Tag: ಉತ್ತರಾಖಂಡ ದುರಂತ

  • ನಂದಾದೇವಿ ಹಿಮಪರ್ವತ ಕುಸಿತ, ಕೊಚ್ಚಿ ಹೋಯ್ತು ಸೇತುವೆ – ಇಂದು ನಡೆದಿದ್ದು ಏನು?

    ನಂದಾದೇವಿ ಹಿಮಪರ್ವತ ಕುಸಿತ, ಕೊಚ್ಚಿ ಹೋಯ್ತು ಸೇತುವೆ – ಇಂದು ನಡೆದಿದ್ದು ಏನು?

    – ದೇವಭೂಮಿ ಉತ್ತರಾಖಂಡ್‍ನಲ್ಲಿ ಮತ್ತೊಮ್ಮೆ ಪ್ರಕೃತಿ ಪ್ರಕೋಪ
    – ಚಳಿಗಾಲದ ಪ್ರವಾಹಕ್ಕೆ ಚಮೋಲಿಯಲ್ಲಿ ಚೀರಾಟ

    ಡೆಹ್ರಾಡೂನ್: ಹಿಮಾಲಯದ ಪರ್ವತ ಪ್ರದೇಶದಲ್ಲಿರುವ ದೇವಭೂಮಿ, ಚಾರ್‌ಧಾಮ್‌ ನೆಲೆ ಉತ್ತರಾಖಂಡ್ ಮೇಲೆ ಮತ್ತೊಮ್ಮೆ ಪ್ರಕೃತಿ ಮುನಿಸಿಕೊಂಡಿದೆ. ಇವತ್ತು ಬೆಳಗ್ಗೆ ಸುಮಾರು 10:40ರ ಸುಮಾರಿಗೆ ಹಿಮಾಲಯ ಪರ್ವತ ಶ್ರೇಣಿಯ ಹಿಮಚ್ಛಾದಿತ ನಂದಾದೇವಿ ಪರ್ವತ ದಿಢೀರ್ ಕುಸಿದಿದೆ.

    ನಂದಾದೇವಿ ಹಿಮ ಪ್ರವಾಹದಿಂದಾಗಿ ಚಮೋಲಿ ಜಿಲ್ಲೆಯ ಜೋಷಿಮಠ ಪ್ರದೇಶದ ಧೌಲಿಗಂಗಾ ನದಿ ರಣಭಯಂಕರ ರೂಪ ಪಡೆದಿದೆ. ನೋಡ ನೋಡುತ್ತಿದ್ದಂತೆಯೇ ಹಿಮಾಲಯವೇ ನಡುಗಿದಂತೆ ಅತಿಘೋರ ಶಬ್ದದೊಂದಿಗೆ ಹೆಬ್ಬಂಡೆಗಳು, ಒಣಗಿದ ಮರಗಳನ್ನು ಆಪೋಶನ ಪಡೆದ ಧೌಲಿಗಂಗಾ ಪ್ರಪಾತ, ಕಂದಕಗಳನ್ನೇ ತುಂಬಿ ರಭಸದಿಂದ ಭೋರ್ಗರೆದಿದೆ.

    ರೇನಿಯಲ್ಲಿ ರಿಷಿ ಗಂಗಾ ನದಿಯು ಧೌಲಿ ಗಂಗಾ ನದಿಯನ್ನು ಸೇರುತ್ತದೆ. ಹೀಗಾಗಿ, ಧೌಲಿ ಗಂಗಾ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಯಿತು. ಗ್ರಾಮದಲ್ಲಿದ್ದ ಐದಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರೇನಿ ಎಂಬಲ್ಲಿ ರಿಷಿ ಗಂಗಾ ನದಿಯನ್ನು ಸೇರಿದ ಧೌಲಿ ಗಂಗಾ ಮತ್ತಷ್ಟು ಪ್ರವಾಹರೂಪಿಯಾಗಿ ತಮ್ಮ ಆಕಾರ, ಆವೇಷವನ್ನು ಮತ್ತಷ್ಟು ಇಮ್ಮಡಿಗೊಳಿಸಿಕೊಂಡಿದೆ. ದಿಢೀರ್ ಪ್ರವಾಹದಿಂದಾಗಿ ಚಮೋಲಿ ನದಿಪಾತ್ರದಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ನದಿ ಪಕ್ಕದಲ್ಲೇ ಇದ್ದ ಜೋಷಿಮಠ ಹೆದ್ದಾರಿ, ಮಲಾರಿ ಬ್ರಿಡ್ಜ್ ಹಿಮಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ.

