Tag: ಉತ್ತರ್ ಪ್ರದೇಶ್

  • ಹುಲಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಸೇಡು ತೀರಿಸಿಕೊಂಡ ಗ್ರಾಮಸ್ಥರು

    ಹುಲಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಸೇಡು ತೀರಿಸಿಕೊಂಡ ಗ್ರಾಮಸ್ಥರು

    ಲಕ್ನೋ: 50 ವರ್ಷದ ವ್ಯಕ್ತಿಯನ್ನು ಕೊಂದು ಹಾಕಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ದುಧ್ವಾ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, ದುಧ್ವಾ ಹುಲಿ ಅಭಯಾರಣ್ಯ ಉಪನಿರ್ದೇಶಕ ಮಹಾವೀರ್ ಕೌಜಲಗಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಗ್ರಾಮಸ್ಥರು ರೊಚ್ಚಿಗೆದ್ದು ಹುಲಿಯನ್ನು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ನಾವೆಲ್ಲರೂ ಹುಲಿಯಿಂದ ದಾಳಿಗೆ ಒಳಗಾಗಿದ್ದ 50 ವರ್ಷದ ದೇವಾನಂದ್ ಅವರನ್ನು ಪ್ರಾಣಪಾಯದಿಂದ ರಕ್ಷಿಸಲು ಆಸ್ಪತ್ರೆಗೆ ದಾಖಲಿಸುವಲ್ಲಿ ಕಾರ್ಯನಿರತರಾಗಿದ್ದರೆ ಗ್ರಾಮಸ್ಥರು ಸುತ್ತುವರಿದು ಆ ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದಿದ್ದಾರೆ ಎಂದು ಹೇಳಿದರು.

    ಹುಲಿಯನ್ನು ಹತ್ಯೆ ಮಾಡುವಲ್ಲಿ ಯಾರೆಲ್ಲಾ ಭಾಗಿಯಾದ್ದರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಸಂರಕ್ಷಿತ ಪ್ರದೇಶದೊಳಗೆ ಹುಲಿ ಹತ್ಯೆ ಮಾಡುವುದು ಗಂಭೀರ ಅಪರಾಧವಾಗಿದೆ. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ನಿರ್ದೇಶಕ ರಮೇಶ್ ಕುಮಾರ್ ಪಾಂಡೆ ಅವರು ಹೇಳಿದ್ದಾರೆ.

    ಘಟನೆಯ ಬಳಿಕ ಹುಲಿಯ ಮೃತ ದೇಹವನ್ನು ಪಡೆಯಲಾಗಿದ್ದು, ಸೋಮವಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಶವಪರೀಕ್ಷೆಯನ್ನು ಕೈಗೊಳ್ಳಲಾಗುವುದು ಎಂದು ಕೌಜಲಗಿ ತಿಳಿಸಿದ್ದಾರೆ.

    ಇದೇ ರೀತಿ ಮಹಾರಾಷ್ಟ್ರದಲ್ಲಿ 14 ಮಂದಿಯನ್ನು ಕೊಂದಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಾದ ಎರಡು ದಿನದ ಬಳಿಕವೇ ದುಧ್ವಾ ಹುಲಿ ಅಭಯಾರಣ್ಯದಲ್ಲಿ ಈ ಘಟನೆ ಸಂಭವಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಲಕ್ನೋ: ಕೋತಿಗಳು ಇಟ್ಟಿಗೆ ಕಲ್ಲು ಎಸೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಘಪತ್‍ನ ಟಿಕ್ರಿ ಪ್ರದೇಶದಲ್ಲಿ ನಡೆದಿದೆ.

    ಧರ್ಮಪಾಲ್ ಸಿಂಗ್(72) ಮಂಗಗಳ ದಾಳಿಗೆ ಬಲಿಯಾದ ವ್ಯಕ್ತಿ. ಪೊಲೀಸರ ಪ್ರಕಾರ ಸಿಂಗ್ ಅವರು ಒಣ ಕಟ್ಟಿಗೆಯ ತುಂಡುಗಳನ್ನು ಸಂಗ್ರಹಿಸುತ್ತಿರುವಾಗ ಮಂಗಗಳು ಅವರ ಮೇಲೆ ಇಟ್ಟಿಗೆಯ ತುಂಡುಗಳನ್ನು ಎಸೆದಿವೆ. ಇದರ ಪರಿಣಾಮ ಸಿಂಗ್ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಈ ಘಟನೆ ಕುರಿತು ಸಿಂಗ್ ಅವರ ಕುಟುಂಬಸ್ಥರು ಮಂಗಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದು, ಆದರೆ ಪೊಲೀಸರು ಈ ಅವಘಡ ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಕೋಪಗೊಂಡ ಕುಟುಂಬಸ್ಥರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

     

    ಧರ್ಮಪಾಲ್ ಅವರ ಸಹೋದರ ಕೃಷ್ಣಪಾಲ್ ಸಿಂಗ್ ಪ್ರತಿಕ್ರಿಯಿಸಿ, 20 ಕ್ಕೂ ಅಧಿಕ ಇಟ್ಟಿಗೆ ಕಲ್ಲುಗಳನ್ನು ಮಂಗಗಳು ಎಸೆದಿದ್ದು, ಧರ್ಮಪಾಲ್ ತಲೆ ಎದೆ ಮತ್ತು ಕಾಲಿನ ಭಾಗಕ್ಕೆ ಬಿದ್ದಿದೆ. ಈ ಘಟನೆ ಮಂಗಗಳಿಂದಲೇ ಆಗಿದ್ದು, ಅವುಗಳ ಮೇಲೆ ದೂರು ದಾಖಲಿಸದೇ ಪೊಲೀಸರು ಅದನ್ನು ಆಕಸ್ಮಿಕ ಘಟನೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಇದರಿಂದಾಗಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮಂಗಗಳ ಹಾವಳಿಯಿಂದ ಇಡೀ ಹಳ್ಳಿಯೇ ನರಕಯಾತನೆಯನ್ನು ಅನುಭವಿಸುವಂತಾಗಿದೆ. ಇದೀಗ ಧರ್ಮಪಾಲ್ ಅವರ ಜೀವವನ್ನೇ ಕಸಿದುಕೊಂಡಿದೆ. ಇದೇ ರೀತಿ ಗ್ರಾಮಸ್ಥರು ಕೂಡ ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಡೊಘಾಟ್ ಪೊಲೀಸ್ ಠಾಣೆಯ ಅಧಿಕಾರಿ ಚಿತ್ವಾನ್ ಸಿಂಗ್ ಪ್ರತಿಕ್ರಿಯಿಸಿ, ಕೋತಿಗಳ ವಿರುದ್ಧ ನಾವು ಹೇಗೆ ಪ್ರಕರಣ ದಾಖಲಿಸಬಹುದು? ಇದು ಅಪಹಾಸ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ನಾವು ಖಂಡಿತವಾಗಿಯೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇವೆ ಹಾಗೂ ಈ ಪ್ರಕರಣ ಕುರಿತು ಡೈರಿಯಲ್ಲಿ ನೊಂದಾಯಿಸಿದ್ದೇವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕೂಡ ಒಳಪಡಿಸಲಾಗಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv