Tag: ಉತ್ತರ

  • ಹಾವಿನಿಂದ ಕಚ್ಚಿಸಿ ಪತ್ನಿ ಕೊಂದಿದ್ದಾತನಿಗೆ ಡಬಲ್ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ

    ಹಾವಿನಿಂದ ಕಚ್ಚಿಸಿ ಪತ್ನಿ ಕೊಂದಿದ್ದಾತನಿಗೆ ಡಬಲ್ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ

    ತಿರುವನಂತಪುರಂ: ಕೇರಳದಲ್ಲಿ ಹಾವಿನಿಂದ ಕಚ್ಚಿಸಿ ಪತ್ನಿಯನ್ನ ಕೊಂದಿದ್ದ ಖತರ್ನಾಕ್ ಪತಿಗೆ ಕೊನೆಗೂ ಶಿಕ್ಷೆಯಾಗಿದೆ.

    ಯಾರಿಗೂ ಅನುಮಾನ ಬಾರದಂತೆ, ಹಾವಿನಿಂದ ಕಚ್ಚಿಸಿ ಪತ್ನಿ ಉತ್ತರಾಳನ್ನು ಪತಿ ಸೂರಜ್ ಕೊಲೆ ಮಾಡಿದ್ದ. ಈತನ ಮೇಲಿನ ಕೊಲೆ ಆರೋಪ ಸಾಬೀತಾಗಿ ಇಂದಿಗೆ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇದೀಗ ಸೂರಜ್‍ಗೆ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ 5 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಏನಿದು ಪ್ರಕರಣ?:
    ಉತ್ತರಾಗೆ 20201 ಫೆಬ್ರವರಿಯಲ್ಲಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇದ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು. ಆದರೆ ಉತ್ತರಾಳ ಪೋಷಕರು ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.  ಇದನ್ನೂ ಓದಿ: ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತವೇ ಕಾದಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿದ್ದವು. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ಇಂಟರ್ನೆಟ್‍ನಲ್ಲಿ ವಿಡಿಯೋ ಕೂಡ ನೋಡಿದ್ದ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

    ಸೂರಜ್ 10 ಸಾವಿರ ರೂ. ಪಾವತಿಸಿ ಕೊಲ್ಲಂ ಜಿಲ್ಲೆಯ ಹಾವಾಡಿಗ ಸುರೇಶ್‍ನಿಂದ ಹಾವನ್ನು ಖರೀದಿಸಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಅಳಿಯನ ಮೇಲೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದ ಉತ್ತರಾಳ ಪೋಷಕರು ಮಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

    ಆರೋಪಿ ಮೇ 6ರಂದು ಮತ್ತೆ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಹಾವನ್ನು ಕೊಂದು ಒಳ್ಳೆಯವನಂತೆ ನಾಟಕವಾಡಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಪತ್ನಿಯನ್ನ ಕೊಂದರೆ ಆಕೆಯ ಹೆಸರಿನಲ್ಲಿದ್ದ ಆಸ್ತಿ ತನಗೆ ಬರುತ್ತದೆ ಎಂದು ಸೂರಜ್ ಕೃತ್ಯ ಎಸೆಗಿದ್ದಾನೆ. ಅಷ್ಟೇ ಅಲ್ಲದೆ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಸ್ಪಷ್ಟವಾಗಿತ್ತು.

  • ಪರೀಕ್ಷೆಯಲ್ಲೂ ಪಬ್‍ಜಿ ಪ್ರೇಮ ಮೆರೆದ ಆಟಗಾರ!

    ಪರೀಕ್ಷೆಯಲ್ಲೂ ಪಬ್‍ಜಿ ಪ್ರೇಮ ಮೆರೆದ ಆಟಗಾರ!

    ಗದಗ: ಪಬ್‍ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ ಪಿಯು ವಿದ್ಯಾರ್ಥಿಯೊರ್ವ ತನ್ನ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಪಬ್‍ಜಿ ಗೇಮ್ ಆಡುವುದು ಹೇಗೆ ಎಂದು ಬರೆದಿಟ್ಟಿದ್ದು, ಪರಿಣಾಮ ಪರೀಕ್ಷೆಯಲ್ಲಿ ಫೇಲ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ.

    ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ, ವರುಣ್ (ಹೆಸರು ಬದಲಾಯಿಸಲಾಗಿದೆ) ತನ್ನ ಅರ್ಥಶಾಸ್ತ್ರ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪಬ್‍ಜಿ ಗೇಮ್ ಆಡುವುದು ಹೇಗೆ ಎಂಬುವುದನ್ನೇ ಬರೆದು ಬಂದಿದ್ದ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣನಾಗಿದ್ದ ವಿದ್ಯಾರ್ಥಿ ಕಾಲೇಜಿಗೆ ಸೇರಿದ ಬಳಿಕ ಮೊಬೈಲ್‍ನಲ್ಲಿ ಪಬ್‍ಜಿ ಆಡುವುದನ್ನು ಮನರಂಜನೆಗಾಗಿ ಆರಂಭಿಸಿದ್ದ. ಆದರೆ ದಿನಕಳೆದಂತೆ ಆತನಿಗೆ ಗೇಮ್ ಆಡುವುದು ಚಟವಾಗಿ ಮಾರ್ಪಟ್ಟಿತ್ತು. ಮನೆಯಲ್ಲಿ ಪೋಷಕರು ಪ್ರಶ್ನೆ ಮಾಡಿದರು ಕೂಡ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿರುವುದಾಗಿ ಹೇಳಿ ಗೇಮಿನ ದಾಸನಾಗಿದ್ದ. ಆತನ ಮೇಲೆ ಈ ಗೇಮ್ ಎಷ್ಟು ಪ್ರಭಾವ ಉಂಟು ಮಾಡಿತ್ತು ಎಂದರೆ, ಕಾಲೇಜು ತರಗತಿಗಳನ್ನು ಗೈರು ಹಾಜರಾಗಿ ಪಬ್‍ಜಿ ಗೇಮ್ ಆಡುತ್ತಲೇ ಕುಳಿತಿರುತ್ತಿದ್ದ. ಪರೀಕ್ಷೆಯ ಸಮಯವೂ ಕೂಡ ವಿದ್ಯಾರ್ಥಿಯ ಗಮನಕ್ಕೆ ಬಂದಿರಲಿಲ್ಲ.

    ಸದ್ಯ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಆತನ ತಪ್ಪು ಅರಿವಾಗಿದ್ದು, ಪೋಷಕರು ಕೂಡ ಮೊಬೈಲ್ ದೂರ ಮಾಡಿದ್ದಾರೆ. ವರುಣ್‍ನನ್ನು ಗೇಮ್ ನಿಂದ ದೂರ ಮಾಡಲು ಪೋಷಕರು ಮನೋತಜ್ಞರ ಸಹಾಯವನ್ನು ಪಡೆದಿದ್ದರು ಎಂಬ ಮಾಹಿತಿ ಲಭಿಸಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ, ನಾನು ಪರೀಕ್ಷೆಯಲ್ಲಿ ಬರೆದಿರುವ ಉತ್ತರವನ್ನು ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೆ ಕೋಪ ಬರುತ್ತದೆ. ಇಗ ನನಗೆ ಮತ್ತೆ ಬರೆಯಲು ಜೂನ್ ನಲ್ಲಿ ಅವಕಾಶ ಇದ್ದು, ಪರೀಕ್ಷೆಗಾಗಿ ತಯಾರಿ ನಡೆಸಿದ್ದೇನೆ. ಆದರೆ ಗೇಮ್ ದೂರವಾದರೂ ಈಗಲು ನನಗೆ ಆದರ ಚಿತ್ರಣವೇ ಕಣ್ಣ ಮುಂದೆ ಬರುತ್ತದೆ ಎಂದು ತಿಳಿಸಿದ್ದಾನೆ.

  • ಪ್ರಶ್ನೋತ್ತರಕ್ಕೆ ಮೀಸಲಾಗಿರುವ ಕೋರಾ ತಾಣ ಹ್ಯಾಕ್

    ಪ್ರಶ್ನೋತ್ತರಕ್ಕೆ ಮೀಸಲಾಗಿರುವ ಕೋರಾ ತಾಣ ಹ್ಯಾಕ್

    ಕ್ಯಾಲಿಫೋರ್ನಿಯಾ: ಪ್ರಶ್ನೆ ಮತ್ತು ಉತ್ತರಗಳಿಗೆ ಮೀಸಲಾಗಿರುವ ಜನಪ್ರಿಯ ಕೋರಾ ತಾಣ ಹ್ಯಾಕ್ ಆಗಿದೆ. ಗ್ರಾಹಕರ ವಿವರಗಳು ಹ್ಯಾಕ್ ಆಗಿದೆ ಎಂದು ಕೋರಾ ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ.

    ಒಟ್ಟು 10 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಹ್ಯಾಕ್ ಆಗಿದೆ. ಬಳಕೆದಾರ ಹೆಸರು, ಇಮೇಲ್ ಐಡಿ, ಪಾಸ್‍ವರ್ಡ್, ಪ್ರಶ್ನೆ, ಉತ್ತರ, ಕಮೆಂಟ್, ಅಪ್‍ವೋಟ್, ಡೈರೆಕ್ಟ್ ಮೆಸೇಜ್‍ಗಳನ್ನು ಹ್ಯಾಕರ್ ಗಳು ಪಡೆದುಕೊಂಡಿದ್ದಾರೆ ಎಂದು ಕೋರಾ ತಿಳಿಸಿದೆ.

    ಶುಕ್ರವಾರ ತಾಣ ಹ್ಯಾಕ್ ಆಗಿರುವ ವಿಚಾರ ಗಮನಕ್ಕೆ ಬಂದಿದೆ. ಭದ್ರತಾ ವ್ಯವಸ್ಥೆ ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ. ಅಷ್ಟೇ ಅಲ್ಲದೇ ಯಾವೆಲ್ಲ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನುವುದನ್ನು ಪತ್ತೆ ಮಾಡುತ್ತೇವೆ ಎಂದು ಕೋರಾ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.

    ಫೇಸ್‍ಬುಕ್ ಸಂಸ್ಥೆಯು ಮಾಜಿ ಉದ್ಯೋಗಿಗಳಾದ ಆಡಂ ಮತ್ತು ಚಾರ್ಲಿ ಚೀವರ್ 2009ರಲ್ಲಿ ಕೋರಾ ತಾಣವನ್ನು ಹುಟ್ಟಿಹಾಕಿದ್ದರು. ವಿಶ್ವಾದ್ಯಂತ ಒಟ್ಟು 19 ಕೋಟಿ ಬಳಕೆದಾರರು ಕೋರಾವನ್ನು ಬಳಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಮನಿಲಾ: ನೀವು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದರೆ ಏನು ಮಾಡ್ತೀರ ಅಂತ ಕೇಳಿದಾಗ ಎಲ್ಲಾ ಸ್ಪರ್ಧಿಗಳು ಸಮಾಜಕ್ಕಾಗಿ ಏನಾದ್ರೂ ಸಹಾಯ ಮಾಡ್ತೀನಿ ಎಂದು ಹೇಳಿದ್ರೆ, ಒಬ್ಬ ಸ್ಪರ್ಧಿ ಮಾತ್ರ ಸರಿಯಾಗಿ ಊಟ ಮಾಡಿ ತುಂಬಾ ದಿನ ಆಯ್ತು…. ಬಿಸಿಬೇಳೆ ಬಾತ್ ತಿಂತೀನಿ ಅಂತ ಹೇಳೋದನ್ನ ಜಾಹಿರಾತೊಂದರಲ್ಲಿ ಕೇಳಿರ್ತೀರ. ಆದೇ ರೀತಿ ಇಲ್ಲೊಬ್ಬ ಸ್ಪರ್ಧಿ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪ್ರಾಮಾಣಿಕ ಉತ್ತರದಿಂದ ಸ್ಪರ್ಧೆಯ ನಿರ್ಣಾಯಕರನ್ನೇ ದಂಗಾಗಿಸಿದ್ದಾಳೆ.

