Tag: ಉತ್ತರಕರ್ನಾಟಕ

  • ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಬಾಗಲಕೋಟೆ: ಸದ್ಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಪರ್ಸೆಂಟೇಜ್ ಪ್ರಕರಣ ಕಾವು ಪಡೆದುಕೊಂಡಿರುವ ಹೊತ್ತಿನಲ್ಲೇ ಶಿರಹಟ್ಟಿ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ.

    DINGALESWARA

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಈಚೆಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಅವು ಏನಾಗ್ತಿವೆ ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬ ಸ್ವಾಮೀಜಿಗೆ ಅನುದಾನ ಬಿಡುಗಡೆ ಮಾಡಬೇಕಿದ್ರೆ 30 ಪರ್ಸೆಂಟ್ ಕಮಿಷನ್ ಕೊಡಬೇಕು. ಆಗಲೇ ಮಠಗಳಳಲ್ಲಿ ಕಟ್ಟಡ ಕೆಲಸ ಶುರುವಾಗುತ್ತದೆ. ನೀವು ಇಷ್ಟು ದುಡ್ಡು ಕಟ್ಟದಿದ್ರೆ ನಿಮ್ಮ ಕೆಲಸ ಆಗಲ್ಲ ಎಂದು ಅಧಿಕಾರಿಗಳೇ ಹೇಳುವ ಪರಿಸ್ಥಿತಿ ಬಂದಿದೆ ಅಂದರೆ, ಭ್ರಷ್ಟಾಚಾರ ಎಲ್ಲಿಗೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

    prahlad joshi

    ಈಗ ಕಿಡಿಗೇಡಿಗಳ ಸರ್ಕಾರವೇ ಬರುತ್ತಿದೆ. ಉತ್ತರ ಕರ್ನಾಟಕಕ್ಕಾಗಿ ಕಾಕಾಗಳು (ಖಾದಿ -ಖಾವಿ) ಒಂದಾಗಿವೆ. ಆದರೆ, ಎಂದಿಗೂ ನಮ್ಮ ಹಕ್ಕು, ಸ್ವತ್ತನ್ನು ಕಳೆದುಕೊಳ್ಳಬಾರದು, ಅನ್ನೋದು ಎಸ್.ಆರ್.ಪಾಟೀಲ್ ಅವ್ರ ತಂಡದ ಮಾತಾಗಿದೆ. ಇನ್ನೇನು ಕೃಷ್ಣಾ ಮಹದಾಯಿ, ನವಲಿ ಯೋಜನೆಗಳು ಕಾರ್ಯರೂಪಕ್ಕೆ ಬಂದ್ರೆ ನಿಮ್ಮ ಭಾಗದ ಜನರ ಬಾಳು ಹಸನಾಗುತ್ತದೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

    SR PATIL

    ಕೆಲಸ ಮಾಡದಿದ್ರೆ ಏನ್ ಉಪಯೋಗ?: ಈ ಭಾಗದ ಮಂತ್ರಿಯೊಬ್ಬ ಸದಾ ಪ್ರಧಾನಮಂತ್ರಿ ಅವರೊಂದಿಗೆ ಇರ್ತಾನೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಏನೂ ಕೊಡುಗೆ ನೀಡ್ತಿಲ್ಲ. ಪ್ರಧಾನಿ ಹಿಂದೆ ಓಡಾಡೋದೆ ದೊಡ್ಡ ಕೆಲಸ ಅನ್ಕೊಂಡಿದ್ದಾನೆ. ನೀನು ಪಿಎಂ ಜೊತೆ ಅಡ್ಡಾಡಿದ್ರೂ, ಈ ಭಾಗಕ್ಕೆ ಏನು ಮಾಡದೇ ಇದ್ರೆ, ಪ್ರಯೋಜನ ಇಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಏಕವಚನದಲ್ಲೇ ಸ್ವಾಮೀಜಿ ಲೇವಡಿ ಮಾಡಿದರು.

    ದೆಹಲಿ ಸರ್ಕಾರಕ್ಕೆ ಟಾಂಗ್: ನಮ್ಮ ಉತ್ತರ ಕರ್ನಾಟಕದವರು ಸ್ವಲ್ಪ ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಕೆಲ ಭಾಗಗಳಲ್ಲಿ ಸ್ವಾಮೀಜಿಗಳಲ್ಲೇ ಇರುವ ತಾರತಮ್ಯ ನಿಲ್ಲಬೇಕು. ಈ ಹೋರಾಟ ಇಲ್ಲಿಗೆ ನಿಲ್ಲೋದು ಬೇಡ. ಇದು ಮುಂದುವರಿಯಬೇಕು. ಎಲ್ಲಿಯ ತನಕ ಈ ಭಾಗ ಅಭಿವೃದ್ಧಿ ಆಗುವವರೆಗೆ ನಿಮ್ಮ ಹೋರಾಟ ನಿಲ್ಲಬಾರದು. ನಾವೆಲ್ಲ ನಿಮ್ಮ ಜೊತೆಗಿರುತ್ತೇವೆ ಎಂದು ಹೋರಾಟಕ್ಕೆ ಬೆಂಬಲ ಘೋಷಿಸಿದರು.

  • ನೀವೂ ಟ್ರೈ ಮಾಡಿ ಉತ್ತರಕರ್ನಾಟಕದ ಪ್ರಸಿದ್ಧ ಎಣ್ಣೆಗಾಯಿಪಲ್ಯ

    ನೀವೂ ಟ್ರೈ ಮಾಡಿ ಉತ್ತರಕರ್ನಾಟಕದ ಪ್ರಸಿದ್ಧ ಎಣ್ಣೆಗಾಯಿಪಲ್ಯ

    ತ್ತರ ಕಾರ್ನಟಕದ ಅಡುಗೆ ಕೊಂಚ ಖಾರ ಜಾಸ್ತಿಯಾದರೂ ರುಚಿ ಹೆಚ್ಚು ಎನ್ನುವುದು ತಿಳಿದಿದೆ. ಉತ್ತರ ಕರ್ನಾಟಕದ ಖಾದ್ಯಗಳು ಸವಿಯಲು ಬಲುರುಚಿಯಾಗಿರುತ್ತದೆ. ಹಾಗೆಯೇ ಬಾಯಲ್ಲಿ ನೀರೂರಿಸುವ ಉತ್ತರಕರ್ನಾಟಕದ ಪ್ರಸಿದ್ಧ ಬದನೇಕಾಯಿ ಎಣ್ಣೆಗಾಯಿಪಲ್ಯ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬಿಳಿ ಎಳ್ಳು- 2 ಟೇಬಲ್ ಸ್ಪೂನ್
    * ಶೇಂಗಾ- 2 ಟೇಬಲ್ ಸ್ಪೂನ್
    * ಒಣಕೊಬ್ಬರಿ- ಅರ್ಧ ಕಪ್
    * ಇರುಳ್ಳಿ -2 ದೊಡ್ಡ ಗಾತ್ರದ್ದು
    * ಶುಂಠಿ- ಒಂದು ಇಂಚಿನಷ್ಟು
    * ಬೆಳ್ಳುಳ್ಳಿ- 4 ರಿಂದ 5
    * ಲವಂಗ- ನಾಲ್ಕು
    * ಕರಿಬೇವು
    * ಚೆಕ್ಕೆ- 3 ರಿಂದ 4
    * ಅರಿಶಿಣಪುಡಿ- 1 ಟೀ ಸ್ಪೂನ್
    * ಬೆಲ್ಲ- ಒಂದು ಇಂಚು
    * ಖಾರದಪುಡಿ- 3 ಟೀ ಸ್ಪೂನ್
    * ದನಿಯಾಪುಡಿ – 1 ಟೀ ಸ್ಪೂನ್
    * ಹುಣಸೆಹಣ್ಣು ಸ್ವಲ್ಪ
    * ಸಾಸಿವೆ- ಒಂದು ಟೀ ಸ್ಪೂನ್
    * ಎಣ್ಣೆ ಒಂದು ಕಪ್
    * ಒಣಮೆಣಸು- 3 ರಿಂದ 4

     

    ಮಾಡುವ ವಿಧಾನ:
    * ಮೊದಲು ಒಂದು ತವಾಗೆ ಶೇಂಗಾವನ್ನು ಹಾಕಿ ಸಿಪ್ಪೆ ಬಿಡುವವರೆಗೆ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.
    * ಹಾಗೇ ಸಣ್ಣ ಉರಿ ಬೆಂಕಿಯಲ್ಲಿ ಬಿಳಿ ಎಳ್ಳನ್ನು ತವಾಗೆ ಹಾಕಿ ಬಿಳಿ ಎಳ್ಳಿನ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ಹೀಗೆಯೆ ಕೊಬ್ಬರಿಯನ್ನು ಹಸಿ ಅಂಶ ಹೋಗುವವರೆಗೂ ಹುರಿದು ತೆಗೆದಿಟ್ಟುಕೊಳ್ಳಬೇಕು.
    *ನಂತರ ಒಂದು ಪಾತ್ರೆಗೆ ಒಂದು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿಯಾದ ಮೇಲೆ ಈರುಳ್ಳಿ ಹಾಕಬೇಕು. ಈರುಳ್ಳಿ ಕೆಂಪು ಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಬೇಕು.
    * ನಂತರ ಇದೇ ಪಾತ್ರೆಗೆ ಒಂದು ಇಂಚಿನಷ್ಟು ಶುಂಠಿ, 4 ರಿಂದ 5 ಬೆಳ್ಳುಳ್ಳಿ, ನಾಲ್ಕು ಲವಂಗ ಹಾಗೂ ಕರಿಬೇವು, ಚೆಕ್ಕೆಯನ್ನು ಮೂರರಿಂದ ನಾಲ್ಕು ಹಾಕಿ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.

