Tag: ಉತ್ತಮ ಪ್ರಜಾಕೀಯ ಪಕ್ಷ

  • #UPPforKARNATAKA ಬಳಸಿ ಉಪ್ಪಿ ಫ್ಯಾನ್ಸ್‌ಗಳಿಂದ  ಟ್ವಿಟ್ಟರ್ ಟ್ರೆಂಡ್

    #UPPforKARNATAKA ಬಳಸಿ ಉಪ್ಪಿ ಫ್ಯಾನ್ಸ್‌ಗಳಿಂದ ಟ್ವಿಟ್ಟರ್ ಟ್ರೆಂಡ್

    ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡೋದಕ್ಕೆ ಹೊರಟಿದ್ದಾರೆ.

    ಉಪೇಂದ್ರ ಅವರಿಗಿರುವ ರಾಜಕೀಯ ಚಿಂತನೆ ಮತ್ತು ವಿಚಾರಧಾರೆಗಳನ್ನು ಇಟ್ಟುಕೊಂಡು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 04 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಟ್ವಿಟ್ಟರ್ ಟ್ರೆಂಡ್ ಮಾಡಲಿರುವ ಉಪ್ಪಿ ಫ್ಯಾನ್ಸ್, ಟ್ರೋಲ್ ಪೇಜ್, ಉತ್ತಮ ಪ್ರಜಾಕೀಯ ಪಕ್ಷದ ಬೆಂಬಲಿಗರು ಈ ಟ್ರೆಂಡ್‍ನಲ್ಲಿ ಭಾಗಿಯಾಗುತ್ತಿದ್ದಾರೆ.

    #UPPforKARNATAKA ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಕ್ರಿಯೇಟ್ ಮಾಡಲು ಉಪ್ಪಿ ಅಭಿಮಾನಿಗಳು ರೆಡಿಯಾಗಿದ್ದಾರೆ. ಉಪೇಂದ್ರ ಫ್ಯಾನ್ಸ್ ಗಳ ಈ ಒಂದು ಪ್ರಯತ್ನಕ್ಕೆ ಪ್ರಿಯಾಂಕ ಉಪೇಂದ್ರ ಕೂಡ ಸಾಥ್ ನೀಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಉಪೇಂದ್ರ ಟ್ರೆಂಡ್ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.

    ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಉಪ್ಪಿ ಸತ್ ಪ್ರಜೆ, ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ. ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ. ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ ಎಂದು ಟ್ವೀಟ್ ಮಾಡಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಉಪ್ಪಿ, ಸತ್ ಪ್ರಜೆ, ಅವನಾರಡಿ ನೀನಾರಡಿ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ. ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು. ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ. ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ

    ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ

    ಬೆಂಗಳೂರು: ನಟ, ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದಿಂದ (ಯುಪಿಪಿ) ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸಿದ್ದಾರೆ.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಉಪೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೂ ಯುಪಿಪಿ ಅಭ್ಯರ್ಥಿಗಳನ್ನು ವಿಭಿನ್ನವಾಗಿ ಪರಿಚಯ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿ ತಿಳಿಸುವ ಸಣ್ಣ ಗೀತನಾಟಕದ ಮೂಲಕ ಉಪೇಂದ್ರ ತಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ಪರಿಚಯಿಸಿದರು.

    ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಯುಪಿಪಿಯಿಂದ 14 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉಪೇಂದ್ರ ಅವರು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸುರೇಶ್ ಕುಂದರ್, ಹಾಸನದಿಂದ ಚಂದ್ರೇಗೌಡ ಎಚ್.ಎಂ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ವಿಜಯ್ ಶ್ರೀನಿವಾಸ್, ಚಿತ್ರದುರ್ಗದಿಂದ ದೇವೇಂದ್ರಪ್ಪ ಕಣಕ್ಕೆ ಇಳಿದಿದ್ದಾರೆ.

