Tag: ಉಪಚುನಾವಣೆ ಫಲಿತಾಂಶ

  • ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ – ಅರಳಿದ ಕಮಲ

    ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ – ಅರಳಿದ ಕಮಲ

    – ಹಳ್ಳಿಹಕ್ಕಿಗೆ ಶಾಕ್, ನಿಟ್ಟುಸಿರು ಬಿಟ್ಟ ರಿಜ್ವಾನ್ ಅರ್ಷದ್
    – ಅರ್ಹತಾ ಪರೀಕ್ಷೆಯಲ್ಲಿ ಪಾಸಾದ ಶಾಸಕರು
    – ಹೊಸಕೋಟೆಯಲ್ಲಿ ಗೆದ್ದ ಸ್ವಾಭಿಮಾನದ ಮಂತ್ರ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಉಪ ಚುನಾವಣೆಯ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರವನ್ನು ಭದ್ರ ಮಾಡಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮುಖಭಂಗವಾಗಿದೆ. ಜೆಡಿಎಸ್ ತೆಕ್ಕೆಯಲ್ಲಿದ್ದ ಹುಣಸೂರನ್ನು ಕೈ ವಶ ಮಾಡಿಕೊಂಡಿದೆ. ಇತ್ತ ಶಿವಾಜಿ ನಗರದಲ್ಲಿ ಗೆಲುವು ದಾಖಲಿಸಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಇತ್ತ ಜೆಡಿಎಸ್ ಖಾತೆ ತರೆಯದೇ ತೀವ್ರ ಹಿನ್ನಡೆಯನ್ನು ಅನುಭವಿಸಿದೆ. ಮೊದಲ ಬಾರಿಗೆ ಜೆಡಿಎಸ್ ಕೋಟೆಯಲ್ಲಿ ಕಮಲದ ಬಾವುಟ ಹಾರಿಸಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇದನ್ನೂ ಓದಿ: 43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?

    15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ತನ್ನ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಜೆಡಿಎಸ್ ವಿಫಲವಾಗಿದೆ ಕಾಂಗ್ರೆಸ್ 13ರಲ್ಲಿ 2 ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಸಿದ್ದರಾಮಯ್ಯನವರ ಏಕಾಂಗಿ ಪ್ರಚಾರ ಮತ್ತು ತಂತ್ರಗಳು ಬುಡಮೇಲಾಗಿದ್ದು, ಬಿಜೆಪಿ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ. ಕೆ.ಆರ್.ಪೇಟೆ ಮತ್ತು ಯಶವಂತಪುರದಲ್ಲಿ ಬಿಜೆಪಿಗೆ ತೀವ್ರ ಸ್ಪರ್ಧೆ ನೀಡಿದ್ದ ಜೆಡಿಎಸ್ ಕೊನೆಯ ಹಂತದಲ್ಲಿ ಕೈ ಚೆಲ್ಲಿತು. ಶಿವಾಜಿ ನಗರದಲ್ಲಿ ಬಿಜೆಪಿಯ ಸರವಣರನ್ನು ಕಟ್ಟಿ ಹಾಕಿ ರಿಜ್ವಾನ್ ಅರ್ಷದ್ ನಿಟ್ಟುಸಿರು ಬಿಟ್ಟಿದ್ದಾರೆ. ಹುಣಸೂರಿನಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದ ಹೆಚ್.ವಿಶ್ವನಾಥ್ ಅವರಿಗೆ ಮತದಾರರು ಶಾಕ್ ನೀಡಿದ್ದು, ಕೈ ಅಭ್ಯರ್ಥಿ ಮಂಜುನಾಥ್ ಅವರನ್ನು ಗೆಲ್ಲಿಸಿದ್ದಾರೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    ಹೊಸಕೋಟೆಯಲ್ಲಿ ಬಿಜೆಪಿಯಿಂದ ಹೊರ ಬಂದಿದ್ದ ಶರತ್ ಬಚ್ಚೇಗೌಡ ಗೆಲುವಿನ ಮಾಲೆ ಧರಿಸಿದ್ದಾರೆ. ತಮ್ಮ ಪ್ರಚಾರದುದ್ದಕ್ಕೂ ಸ್ವಾಭಿಮಾನ ಮಂತ್ರವನ್ನೇ ಶರತ್ ಬಚ್ಚೇಗೌಡರು ಜಪಿಸಿದ್ದರು. ನಾನೇ ಗೆಲ್ಲೋದು ಎಂದು ಹೇಳುತ್ತಿದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅನರ್ಹರಾಗಿಯೇ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಮೂರನೇ ಸ್ಥಾನ ತಲುಪಿದ್ದಾರೆ. ಇದನ್ನೂ ಓದಿ: ‘ಪವಿತ್ರ’ ಮತ್ತು ‘ಸುಭದ್ರ’ ಸರ್ಕಾರಕ್ಕೆ ಮುದ್ರೆ ಒತ್ತಿದ್ದಕ್ಕೆ ಅಭಿನಂದನೆಗಳು- ಹೆಚ್‍ಡಿಕೆ ಲೇವಡಿ

    ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ರಿಜ್ವಾನ್ ಅರ್ಷದ್ ಅವರನ್ನು ಕಾಂಗ್ರೆಸ್ ಶಿವಾಜಿ ನಗರದಿಂದ ಕಣಕ್ಕಿಳಿಸಿತ್ತು. ಹಲವರ ವಿರೋಧದ ನಡುವೆಯೂ ಟಿಕೆಟ್ ಪಡೆದಿದ್ದ ರಿಜ್ವಾನ್ ಅರ್ಷದ್ ಅವರಿಗೆ ಉಪ ಚುನಾವಣೆಯ ಗೆಲುವು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿತ್ತು. ಮಾಜಿ ಸಚಿವ ರೋಷನ್ ಬೇಗ್ ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನು ಬಿಜೆಪಿಯತ್ತ ಸೆಳೆದು, ರಿಜ್ವಾನ್ ಅರ್ಷದ್ ಗೆ ಶಾಕ್ ನೀಡಿದ್ದರು. ಶಿವಾಜಿನಗರದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ರಿಜ್ವಾನ್ ಅರ್ಷದ್ ದೀರ್ಘವಾದ ಉಸಿರು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

    15ರಲ್ಲಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಉಪ ಚುನಾವಣೆಯಲ್ಲಿ ಶೂನ್ಯ ಸುತ್ತಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ನೀಡಿ ಯಾರನ್ನು ಕಣಕ್ಕಿಳಿಸಿರಲಿಲ್ಲ. ಅಥಣಿ ಮತ್ತು ಹಿರೇಕೆರೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದುಕೊಂಡಿದ್ದರು. ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ ನಡೆಸಿತ್ತು. ಇದನ್ನೂ ಓದಿ: ಅಗ್ನಿ ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್ – ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್ ಬಿದ್ದಿದೆ? ಅಂತರ ಎಷ್ಟು ಹೆಚ್ಚಾಗಿದೆ?

    ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಅಭ್ಯರ್ಥಿಗಳು
    1. ಯಶವಂತಪುರ- ಎಸ್.ಟಿ.ಸೋಮಶೇಖರ್ (ಬಿಜೆಪಿ)
    2. ಮಹಾಲಕ್ಷ್ಮಿ ಲೇಔಟ್- ಕೆ.ಗೋಪಾಲಯ್ಯ (ಬಿಜೆಪಿ)
    3. ಕೆ.ಆರ್.ಪುರಂ- ಬೈರತಿ ಬಸವರಾಜು (ಬಿಜೆಪಿ)
    4. ಶಿವಾಜಿ ನಗರ- ರಿಜ್ವಾನ್ ಅರ್ಷದ್ (ಕಾಂಗ್ರೆಸ್)
    5. ಹೊಸಕೋಟೆ- ಶರತ್ ಬಚ್ಚೇಗೌಡ (ಪಕ್ಷೇತರ)
    6. ಚಿಕ್ಕಬಳ್ಳಾಪುರ – ಸುಧಾಕರ್ ಕೆ. (ಬಿಜೆಪಿ)
    7. ಕೆ.ಆರ್.ಪೇಟೆ – ನಾರಾಯಣ ಗೌಡ (ಬಿಜೆಪಿ)
    8. ಹುಣಸೂರು – ಹೆಚ್.ಪಿ.ಮಂಜುನಾಥ್ (ಕಾಂಗ್ರೆಸ್)
    9. ಹಿರೇಕೆರೂರು- ಬಿ.ಸಿ.ಪಾಟೀಲ್ (ಬಿಜೆಪಿ)
    10. ರಾಣೇಬೆನ್ನೂರು – ಅರುಣ್ ಕುಮಾರ್ (ಬಿಜೆಪಿ)
    11. ಕಾಗವಾಡ – ಶ್ರೀಮಂತ್ ಪಾಟೀಲ್ (ಬಿಜೆಪಿ)
    12. ಅಥಣಿ- ಮಹೇಶ್ ಕುಮಟಳ್ಳಿ (ಬಿಜೆಪಿ)
    13. ಗೋಕಾಕ್ – ರಮೇಶ್ ಜಾರಕಿಹೊಳಿ (ಬಿಜೆಪಿ)
    14. ವಿಜಯನಗರ – ಆನಂದ್ ಸಿಂಗ್ (ಬಿಜೆಪಿ)
    15. ಯಲ್ಲಾಪುರ – ಶಿವರಾಂ ಹೆಬ್ಬಾರ್ (ಬಿಜೆಪಿ)

  • ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    -ಜೆಡಿಎಸ್‍ಗೆ ಕರ್ನಾಟಕದಿಂದ ಗೇಟ್ ಪಾಸ್

    ಉಡುಪಿ: ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿವೆ. ಮತ್ತೊಮ್ಮೆ ಕಾಂಗ್ರೆಸ್, ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಎಂದಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಉಡುಪಿಯ ಹೆಬ್ರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಹೆಬ್ರಿ ಮಿನಿ ವಿಧಾನಸೌಧಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.

    ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತದೆ. ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂದಾಗುತ್ತದೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ನಾಳೆ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಮೈತ್ರಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರು ರೋಸಿದ್ದಾರೆ. ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ರಾಜ್ಯದ ಎಲ್ಲೆಡೆ ಬರುತ್ತೆ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ಫಲಿತಾಂಶದ ನಂತರ ಜೆಡಿಎಸ್ ಗೆ ಕರ್ನಾಟಕದಿಂದ ಗೇಟ್ ಪಾಸ್ ಕೊಡಲಾಗುವುದು ಎಂದರು.

    ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರೆ. ಕಾಂಗ್ರೆಸ್ ಎರಡು ಭಾಗವಾಗಿದೆ. ಇತ್ತ ಜೆಡಿಎಸ್ ಕೂಡಾ ಎರಡು ಭಾಗ ಆಗಿದೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿರುವಾಗ ಈ ನಾಲ್ಕು ಪಾರ್ಟಿ ಒಂದಾಗೋದು ಯಾವಾಗ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ? ಕಾಂಗ್ರೆಸ್ ಭ್ರಮಾಲೋಕದಲ್ಲಿದ್ದು, ಅವರು ಭ್ರಮಾಲೋಕದಲ್ಲೇ ಇರಲಿ ಎಂದು ಸಚಿವ ಆರ್. ಅಶೋಕ್ ಛೇಡಿಸಿದರು.

  • ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

    ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

    ಬೆಂಗಳೂರು: ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿ ಉಗ್ರಪ್ಪ ಜಯ ಸಾಧಿಸಿದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ ಎಂದು ಟ್ವೀಟ್ ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟ್ಟರಿನಲ್ಲಿ, “ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ. ನಾಡಬಾಂಧವರಿಗೆ ದೀಪಾವಳಿಯ ಶುಭಾಶಯಗಳು” ಎಂದು ಟ್ವೀಟ್ ಮಾಡಿ ಗೆಲುವನ್ನು ಸಂಭ್ರಮಿಸಿದ್ದಾರೆ.

    ಇತ್ತ ಉಪಚುನಾವಣೆಯಲ್ಲಿ ಗೆದ್ದ ಆನಂದ ನ್ಯಾಮಗೌಡ ಅವರನ್ನು ಸಿದ್ದರಾಮಯ್ಯ ಟ್ವಿಟ್ಟರಿನಲ್ಲಿ ಶುಭಾಶಯ ತಿಳಿಸಿದ್ದಾರೆ. ಸಿದ್ದರಾಮಯ್ಯ ತಮ್ಮ ಟ್ವಿಟ್ಟರಿನಲ್ಲಿ, “ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ಸಿದ್ದರಾಮಯ್ಯ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ ಬಳ್ಳಾರಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಬಳ್ಳಾರಿಯ ಜನತಾ ಜನಾರ್ದನರಿಗೆ ಧನ್ಯವಾದಗಳು. ಜನಾರ್ದನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

    ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

    ಬಳ್ಳಾರಿ: ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮರೆಯಾಗಿ ಬಿಜೆಪಿ ನಾಯಕ ಶ್ರೀರಾಮುಲು ಮತ್ತು ಕಾಂಗ್ರೆಸ್ ದಂಡಿನ ಡಿಕೆಶಿ ನಡುವಿನ ಮಹಾ ಭಾರತವಾಗಿ ಮಾರ್ಪಟ್ಟ ಬಳ್ಳಾರಿ ಉಪಚುನಾವಣೆಯಿದು. ಜೆ ಶಾಂತಾ ಮತ್ತು ಉಗ್ರಪ್ಪ ಎಂಬ ಇಬ್ಬರು ಸ್ಪರ್ಧಿಗಳು ನೆಪಮಾತ್ರವಾಗಿ, ಒಂದು ಕಾಲದಲ್ಲಿ ಗಣಿಧಣಿಗಳ ಕೋಟೆಗೆ ಪಾದಯಾತ್ರೆ ಮೂಲಕ ದಂಡಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಸೇನೆ ಮತ್ತು ರಾಮುಲು ಹಾಗೂ ಜನಾರ್ದನ ರೆಡ್ಡಿಯೆಂಬ ಕುಚುಕು ದೋಸ್ತ್‍ಗಳ ಜೋಡಿಯ ನಡುವಿನ ರಣಾಂಗಣವಾಗಿ ಮಾರ್ಪಟ್ಟ ಕದನವಿದು.

    ಯಾರು ನಿಜವಾದ ಕನ್ನಡಿಗರು, ಯಾರು ಮೂಲ ಬಳ್ಳಾರಿಯವರು, ವಾಲ್ಮೀಕಿ ಸಮುದಾಯಕ್ಕೆ ಸಿದ್ದರಾಮಯ್ಯರಿಂದ ಅವಮಾನ, ಸಿದ್ದರಾಮಯ್ಯ ಮಗನ ಸಾವನ್ನ ಸಂಭ್ರಮಿಸಿ ರೆಡ್ಡಿ ಕೊಟ್ಟ ಶ್ರವಣಕುಮಾರನ ಉದಾಹರಣೆ, ರೆಡ್ಡಿಗಳ ವಿರುದ್ಧ ಗಣಿ ಲೂಟಿ ಆರೋಪ, ಸಂಸತ್ತಿಗೆ ಯಾರು ಕಾಲಿಟ್ಟರೆ ಬಳ್ಳಾರಿ ಜನ ಬಾಳು ಬಂಗಾರ ಆಗುತ್ತೆ ಅನ್ನೋ ವಾಗ್ವಾದಗಳ ಹೊಳೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲೋರು ಯಾರು ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

    ಬಳ್ಳಾರಿಯಲ್ಲಿ ಯಾರ ನಡುವೆ ಪೈಪೋಟಿ?
    – ಬಿಜೆಪಿಯಿಂದ ಜೆ.ಶಾಂತಾ
    – ಕಾಂಗ್ರೆಸ್-ಜೆಡಿಎಸ್ ಕೂಟದಿಂದ ವಿ ಎಸ್ ಉಗ್ರಪ್ಪ

    ಬಳ್ಳಾರಿ ಚಿತ್ರಣ:
    ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,13,354 ಮತದಾರರಿದ್ದು, ಇದರಲ್ಲಿ ಪುರುಷರು 8,55,194 ಹಾಗೂ ಮಹಿಳೆಯರು 8,57,944 ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ವಾಲ್ಮೀಕಿ (ನಾಯಕ) 3 ಲಕ್ಷ, ಲಿಂಗಾಯತ 3 ಲಕ್ಷ, ಎಸ್‍ಸಿ (ಲಂಬಾಣಿ) 2.5 ಲಕ್ಷ, ಕುರುಬ 2.5 ಲಕ್ಷ, ಮುಸ್ಲಿಂ 2 ಲಕ್ಷ, ಗೊಲ್ಲ 1 ಲಕ್ಷ, ಗಂಗಾಮತ 70 ಸಾವಿರ, ಬಲಿಜ 70 ಸಾವಿರ, ರೆಡ್ಡಿ-ಕಮ್ಮ 40 ಸಾವಿರ ಹಾಗೂ ಉಪ್ಪಾರ ಸಮುದಾಯದ 35 ಸಾವಿರ ಮತದಾರರಿದ್ದಾರೆ. ಇದರಲ್ಲಿ ವಾಲ್ಮೀಕಿ, ಲಿಂಗಾಯಿತ, ಲಂಬಾಣಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಮತಗಳು

    ಸದ್ಯದ ಬಳ್ಳಾರಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ರಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ರೆಡ್ಡಿ, ಶ್ರೀರಾಮುಲು ಹಾಗೂ ಡಿಕೆಶಿವಕುಮಾರ್, ಸಿಎಂ ಕುಮಾರಸ್ವಾಮಿ ನಡುವೆ ನೇರ ಹಣಾಹಣಿಯಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು?
    ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು 5,34,406 ಮತಗಳನ್ನು ಪಡೆದು, 85,144 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ 4,49,262 ಮತಗಳನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ಬೆಂಗಳೂರು: ಜಿದ್ದಾಜಿದ್ದಿನ ಕ್ಷೇತ್ರಗಳಾದ ಮಂಡ್ಯ, ರಾಮನಗರ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಮನಗರದಲ್ಲಿ ಯುದ್ಧಕ್ಕೂ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ. ಮಂಡ್ಯದಲ್ಲಿ ಬದ್ಧ ವೈರಿಗಳೇ ದೋಸ್ತಿಗಳಾಗಿರೋದ್ರಿಂದ ಮತದಾರರು ಯಾರ ಕೈ ಹಿಡಿದಿದ್ದಾರೆ. ಇಬ್ಬರ ಜಗಳದಲ್ಲಿ ಲಾಭ ಮೂರನೇಯವರಿಗೆ ಸಿಗುತ್ತಾ? ಎಲ್ಲಕ್ಕೂ ಉತ್ತರ ಇಂದಿನ ಫಲಿತಾಂಶ

    ರಾಮನಗರದಲ್ಲಿ ಉಪ ಸಮರ ರಂಗೇರಿದ ಅನ್ನುವ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದ್ರೆ, ಕಾಂಗ್ರೆಸ್‍ನಿಂದ ವಲಸೆ ಬಂದ ಮುಖಂಡನನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ ಟಾಂಗ್ ಕೊಟ್ಟಿದ್ದೇವೆ ಅಂತ ಬೀಗುತ್ತಿದ್ದ ಯಡಿಯೂರಪ್ಪ-ಯೋಗೇಶ್ವರ್ ದಂಡಿಗೆ ಮತದಾನಕ್ಕೆ ಎರಡು ದಿನಗಳ ಹಿಂದೆ ಗರ್ವಭಂಗ ಆಯ್ತು. ಡಿಕೆಶಿ ಬ್ರದರ್ಸ್ ಆಡಿದ ಕಡೇ ಕ್ಷಣದ ಆಟದಲ್ಲಿ ಎದುರಾಳಿಯೇ ಇಲ್ಲದೇ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವ್ರದ್ದೇ ಆಟವಾಗಿ ಮಾರ್ಪಟ್ಟಿತ್ತು. ಪತಿ ಖಾಲಿ ಮಾಡಿದ್ದ ಕ್ಷೇತ್ರಕ್ಕೆ ಪತ್ನಿಯೇ ಅಧಿಪತಿ ಆಗ್ತಾರಾ ಅನ್ನೋದಕ್ಕೆ ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

    ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಾಮನಗರದಲ್ಲಿ ಯಾರ ನಡುವೆ ಪೈಪೋಟಿ..?
    1. ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ – ಅನಿತಾ ಕುಮಾರಸ್ವಾಮಿ
    2. ಎಲ್.ಚಂದ್ರಶೇಖರ್ – ಬಿಜೆಪಿ ( ಚುನಾವಣೆಯಿಂದ ಹಿಂದಕ್ಕೆ)

    ರಾಮನಗರ ವಿಧಾನಸಭಾ ಕ್ಷೇತ್ರದ ಚಿತ್ರಣ:
    ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,07,005 ಇದೆ. ಅದರಲ್ಲಿ ಪುರುಷರ ಸಂಖ್ಯೆ 1,02,948 ಇದ್ದು, 1,04,032 ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಒಕ್ಕಲಿಗರು- 99,572, ಎಸ್ಸಿ/ ಎಸ್ಟಿ- 45,953, ಮುಸ್ಲಿಂ- 35,990, ಲಿಂಗಾಯತರು- 16,900 ಹಾಗೂ ಇತರ 8190 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 04 ಹೋಬಳಿಗಳು ಹಾಗೂ 20 ಗ್ರಾಮ ಪಂಚಾಯತ್‍ಗಳಿವೆ. ಅದರಲ್ಲಿ 123 ಜನವಸತಿ ಇರುವ ಗ್ರಾಮಗಳಿದ್ದು, ಕ್ಷೇತ್ರದಲ್ಲಿ 2,85,466 ಜನರಿದ್ದಾರೆ. ಇದರಲ್ಲಿ ಪುರುಷರು- 1,45,187 ಹಾಗೂ 1,40,279 ಮಹಿಳಾ ಮತದಾರರಿದ್ದಾರೆ.

    ರಾಮನಗರ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿ, 92,926 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕಾಂಗ್ರೆಸ್ ನಿಂದ ಇಕ್ಭಾಲ್ ಹುಸೇನ್ ಅವರು ಸ್ಪರ್ಧಿಸಿದ್ದು 69,990 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್‍ಡಿ ಕುಮಾರಸ್ವಾಮಿಯವರು 22,289 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv