Tag: ಉಪಗ್ರಹ

  • ನಭಕ್ಕೆ ಚಿಮ್ಮಲಿದೆ ಜಿಸ್ಯಾಟ್ 30 – ಉಪಗ್ರಹದ ವಿಶೇಷತೆ ಏನು? ಯಾವೆಲ್ಲ ದೇಶಗಳಲ್ಲಿ ಸೇವೆ ಸಿಗುತ್ತೆ?

    ನಭಕ್ಕೆ ಚಿಮ್ಮಲಿದೆ ಜಿಸ್ಯಾಟ್ 30 – ಉಪಗ್ರಹದ ವಿಶೇಷತೆ ಏನು? ಯಾವೆಲ್ಲ ದೇಶಗಳಲ್ಲಿ ಸೇವೆ ಸಿಗುತ್ತೆ?

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ ಜಿಸ್ಯಾಟ್-30 ಉಪಗ್ರಹ ಇದೇ ಜನವರಿ 17ರಂದು ಉಡಾವಣೆಗೊಳ್ಳಲಿದೆ. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಲ್ಲಿರುವ ಕೌರು ಉಡ್ಡಯನ ಕೇಂದ್ರದಿಂದ ಉಪಗ್ರಹವನ್ನು ನಭಕ್ಕೆ ಹಾರಿಸಲಾಗುತ್ತದೆ.

    ಜನವರಿ 17ರ ನಸುಕಿನ ಜಾವ 2 ಗಂಟೆ 35 ನಿಮಿಷಕ್ಕೆ ಏರಿಯನ್- 5 ರಾಕೆಟ್ ಜಿಸ್ಯಾಟ್-30 ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಲಿದೆ. ಉಪಗ್ರಹ ಒಟ್ಟು 3,357 ಕೆಜಿ ತೂಕವಿದ್ದು, ಈಗಾಗಲೇ ಜಿಸ್ಯಾಟ್ ಸರಣಿಯ ಒಟ್ಟು 14 ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿವೆ.

    83 ಡಿಗ್ರಿ ರೇಖಾಂಶದಲ್ಲಿ ಉಪಗ್ರಹ ನೆಲೆಗೊಳ್ಳಲಿದ್ದು ಉತ್ತಮ ಗುಣಮಟ್ಟದ ಟಿವಿ, ಟೆಲಿ ಕಮ್ಯೂನಿಕೇಶನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸೇವೆಗಳನ್ನು ನೀಡಲಿದೆ. ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‍ಲಿಂಕಿಂಗ್, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‍ಎನ್‍ಜಿ), ಸೆಲ್ಯೂರಲ್ ಬ್ಯಾಕ್‍ಹೌಲ್ ಕನೆಕ್ಟಿವಿಟಿ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು ಸೇರಿದಂತೆ ಅನೇಕ ಸೇವೆಗಳನ್ನು ಭಾರತ, ಗಲ್ಫ್ ದೇಶಗಳು, ಏಷ್ಯಾದ ಹಲವು ದೇಶಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಅನ್ನು ಪ್ರಾಥಮಿಕವಾಗಿ ದೂರಸಂಪರ್ಕ ಉದ್ದೇಶಕ್ಕಾಗಿ ಮತ್ತು ಮಾಹಿತಿ ಪ್ರಸರಣ ಸೇವೆಗಾಗಿ ಬಳಸಲಾಗುತ್ತದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ `ಇನ್‍ಸ್ಯಾಟ್-4ಎ’ ಉಪಗ್ರಹದ ಬದಲಿಗೆ `ಜಿಸ್ಯಾಟ್-30′ ಅನ್ನು ಉಡಾವಣೆ ಮಾಡಲಾಗುತ್ತಿದೆ.

    ನಭಕ್ಕೆ ಚಿಮ್ಮಲಿದೆ ಕನೆಕ್ಟ್ ಉಪಗ್ರಹ:
    ಜಿಸ್ಯಾಟ್-30 ಜೊತೆ ಏರಿಯಾನ್ 5 ಕನೆಕ್ಟ್ ಉಪಗ್ರಹವನ್ನು ನಭಕ್ಕೆ ಸಾಗಿಸಲಿದೆ. ಆರಂಭದಲ್ಲಿ ಕನೆಕ್ಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಬಳಿಕ ಜಿಸ್ಯಾಟ್ ಕಕ್ಷೆಗೆ ಸೇರಲಿದೆ. ಯುಟೆಲಾಸ್ಟ್ ಮಾಲೀಕತ್ವದ ಕನೆಕ್ಟ್ ಉಪಗ್ರಹವನ್ನು ಥೇಲ್ಸ್ ಅಲೆನಿಯಾ ಸ್ಪೇಸ್ ಅಭಿವೃದ್ಧಿ ಪಡಿಸಿದ್ದು, ಈ ಟೆಲಿಕಾಂ ಉಪಗ್ರಹ ಯುರೋಪ್ ಮತ್ತು ಆಫ್ರಿಕಾದಲ್ಲಿ ಸೇವೆ ನೀಡಲಿದೆ. ಈ ಕಂಪನಿಯ ಸೇವೆ ಪಡೆಯುವ ಗ್ರಾಹಕರು 100 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೌಲಭ್ಯ ಪಡೆಯಲಿದ್ದಾರೆ. ಈ ಉಪಗ್ರಹ 15 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಇಂಟರ್‌ನೆಟ್ ಸೇವೆ ನೀಡಲು ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಏರಿಯನ್-5 ರಾಕೆಟ್ ಒಟ್ಟು 10 ಸಾವಿರ ಕೆಜಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ.

  • 9 ವಿದೇಶಿ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿದ ಪಿಎಸ್‍ಎಲ್‍ವಿ ಸಿ-48

    9 ವಿದೇಶಿ ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಿದ ಪಿಎಸ್‍ಎಲ್‍ವಿ ಸಿ-48

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ನಿರ್ಮಿಸಿರುವ ಪಿಎಸ್‍ಎಲ್‍ವಿ ಸಿ-48 ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ 9 ವಿದೇಶಿ ನಿರ್ಮಿತ ಉಪಗ್ರಹಗಳು ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತೊಯ್ದಿದೆ.

    ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 3.25ರ ಸುಮಾರಿಗೆ ಪಿಎಸ್‍ಎಲ್‍ವಿ ಸಿ-48 ನಭಕ್ಕೆ ಹಾರಿದೆ. 2019ರಲ್ಲಿ ಇದು 6ನೇ ಉಡಾವಣೆಯಾಗಿದ್ದು, ಇದೇ ಡಿಸೆಂಬರಿನಲ್ಲಿ ಇನ್ನೊಂದು ಪಿಎಸ್‍ಎಲ್‍ವಿ ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಇದು ಇನ್ನೂ 5 ಉಪಗ್ರಹಗಳನ್ನು ಹೊತ್ತೊಯ್ಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

    ಇದು ಇಸ್ರೋದ ಪಿಎಸ್‍ಎಲ್‍ವಿ 50ನೇ ಉಡಾವಣೆಯಾಗಿದ್ದು, ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾದ 75ನೇ ಉಪಗ್ರಹವಾಗಿದೆ. ಇದು 628 ಕೆಸ.ಜಿ. ತೂಕವಿದ್ದು, 44.4 ಮೀಟರ್ ಎತ್ತರವಿದೆ. ಭೂ ಪರಿವೀಕ್ಷಣಾ ಉಪಗ್ರಹ ಆರ್‍ಐ ಸ್ಯಾಟ್-2ಬಿಆರ್1 ಸೇರಿದಂತೆ ಇತರ ವಿವಿಧ ದೇಶಗಳ 9 ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಆರ್‍ಐ ಸ್ಯಾಟ್-2ಬಿಆರ್1 ಭೂ ವೀಕ್ಷಣೆಯ ಉಪಗ್ರಹವಾಗಿದ್ದು, ರಡಾರ್ ಮೂಲಕ ದೃಶ್ಯವನ್ನು ಸೆರೆಹಿಡಿಯಲಿದೆ. ಈ ಉಪಗ್ರಹ ಉಡಾವಣೆಯಿಂದ ಕೃಷಿ, ಭಾರತೀಯ ಸೇನೆ, ಅರಣ್ಯ ಹಾಗೂ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಹಾಯವಾಗಲಿದೆ ಎಂದು ವರದಿಯಾಗಿದೆ.

    ಪಿಎಸ್‍ಎಲ್‍ವಿ ಸಿ-48 ನೊಂದಿಗೆ ಉಡಾವಣೆ ಮಾಡಲಾದ 10 ಉಪಗ್ರಹಗಳ ಪೈಕಿ 9 ವಿದೇಶದಾಗಿದ್ದು, ಇದರಲ್ಲಿ ಇಸ್ರೋ ನಿರ್ಮಿತ ‘ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್-2 ಬಿಆರ್-1 ಉಪಗ್ರಹ ಕೂಡ ಇದೆ. ಇದನ್ನು ದೇಶದ ಎರಡನೇ ‘ಗುಪ್ತಚರ ಕಣ್ಣು’ ಎಂದೇ ಕರೆಯಲಾಗಿದೆ. ಅಲ್ಲದೆ ಅಮೆರಿಕದ 6, ಇಸ್ರೇಲ್‍ನ 1, ಇಟಲಿಯ 1 ಹಾಗೂ ಜಪಾನಿನ 1 ಉಪಗ್ರಹಗಳು ಸೇರಿವೆ.

  • ಭಾರತದ ಅಭಿವೃದ್ಧಿ ಸಹಿಸದೇ ನಾಸಾ ‘ಮಿಶನ್ ಶಕ್ತಿ’ಯ ಬಗ್ಗೆ ದೂರುತ್ತಿದೆ – ಡಿಆರ್‌ಡಿಒ ಮಾಜಿ ಮುಖ್ಯಸ್ಥ

    ಭಾರತದ ಅಭಿವೃದ್ಧಿ ಸಹಿಸದೇ ನಾಸಾ ‘ಮಿಶನ್ ಶಕ್ತಿ’ಯ ಬಗ್ಗೆ ದೂರುತ್ತಿದೆ – ಡಿಆರ್‌ಡಿಒ ಮಾಜಿ ಮುಖ್ಯಸ್ಥ

    ನವದೆಹಲಿ: ಭಾರತದ ಅಭಿವೃದ್ಧಿ ಸಹಿಸಲಾಗದೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭಾರತದ ‘ಮಿಶನ್ ಶಕ್ತಿ’ ಯಶಸ್ಸಿನ ಬಗ್ಗೆ ದೂರುತ್ತಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಸಾರಸ್ವತ್ ಹೇಳಿದ್ದಾರೆ.

    ಭಾರತ ನೆಲದಿಂದ ಕ್ಷಿಪಣಿ ಪ್ರಯೋಗಿಸಿ ಉಪಗ್ರಹವನ್ನು ಹೊಡೆದು ಹಾಕಿದ್ದು ನಾಸಾವನ್ನು ಈಗಾಗಲೇ ಕೆರಳಿಸಿದೆ. ಇದಕ್ಕೆ ಪೂರಕ ಎಂಬಂತೆ ಡಿಆರ್‌ಡಿಒದ ಪ್ರಯೋಗಿಕ ಪರೀಕ್ಷೆ ಭಯಾನಕವಾಗಿದ್ದು, ಇದರಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಅಪಾಯವಾಗಲಿದೆ ಎಂದು ನಾಸಾ ಮುಖ್ಯಸ್ಥ ಜೆಮ್ ಬ್ರಿಡೆನ್ ಸ್ಟೈನ್ ಹೇಳಿದ್ದಾರೆ.

    ಭಾರತದ ಉಪಗ್ರಹ 400 ಚೂರಾಗಿದ್ದು, ಇವುಗಳಲ್ಲಿ 60 ಚೂರುಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಇದರಿಂದ ಬಾಹ್ಯಾಕಾಶದಲ್ಲಿ ಕಸ ಹೆಚ್ಚಾಗಿದೆ ಎಂದು ಎಂದು ನಾಸಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.

    ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾರಸ್ವತ್, ಭಾರತ ಅಭಿವೃದ್ಧಿಯನ್ನು ಸಹಿಸದೇ ಟಿಪಿಕಲ್ ಅಮೆರಿಕ ಮಾದರಿಯ ಹೇಳಿಕೆಯನ್ನು ನಾಸಾ ನೀಡಿದೆ. ಭಾರತ ಹೊಡೆದು ಉರುಳಿಸಿದ ಉಪಗ್ರಹದ ಚೂರುಗಳು ಜಾಸ್ತಿ ಸಮಯದ ಬಾಹ್ಯಾಕಾಶದಲ್ಲಿ ಇರಲು ಸಾಧ್ಯವೇ ಇಲ್ಲ. ಈ ಚೂರುಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಭಸ್ಮವಾಗಿ ಬಿಡುತ್ತದೆ. ಹೀಗಾಗಿ ಕಸ ಅಲ್ಲೇ ಇರಲು ಸಾಧ್ಯವಿಲ್ಲ ಎಂದು ಹೇಳಿ ನಾಸಾ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

    ಲಕ್ಷಕ್ಕೂ ಅಧಿಕ ಉಪಗ್ರಹದ ಅವಶೇಷಗಳು ಬಾಹ್ಯಾಕಾಶದಲ್ಲಿ ಸುತ್ತುತ್ತಿವೆ. ವರ್ಷ ವರ್ಷ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಉಪಗ್ರಹಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಪ್ರತಿಯೊಂದರಿಂದಲೂ ಬಾಹ್ಯಾಕಾಶದಲ್ಲಿ ಅವಶೇಷ ಸೃಷ್ಟಿಯಾಗುತ್ತದೆ. ಹೀಗಾಗಿ ಭಾರತದ ಎಸ್ಯಾಟ್ ಪ್ರಯೋಗಿಕ ಪರೀಕ್ಷೆಯಿಂದ ಕಸ ಹೆಚ್ಚಾಗಿದೆ ಎನ್ನುವ ಹೇಳಿಕೆಯೇ ಅರ್ಥಹೀನ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಡಿಆರ್‌ಡಿಒದ ಮಾಜಿ ವಿಜ್ಞಾನಿ ರವಿ ಗುಪ್ತ ಪ್ರತಿಕ್ರಿಯಿಸಿ, ನಾಸಾ ಮುಖ್ಯಸ್ಥರು ಬೇಜವಾಬ್ದಾರಿಯಾಗಿ ತನ್ನ ಹೇಳಿಕೆಯನ್ನು ನೀಡಿದ್ದಾರೆ. ಭಾರತ 300 ಕಿ.ಮೀ ಎತ್ತರದಲ್ಲಿ ತನ್ನ ಪ್ರಯೋಗ ನಡೆಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಅದಕ್ಕಿಂತ ಭಾರೀ ಎತ್ತರದಲ್ಲಿ ಇದೆ. ಅಮೆರಿಕದ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಎಸ್ಯಾಟ್ ಪ್ರಯೋಗ ನಡೆಸಿದೆ. ಈ ಪ್ರಯೋಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಅವಶೇಷ ಉತ್ಪಾದನೆಯಾಗಿತ್ತು. ರಷ್ಯಾ ಮತ್ತು ಚೀನಾ ಸಹ ಈ ರೀತಿ ಪ್ರಯೋಗ ಮಾಡಿದೆ. ಹೀಗಾಗಿ ಭಾರತವನ್ನು ಮಾತ್ರ ದೂಷಿಸುವುದು ಎಷ್ಟು ಸರಿ? ಇದೊಂದು ತಾರತಮ್ಯದ ಹೇಳಿಕೆಯಾಗಿದೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಎಮಿಸ್ಯಾಟ್ ಸೇರಿದಂತೆ 28 ಉಪಗ್ರಹ ಉಡಾವಣೆ ಯಶಸ್ವಿ: ಇಸ್ರೋದಿಂದ ಮೂರು ಸಾಧನೆ

    ಎಮಿಸ್ಯಾಟ್ ಸೇರಿದಂತೆ 28 ಉಪಗ್ರಹ ಉಡಾವಣೆ ಯಶಸ್ವಿ: ಇಸ್ರೋದಿಂದ ಮೂರು ಸಾಧನೆ

    ನವದೆಹಲಿ: ಎಮಿಸ್ಯಾಟ್ ಉಪಗ್ರಹ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಮೂರು ವಿಶೇಷ ಸಾಧನೆ ನಿರ್ಮಿಸಿದೆ.

    ಪಿಎಲ್‍ಎಲ್‍ವಿ-ಸಿ45 ಇಂದು ಬೆಳಗ್ಗೆ 9:30ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಈ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ.

    436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿದೆ. ಈ ಮೊದಲು ಏರ್ ಪ್ಲೇನ್‍ಗಳ ಮೂಲಕ ಶತ್ರು ರಾಷ್ಟ್ರಗಳಲ್ಲಿನ ರೇಡಾರ್ ಪತ್ತೆ ಮಾಡಿ ಎಚ್ಚರಿಸುವ ಕೆಲಸವನ್ನ ಮಾಡಿತ್ತಿತ್ತು.

    ಇಸ್ರೋದ ಪಿಎಸ್‍ಎಲ್‍ವಿ-ಸಿ-45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸ್ಯಾಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿಟ್ಜರ್ಲ್ಯಾಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

    ಮೂರು ಸಾಧನೆ ಹೇಗೆ?
    ಉಡಾವಣೆಯಾದ ಮೊದಲ 17 ನಿಮಿಷದಲ್ಲಿ 749 ಕಿ.ಮೀ ದೂರದಲ್ಲಿರುವ ಕಕ್ಷೆಗೆ 436 ಕೆಜಿ ತೂಕದ ಎಮಿಸ್ಯಾಟ್ ಉಪಗ್ರಹವನ್ನು ಸೇರಿಸಿದೆ. ಬಳಿಕ 220 ಕೆಜಿ ತೂಕದ ವಿವಿಧ ದೇಶಗಳಿಗೆ ಸೇರಿದ 28 ಉಪಗ್ರಹವನ್ನು 504 ಕಿ.ಮೀ ದೂರದ ಕಕ್ಷೆಗೆ ಸೇರಿಸಿದೆ. ಇದಾದ ನಂತರ 485 ಕಿ.ಮೀ ದೂರಕ್ಕೆ ರಾಕೆಟ್ ಇಳಿಸಿದೆ. ಬಾಹ್ಯಾಕಾಶ ಪರೀಕ್ಷಾ ಪ್ರಯೋಗಕ್ಕೆ ಈ ರಾಕೆಟ್ ಬಳಸಲು ಇಸ್ರೋ ಮುಂದಾಗಿದೆ. ಇದೇ ಮೊದಲ ಬಾರಿಗೆ ಇಸ್ರೋ ಮೂರು ಕಕ್ಷೆಯಲ್ಲಿ ರಾಕೆಟ್, ಉಪಗ್ರಹವನ್ನು ಇಳಿಸುವ ಮೂಲಕ ವಿಶೇಷ ಸಾಧನೆ ನಿರ್ಮಿಸಿದೆ.

    ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ. ಮೊದಲ ಬಾರಿಗೆ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದರು.

