Tag: ಉದ್ಯಮಿ

  • ಪತ್ನಿ, ಮಕ್ಕಳಿಬ್ಬರನ್ನ ಕೊಂದು ಉದ್ಯಮಿ ಆತ್ಮಹತ್ಯೆ

    ಪತ್ನಿ, ಮಕ್ಕಳಿಬ್ಬರನ್ನ ಕೊಂದು ಉದ್ಯಮಿ ಆತ್ಮಹತ್ಯೆ

    – ಉದ್ಯಮಿ ಮನೆಯಲ್ಲಿ ಡೆತ್‍ನೋಟ್ ಪತ್ತೆ
    – ಡೆತ್ ನೋಟ್‍ನಲ್ಲಿ 9 ಜನರ ಹೆಸರು

    ಚಂಡೀಗಢ: ಉದ್ಯಮಿಯೋರ್ವ ಪತ್ನಿ ಮತ್ತು ಮುದ್ದಾದ ಇಬ್ಬರು ಮಕ್ಕಳನ್ನು ಕೊಂದು, ಕೊನೆಗೆ ತಾನು ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ನಡೆದಿದೆ. ಉದ್ಯಮಿ ಮನೆಯಲ್ಲಿ ಪೊಲೀಸರಿಗೆ ಡೆತ್ ನೋಟ್ ಲಭ್ಯವಾಗಿದೆ.

    ಉದ್ಯಮಿ ದೇವಿಂದರ್ ಗರ್ಗ್ (41), ಪತ್ನಿ ಮೀನಾ (38), ಪುತ್ರ ಆರೂಷ್ (14) ಮತ್ತು ಪುತ್ರಿ ಮುಸ್ಕಾನ್ (10) ಮೃತರು. ಆರ್ಥಿಕ ಸಂಕಷ್ಟ ಹಿನ್ನೆಲೆ ಈ ನಿರ್ಧಾರಕ್ಕೆ ಬಂದಿರೋದಾಗಿ ದೇವಿಂದರ್ ಡೆತ್ ನೋಟ್ ನಲ್ಲಿ ಬರೆದಿದ್ದು, ಪತ್ರದಲ್ಲಿ ಸಾಲ ಪಡೆದ 9 ಜನರ ಹೆಸರುಗಳಿವೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟ- ಪತ್ನಿ, ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿ ಪತಿ ಎಸ್ಕೇಪ್

    ದೇವಿಂದರ್ ಬಟಿಂಡಾ ಗ್ರೀನ್ ಸಿಟಿ ಕಾಲೋನಿ ಕೋಟಿ ನಂಬರ್ 284ರಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಖಾಸಗಿ ಕಂಪನಿ ಮೂಲಕ ವ್ಯವಹಾರ ನಡೆಸುತ್ತಿದ್ದ ದೇವಿಂದರ್ ಲಾಕ್‍ಡೌನ್ ಹೊಡೆತದಿಂದ ಚೇತರಿಸಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿದ್ದರಿಂದ ದೇವಿಂದರ್ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಸಾಲದ ಒತ್ತಡದಲ್ಲಿದ್ದ ದೇವಿಂದರ್ ಇಂದು ಮಧ್ಯಾಹ್ನ ಸುಮಾರು 4 ಗಂಟೆಗೆ ತಮ್ಮ ಬಳಿಯಲ್ಲಿದ್ದ ಲೈಸನ್ಸ್ ಗನ್ ನಿಂದ ಮಕ್ಕಳು ಮತ್ತು ಪತ್ನಿಗೆ ಶೂಟ್ ಮಾಡಿದ್ದಾರೆ. ನಂತರ ಅದೇ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್‍ಎಸ್‍ಪಿ ಭೂಪಿಂದರ್ ಸಿಂಗ್ ತಮ್ಮ ತಂಡದೊಂದಿಗೆ ತೆರಳಿದ್ದಾರೆ. ನಾಲ್ಕು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಟಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದು, ಮನೆಯಲ್ಲಿ ಸಿಕ್ಕ ಡೆತ್ ನೋಟ್, ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಆರ್ಥಿಕ ಸಂಕಷ್ಟ- ಉಡುಪಿಯಲ್ಲಿ ಮೂವರು ಆತ್ಮಹತ್ಯೆ

    ಮೃತ ದೇವಿಂದರ್ ಬಿಟ್‍ಕಾಯಿನ್ ಕಂಪನಿಯ ವ್ಯವಹಾರಗಳನ್ನ ಮಾಡುತ್ತಿದ್ದರು. ಕಂಪನಿಯಲ್ಲಿ ಸುಮಾರು 15 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿದ್ದರು. ಆದ್ರೆ ಸಾಲ ಮರುಪಾವತಿಸುವಲ್ಲಿ ಅಸಮರ್ಥರಾಗಿದ್ದರು. ಡೆತ್ ನೋಟ್ ನಲ್ಲಿ ತಮಗೆ ಸಾಲ ನೀಡಿದ 9 ಜನರ ಹೆಸರು ಬರೆದಿದ್ದು, ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂದು ದೇವಿಂದರ್ ಪತ್ರದಲ್ಲಿ ಬರೆದಿದ್ದಾರೆ ಎಂದು ಭೂಪಿಂದರ್ ಸಿಂಗ್ ಹೇಳಿದ್ದಾರೆ.

  • 2 ಕೋಟಿ ವಿಮೆಗಾಗಿ ತನ್ನ ಕೊಲೆಯ ವ್ಯೂಹ ರಚಿಸಿದ ಉದ್ಯಮಿ

    2 ಕೋಟಿ ವಿಮೆಗಾಗಿ ತನ್ನ ಕೊಲೆಯ ವ್ಯೂಹ ರಚಿಸಿದ ಉದ್ಯಮಿ

    – ಕಾರಿನಲ್ಲಿ ಶವ ಸುಟ್ಟು ಕಥೆ ಕಟ್ಟಿದವ ಅರೆಸ್ಟ್

    ಚಂಡೀಗಢ: ಎರಡು ಕೋಟಿ ರೂ. ವಿಮೆಯ ಹಣಕ್ಕಾಗಿ ತನ್ನ ಕೊಲೆಯ ಸುಳ್ಳು ವ್ಯೂಹ ರಚಿಸಿದ್ದ ಉದ್ಯಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಕೊಲೆಯ ಕಥೆ ಕಟ್ಟಿದ್ದ ಉದ್ಯಮಿ ಎರಡು ಕೋಟಿ ರೂಪಾಯಿ ಲಪಾಟಿಯಿಸುವ ಪ್ಲಾನ್ ಮಾಡಿ ಜೈಲುಪಾಲಾಗಿದ್ದಾನೆ.

    ರಾಮ್ ಮೆಹ್ರಾ ಜೈಲು ಸೇರಿರುವ ಉದ್ಯಮಿ. ಬರ್ವಾಲ್ ದಲ್ಲಿ ಗ್ಲಾಸ್ ಡಿಸ್ಪೋಸಲ್ ವ್ಯವಹಾರ ಮಾಡಿಕೊಂಡಿದ್ದ ರಾಮ್ ನಷ್ಟದಲ್ಲಿದ್ದನು. ಮಂಗಳವಾರ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ತನ್ನ ಬಳಿಯಲ್ಲಿದ್ದ 11 ಲಕ್ಷ ನಗದು ದೋಚಿ, ಕಾರಿನಲ್ಲಿ ಶವವೊಂದನ್ನು ಇರಿಸಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದ. ಮೇಲ್ನೋಟಕ್ಕೆ ತನ್ನ ಸಾವು ಆಗಿದೆ ಅನ್ನೋ ರೀತಿ ಘಟನೆಯನ್ನ ಸೃಷ್ಟಿಸಿದ್ದ ರಾಮ್ ಕಣ್ಮರೆಯಾಗಿದ್ದನು. ಛತ್ತೀಸಗಢ್ ನಲ್ಲಿದ್ದ ರಾಮ್ ಮೆಹ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಕ್ಟೋಬರ್ 7ರಂದು ಕುಟುಂಬಸ್ಥರಿಗೆ ಕರೆ ಮಾಡಿದ್ದ ರಾಮ್ ಮೆಹ್ರಾ, ನನ್ನ ಕಾರನ್ನು ಕೆಲವರು ಬೈಕಿನಲ್ಲಿ ಹಿಂಬಾಲಿಸುತ್ತಿದ್ದಾರೆ. ನನ್ನ ಬಳಿ 11 ಲಕ್ಷ ಹಣವಿದ್ದು, ಜೀವಕ್ಕೆ ಅಪಾಯವಿದೆ ಅಂತ ಹೇಳಿದ್ದನು. ಕುಟುಂಬಸ್ಥರು ಘಟನಾ ಸ್ಥಳಕ್ಕೆ ತೆರಳುವಷ್ಟರಲ್ಲಿ ಕಾರು ಬೆಂಕಿಗಾಹುತಿ ಆಗಿತ್ತು, ಒಳಗೆ ಸುಟ್ಟು ಕರಕಲಾದ ಶವ ದೊರಕಿತ್ತು. ಹಣ ದೋಚಿರುವ ದುಷ್ಕರ್ಮಿಗಳು ಕೊಲೆಗೈದು ಶವವನ್ನ ಸುಟ್ಟು ಹಾಕಿದ್ದಾರೆ ಎಂದು ತಿಳಿದಿದ್ದರು.

    ಹಿಸ್ಸಾರ್ ಠಾಣೆಯ ಪೊಲೀಸರಿಗೆ ಪ್ರಕರಣದಲ್ಲಿ ಅನುಮಾನಗಳು ಕಾಡಿದ್ದವು. ಅನುಮಾನ ಬೆನ್ನತ್ತಿದ್ದಾಗ ರಾಮ್ ಮೆಹ್ರಾ ಆರ್ಥಿಕ ಸಂಕಷ್ಟದಲ್ಲಿರುವ ವಿಚಾರ ತಿಳಿದಿದೆ. 2 ಕೋಟಿ ರೂ. ವಿಮೆಯ ವಿಷಯ ಸಹ ತಿಳಿದಿದೆ. ಒಂದು ವೇಳೆ ರಾಮ್ ನಿಧನವಾದ್ರೆ ಆ ಹಣ ಆತನ ಕುಟುಂಬಸ್ಥರಿಗೆ ಸೇರಲಿದೆ ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಛತ್ತೀಸ್‍ಗಢದಲ್ಲಿದ್ದ ಆರೋಪಿಯನ್ನ ಹಿಸ್ಸಾರ್ ಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. ಕಾರಿನಲ್ಲಿ ಶವ ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಕೊರೊನಾ ಚಿಕಿತ್ಸೆಗೆ 12 ಲಕ್ಷ ಬಿಲ್- ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಬದಲಿಸಿದ ಉದ್ಯಮಿ

    ಕೊರೊನಾ ಚಿಕಿತ್ಸೆಗೆ 12 ಲಕ್ಷ ಬಿಲ್- ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಬದಲಿಸಿದ ಉದ್ಯಮಿ

    -ಸರ್ಕಾರಕ್ಕೆ ಆಸ್ಪತ್ರೆ ಹಸ್ತಾಂತರಿಸಿ, ಷರತ್ತು ಹಾಕಿದ ಉದ್ಯಮಿ
    -84 ಬೆಡ್, 10 ಐಸಿಯು ಬೆಡ್ ವ್ಯವಸ್ಥೆ

    ಗಾಂಧಿನಗರ/ಸೂರತ್: ಇಬ್ಬರಿಗೆ ಕೊರೊನಾ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 12 ಲಕ್ಷ ರೂ. ಬಿಲ್ ಮಾಡಿದೆ. ತಮ್ಮ ಮತ್ತು ತಾಯಿ ಚಿಕಿತ್ಸೆಯ ಬಿಲ್ ಪಾವತಿಸಿದ ಉದ್ಯಮಿ, ಬಡವರಿಗಾಗಿ ತನ್ನ ಕಚೇರಿಯನ್ನೇ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿಸಿದ್ದಾರೆ.

    ಸೂರತ್ ರಿಯಲ್ ಎಸ್ಟೇಟ್ ವ್ಯಾಪಾರಿ ಖಾದರ್ ಶೇಖ್ ಕಚೇರಿಯನ್ನು ಆಸ್ಪತ್ರೆಯಾಗಿ ಮಾಡಿದ್ದಾರೆ. ತಾಯಿ ಮತ್ತು ತಮ್ಮನಿಗೆ ಕೊರೊನಾ ಸೋಂಕು ತಗುಲಿತ್ತು. ಅಮ್ಮ 45 ದಿನ ಮತ್ತು ತಮ್ಮ 24 ದಿನಗಳಲ್ಲಿ ಗುಣಮುಖರಾದರು. ಇಬ್ಬರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ 12 ಲಕ್ಷ ರೂ. ಬಿಲ್ ನೀಡಿತ್ತು. ಬಿಲ್ ಪಾವತಿಸಿದ ಬಳಿಕ ಬಡವರಿಗೆ ರೋಗ ಬಂದ್ರೆ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತು. ಹಾಗಾಗಿ 84 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಿದೆ. 84 ನಾರ್ಮಲ್ ಬೆಡ್, 10 ಐಸಿಯು ಬೆಡ್, ಹಾಗೆ ಪ್ರತಿ ಹಾಸಿಗೆಗೂ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಖಾದರ್ ಹೇಳುತ್ತಾರೆ.

    ತಮ್ಮನ ಕೊರೊನಾ ವರದಿ ನೆಗೆಟಿವ್ ಬಂದಿದ್ರೂ ಆತನ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳಿಲ್ಲ. ಆತ ಕೊರೊನಾ ಬಂದ ಬಳಿಕ ಇಳಿದು ಹೋಗಿದ್ದಾನೆ. ತಮ್ಮ ಮತ್ತು ತಾಯಿಗೆ ಯಾವುದೇ ಉತ್ತಮ ಚಿಕಿತ್ಸೆ ನೀಡಿರಲಿಲ್ಲ. 12 ಲಕ್ಷ ರೂ. ಬಿಲ್ ಪಡೆದ್ರೂ ಸಾಮಾನ್ಯ ರೋಗಿಗಳ ರೀತಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಖಾದರ್ ಶೇಖ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

    ತಮ್ಮನ ಡಿಸ್ಚಾರ್ಜ್ ಬಳಿಕ ಆತನ ಸ್ಥಿತಿ ನೋಡಿ ಆಸ್ಪತ್ರೆಯ ನಿರ್ಮಾಣದ ಕುರಿತು ಖಾದರ್ ನಿರ್ಧಾರ ತೆಗೆದುಕೊಂಡಿದ್ದರು. ಈ ಕುರಿತು ಸ್ಥಳೀಯ ಸಂಸದರನ್ನು ಭೇಟಿಯಾಗಿ ಅನುಮತಿ ಪಡೆದುಕೊಂಡಿದ್ದಾರೆ. ತಮ್ಮ ಬಳಿಯಲ್ಲಿರುವ ಮೂರು ಅಂತಸ್ತಿನ ಕಟ್ಟಡವಿದ್ದು, ಒಂದು ಫ್ಲೋರ್ ನಲ್ಲಿ ಕಚೇರಿಯನ್ನು ನಡೆಸುತ್ತಿದ್ದರು. ಕಚೇರಿಯನ್ನ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿಕೊಡುವದಾಗಿ ಭರವಸೆ ನೀಡಿದ್ದರು.

    ಸಂಸದರ ಮುಂದೆ ಖಾದರ್ ಕಂಡೀಷನ್: ನೀಡಿದ ಭರವಸೆಯಂತೆ ಖಾದರ್ ಕೇವಲ 20 ದಿನದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಒಂದು ಫ್ಲೋರ್ ನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ. ಆಸ್ಪತ್ರೆಯನ್ನ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಇಲ್ಲಿ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಬೇಕು. ರೋಗಿಗಳಿಗೆ ಔಷಧಿ ಸಹ ಉಚಿತವಾಗಿ ಕೊಡಬೇಕು ಎಂಬ ಷರತ್ತು ಖಾದರ್ ಸಂಸದರ ಮುಂದೆ ಇಟ್ಟಿದ್ದರು. ಖಾದರ್ ಷರತ್ತನ್ನ ಸರ್ಕಾರ ಸಹ ಒಪ್ಪಿಕೊಂಡಿದೆ.

    ಆಸ್ಪತ್ರೆ ಹಸ್ತಾಂತರಿಸಿದ ಬಳಿಕ ಮಾತನಾಡಿರುವ ಖಾದರ್, ಮೊದಲ ಬಾರಿಗೆ ಮನಸ್ಸಿಗೆ ಒಂದು ರೀತಿಯ ಶಾಂತಿ ಸಿಕ್ಕಿದೆ. ಮತ್ತೊಬ್ಬರ ಜೀವನಕ್ಕೆ ನೆರವಾಗಿದ್ದಕ್ಕೆ ಸಂತೋಷವಾಗುತ್ತಿದೆ. ಯಾರೂ ಬೇಕಾದ್ರೂ ಇಲ್ಲಿಗೆ ಬಂದು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ಬಡವರಿಗೆ ನಮ್ಮ ಮೊದಲ ಆದ್ಯತೆ. ಇಲ್ಲಿಗೆ ಬರೋ ರೋಗಿಗಳು ಟೂಥ್‍ಪೇಸ್ಟ್, ಬ್ರಶ್, ಸಾಬೂನು ಮತ್ತು ಕೊರೊನಾ ತೆಗದುಕೊಂಡು ಬರಬೇಕು. ಚಿಕಿತ್ಸೆಯ ಜೊತೆಗೆ ಎಲ್ಲ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದರು.

    ಕೊರೊನಾ ಒಂದು ಹಂತದವರೆಗೂ ನಿಯಂತ್ರಣಕ್ಕೆ ಸಿಗೋವರೆಗೂ ಈ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. ಇದು ವರ್ಷ ಅಥವಾ ಮೂರು ವರ್ಷವಾದ್ರೂ ಕಟ್ಟಡವನ್ನ ನಮ್ಮ ವಶಕ್ಕೆ ಪಡೆಯಲ್ಲ ಹಾಗೂ ಸರ್ಕಾರದಿಂದ ಬಾಡಿಗೆ ತೆಗೆದುಕೊಳ್ಳಲ್ಲ ಎಂದು ಖಾದರ್ ಹೇಳಿದ್ದಾರೆ. ಆಸ್ಪತ್ರೆಯ ಜವಾಬ್ದಾರಿಯನ್ನ ನಿವೃತ್ತ ಡಿಎಸ್‍ಪಿ ಸಿರಾಜ್ ಜಾಬಾ ಅವರಿಗೆ ನೀಡಲಾಗಿದೆ.

  • ಬೆಂಗಳೂರಿನಲ್ಲಿ ಟೆಕ್ಸ್ ಟೈಲ್ ಉದ್ಯಮಿ ಮಗನ ಕಿಡ್ನಾಪ್ – 2 ಕೋಟಿ ಹಣಕ್ಕೆ ಡಿಮ್ಯಾಂಡ್

    ಬೆಂಗಳೂರಿನಲ್ಲಿ ಟೆಕ್ಸ್ ಟೈಲ್ ಉದ್ಯಮಿ ಮಗನ ಕಿಡ್ನಾಪ್ – 2 ಕೋಟಿ ಹಣಕ್ಕೆ ಡಿಮ್ಯಾಂಡ್

    ಬೆಂಗಳೂರು: ಮಹಾಮಾರಿ ಕೊರೊನಾ ನಡುವೆ ಸಿಲಿಕಾನ್ ಸಿಟಿಯಲ್ಲಿ ಪಾತಕ ಲೋಕ ತಲೆ ಎತ್ತಿದೆ. ಟೆಕ್ಸ್ ಟೈಲ್ ಉದ್ಯಮಿ ಮಗನನ್ನು ಕಿರಾತಕರು ಕಿಡ್ನಾಪ್ ಮಾಡಿದ್ದು, ಹಣಕ್ಕಾಗಿ ಬೇಡಿ ಇಟ್ಟಿದ್ದರು. ಇದೀಗ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

    ಬೆಂಗಳೂರಿನ ಭಾರತಿನಗರದ ಉದ್ಯಮಿ ಸಾದಿಕ್ ಅವರ 11 ವರ್ಷದ ಮಗನನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಶುಕ್ರವಾರ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಬಾಲಕನನ್ನು ಅಪಹರಿಸಿಕೊಂಡು ಹೋಗಿದ್ದರು. ಅಲ್ಲದೇ ಕಿಡ್ನಾಪರ್ಸ್ ಉದ್ಯಮಿ ಬಳಿ ಎರಡು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

    ಉದ್ಯಮಿ ತಕ್ಷಣ ಭಾರತಿನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಪೊಲೀಸರು ಕೂಡಲೇ ಐದು ತಂಡಗಳ ರಚನೆ ಮಾಡಿಕೊಂಡು ಬಾಲಕನ ಪತ್ತೆಯಾಗಿ ಶೋಧಕಾರ್ಯ ಶುರುಮಾಡಿದ್ದರು. ಕೊನೆಗೆ ತುಮಕೂರು ಬಳಿ ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದಾರೆ. ಅಲ್ಲದೇ ಕಿಡ್ನಾಪ್ ಆಗಿದ್ದ ಬಾಲಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಉದ್ಯಮಿಯ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಕಿಡ್ನಾಪ್‍ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಪೂರ್ವ ವಿಭಾಗ ಪೊಲೀಸರು ಮೂವರು ಅಪಹರಣಕಾರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಚೆಕ್‍ನಲ್ಲಿ ಸಂಖ್ಯೆ ತಿದ್ದಿ ಉದ್ಯಮಿಗೆ 6.30 ಕೋಟಿ ವಂಚನೆ

    ಚೆಕ್‍ನಲ್ಲಿ ಸಂಖ್ಯೆ ತಿದ್ದಿ ಉದ್ಯಮಿಗೆ 6.30 ಕೋಟಿ ವಂಚನೆ

    – ಆಡಿಟ್ ವೇಳೆ ಕೃತ್ಯ ಬಯಲು

    ಬೆಂಗಳೂರು: ಚೆಕ್‍ನಲ್ಲಿನ ಅಂಕಿಗಳನ್ನು ತಿದ್ದಿ ಸಹೋದ್ಯೋಗಿಗಳೇ ಉದ್ಯಮಿಗೆ ಬರೋಬ್ಬರಿ 6.30 ಕೋಟಿ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    ರಾಜಶೇಖರ ರೆಡ್ಡಿ ವಂಚನೆಗೊಳಗಾದ ಉದ್ಯಮಿಯಾಗಿದ್ದು, ಭಾಸ್ಕರ್ ರೆಡ್ಡಿ, ವೆಂಕಟರಮಣ ರೆಡ್ಡಿ ಹಾಗೂ ಸುದರ್ಶನ ಗಾಲಿ ವಂಚಿಸಿದ ಆರೋಪಿಗಳು. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳು ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಗೆ ಬೃಹತ್ ವಂಚನೆ ಮಾಡಿದ್ದಾರೆ.

    ಆರೋಪಿಗಳು ರಾಜಶೇಖರ ರೆಡ್ಡಿ ಜೊತೆ ಖಾಸಗಿ ಕಂಪನಿಯ ಸಹಭಾಗಿತ್ವ ಹೊಂದಿದ್ದರು. ರಾಜಶೇಖರ ರೆಡ್ಡಿ ನೀಡಿದ್ದ 8 ಲಕ್ಷ ರೂ.ಗಳ 7 ಚೆಕ್‍ಗಳನ್ನು ಆರೋಪಿಗಳು 80 ಲಕ್ಷ ರೂ.ಗಳಿಗೆ ಮಾರ್ಪಾಡು ಮಾಡಿದ್ದಾರೆ. 7 ಲಕ್ಷದ ಒಂದು ಚೆಕ್‍ನ್ನು 70 ಲಕ್ಷ ರೂ.ಗೆ ಬದಲಿಸಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದಿನ ಮೋಸ ಆಡಿಟ್ ವೇಳೆ ಬಯಲಿಗೆ ಬಂದಿದೆ. ಅಸಲಿ ವಿಚಾರ ತಿಳಿಯುತ್ತಿದ್ದಂತೆ 1,00,60,000 ರೂ.ಗಳನ್ನು ಆರೋಪಿಗಳು ಮರಳಿ ನೀಡಿದ್ದಾರೆ. ಉಳಿದ ಹಣ ವಾಪಾಸ್ ನೀಡದೆ ಸತಾಯಿಸುತ್ತಿದ್ದಾರೆ.

    ಉಳಿದ ಹಣವನ್ನು ನೀಡದೆ ಕಾಡಿಸುತ್ತಿದ್ದ ಹಿನ್ನೆಲೆ ರಾಜಶೇಖರ್ ರೆಡ್ಡಿ ಅವರು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

  • ತಾನೇ ಸುಪಾರಿ ಕೊಟ್ಟು ತನ್ನನ್ನೇ ಹತ್ಯೆ ಮಾಡಿಸ್ಕೊಂಡ ಉದ್ಯಮಿ

    ತಾನೇ ಸುಪಾರಿ ಕೊಟ್ಟು ತನ್ನನ್ನೇ ಹತ್ಯೆ ಮಾಡಿಸ್ಕೊಂಡ ಉದ್ಯಮಿ

    – ಆರೋಪಿಗಳಿಗೆ ತನ್ನ ಫೋಟೋ ಕಳುಹಿಸಿದ
    – ಕೈ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ನವದೆಹಲಿ: ಉದ್ಯಮಿಯೊಬ್ಬ ತನ್ನ ಕುಟುಂಬಕ್ಕೆ ವಿಮಾ ಹಣವನ್ನು (ಇನ್ಯೂರೆನ್ಸ್) ತಲುಪಿಸಬೇಕು ಎಂಬ ಉದ್ದೇಶದಿಂದ ತಾನೇ ಅಪ್ರಾಪ್ತ ಹುಡುಗ ಸೇರಿದಂತೆ ನಾಲ್ವರಿಗೆ ಸುಪಾರಿ ಕೊಟ್ಟು, ತನ್ನನ್ನೇ ಹತ್ಯೆ ಮಾಡಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಗೌರವ್ (37) ಮೃತ ಉದ್ಯಮಿ. ಜೂನ್ 10 ರಂದು ಈ ಕೊಲೆ ನಡೆದಿದ್ದು, ತನಿಖೆ ವೇಳೆ ಮೃತ ಗೌರವ್ ಸುಪಾರಿಕೊಟ್ಟು ತನ್ನನ್ನೇ ಕೊಲೆ ಮಾಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಗೌರವ್ ಪತ್ನಿ ಶಾನು ಬನ್ಸಾಲ್ ಜೂನ್ 10 ರಂದು ನನ್ನ ಪತಿ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗೌರವ್ ದಿನಸಿ ವ್ಯಾಪಾರಿ­ಯಾಗಿದ್ದು, ವ್ಯಾಪಾರಕ್ಕೆ ತೆರಳಿದವರು ಮನೆಗೆ ಹಿಂದಿರುಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಂದಿನ ದಿನೇ ದೆಹಲಿಯ ಹೊರಭಾಗದಲ್ಲಿನ ರಾನ್‍ಹೌಲಾ ಪ್ರದೇಶದಲ್ಲಿ ಗೌರವ್ ಶವ ಪೊಲೀಸರಿಗೆ ಸಿಕ್ಕಿತ್ತು. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೌರವ್ ಮೃತದೇಹ ಪತ್ತೆಯಾಗಿದ್ದು, ಗೌರವ್‍ನ ಎರಡು ಕೈಗಳನ್ನು ಕಟ್ಟಲಾಗಿತ್ತು. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.

    ಗೌರವ್ ಫೆಬ್ರವರಿಯಲ್ಲಿ 6 ಲಕ್ಷ ರೂ.ಗಳನ್ನು ವೈಯಕ್ತಿಕ ಸಾಲವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ರೆಡಿಟ್ ಕಾರ್ಡ್ ವಂಚನೆಯಿಂದ 3.5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರು. ಇದರಿಂದ ಗೌರವ್ ಖಿನ್ನತೆ ಒಳಗಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಹೀಗಾಗಿ ತಾನು ಮೃತ­ಪಟ್ಟರೆ ವಿಮೆ ಹಣ ಪತ್ನಿಗೆ ಸೇರುತ್ತದೆ. ಆಕೆಯಾದರೂ ನೆಮ್ಮದಿಯಿಂದ ಇರಬಹುದು ಎಂದು ತನ್ನ ಹತ್ಯೆಗೆ ತಾನೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆಯ ಸಮಯದಲ್ಲಿ ಪೊಲೀಸರು ಗೌರವ್ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅಪ್ರಾಪ್ತ ಹುಡುಗನ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಜೂನ್ 9 ರಂದು ಗೌರವ್ ಬಸ್ಸಿನ ಮೂಲಕ ರಾನ್‍ಹೌಲಾ ಪ್ರದೇಶಕ್ಕೆ ಹೋಗಿದ್ದಾರೆ . ಅಲ್ಲಿ ತನ್ನದೇ ಫೋಟೋವನ್ನು ಆರೋಪಿಗಳಿಗೆ ಕಳುಹಿಸಿದ್ದಾನೆ. ಆರೋಪಿಗಳಾದ ಮನೋಜ್ ಕುಮಾರ್ ಯಾದವ್, ಸೂರಜ್, ಮತ್ತು ಸುಮಿತ್ ಕುಮಾರ್ ಸೇರಿದಂತೆ ಅಪ್ರಾಪ್ತ ಹುಡುಗ ಗೌರವ್ ಇದ್ದ ಸ್ಥಳಕ್ಕೆ ಬಂದಿದ್ದಾರೆ. ನಂತರ ಆತನ ಕೈಗಳನ್ನು ಕಟ್ಟಿ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಹೇಳಿದರು.

    ಪೊಲೀಸರು ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಗೆ ಕೊಲೆ ಮಾಡಲು ಎಷ್ಟು ಹಣ ನೀಡಿದ್ದಾರೆ ಹಾಗೂ ವಿಮಾ ಹಣ ಎಷ್ಟು ಎಂದು ತನಿಖೆ ನಡೆಸುತ್ತಿದ್ದಾರೆ.

  • ಉದ್ಯಮಿಯ ಹತ್ಯೆ ಪ್ರಕರಣ- ಜನರ ಎದುರಿನಲ್ಲೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ್ರು

    ಉದ್ಯಮಿಯ ಹತ್ಯೆ ಪ್ರಕರಣ- ಜನರ ಎದುರಿನಲ್ಲೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ್ರು

    – ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ಬಯಲು
    – ನಾಲ್ವರು ಆರೋಪಿಗಳು ಅರೆಸ್ಟ್

    ಮಂಗಳೂರು: ಜಿಲ್ಲೆಯ ಮೂಲ್ಕಿಯಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ಮೂಡಬಿದ್ರೆಯಲ್ಲಿ ಶುಕ್ರವಾರ ಉದ್ಯಮಿಯಾಗಿರುವ ಅಬ್ದುಲ್ ಲತೀಫ್‍ರನ್ನು ದುಷ್ಕರ್ಮಿಗಳು ತಲ್ವಾರ್, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಇದೀಗ ಹಂತಕರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಸಿ ಕ್ಯಾಮೆರಾ ಪೊಲೀಸರಿಗೆ ಲಭ್ಯವಾಗಿದೆ.

    ಕಾರು ಮತ್ತು ಬೈಕಿನಲ್ಲಿ ಬಂದ ಸುಮಾರು ಒಂಭತ್ತು ಮಂದಿ ದುಷ್ಕರ್ಮಿಗಳು ಜನರೆದುರಿನಲ್ಲೇ ಬೀಭತ್ಸವಾಗಿ ದಾಳಿ ಮಾಡಿದ್ದಾರೆ. ಆಗ ಮೃತ ಲತೀಫ್ ತನ್ನ ಪ್ರಾಣ ರಕ್ಷಣೆಗೆ ಅವರಿಂದ ತಪ್ಪಿಸಿಕೊಂಡು ರಸ್ತೆಯೆಲ್ಲಾ ಓಡಾಡಿದ್ದಾರೆ. ಕೊನೆಗೆ ಲತೀಫ್ ಬ್ಯಾಂಕ್ ಒಳಗೆ ಹೋಗಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗದಲ್ಲೇ ಲತೀಫ್‍ಗೆ ಚೂರಿಯಿಂದ ಪದೇ ಪದೇ ಇರಿದಿದ್ದಾರೆ.

    ಅಲ್ಲದೇ ದೊಣ್ಣೆಯಿಂದ ಹೊಡೆದು ಅಲ್ಲಿಂದು ಪರಾರಿಯಾಗಿದ್ದಾರೆ. ಆಗ ಲತೀಫ್ ಮೆಟ್ಟಿಲುಗಳ ಮೇಲೆ ಉರುಳಾಡಿ ನರಳಿ ಕೊನೆಗೆ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಇದೆಲ್ಲವೂ ಲಭ್ಯವಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈಯಕ್ತಿಕ ದ್ವೇಷದಿಂದ ಈ ಹತ್ಯೆ ನಡೆದಿದ್ದು, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಸದ್ಯಕ್ಕೆ ಮಲ್ಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

  • ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ

    ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ

    ಮಂಗಳೂರು: ಹಾಡಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ.

    ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್ ರನ್ನು ದುಷ್ಕರ್ಮಿಗಳು ತಲ್ವಾರ್, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

    ಕಾರು ಮತ್ತು ಬೈಕಿನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಜನರೆದುರಿನಲ್ಲೇ ಬೀಭತ್ಸವಾಗಿ ದಾಳಿ ಮಾಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಭೇಟಿ ನೀಡಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅನುಮಾನಾಸ್ಪದ ರೀತಿಯಲ್ಲಿ ಕಾಫಿ ಉದ್ಯಮಿಯ ಕೊಲೆ!

    ಅನುಮಾನಾಸ್ಪದ ರೀತಿಯಲ್ಲಿ ಕಾಫಿ ಉದ್ಯಮಿಯ ಕೊಲೆ!

    ಮಡಿಕೇರಿ: ಕಾಫಿ ಉದ್ಯಮಿ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರು ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ.

    ಉದ್ಯಮಿ ಪ್ರವೀಣ್ ಪೂವಪ್ಪ (42) ರಕ್ತದ ಮಡುವಿನಲ್ಲಿ ಬಿದ್ದು ಕೊಲೆಯಾಗಿರುವ ವ್ಯಕ್ತಿ. ಕುವೆಂಪು ಬಡಾವಣೆಯ ಕೆ.ಪಿ.ಸುಗುಣಾ ಎಂಬುವರ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದ್ದು, ವಿವಾಹಿತ ಪ್ರವೀಣ್ ಜೊತೆಯಲ್ಲಿ ಪತ್ನಿ ವಾಸ ಇರಲಿಲ್ಲ ಎಂಬ ಮಾಹಿತಿ ಲಭಿಸಿದೆ.

    ಕಳೆದ ರಾತ್ರಿ ಕಾರಿನಲ್ಲಿ ಅಪರಿಚಿತರು ಮನೆಗೆ ಬಂದು ಹೋಗಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಘಟನೆ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಪಡಿತರ ಕೊಡಲು ಹೋಗಿ ಕೆಲಸವೇ ನೀಡಿದ ಉದ್ಯಮಿ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಪಡಿತರ ಕೊಡಲು ಹೋಗಿ ಕೆಲಸವೇ ನೀಡಿದ ಉದ್ಯಮಿ

    -ಮನೆಯ ಬಡತನ ನೋಡಿ ಉದ್ಯೋಗ ಭರವಸೆ

    ಮೈಸೂರು: ಪಡಿತರ ಕೊಡಲು ಹೋಗಿ ಬಡತನ ನೋಡಿ ಮರುಗಿದ ಉದ್ಯಮಿಯೊಬ್ಬರು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿದ್ದ ಮೈಸೂರಿನ ಮಂಜುಳಾ ಪಡಿತರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಿಳೆ ಮನವಿಗೆ ಸ್ಪಂದಿಸಿದ ಉದ್ಯಮಿ ಎಸ್.ಎನ್. ಶಿವಪ್ರಕಾಶ್ ಖುದ್ದಾಗಿ ಅವರ ಮನೆಗೆ ಹೋಗಿ ಪಡಿತರದ ಕಿಟ್ ನೀಡಲು ಹೋಗಿದ್ದರು.

    ಪಡಿತರ ನೀಡಿದ ಬಳಿಕ ಮನೆಯ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ಬಡತನವನ್ನು ನೋಡಲಾಗದೇ ಮಂಜುಳಾರ ಹಿರಿಯ ಪುತ್ರಿಗೆ ತಮ್ಮ ಕಚೇರಿಯಲ್ಲಿಯೇ ಕೆಲಸ ನೀಡುವ ಭರವಸೆ ನೀಡಿದ್ದಾರೆ. ಮುಂದೆ ಏನೇ ಸಹಾಯ ಬೇಕಿದ್ದರು ತಮ್ಮನ್ನು ಸಂಪರ್ಕಿಸುವಂತೆ ಮೊಬೈಲ್ ನಂಬರ್ ನೀಡಿ ಬಂದಿದ್ದಾರೆ.

    ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿ ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಇಂದು ನಗರದ ಉದ್ಯಮಿಯಾಗಿರುವ ಶಿವಪ್ರಕಾಶ್ ಖುದ್ದಾಗಿ ಮನೆಗೆ ಬಂದು ರೇಷನ್ ನೀಡಿದ್ದಾರೆ ಎಂದು ಮಂಜುಳಾ ಹೇಳಿದ್ದಾರೆ.

    ಪಡಿತರ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್.ಎನ್.ಶಿವಪ್ರಕಾಶ್, ಕಳೆದ 20 ದಿನಗಳಿಂದ ದಿನಸಿ ಮತ್ತು ತರಕಾರಿ ಹಂಚುತ್ತಿದ್ದೇವೆ. ಅವಶ್ಯಕತೆ ಇಲ್ಲದವರು ಸಹ ಬಂದು ಪಡಿತರ ಪಡೆದುಕೊಂಡು ಹೋಗುತ್ತಾರೆ. ಪಬ್ಲಿಕ್ ಟಿವಿಗೆ ಕರೆ ಮಾಡುವ ಜನರಿಗೆ ನೂರಕ್ಕೆ ನೂರರಷ್ಟು ಅವಶ್ಯಕತೆ ಇರೋ ಜನರು. ಪಬ್ಲಿಕ್ ಟಿವಿ ಮೂಲಕ ನಿರಾಶ್ರಿತರು ಎಲ್ಲಿದ್ದಾರೆಂಬ ವಿಷಯ ನಮಗೂ ತಿಳಿಯುತ್ತದೆ ಎಂದರು.