Tag: ಉದ್ಧವ್ ಠಾಕೆ

  • ನಾನು ರಾಜ್ಯವನ್ನು ಮುನ್ನಡೆಸುವ ಕನಸು ಕಂಡಿರಲಿಲ್ಲ: ಸೋನಿಯಾಗೆ ಠಾಕ್ರೆ ಧನ್ಯವಾದ

    ನಾನು ರಾಜ್ಯವನ್ನು ಮುನ್ನಡೆಸುವ ಕನಸು ಕಂಡಿರಲಿಲ್ಲ: ಸೋನಿಯಾಗೆ ಠಾಕ್ರೆ ಧನ್ಯವಾದ

    – ನವೆಂಬರ್ 28ಕ್ಕೆ ಮುಖ್ಯಮಂತ್ರಿಯಾಗಿ ಠಾಕ್ರೆ ಪ್ರಮಾಣ ವಚನ

    ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ನಡೆದಿದ್ದ ರಾಜಕೀಯ ಹೈಡ್ರಾಮಾಗೆ ತೆರೆಬಿದ್ದಿದ್ದು, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ನವೆಂವರ್ 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಮೈತ್ರಿ ಪಕ್ಷಗಳ ಸಭೆಯ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ, ನಾನು ರಾಜ್ಯವನ್ನು ಮುನ್ನಡೆಸುವ ಕನಸು ಕಂಡಿರಲಿಲ್ಲ. ಇಂತಹ ಅವಕಾಶ ಒದಗಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಪರಸ್ಪರ ನಂಬಿಕೆ ಇಟ್ಟುಕೊಂಡು ಸರ್ಕಾರ ನಡೆಸಿ ದೇಶಕ್ಕೆ ಹೊಸ ಸಂದೇಶ ನೀಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಲೆಕ್ಕಾಚಾರ ತಪ್ಪಿ, ಶಿವಸೇನೆ ಮೈತ್ರಿಕೂಟ ಗೆದ್ದಿದ್ದು ಹೇಗೆ? ಮೈತ್ರಿ ಅಧಿಕಾರ ಹಂಚಿಕೆ ಸೂತ್ರ ಏನು?

    ನಿಮ್ಮೆಲ್ಲರ ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ. ನಾವು ಒಟ್ಟಾಗಿ ರಾಜ್ಯದ ರೈತರ ಕಣ್ಣೀರನ್ನು ಒರೆಸುತ್ತೇವೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧನಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ. ಸುಳ್ಳುಗಳು ಹಿಂದುತ್ವದ ಭಾಗವಲ್ಲ. ಅಗತ್ಯವಿದ್ದಾಗ ನೀವು ನಮ್ಮನ್ನು ತಬ್ಬಿಕೊಳ್ಳಿ ಮತ್ತು ಅಗತ್ಯವಿಲ್ಲದಿದ್ದಾಗ ನಮ್ಮನ್ನು ಬಿಟ್ಟು ಹೋಗುತ್ತೀರಿ. ನೀವು ನಮ್ಮನ್ನು ದೂರವಿರಿಸಲು ಪ್ರಯತ್ನಿಸಿದ್ದೀರಿ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ದೇವೇಂದ್ರ ಫಡ್ನವೀಸ್ ನಾಲ್ಕು ದಿನಗಳ ಹಿಂದೆಯಷ್ಟೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ಅರಿತು ಮಂಗಳವಾರ ರಾಜೀನಾಮೆ ನೀಡಿದರು. ಈ ಹಿಂದೆ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಅವರು ಎರಡನೇ ಅವಧಿಯಲ್ಲಿ ಕೇವಲ 80 ಗಂಟೆಗಳ ಅಧಿಕಾರ ನಡೆಸಿದ್ದಾರೆ.

    ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಸುದೀರ್ಘ ಚರ್ಚೆಯ ಬಳಿಕ ಉದ್ಧವ್ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎನ್‍ಸಿಪಿ ಮುಖಂಡ ಜಯಂತ್ ಪಟೇಲ್, ಮೂರೂ ಪಕ್ಷದ ಶಾಸಕರು ಉದ್ಧವ್ ಠಾಕ್ರೆ ಹೆಸರನ್ನು ಅಂತಿಮಗೊಳಿಸಿದ್ದಾರೆ. ಅವರು ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಆಡಳಿತ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

    ಉದ್ಧವ್ ಠಾಕ್ರೆ ಅವರು ಡಿಸೆಂಬರ್ 1ರಂದು ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಏಕಾಏಕಿ ದಿನಾಂಕ ಬದಲಿಸಿ, ನೆವೆಂಬರ್ 28ರಂದು ಪ್ರಮಾಣವಚನ ಸ್ವೀಕಾರ ದಿನಾಂಕ ನಿಗದಿ ಮಾಡಲಾಗಿದೆ.