    * ನಂತರ ಮಿಕ್ಸಿಜಾರಿಗೆ ಹುರಿದು ತೆಗೆದಿಟ್ಟ ಎಳ್ಳು, ಕೊಬ್ಬರಿ ತುರಿ, ಶೇಂಗಾವನ್ನು ಹಾಕಿ ರುಬ್ಬಿಕೊಳ್ಳಬೇಕು.
    * ಈಗ ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು
    * ನಂತರ ಈ ಮೊದಲೇ ಹುರಿದು ತೆಗೆದಿಟ್ಟಿರುವ ಈರುಳ್ಳಿ ಮಸಾಲೆಯನ್ನು ಮಿಕ್ಸಿಜಾರಿಗೆ ಹಾಕಿ ನಂತರ ಇದರ ಜೊತೆಯಲ್ಲಿ ಅರಿಶಿಣಪುಡಿ ಒಂದು ಇಂಚು ಬೆಲ್ಲ, 3 ಟೀ ಸ್ಪೂನ್ ಖಾರದಪುಡಿ ಹಾಗೂ 1 ಟೀ ಸ್ಪೂನ್ ದನಿಯಾಪುಡಿ ಹಾಗೂ ಸ್ವಲ್ಪ ಗರಂ ಮಸಾಲೆಯನ್ನು ಹಾಕಿ ರುಬ್ಬಿಕೊಳ್ಳ ಬೇಕು. ಆದರೆ ರುಬ್ಬಿಕೊಳ್ಳಲು ನೀರನ್ನು ಬಳಸ ಬಾರದು ಹುಣಸೆಹಣ್ಣಿನ ರಸದಲ್ಲಿಯೇ ಮಸಸಾಲೆಯನ್ನು ರುಬ್ಬಿಕೊಳ್ಳಬೇಕು.
    * ಈಗಾಗಲೇ ರುಬ್ಬಿ ತೆಗೆದಿರುವ ಎರಡು ಮಸಾಲೆಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಉಪ್ಪು ನೀರಿನಲ್ಲಿ ಅದ್ದಿಟ್ಟಿರುವ ಬದನೆಕಾಯಿಗೆ ಈ ಮಸಾಲೆಯನ್ನು ತುಂಬ ಬೇಕು.


    * ನಂತರ ಒಂದು ಸ್ಟವ್ ಮೇಲೆ ಪಾತ್ರೆ ಇಟ್ಟು 4 ರಿಂದ 5 ಸ್ಪೂನ್ ಎಣ್ಣೆಹಾಕಿ ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಮತ್ತು ಒಣಮೆಣಸು ಹಾಕಿ ಫ್ರೈ ಮಾಡಿ ಮಸಾಲೆ ತುಂಬಿದ ಬದನೆಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ಒಂದು ಕಪ್‍ನಷ್ಟು ನೀರನ್ನು ಹಾಕಿ ಸಣ್ಣ ಉರಿ ಬೆಂಕಿಯಲ್ಲಯೇ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಎಣ್ಣೆಗಾಯಿಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ಎಚ್‍ಡಿಕೆ ತಾರತಮ್ಯ ಮುಂದುವರಿಸಿದರೆ ಪ್ರತ್ಯೇಕ ರಾಜ್ಯದ ಹೋರಾಟ ಬೆಂಬಲಿಸುವ ಅಗತ್ಯವಿದೆ: ಬಿಜೆಪಿ ಶಾಸಕ

    ಎಚ್‍ಡಿಕೆ ತಾರತಮ್ಯ ಮುಂದುವರಿಸಿದರೆ ಪ್ರತ್ಯೇಕ ರಾಜ್ಯದ ಹೋರಾಟ ಬೆಂಬಲಿಸುವ ಅಗತ್ಯವಿದೆ: ಬಿಜೆಪಿ ಶಾಸಕ

    ಹಾವೇರಿ: ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗಕ್ಕೆ ಹಣ ನೀಡಿಲ್ಲ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ಪ್ರತ್ಯೇಕ ರಾಜ್ಯದ ಕೂಗಿಗೆ ಧ್ವನಿಗೂಡಿಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಉತ್ತರಕರ್ನಾಟಕ್ಕೆ ಆಗುವ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟದ ಕೂಗು ಬಲಗೊಳ್ಳುತ್ತದೆ. ಅಲ್ಲದೇ ಜಿಲ್ಲೆಗೆ ಬಿಜೆಪಿ ಸರ್ಕಾರ ಇದ್ದಾಗ ಮೆಡಿಕಲ್ ಕಾಲೇಜು ಮಂಜೂರು ಮಾಡಿತ್ತು. ಸದ್ಯ ಕಾಲೇಜು ಆರಂಭಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.

    ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತೆರಿಗೆ ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಕೇವಲ ಒಂದು ಅಥವಾ ಎರಡು ಜಿಲ್ಲೆಗಳಿಗೆ ನೀಡುವುದು ಸರಿಯಲ್ಲ. ಉತ್ತರ ಕರ್ನಾಟಕ ಮಂದಿಗೆ ಈ ಕುರಿತು ತೀವ್ರ ಅಸಮಾಧಾನವಿದೆ. ಶಾಸಕರೇ ನೇರ ಮನವಿ ಮಾಡಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ಅದ್ದರಿಂದ ಈ ವೇಳೆ ಪ್ರತೇಕ ರಾಜ್ಯ ಆಗುವುದು ಅವಶ್ಯಕವಾಗಿದೆ ಎಂದು ಅನಿಸುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುತ್ತದೆ. ಅಲ್ಲದೇ ಆಗಸ್ಟ್ 2ರ ಬಂದ್‍ಗೆ ನಾವು ಬೆಂಬಲ ನೀಡಬೇಕಿದೆ. ತಾರತಮ್ಯದ ವಿರುದ್ಧ ಕಠಿಣ ಪ್ರತಿಭಟನೆ ಅಗತ್ಯವಿದೆ ಎಂದರು.

    ಇದೇ ವೇಳೆ ಸಿಎಂ ಹೇಳಿಕೆ ವಿರುದ್ಧ ಕಿಡಿಕಾರಿದ ಶಾಸಕರು, ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ. ಇವರು ಮತ ಹಾಕಿಲ್ಲ ಎಂದು ಹೇಳುವುದು ಸರಿಯಲ್ಲ. ಅಖಂಡ ಕರ್ನಾಟಕ ನಮಗೂ ಬೇಕು. ಆದರೆ ಅಭಿವೃದ್ಧಿಗಾಗಿ ಹೆಚ್ಚು ಹಣ ನೀಡುತ್ತಿಲ್ಲ. ಈ ರೀತಿ ಕಡೆಗಣಿಸಿದ್ದರಿಂದ ನಾವು ಶಾಸಕರಾಗಿ ಅವರೊಂದಿಗೆ ಇದ್ದು ಏನು ಪ್ರಯೋಜನ? ಪ್ರತ್ಯೇಕ ರಾಜ್ಯ ಹೋರಾಟದ ಕೂಗು ಮೊಳಗಲು ಸಿಎಂ ಕುಮಾರಸ್ವಾಮಿ ಕಾರಣ ಎಂದು ಆರೋಪಿಸಿದರು.

  • ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ – ರೈತ ಸಂಘ ಸ್ಪಷ್ಟನೆ

    ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ – ರೈತ ಸಂಘ ಸ್ಪಷ್ಟನೆ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆಂದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಕೇಳಿಬಂದಿದೆ.

    ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಚೊಚ್ಚಲ ಬಜೆಟ್‍ ಮಂಡಿಸಿದ್ದೇ ತಡ ಅದರಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಈಗ ಆ ಬೆನ್ನಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಕೇಳಿ ಬರುತ್ತಿದೆ.

    ಈಗಾಗಲೇ ಪ್ರತ್ಯೇಕ ರಾಜ್ಯ ಕೂಗು ಭುಗಿಲೆದ್ದಿದ್ದು ಅಗಸ್ಟ್ 2 ರಂದು 13 ಜಿಲ್ಲೆಗಳನ್ನು ಒಳಗೊಂಡಂತೆ ಬಂದ್ ಆಚರಿಸಲಾಗುವುದು ಎಂದು ಉತ್ತರ ಕರ್ನಾಟಕ ರೈತ ಸಂಘ ಘೋಷಿಸಿದೆ. ಪ್ರತ್ಯೇಕ ರಾಜ್ಯವಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಪ್ರಾರಂಭ ಮಾಡಲಾಗುವುದು ಅಂತ ಸಂಘ ತಿಳಿಸಿದೆ.

    ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಹೊಸ ಬಜೆಟ್, ಸಮಗ್ರ ಕರ್ನಾಟಕ ಅಭಿವೃದ್ಧಿಯ ದೃಷ್ಟಿಕೋನ ಹೊಂದಿಲ್ಲ ಎಂದು ಸಾಕಷ್ಟು ವಿರೋಧ ಕೇಳಿಬಂದಿತ್ತು. ಆದರೆ ಈಗ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಉತ್ತರ ಕರ್ನಾಟಕ ರೈತರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.