Tag: ಉದ್ಯೋಗ

  • ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27,000 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

    ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ಹೂಡಿಕೆಗೆ (Investment Proposals) ಒಪ್ಪಿಗೆ ನೀಡಲಾಗಿದೆ. ಅದರ ಅನ್ವಯ 11 ಹೊಸ ಯೋಜನೆಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ., ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ., ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ., ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ., ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ., ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ., ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ., ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ., ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.

  • ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    – ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮದ ಎಚ್ಚರಿಕೆ

    ಬೆಂಗಳೂರು: ಋತುಚಕ್ರ ರಜೆಯನ್ನು (Period Leave) ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದ್ರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ (Santosh Lad) ಅವರು ಹೇಳಿದರು.

    ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.  ಇದನ್ನೂ ಓದಿ: ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು (Women Employee) ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಮ್ಮೆ ಜಾರಿ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ

    ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬರತೊಡಗಿದರೆ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ

    ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ. ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಸಾಹುಕಾರರ ಮನೆಯಲ್ಲಿನ ಮಹಿಳೆಯರು ಕೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಾರೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೇ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದರು.

    ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್‌ ವಿಶ್ವವಿದ್ಯಾಲಯದ ಅಸೋಸಿಯೇಟ್‌ ಡೀನ್‌ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲಾ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.

  • ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    – ರಿಪಬ್ಲಿಕನ್, ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೆ
    – ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳಿಗೆ ಸಮಸ್ಯೆಯಿಲ್ಲ

    ವಾಷಿಂಗ್ಟನ್‌: ವಿಶ್ವದ ದೊಡ್ಡಣ್ಣ ಅಂತ ಹೇಳಿಕೊಳ್ಳುವ ಅಮೆರಿಕ (USA) ಇದೀಗ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.

    ಆಡಳಿತಾರೂಢ ಡೊನಾಲ್ಡ್‌ ಟ್ರಂಪ್‌ (Donald Trump) ರಿಪಬ್ಲಿಕನ್ ಪಕ್ಷ (Republican Party) ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದೆ. ಆರೋಗ್ಯ ಸೇವಾ ಅನುದಾನದ ಭಿನ್ನಾಭಿಪ್ರಾಯದಿಂದ ಮಧ್ಯಂತರ ಅನುದಾನದ ಮಸೂದೆಗೆ ಬಹುಮತ ಸಿಗದೇ ಬಿಲ್ ಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಶಟ್‌ಡೌನ್ ಆಗಿದ್ದು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದೆ.

    ರಿಪಬ್ಲಿಕನ್ ಪಕ್ಷವು ಮಂಡಿಸಿದ ಮಧ್ಯಂತರ ಅನುದಾನ ಮಸೂದೆಯನ್ನು ಡೆಮಾಕ್ರೆಟಿಕ್ (Democartic) ಸದಸ್ಯರು ಸೆನೆಟ್‌ನಲ್ಲಿ ವಿರೋಧಿಸಿದರು. ತಮ್ಮ ಪ್ರಮುಖ ಬೇಡಿಕೆಗಳನ್ನು ಈ ಮಸೂದೆಯಲ್ಲಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿಬಾಗ್ರಾಮ್‌ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್‌ – ಏನಿದು ವಿವಾದ?

    ಅಫೋರ್ಡಬಲ್ ಕೇರ್ ಆಕ್ಟ್ ಅಂದರೆ ಒಬಾಮಾಕೇರ್ ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡಲಾಗುತ್ತಿರುವ ಹೆಲ್ತ್ ಇನ್ಸೂರೆನ್ಸ್ ಸಬ್ಸಿಡಿಗಳನ್ನು ಮುಂದುವರಿಸಬೇಕು ಎನ್ನುವುದು ಡೆಮಾಕ್ರೆಟಿಕ್‌ಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ರಿಪಬ್ಲಿಕನ್ನರು ಒಪ್ಪದ ಕಾರಣ ಸೆನೆಟ್‌ನಲ್ಲಿ 55-45 ಮತಗಳ ಅಂತರದಿಂದ ಬಿಲ್ ಬಿದ್ದು ಹೋಯಿತು. ಇದರ ಪರಿಣಾಮವಾಗಿ ಆಡಳಿತ ಕಾರ್ಯನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲದೇ ಬುಧವಾರ ಮಧ್ಯರಾತ್ರಿ 12:01ಕ್ಕೆ ಅಧಿಕೃತವಾಗಿ ಶಟ್‌ಡೌನ್ (US Shutdown) ಘೋಷಿಸಲಾಗಿದೆ.

    ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿಂದೆ ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿಯೇ 35 ದಿನಗಳ ಕಾಲ ಕೊನೆಯ ಬಾರಿ ಶಟ್‌ಡೌನ್ ಸಂಭವಿಸಿತ್ತು. ಈಗ ಎಷ್ಟು ದಿನ ಈ ಶಟ್‌ಡೌನ್ ಇರಲಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ.

    ಅಮೆರಿಕ ಶಟ್‌ಡೌನ್ ಏನೆಲ್ಲಾ ಎಫೆಕ್ಟ್?
    ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್‌ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.

    ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆರೈಕೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್‌ಗಳನ್ನು ಫಲಾನುಭವಿಗಳಿಗೆ ಕಳುಹಿಸಲಾಗುತ್ತದೆ. ನಾಸಾದ ಬಾಹ್ಯಾಕಾಶ ಯೋಜನೆಗಳು ಮತ್ತು ಅಧ್ಯಕ್ಷ ಟ್ರಂಪ್‌ರ ವಲಸೆ ನೀತಿಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ. ಇದನ್ನೂ ಓದಿ:  ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಅಗತ್ಯವಲ್ಲದ ಎಂದು ಪರಿಗಣಿಸಲಾದ ಸುಮಾರು 7.50 ಲಕ್ಷ ನೌಕರರನ್ನು ವೇತನರಹಿತ ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಶೇ. 90ರಷ್ಟು ಸಿಬ್ಬಂದಿ ರಜೆಯಲ್ಲಿರುತ್ತಾರೆ. ರಾಷ್ಟ್ರೀಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.

    ಸಣ್ಣ ಉದ್ಯಮಗಳಿಗೆ ನೀಡುವ ಸಾಲ ಸ್ಥಗಿತಗೊಳ್ಳಲಿದೆ. ಆಹಾರ ನೆರವು ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ ವಿತರಣೆ, ಮತ್ತು ಆಹಾರ ತಪಾಸಣಾ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೇಶದ ಆರ್ಥಿಕತೆಯ ಪ್ರಮುಖ ಸೂಚಕವಾದ ಕಾರ್ಮಿಕ ಇಲಾಖೆಯ ಮಾಸಿಕ ನಿರುದ್ಯೋಗ ವರದಿ ಕೂಡ ಪ್ರಕಟವಾಗುವುದಿಲ್ಲ.

  • ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ವಂಚನೆಗೊಳಗಾಗಿದ್ದ 28 ಕನ್ನಡಿಗರ ರಕ್ಷಣೆ

    ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ವಂಚನೆಗೊಳಗಾಗಿದ್ದ 28 ಕನ್ನಡಿಗರ ರಕ್ಷಣೆ

    – ಒತ್ತೆಯಾಳಾಗಿರಿಸಿಕೊಂಡಿದ್ದ ಭಾರತೀಯರಿಂದ ದಿನಕ್ಕೆ 15 ಗಂಟೆ ಕೆಲಸ

    ನವದೆಹಲಿ: ಉದ್ಯೋಗ (Job) ಅರಸಿ ವಿದೇಶಕ್ಕೆ ತೆರಳಿ ವಂಚನೆಗೆ ಒಳಗಾಗಿದ್ದ ನಾಲ್ವರು ಮಹಿಳೆಯರು ಸೇರಿ 28 ಮಂದಿ ಕನ್ನಡಿಗರನ್ನು ವಿದೇಶಾಂಗ ಸಚಿವಾಲಯ (Ministry of External Affairs) ರಕ್ಷಣೆ ಮಾಡಿದೆ. ರಕ್ಷಣೆಗೊಳಗಾದವರನ್ನು ದೆಹಲಿಯ ಕರ್ನಾಟಕ ಭವನದ ಅಧಿಕಾರಗಳ ನೆರವಿನೊಂದಿಗೆ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ‌.

    ಸೋಶಿಯಲ್ ಮೀಡಿಯಾ ಮೂಲಕ ಉದ್ಯೋಗ ನೀಡುವ ಭರವಸೆ ನೀಡಿ 283 ಭಾರತೀಯರನ್ನು ಥೈಲ್ಯಾಂಡ್‌ಗೆ ಕರೆಸಿಕೊಳ್ಳಲಾಗಿತ್ತು. ಥೈಲ್ಯಾಂಡ್‌ಗೆ (Thailand) ತೆರಳಿದ್ದ ಭಾರತೀಯರನ್ನ (Indians) ರಸ್ತೆ ಮಾರ್ಗದ ಮೂಲಕ ಮಯನ್ಮಾರ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪಾಸ್‌ಪೊರ್ಟ್ ಕಿತ್ತುಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು.

    ಒತ್ತೆಯಾಳಾಗಿಟ್ಟುಕೊಂಡಿದ್ದ ಭಾರತೀಯರನ್ನು ದಿನಕ್ಕೆ 15 ಗಂಟೆಗೂ ಅಧಿಕ ಕೆಲಸ ಮಾಡಿಸಲಾಗುತ್ತಿತ್ತು. ಈ ವಿಷಯ ವಿದೇಶಾಂಗ ಸಚಿವಾಲಯ ಗಮನಕ್ಕೆ ಬಂದ ಬಳಿಕ ವಂಚನೆಗೊಳಾದವರನ್ನು ಗುರುತಿಸಿ ಮಯನ್ಮಾರ್, ಥೈಲ್ಯಾಂಡ್ ರಾಯಭಾರ ಕಚೇರಿಗಳ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಯಿತು‌.

    ಭಾರತಕ್ಕೆ ಬಂದ 28 ಕನ್ನಡಿಗರನ್ನು ಕರ್ನಾಟಕ ಭವನದ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಯಿತು.

  • ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್‌ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ

    ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್‌ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ

    ಬೆಂಗಳೂರು: ಅಮೆಜಾನ್‌ (Amazaon) ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು (Bengaluru) ಕಚೇರಿಯ ಉದ್ಯೋಗಿಗಳನ್ನ ಹೊಗಳಿ ಸೋಶಿಯಲ್‌ ಮೀಡಿಯಾದಲ್ಲಿ (Social Media) ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಅಮೆಜಾನ್‌ನ ಮಾಜಿ ಕಾರ್ಯನಿರ್ವಾಹಕ ಆಡಮ್ ಬ್ರೋಡಾ ಲಿಕ್ಡ್‌ಇನ್‌ನಲ್ಲಿ ಹಾಕಿದ ಪೋಸ್ಟ್‌ನಿಂದ ಭಾರತದಲ್ಲಿ ಕೆಲಸದ ಸಂಸ್ಕೃತಿಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

    ಆಡಮ್ ಬ್ರೋಡಾ ಅವರು ವಾರದಲ್ಲಿ 60 + ಗಂಟೆಗಳ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ತಾಂತ್ರಿಕ ತಂಡ, ಸತತವಾಗಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಾನು ಬೆಳಗ್ಗೆ 7 ಗಂಟೆಗೆ ಲಾಗ್ ಇನ್ ಮಾಡಿದಾಗ ಅವರು ಆನ್‌ಲೈನ್‌ನಲ್ಲಿರುತ್ತಾರೆ. ಬೆಳಿಗ್ಗೆ 10 ಗಂಟೆಗೆ ಸಿಬ್ಬಂದಿ ಸಭೆಗಳಿಗೆ ಹಾಜರಾಗುತ್ತಾರೆ ಮತ್ತು ಮಧ್ಯಾಹ್ನ ವಿಪಿ ಮಟ್ಟದ ವಿಮರ್ಶೆಗಳನ್ನು ಸಹ ಮಾಡುತ್ತಾರೆ. ಬೆಂಗಳೂರಿನ ಕಾಲಮಾನ ಬೆಳಗಿನ ಜಾವ 3 ಗಂಟೆಯಾಗಿದ್ದರೂ ಉತ್ಸಾಹದಿಂದ ಅವರು ಕೆಲಸ ಮಾಡುವುದನ್ನು ನೋಡಿ ನಾನು ಬೆರಗಾದೆ ಎಂದಿದ್ದಾರೆ. ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ

    ಒಂದು ವಾರದಲ್ಲಿ ಯಾವ ದೇಶದಲ್ಲಿ ಉದ್ಯೋಗಿಗಳು ಹೆಚ್ಚು ಸಮಯ ಕೆಲಸದ ಮಾಡುತ್ತಾರೆ ಎನ್ನುವುದಕ್ಕೆ ಆಡಮ್ ಬ್ರೋಡಾ ಅವರು ಲಿಕ್ಡಿನ್‌ ಇನ್ಫೋಗ್ರಾಫಿಕ್‌ ಪೋಸ್ಟ್‌ ಹಾಕಿದ್ದಾರೆ.

    ವಾರದಲ್ಲಿ ಸರಾಸರಿ 56 ಗಂಟೆ ಕೆಲಸ ಮಾಡುವ ಮೂಲಕ ಭಾರತ (India) ಮೊದಲ ಸ್ಥಾನದಲ್ಲಿದ್ದರೆ ನೆದರ್‌ಲ್ಯಾಂಡ್‌ 29.8 ಗಂಟೆ ಕೆಲಸ ಮಾಡುವ ಮೂಲಕ ಕೊನೆಯ ಸ್ಥಾನದಲ್ಲಿದ್ದಾರೆ.

     

  • ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ

    ನವದೆಹಲಿ: ಅಮೆರಿಕದ ಇಂಧನ ಭದ್ರತೆ (US energy security) ಮತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಗಳ (Resilient Infrastructure) ಯೋಜನೆಗೆ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವ ಉದ್ದೇಶವನ್ನು ಅದಾನಿ ಸಮೂಹ ಹೊಂದಿದೆ. ಈ ಮೂಲಕ 15,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ಗೌತಮ್‌ ಅದಾನಿ (Gautam Adani) ಹೇಳಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಅದಾನಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವ ವಿಶ್ವಾಸ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅದಾನಿ ಸಮೂಹ ತನ್ನ ಜಾಗತೀಕ ಪರಿಣತಿ ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. 10 ಶತಕೋಟಿ ಡಾಲರ್‌ ಹೂಡಿಕೆಗೆ ಅದಾನಿ ಬದ್ಧವಾಗಿದ್ದು, 15,000 ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ ಎಂದು ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

    ಬಿಲಿಯನೇರ್ ಉದ್ಯಮಿಯೂ ಆಗಿರುವ ಡೊನಾಲ್ಡ್ ಟ್ರಂಪ್ (DonaldTrump) ಅವರು ಇತ್ತೀಚೆಗೆ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ ಪಕ್ಷದ ಕಮಲಾ ಹ್ಯಾರಿಸ್ ಅವರನ್ನ ಸೋಲಿಸಿದರು. ಟ್ರಂಪ್‌ ಅವರ ಈ ಗೆಲುವು ಅಮೆರಿಕ ಮತ್ತು ಭಾರತದ (USA And India) ನಡುವಿನ ಸಂಬಂಧ ಉತ್ತಮಗೊಳಿಸುತ್ತದೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯ ನಡುವೆ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕದಲ್ಲಿ ಇಂಧನ ಭದ್ರತೆ ಮತ್ತು ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದರೂ, ನಿರ್ದಿಷ್ಟ ಯೋಜನೆಯ ಟೈಮ್‌ಲೈನ್‌ಗಳ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ಹೇಳಿವೆ.

    ಒಂದು ದಿನದ ಹಿಂದೆಯಷ್ಟೇ ಯೂರೋಪಿಯನ್‌ ಯೂನಿಯನ್‌, ಜರ್ಮನಿ, ಡೆನ್ಮಾರ್ಕ್‌ ಮತ್ತು ಬೆಲ್ಜಿಯಂ ರಾಯಭಾರಿಗಳು ಅದಾನಿ ಸಮೂಹ ನೇತೃತ್ವದ ಗುಜರಾತ್‌ನ ಖಾವ್ಡಾದಲ್ಲಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಹಾಗೂ ಮುಂದ್ರಾದಲ್ಲಿರುವ ಬಂದರು ಹಾಗೂ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಂಕೀರ್ಣಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಭಾರತದಲ್ಲಿ ಶಕ್ತಿ ಪರಿವರ್ತನೆಯನ್ನು ಹೆಚ್ಚಿಸುವುದು, ಹೈಡ್ರೋಜನ್‌ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಇದರೊಂದಿಗೆ ಜಾಗತಿಕವಾಗಿ ಪಾಲುದಾರಿಕೆಯನ್ನು ಬಲಪಡಿಸುವ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿದ್ದರು.

  • ಬಾಂಗ್ಲಾದಲ್ಲಿ ಕ್ಷಿಪ್ರ ಮಿಲಿಟರಿ ಕ್ರಾಂತಿ – ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ

    ಬಾಂಗ್ಲಾದಲ್ಲಿ ಕ್ಷಿಪ್ರ ಮಿಲಿಟರಿ ಕ್ರಾಂತಿ – ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ

    ಢಾಕಾ: ಒಂದು ಕಡೆ ವಿದ್ಯಾರ್ಥಿಗಳ ಪ್ರತಿಭಟನೆ, ಇನ್ನೊಂದು ಕಡೆ ಸೇನೆಯೊಂದಿಗೆ ಕಿತ್ತಾಟದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ (Bangladesh PM) ಹುದ್ದೆಗೆ ಶೇಖ್‌ ಹಸೀನಾ (Sheikh Hasina) ರಾಜೀನಾಮೆ ನೀಡಿದ್ದಾರೆ. ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ಮಿಲಿಟರಿ ಆಡಳಿತ ಆರಂಭವಾಗಿದೆ.

    ಪ್ರತಿಭಟನೆ  ತೀವ್ರಗೊಂಡ ಬೆನ್ನಲ್ಲೇ ಶೇಖ್‌ ಹಸೀನಾ ಅವರ ಕಚೇರಿಗೆ ನುಗ್ಗಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು  ಮನೆಗೆ ನುಗ್ಗುವ ಮೊದಲೇ ಶೇಖ್‌ ಹಸೀನಾ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಕೆಲ ಮಾಧ್ಯಮಗಳು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಬಾಂಗ್ಲಾದೇಶದ (Bangladesh Clash) ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಇಂದು ಸುಮಾರು 10 ಲಕ್ಷ ವಿದ್ಯಾರ್ಥಿಗಳು ಢಾಕಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರ- ಸಂಪರ್ಕದಲ್ಲಿರುವಂತೆ ಭಾರತೀಯರಿಗೆ ಕೇಂದ್ರ ಸೂಚನೆ

    ಕೆಲವೇ ದಿನಗಳ ಹಿಂದೆ, 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಭಟನೆ  ಆರಂಭವಾಗಿತ್ತು.

  • Budget 2024 | ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ.

    Budget 2024 | ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ.

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ನಿರುದ್ಯೋಗ (Unemployment) ಸಮಸ್ಯೆ ದೊಡ್ಡ ಸದ್ದು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ತನ್ನ ಬಜೆಟ್‌ನಲ್ಲಿ ಪ್ರಕಟಿಸಿದೆ.

    ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ. ವೇತನ ನೀಡಲಾಗುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹೇಳಿದ್ದಾರೆ.

    ಲೋಕಸಭೆಯಲ್ಲಿ ತಮ್ಮ ಬಜೆಟ್‌ ಭಾಷಣದಲ್ಲಿ (Budget Speech) ನಿರ್ಮಲಾ ಸೀತಾರಾಮನ್‌, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಭಾಗವಾಗಿ, ಔಪಚಾರಿಕ ವಲಯ ಮತ್ತು ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಪಡೆದ ಎಲ್ಲರಿಗೂ ಸರ್ಕಾರ ಒಂದು ತಿಂಗಳ ವೇತನವನ್ನು ನೀಡಲಿದೆ ಎಂದು ಹೇಳಿದರು.

    ಒಂದು ತಿಂಗಳ ಸಂಬಳದ ನೇರ ಲಾಭ ವರ್ಗಾವಣೆ (DBT) ಮೂಲಕ 15,000 ರೂ. ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಇದನ್ನೂ ಓದಿ: Union Budget 2024: ಗ್ರಾಮೀಣ, ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು – Live Updates‌‌

     

    ತಿಂಗಳಿಗೆ ಗರಿಷ್ಟ 1 ಲಕ್ಷ ರೂ. ಸಂಬಳ ಪಡೆಯುವ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಬಹುದು. ಈ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಈ ಯೋಜನೆಯಿಂದ ಸುಮಾರು 2.10 ಹೊಸ ಉದ್ಯೋಗಿಗಳಿಗೆ ಲಾಭ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

  • ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ!

    ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ!

    ಬೆಂಗಳೂರು: ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ (Reservation For Kannadigas In Private Sector) ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಅಂತಲೂ ಬರೆದುಕೊಂಡಿದ್ದಾರೆ.

    ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೇ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೇ ಶುಕ್ರವಾರ ಅಥವಾ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ -2024 ಮಂಡನೆ ಆಗಲಿದೆ ಎಂದು ಹೇಳಲಾಗಿತ್ತು. ಆದರೀಗ ತಾತ್ಕಾಲಿಕವಾಗಿ ವಿಧೇಯಕವನ್ನು ತಡೆಹಿಡಿಯಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

    ಮಸೂದೆಯಲ್ಲೇನಿದೆ?
    ಆಡಳಿತಾತ್ಮಕ ಹುದ್ದೆಗೆ 50% (ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್ ಇತರೆ ಉನ್ನತ ಹುದ್ದೆಗಳು)

    ಆಡಳಿತೇತರ ಹುದ್ದೆಗೆ 75% (ಕ್ಲರ್ಕ್, ಕೌಶಲ ರಹಿತ, ಅರೆ ಕೌಶಲ ಗುತ್ತಿಗೆ ನೌಕರ)
    * ಉಲ್ಲಂಘಿಸಿದರೆ 25 ಸಾವಿರ ರೂ. ವರೆಗೆ ದಂಡ. ಕನಿಷ್ಟ 10 ಸಾವಿರ, ಗರಿಷ್ಟ 25 ಸಾವಿರ
    * ದಂಡ ವಿಧಿಸಿದ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ

    ಕನ್ನಡಿಗರಿಗೆ ಅರ್ಹತೆ ಹೇಗೆ?
    * ಕರ್ನಾಟಕದಲ್ಲಿ ಹುಟ್ಟಿರಬೇಕು.
    * ಕರ್ನಾಟಕದಲ್ಲಿ 15 ವರ್ಷ ವಾಸವಿರಬೇಕು.
    * ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು.
    * ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದನ್ನೂ ಓದಿ: ನೈಸ್‌ ರಸ್ತೆ ಟೋಲ್‌ ದರ ಏರಿಕೆ ಬೆನ್ನಲ್ಲೇ ಶಾಕ್‌ – ಟೋಲ್‌ನಲ್ಲಿ ಸಂಚರಿಸೋ BMTC ಬಸ್ ಪ್ರಯಾಣ ದರ ಏರಿಕೆ!

    ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ ಕೊಟ್ಟಿರುವುದನ್ನ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಕಟಿಸಿದ್ದರು. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಹೇಳಿದ್ದರು.

    ರಾಜ್ಯ ಸರ್ಕಾರದ ನಿರ್ಧಾರಕ್ಕೆ ಐಟಿ-ಬಿಟಿ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂದರ್ ಷಾ, ಟೆಕ್ ಹಬ್ ಆಗಿರೋ ನಮಗೆ ನುರಿತ ಪ್ರತಿಭೆಗಳು ಬೇಕಾಗಿವೆ. ನಮಗೆ ಲೋಕಲ್ ಅನ್ನೋದಕ್ಕಿಂತ ನುರಿತ ಪ್ರತಿಭೆಗಳು ಬೇಕಿದೆ ಎಂದು ಪೋಸ್ಟ್ ಮಾಡಿದ್ದರು. ಅಲ್ಲದೇ ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದರು. ಇದು ತಾರತಮ್ಯ, ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಯಾರೆಂದು ಸರ್ಕಾರ ಪ್ರಮಾಣೀಕರಿಸುತ್ತದೆಯೇ? ಅನಿಮಲ್ ಫಾರ್ಮ್‌ನಲ್ಲಿರುವಂತೆ ಇದು ಫ್ಯಾಸಿಸ್ಟ್ ಮಸೂದೆಯಾಗಿದೆ. ಅದನ್ನು ನಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು.

  • ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ; ಎಕ್ಸ್‌ನಲ್ಲಿ ಪೋಸ್ಟ್‌ ಡಿಲೀಟ್‌ ಮಾಡಿದ ಸಿಎಂ

    ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ; ಎಕ್ಸ್‌ನಲ್ಲಿ ಪೋಸ್ಟ್‌ ಡಿಲೀಟ್‌ ಮಾಡಿದ ಸಿಎಂ

    ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ `ಸಿ’ ಮತ್ತು `ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ (Reservation For Kannadigas) ನೀಡುವ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಗಳವಾರ ಸಂಜೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದನ್ನ ಬುಧವಾರ ಡಿಲೀಟ್ ಮಾಡಿದ್ದಾರೆ.

    ಸಿಎಂ ಟ್ವೀಟ್‌ಗೆ ಖಾಸಗಿ ಉದ್ಯಮ ವಲಯದಿಂದ (Private Sector) ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ರೀತಿಯ ಕ್ರಮದಿಂದ ಐಟಿ ಉದ್ಯಮಕ್ಕೆ ತೊಂದರೆಯಾಗಲಿದೆ. ಉದ್ಯಮದಲ್ಲಿ ಗುಣಮಟ್ಟದ ಸೇವೆ ನೀಡಲು ಸಮಸ್ಯೆಯಾಗುತ್ತದೆ ಎಂದು ಉದ್ಯಮಿಗಳು ಆಕ್ಷೇಪ ಎತ್ತಿದ್ದರು. ಕೆಲವರಂತೂ ಇದು ತಾರತಮ್ಯದ ಮಸೂದೆ ಎಂದು ಆಕ್ಷೇಪ ವ್ಯಕ್ತಪಸಿಡಿದ್ದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ; ವಿಧಾನಸಭೆ ಅಧಿವೇಶನದಲ್ಲಿ ಬಿಲ್ ಮಂಡನೆಗೆ ಗ್ರೀನ್ ಸಿಗ್ನಲ್

    ಉದ್ಯಮ ವಲಯದಲ್ಲಿ ಆಕ್ಷೇಪ ಕೇಳಿಬಂದ ನಂತರ ಎಚ್ಚೆತ್ತ ಸಿಎಂ ಬುಧವಾರ ಎಕ್ಸ್ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ. ಜೊತೆಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೈಸ್‌ ರಸ್ತೆ ಟೋಲ್‌ ದರ ಏರಿಕೆ ಬೆನ್ನಲ್ಲೇ ಶಾಕ್‌ – ಟೋಲ್‌ನಲ್ಲಿ ಸಂಚರಿಸೋ BMTC ಬಸ್ ಪ್ರಯಾಣ ದರ ಏರಿಕೆ! 

    ಸಿಎಂ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಕ್ಷದಲ್ಲಿರುವ ಅಲ್ಪಸಂಖ್ಯಾತ ವಿಭಾಗವನ್ನು ವಿಸರ್ಜಿಸಬೇಕು – ಬಿಜೆಪಿ ನಾಯಕ ಸುವೆಂದು ಅಧಿಕಾರಿ