Tag: ಉತ್ತೀರ್ಣ

  • ಬೆಂಗ್ಳೂರು ವಿವಿಯಿಂದ ಸಿಹಿ ಸುದ್ದಿ- ಪದವಿ ಪಡೆಯಲು ಮತ್ತೊಂದು ಅವಕಾಶ!

    ಬೆಂಗ್ಳೂರು ವಿವಿಯಿಂದ ಸಿಹಿ ಸುದ್ದಿ- ಪದವಿ ಪಡೆಯಲು ಮತ್ತೊಂದು ಅವಕಾಶ!

    ಬೆಂಗಳೂರು: ಪದವಿ ಪೂರ್ಣಗೊಳಿಸಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ಮತ್ತೊಮ್ಮೆ ಪರೀಕ್ಷೆ ಬರೆಯಲು ಒಂದು ಸುವರ್ಣ ಅವಕಾಶ ನೀಡಲು ಚಿಂತನೆ ನಡೆಸಿದೆ. ವಿವಿಯ ಹಳೆಯ ವಿದ್ಯಾರ್ಥಿಗಳಿಗೆ ಪದವಿ ಪಡೆದುಕೊಳ್ಳಲು ಅವಕಾಶವನ್ನು ಮಾಡಿಕೊಡಲಿದೆ.

    ಹಳೆಯ ವಿದ್ಯಾರ್ಥಿಗಳು ಪಾಸ್ ಆಗದ ವಿಷಯಗಳನ್ನು ಮತ್ತೆ ಪರೀಕ್ಷೆ ಬರೆದು ಪಾಸ್ ಮಾಡಿಕೊಳ್ಳುವ ಸುವರ್ಣ ಅವಕಾಶವನ್ನು ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಲಿದೆ ಎಂಬ ಮಾಹಿತಿ ಲಭಿಸಿದೆ.

    2004ರಿಂದ 2019ರವರೆಗೆ ಇಂಜಿನಿಯರಿಂಗ್ ಒಳಗೊಂಡಂತೆ ಎಲ್ಲಾ ಪದವಿ ಕೋರ್ಸ್‌ಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ. ಇಂತಹ ಸಾವಿರಾರು ವಿದ್ಯಾರ್ಥಿಗಳ ಪೈಕಿ ಕೆಲವರು ಮತ್ತೊಮ್ಮೆ ಅವಕಾಶ ನೀಡುವಂತೆ ಬೆಂ.ವಿ.ವಿ.ಗೆ ಪತ್ರ ಬರೆದು ಮನವಿ ಮಾಡಿದ್ದರು. ಒಂದಾದ ಮೇಲೆ ಒಂದರಂತೆ ಸಾಕಷ್ಟು ಮನವಿ ಪತ್ರಗಳು ವಿವಿಗೆ ಬಂದ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

    ಅದಷ್ಟು ಬೇಗ ಪ್ರಕಟಣೆ ಹೊರಡಿಸಿ 2004 ರಿಂದ 2019 ರ ನಡುವೆ ವ್ಯಾಸಂಗ ಮಾಡಿ ಪದವಿ ಪಡೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸುವ ಅವಕಾಶ ಮಾಡಿಕೊಡಲು ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. ಅನುತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸುವ ಆಶಾಕಿರಣ ಮತ್ತೊಮ್ಮೆ ಮೂಡಿದೆ.

  • 98 ಅಂಕ ಪಡೆದ 96ರ ವಯೋವೃದ್ಧೆ

    98 ಅಂಕ ಪಡೆದ 96ರ ವಯೋವೃದ್ಧೆ

    ತಿರುವನಂತಪುರಂ: ಕೇರಳದ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಪರೀಕ್ಷೆಯಲ್ಲಿ 96 ವಯಸ್ಸಿನ ವಯೋವೃದ್ಧೆಯೊಬ್ಬರು 98 ಅಂಕಗಳನ್ನು ಗಳಿಸಿದ್ದಾರೆ.

    ಅಲಪುಝಾ ಜಿಲ್ಲೆಯ ಕಾರ್ತಿಯಾಣಿ ಅಮ್ಮ, ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ‘ಅಕ್ಷರಲಕ್ಷಂ’ ಸಾಕ್ಷರತಾ ಪರೀಕ್ಷೆಯಲ್ಲಿ 100 ಅಂಕಗಳಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಯಲ್ಲಿ ಅವರ ಓದುವಿಕೆ, ಬರಹ ಮತ್ತು ಗಣಿತ ಕೌಶಲಗಳನ್ನು ಪರೀಕ್ಷಿಸಲಾಗಿದೆ.

    ಈ ವರ್ಷ ಸುಮಾರು 42,933 ಜನರು ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಈ ಕಾರ್ಯಕ್ರಮ ಮೂಲಕ ರಾಜ್ಯವನ್ನು 100% ರಷ್ಟು ಸಾಕ್ಷರತೆ ಸಾಧಿಸುವ ಹಾದಿಯಲ್ಲಿದೆ. 1991 ರ ಎಪ್ರಿಲ್ 18 ರಂದು, ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ, ಸುಮಾರು 18 ಲಕ್ಷ ಜನರು ಅನಕ್ಷರಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಈ ವರ್ಷ ಜನವರಿ 26 ರಂದು ರಾಜ್ಯ ಸರ್ಕಾರವು `ಅಕ್ಷರಲಕ್ಷಂ’ ಹೆಸರಿನಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.

    ಬುಡಕಟ್ಟು ಜನಾಂಗ, ಮೀನುಗಾರರು ಮತ್ತು ಸ್ಲಂ-ನಿವಾಸಿಗಳಂತಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು  ಈ ಕಾರ್ಯಕ್ರಮದ ಅಡಿ ಹಾಕಲಾಗಿದೆ.

    ನಮ್ಮ ಈ ಕಾರ್ಯಕ್ರಮದ ಗುರಿ ಅನಕ್ಷರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ರಾಜ್ಯದಲ್ಲಿ 100% ರಷ್ಟು ಸಾಕ್ಷರತೆಯನ್ನು ಸಾಧಿಸುವುದಾಗಿದೆ ಎಂದು ಸಾಕ್ಷರತಾ ಮಿಷನ್ ನಿರ್ದೇಶಕ ಪಿ.ಎಸ್. ಶ್ರೀಕಲಾ ಅವರು ಹೇಳಿದ್ದಾರೆ.

    ಈಗ 2011ರ ಜನಗಣತಿಯ ಪ್ರಕಾರ, ರಾಜ್ಯದ ಸಾಕ್ಷರತೆ ಪ್ರಮಾಣವು 2001ರಲ್ಲಿ 90.86% ರಷ್ಟು ಇದ್ದರೆ ಈಗ 94% ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv