Tag: ಉತ್ತರಾಖಂಡ

  • ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

    ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

    – ನೇಪಾಳದ ವಲಸೆ ಕಾರ್ಮಿಕರ ಬದುಕಲ್ಲಿ ನಡೆದಿದ್ದೆಂಥಾ ದುರಂತ!

    ನವದೆಹಲಿ: ‘ಅಪ್ಪಾ.. ನಾವು ಬದುಕುಳಿಯುವುದಿಲ್ಲ.. ಇಲ್ಲಿ ಬಹಳಷ್ಟು ನೀರು ತುಂಬಿದೆ’.. ಇದು ಸಾವಿಗೂ ಮುನ್ನ ಪುತ್ರ ತನ್ನ ತಂದೆ ಜೊತೆ ನಡೆಸಿದ ಕೊನೆ ಸಂಭಾಷಣೆ. ತುತ್ತಿನ ಚೀಲ ತುಂಬಿಸಲು ದೂರದ ಪ್ರದೇಶಗಳಿಂದ ಬಂದಿದ್ದ ಕಾರ್ಮಿಕ ದಂಪತಿ ಜೀವನದಲ್ಲಿ ನಡೆದ ದುರಂತ ಘೋರ.

    ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarakashi Flood) ಸಂಭವಿಸಿದ ಮೇಘಸ್ಫೋಟದಿಂದ ಉಂಟಾಗಿ ಪ್ರವಾಹದಲ್ಲಿ ಮಗನನ್ನು ಕಳೆದುಕೊಂಡು ತಂದೆ ರೋಧಿಸಿದ್ದಾರೆ. ಸಾವಿಗೂ ಮುನ್ನ ಪುತ್ರ ತನ್ನ ಜೊತೆ ನಡೆಸಿದ ಸಂಭಾಷಣೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆ

    ನೇಪಾಳದ ವಲಸೆ ಕಾರ್ಮಿಕರಾದ ಕಾಳಿ ದೇವಿ ಮತ್ತು ಆಕೆ ಪತಿ ವಿಜಯ್ ಸಿಂಗ್ ದುರಂತದಲ್ಲಿ ಪಾರಾಗಿ ಬದುಕುಳಿದ ದಂಪತಿಯಾಗಿದ್ದಾರೆ. ಭಟ್ವಾರಿ ಹೆಲಿಪ್ಯಾಡ್‌ನಲ್ಲಿ ಕುಳಿತಿದ್ದ ಸಿಂಗ್, ತನ್ನ ಮಗನೊಂದಿಗಿನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಮಗನನ್ನು ಕಾಪಾಡಲು ಸಾಧ್ಯವಾಗದ, ಸಾಂತ್ವನ ಹೇಳಲಾಗದ ತಮ್ಮ ಅಸಹಾಯಕ ಸ್ಥಿತಿ ನೆನೆದು ಮರುಗಿದ್ದಾರೆ.

    ಕಣಿವೆಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನೇಪಾಳದಿಂದ ಆಗಮಿಸಿದ 26 ಜನರ ಗುಂಪಿನಲ್ಲಿ ಈ ಕಾರ್ಮಿಕನೂ ಇದ್ದ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಮಾರು 47 ಕಿಲೋಮೀಟರ್ ದೂರದಲ್ಲಿರುವ ಭಟ್ವಾರಿಗೆ ತೆರಳಿದ್ದು ಈ ದಂಪತಿ ಮಾತ್ರ. ಒಂದು ದಿನದ ನಂತರ, ಉಳಿದ 24 ಸದಸ್ಯರಲ್ಲಿ ಯಾರನ್ನೂ ಸಂಪರ್ಕಿಸಲು ಇವರಿಂದ ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಕಂದಕಕ್ಕೆ ಬಿದ್ದ ಸಿಆರ್‌ಪಿಎಫ್ ವಾಹನ – ಮೂವರು ಹುತಾತ್ಮ, 16 ಮಂದಿಗೆ ಗಾಯ

    ‘ನಾವು ಕಣಿವೆಯನ್ನು ತೊರೆದಾಗ, ಈ ಪ್ರದೇಶಕ್ಕೆ ಇಂತಹ ವಿಪತ್ತು ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಮುಂಬರುವ ಪ್ರವಾಹದ ಬಗ್ಗೆ ನನಗೆ ತಿಳಿದಿದ್ದರೆ, ನಾನು ನನ್ನ ಮಕ್ಕಳನ್ನು ಹಿಂದೆ ಬಿಡುತ್ತಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ. ‘ನಮ್ಮನ್ನು ಹರ್ಸಿಲ್ ಕಣಿವೆಗೆ ಕರೆದೊಯ್ಯುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಮ್ಮ ಮಕ್ಕಳನ್ನು ನಾವೇ ಹುಡುಕುತ್ತೇವೆ’ ಎಂದು ಬೇಡಿಕೊಂಡಿದ್ದಾರೆ.

    ಕಾರ್ಮಿಕರಲ್ಲದೆ, ಸೇನಾ ಸಿಬ್ಬಂದಿಯ ತಂಡವೂ ದುರಂತ ಸಂಭವಿಸಿದಾಗ ಕಣಿವೆಯಲ್ಲಿತ್ತು. ಸುಮಾರು 11 ಯೋಧರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಸ್ತಿಪಾಸ್ತಿ ಮತ್ತು ಜೀವ ಹಾನಿಯಾಗಿದೆ. ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮಂಗಳವಾರ ಉತ್ತರಕಾಶಿಯ ಹರ್ಸಿಲ್ ಬಳಿಯ ಧರಾಲಿ ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದ್ದು, ಭಾರೀ ಮೇಘಸ್ಫೋಟದಿಂದಾಗಿ ಮನೆಗಳು, ಮರಗಳು ನೆಲಕ್ಕೆ ಉರುಳಿ ಬಿದ್ದವು. ವಾಹನಗಳು ಕೊಚ್ಚಿ ಹೋದವು. ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.

  • ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

    ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

    ನವದೆಹಲಿ: ಉತ್ತರಾಖಂಡದ (Uttarakhand) ಧರಾಲಿ ಪ್ರದೇಶಗಳಲ್ಲಿ ಸಂಭವಿಸಿದ್ದು ಮೇಘಸ್ಫೋಟವಲ್ಲ (Cloudburst) ಬದಲಾಗಿ ಹಿಮಕೊಳ ಸ್ಫೋಟ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ ಹಠಾತ್ (Flood) ಪ್ರವಾಹ ಸೃಷ್ಟಿಯಾಗಿ ಮನೆಗಳು, ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಕೊಚ್ಚಿ ಹೋಗಿದ್ದವು. ಆದರೆ ಇದು ಮೇಘಸ್ಪೋಟದಿಂದ ಸಂಭವಿಸಿಲ್ಲ ಎನ್ನುತ್ತಿದ್ದಾರೆ ಸಂಶೋಧಕರು.

    ಒಂದು ಗಂಟೆಯೊಳಗೆ ಸೀಮಿತ ಪ್ರದೇಶದಲ್ಲಿ ಕನಿಷ್ಠ 100 ಮಿಲಿಮೀಟರ್ ಮಳೆಯಾದರೆ ಅದನ್ನು ಮೇಘಸ್ಫೋಟ ಎಂದು ಪರಿಗಣಿಸಲಾಗುತ್ತದೆ. ಆದರೆ ಉತ್ತರಕಾಶಿಯ ಹರ್ಸಿಲ್ ಮತ್ತು ಭಟ್ವಾರಿಯಲ್ಲಿ 24 ಗಂಟೆಗಳಲ್ಲಿ ಕ್ರಮವಾಗಿ 9 ಮಿ.ಮೀ. ಮತ್ತು 11 ಮಿ.ಮೀ. ಮಳೆಯಾಗಿದೆ. ಹಾಗಾಗಿ ಇದು ಮೇಘಸ್ಫೋಟವಲ್ಲ ಎಂದು ಡೂನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಹಿಮಾಲಯ ಪ್ರದೇಶದ ಸಂಶೋಧಕ ಡಾ. ಡಿ.ಡಿ. ಚೌನಿಯಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

    ಜಲಸಮಾಧಿಯಾಗಿರುವ ಧರಾಲಿ ಗ್ರಾಮದ ಉತ್ತರದ ಹಿಮಾಚ್ಛಾದಿತ ಪರ್ವತಗಳಲ್ಲಿ ಹಲವು ಹಿಮಕೊಳಗಳಿವೆ. ಕಡಿದಾದ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಖೀರ್ ಗಂಗಾ ನದಿಯ ಉಗಮವಾಗುತ್ತೆ. ಈ ಭಾಗದಲ್ಲಿ ಭಾರೀ ಮಳೆ ಮತ್ತು ಹಿಮ ಕರಗುವಿಕೆಯಿಂದಾಗಿ, ಇಲ್ಲಿರುವ ಹಿಮಕೊಳಗಳು ತುಂಬಿವೆ. ಈ ಹಿಮಕೊಳಗಳ ಪೈಕಿ ಒಂದು ಸ್ಫೋಟಗೊಂಡಿದೆ. ಆ ಬಳಿಕ ಇತರ ಕೊಳಗಳೂ ಸ್ಫೋಟಗೊಳ್ಳುವಂತೆ ಮಾಡಿದೆ. ಅನಂತರ ನೀರು ಮತ್ತು ಶಿಲೆಗಳು ಪ್ರಬಲವಾಗಿ ಕೆಳಕ್ಕೆ ಹರಿದು, ಧರಾಲಿ ಗ್ರಾಮ ಕೊಚ್ಚಿಕೊಂಡು ಹೋಗಿದೆ ಎಂದು ಸಂಶೋಧಕ ಡಾ. ಡಿ.ಡಿ. ಚೌನಿಯಾಲ್ ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ- ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

     

    ಇಲ್ಲಿಯವರೆಗೂ ಈ ಘಟನೆಯಲ್ಲಿ ಮೂವರ ಸಾವಾಗಿದ್ದು, 60 ಕ್ಕೂ ಹೆಚ್ಚು ನಾಗರೀಕರ ರಕ್ಷಣೆ ಮಾಡಲಾಗಿದೆ. ಇನ್ನೂ 50ಕ್ಕೂ ಹೆಚ್ಚು ಜನರು, ಎಂಟು ಯೋಧರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಮುಂದುವರೆದಿದೆ.

    ಲೆಫ್ಟಿನೆಂಟ್ ಜನರಲ್ ಅನಿಂದ್ಯ ಸೇನ್‌ಗುಪ್ತಾ ಪ್ರತಿಕ್ರಿಯಿಸಿ, ಹರ್ಸಿಲ್ ಬಳಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಧರಾಲಿ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದುರಂತದಿಂದಾಗಿ ಧರಾಲಿ ಎಲ್ಲಾ ಸಂಪರ್ಕಗಳಿಂದ ಕಡಿತಗೊಂಡಿದೆ. ದಕ್ಷಿಣ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರವೂ ಸಹ ನಾಶವಾಗಿದೆ ಎಂದಿದ್ದಾರೆ. ಭೂಕುಸಿತವು ದಕ್ಷಿಣ ಸೇನಾ ಶಿಬಿರವನ್ನು ಪ್ರವೇಶಿಸಿದಾಗ, 7 ಯೋಧರು ಮತ್ತು ಒಬ್ಬ ಜೆಸಿಓ (ಜೂನಿಯರ್ ಕಮಿಷನ್ಡ್ ಆಫೀಸರ್) ನಾಪತ್ತೆಯಾಗಿದ್ದಾರೆ. ಅಲ್ಲದೆ, 30-40 ಕಾರ್ಮಿಕರು ಸಹ ನಾಪತ್ತೆಯಾಗಿದ್ದಾರೆ. ಆರಂಭಿಕ ರಕ್ಷಣಾ ಕಾರ್ಯಾಚರಣೆಗಾಗಿ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷ ವರ್ಧಾ ಮತ್ತು 150 ಕ್ಕೂ ಹೆಚ್ಚು ಸೈನಿಕರನ್ನ ನಿಯೋಜಿಸಲಾಗಿದೆ.

    ಸೇನೆಯಿಂದ ಭರವಸೆ
    ಹರ್ಸಿಲ್‌ನಿಂದ ಧರಾಲಿ ಗ್ರಾಮಕ್ಕೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಸಂಪರ್ಕವನ್ನು ಪುನಃಸ್ಥಾಪಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಭಾರತೀಯ ಸೇನೆಯು ನಿಮ್ಮ ಜೊತೆ ನಿಲ್ಲುತ್ತದೆ ಮತ್ತು ಈ ವಿನಾಶದಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ ಅಂತಾ ಸ್ಥಳಿಯ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

     

  • ಉತ್ತರಾಖಂಡದಲ್ಲಿ ಮೇಘಸ್ಫೋಟ – ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆ

    ಉತ್ತರಾಖಂಡದಲ್ಲಿ ಮೇಘಸ್ಫೋಟ – ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ ( Uttarakhand) ಉತ್ತರಕಾಶಿಯಲ್ಲಿ (Uttarkashi) ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಕೇರಳ (Kerala) ಮೂಲದ 28 ಪ್ರವಾಸಿಗರು (Tourists) ನಾಪತ್ತೆಯಾಗಿದ್ದಾರೆ ಎಂದು ನಾಪತ್ತೆಯಾದವರ ಕುಟುಂಬಸ್ಥರು ತಿಳಿಸಿದ್ದಾರೆ.

    ಭೀಕರ ಪ್ರವಾಹದಲ್ಲಿ ನಾಪತ್ತೆಯಾದ 28 ಜನರ ಪೈಕಿ 20 ಮಂದಿ ಕೇರಳ ಮೂಲದವರಾಗಿದ್ದು, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಇನ್ನುಳಿದ 8 ಮಂದಿ ಕೇರಳದ ವಿವಿಧ ಜಿಲ್ಲೆಗಳ ನಿವಾಸಿಯಾಗಿದ್ದರು. ನಾಪತ್ತೆಯಾದವರಲ್ಲಿ ದಂಪತಿ ಕೂಡ ಇದ್ದರು. ಮೇಘಸ್ಫೋಟ ಸಂಭವಿಸುವ ಒಂದು ದಿನದ ಹಿಂದೆ ಅವರ ಮಗ ನಮಗೆ ಕೊನೆಯದಾಗಿ ಫೋನ್ ಮಾಡಿದ್ದರು. ಮರುದಿನ ಬೆಳಗ್ಗೆ 8:30ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಬಳಿಕ ನಮಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದಂಪತಿಯ ಸಂಬಂಧಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ

    10 ದಿನಗಳ ಉತ್ತರಾಖಂಡ ಪ್ರವಾಸವನ್ನು ಏರ್ಪಡಿಸಿದ ಹರಿದ್ವಾರ ಮೂಲದ ಟ್ರಾವೆಲ್ ಏಜೆನ್ಸಿ ಕೂಡ ಪ್ರವಾಸಿಗರ ಕುರಿತು ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಅವರ ಫೋನ್‌ಗಳಲ್ಲಿ ಈಗ ಬ್ಯಾಟರಿ ಖಾಲಿಯಾಗಿರಬಹುದು. ಪ್ರಸ್ತುತ ಆ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ ಎಂದು ಸಂಬಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಗೆ ನಿಮ್ಮ ಪಾದವನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತೆ – ಯುಪಿ ಸಚಿವ ವಿವಾದಾತ್ಮಕ ಹೇಳಿಕೆ

    ಉತ್ತರಕಾಶಿಯ ಧರಾಲೀಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವನ್ನ ಭಾರತೀಯ ಸೇನೆ, ಐಟಿಬಿಪಿ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಆರಂಭಿಸಿವೆ. ಭಾರೀ ಮಳೆಯ ನಡುವೆಯೂ 150 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 150ಕ್ಕೂ ಹೆಚ್ಚುಮಂದಿಯನ್ನು ಪ್ರವಾಹಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ. ಅಲ್ಲದೇ ಪ್ರವಾಹದಿಂದಾಗಿ ಈವರೆಗೆ ಐವರು ಸಾವನ್ನಪ್ಪಿರುವುದು ದೃಢವಾಗಿದೆ. ಐವರ ಮೃಹದೇಹಗಳನ್ನೂ ಹೊರತೆಗೆಯಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

  • ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ

    ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ

    ಕಲಬುರಗಿ: ಉತ್ತರಾಖಂಡದಲ್ಲಿ (Uttarakhand) ಉಂಟಾದ ಪ್ರವಾಹದಿಂದ ಇದೀಗ ಅಲ್ಲಿಗೆ ತೆರಳಿದ ಕನ್ನಡಿಗರು ಸಹ ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆ ಹಿನ್ನೆಲೆ ಅವರ ಸಹಾಯಕ್ಕಾಗಿ ಕಲಬುರಗಿ (Kalaburagi) ಜಿಲ್ಲಾಡಳಿತ ಸಹಾಯವಾಣಿ ಕೇಂದ್ರ (Helpline) ಆರಂಭಿಸಿದೆ.

    ಕಲಬುರಗಿ ಜಿಲ್ಲೆಯಿಂದ ಉತ್ತರಾಖಂಡದ ಉತ್ತರಕಾಶಿಗೆ (Uttarkashi) ಪ್ರವಾಸಕ್ಕೆ ತೆರಳಿ ಮೇಲ್ಕಂಡ ಘಟನೆಯಲ್ಲಿ ಸಿಲುಕಿಕೊಂಡಿದಲ್ಲಿ, ಅಂಥವರ ಮಾಹಿತಿಯನ್ನು ಸಂಬಂಧಿಸಿದವರು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472-278677 ಹಾಗೂ ಪೊಲೀಸ್ ಕಂಟ್ರೋಲ್ ಸಂಖ್ಯೆ 9480805500, 9480803500, 08472-263604, 228112ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಆರ್ಮಿ ಕ್ಯಾಂಪ್‌ನಲ್ಲಿದ್ದ 10ಕ್ಕೂ ಅಧಿಕ ಸೈನಿಕರು ನಾಪತ್ತೆ

    ಈ ಸಹಾಯವಾಣಿ ಮೂಲಕ ನೊಂದಣಿ ಮಾಡಿಕೊಂಡ ಬಳಿಕ ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು, ಬಳಿಕ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚಿಸಿ ಸಂಕಷ್ಟದಲ್ಲಿರುವವರ ನೆರವಿಗಾಗಿ ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ 46,933 ಕೋಟಿ ತೆರಿಗೆ ಹಣ ಬಿಡುಗಡೆ – ಕೇಂದ್ರ ಹಣಕಾಸು ಸಚಿವಾಲಯ

  • ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಸಾವಿನ ಸಂಖ್ಯೆ 4ಕ್ಕೆ ಏರಿಕೆ

    ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಸಾವಿನ ಸಂಖ್ಯೆ 4ಕ್ಕೆ ಏರಿಕೆ

    – 60ಕ್ಕೂ ಅಧಿಕ ಮಂದಿ ನಾಪತ್ತೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯ (Uttarakashi) ಧರಾಲಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ನಾಲ್ಕು ಜನರು ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

    ಖೀರ್ ಗಂಗಾ ನದಿಯ ರೌದ್ರಾವತಾರಕ್ಕೆ ಇಡೀ ಊರಿಗೇ ಊರೇ ಸರ್ವನಾಶವಾಗಿದೆ. ಬೆಟ್ಟದ ಮೇಲಿಂದ ಏಕಾಏಕಿ ನೀರು ಹರಿದು ಬಂದಿದ್ದು, ಗ್ರಾಮವೇ ಕೊಚ್ಚಿಕೊಂಡು ಹೋಗಿದೆ. ಪರಿಣಾಮ 4 ಜನರು ಸಾವನ್ನಪ್ಪಿದ್ದು, ಪ್ರವಾಸಿಗರು, ಅಲ್ಲಿನ ಸ್ಥಳೀಯರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿದ್ದಾರೆ.ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ – ಆ.28ಕ್ಕೆ ವಿಚಾರಣೆ ಮುಂದೂಡಿಕೆ

    ಸದ್ಯ ಸ್ಥಳದಲ್ಲಿ ಉತ್ತರ ಕಾಶಿ ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್), ಎನ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಇಂಡೋ- ಟಿಬೆಟನ್ ಬಾರ್ಡರ್ ಫೋರ್ಸ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಜೊತೆಗೆ 15 ರಿಂದ 20 ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಮಾತುಕತೆ ನಡೆಸಿದ್ದು, ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ನೀರಿನ ಪ್ರವಾಹದಿಂದ ಹೋಟೆಲ್‌ಗಳು, ಹೋಂ ಸ್ಟೇಗಳು, ಧರಾಲಿಯಲ್ಲಿನ ಕಟ್ಟಡಗಳು, ಮನೆಗಳು ಕೊಚ್ಚಿ ಹೋಗಿವೆ. ದುರಂತದಿಂದಾಗಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಜೊತೆಗೆ ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತಗೊಂಡಿದೆ.

    ಮೇಘಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಲಪ್ರಳಯದ ಭಯಾನಕತೆಯನ್ನು ಬಿಚ್ಚಿಟ್ಟಿದೆ. ಬೆಟ್ಟದ ಮೇಲಿನಿಂದ ಏಕಾಏಕಿ ನದಿಯಂತೆ ನೀರು ಹರಿದು ಬಂದು ಇಡೀ ಗ್ರಾಮವನ್ನೇ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಅನೇಕ ಮನೆಗಳು ಸರ್ವನಾಶವಾಗಿದ್ದು, ವಾಹನಗಳು ಹಾಗೂ ಅಂಗಡಿಗಳು ಸಹ ಧ್ವಂಸವಾಗಿದೆ. ಈ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನ್ನಿಸುವಂತಿದೆ. ಏಕಾಏಕಿ ಜಲಪ್ರಳಯ ಉಂಟಾದ ಪರಿಣಾಮ ಜನರು ಕಿರುಚಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಬಾಗಲಕೋಟೆ | ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್‌ ಪಂತ್ ಆರ್ಥಿಕ ನೆರವು

     

  • ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ

    ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ

    – 60ಕ್ಕೂ ಹೆಚ್ಚು ಮಂದಿ ಕೊಚ್ಚಿಹೋಗಿರುವ ಶಂಕೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಭೀಕರ ಮೇಘಸ್ಫೋಟ (Cloudburst) ಸಂಭವಿಸಿದ್ದು, ಹಠಾತ್ ಪ್ರವಾಹಕ್ಕೆ ಧರಾಲಿ (Dharali) ಗ್ರಾಮ ಕೊಚ್ಚಿ ಹೋಗಿದೆ.

    ಖೀರ್ ಗಂಗಾ ರೌದ್ರಾವತಾರಕ್ಕೆ ಇಡೀ ಊರಿಗೇ ಊರೇ ಸರ್ವನಾಶವಾಗಿದ್ದು, 60ಕ್ಕೂ ಹೆಚ್ಚು ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಎಲ್.ಕೆ ಅಡ್ವಾಣಿ ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ

    ಬೆಟ್ಟದ ಮೇಲಿನಿಂದ ಏಕಾಏಕಿ ನದಿಯಂತೆ ನೀರು ಹರಿದು ಬಂದು ಇಡೀ ಗ್ರಾಮವನ್ನೇ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಅನೇಕ ಮನೆಗಳು ಸರ್ವನಾಶವಾಗಿದ್ದು, ವಾಹನಗಳು ಹಾಗೂ ಅಂಗಡಿಗಳು ಸಹ ಧ್ವಂಸವಾಗಿದೆ. ಈ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನ್ನಿಸುವಂತಿದೆ. ಏಕಾಏಕಿ ಜಲಪ್ರಳಯ ಉಂಟಾದ ಪರಿಣಾಮ ಜನರು ಕಿರುಚಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

    ಸದ್ಯ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ದುರಂತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೇಘಸ್ಫೋಟದಲ್ಲಿ ದೊಡ್ಡಮಟ್ಟದ ಹಾನಿಯಾಗಿರುವ ಮಾಹಿತಿ ಇದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

  • ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ

    ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯ ಹೆಲಾಂಗ್ (Helang) ಬಳಿಯ ಟಿಹೆಚ್‌ಡಿಸಿಯ (THDC) ವಿಷ್ಣುಗಡ್ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ (Vinshnugad Hydro-Electricity Project) ಶನಿವಾರ ಭೂಕುಸಿತ ಸಂಭವಿಸಿದ ಪರಿಣಾಮ ಹನ್ನೆರಡು ಕಾರ್ಮಿಕರು ಗಾಯಗೊಂಡಿದ್ದಾರೆ.

    ಭೂಕುಸಿತ ಉಂಟಾದ ವೇಳೆ ಸ್ಥಳದಲ್ಲಿ ಸುಮಾರು 300 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಹೇಳಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಪಿಪಲ್ಕೋಟಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸುಮಾರು 70 ಕಾರ್ಮಿಕರು ಇದ್ದರು. ಯೋಜನಾ ಸ್ಥಳದಲ್ಲಿ ಸದ್ಯಕ್ಕೆ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂದೀಪ್ ತಿವಾರಿ ತಿಳಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

    ಭೂಕುಸಿತದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

  • ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

    ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

    ಡೆಹ್ರಾಡೂನ್: ಹರಿದ್ವಾರದ (Haridwar) ಮಾನಸ ದೇವಿ ದೇವಸ್ಥಾನದಲ್ಲಿ (Mansa Devi Temple) ಕಾಲ್ತುಳಿತ (Stampede) ಸಂಭವಿಸಿದ ಪರಿಣಾಮ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

    ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಭಾರೀ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಅಸ್ವಸ್ಥಗೊಂಡಿದ್ದಾರೆ.

    ಗಾಯಾಳು ಭಕ್ತರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಗರ್ವಾಲ್ ವಿಭಾಗದ ಆಯುಕ್ತ ವಿನಯ್ ಶಂಕರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

  • ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

    ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

    ಡೆಹ್ರಾಡೂನ್: ಬೊಲೆರೋ ವಾಹನವೊಂದು 150 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಉತ್ತರಾಖಂಡದ (Uttarakhand) ಪಿಥೋರಗಢ ( Pithoragarh) ಜಿಲ್ಲೆಯ ಸುನಿ ಸೇತುವೆ (Suni Bridge) ಬಳಿ ನಡೆದಿದೆ.

    13 ಪ್ರಯಾಣಿಕರಿದ್ದ ಬೊಲೆರೋ ವಾಹನವು ಸುತಿ ಸೇತುವೆ ಕಂದಕಕ್ಕೆ ಉರುಳಿದೆ. ಅಪಘಾತದ ಭೀಕರತೆಗೆ ಬೊಲೆರೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ – ಪ್ರಿಯಕರನನ್ನು ಬ್ಲ್ಯಾಕ್‍ಮೇಲ್ ಮಾಡಿ ಕೊಲೆ ಮಾಡಿಸಿದ್ದ ಲೇಡಿ ಅಂದರ್

    ಅಪಘಾತದಲ್ಲಿ ಮೃತಪಟ್ಟವರಿಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಮೃತರ ಗುರುತು ಸಹ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

    ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

    ಡೆಹ್ರಾಡೂನ್: ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ʼಆಪರೇಷನ್ ಕಾಲನೇಮಿʼ (Operation Kalanemi) ಕಾರ್ಯಾಚರಣೆ ಆರಂಭಿಸಿದ್ದು, 82 ನಕಲಿ ಬಾಬಾಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಚಾರ್ ಧಾಮ್ ಯಾತ್ರೆ ಮತ್ತು ಕನ್ವರ್ ಯಾತ್ರೆ ಹಿನ್ನೆಲೆ ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ಸಂಖ್ಯೆ ಹೆಚ್ಚಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಒಟ್ಟು 82 ಮಂದಿ ನಕಲಿ ಬಾಬಾಗಳನ್ನು ಬಂಧಿಸಲಾಗಿದೆ. ಭಾನುವಾರ ಬಂಧಿಸಿದ 34 ಜನರ ಪೈಕಿ 23 ಮಂದಿ ಇತರ ರಾಜ್ಯಗಳ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಶಿರಾಡಿಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜಲಪಾತಕ್ಕೆ ಬಿದ್ದ ಕಾರು

    ಬಂಧಿತ ನಕಲಿ ಬಾಬಾಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಜನರ ಭಾವನೆಗಳ ಜೊತೆ ಆಟವಾಡುವ ಇಂತಹ ವಂಚಕರನ್ನು ಸೆರೆಹಿಡಿಯಲು ತಂಡವನ್ನು ರಚಿಸಲಾಗಿದ್ದು, ನಕಲಿ ಬಾಬಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಆಲ್ಕರಜ್‌ ಹ್ಯಾಟ್ರಿಕ್‌ ಕನಸು ಭಗ್ನ- ಚೊಚ್ಚಲ ವಿಂಬಲ್ಡನ್‌ ಗೆದ್ದ ಸಿನ್ನರ್‌ | ನಗದು ಬಹುಮಾನ ಎಷ್ಟು?