Tag: ಉದಯ್ ಪ್ರಸನ್ನ

  • ತಾಳ್ಮೆಯ ಕಟ್ಟೆ ಒಡೆದರೆ ಇಲ್ಲಿ ಎಲ್ಲರೂ ‘ಮಹಿಷಾಸುರ’ರೆ

    ತಾಳ್ಮೆಯ ಕಟ್ಟೆ ಒಡೆದರೆ ಇಲ್ಲಿ ಎಲ್ಲರೂ ‘ಮಹಿಷಾಸುರ’ರೆ

    ಚಿತ್ರ: ‘ಮಹಿಷಾಸುರ’.
    ನಿರ್ದೇಶಕ: ಉದಯ್ ಪ್ರಸನ್ನ.
    ನಿರ್ಮಾಪಕ: ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ.
    ಛಾಯಾಗ್ರಹಣ: ಕೃಷ್ಣ.
    ಸಂಗೀತ: ಸುನೀಲ್ ಕೌಶಿ, ಸಾಯಿ ಕಿರಣ್.
    ತಾರಾಬಳಗ: ಸುದರ್ಶನ್, ರಾಜ್ ಮಂಜು, ಬಿಂಧುಶ್ರೀ, ರಘು ಪಾಂಡೇಶ್, ರಾಕ್​ಲೈನ್, ಸುಧಾಕರ್, ಇತರರು.

    ‘ಮಹಿಷಾಸುರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ನವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬಂದ ‘ಮಹಿಷಾಸುರ’ ಚಿತ್ರ ಟೀಸರ್, ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕ ಪ್ರಭುಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

    ಸಮಾಜದಲ್ಲಿ ದುರುಳರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜನರು ಹೇಗೆ ದಂಗೆ ಏಳುತ್ತಾರೆ ಎನ್ನುವುದು ‘ಮಹಿಷಾಸುರ’ ಚಿತ್ರದ ಒನ್​ಲೈನ್​ ಸ್ಟೋರಿ. ಇಡೀ ಸಿನಿಮಾ ಮೆಳೆಕೋಟೆ ಎಂಬ ಹಳ್ಳಿಯಲ್ಲಿ ಚಿತ್ರಣಗೊಂಡಿದ್ದು, ರಾಜಕರಣಿಗಳ ದಬ್ಬಾಳಿಕೆ, ದೌರ್ಜನ್ಯದಿಂದ ಸೋತು ಹೋದ ಇಲ್ಲಿನ ಜನರು ಯಾವ ರೀತಿ ಮೇಲ್ವರ್ಗದ ಮೇಲೆ ಸವಾರಿ ಮಾಡಿ ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ ಎನ್ನೋದನ್ನ ನೈಜವಾಗಿ ತೆರೆ ಮೇಲೆ ತರಲಾಗಿದೆ. ದಬ್ಬಾಳಿಕೆಯನ್ನು ಜನರು ಎಷ್ಟೇ ತಾಳ್ಮೆಯಿಂದ ಸಹಿಸಿಕೊಂಡ್ರು ಸಹನೆ ಕಟ್ಟೆ ಒಡೆದಾಗ ಹೇಗೆ ಮಹಿಷಾಸುರನ ರೂಪ ತಾಳುತ್ತಾರೆ. ಇಡೀ ಹಳ್ಳಿ ಯಾವ ರೀತಿ ರಣರಂಗವಾಗಿ ಮಾರ್ಪಾಡಾಗುತ್ತೆ ಅನ್ನೋದನ್ನ ತುಂಬಾ ಪರಿಣಾಮಕಾರಿಯಾಗಿ ನಿರ್ದೇಶಕರು ಹೇಳ ಹೊರಟಿದ್ದಾರೆ.

     

    ತ್ರಿಕೋನ ಪ್ರೇಮಕಥೆಯ ಜೊತೆ ಜೊತೆಗೆ ಕಥೆಯನ್ನು ಕಟ್ಟಿಕೊಂಡು ಹೋದ ಪರಿ ಪ್ರೇಕ್ಷಕರನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಪ್ಲಸ್‌ ಪಾಯಿಂಟ್ ಕಲಾವಿದರು, ನಿರ್ದೇಶಕರು ನವ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಂಡಿರೋದ್ರಿಂದ ತೆರೆ ಮೇಲೆ ನೈಜ ಅಭಿನಯ ಕಾಣಬಹುದಾಗಿದೆ. ನಾಯಕಿ ಬಿಂಧುಶ್ರೀ ಕಾವೇರಿ ಪಾತ್ರದಲ್ಲಿ ನಟಿಸಿದ್ದು, ಮುಗ್ಧ ಹೆಣ್ಣು ಮಗಳ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

    ರಾಜಕರಣಿಗಳ ಪಾತ್ರದಲ್ಲಿ ರಘು ಪಾಂಡೇಶ್, ರಾಕ್​​ಲೈನ್​ ಸುಧಾಕರ್​ ಪಾತ್ರ ಗಮನ ಸೆಳೆಯುತ್ತದೆ. ನಾಯಕ ನಟರಾದ ರಾಜ್​​ ಮಂಜು ಹಾಗೂ ಸುದರ್ಶನ್ ಮೊದಲ ಸಿನಿಮಾವಾದರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಛಾಯಾಗ್ರಹಕ ಕೃಷ್ಣ ಅವರ ಕೆಲಸವನ್ನು ಇಲ್ಲಿ ಶ್ಲಾಘಿಸಲೇಬೇಕು. ನಿರ್ದೇಶಕರ ಮನದಲ್ಲಿನ ಚಿತ್ರಣವನ್ನು ಹಾಗೆಯೇ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ಕೃಷ್ಣ. ಸುನೀಲ್ ಕೌಶಿ, ಸಾಯಿ ಕಿರಣ್ ಸಂಗೀತ ‘ಮಹಿಷಾಸುರ’ ಚಿತ್ರಕ್ಕೆ ಮೆರಗು ನೀಡಿದೆ.

    ಉದಯ್ ಪ್ರಸನ್ನ ಅವರಿಗಿದು ಮೊದಲ ಸಿನಿಮಾದರೂ ಹಲವು ವರ್ಷಗಳ ಅನುಭವ ನಿರ್ದೇಶನದಲ್ಲಿ ಇರುವುದರಿಂದ ತಮ್ಮ ನಿರ್ದೇಶನದ ಶಕ್ತಿ, ಪ್ರತಿಭೆಯನ್ನು ಈ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ. ಒಟ್ಟಾರೆಯಾಗಿ ಒಂದೊಳ್ಳೆ ಅನುಭವ, ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಮನೋರಂಜನೆ ನೀಡುವಲ್ಲಿ ಮಹಿಷಾಸುರ ಚಿತ್ರ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗೋದಿಲ್ಲ.

    ರೇಟಿಂಗ್: 3.5 / 5

  • ‘ಮಹಿಷಾಸುರ’ ಜನವರಿ 8ಕ್ಕೆ ತೆರೆಗೆ- ನಿರ್ದೇಶಕನಾಗಿ ಉದಯ್ ಪ್ರಸನ್ನ ಮೊದಲ ಹೆಜ್ಜೆ

    ‘ಮಹಿಷಾಸುರ’ ಜನವರಿ 8ಕ್ಕೆ ತೆರೆಗೆ- ನಿರ್ದೇಶಕನಾಗಿ ಉದಯ್ ಪ್ರಸನ್ನ ಮೊದಲ ಹೆಜ್ಜೆ

    ‘ಮಹಿಷಾಸುರ’ ಸ್ಯಾಂಡಲ್‍ವುಡ್‍ನಲ್ಲಿ ರಿಲೀಸ್ ಗೆ ರೆಡಿಯಾಗಿ ನಿಂತಿರೋ ಸಿನಿಮಾ. ನೈಜ ಘಟನೆ ಆಧಾರಿತ ಈ ಚಿತ್ರದ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದಿದ್ದು, ಜನವರಿ 8ರಂದು ಮಹಿಷಾಸುರ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ದೊಡ್ಡಬಳ್ಳಾಪುರದ ಮೆಳೆಕೋಟೆಯಲ್ಲಿ ಹಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ‘ಮಹಿಷಾಸುರ’ ಚಿತ್ರಕ್ಕೆ ಸ್ಪೂರ್ತಿ. ಉದಯ್ ಪ್ರಸನ್ನ ಈ ಚಿತ್ರದ ಸೂತ್ರದಾರ. ತಾವೇ ಕಥೆ ಬರೆದು ನಿರ್ದೇಶಕನಾಗಿ ಮೊದಲ ಹೆಜ್ಜೆಯನ್ನು ಚಿತ್ರರಂಗದಲ್ಲಿ ಇಟ್ಟಿದ್ದಾರೆ ಉದಯ್ ಪ್ರಸನ್ನ. ರಿಯಲ್ ಸ್ಟಾರ್ ಉಪೇಂದ್ರ, ಪ್ರೇಮ್ ಇವರ ನಿರ್ದೇಶನ ಜೀವನಕ್ಕೆ ಸ್ಪೂರ್ತಿ. ನಟನಾಗಬೇಕೆಂದು ಗಾಂಧಿ ನಗರಕ್ಕೆ ಬಂದ ಉದಯ್ ಪ್ರಸನ್ನ ಈಗ ಡೈರೆಕಟ್ಟರ್ ಕ್ಯಾಪ್ ತೊಟ್ಟಿದ್ದಾರೆ.

    ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಇವರು ಸಂಜಯ್ ಕುಲಕರ್ಣಿ, ಸಲೀಂ ರಾಜು, ಹೇಮಂತ್ ಹೆಗ್ಡೆ ಸೇರಿದಂತೆ ಹಲವು ನಿರ್ದೇಶಕರ ಜೊತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ತಮ್ಮ ಮೊದಲ ಕನಸಿನ ಹೆಜ್ಜೆ ‘ಮಹಿಷಾಸುರ’ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದು, ಪ್ರೇಕ್ಷಕರು ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

    ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಡೆಯುವ ದಬ್ಬಾಳಿಕೆ ಹಾಗೂ ಸತ್ಯಾಸತ್ಯತೆ ಹೊರಬಿದ್ದಾಗ ಆಗುವ ಪರಿಣಾಮಗಳನ್ನು ಚಿತ್ರದಲ್ಲಿ ರಿಯಾಲಿಸ್ಟಿಕ್ ಆಗಿ ಕಟ್ಟಿಕೊಡಲಾಗಿದ್ದು, ಸಮಾಜಕ್ಕೆ ಒಂದು ಸೂಕ್ತ ಸಂದೇಶವನ್ನು ‘ಮಹಿಷಾಸುರ’ ಸಿನಿಮಾ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ಉದಯ್ ಪ್ರಸನ್ನ. ರಿಯಾಲಿಸ್ಟಿಕ್ ಆಗಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನವ ಕಲಾವಿದರೇ ಹೆಚ್ಚಾಗಿ ಅಭಿನಯಿಸಿರೋದು ವಿಶೇಷ. ಚಿತ್ರದಲ್ಲಿ ಟ್ರಯಂಗಲ್ ಲವ್ ಸ್ಟೋರಿ ಇರಲಿದ್ದು, ಸುದರ್ಶನ್, ರಾಜ್ ಮಂಜು ಇಬ್ಬರು ನಾಯಕ ನಟರಾಗಿ ನಟಿಸಿದ್ದು, ನಾಯಕಿಯಾಗಿ ಬಿಂದು ಅಭಿನಯಿಸಿದ್ದಾರೆ.

    ಚಿತ್ರಕ್ಕೆ ಸುನಿಲ್ ಕೌಶಿ, ಸಾಯಿ ಕಿರಣ್ ಸಂಗೀತ ನಿರ್ದೇಶನವಿದ್ದು, ಕೃಷ್ಣ ಅವರ ಛಾಯಾಗ್ರಹಣವಿದೆ. ಮೆಳೆಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜನವರಿ 8ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಸಿನಿರಸಿಕರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ‘ಮಹಿಷಾಸುರ’ ಚಿತ್ರತಂಡ.

  • ನೈಜ ಘಟನೆಯಾಧಾರಿತ ಚಿತ್ರ ‘ಮಹಿಷಾಸುರ’ ಟ್ರೈಲರ್ ರಿಲೀಸ್

    ನೈಜ ಘಟನೆಯಾಧಾರಿತ ಚಿತ್ರ ‘ಮಹಿಷಾಸುರ’ ಟ್ರೈಲರ್ ರಿಲೀಸ್

    ವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದ ‘ಮಹಿಷಾಸುರ’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಪಂಚಿಂಗ್ ಡೈಲಾಗ್, ಆಕ್ಷನ್ ಸೀನ್ ಗಳು ಟ್ರೈಲರ್ ಹೈಲೈಟ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿರುವ ‘ಮಹಿಷಾಸುರ’ ಚಿತ್ರಕ್ಕೆ ನೈಜ ಘಟನೆ ಪ್ರೇರಣೆಯಾಗಿದ್ದು, ನೈಜ ಘಟನೆ ಆಧರಿಸಿಯೇ ಕಥೆ ಹೆಣೆದಿದ್ದಾರೆ ನಿರ್ದೇಶಕ ಉದಯ್ ಪ್ರಸನ್ನ.

    ನಿರ್ದೇಶಕನಾಗಿ ಸ್ಯಾಂಡಲ್‍ವುಡ್‍ನಲ್ಲಿ ಉದಯ್ ಪ್ರಸನ್ನ ಅವರ ಮೊದಲ ಹೆಜ್ಜೆ ಇದಾಗಿದ್ದು, ಹಲವು ನಿರ್ದೇಶಕರ ಜೊತೆ ಸಿನಿಮಾಗಳಲ್ಲಿ ದುಡಿದ ಅನುಭವ ಇವರ ಬೆನ್ನಿಗಿದೆ. ಚಿತ್ರದಲ್ಲಿ ಸುದರ್ಶನ್ ಹಾಗೂ ರಾಜ್ ಮಂಜು ನಾಯಕರಾಗಿ ನಟಿಸಿದ್ದು, ಬಿಂದು ನಾಯಕಿಯಾಗಿ ನಟಿಸಿದ್ದಾರೆ. ಒಂದು ಹೆಣ್ಣಿಗೋಸ್ಕರ ಸ್ನೇಹಿತರಿಬ್ಬರು ಹೇಗೆ ಅಸುರ ರೂಪ ತಾಳುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳ ಹೊರಟಿದ್ದಾರೆ.

    ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಬಹುತೇಕ ಸಿನಿಮಾವನ್ನು ದೊಡ್ಡಬಳ್ಳಾಪುರ ಬಳಿಯ ಮೇಲುಕೋಟೆ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯ, ಮೈಸೂರು, ರಾಮನಗರಗಳಲ್ಲೂ ‘ಮಹಿಷಾಸುರ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ಸುನಿಲ್ ಕೌಶಿ ಸಂಗೀತ ನಿರ್ದೇಶನ, ಕೃಷ್ಣ ಅವರ ಛಾಯಾಗ್ರಹಣವಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಆಡಿಯೋ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದೀಗ ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ. ಜನವರಿ ಮೊದಲ ವಾರದಲ್ಲಿ ‘ಮಹಿಷಾಸುರ’ ಚಿತ್ರವನ್ನು ಪ್ರೇಕ್ಷಕರೆದುರು ತರುವ ಯೋಜನೆಯಲ್ಲಿ ಚಿತ್ರತಂಡವಿದ್ದು ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.