂದಿರುವೆ. ಹೀಗಾಗಿ ಲೋಕಸಭೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಉಮಾ ಭಾರತಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರಂತೆ. ಈ ಮೂಲಕ ತಮ್ಮ ನಿರ್ಧಾರವನ್ನು ಪುರಸ್ಕರಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಉಮಾ ಭಾರತಿ ಅವರು, ಎರಡು ಬಾರಿ ಶಾಸಕಿಯಾಗಿ ಹಾಗೂ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವೆಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಮಾ ಭಾರತಿ ಅವರು, ಗಂಗಾ ತೀರದಲ್ಲಿ ತೀರ್ಥಯಾತ್ರೆ ಕೈಗೊಳ್ಳಲು ನಿರ್ಧರಿಸಿರುವೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು 2016ರಲ್ಲಿಯೇ ತಿಳಿಸಿದ್ದೆ. ಒಂದು ವೇಳೆ ನಾನು ಸ್ಪರ್ಧಿಸಬೇಕಾದರೆ ಝಾನ್ಸಿ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬದಲಾಯಿಸುವುದಿಲ್ಲ. ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಹೆಮ್ಮೆಯಿದೆ. ಅವರು ನನ್ನನ್ನು ತಮ್ಮ ಮಗಳೆಂದು ತಿಳಿದುಕೊಂಡಿದ್ದಾರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಭರವಸೆ ಇದೆ. ಆದರೆ ಈ ಬಾರಿ ನಾನು ಸ್ಪರ್ಧೆ ಮಾಡುವುದಿಲ್ಲ. 2024ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

    ತೀರ್ಥಯಾತ್ರೆಗೆ ಹೋಗುತ್ತಿರುವ ಹಿನ್ನೆಲೆಯಲ್ಲೆ ಮೇ 5ರ ವರೆಗೆ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ಪಕ್ಷವು ನನಗಾಗಿ ಎಲ್ಲವನ್ನೂ ನೀಡಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವೆಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನೀಡಿರುವ ಜವಾಬ್ದಾರಿ ಹೊರತಾಗಿ ಎಲ್ಲವನ್ನೂ ನಿಬಾಯಿಸಿದ್ದೇನೆ. ಪಕ್ಷದ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಉಮಾ ಭಾರತಿ ತಿಳಿಸಿದರು.

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕೇಂದ್ರದ ಬಿಜೆಪಿ ನಾಯಕಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ಈ ಕುರಿತು ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧನಾತ್ಮಕ ವಾತಾವರಣವನ್ನು ರೂಪಿಸುವ ಅಗತ್ಯತೆ ಇದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಅಲ್ಲದೇ ನಾನು ತಾತ್ಕಾಲಿಕವಾಗಿ ಸಕ್ರೀಯ ರಾಜಕಾರಣದಿಂದ ದೂರವಿದ್ದು, ರಾಮಮಂದಿರ ನಿರ್ಮಾಣ ಮತ್ತು ಗಂಗಾ ಶುದ್ಧೀಕರಣ ವಿಷಯದಲ್ಲಿ ತೊಡಗಿಕೊಳ್ಳುತ್ತೇನೆಂದು ಹೇಳಿದ್ದಾರೆ.

    2019ರ ಜನವರಿಯಿಂದ ಒಂದೂವರೆ ವರ್ಷಗಳ ಕಾಲ ಗಂಗಾ ಯಾತ್ರೆಯಲ್ಲಿ ತೊಡಗಿಕೊಳ್ಳುತ್ತೇನೆ. ಈ ಅವಧಿಯಲ್ಲಿ ವಿವಿಧೆಡೆ ಗಂಗಾನದಿಯ ತಟದಲ್ಲೇ ವಾಸ್ತವ್ಯ ಹೂಡಲಿದ್ದೇನೆ. ನನ್ನ ಈ ಕೋರಿಕೆಯನ್ನು ಪಕ್ಷದ ವರಿಷ್ಠರಿಗೆ ತಿಳಿಸಿ, ಅನುಮತಿಗಾಗಿ ಮನವಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಬಿಜೆಪಿ ಮಹಿಳಾ ನಾಯಕಿಯಾಗಿ ಹಾಗೂ ಕೇಂದ್ರ ವಿದೇಶಾಂಗ ಇಲಾಖೆ ಸಚಿವರಾಗಿರುವ ಸುಷ್ಮಾ ಸ್ವರಾಜ್ ರವರು ತಮ್ಮ ಅನಾರೋಗ್ಯದ ಕಾರಣದಿಂದ ಮುಂಬರುವ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದರು. ಈಗ ಉಮಾಭಾರತಿಯವರೂ ಸಹ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿಯ ಮಹಿಳಾ ಘಟಕದ ಬಲ ಕುಂದುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv