Tag: ಉದ್ಯಮಿ

  • ಉಡುಪಿಯಲ್ಲಿ ಹಾಡಹಗಲೇ ಉದ್ಯಮಿಯ ಬರ್ಬರ ಹತ್ಯೆ

    ಉಡುಪಿಯಲ್ಲಿ ಹಾಡಹಗಲೇ ಉದ್ಯಮಿಯ ಬರ್ಬರ ಹತ್ಯೆ

    ಉಡುಪಿ: ಹಾಡಹಗಲೇ ಉದ್ಯಮಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಪೆರಂಪಳ್ಳಿ ಸಮೀಪದ ಪಬ್‍ನಲ್ಲಿ ನಡೆದಿದೆ.

    ಗುರುಪ್ರಸಾದ್ ಭಟ್(46) ಕೊಲೆಯಾದ ಉದ್ಯಮಿಯಾಗಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪಬ್ ನಲ್ಲಿದ್ದ ಗುರುಪ್ರಸಾದ್ ರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಏಕಾಏಕಿ ಅವರ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಗುರುಪ್ರಸಾದ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

    ಮೃತ ಗುರುಪ್ರಸಾದ್ ನಗರದಲ್ಲಿ ಹಲವು ದಿನಗಳಿಂದ ಪಬ್ ಹಾಗೂ ಮರದ ಕೆತ್ತನೆ ಉದ್ಯಮ ನಡೆಸುತ್ತಿದ್ದರು. ಉದ್ಯಮದ ಪೈಪೋಟಿ ಹಾಗೂ ಹಣಕಾಸಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೆಂಗಳೂರು: ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಹಿಂದಿರುಗಿಸುವಂತೆ ವ್ಯಕ್ತಿಯೊಬ್ಬರು 5 ಕೋಟಿ ರೂ, ಅಮಿಷ ನೀಡಿದ್ದರು ಎಂದು ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಹೆಚ್ ಎಸ್ ಶ್ರೀಕಾಂತ್ ಹೇಳಿದ್ದಾರೆ.

    ಲಾಕರ್ಸ್ ಗಳಲ್ಲಿ ಪತ್ತೆಯಾದ ಆಪಾರ ಹಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ರೀಡಾ ಪರಿಕರಗಳನ್ನು ಇಡಲು ಬೌರಿಂಗ್ ಇನ್‍ಸ್ಟಿಟ್ಯೂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. 38 ವರ್ಷಗಳಿಂದ ನಾನು ಸಂಸ್ಥೆಯ ಸದಸ್ಯನಾಗಿ, 2010 ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹಚ್ಚಿನ ಮೆಂಬರ್ಸ್ ಇದ್ದಾರೆ. ಇಲ್ಲಿ 670 ಲಾಕರ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಂಸ್ಥೆಯ ಫ್ಲಾಟ್‍ನಲ್ಲಿ ಕೆಲ ನವೀಕರಣ ಕಾರ್ಯಗಳು ನಡೆಯಬೇಕಾಗಿದ್ದರಿಂದ ಫೆಬ್ರವರಿಯಲ್ಲಿ ಸದಸ್ಯರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಈ ನೋಟಿಸ್ ಯಾವುದೇ ಪ್ರತಿಕ್ರಿಯೆಬಾರದ ಕಾರಣ ನಮ್ಮ ಸಿಬ್ಬಂದಿಯೊಂದಿಗೆ ನಾವೇ ಲಾಕರ್ಸ್ ತೆರೆದು ನೋಡಿದಾಗ ಕಪ್ಪು ಬ್ಯಾಗ್ ಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸ್ ಡಿಜಿಪಿ ಚಂದ್ರಹಾಸ್ ಗುಪ್ತ ಅವರಿಗೆ ಮಾಹಿತಿ ನೀಡಿ, ಬ್ಯಾಗ್ ಗಳನ್ನು ತೆಗೆದ ಎಲ್ಲಾ ದೃಶ್ಯಗಳನ್ನು ವಿಡಿಯೋ ಮಾಡಿ ಸೀಲ್ ಮಾಡಲಾಗಿದೆ. ಬಳಿಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

    ಪ್ರಮುಖವಾಗಿ ಟೆನಿಸ್ ಕೋರ್ಟ್ ನಲ್ಲಿನ ಲಾಕರ್ ರೂಮ್‍ನ 79, 62 ಎಂಬ ಲಾಕರ್ ಗಳಲ್ಲಿ 6 ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ ಮೂರುವರೆ ಕೋಟಿ ದುಡ್ಡು, 8 ಕೋಟಿ ಮೌಲ್ಯದ ವಜ್ರಾಭರಣ, ಆಸ್ತಿ ದಾಖಲೆ ಪತ್ರ ಪತ್ತೆಯಾಗಿದೆ. ಒಟ್ಟಾರೆ ಸಂಸ್ಥೆಯ ಕಟ್ಟಡದಲ್ಲಿದ್ದ ಒಟ್ಟು 126 ಲಾಕರ್ ಓಪನ್ ಮಾಡಲಾಗಿತ್ತು ಎಂದು ತಿಳಿಸಿದರು.

    ಲಾಕರ್ ನಲ್ಲಿ ಸಿಕ್ಕಿದ್ದೇನು?
    * 2000 ರೂ. ನೋಟುಗಳ 18 ಬಂಡಲ್ (3 ಕೋಟಿ 90 ಲಕ್ಷ ರೂ.)
    * 7.8 ಕೋಟಿ ಮೌಲ್ಯದ ಡೈಮಂಡ್
    * ಗೋಲ್ಡ್ ಬಿಸ್ಕಟ್ 650 ಗ್ರಾಂ
    * 30 ರಿಂದ 40 ಲಕ್ಷ ರೂ. ಮೌಲ್ಯದ ಎರಡು ವಾಚ್
    * ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ
    * ಹಲವು ಕೋಟಿ ರೂ. ಮೌಲ್ಯ ಚೆಕ್ ಹಾಗೂ ಸಹಿ ಮಾಡದ ಖಾಲಿ ಚೆಕ್‍ಗಳು ಪತ್ತೆ

    ಅಂದಹಾಗೇ ಪತ್ತೆಯಾದ ಅಪಾರ ಪ್ರಮಾಣದ ಹಣ ರಾಜ್ಯ ಪ್ರತಿಷ್ಠಿತ ಉದ್ಯಮಿ ಅವಿನಾಶ್ ಅಮರ್ ಲಾಲ್ ಅವರದ್ದು ಎಂದು ತಿಳಿಸಿದ್ದಾರೆ. ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರರಾಗಿದ್ದು, ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

  • ತನ್ನ ಜೊತೆ ಸೆಕ್ಸ್ ಮಾಡಿದ್ದ ವಿಡಿಯೋ ತೋರಿಸಿ ಉದ್ಯಮಿಗೆ 2.5 ಕೋಟಿ ರೂ.ಗೆ ಬ್ಲಾಕ್‍ಮೇಲ್!

    ತನ್ನ ಜೊತೆ ಸೆಕ್ಸ್ ಮಾಡಿದ್ದ ವಿಡಿಯೋ ತೋರಿಸಿ ಉದ್ಯಮಿಗೆ 2.5 ಕೋಟಿ ರೂ.ಗೆ ಬ್ಲಾಕ್‍ಮೇಲ್!

    ಬೆಂಗಳೂರು: ತನ್ನ ಜೊತೆ ಸೆಕ್ಸ್ ಮಾಡಿದ ವಿಡಿಯೋವೊಂದು ಉದ್ಯಮಿವೊಬ್ಬರಿಗೆ ತೋರಿಸಿ ಬಾರ್ ಗರ್ಲ್ ಹಾಗೂ ಆಕೆಯ ಮಾಜಿ ಲವ್ವರ್ ಬ್ಲಾಕ್ ಮೇಲೆ ಮಾಡುತ್ತಿರೋ ಘಟನೆಯೊಂದು ಬೆಳಕಿಗೆ ಬಂದಿದೆ.

    ಉದ್ಯಮಿ, ಬಾರ್ ಗರ್ಲ್ ಜೊತೆ ಮಂಚ ಹಂಚಿಕೊಂಡಿದ್ದನು. ಬಾರ್ ಗರ್ಲ್ ಆಸ್ಟಿನ್ ಟೌನ್ ನಲ್ಲಿರುವ ತನ್ನ ಮನೆಗೆ ಉದ್ಯಮಿಯನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಉದ್ಯಮಿ ಬಾರ್ ಗರ್ಲ್ ಜೊತೆ ಸೆಕ್ಸ್ ಮಾಡಿದ ವಿಡಿಯೋವನ್ನು ಆತನ ಪತ್ನಿಗೆ ಕಳಿಸಿಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಳು.

    ಬಾರ್ ಗರ್ಲ್ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ರಹಸ್ಯವಾಗಿ ವಿಡಿಯೋ ಮಾಡಿದ್ದಳು. ಈ ವಿಡಿಯೋ ಮಾಡುವುದ್ದಕ್ಕೆ ಆಕೆ ತನ್ನ ಬಾಯ್‍ಫ್ರೆಂಡ್ ಸಹಾಯ ಕೂಡ ಪಡೆದಿದ್ದಳು. ಈಗ ಈ ವಿಡಿಯೋವನ್ನು ಇಟ್ಟುಕೊಂಡು ರಾಜಸ್ಥಾನ ಮೂಲದ ಉದ್ಯಮಿಗೆ 2.5 ಕೋಟಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

    ಉದ್ಯಮಿ ಬ್ಲಾಕ್‍ಮೇಲ್‍ಗೆ ಹೆದರಿ 75 ಲಕ್ಷ ರೂ. ಕೊಡುವುದಾಗಿ ಒಪ್ಪಿಕೊಂಡಿದ್ದನು. ಸದ್ಯ ಲವರ್ಸ್‍ಗಳ ಹಣದ ದಾಹದ ಕಿರುಕುಳ ತಾಳಲಾರದೇ ಉದ್ಯಮಿ ರಾಜಸ್ಥಾನ ಶಾಸಕರೊಬ್ಬರ ಸಹಾಯದಿಂದ ವನಿತಾ ಸಹಾಯವಾಣಿಯ ಮೊರೆ ಹೋಗಿದ್ದಾರೆ.

  • ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗಳೂರು: ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಕ್ಲಾಬ್ ಒಳಗೆ ಕೋಟಿ ಕೋಟಿ ನಿಧಿ ಸಿಕ್ಕಿದೆ.

    ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದನು. ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ ಆತ ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. ಆಗ 2 ಲಾಕರ್ ಓಪನ್ ಮಾಡಿದಾಗ ಅದರಲ್ಲಿ 2 ಬ್ಯಾಗ್ ಪತ್ತೆಯಾಗಿದೆ. 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿದೆ.

    ಬೌರಿಂಗ್ ಆಡಳಿತ ಮಂಡಳಿ ಲಾಕರ್ ಓಪನ್ ಮಾಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬೌರಿಂಗ್ ಕ್ಲಬ್ ಸೆಕ್ರೆಟರಿ ಶ್ರೀಕಾಂತ್ ಮತ್ತು ಬ್ಯಾಡ್ಮಿಂಟನ್ ಕಮಿಟಿಯ ಸಂದೀಪ್‍ಗೆ ಉದ್ಯಮಿ ಆಮಿಷ ಒಡ್ಡಿದ್ದಾನೆ. ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ. ಆದರೆ ಆಸ್ತಿ ಪತ್ರ ಮಾತ್ರ ಕೊಡಿ ಎಂದು ಆಮಿಷ ಒಡ್ಡಿದ್ದಾನೆ. ಆದರೆ ಉದ್ಯಮಿಯ ಆಮಿಷಕ್ಕೆ ಒಳಗಾಗದ ಬೌರಿಂಗ್ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಗುರುವಾರ ರಾತ್ರಿ 12 ಗಂಟೆವರೆಗೂ ಐಟಿ ಇಲಾಖೆ ಪರೀಶಿಲನೆ ನಡೆಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ, ನೀವು ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತುವನ್ನು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ಉದ್ಯಮಿಗೆ ನೋಟಿಸ್ ಕಳುಹಿಸಿದ್ದಾರೆ. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ತಿಳಿಸಿದೆ. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ.

    ಅವಿನಾಶ್ ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಮೂಲತಃ ರಾಜಸ್ಥಾನದವನು ಎಂದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದನು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಬಗ್ಗೆ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

  • ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

    ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

    ಹೈದರಾಬಾದ್: ಕೇವಲ ಕಷ್ಟಪಟ್ಟು ದುಡಿದರೆ ಸಾಲಲ್ಲ, ಮದ್ಯದ ದೊರೆ ವಿಜಯ್ ಮಲ್ಯನ ರೀತಿ ಸ್ಮಾರ್ಟ್ ಆಗಬೇಕು ಎಂದು ಕೇಂದ್ರ ಸಚಿವ ಜುವಾಲ್ ಒರಾಮ್ ಆದಿವಾಸಿ ಜನಾಂಗದ ನವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

    2018ರ ರಾಷ್ಟ್ರೀಯ ಆದಿವಾಸಿ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಜುವಾಲ್ ಒರಾಮ್, ನೀವೆಲ್ಲರೂ ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಬೇಕು. ಕೇವಲ ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ವಿಯಾಗಲ್ಲ. ಕೆಲಸದೊಂದಿಗೆ ಬುದ್ದಿವಂತಿಕೆ, ಜಾಣ್ಮೆಯಿಂದ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ನೀವೆಲ್ಲ ವಿಜಯ್ ಮಲ್ಯರನ್ನು ಬೈಯುತ್ತೀರಿ, ಅವರ ಹಾಗೆಯೇ ನೀವು ಸ್ಮಾರ್ಟ್ ಆಗಬೇಕು ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ.

    ವಿಜಯ್ ಮಲ್ಯ ಓರ್ವ ಸ್ಟಾರ್ಟ್ ಉದ್ಯಮಿಯಾಗಿದ್ದು, ಕೆಲವು ಬುದ್ಧಿವಂತರನ್ನು ತನ್ನ ಬಳಿ ಕೆಲಸಕ್ಕೆ ನೇಮಿಸಿಕೊಂಡು ಬ್ಯಾಂಕ್, ರಾಜಕಾರಣಿಗಳನ್ನು ಮತ್ತು ಸರ್ಕಾರಗಳ ಮೇಲೆ ಪ್ರಭಾವ ಬೀರಿದರು. ವಿಜಯ್ ಮಲ್ಯ ದಿವಾಳಿಯಾಗುವ ಮುನ್ನ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು. ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಅವರಲ್ಲಿಯ ಚಾಕಚಕ್ಯತೆ, ನೈಪುಣ್ಯತೆ, ಜಾಣ್ಮೆ, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉಪದೇಶ ನೀಡಿದ್ದಾರೆ.

    ಇತ್ತ ಸಮ್ಮೇಳನದಲ್ಲಿ ಯಶಸ್ವಿ ಉದ್ಯಮಿಯ ಉದಾಹರಣೆಗಾಗಿ ವಿಜಯ್ ಮಲ್ಯರ ಹೆಸರು ಪ್ರಸ್ತಾಪಿಸಿದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ನಾಯಕರಿಂದ ವಿರೋಧ ವ್ಯಕ್ತವಾಗಿದೆ.

    ತಮ್ಮ ಹೇಳಿಕೆ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಜುವಾಲ್ ಒರಾಮ್, ನಾನು ಮಾತನಾಡುವ ಭರದಲ್ಲಿ ವಿಜಯ್ ಮಲ್ಯ ಹೆಸರನ್ನು ತೆಗೆದುಕೊಂಡಿದ್ದೇನೆ. ನಾನು ಬೇರೊಬ್ಬ ಯಶಸ್ವಿ ಉದ್ಯಮಿಯ ಹೆಸರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕಿತ್ತು. ವಿಜಯ್ ಮಲ್ಯ ಹೆಸರು ಬಳಸಿದ್ದು ನನ್ನ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಗೌರಿ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್ ಸೆರೆ

    ಸಿಲಿಕಾನ್ ಸಿಟಿಯಲ್ಲಿ ಗೌರಿ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್ ಸೆರೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಈಗಾಗಲೇ ಹಂತಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೌರಿ ಹತ್ಯೆ ನಡೆಯುವ ಮೊದಲೇ ಆರೋಪಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂಬುವುದು ತಿಳಿದಿದೆ. ಈಗ ಗೌರಿ ಲಂಕೇಶ್ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್‍ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಶಾಭಾಜ್ ಖಾನ್, ಫೊಕಾರಂ, ನಿತಿನ್ ಶರ್ಮ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದಿದ್ದ ಈ ಗ್ಯಾಂಗ್, ಮೇ 21ರಂದು ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮಸೂದ್ ಅಲಿ ಎಂಬವರನ್ನು ಗುಂಡಿಟ್ಟು ಕೊಂದಿದ್ದರು.

    ಆರೋಪಿಗಳು ವೈಟ್ ಫೀಲ್ಡ್ ನಲ್ಲಿ ಎರಡು ದಿನಗಳ ಮೊದಲೇ ಶೂಟಿಂಗ್ ಪ್ರಾಕ್ಟೀಸ್ ಮಾಡಿದ್ದರು. ನಂತರ ಬೈಕಿನಲ್ಲಿ ಕಾರನ್ನು ಫಾಲೋ ಮಾಡಿದ್ದ ಕಿಡಿಗೇಡಿಗಳು ಎರಡು ಬಾರಿ ಗುದ್ದಿ, ಬಳಿಕ ಗುಂಡು ಹಾರಿಸಿ ಪರಾರಿಯಾಗಿದ್ದರು.

    ಆರೋಪಿಗಳ ಸೆರೆಗೆ ಮಾರುವೇಷದಲ್ಲಿ ಫೀಲ್ಡ್ ಗಿಳಿದ ಪುಲಿಕೇಶಿನಗರ ಠಾಣೆ ಪೊಲೀಸರು, 2 ದಿನ ಜಿಮ್‍ನಲ್ಲಿ ವರ್ಕೌಟ್ ಮಾಡಿ, ಅಂಗಡಿಯಲ್ಲಿ ಕೆಲಸ ಮಾಡಿದ್ದರು. ಕೊನೆಗೆ ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಆರೋಪಿಗಳನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯ ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಬೆಂಗಳೂರು: ಜಯನಗರದಲ್ಲಿ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಹನಾ(42) ಪತಿ ಗಣೇಶ್ ನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ನಡೆದಿತ್ತು. ಆರೋಪಿ ಮಕ್ಕಳ ಮೇಲೂ ಶೂಟ್ ಮಾಡಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ವಿವರ:
    ಉದ್ಯಮಿ ಗಣೇಶ್ ಮೂಲತಃ ಸಕಲೇಶಪುರದವನಾಗಿದ್ದಾನೆ. ಅಲ್ಲಿ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದನು. ಕನಕಪುರ ರಸ್ತೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದನು. ಆದ್ರೆ ಕಳೆದ ಎರಡು ವರ್ಷದಿಂದ ರೆಸಾರ್ಟ್ ನಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಗಣೇಶ್ ಹಾಗೂ ಪತ್ನಿ ಸಹಾನ ನಡುವೆ ಆಗಾಗ ಸಾಲದ ವಿಚಾರಕ್ಕೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು ಗಣೇಶ್ ತನ್ನ ಲೈಸೆನ್ಸ್ ಗನ್ ನಿಂದ ಪತ್ನಿ ಸಹಾನಾಗೆ ಶೂಟ್ ಮಾಡಿದ್ದನು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಗಣೇಶ್ ತನ್ನ ಪತ್ನಿಗೆ ಶೂಟ್ ಮಾಡಿ ಮುಗಿಸಿದ್ದನು.

    ಅರೆಸ್ಟ್ ಆಗಿದ್ದು ಹೇಗೆ?:
    ಮನೆಯಲ್ಲೇ ಪತ್ನಿ ಸಹಾನ ಸಾವನ್ನಪ್ಪಿದ್ದ ಬಳಿಕ ಮೂರು ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಬಿಡದಿಯ ಫಾರ್ಮ್ ಹೌಸ್ ನಲ್ಲಿ ತಲೆಮರೆಸಿಕೊಂಡಿದ್ದನು. ಫಾರ್ಮ್ ಹೌಸ್ ನಲ್ಲಿ ಮಕ್ಕಳಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಹೆಣ್ಣು ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿವೆ. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಿದ್ದನು.

    ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳು, ಗಣೇಶ್ ಬಳಿ ನೀರು ಕೇಳಿದ್ದಾರೆ. ಹೀಗಾಗಿ ನೀರು ಕುಡಿಸಲೆಂದು ಆತ ಕಾರಿನಲ್ಲೇ ಮುಖ್ಯ ರಸ್ತೆಗೆ ಬಂದಿದ್ದಾನೆ. ಇತ್ತ ಗಣೇಶ್ ಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತನ ಕಾರ್ ನಂಬರ್ ಮಾಹಿತಿ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಗಣೇಶ್ ನನ್ನು ಬೆನ್ನಟ್ಟಿದ್ದು, ಅಂಚೆ ಪಾಳ್ಯದ ಬಳಿ ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳಿಬ್ಬರನ್ನ ಕೋಣನಕುಂಟೆಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ತನ್ನನ್ನು ಬಂಧಿಸೋ ಮುಂಚೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ್ದೆ. ನನಗೆ ತುಂಬಾ ಸಾಲ ಇತ್ತು. ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆಸ್ತಿ ಮಾರಾಟ ಮಾಡಲು ಪತ್ನಿ ಅನುಮತಿ ನೀಡುತ್ತಿರಲಿಲ್ಲ. ಆಸ್ತಿ ಮಾರಾಟ ಮಾಡಿದ್ದರೆ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಹೇಳುತ್ತಿದ್ದಳು. ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಅಂತ ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=FtP56UNZo1w

     

  • ಬೆಂಗ್ಳೂರಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಉದ್ಯಮಿ!

    ಬೆಂಗ್ಳೂರಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಉದ್ಯಮಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಈ ಬಾರಿ ಪೊಲೀಸರಿಂದ ಅಲ್ಲ, ರೌಡಿಗಳಿಂದಲೂ ಅಲ್ಲ. ಉದ್ಯಮಿಯೊಬ್ಬ ತನ್ನ ಪತ್ನಿ ಮೆಲೆಯೇ ಫೈರಿಂಗ್ ಮಾಡಿದ್ದಾನೆ.

    ಕಳೆದ ರಾತ್ರಿ ಉದ್ಯಮಿ ಗಣೇಶ್ ಎಂಬಾತ ತನ್ನ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಜಯನಗರದ ನಾಲ್ಕನೆ ಬ್ಲಾಕ್‍ನಲ್ಲಿ ನಡೆದಿದೆ.

    ಹಣಕಾಸು ವಿಚಾರವಾಗಿ ದಂಪತಿ ಮಧ್ಯೆ ಕಲಹ ಏರ್ಪಟ್ಟು, ಕೋಪದ ಭರದಲ್ಲಿ ಪತ್ನಿ ಸಹನಾಳನ್ನು ಗಣೇಶ್ ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಘಟನೆ ನಡೆದ ಬಳಿಕ ಗಣೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

    ಜಯನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಎಸ್ಕೇಪ್ ಆಗಿರೋ ಗಣೇಶ್‍ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಒಡೆಯನಾದ್ರು ಜೆಡಿಎಸ್ ಮುಖಂಡ!

    ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಒಡೆಯನಾದ್ರು ಜೆಡಿಎಸ್ ಮುಖಂಡ!

    ಮಂಗಳೂರು: ಉದ್ಯಮಿ, ವಿಧಾನ ಪರಿಷತ್ ಸದಸ್ಯ ಜೆಡಿಎಸ್ ಮುಖಂಡ ಬಿ.ಎಂ ಫಾರೂಕ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರನ್ನು ಖರೀದಿಸಿದ್ದಾರೆ.

    ರೇಂಜ್ ರೋವರ್ ಕಂಪೆನಿಯ ಅತ್ಯಾಧುನಿಕ ಶೈಲಿಯ ಕಾರುಗಳಲ್ಲಿ ಇದು ಒಂದಾಗಿದೆ. ರೇಂಜ್ ರೋವರ್ 4 ಪಾಯಿಂಟ್ 4 ರೇಂಜಲ್ಲಿ 2019 ಮಾಡೆಲ್ ಆಟೋಬಯೋಗ್ರಫಿ ಆಗಿದೆ. ಪ್ರತಿ ವರ್ಷವೂ ಹೊಸ ಕಾರುಗಳನ್ನು ಕೊಳ್ಳುವ ಫಾರೂಕ್ ಸ್ವಂತಕ್ಕೆ ಈಗಾಗಲೇ 15ನೇ ಕಾರುಗಳಿವೆ.

    ಈಗಾಗ್ಲೇ ಮೂರು ರೇಂಜ್ ರೋವರ್‍ಗಳನ್ನು ಹೊಂದಿರುವ ಫಾರೂಕ್, ನಾಲ್ಕು ತಿಂಗಳ ಹಿಂದೆ ನ್ಯೂ ಮಾಡೆಲ್ ಆಟೋಬಯೋಗ್ರಫಿ ಬುಕ್ ಮಾಡಿದ್ದರಂತೆ. ರಂಜಾನ್ ಹಬ್ಬದ ಸಂಭ್ರಮದಲ್ಲಿರುವಾಗಲೇ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಿನ ಇನ್ ಡೋರ್ ಸಿಸ್ಟಮ್ ಸೆಲೆಕ್ಷನ್ ಫಾರೂಕ್ ಮಗಳದ್ದಂತೆ. ಅಂದಹಾಗೆ, ಇದರ ಬೆಲೆ 3.5 ಕೋಟಿ ಆಗಿದೆ.

    ಎರಡು ವರ್ಷಗಳ ಹಿಂದೆ ಉಡುಪಿಯ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ರೋಲ್ಸ್ ರಾಯ್ಸ್ ಕಾರು ಖರೀದಿಸಿದಾಗ ಭಾರೀ ಸುದ್ದಿಯಾಗಿದ್ರು.

  • ಗುಂಡು ಹಾರಿಸಿಕೊಂಡು ಯಶಸ್ವಿ ಉದ್ಯಮಿ ಆತ್ಮಹತ್ಯೆ!

    ಗುಂಡು ಹಾರಿಸಿಕೊಂಡು ಯಶಸ್ವಿ ಉದ್ಯಮಿ ಆತ್ಮಹತ್ಯೆ!

    ಬೆಳಗಾವಿ: ವಿಪರೀತ ಕುಡಿತಕ್ಕೆ ದಾಸನಾಗಿದ್ದ ಬೆಳಗಾವಿ ಪ್ರಸಿದ್ದ ಉದ್ಯಮಿ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಶೈಲೇಶ್ ಜೋಶಿ(40) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬೆಳಗಾವಿ ಹಿಂಡಲಗಾ ಬಡಾವಣೆಯ ನಿವಾಸಿಯಾಗಿದ್ದ ಶೈಲೇಶ್ ಜೋಶಿ ಇಡೀ ರಾಜ್ಯದಲ್ಲಿ ಅಮೃತ ಫಾರ್ಮಸಿಟಿಕಲ್ ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದರು.

    ಆದರೆ ಇತ್ತೀಚೆಗಷ್ಟೇ ವಿಪರೀತ ಕುಡಿತದ ದಾಸರಾಗಿದ್ದರು. ಇದರಿಂದ ಕುಟುಂಬಸ್ಥರು ಬೇಸತ್ತಿದ್ದರು. ಅಲ್ಲದೆ ಪತ್ನಿ-ಮಕ್ಕಳು ಸಹ ಮನೆ ಬಿಟ್ಟು ತವರು ಮನೆ ಸೇರಿದ್ದರು. ಈ ಎಲ್ಲಾ ವಿಷಯಗಳಿಂದ ಮನನೊಂದು ಭಾನುವಾರ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.