    ತುಮಕೂರು ಕ್ಷೇತ್ರದಿಂದ ಛಾಯಾ ರಾಜಾಶಂಕರ್ ಸ್ಪರ್ಧಿಸಿದರೆ, ಮಂಡ್ಯದಿಂದ ದಿವಾಕರ್ ಸಿ.ಪಿ.ಗೌಡ, ಮೈಸೂರು ಕ್ಷೇತ್ರದಿಂದ ಆಶಾರಾಣಿ ವಿ, ಚಾಮರಾಜನಗರದಿಂದ ನಾಗರಾಜು.ಎಂ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರದಿಂದ ಮಂಜುನಾಥ.ಎಂ, ಬೆಂಗಳೂರು ಉತ್ತರದಿಂದ ಸಂತೋಷ್.ಎಂ, ಬೆಂಗಳೂರು ಕೇಂದ್ರದಿಂದ ಶ್ರೀದೇವಿ ಮೆಳ್ಳೇಗಟ್ಟಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಹೊರಾತ್ರ, ಚಿಕ್ಕಬಳ್ಳಾಪುರನಿಂದ ಮುನಿರಾಜು.ಜಿ, ಕೋಲಾರದಿಂದ ರಾಮಾಂಜಿನಪ್ಪ.ಆರ್ ಸ್ಪರ್ಧಿಸುತ್ತಿದ್ದಾರೆ.

    ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುವ ವಿಚಾರವಾಗಿ ಮಾತನಾಡಿದ ಉಪೇಂದ್ರ ಅವರು, ಈ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸಗಳಿದ್ದವು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯೋಚಿಸುತ್ತಿರುವೆ ಎಂದು ತಿಳಿಸಿದರು.

    ಚುನಾವಣಾ ಪ್ರಣಾಳಿಕೆಯನ್ನು ನಾನು ನಂಬುತ್ತೇನೆ. ಪ್ರಣಾಳಿಕೆಯು ಚುನಾವಣಾ ಆಯೋಗದಿಂದ ರಿಜಿಸ್ಟರ್ ಆಗಬೇಕು. ಅದಕ್ಕೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬೇಕು. ಪ್ರಣಾಳಿಕೆಯನ್ನು ಎಲ್ಲರೂ ಕೊಡುತ್ತಾರೆ. ಆದರೆ ಎಷ್ಟು ಭರವಸೆ ಈಡೇರಿಸಿದ್ದಾರೆ ಅಂತ ಯಾರಾದ್ರೂ ಪರಿಶೀಲನೆ ಮಾಡುತ್ತಾರಾ? ನನ್ನ ಥಿಯರಿಗಳು ಖಂಡಿತಾ ಜನರಿಗೆ ಅರ್ಥ ಆಗುತ್ತವೆ ಎಂದು ಹೇಳಿದರು.

  • ಪ್ರಜಾಕೀಯ, ರಾಜಕೀಯದ ವ್ಯತ್ಯಾಸ ತಿಳಿಸಿದ ಉಪೇಂದ್ರ

    ಪ್ರಜಾಕೀಯ, ರಾಜಕೀಯದ ವ್ಯತ್ಯಾಸ ತಿಳಿಸಿದ ಉಪೇಂದ್ರ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇಂದು ಟ್ವೀಟ್ ಮಾಡಿರುವ ಉಪೇಂದ್ರ ಪ್ರಜಾಕೀಯ ಮತ್ತು ರಾಜಕೀಯ ಮನಸ್ಥತಿಯ ವ್ಯತ್ಯಾಸವನ್ನು ಬಿಚ್ಚಿಡುವ ಮೂಲಕ ತಮ್ಮ ವಿಭಿನ್ನ ಯೋಚನೆಗಳನ್ನು ಮತದಾರರ ಮುಂದಿಟ್ಟಿದ್ದಾರೆ.

    ಗೆಲ್ಲುವ ನಾಯಕರೇ ಬೇಕೆಂದು ಕೇಳುವುದು ರಾಜಕೀಯ ಮನಸ್ಥಿತಿ. ವಿಚಾರವಂತ ಕಾರ್ಮಿಕರು ಬೇಕೆಂದು ಕೇಳುವುದು ಪ್ರಜಾಕೀಯದ ಮನಸ್ಥಿತಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಉಪೇಂದ್ರ ಪ್ರತಿನಿತ್ಯ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಉಪೇಂದ್ರರ ಕೆಲವು ಟ್ವೀಟ್‍ಗಳನ್ನು ಈ ಕೆಳಗೆ ನೀಡಲಾಗಿದೆ.
    1. ಪ್ರಜಾಕೀಯದ ಪ್ರಚಾರ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ.
    2. ಚುನಾವಣೆ ಒಂದು ಯುದ್ಧರಂಗ ಎಂಬ ವಿಜೃಂಭಣೆ. ಒಬ್ಬರನ್ನೊಬ್ಬರು ಬೈಯುವುದು, ಆಪಾದನೆ, ಕೆಸರೆರಚಾಟ ಪ್ರಜೆಗಳಿಗೆ ಬೇಕಿಲ್ಲ. ಪ್ರಜೆಗಳಿಗೆ ಬೇಕಿರುವುದು ಅಭ್ಯರ್ಥಿಗಳು ಇನ್ನು ಮುಂದೆ ಐದು ವರ್ಷ ಹೇಗೆ ಕೆಲಸ ಮಾಡುತ್ತಾರೆ ಎಂಬ ವಿವರ.
    3. ನಿಮ್ಮ ಹಣದಿಂದ ನಿಮ್ಮ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಭ್ರಷ್ಟಾಚಾರವಿಲ್ಲದೆ ಪಾರದರ್ಶಕತೆಯಿಂದ ನಿಮ್ಮ ಸಂಪರ್ಕದಲ್ಲಿದ್ದು ಮಾಡುತ್ತೇವೆ ಎನ್ನುವ ವಿಚಾರಗಳಿಗೆ ಮಾತ್ರ ನಿಮ್ಮ ಮತವಿರಲಿ. ಖ್ಯಾತಿ, ವರ್ಚಸ್ಸು, ಹಣ ಖರ್ಚು ಮಾಡಿ ಪ್ರಚಾರ ಮಾಡಿ ಬರೀ ಆಶ್ವಾಸನೆಗಳನ್ನು ನೀಡುವವರಿಗಲ್ಲ.

    4. ಇಂದಿನ ರಾಜಕೀಯ ಚುನಾವಣಾ ಪ್ರಕ್ರಿಯೆ 20% ಫ್ರಭಾವೀ ಜನ, 80% ಜನಸಾಮಾನ್ಯರ. ಪರೋಕ್ಷ ತೆರಿಗೆ ಹಣ ಅನುಭವಿಸುತ್ತಿದ್ದಾರೆ. ಮತ್ತು ಅದೇ ಹಣದಿಂದ ಫ್ರಭಾವ ಬೀರುತ್ತಿದ್ದಾರೆ.
    5. ಆಡಳಿತ ಸರ್ಕಾರದ ಒಳ್ಳೆ ಕೆಲಸ ಜನಕ್ಕೆ ತಲುಪಿದ್ದರೆ ಮತ್ತೆ ಜನರನ್ನ ತಲುಪೋಕೆ ಪ್ರಚಾರ ಬೇಕಾ? ವಿರೋಧ ಪಕ್ಷ, 5 ವರ್ಷ ಆಡಳಿತ ಪಕ್ಷದ ತಪ್ಪು ಒಪ್ಪುಗಳನ್ನ ಜನರಿಗೆ ತಲುಪಿಸಿದ್ದರೆ ಈಗ ಅವರಿಗೆ ಜನರನ್ನು ತಲುಪಲು ಪ್ರಚಾರ ಬೇಕಾ? ಬೇಕಿರುವುದು ಪ್ರಚಾರವಲ್ಲ ಪಾರದರ್ಶಕತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭ್ರಷ್ಟಾಚಾರ ರಹಿತ ಸರ್ಕಾರ ಇವರಿಂದ ನಿರೀಕ್ಷಿಸುವುದೇ ಸರಿಯೇ: ಉಪೇಂದ್ರ

    ಭ್ರಷ್ಟಾಚಾರ ರಹಿತ ಸರ್ಕಾರ ಇವರಿಂದ ನಿರೀಕ್ಷಿಸುವುದೇ ಸರಿಯೇ: ಉಪೇಂದ್ರ

    ಬೆಂಗಳೂರು: ಚುನಾವಣೆ ಗೆಲ್ಲುವುದಕ್ಕಾಗಿ ಪಕ್ಷಗಳು ಕೋಟಿ ಕೋಟಿ ಖರ್ಚು ಮಾಡುತ್ತಿರುವುದು ಕಾಣಿಸುತ್ತಿದ್ದರೂ ಅವರಿಂದ ಭ್ರಷ್ಟಾಚಾರ ಇಲ್ಲದ ಸರ್ಕಾರ ನಿರೀಕ್ಷಿಸುವುದು ಸರಿಯೇ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಪ್ರಶ್ನೆ ಮಾಡಿದ್ದಾರೆ.

    ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು, ಸಂಭಾವ್ಯ ಅಭ್ಯರ್ಥಿಗಳು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇದನ್ನು ಪರೋಕ್ಷವಾಗಿ ಖಂಡಿಸಿರುವ ಉಪೇಂದ್ರ ಚುನಾವಣೆಗಾಗಿ ಖರ್ಚು ಮಾಡುವ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದ್ದಾರೆ.

    ಉತ್ತಮ ಪ್ರಜಾಕೀಯ ಪಕ್ಷ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಸಹ ತಮ್ಮ ಕಾರ್ಯಕರ್ತರೊಂದಿಗೆ ತೆರಳಿ ಸಂವಾದದಲ್ಲಿ ಭಾಗಿಯಾಗುವ ಮೂಲಕ ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಯಾರು? ಯಾವೆಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದನ್ನು ಉಪೇಂದ್ರ ತಿಳಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    -ಅಭ್ಯರ್ಥಿಗಳಿಗೆ ಕೇಳುವ  ಪ್ರಶ್ನೆಗಳನ್ನು ಬಿಚ್ಚಿಟ್ಟ ಉಪೇಂದ್ರ

    ಹುಬ್ಬಳ್ಳಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ 28 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ಅನ್ನು ಜನರೇ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿಗಳಾದ ಮೇಲೆ ಯಾವ ರೀತಿ ಕೆಲಸ ಮಾಡ್ತೀರಿ ಎನ್ನುವ ಕುರಿತು 9 ಪ್ರಶ್ನೆಗಳನ್ನು ಮಾಡಲಾಗುವುದು. ಪಕ್ಷದ ನಿಯಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ನಮ್ಮ ಪಕ್ಷದಿಂದ ಸ್ಪರ್ಧೆ ಮಾಡುವ ವ್ಯಕ್ತಿಗಳು ಜನರ ಕೆಲಸಕ್ಕಾಗಿ ತಮ್ಮ ಸಂಪೂರ್ಣ ಸಮಯವನ್ನು ನೀಡಬೇಕು. ಜನರಿಗೆ ಮೊದಲ ಆದ್ಯತೆ ಕೊಡುವಂತಹ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬೇಕು. ರಾಜಕೀಯದಲ್ಲಿ ಬದಲಾವಣೆ ತರಬೇಕಾದ್ರೆ ಅದು ಜನರಿಂದ ಮಾತ್ರ ಸಾಧ್ಯ. ಕೇವಲ ಭರವಸೆ ನೀಡುವ ನಾಯಕರು ಬೇಕೋ ಅಥವಾ ಜನಪರವಾಗಿ ಕೆಲಸ ಮಾಡುವ ವ್ಯಕ್ತಿಗಳು ಬೇಕೋ ಅಂತ ಜನರು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

