Tag: ಉತ್ತರಾಧಿಕಾರಿ

  • ಉತ್ತರಾಯಣ ನಂತರ ಶೀರೂರು ಮಠಕ್ಕೆ ಉತ್ತರಾಧಿಕಾರಿ: ವಿಶ್ವವಲ್ಲಭ ಸ್ವಾಮೀಜಿ ಘೋಷಣೆ

    ಉತ್ತರಾಯಣ ನಂತರ ಶೀರೂರು ಮಠಕ್ಕೆ ಉತ್ತರಾಧಿಕಾರಿ: ವಿಶ್ವವಲ್ಲಭ ಸ್ವಾಮೀಜಿ ಘೋಷಣೆ

    ಉಡುಪಿ: ಜಿಲ್ಲೆಯ ಶಿರೂರು ಮಠಕ್ಕೆ ಉತ್ತರಾಯಣ ನಂತರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

    ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿರೂರು ಮಠಕ್ಕೆ ಉತ್ತರಾಧಿಕಾರಿ ಯಾರು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಉತ್ತರಾಧಿಕಾರಿ ಉತ್ತರಾಯಣ ನಂತರ ಆಗಲಿದೆ. ಯೋಗ್ಯ ವಟುವನ್ನು ಆಯ್ಕೆ ಮಾಡಲಾಗಿದೆ. ಆ ವಟುವಿಗೆ ಈಗ ತರಬೇತಿ ನಡೆಯುತ್ತಿದೆ. ಮುಂದಿನ ವರ್ಷದ ಉತ್ತರಾಯಣದಲ್ಲಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ ಎಂದರು.

    ಶಿರೂರು ಮಠದ ಭಕ್ತರ ಸಹಕಾರದಿಂದ, ಅಷ್ಟ ಮಠದ ಹಿರಿಯ ಯತಿಗಳ ಸಹಕಾರ, ಪ್ರೋತ್ಸಾಹದಿಂದ ಶೀರೂರು ಮಠ ಉತ್ತಮ ಸ್ಥಿತಿಯಲ್ಲಿ ಮುನ್ನಡೆಯಬೇಕು ಎಂಬೂದು ದೇವರಲ್ಲಿ ಪ್ರಾರ್ಥನೆ. ಉತ್ತರಾಧಿಕಾರಿ ಯಾರು ಎಂದು ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತೇನೆ. ಈಗಲೇ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಲಕ್ಷ್ಮೀವರ ತೀರ್ಥರ ನಿಧನಾ ನಂತರ ತೆರವಾಗಿದ್ದ ಪೀಠ, ಜುಲೈ 19, 2018ರಿಂದ ಖಾಲಿಯಾಗಿತ್ತು. ಶೀರೂರು ಮಠದ ಆರ್ಥಿಕ ಸಂಕಷ್ಟಗಳಿಗೂ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಮಠದ ತೆರಿಗೆ ಬಾಕಿ, ಕಟ್ಟಡ ವಿವಾದ ಇತ್ಯರ್ಥ ಆಗುವ ಭರವಸೆ ಇದೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಹೇಳಿದ್ದಾರೆ.

  • ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದರಾ ಮೂಜಗು ಶ್ರೀಗಳು?

    – ಮಲ್ಲಿಕಾರ್ಜುನ ಶ್ರೀಗಳ ಪಕ್ಕಕ್ಕೆ ಕುಳಿತ ಮೂಜಗು ಶ್ರೀಗಳು
    – ಕಾರ್ಯಕ್ರಮಕ್ಕೆ ದಿಂಗಾಲೇಶ್ವರ ಶ್ರೀ ಗೈರು

    ಹುಬ್ಬಳ್ಳಿ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಮೂರುಸಾವಿರ ಮಠದ ವಿವಾದಕ್ಕೆ ಸದ್ದಿಲ್ಲದೇ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ತೆರೆ ಎಳೆದಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಮನೆ ಮಾಡಿದೆ.

    ಕೆಲವು ದಿನಗಳ ಹಿಂದೆ ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹಾಗೂ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯೆ ಉತ್ತರಾಧಿಕಾರಿ ವಿಚಾರವಾಗಿ ಜಟಾಪಟಿ ನಡೆದಿತ್ತು. ಮೊನ್ನೆಯಷ್ಟೇ ಇಬ್ಬರೂ ಸ್ವಾಮೀಜಿಗಳು ಮೂರುಸಾವಿರ ಮಠದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಆಗ ಏನೂ ಹೇಳದೆ ಮೌನಕ್ಕೆ ಶರಣಾಗಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಇದೀಗ ಉತ್ತರಾಧಿಕಾರ ವಿವಾದಕ್ಕೆ ಸದ್ದಿಲ್ಲದೆ ತೆರೆ ಎಳೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

    ಈಗ ಏಕಾ ಏಕಿ ಜಗದ್ಗುರುಗಳ ನಡೆ ಬದಲಾಗಿದ್ದು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಯತ್ತ ಚಿತ್ತ ನೆಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯಾಗಿದ್ದು ಹಲಗೆ ಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮೂಜಗು ಜಗದ್ಗುರುಗಳು ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಪಕ್ಕದಲ್ಲೇ ಕುಳಿತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗೆ ಅಕ್ಕ ಪಕ್ಕ ಕುಳಿತುಕೊಳ್ಳುವ ಮೂಲಕ ಸೂಕ್ಷ್ಮ ಸಂದೇಶ ಸಾರಿದ್ದಾರೆ.

    ವೇದಿಕೆಯ ಮೇಲಿದ್ದ ಹಲವು ಮಠಾಧೀಶರು, ಮೂಜಗು ಶ್ರೀಗಳು ಆಮಂತ್ರಣದ ಮೇಲೆಯೇ ಬಂದಿದ್ದರು. ಅದೇ ರೀತಿ ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗೂ ಆಮಂತ್ರಣ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ದಿಂಗಾಲೇಶ್ವರ ಶ್ರೀಗಳು ಮಾತ್ರ ಕಾಣಲೇ ಇಲ್ಲ. ಈ ಬೆಳವಣಿಗೆ ಭಕ್ತರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.

  • ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಸತ್ಯದರ್ಶನ ಸಭೆ ನಡೆಸಲು ಬಿಡಲ್ಲ: ಮೋಹನ್ ಲಿಂಬಿಕಾಯಿ

    ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಫೆ. 23ರಂದು ಸತ್ಯದರ್ಶನ ಸಭೆ ನಡೆಸಲು ವಿರೋಧ ವ್ಯಕ್ತವಾಗುತ್ತಿದ್ದು, ಮೂರುಸಾವಿರ ಮಠದ ಉನ್ನತಾಧಿಕಾರ ಸಮಿತಿ ಸದಸ್ಯರೂ ಆಗಿರುವ ಮೋಹನ್ ಲಿಂಬಿಕಾಯಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಪ್ರತಿಕ್ರಿಯಸಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಯಾರೋ ಬಂದು ಸಭೆ ನಡೆಸುತ್ತೇವೆ ಅಂದರೆ ಅವಕಾಶ ಕೊಡುವುದಿಲ್ಲ. ಫೆ.23ರಂದು ಸತ್ಯದರ್ಶನ ಸಭೆ ನಡೆಸಲು ಬಿಡುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಹೇಳಿದ್ದಾರೆ.

    ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ತಮ್ಮನ್ನೇ ನೇಮಕ ಮಾಡಬೇಕೆಂಬುದರ ಕುರಿತು ಬಾಲೇಹೊಸುರಿನ ದಿಂಗಾಲೇಶ್ವರ ಸ್ವಾಮೀಜಿ ಇದೇ ಭಾನುವಾರ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ಕರೆದಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಸಭೆ ನಡೆಸಲು ಅವಕಾಶ ನೀಡುವುದಿಲ್ಲವೆಂದು ಹಲವರು ಪಟ್ಟು ಹಿಡಿದಿದ್ದಾರೆ. ಇದೀಗ ಮೋಹನ್ ಲಿಂಬಿಕಾಯಿಯವರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ ಮಠವನ್ನು ನಡೆಸಲು ಸಮರ್ಥರಿದ್ದಾರೆ. ಯಾರೋ 52 ಜನ ಸಹಿ ಹಾಕಿದ ತಕ್ಷಣ ಉತ್ತರಾಧಿಕಾರಿ ನೇಮಕ ಆಗುವುದಿಲ್ಲ. ಸರ್ವಾಧಿಕಾರಿಯಂತೆ ಉತ್ತರಾಧಿಕಾರಿ ನೇಮಕ ನಡೆಯುವುದಿಲ್ಲ ಎಂದು ಮೋಹನ್ ಲಿಂಬಿಕಾಯಿ ಸ್ಪಷ್ಟಪಡಿಸಿದ್ದಾರೆ.

  • ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

    ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮೂರುಸಾವಿರ ಮಠ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಠದ ಉತ್ತರಾಧಿಕಾರಿ ವಿಷಯ ಮತ್ತೀಗ ಮುನ್ನೆಲೆಗೆ ಬಂದಿದೆ. ರಾಜಕಾರಣಿಗಳು ತಮ್ಮ ಗೊಂದಲವನ್ನ ಮುಂದುವರಿಸುತ್ತಿದ್ದು ಉತ್ತರಾಧಿಕಾರಿ ವಿಷಯಕ್ಕೆ ಉತ್ತರವೇ ಸಿಗದಾಗಿದೆ.

    ಸದ್ಯ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿದ್ದಾರೆ. ಇವರೇ ಮನಸ್ಸು ಮಾಡಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳನ್ನ ಉತ್ತರಾಧಿಕಾರಿ ಎಂದು ನೇಮಕ ಮಾಡಿಕೊಂಡಿದ್ದರು. ಈ ಮೊದಲು 2014ರಲ್ಲಿ ಇದಕ್ಕೆ ಕೆಲವರು ವಿರೋಧ ಮಾಡಿ ಗೊಂದಲ ಸೃಷ್ಟಿ ಮಾಡಿದ್ದರು. ಅಂದಿನಿಂದಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

    ಇತ್ತೀಚೆಗೆ ಕೆಲವು ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಸ್ವಾಮೀಜಿಯವರನ್ನ ನೇಮಕ ಮಾಡುವಂತೆ ಚರ್ಚೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ಉನ್ನತ ಸಮಿತಿ ಮುಂದೆ ಬಂದಿಲ್ಲವೆಂದು ಮಠದ ಉನ್ನತ ಸಮಿತಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿರುವುದು ಮತ್ತೆ ಉತ್ತರಾಧಿಕಾರಿ ವಿಷಯ ಮುನ್ನೆಲೆಗೆ ಬಂದಿದೆ.

    ಮಠದ ಉತ್ತರಾಧಿಕಾರಿ ವಿಷಯವೇ ಇಂದು ಅಪ್ರಸ್ತುತ. ಈ ವಿಷಯದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಿರುವ ಸ್ವಾಮೀಜಿಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ಕೊಡುತ್ತ ನಾವು ಭಕ್ತರಾಗಿ ಮುಂದುವರಿಯುತ್ತೇವೆ. ಅಲ್ಲದೇ ಉತ್ತರಾಧಿಕಾರಿ ಬದಲಾವಣೆ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲವೆಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ಮೂರುಸಾವಿರ ಮಠದ ಹಾಲಿ ಶ್ರೀಗಳ ಅಭಿಲಾಷೆಯನ್ನ ಈಡೇರಿಸಲು ಈಗಲೂ ಹಿಂದೇಟು ಹಾಕಲಾಗುತ್ತಿದೆ. ಶ್ರೀ ದಿಂಗಾಲೇಶ್ವರ ಶ್ರೀಗಳನ್ನ ಕೆಲವರು ಮೊದಲಿಂದಲೂ ವಿರೋಧ ಮಾಡುತ್ತ ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪುರಾತನ ಇತಿಹಾಸ ಹೊಂದಿರುವ ಶ್ರೀ ಮಠಕ್ಕೆ ಬಾಲೆಹೊಸೂರಿನ ಶ್ರೀಗಳು ಬರುವುದನ್ನೇ ಕಾಯುತ್ತಿರುವ ಹಾಲಿ ಶ್ರೀಗಳ ಬಯಕೆ ಯಾವಾಗ ಈಡೇರತ್ತೋ ಕಾದು ನೋಡಬೇಕಿದೆ.

  • ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

    ಅಕ್ಟೋಬರ್ 3, 2018 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ.

    ಈ ಹಿಂದಿಯಿಂದಲೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ನಿವೃತ್ತಿ ಆಗುವ ಸಮಯದಲ್ಲಿ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುವುದು ಸಂಪ್ರದಾಯವಾಗಿದೆ. ಅದ್ದರಿಂದ ರಂಜನ್ ಗೊಗೋಯ್ ಅವರು ಹಿರಿಯ ನ್ಯಾಯಾಧೀಶರಾದ ಎಸ್.ಎ ಬೊಬ್ಡೆ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಸೂಚಿಸಿದ್ದಾರೆ .

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956 ರಂದು ಜನಿಸಿದ ನ್ಯಾಯಮೂರ್ತಿ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್‍ಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

  • ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ- ಯಶಸ್ವಿಯಾಗಿ ನಡೆಯಿತು 31ನೇ ಯತಿಯ ಪಟ್ಟಾಭಿಷೇಕ

    ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ- ಯಶಸ್ವಿಯಾಗಿ ನಡೆಯಿತು 31ನೇ ಯತಿಯ ಪಟ್ಟಾಭಿಷೇಕ

    ಉಡುಪಿ: ಪಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಇಂದು ಪಟ್ಟಾಭಿಷೇಕವಾಗಿದೆ. ಕೃಷ್ಣಮಠದ ಸರ್ವಜ್ಞ ಪೀಠದ ಮುಂದೆ, ಮಾಧ್ವ ಪರಂಪರೆಯ ಗಣ್ಯ ಮಠಾಧೀಶರ ಉಪಸ್ಥಿತಿಯಲ್ಲಿ ಈ ಅಪೂರ್ವ ಕಾರ್ಯಕ್ರಮ ನಡೆಯಿತು.

    ಪರ್ಯಾಯದ ಅವಧಿಯಲ್ಲೇ ಪಲಿಮಾರು ಸ್ವಾಮಿಗಳು ಶಿಷ್ಯ ಸ್ವೀಕಾರ ಮಾಡಿ ಯತಿಪೀಠದ ಮೆರುಗು ಹೆಚ್ಚಿಸಿದ್ದಾರೆ. ಹೌದು. ಉಡುಪಿಯ ಅಷ್ಟಮಠಗಳಲ್ಲಿ ಪಲಿಮಾರು ಮಠವೂ ಒಂದಾಗಿದ್ದು, ಸದ್ಯ ಕೃಷ್ಣ ಪೂಜೆಯನ್ನು ಇದೇ ಮಠದ ಯತಿ ವಿದ್ಯಾಧೀಶ ಶ್ರೀಗಳು ಮಾಡುತ್ತಿದ್ದಾರೆ. ಐದು ದಿನಗಳ ಕಾಲ ಹಲವು ವಿಧಿವಿಧಾನ ನಡೆದು ಪಟ್ಟಾಭಿಷೇಕ ಸಂಪನ್ನಗೊಂಡಿದೆ.

    ಮಠದ 31 ನೇ ಉತ್ತರಾಧಿಕಾರಿಯಾಗಿ ವಿದ್ಯಾರಾಜೇಶ್ವರ ತೀರ್ಥರು ಅಧಿಕಾರ ವಹಿಸಿದ್ದಾರೆ. ಕಳೆದ ಎಂಟ್ನೂರು ವರ್ಷಗಳಲ್ಲಿ 30 ಯತಿಗಳು ಈ ಮಠಕ್ಕೆ ಮಠಾಧೀಶರಾಗಿದ್ದಾರೆ. ಸದ್ಯ ಕೃಷ್ಣಪೂಜೆಯನ್ನು ನಡೆಸುತ್ತಿರುವ ಪಲಿಮಾರು ವಿದ್ಯಾಧೀಶ ತೀರ್ಥರು ಈ ಪರಂಪರೆಯ ಮೂವತ್ತನೆಯ ಯತಿಯಾಗಿದ್ದಾರೆ. ಇದೀಗ ಅವರು ಶಿಷ್ಯ ಸ್ವೀಕಾರ ಮಾಡಿದ್ದು 31ನೇ ಯತಿಯ ಪಟ್ಟಾಭಿಷೇಕ ಇಂದು ನಡೆಯಿತು.

    ಕಳೆದ ನಾಲ್ಕು ದಿನಗಳಿಂದಲೂ ವಿವಿಧ ಧಾರ್ಮಿಕ ಕಾಯಕ್ರಮಗಳು ಆಯೋಜನೆಗೊಂಡಿತ್ತು. ಇಂದು ನವಯತಿಯ ರಾಜಗಾಂಭೀರ್ಯದ ಪಟ್ಟಾಭಿಷೇಕ ಜರುಗಿತು. ಕೃಷ್ಣ ದೇವರಿಗೆ ಮಹಾಪೂಜೆಯ ನಂತರ ಸನ್ನಿಧಾನದಲ್ಲಿ ಚತುರ್ವೇದ, ಭಾಗವತ, ಭಗವದ್ಗೀತೆ – ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯಿತು.

    ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ಇದೇ ವೇಳೆಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥರು, ಕೃಷ್ಣ-ವೇದವ್ಯಾಸರ ವಿಗ್ರಹ ಹಾಗೂ ವಿಶ್ವಂಭರ ಸಾಲಿಗ್ರಾಮವನ್ನು ನೂತನ ಶಿಷ್ಯನ ತಲೆಯ ಮೇಲಿಟ್ಟು ಅಭಿಷೇಕ ಮಾಡಿದರು. ಭಕ್ತರ ಜಯಘೋಷದ ನಡುವೆ, ಪಲಿಮಾರು ಮಠದ ಉತ್ತರಾಧಿಕಾರಿಗೆ ವಿದ್ಯಾ ರಾಜೇಶ್ವರ ತೀರ್ಥ ಎಂಬ ನಾಮಕರಣ ಮಾಡಲಾಯಿತು.

    ಮಾಧ್ವ ಯತಿ ಪರಂಪರೆಯಲ್ಲಿ ಇದೊಂದು ಅಪೂರ್ವ ಸಂದರ್ಭ. ಪರ್ಯಾಯದ ಸಂದರ್ಭದಲ್ಲೇ ಸರ್ವಜ್ಞ ಪೀಠದ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕವಾಗಿದ್ದು ವಿಶೇಷ. ಈ ವೇಳೆಯಲ್ಲಿ ಪೇಜಾವರ ಸ್ವಾಮಿಗಳ ಹಿರಿತನದಲ್ಲಿ ಕೃಷ್ಣಾಪುರ, ಕಾಣಿಯೂರು, ಸೋದೆ, ಅದಮಾರು, ಸುಬ್ರಹ್ಮಣ್ಯ, ಭೀಮನಕಟ್ಟೆ ಮಠದ ಸ್ವಾಮಿಗಳು ಹಾಜರಿದ್ದು ನವಯತಿಯನ್ನು ಹರಸಿದರು. ಅಷ್ಟಮಠದ ಮಠಾಧೀಶರು ಸರ್ವಜ್ಞ ಪೀಠದ ಸುತ್ತಲೂ ಕುಳಿತು ನವಯತಿಗೆ ಶುಭ ಹಾರೈಸಿ, ಆಶೀರ್ವಾದ ಮಾಡಿದರು.

    ಈ ಸಂದರ್ಭ ಲೋಕ ಕಲ್ಯಾಣಾರ್ಥ ಪ್ರಾರ್ಥನೆಯೂ ನೆರವೇರಿತು. ದೇಶ ಮತ್ತು ಈ ದೇಶವನ್ನು ಮುಂದಕ್ಕೆ ಆಳಲಿರುವ ಪ್ರಧಾನ ಮಂತ್ರಿಗೆ ಒಳಿತಾಗಲಿ ಎಂದು ಸಾಮೂಹಿಕ ಮಂಗಲಾಷ್ಟಕ ಪಠನವೂ ನಡೆಯಿತು. ಕಳೆದ ಕೆಲವು ದಿನಗಳಿಂದ ಕೃಷ್ಣಮಠ ಹಾಗೂ ಅಷ್ಟಮಠಗಳ ರಥಬೀದಿಯಲ್ಲಿ ಹೊಸ ಯತಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಮನೆಮಾಡಿದೆ. ವಟು ಶೈಲೇಶ ಉಪಾಧ್ಯಾಯ ಇನ್ನು ಮುಂದೆ ವಿದ್ಯಾ ರಾಜೇಶ್ವರನಾಗಿ ಭಕ್ತರ ಸೇವೆಗೆ ಲಭ್ಯರಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಪ್ರಸಿದ್ಧ ಕ್ಷೇತ್ರದ ಗೌರವ ಕಾಪಾಡುವ ನಿಟ್ಟಿನಲ್ಲಿ ಈ ಕೃಷ್ಣಪೂಜಕ ಯತಿ ಯಶಸ್ವಿಯಾಗಲಿ ಎಂದು ಸಾವಿರಾರು ಭಕ್ತರ ಹಾರೈಸಿದರು.

  • ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರ ನೇಮಕ

    ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರ ನೇಮಕ

    ಉಡುಪಿ: ಆಡಳಿತ ಮಂಡಳಿ ಮತ್ತು ಹೊಸ ಉತ್ತರಾಧಿಕಾರಿ ನೇಮಕವಾಗುವವರೆಗೆ ಶಿರೂರು ಮಠಕ್ಕೆ ವ್ಯವಸ್ಥಾಪಕರ ನೇಮಕವಾಗಿದೆ.

    ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಭಟ್ ಗೆ ಜವಾಬ್ದಾರಿ ನೀಡಲಾಗಿದೆ. ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಉಸ್ತುವಾರಿ ನೇಮಕವಾಗಿದೆ. ಮಠದ ತೋಟ, ಚಿನ್ನಾಭರಣ, ನೋಡಿಕೊಳ್ಳಲು ಈ ಉಸ್ತುವಾರಿಗೆ ಅಧಿಕಾರ ಕೊಡಲಾಗಿದೆ.

    ತನಿಖೆ ಹಿನ್ನೆಲೆಯಲ್ಲಿ ಪೊಲೀಸ್ ಸುಪರ್ದಿಯಲ್ಲಿರುವ ಮೂಲ ಮಠದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಆದ್ದರಿಂದ ಮಠದೊಳಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿಲ್ಲ. ಶಿರೂರು ಮಠದ ಆಸ್ತಿಪಾಸ್ತಿ ಸೋದೆ ಮಠ ಸುಪರ್ದಿಗೆ ಪಡೆದಿಲ್ಲ. ತನಿಖೆ ಮುಗಿಯುವ ತನಕ ವ್ಯವಸ್ಥಾಪಕರಿಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸೋದೆ ಮಠದ ಮೂಲಗಳು ತಿಳಿಸಿವೆ.

  • ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಉಡುಪಿ: ಶಿರೂರು ಮಠದ ಒಂದು ತಿಂಗಳ ಆಡಳಿತ ನಿರ್ವಹಣೆಗೆ ಐವರು ಸದಸ್ಯರ ಆಡಳಿತ ಸಮಿತಿ ಸೋಮವಾರ ರಚನೆಯಾಗಲಿದೆ ಎಂಬ ಮಾಹಿತಿ ಸೋದೆ ಮಠದ ಮೂಲಗಳಿಂದ ಲಭಿಸಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಠದ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಈ ವ್ಯವಸ್ಥೆ ಮಾಡುತ್ತೇವೆ. ಸೋದೆ ವಿಶ್ವವಲ್ಲಭ ಸ್ವಾಮಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತದೆ. ಸೋದೆಮಠವೂ ಶಿರೂರು ಮಠದ ದ್ವಂದ್ವ ಮಠ ಆಗಿರುವುದರಿಂದ ಜವಾಬ್ದಾರಿ ವಹಿಸುತ್ತೇವೆ ಎಂದಿದ್ದಾರೆ. ಆದರೆ ಶಿರೂರು ಮಠದ ಮುಂದಿನ ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

    ಒಂದು ತಿಂಗಳೊಳಗೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಗಬೇಕು. ಉತ್ತರಾಧಿಕಾರಿ ಆಯ್ಕೆಗೆ ಸೋದೆ ಮಠದ ಪ್ರಯತ್ನ ನಡೆಸುತ್ತಿದ್ದು, ಹಲವಾರು ವಟುಗಳ ಜಾತಕ ಪರಿಶೀಲನೆ ನಡೆಸುತ್ತಿದ್ದಾರೆ. ವಟು ಆಯ್ಕೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕವಾಗಲಿದೆ. ಆದರೆ ನೂತನ ಉತ್ತರಾಧಿಕಾರಿಯಾಗಿ ಬರಲು ಹಲವರ ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಿರೂರು ಮಠದ ಆರ್ಥಿಕ ನಷ್ಟವೇ ಈ ನಿರಾಸಕ್ತಿಗೆ ಕಾರಣವಾಗಿದ್ದು, ಸನ್ಯಾಸ ಯೋಗವಿದ್ದರೂ ಉತ್ತರಾಧಿಕಾರಿಯಾಗಲು ಹಲವರ ನಿರಾಸಕ್ತಿ ವಹಿಸಿದ್ದಾರೆ. ಈ ಕುರಿತು ಕಳೆದ ಕೆಲ ವಾರಗಳಿಂದ ಮೂಡಿರುವ ಗೊಂದಲಗಳೇ ಕಾರಣ ಎನ್ನಲಾಗಿದೆ.

    ಮಠಾಧೀಶರುಗಳ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಉತ್ತರಾಧಿಕಾರಿ ಆಯ್ಕೆ ಸಮಿತಿಯಲ್ಲಿ ಶಿರೂರು ಮಠದ ವಿದ್ವಾಂಸರಿಗೂ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

  • ಪತಂಜಲಿ ಕಂಪೆನಿಗೆ ಉತ್ತರಾಧಿಕಾರಿ ಯಾರು ಅನ್ನೋದನ್ನು ತಿಳಿಸಿದ್ರು ಬಾಬಾ ರಾಮ್‍ದೇವ್

    ಪತಂಜಲಿ ಕಂಪೆನಿಗೆ ಉತ್ತರಾಧಿಕಾರಿ ಯಾರು ಅನ್ನೋದನ್ನು ತಿಳಿಸಿದ್ರು ಬಾಬಾ ರಾಮ್‍ದೇವ್

    ನವದೆಹಲಿ: 10 ಸಾವಿರ ಕೋಟಿ ಬೆಲೆಬಾಳುವ ಪತಂಜಲಿ ಸಮೂಹಕ್ಕೆ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಬಾಬಾ ರಾಮ್‍ದೇವ್ ಮೊದಲ ಬಾರಿಗೆ ಬಹಿರಂಗವಾಗಿ ತಿಳಿಸಿದ್ದಾರೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಮ್‍ದೇವ್ ಮಾತನಾಡುತ್ತಾ, ಪತಂಜಲಿ ಸಂಸ್ಥೆಯಲ್ಲಿ 500 ಜನ ಸಾಧುಗಳು ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಾಧಿಕಾರಿಗಳನ್ನಾಗಿ ನೇಮಿಸಲು ಇವರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

    ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಕೋಟಿಯಷ್ಟು ಸರಕು ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ. ಸದ್ಯ ಹರಿದ್ವಾರ ಘಟಕದಲ್ಲಿ 15 ಸಾವಿರ ಕೋಟಿ, ತೇಜ್ಪುರ್‍ನಲ್ಲಿ 25 ಸಾವಿರ ಕೋಟಿಯಷ್ಟು ಸರಕು ಉತ್ಪಾದನೆ ಮಾಡಲು ಸಾಮಥ್ರ್ಯ ಹೊಂದಿದ್ದೇವೆ ಎಂದರು.

     

    ಈ ಹಿಂದೆ 1 ಲಕ್ಷ ಕೋಟಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಜನರಿಗೆ ನೀಡುತ್ತಿದ್ದೇವೆ. ತದನಂತರ ಶೇ.10ರಷ್ಟು ಅಂದರೆ 10 ಲಕ್ಷ ಕೋಟಿ ಉತ್ಪಾದನೆಯ ಗುರಿ ಹೊಂದಲು ಸಾಧ್ಯವಾಯಿತು. ಕಂಪನಿಯ ಬೆಳವಣಿಗೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನೋಯ್ಡಾ, ನಾಗ್ಪುರ, ಇಂದೋರ್ ಮತ್ತು ಆಂಧ್ರಪ್ರದೇಶದಲ್ಲಿ 50 ಚಿಕ್ಕ ತಯಾರಿಕಾ ಘಟನಗಳನ್ನು ಸ್ಥಾಪಿಸಿ ತೈಲ, ಉಪ್ಪು ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ ಎಂದರು.

    ಸದ್ಯ ಪತಂಜಲಿ ಕಂಪನಿಯು ಆಯುರ್ವೇದ ವಸ್ತುಗಳ ತಯಾರಿಕೆಯಲ್ಲಿ ಹೆಸರು ವಾಸಿಯಾಗಿದ್ದು, ಫ್ಯಾಶನ್ ಹಾಗೂ ಯುವ ಸಮೂಹಕ್ಕೇ ಬೇಕಾದ ಜೀನ್ಸ್, ಪ್ಯಾಂಟ್, ಕುರ್ತಾ, ಶಟ್ರ್ಸ್, ಸೂಟಿಂಗ್ಸ್, ಸ್ಪೋಟ್ರ್ಸ್ ವೇರ್ ನ್ನು ತಯಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಫ್ಯಾಶನ್ ಲೋಕಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದರು.

    ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆ ವಿಧಿಸಿರುವ ಜಿಎಸ್‍ಟಿ ತೆರಿಗೆಯನ್ನು ಹಸುವಿನ ತುಪ್ಪ ಹಾಗೂ ಬೆಣ್ಣೆಯ ಸರಕುಗಳಿಗೆ ಅನ್ವಯವಾಗಬೇಕು. ಬೆಣ್ಣೆ ಮತ್ತು ತುಪ್ಪದ ವಸ್ತುಗಳಲ್ಲಿ ಶೆ.5ರಷ್ಟು ತೆರಿಗೆ ಇದ್ದು ಶೇ.12ಕ್ಕೆ ಏರಿಸಬೇಕು ಎಂದು ಹಣಕಾಸು ಮಂತ್ರಿ ಅರುಣ್ ಜೆಟ್ಲಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ರಾಮ್‍ದೇವ್    ಹೇಳಿದರು.

    ದೇಶದಲ್ಲಿ ಸ್ವದೇಶಿ ವಸ್ತುಗಳಿಗಿಂತ ವಿದೇಶಿ ವಸ್ತುಗಳ ಮಾರಾಟ ಹೆಚ್ಚಾಗಿದ್ದು ಚೀನಾ ಹಾಗೂ ವಿದೇಶಿ ಸರಕುಗಳನ್ನು ನಿಷೇಧಿಸಬೇಕು. ನಮ್ಮ ದೇಶದ ವಸ್ತುಗಳನ್ನು ಬಾಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಮಾರಾಟ ಮಾಡಿದರೂ ನಾವು ಗಳಿಸುವ ಯಾವುದೇ ಲಾಭಗಳು ನಮ್ಮ ದೇಶಕ್ಕೆ ವಾಪಾಸ್ಸಾಗುವುದಿಲ್ಲ. ಹೀಗಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳು ರಫ್ತು ಆಗಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಪತಂಜಲಿ ಕಂಪನಿಯು ರಾಜಕೀಯದ ಅಂಗವಾಗಿ ಇದೆಯೇ ಎಂಬ ಪ್ರಶ್ನೆಯನ್ನು ಅಲ್ಲೆಗೆಳೆದಿದ್ದಾರೆ. ನನ್ನ ಹಾಗೂ ಪತಂಜಲಿ ಯಾವುದೇ ರಾಜಕೀಯ ಸಂಪರ್ಕ ಹೊಂದಿಲ್ಲ. ಪತಂಜಲಿಯನ್ನು ಬೆಳೆಸಲು ನಾನು ಒಂದು ಸಿಂಗಲ್ ಪೈಸಾ ಕೂಡ ಮೋದಿ ಸರ್ಕಾರದಿಂದ ಪಡೆದಿಲ್ಲ. ಕೆಟ್ಟಜನರು ಯಾವುದೇ ರಾಜಕೀಯವಾಗಿ ಆಳ್ವಿಕೆ ಮಾಡಬಾರದು ಎಂಬ ಉದ್ದೇಶದಿಂದ ನಾನು ರಾಜಕೀಯದಲ್ಲಿ ಮಧ್ಯ ಪ್ರವೇಶ ಮಾಡಿದೆ. ನನ್ನ ವೃತ್ತಿ ರಾಜಕೀಯವಲ್ಲ. ನನ್ನ ಕಂಪನಿಗೆ ರಾಜಕೀಯ ಸಂಪರ್ಕಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಹೇಳಿದರು.