Tag: ಉಪಚುಣಾವಣೆ

  • ಲೋಕಸಭಾ ಉಪ ಚುನಾವಣೆ ಬಿಜೆಪಿಗೆ ಸೋಲು- ಮೈತ್ರಿಗೆ ಗೆಲುವು

    ಲೋಕಸಭಾ ಉಪ ಚುನಾವಣೆ ಬಿಜೆಪಿಗೆ ಸೋಲು- ಮೈತ್ರಿಗೆ ಗೆಲುವು

    ನವದೆಹಲಿ: ಮತ್ತೊಮ್ಮೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಲೋಕಸಭಾ ಉಪ ಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದು, ಮೈತ್ರಿಗೆ ಗೆಲುವು ಸಿಕ್ಕಿದೆ.

    ಪ್ರಮುಖವಾಗಿ ನಡೆದ ನಾಲ್ಕು ಲೋಕಸಭಾ ಚುನಾವಣೆಗಳ ಪೈಕಿ ಬಿಜೆಪಿ ಒಂದರಲ್ಲಿ ಮಾತ್ರ ಗೆಲುವು ಪಡೆದಿದೆ. 9 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ.

    ಕೈರನಾ: ಉತ್ತರಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮ್ರಿಗಾಂಕಾ ಸಿಂಗ್ ರಾಷ್ಟ್ರೀಯ ಲೋಕದಳದಿಂದ ತಬ್ಸಂ ಸಿಂಗ್ ವಿರುದ್ಧ ಸೋಲುಂಡಿದ್ದಾರೆ. ಚುನಾವಣೆಗೂ ಮೊದಲೇ ನಡೆದ ಮೈತ್ರಿಕೂಟದಲ್ಲಿ ಆರೆಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಿಎಸ್‍ಪಿ ಬೆಂಬಲ ನೀಡಿತ್ತು. ತಬ್ಸಂ ಬೇಗಂ 4,01,464 ಮತ ಹಾಗೂ ಬಿಜೆಪಿಯ ಮ್ರಿಗಾಂಕಾ ಸಿಂಗ್ 3,52,173 ಮತ ಪಡೆದಿದ್ದಾರೆ. ಕ್ಷೇತ್ರದಲ್ಲಿ 16 ಲಕ್ಷ ಮತದಾರರಿದ್ದು ಇವರಲ್ಲಿ ಐದೂವರೆ ಲಕ್ಷ ಮುಸ್ಲಿಂ, ಎರಡೂವರೆ ಲಕ್ಷ ದಲಿತ ಮತ್ತು 2 ಲಕ್ಷ ಜಾಟ್ ಸಮುದಾಯದ ಮತಗಳಿತ್ತು. 2014ರಲ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿವಂಗತ ಹುಕುಂಸಿಂಗ್ ಆಯ್ಕೆ ಆಗಿದ್ದರು.

    ಪಾಲ್ಘಾರ್: ಮಹಾರಾಷ್ಟ್ರದ ಪಾಲ್ಘಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗವಿತೆ ಗೆಲುವು ಪಡೆದಿದ್ದಾರೆ. ಈ ಮೂಲಕ ಹಲವು ದಶಗಳ ಕಾಳ ಮಿತ್ರ ಪಕ್ಷವಾಗಿದ್ದ ಶಿವಸೇನೆ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ವನಗಾ ಸೋಲುಂಡಿದ್ದಾರೆ. 2019ರಲ್ಲಿ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಈಗಾಗಲೇ ಘೋಷಿಸಿದ್ದು ಈ ನಿರ್ಧಾರದ ಚುನಾವಣಾ ಫಲಿತಾಂಶ ಪರಿಣಾಮ ಬೀರಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 2,72,780 ಮತ ಪಡೆದಿದ್ದರೆ, ಶಿವಸೇನೆ ಅಭ್ಯರ್ಥಿ 2,43,206 ಮತ ಪಡೆದಿದ್ದಾರೆ.

    ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ದಾಮೋದರ್ ಸಿಂಗ್ದಾಗೆ ಎನ್‍ಸಿಪಿ ಬೆಂಬಲವಿದ್ದರೂ ಸೋಲುಂಡಿದ್ದಾರೆ. ಕ್ಷೇತ್ರದ ಸಂಸದ ಚಿಂತಾಮನ್ ವನಗಾ ಸಾವಿನಿಂದ ಉಪಚುನಾವಣೆ ನಡೆದಿತ್ತು. ಶಿವಸೇನೆಯಿಂದ ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆಯಿಂದ ಸ್ಪರ್ಧಿಸಿದ್ದರು.

    ಭಂಡಾರಾ-ಗೊಂಡಿಯಾ: ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಹೇಮಂತ್ ಪಟೇಲ್ ಹಿನ್ನಡೆ ಅನುಭವಿಸಿದ್ದು, ಎನ್‍ಸಿಪಿಯ ಮಧುಕರ್ ಕುಡ್ಕೆ ಗೆಲುವು ಪಡೆದಿದ್ದಾರೆ. ಚುನಾವಣೆಗೂ ಮುನ್ನವೇ ಎನ್‍ಸಿಪಿ ಅಭ್ಯರ್ಥಿಗೆ ಕಾಂಗ್ರೆಸ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ನೀಡಿದ್ದರಿಂದ ಬಿಜೆಪಿ ಸೋತಿದೆ. 2014ರಲ್ಲಿ ಪ್ರಫುಲ್ ಪಟೇಲ್ ವಿರುದ್ಧ ಗೆದ್ದಿದ್ದ ನಾನಾ ಪಟೋಲೆ ಪ್ರಧಾನಿ ಮೋದಿ ವಿರುದ್ಧ ಸಿಟ್ಟಿಗೆದ್ದು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದರು. ಅದ್ದರಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು.

    ನಾಗಲ್ಯಾಂಡ್: ನಾಗಲ್ಯಾಂಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಎನ್‍ಡಿಪಿಪಿವುಳ್ಳ ಪಿಡಿಎ ಮೈತ್ರಿಕೂಟದ ಅಭ್ಯರ್ಥಿ ಟೊಖೆಹೋ ಯೆಪ್ತೋಮಿ ಗೆಲುವು ಪಡೆದಿದ್ದಾರೆ. ನಾಗಾ ಪೀಪಲ್ಸ್ ಫ್ರಂಟ್‍ನ ಅಶೋಕ್ ಜಮೀರ್ ಸೋಲುಂಡಿದ್ದು, ಎನ್‍ಪಿಎಫ್‍ಗೆ ಕಾಂಗ್ರೆಸ್ ಬೆಂಬಲ ಕೊಟ್ಟಿತ್ತು. ನಾಗಾಲ್ಯಾಂಡ್ ಸಿಎಂ ಮತ್ತು ಎನ್‍ಡಿಪಿಪಿ ನಾಯಕ ನೆಪಿಹ್ಯೂ ರಿಯೋ ರಾಜೀನಾಮೆಯಿಂದಾಗಿ ಉಪ ಚುನಾವಣೆ ಅನಿವಾರ್ಯವಾಗಿತ್ತು.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ನೂರ್ಪುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಗೆಲುವು ಪಡೆದಿದೆ. ಪಂಜಾಬ್ ಶಾಹ್ ಕೋಟ್ ನಲ್ಲಿ ಕಾಂಗ್ರೆಸ್ ಸ್ಥಾನವನ್ನು ಉಳಿಸಿಕೊಂಡಿದೆ. ಉಳಿದಂತೆ ಜಾರ್ಖಂಡ್ ನ ಗೊಮಿಯಾ ಹಾಗೂ ಸಿಲ್ಲಿ ಎರಡು ಕ್ಷೇತ್ರದಲ್ಲಿ ಜೆಎಂಎಂ ಪಕ್ಷ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

    ಬಿಹಾರದ ಜೊಕಿಹಟ್ ಕ್ಷೇತ್ರದಲ್ಲಿ ಆರ್ ಜೆಡಿ ಗೆಲುವಿನ ಬಗೆ ಬೀರಿದ್ದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಮಾಜಿ ಸಿಎಂ ಪುತ್ರಿ ಮಿಲಾನಿ ಡಿ ಶಿರ ಜಯ ಗಳಿಸಿದ್ದಾರೆ. ಈ ಗೆಲುವಿನೊಂದಿಗೆ ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಪಡೆದ ಪಕ್ಷವಾಗಿದೆ.

    ಕೇರಳದ ಚಂಗನೂರು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತರೂಢ ಸಿಪಿಎಂ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರೆ, ಪಶ್ಚಿಮ ಬಂಗಾಲದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ. ಆದರೆ ಉತ್ತರಾಖಂಡದಲ್ಲಿ ಆಡಳಿತರೂಢ ಬಿಜೆಪಿ ಅಭ್ಯರ್ಥಿ ಸೋಲುಕಂಡಿದ್ದು ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.