    ಸಂಪೂರ್ಣ ನೆಲಸಮ:
    ತಪೋವನ ಬಳಿಯಲ್ಲಿ ನಡೆಯುತ್ತಿದ್ದ ರಿಷಿಗಂಗಾ ಜಲವಿದ್ಯುತ್ ಯೋಜನೆಯ ಕಾಮಗಾರಿ ಪ್ರದೇಶವೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಡೀ ಯೋಜನೆಯೇ ನೀರು ಪಾಲಾಗಿದೆ. ಝುಲ್ಲಾ ಎಂಬಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಎರಡು ಸೇತುವೆಗಳೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ನದಿ ಪಾತ್ರದಲ್ಲಿದ್ದ ಗ್ರಾಮಗಳ ಸಂಪರ್ಕವೇ ಕಡಿತವಾಗಿದೆ.

    2013ರಲ್ಲಿ ಜಲ ಪ್ರಳಯ:
    ಉತ್ತರಾಖಂಡ್‍ನಲ್ಲಿ ಈ ರೀತಿಯ ಪ್ರಕೃತಿ ಪ್ರಕೋಪ 2013ರಲ್ಲೂ ಸಂಭವಿಸಿತ್ತು. ಅಂದು ಮೇಘಸ್ಫೋಟದಿಂದಾಗಿ ಕೇದಾರನಾಥ ಪ್ರದೇಶ ಸಂಪೂರ್ಣ ಜಲಪ್ರಳಯ ಕಂಡಿತ್ತು. ಆದರೆ ಕೇದಾರನಾಥ ದೇಗುಲ ಮಾತ್ರ ಭಯಂಕರ ಪ್ರವಾಹವನ್ನು ತಾಳಿಕೊಂಡಿತ್ತು. ಇದೀಗ ಹಿಮಪ್ರವಾಹ ಸಂಭವಿಸಿದ್ದು, ಉತ್ತರಾಖಂಡ್‍ನ ಜನ ಮತ್ತೊಮ್ಮೆ ಭೀತಿಗೊಂಡಿದ್ದಾರೆ.

    150 ಮಂದಿ ಸಾವು ಸಾಧ್ಯತೆ:
    ಈ ದುರಂತದಲ್ಲಿ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೊಚ್ಚಿಹೋಗಿರುವ ಆತಂಕ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ 10 ಮಂದಿ ಹಿಮಪ್ರವಾಹ ಮಿಶ್ರಿತ ಕೆಸರಿನಲ್ಲಿ ಭೂ ಸಮಾಧಿಯಾಗಿದ್ದಾರೆ. ರಿಷಿಗಂಗಾ ನದಿಯ ವಿದ್ಯುತ್ ಯೋಜನೆಯಾದ ವಿಷ್ಣು ಪ್ರಯಾಗ್ ಹೈಡ್ರೋ ಪವರ್ ಯೂನಿಟ್‍ಗೆ ಭಾರೀ ಹಾನಿ ಉಂಟಾಗಿದೆ.

    ಪವರ್ ಪ್ರಾಜೆಕ್ಟ್‌ಗಾಗಿ ಸುರಂಗ ಮಾರ್ಗದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ, ಏಕಾಏಕಿ ನುಗ್ಗಿದ ಹಿಮ ಪ್ರವಾಹದಿಂದಾಗಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

    ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ:
    ಪ್ರಕೃತಿ ಪ್ರಕೋಪದ ಸುದ್ದಿ ತಿಳಿಯುತ್ತಿದ್ದಂತಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತು. ಸ್ಥಳಕ್ಕೆ 600 ಯೋಧರು, 200ಕ್ಕೂ ಅಧಿಕ ಐಟಿಬಿಪಿ ಸಿಬ್ಬಂದಿ ದೌಡಾಯಿಸಿ ನಂದಾದೇವಿ ಹಿಮ ಪರ್ವತಸೃಷ್ಟಿಸಿದ ಅವಾಂತರದ ರಾಡಿಯಲ್ಲೇ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆಳೆತ್ತರದ ರಾಡಿಯಲ್ಲೇ ಸರ್ಚಿಂಗ್ ಆಪರೇಷನ್ ಕೈಗೊಂಡಿದ್ದಾರೆ. ಎಂಐ 17 ಹೆಲಿಕಾಪ್ಟರ್, ಧ್ರುವ ಹೆಲಿಕಾಪ್ಟರ್‌ಗಳು, ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ಹಾಗೂ ಪತ್ತೆ ಕಾರ್ಯಕ್ಕೆ ಕೈ ಜೋಡಿಸಿವೆ.

    ಅಣೆಕಟ್ಟು ಧ್ವಂಸ:
    ತಪೋವನದಲ್ಲಿ ಬೆಟ್ಟದಿಂದ ಕೆಳಗಿದ್ದ ಅಣೆಕಟ್ಟಿನ ಮೇಲೆ ಹೆಬ್ಬಂಡೆಯೊಂದು ಬಿದ್ದಿದೆ ಎನ್ನಲಾಗ್ತಿದೆ. ಇದರಿಂದಾಗಿ ಅಣೆಕಟ್ಟಿನ ಒಂದು ಭಾಗ ಡ್ಯಾಮೇಜ್ ಆಗಿದೆ. ರಿಷಿಗಂಗಾ ಯೋಜನೆಯೂ ನಾಶವಾಗಿದೆ. ಡ್ಯಾಂ ನೀರು ವೇಗವಾಗಿ ಅಲಕನಂದಾ ನದಿಗೆ ಹರಿದುಹೋಗ್ತಿದೆ. ಹಿಮ ಸೃಷ್ಟಿಸಿದ ಈ ಪ್ರವಾಹದಲ್ಲಿ 2 ಸೇತುವೆಗಳು ಕೂಡಾ ಕೊಚ್ಚಿಹೋಗಿವೆ. ಅಲಕಾನಂದ ನದಿಯಲ್ಲಿ ನೀರು ಹೆಚ್ಚಾಗುವ ಆತಂಕದಿಂದಾಗಿ ನದಿಯಲ್ಲಿನ ಮಾತಾ ದೇವಾಲಯದಲ್ಲಿ ಭಕ್ತರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ.

    ಹೈ ಅಲರ್ಟ್ ಘೋಷಣೆ:
    ಸದ್ಯ ಹಿಮಪರ್ವತ ಸ್ಫೋಟದಿಂದಾಗಿ ಅಲಕನಂದ ನದಿ ನೀರು ರಭಸವಾಗಿ ಹರಿಯುತ್ತಿದೆ. ಹಾಗಾಗಿ ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕರ್ಣಪ್ರಯಾಗ, ಕೇದಾರನಾಥ ಹಾಗೂ ಬದ್ರೀನಾಥದವರೆಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಮೊದಲು ನದಿ ಪಾತ್ರದ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರವಾಹ ಸುಮಾರು 250 ಕಿಲೋ ಮೀಟರ್ ದೂರದವರೆಗೆ ಹರಿಯಬಹುದು ಅಂತಾ ಅಂದಾಜು ಮಾಡಲಾಗಿದೆ. ಹೀಗಾಗಿ ಪೊಲೀಸರು ಧ್ವನಿವರ್ಧಕಗಳ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನ ನೀಡ್ತಿದ್ದಾರೆ.

    ಅಲಕಾನಂದ ಹಾಗೂ ಸುತ್ತಮುತ್ತಲ ಪ್ರದೇಶದ ಜನರನ್ನು ತುರ್ತಾಗಿ ಸ್ಥಳಾಂತರಿಸಲಾಗುತ್ತಿದೆ. ಸಮೀಪದ ಭಗೀರಥಿ ನದಿಯ ಪ್ರವಾಹ ಸ್ವಲ್ಪ ಕಡಿಮೆಯಾಗಿದೆಯಾದರೂ, ಅಲಕಾನಂದ, ಶ್ರೀನಗರ ಡ್ಯಾಂ ಹಾಗೂ ರಿಷಿಕೇಷ ಡ್ಯಾಂಗಳ ನೀರನ್ನು ಆದಷ್ಟು ಬೇಗ ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.