– ದೆಹಲಿ ಕೋರ್ಟ್ ತೀರ್ಪು
– ಡಿ.19ಕ್ಕೆ ಶಿಕ್ಷೆ ಪ್ರಕಟ
ನವದೆಹಲಿ: ಉಚ್ಚಾಟಿತ ಬಿಜೆಪಿ ಶಾಸಕ, ಕುಲದೀಪ್ ಸಿಂಗ್ ಸೆಂಗಾರ್ 2017ರಲ್ಲಿ ಉನ್ನಾವೋದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾಗಿದೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಆರೋಪಿಯಾಗಿದ್ದ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗಾರ್ ದೋಷಿ ಎಂದು ತಿಳಿಸಿದೆ. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 19ರಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದೆ.
ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್, ಸೆಕ್ಷನ್ 376 (5,6) ಹಾಗೂ ಪೋಕ್ಸೊ ಅಡಿ ದೋಷಿ ಎಂದು ಹೇಳಿದೆ. 2017ರಲ್ಲಿ ಉನ್ನಾವೋ ಮೂಲದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೆ ಸಂತ್ರಸ್ತೆ ಕೋರ್ಟ್ ಗೆ ತೆರಳುತ್ತಿದ್ದ ವೇಳೆ ಕೊಲೆ ಯತ್ನ ನಡೆಸಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಕುರಿತು ಸಿಬಿಐ ಹಾಗೂ ಆರೋಪಿಗಳ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ತೀಸ್ ಹಜಾರಿ ಕೋರ್ಟ್ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಎಂದು ತೀರ್ಪು ನೀಡಿದೆ. ಪ್ರಕರಣ ಮತ್ತೊರ್ವ ಆರೋಪಿ ಶಶಿ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಬಿಜೆಪಿಯ ಉಚ್ಚಾಟಿತ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಿನ್ನೆಲೆ ಸುಪ್ರೀಂಕೋರ್ಟ್ ಲಕ್ನೋ ನಿಂದ ದೆಹಲಿಯ ತೀಸ್ ಹಜಾರಿ ಕೋರ್ಟ್ ಗೆ ಪ್ರಕರಣವನ್ನು ವರ್ಗಾಯಿಸಿತ್ತು. ಆಗಸ್ಟ್ 5 ರಿಂದ ಪ್ರತಿನಿತ್ಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ನೀಡಿದೆ. ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸೆಕ್ಷನ್ 120 (b), 363,366, 376 ಮತ್ತು ಪೋಕ್ಸೊ ಅಡಿ ಕೇಸ್ ದಾಖಲಿಸಲಾಗಿತ್ತು.
ಕೋರ್ಟ್ ಅಪರಾಧಿ ಎಂದು ಘೋಷಿಸುತ್ತಿದ್ದಂತೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕುಲದೀಪ್ ಸಿಂಗ್ ಸೆಂಗಾರ್ 1990ರಲ್ಲಿ ಕಾಂಗ್ರೆಸ್‍ನಲ್ಲಿದ್ದರೆ, 2002ರಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಸೇರಿ ಶಾಸಕನಾಗಿ ಆಯ್ಕೆಯಾಗಿದ್ದರು. ನಂತರ ಸಮಾಜವಾದಿ ಪಕ್ಷ ಸೇರಿ 2007, 2012 ರಲ್ಲಿ ಜಯಗಳಿಸಿದ್ದು ನಂತರ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಯಗಳಿಸಿದ್ದರು.
ಉನ್ನಾವೋ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರಿಯ ತನಿಖಾ ದಳ (ಸಿಬಿಐ) ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ವೇಳೆ ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನಾವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿತ್ತು.
ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಮೂವರನ್ನು ನರೇಶ್ ತಿವಾರಿ, ಬ್ರಿಜೇಶ್ ಯಾದವ್ ಸಿಂಗ್ ಮತ್ತು ಶುಭಮ್ ಸಿಂಗ್ ಎಂದು ಗುರುತಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶುಭಂ ಸಿಂಗ್ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಅವರ ಸಹವರ್ತಿ ಶಶಿ ಸಿಂಗ್ ಅವರ ಪುತ್ರನಾಗಿದ್ದು, ಕುಲದೀಪ್ ಯಾದವ್ ಅವರೇ ಇದನ್ನು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಪ್ರಾಪ್ತೆಯನ್ನು ಜೂನ್ 11, 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಶಿ ಸಿಂಗ್ ಕೂಡ ಸಹ ಆರೋಪಿಯಾಗಿದ್ದ. ಶಶಿ ಸಿಂಗ್ ಆಮಿಷವೊಡ್ಡಿ ಕುಲದೀಪ್ ಸಿಂಗ್ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆ ತಂದ ಬಳಿಕ ಜೂನ್ 4, 2017 ರಂದು ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.