Tag: ಉನ್ನಾವ್ ಅತ್ಯಾಚಾರ ಪ್ರಕರಣ

  • ರೇಪ್ ಸಂತ್ರಸ್ತೆ ಅಪಘಾತ ಪ್ರಕರಣ: ಬೇಟಿ ಬಚಾವ್-ಬೇಟಿ ಪಡಾವ್ ಯೋಜನೆ ಟೀಕಿಸಿ ರಾಹುಲ್ ಕಿಡಿ

    ರೇಪ್ ಸಂತ್ರಸ್ತೆ ಅಪಘಾತ ಪ್ರಕರಣ: ಬೇಟಿ ಬಚಾವ್-ಬೇಟಿ ಪಡಾವ್ ಯೋಜನೆ ಟೀಕಿಸಿ ರಾಹುಲ್ ಕಿಡಿ

    ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಚಲಿಸುತ್ತಿದ್ದ ಕಾರು ಉತ್ತರಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಸಂತ್ರಸ್ಥೆಯ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ‘ಬೇಟಿ ಬಚಾವ್-ಬೇಟಿ ಪಡಾವ್’ ಯೋಜನೆಯನ್ನ ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.

    ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಅವರು, ಮೋದಿ ಸರ್ಕಾರದ ಯೋಜನೆ ‘ಬೇಟಿ ಬಚಾವ್-ಬೇಟಿ ಪಡಾವ್’ ಬಗ್ಗೆ ಮಾತನಾಡಿ, ಮಹಿಳೆಯರಿಗೆ ಕೇಂದ್ರ ಸರ್ಕಾರ ಯಾವ ರೀತಿಯ ರಕ್ಷಣೆ ನೀಡುತ್ತಿದೆ ಎಂಬುದನ್ನು ವ್ಯಂಗ್ಯವಾಗಿ ಹೇಳಿದ್ದಾರೆ. ಬೇಟಿ ಬಚಾವೋ-ಬೇಟಿ ಪಡಾವೋ ಭಾರತದ ಮಹಿಳೆಯರಿಗೆ ವಿಶೇಷ ಶಿಕ್ಷಣವನ್ನು ಕಲ್ಪಿಸಿಕೊಡುತ್ತಿದೆ. ಆದರೆ ಒಂದು ವೇಳೆ ಬಿಜೆಪಿ ಶಾಸಕರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದರೆ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಬರೆದು ಅಪಘಾತದ ಸುದ್ದಿಯನ್ನು ಹಾಕಿ ಟೀಕಿಸಿದ್ದಾರೆ.

    ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತನ್ನ ಕುಟುಂಬ ಮತ್ತು ವಕೀಲರೊಂದಿಗೆ ರಾಯ್‍ಬರೇಲಿ ಸಮೀಪ ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಲ್ಲದೆ ಸಂತ್ರಸ್ತೆಯ ಇಬ್ಬರು ಕುಟುಂಬಸ್ಥರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಳೆ ಬೀಳುತ್ತಿದ್ದ ಕಾರಣಕ್ಕೆ ನಿಯಂತ್ರಣ ತಪ್ಪಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರು ವಕೀಲರೊಂದಿಗೆ ರಾಯ್‍ಬರೇಲಿ ಜೈಲಿನಲ್ಲಿರುವ ಸಂಬಂಧಿಕರೊಬ್ಬರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಅಪಘಾತವಾಗಿದೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪ್ರಸಾದ್ ವರ್ಮಾ ಹೇಳಿದ್ದಾರೆ.

    ಸಂತ್ರಸ್ತೆಯು ಉನ್ನಾವ್‍ನ ನಿವಾಸಿಯಾಗಿದ್ದು, ಯುಪಿಯ ಬ್ಯಾಂಗರ್ಮೌ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂಎಲ್‍ಎ ಕುಲ್‍ದೀಪ್ ಸೆಂಗರ್ 2017ರಲ್ಲಿ ಯುವತಿಯನ್ನು ಅತ್ಯಾಚಾರ ಗೈದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಯಾರು ಕೂಡ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆಧಿತ್ಯನಾಥ್ ಅವರ ನಿವಾಸ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.