    ಸೌಂದರ್ಯ ಸ್ಪರ್ಧೆಗಳು ಸ್ಕ್ರಿಪ್ಟೆಡ್ ಆಗಿರುತ್ತೆ, ಸ್ಪರ್ಧಿಗಳು ನೀಡೋ ಉತ್ತರ ಮೊದಲೇ ಅಭ್ಯಾಸ ಮಾಡಿಕೊಂಡು ಬಂದಿರುತ್ತಾರೆ ಎಂಬ ಆರೋಪವಿದೆ. ಆದ್ರೆ ಮಿಸ್ ಫಿಲಿಪೈನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬಳು ಪ್ರಶ್ನೋತ್ತರ ಸುತ್ತಿನಲ್ಲಿ ಸುಳ್ಳು ಹೇಳದೇ ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ಟಾಪ್ 15 ಸ್ಪರ್ಧಿಗಳಲ್ಲಿ ಮೊದಲು ವೇದಿಕೆ ಮೇಲೆ ಕರೆಯಲಾದ ಸಾಂದ್ರಾ ಲೆಮೊನಾನ್ ಗೆ ಸರ್ಕಾರಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸರ್ಕಾರದ ಬಿಲ್ಡ್, ಬಿಲ್ಡ್, ಬಿಲ್ಡ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸ್ಪರ್ಧೆಯ ನಿರ್ಣಾಯಕರು ಕೇಳಿದ್ದರು. ಇದಕ್ಕೆ ಸಾಂದ್ರಾ ಸುಮ್ಮನೆ ಬುರುಡೆ ಬಿಡುವ ಬದಲು, ಸಾವಿರಾರು ಪ್ರೇಕ್ಷಕರ ಮುಂದೆ ತನಗೆ ಈ ಯೋಜನೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ನಿಜ ಹೇಳಬೇಕೆಂದರೆ, ನಾನು ಈ ಪ್ರಶ್ನೋತ್ತರ ಸುತ್ತಿಗಾಗಿ ಬಹಳ ಓದಿಕೊಂಡಿದ್ದೆ. ಆದ್ರೆ ಈ ವಿಷಯದ ಬಗ್ಗೆ ನನಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದ್ರೂ ನಾನೊಂದು ಒಳ್ಳೆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲು ಇಲ್ಲಿದ್ದೇನೆ, ಧನ್ಯವಾದ ಎಂದು ಹೇಳಿ ತನಗೆ ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂಬುದನ್ನ ವೇದಿಕೆ ಮೇಲೆಯೇ ಹೇಳಿದ್ದಾಳೆ.

    ಸ್ಪರ್ಧಿಯ ಈ ಪ್ರಾಮಾಣಿಕ ಉತ್ತರ ಕೇಳಿ ಕಾರ್ಯಕ್ರಮದ ನಿರೂಪಕಿ ಹಾಗೂ 2015ರ ಮಿಸ್ ಯೂನಿವರ್ಸ್ ಪಿಯಾ ವರ್ಟ್‍ಬ್ಯಾಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು, ಸುಳ್ಳು ಹೇಳುವುದಕ್ಕಿಂತ ಇದು ಉತ್ತಮ ಎಂದು ವರ್ಟ್‍ಬ್ಯಾಚ್ ಹೇಳಿದ್ದಾರೆ.

    ಪ್ರಾಮಾಣಿಕ ಉತ್ತರ ನೀಡಿದ ಸಾಂದ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಂತಿಮವಾಗಿ ಸಾಂದ್ರಾ ಸ್ಪರ್ಧೆಯಲ್ಲಿ ಗೆದ್ದಿಲ್ಲವಾದ್ರೂ ಸಾವಿರಾರು ಅಭಿಮಾನಿಗಳನ್ನ ಗೆದ್ದಿದ್ದಾರೆ.

    https://www.youtube.com/watch?time_continue=11&v=sMJpf1DV9-4