    ಡಿಆರ್ ಡಿಒ ರೂಪಿಸಿರುವ 436 ಕೆ.ಜಿ. ತೂಕದ ‘ಎಮಿಸ್ಯಾಟ್’ (Electromagnetic Spectrum Measurement) ಉಪಗ್ರಹಕ್ಕೆ ವಿದ್ಯುತ್ಕಾಂತೀಯ ಅಲೆಗಳ ಕ್ಷೇತ್ರ ವಿಶ್ಲೇಷಣೆಯ ಸಾಮರ್ಥ್ಯವಿದೆ. ಇದನ್ನು ರಕ್ಷಣಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಮೊದಲ ಬಾರಿಗೆ ಸಾಮಾನ್ಯ ಜನರಿಗೆ ರಾಕೆಟ್ ಉಡಾವಣೆಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

  • ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಬೆಂಗಳೂರು: ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್,ASAT) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತದ ಹೊರಹೊಮ್ಮಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿ ಭಾರತದ ವಿಜ್ಞಾನಿಗಳು `ಮಿಶನ್ ಶಕ್ತಿ’ ಹೆಸರಿನಲ್ಲಿ ನಡೆಸಿದ ಈ ಅಸ್ತ್ರದ ಪ್ರಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ಸಾಧನೆಗೆ ಕಾರಣವಾದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

    ಭಾರತದ ಸಾಧನೆ ಏನು?
    ಗುರಿಯನ್ನು ನೋಡಿಕೊಂಡು ಗುಂಡಿನ ದಾಳಿ ಅಥವಾ ಏರ್ ಸ್ಟ್ರೈಕ್ ಮೂಲಕ ಬಾಂಬ್ ಹಾಕುವುದು ಇಂದಿನ ದಿನದಲ್ಲಿ ಕಷ್ಟದ ಕೆಲಸವಲ್ಲ. ಹಲವು ದೇಶಗಳು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿದೆ. ಆದರೆ ಉಪಗ್ರಹವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸವುದು ಸುಲಭದ ಕೆಲಸವಲ್ಲ. ಇದು ಬಹಳ ಕಷ್ಟದ ಕೆಲಸವಾಗಿದ್ದು, ಈ ಕಷ್ಟದ ಕೆಲಸವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ವಿಜ್ಞಾನಿಗಳು ಯಶಸ್ವಿಯಾಗಿ ನಡೆಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

    ಯಾಕೆ ಕಷ್ಟ?
    ಇನ್ನೊಂದು ದೇಶದ ಉಪಗ್ರಹ ನಮ್ಮ ದೇಶದ ಉಪಗ್ರಹದ ಮಾಹಿತಿ ಕದಿಯುತ್ತದೆ ಎಂದು ಗೊತ್ತಾದರೆ ನಾವು ದಾಳಿ ಮಾಡಬಹುದು. ದಾಳಿ ಮಾಡಲು ಸಾಮರ್ಥ್ಯ ಹೊಂದಿದರೂ ಉಪಗ್ರಹದ ಪಥವನ್ನು ಗುರುತಿಸುವುದು ಕಷ್ಟವಾಗುತ್ತದೆ. ಯಾಕೆಂದರೆ ಉಪಗ್ರಹಗಳು ಕಕ್ಷೆಯಲ್ಲಿ ತಿರುಗುತ್ತಲೇ ಇರುತ್ತದೆ. ಹೀಗಾಗಿ ನಾವು ಪ್ರಯೋಗಿಸುವ ಕ್ಷಿಪಣಿ ಆ ಉಪಗ್ರಹದ ಪಥವನ್ನು ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ. ಒಂದು ವೇಳೆ ನಮ್ಮ ಗುರಿ ತಪ್ಪಿ ಬೇರೆ ದೇಶದ ಉಪಗ್ರಹವನ್ನು ಹೊಡೆದು ಉರುಳಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಯುದ್ಧವೇ ಆರಂಭವಾಗಬಹುದು. ಹೀಗಾಗಿ ವಿರೋಧಿ ದೇಶದ ಉಪಗ್ರಹದ ಪಥವನ್ನು ಸರಿಯಾಗಿ ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ.

    ಕಡಿಮೆ ಕಕ್ಷೆಯ ಉಪಗ್ರಹ ಯಾಕೆ?
    ವಾಹಿನಿ, ಇಂಟರ್ ನೆಟ್ ಇತ್ಯಾದಿ ಸೇವೆಗಳನ್ನು ನೀಡುವ ಉಪಗ್ರಹ ಭೂಮಿಯಿಂದ ಸುಮಾರು 36 ಸಾವಿರ ಕಿ.ಮೀ ಎತ್ತರದ ಕಕ್ಷೆಯಲ್ಲಿ ಇರುತ್ತದೆ. ಆದರೆ ಒಂದು ಭಾಗದ ನಿಖರ ಚಿತ್ರಗಳನ್ನು ತೆಗೆಯಬೇಕಾದರೆ ಉಪಗ್ರಹಗಳು 300 ರಿಂದ 700 ಕಿ.ಮೀ ಎತ್ತರ ಕಕ್ಷೆಯಲ್ಲಿ ಇರುತ್ತದೆ. ಭಾರತ ಈಗ ಕಡಿಮೆ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಕ್ಷಿಪಣಿ ಬಳಸಿ ಹೊಡೆದು ಉರುಳಿಸಿದೆ. ಭಾರತ ವಿದೇಶದ ಯಾವುದೇ ಉಪಗ್ರಹವನ್ನು ಹೊಡೆದು ಉರುಳಿಸಿಲ್ಲ. ಹೀಗಾಗಿ ನಾವು ಯಾವುದೇ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಉಪಗ್ರಹ ಗುರುತಿಸುವುದು ಹೇಗೆ?
    ಬಾಹ್ಯಾಕಾಶಕ್ಕೆ ಯಾವುದೇ ಉಪಗ್ರಹ ಕಳುಹಿಸಬೇಕಾದರೂ ಅದಕ್ಕೆ ಅನುಮತಿ ಬೇಕಾಗುತ್ತದೆ. ಯಾವುದೇ ವಿದೇಶದ ಉಪಗ್ರಹ ಭಾರತ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎನ್ನುವುದು ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ರೂಂಗೆ ಗೊತ್ತಾಗುತ್ತದೆ. ಈ ಉಪಗ್ರಹ ನಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎನ್ನುವುದು ಗೊತ್ತಾದರೆ ದಾಳಿ ಮಾಡಬಹುದಾಗಿದೆ.

    ಯಾಕೆ ಇಷ್ಟೊಂದು ಮಹತ್ವ?
    ಭೂ, ವಾಯು, ನೌಕಾ ಸೇನಾ ಶಕ್ತಿಗಳ ಜೊತೆ ಈಗ ನಾವು ಬಾಹ್ಯಾಕಾಶದಲ್ಲೂ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎನ್ನುವುದು ವಿಶ್ವಕ್ಕೆ ಪ್ರಕಟವಾಗಿದೆ. ವಿಶೇಷವಾಗಿ ಭಾರತದ ವಿಚಾರ ಬಂದಾಗ ಚೀನಾ ಯಾವಾಗಲೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ಹೀಗಾಗಿ ನಾವು ಬಾಹ್ಯಾಕಾಶದ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ ಎನ್ನುವ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.

    ಯುದ್ಧದಲ್ಲಿ ಬಳಕೆ ಆಗಿದ್ಯಾ?
    ಉಪಗ್ರಹ ವಿರೋಧಿ ಅಸ್ತ್ರಗಳ ಪರಿಕಲ್ಪನೆ ಹೊಸದೆನಲ್ಲ. 1980ರ ಅವಧಿಯ ಶೀತಲ ಸಮರದ ಸಮಯದಲ್ಲಿ ಅಮೆರಿಕ ಮತ್ತು ರಷ್ಯಾ ಈ ಅಸ್ತ್ರಗಳ ಪ್ರಯೋಗಿಕ ಪರೀಕ್ಷೆ ನಡೆಸಿದ್ದವು. 2007ರಲ್ಲಿ ಚೀನಾ ಈ ಪ್ರಯೋಗದಲ್ಲಿ ಯಶಸ್ವಿ ಆಯಿತು. ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಈ ಅಸ್ತ್ರಗಳ ಪ್ರಯೋಗ ಆಗಿಲ್ಲ. ಎಲ್ಲ ದೇಶಗಳು ತಮ್ಮ ನಿಷ್ಕ್ರೀಯ ಉಪಗ್ರಹಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.

    10 ವರ್ಷದ ಸಾಧನೆ:
    ಉಪಗ್ರಹ ವಿರೋಧಿ ಅಸ್ತ್ರದ ನಿರ್ಮಾಣದ ಹಿಂದೆ ಡಿಆರ್‌ಡಿಒ ವಿಜ್ಞಾನಿಗಳ 10 ವರ್ಷದ ಶ್ರಮವಿದೆ. ಕೇರಳದ ತಿರುವನಂತಪುರಂನಲ್ಲಿ 2010ರ ಜನವರಿಲ್ಲಿ ನಡೆದ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಈ ಅಸ್ತ್ರ ನಿರ್ಮಾಣಕ್ಕೆ ನಾವು ಕೈ ಹಾಕಿದ್ದೇವೆ ಎಂದು ಡಿಆರ್‌ಡಿಒ ಪ್ರಕಟಿಸಿತ್ತು.

  • ಇಂಟರ್‌ನೆಟ್‌ ಕ್ಷೇತ್ರದಲ್ಲಿ  ಕ್ರಾಂತಿ ಮಾಡಬಲ್ಲ ಜಿಸ್ಯಾಟ್-11 ಉಪಗ್ರಹ ಉಡಾವಣೆ ಯಶಸ್ವಿ: 1 ಸೆಕೆಂಡಿಗೆ ಎಷ್ಟು ಜಿಬಿ ಡೇಟಾ ಸೆಂಡ್ ಮಾಡಬಹುದು?

    ಇಂಟರ್‌ನೆಟ್‌ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್-11 ಉಪಗ್ರಹ ಉಡಾವಣೆ ಯಶಸ್ವಿ: 1 ಸೆಕೆಂಡಿಗೆ ಎಷ್ಟು ಜಿಬಿ ಡೇಟಾ ಸೆಂಡ್ ಮಾಡಬಹುದು?

    ನವದೆಹಲಿ: ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಭಾರೀ ತೂಕದ ಜಿಸ್ಯಾಟ್-11 ಉಪಗ್ರಹದ ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2.07ಕ್ಕೆ ಏರಿಯಾನ್ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

    ಫ್ರೆಂಚ್ ಗಯಾನಾದಿಂದ ಏರಿಯಾನ್ 5 ರಾಕೆಟ್ ಮೂಲಕ ಉಡಾವಣೆಯಾದ ಉಪಗ್ರಹ 29 ನಿಮಿಷದಲ್ಲಿ ನಿಗದಿತ ಕಕ್ಷೆಯನ್ನು ತಲುಪಿದೆ ಎಂದು ಇಸ್ರೋ ಹೇಳಿದೆ.

    ಯಾಕೆ ಉಡಾವಣೆ?
    500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪಗ್ರಹ 5,854 ಕೆ.ಜಿ. ತೂಕವನ್ನು ಹೊಂದಿದ್ದು, 15 ವರ್ಷ ಜೀವಿತಾವಧಿಯನ್ನು ಹೊಂದಿದೆ. ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿರುವ ಜಿಸ್ಯಾಟ್-11 ಉಪಗ್ರಹವು ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಿದೆ. ಇನ್‍ಸ್ಯಾಟ್ ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಸ್ಯಾಟ್-11 ಅಭಿವೃದ್ಧಿ ಪಡಿಸಿದೆ. ಇದನ್ನು ಓದಿ: ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ಇಂಟರ್ ನೆಟ್ ಕ್ರಾಂತಿ ಹೇಗೆ?
    ಜಿಸ್ಯಾಟ್-11 ನಲ್ಲಿ ಕೆಯು ಮತ್ತು ಕೆಎ ಬ್ಯಾಂಡಿನ 40  ಟ್ರಾನ್ಸ್‌ಪಾಂಡರ್ಗಳಿವೆ. ಇವು ಪ್ರತಿ ಸೆಕೆಂಡಿಗೆ 14 ಗಿಗಾಬೈಟ್ ದತ್ತಾಂಶಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜಿಸ್ಯಾಟ್ 19, 29, 11, 20 ಉಪಗ್ರಹಗಳು ಎಲ್ಲವೂ ಕಾರ್ಯನಿರ್ವಹಿಸಿದರೆ 2019ರ ವೇಳೆಗೆ ಪ್ರತಿ ಸೆಕೆಂಡಿಗೆ 100 ಗಿಗಾ ಬೈಟ್ ವೇಗದಲ್ಲಿ ದತ್ತಾಂಶಗಳನ್ನು ವರ್ಗಾವಣೆ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ. ನಾಲ್ಕು ಉಪಗ್ರಹಗಳ ಪೈಕಿ ಜಿಸ್ಯಾಟ್ 19, ಜಿಸ್ಯಾಟ್ 29 ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದ್ದು, ಜಿಸ್ಯಾಟ್-20 ಮುಂದಿನ ವರ್ಷ ಉಡಾವಣೆಯಾಗಲಿದೆ. ಇದನ್ನು ಓದಿ: 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ಉಡಾವಣೆಯಲ್ಲಿ ವಿಳಂಬವಾಗಿದ್ದು ಯಾಕೆ?
    ಜಿಸ್ಯಾಟ್-11 ಉಪಗ್ರಹವನ್ನು ಇದೇ ಮಾರ್ಚ್, ಎಪ್ರಿಲ್ ಮಧ್ಯ ಭಾಗದಲ್ಲಿ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಈ ಉಪಗ್ರಹ ಉಡಾವಣೆಗೆ ಕೈ ಹಾಕಿದ ಸಮಯದಲ್ಲೇ ಜಿಸ್ಯಾಟ್-6 ಉಪಗ್ರಹವನ್ನು ಇದೇ ವರ್ಷ ಮಾರ್ಚ್ 29ರಂದು ನಭಕ್ಕೆ ಕಳುಹಿಸಲಾಗಿತ್ತು. ಆದರೆ ಉಪಗ್ರಹದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆ ವಿಫಲವಾಗಿತ್ತು. ಈ ಕಾರಣಕ್ಕೆ ಜಿಸ್ಯಾಟ್11 ಉಪಗ್ರಹವನ್ನು ಹಿಂದಕ್ಕೆ ತರಿಸಿದ್ದ ಇಸ್ರೋ ಎಲ್ಲ ಪರೀಕ್ಷೆಗಳನ್ನು ಮಾಡಿ ಈಗ ಉಡಾವಣೆ ಮಾಡಿದೆ.

    ಫ್ರೆಂಚ್ ಗಯಾನಾದಲ್ಲಿ ಯಾಕೆ?
    ಇಸ್ರೋ ಅಭಿವೃದ್ಧಿ ಪಡಿಸಿರುವ ಜಿಎಸ್‍ಎಲ್‍ವಿ 3 ರಾಕೆಟ್ ಗರಿಷ್ಠ 4 ಟನ್ ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ. ಜಿಸ್ಯಾಟ್ 5 ಟನ್ ಇರುವ ಕಾರಣ ಏರಿಯಾನ್ ರಾಕೆಟ್ ಬಳಸಿ ಫ್ರೆಂಚ್ ಗಯಾನಾದಿಂದ ಹಾರಿಸಿದೆ. ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಇಸ್ರೋ ರಾಕೆಟ್ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ರಾಕೆಟ್ ಕಂಪನಿ, ಸ್ಪೇಸ್ ಎಕ್ಸ್ ಜೊತೆಗೆ ಮಾತುಕತೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ

    ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ

    ಬೆಂಗಳೂರು: ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರೀ ತೂಕದ ಉಪಗ್ರಹವ ಬುಧವಾರ ಉಡವಾಣೆಯಾಗಲಿದೆ.

    ಜಿಸ್ಯಾಟ್-11 ಉಪಗ್ರಹವನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ರಾಕೆಟ್ ಮೂಲಕ ಫ್ರೆಂಚ್ ಗಯಾನಾದಿಂದ ಉಡಾವಣೆ ಮಾಡಲಾಗುತ್ತಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2.08ಕ್ಕೆ ಉಪಗ್ರಹ ನಭಕ್ಕೆ ಚಿಮ್ಮಲಿದೆ. ಹೀಗಾಗಿ ಈ ಉಪಗ್ರಹ ಕುರಿತ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಯಾಕೆ ಉಡಾವಣೆ?
    500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪಗ್ರಹ 5,854 ಕೆ.ಜಿ. ತೂಕವನ್ನು ಹೊಂದಿದ್ದು, ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ. ಜಿಸ್ಯಾಟ್-11 ಉಪಗ್ರಹವು ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡುತ್ತಿದೆ. ಇನ್‍ಸ್ಯಾಟ್ ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಸ್ಯಾಟ್-11 ಉಡಾವಣೆಗೆ ಇಸ್ರೋ ಮುಂದಾಗಿದೆ.

    ಇಂಟರ್ ನೆಟ್ ಕ್ರಾಂತಿ ಹೇಗೆ?
    ಜಿಸ್ಯಾಟ್ 11 ನಲ್ಲಿ ಕೆಯು ಮತ್ತು ಕೆಎ ಬ್ಯಾಂಡಿನ 40 ಟ್ರಾನ್ಸ್‌ಪಾಂಡರ್‌ಗಳಿವೆ. ಇವು ಪ್ರತಿ ಸೆಕೆಂಡಿಗೆ 14 ಗಿಗಾಬೈಟ್ ದತ್ತಾಂಶಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜಿಸ್ಯಾಟ್ 19, 29, 11, 20 ಉಪಗ್ರಹಗಳು ಎಲ್ಲವೂ ಕಾರ್ಯನಿರ್ವಹಿಸಿದರೆ 2019ರ ವೇಳೆಗೆ ಪ್ರತಿ ಸೆಕೆಂಡಿಗೆ 100 ಗಿಗಾ ಬೈಟ್ ಸೆಕೆಂಡ್ ವೇಗದಲ್ಲಿ ದತ್ತಾಂಶಗಳನ್ನು ವರ್ಗಾವಣೆ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಕೆ ಸಿವನ್ ಹೇಳಿದ್ದಾರೆ. ನಾಲ್ಕು ಉಪಗ್ರಹಗಳ ಪೈಕಿ ಜಿಸ್ಯಾಟ್ 19, ಜಿಸ್ಯಾಟ್ 29 ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದ್ದು, ಜಿಸ್ಯಾಟ್20 ಮುಂದಿನ ವರ್ಷ ಉಡಾವಣೆಯಾಗಲಿದೆ. ಇದನ್ನು ಓದಿ: ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ಉಡಾವಣೆಯಲ್ಲಿ ವಿಳಂಬವಾಗಿದ್ದು ಯಾಕೆ?
    ಜಿಸ್ಯಾಟ್-11 ಉಪಗ್ರಹವನ್ನು ಇದೇ ಮಾರ್ಚ್, ಎಪ್ರಿಲ್ ಮಧ್ಯ ಭಾಗದಲ್ಲಿ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಈ ಉಪಗ್ರಹ ಉಡಾವಣೆಗೆ ಕೈ ಹಾಕಿದ ಸಮಯದಲ್ಲೇ ಜಿಸ್ಯಾಟ್-6 ಉಪಗ್ರಹವನ್ನು ಇದೇ ವರ್ಷ ಮಾರ್ಚ್ 29ರಂದು ನಭಕ್ಕೆ ಕಳುಹಿಸಲಾಗಿತ್ತು. ಆದರೆ ಉಪಗ್ರಹದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್‍ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆ ವಿಫಲವಾಗಿತ್ತು. ಈ ಕಾರಣಕ್ಕೆ ಜಿಸ್ಯಾಟ್ 11 ಉಪಗ್ರಹವನ್ನು ಹಿಂದಕ್ಕೆ ತರಿಸಿದ್ದ ಇಸ್ರೋ ಎಲ್ಲ ಪರೀಕ್ಷೆಗಳನ್ನು ಮಾಡಿ ಈಗ ಉಡಾವಣೆ ಮಾಡುತ್ತಿದೆ. ಇದನ್ನು ಓದಿ: 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ಫ್ರೆಂಚ್ ಗಯಾನಾದಲ್ಲಿ ಯಾಕೆ?
    ಇಸ್ರೋ ಅಭಿವೃದ್ಧಿ ಪಡಿಸಿರುವ ಜಿಎಸ್‍ಎಲ್‍ವಿ 3 ರಾಕೆಟ್ ಗರಿಷ್ಠ 4 ಟನ್ ಸಾಮರ್ಥ್ಯ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ. ಜಿಸ್ಯಾಟ್ 5 ಟನ್ ಇರುವ ಕಾರಣ ಫ್ರೆಂಚ್ ಗಯಾನಾದ ಮೂಲಕ ಉಡಾವಣೆ ಮಾಡಲು ಇಸ್ರೋ ಮುಂದಾಗಿದೆ. ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಇಸ್ರೋ ರಾಕೆಟ್ ತಯಾರಿಸುತ್ತಿದ್ದು, ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ರಾಕೆಟ್ ಕಂಪನಿ, ಸ್ಪೇಸ್ ಎಕ್ಸ್ ಜೊತೆಗೆ ಮಾತುಕತೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 48 ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡ ಜಿಸ್ಯಾಟ್-6ಎ ಉಪಗ್ರಹ

    48 ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡ ಜಿಸ್ಯಾಟ್-6ಎ ಉಪಗ್ರಹ

    ನವದೆಹಲಿ: ಉಡಾವಣೆಗೊಂಡ 48 ಘಂಟೆ ಬಳಿಕ ಜಿಸ್ಯಾಟ್-6ಎ ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೋ ದೃಢಪಡಿಸಿದೆ. ಮಾರ್ಚ್ 29 ಗುರುವಾರದಂದು ಸಂವಹನ ಉಪಗ್ರಹ ಉಡಾವಣೆಯಾಗಿತ್ತು.

    ದೇಶದ ಸಂವಹನ ಕ್ಷೇತ್ರದ ಸುಧಾರಣೆಗಾಗಿ ಉಪಗ್ರಹವನ್ನು  ಉಡಾವಣೆ ಮಾಡಲಾಗಿತ್ತು. ಸಂಪೂರ್ಣ ಭೂ ಭಾಗದ ಸಂಪರ್ಕವನ್ನು ಈ ಭೂಸ್ಥಿರ ಉಪಗ್ರಹದಿಂದ ನಿರೀಕ್ಷೆ ಮಾಡಲಾಗಿತ್ತು. ಶುಕ್ರವಾರ ಉಪಗ್ರಹವನ್ನು ಎರಡನೇ ಕಕ್ಷೆಗೆ ಏರಿಸುವಾಗ ಸಂಪರ್ಕ ಕಳೆದುಕೊಂಡಿದೆ.

    ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಉಪಗ್ರಹದ ಜೊತೆ ಸಂಪರ್ಕ ಸಾಧಿಸಲು ಇಸ್ರೊ ಅಧ್ಯಕ್ಷ ಕೆ.ಶಿವನ್ ಹಾಗೂ ಇತರೆ ವಿಜ್ಞಾನಿಗಳು ಸಭೆ ನಡೆಸಿ ಕಾರ್ಯನಿರತರಾಗಿದ್ದಾರೆ. ಮತ್ತೆ ಉಪಗ್ರಹದೊಂದಿಗೆ ಸಂಪರ್ಕ ಹೊಂದಲು ವಿಜ್ಞಾನಿಗಳು ನಿರತರಾಗಿದ್ದಾರೆ. ಇದನ್ನೂ ಓದಿ: ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಉಪಗ್ರಹದ ವಿಶೇಷತೆ ಏನು?
    ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.

  • ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಶ್ರೀಹರಿಕೋಟಾ: ಇಸ್ರೋದ ಜಿಸ್ಯಾಟ್-6ಎ ಉಪಗ್ರಹ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.

    ಸ್ಪೇಸ್ ಸೆಂಟರ್ ನಲ್ಲಿರುವ ಎರಡನೇ ಲಾಂಚ್ ಪ್ಯಾಡ್‍ನಿಂದ ಉಪಗ್ರಹವನ್ನು ಹೊತ್ತ ಜಿಎಸ್‍ಎಲ್‍ವಿ ಎಫ್8 ರಾಕೆಟ್ ಇಂದು ಸಂಜೆ 4.56ಕ್ಕೆ ನಭಕ್ಕೆ ಚಿಮ್ಮಿತು. ಉಡಾವಣೆಯಾದ 17 ನಿಮಿಷಕ್ಕೆ ಸರಿಯಾಗಿ ಉಪಗ್ರಹ 36,000 ಕಿ.ಮೀ ಎತ್ತರದಲ್ಲಿರುವ ನಿಗದಿತ ಕಕ್ಷೆಯನ್ನು ತಲುಪಿತು. ಈ ವರ್ಷ ಇಸ್ರೋ ಉಡಾಯಿಸಿದ 2ನೇ ಉಪಗ್ರಹ ಇದಾಗಿದ್ದು ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹವಾಗಿದೆ.

    ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು.

    161 ಅಡಿ ಎತ್ತರವನ್ನು ಹೊಂದಿದ್ದ ಜಿಎಸ್‍ಎಲ್‍ವಿ ರಾಕೆಟ್‍ಗೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದೆ. ಜಿಸ್ಯಾಟ್ 6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಸರಣಿಯ ಎರಡನೇ ಉಪಗ್ರಹವಾಗಿದೆ. ಜಿಸ್ಯಾಟ್6 2015ರ ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಏನಿದು ಕ್ರಯೋಜನಿಕ್ ಎಂಜಿನ್?

    ಉಪಗ್ರಹದ ವಿಶೇಷತೆ ಏನು?
    ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.

    ಎಸ್-ಬ್ಯಾಂಡ್ ವಿಶೇಷತೆ?
    ವಿದ್ಯುತ್ಕಾಂತೀಯ ಮಾದರಿಯ 2 ರಿಂದ 4 ಗಿಗಾ ಹಟ್ರ್ಸ್ ವರೆಗಿನ ತರಂಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ. ಈ ಉಪಗ್ರಹದ ಜೀವಿತಾವಧಿ 10 ವರ್ಷ. ಜಾಗತಿಕವಾಗಿ 4ಜಿ ಮೊಬೈಲ್ ಸೇವೆ ಪಡೆಯಲು 2.5 ಗಿಗಾಹರ್ಟ್ಸ್ ಬ್ಯಾಂಡ್ ಬಳಸಲಾಗುತ್ತದೆ. ಮೊಬೈಲ್ ಬ್ರಾಡ್‍ಬ್ಯಾಂಡ್ ಗೆ ಎಸ್ ಬ್ಯಾಂಡ್ ಸ್ಪೆಕ್ಟ್ರಾಂ ಬಳಕೆ ಮಾಡಲಾಗುತ್ತದೆ.

    ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?
    ಸೈನಿಕರಿಗೆ ವಾಯ್ಸ್ ಮತ್ತು ವಿಡಿಯೋ ಡೇಟಾಗಳನ್ನು ಸುಲಭವಾಗಿ ಸಂವಹನ ಮಾಡಲು ಈ ಉಪಗ್ರಹ ಸಹಕಾರಿಯಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ಈಗಾಗಲೇ ಕೈಯಲ್ಲಿ ಬಳಸುವ ಹಲವು ಸಾಧನಗಳನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಈ ಉಪಗ್ರಹವನ್ನು ಆಧಾರಿಸಿ ಕೆಲಸ ಮಾಡಬಲ್ಲ ಮತ್ತಷ್ಟು ಸಾಧನಗಳನ್ನು ಅಭಿವೃದ್ಧಿ ಪಡಿಸಲಿದೆ.

  • ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ನವದೆಹಲಿ: ಉಗ್ರಗಾಮಿಗಳಿಗೆ ಆರ್ಥಿಕ ಸಹಾಯ ನೀಡಿ ಭಾರತದಲ್ಲಿ ಅಶಾಂತಿ ನೆಲೆಸಲು ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ 100ನೇ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು ತಲೆನೋವಾಗಿ ಪರಿಣಮಿಸಿದೆ.

    ಹೌದು, ಇಸ್ರೋ ಸಂಸ್ಥೆ ಇಂದು ಬೆಳಗ್ಗೆ ಭಾರತದ 100 ನೇ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಆದರೆ ಭಾರತದ ಉಪಗ್ರಹ ಉಡಾವಣೆ ಯಶಸ್ವಿಯಾದ ಕೂಡಲೇ ಪಾಕಿಸ್ತಾನ ಈ ಕುರಿತು ಅಪಸ್ವರ ಎತ್ತಿದ್ದು, ಭಾರತದ ಈ ಉಪಗ್ರಹ ಯೋಜನೆಯಿಂದ ಪ್ರಾದೇಶಿಕ ವ್ಯೂಹಾತ್ಮಕ ಸ್ಥಿರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಆರೋಪಿಸಿದೆ.

    ಈ ಆರೋಪದ ಜೊತೆ ಭಾರತದ ಈ ಉಪಗ್ರಹ ತಂತ್ರಜ್ಞಾನವನ್ನು ತನ್ನ ಮಿಲಿಟರಿ ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡರೆ ದಕ್ಷಿಣ ಏಷ್ಯಾ ಖಂಡದಲ್ಲಿ ಶಾಂತಿಗೆ ದಕ್ಕೆ ಉಂಟಾಗಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.

    ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಭಾರತ ಉಡಾವಣೆ ಮಾಡಿರುವ ಉಪಗ್ರಹಗಳು ಮಿಲಿಟರಿ ಹಾಗೂ ನಾಗರಿಕ ಉದ್ದೇಶ ಎರಡಕ್ಕೂ ಬಳಕೆ ಮಾಡಿಕೊಳ್ಳಲು ಸಾಧ್ಯವಿದ್ದು, ಒಂದು ವೇಳೆ ಭಾರತ ಇದನ್ನೂ ಮಿಲಿಟರಿ ವ್ಯವಸ್ಥೆಯಲ್ಲಿ ಬಳಕೆ ಮಾಡಿಕೊಂಡರೆ ಅದು ಮಿಲಿಟರಿ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗಲಿದೆ. ಅಲ್ಲದೇ ಪ್ರಾದೇಶಿಕ ಸಂಬಂಧಗಳ ಆಸ್ಥಿರತೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇಸ್ರೋ ತನ್ನ 100ನೇ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿತ್ತು. ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಭಾರತದ ಉಪಗ್ರಹದ ಜೊತೆಗೆ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಿದ್ದವು. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರ ಹೊಂದಿತ್ತು. ಆದರೆ ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಐಆರ್ ಎನ್‍ಎಸ್‍ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿತ್ತು.

    ಸಾರ್ಕ್ ಉಪಗ್ರಹಕ್ಕೆ ಸಹಕರಿಸಲಿಲ್ಲ:
    2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ 2014ರ ಜೂನ್ ನಲ್ಲಿ ಕೇಳಿದ್ದರು. ಮೋದಿ ಆಶಯದಂತೆ ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ `ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಸ್ರೋ ತಯಾರಿಸಿ 2017ರ ಮೇ ತಿಂಗಳಿನಲ್ಲಿ ಕಕ್ಷೆಗೆ ಸೇರಿಸಿತ್ತು.

    ಈ ಮಹತ್ವದ ಯೋಜನೆಗೆ ಪಾಕಿಸ್ತಾನ ಸಹಕಾರ ನೀಡಿರಲಿಲ್ಲ. ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿತ್ತು. ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ.

    ಭಾರತಕ್ಕಿಂತಲೂ ಮೊದಲು ಅಂದರೆ 1961 ರಲ್ಲೇ ಪಾಕಿಸ್ತಾನ ಬಾಹ್ಯಾಕಾಶ ಕೇಂದ್ರವನ್ನು ಆರಂಭಿಸಿ ಸಂಶೋಧನೆಯಲ್ಲಿ ತೊಡಗಿತ್ತು. ನಂತರದಲ್ಲಿ 8 ವರ್ಷಗಳ ಬಳಿಕ ಭಾರತ ತನ್ನ ಬಾಹ್ಯಾಕಾಶ ಕೇಂದ್ರ ಇಸ್ರೋ ವನ್ನು ಸ್ಥಾಪಿಸಿತು. ಇಸ್ರೋ ತನ್ನ ಆಧುನಿಕ ಸಂಶೋಧನೆಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೀರ್ತಿ ಪಡೆದಿದೆ. ಅಲ್ಲದೇ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಗೆ ಪೈಪೋಟಿ ನೀಡುವ ಹಂತವನ್ನು ತಲುಪಿದೆ. ಇಸ್ರೋ ಕೇವಲ ಭಾರತದ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡದೇ ಈಗ ವಿದೇಶಿ ಉಪಗ್ರಹಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುಕೊಡುತ್ತಿದೆ.

    ತಿರುಗೇಟು ಕೊಟ್ಟ ಜನ:
    ಇಸ್ರೋ ಉಪಗ್ರಹ ಅಪಸ್ವರ ಎತ್ತಿದ ಪಾಕ್ ನಡೆಯಲ್ಲಿ ಖಂಡಿಸಿದ ಭಾರತೀಯರು, ನೀವು ಕ್ಷಿಪಣಿ, ಬಾಂಬ್ ತಯಾರಿಸುವುದರ ಜೊತೆಗೆ ಉಗ್ರರಿಗೆ ಆರ್ಥಿಕ ಸಹಾಯ ನೀಡುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಿ. ನಮ್ಮ ದೇಶದ ಸಾಧನೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.