    ಅಷ್ಟೇ ಅಲ್ಲದೆ, ದೊಡ್ಡ ಹೆಸರು ಗಳಿಸಿದವರು ಹಾಗೂ ಹಣದ ಬಲ ಇರುವವರು ಮಾತ್ರ ಹೆಚ್ಚಾಗಿ ರಾಜಕೀಯದಲ್ಲಿ ಇರುತ್ತಾರೆ. ಅಂತಹ ವ್ಯಕ್ತಿಗಳು ಜನಕ್ಕೆ ಬೇಡ, ಜನರ ಪರವಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಜನನಾಯಕ ಬೇಕು. ಆದ್ದರಿಂದ ನಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಉತ್ತಮ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇವೆ ಎಂದು ಉಪೇಂದ್ರ ಭರವಸೆ ನೀಡಿದ್ರು.

    ಅಭ್ಯರ್ಥಿಗೆ ಕೇಳುವ ಪ್ರಶ್ನಾವಳಿಗಳು:

    1. ವೈಯಕ್ತಿಕ ವಿವರ/ ಬಯೋ ಡೇಟಾ (ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಲಗತಿಸಿ)
    2. ಸಂಸದರಾದ ನಂತರ ನಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿ ಉಳಿಯಲು ನೀವು ಯೋಜಿಸುವ ಕ್ರಮಗಳು ಮತ್ತು ವಿಧಾನಗಳು ಯಾವುದು?
    3. ನಮ್ಮ ಅಗತ್ಯತೆಗಳು ಹಾಗೂ ನಿರೀಕ್ಷೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಲು ನೀವು ಹೇಗೆ ಯೋಜಿಸುತ್ತೀರಿ? (ಎಂ.ಪಿ ವ್ಯಾಪ್ತಿಯ ಒಳಗೆ)
    4. ನಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನೀವು ಹೇಗೆ ಪರಿಹರಿಸುವಿರಿ? ಮತ್ತು ಅದನ್ನು ಹೇಗೆ ದೃಢೀಕರಿಸುವಿರಿ?
    5. ಸಂಸತ್ತಿನಲ್ಲಿ ಚರ್ಚಿಸಬೇಕಾದ ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತುತ ಪಡಿಸಲು ನೀವು ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತೀರಾ?
    6. ನಿಮ್ಮ ಕಾರ್ಯಕ್ಷಮತೆಯ ವರದಿಯನ್ನು ನಮ್ಮ ಕ್ಷೇತ್ರದ ಜನರಿಗೆ ಮತ್ತು ಯು.ಪಿ.ಪಿ ಪಕ್ಷಕ್ಕೆ ಎಷ್ಟು ಸಮಯಕ್ಕೊಮ್ಮೆ ಹೇಗೆ ಪ್ರಸ್ತುತ ಪಡಿಸುವಿರಿ?
    7. ನೀವು ಭ್ರಷ್ಟಾಚಾರವಿಲ್ಲದೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೀರಿ ಎಂದು ಹೇಗೆ ಸಾಭೀತುಪಡಿಸುವಿರಿ?
    8. ಈ ಕೆಲಸಕ್ಕಾಗಿ ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವ ನಿಮ್ಮ ವಿಶಿಷ್ಟ ಕಾರ್ಯ ಶೈಲಿಯನ್ನು ಪಟ್ಟಿಮಾಡಿ
    9. ನೀವು ನೀಡಲು ಬಯಸುವ ಯಾವುದೇ ಸಲಹೆಗಳು

    https://www.youtube.com/watch?v=ZqLSa6pP7LU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv