Tag: ಉಡುಪಿ

  • ಬಸ್ ತಳ್ಳಿದ ಪ್ರಭಾರ ಎಸ್‍ಪಿ- ಕೆಎಸ್‍ಆರ್‍ಟಿಸಿ ಡ್ರೈವರ್‍ಗೆ ಕ್ಲಾಸ್

    ಉಡುಪಿ: ಸಾಸ್ತನದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ಪ್ರತಿಭಟನೆ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ತುಂಬಲಾಯ್ತು. ಬಸ್ ತುಂಬಿದರೂ ನಿಂತಿದ್ದ ಬಸ್ಸು ಸ್ಟಾರ್ಟ್ ಆಗ್ಲೇ ಇಲ್ಲ. ಹೈವೇ ಮಧ್ಯೆ ಬಸ್ ಇದ್ದುದರಿಂದ ರೋಡ್ ಬ್ಲಾಕ್ ಆಯ್ತು. ದಿಕ್ಕು ತೋಚದ ಪ್ರಭಾರ ಎಸ್‍ಪಿ ವಿಷ್ಣುವರ್ಧನ ಪ್ರತಿಭಟನಾಕಾರರನ್ನು ತುಂಬಿದ್ದ ಬಸ್ ತಳ್ಳಲು ಶುರು ಮಾಡಿದರು.

    ಪ್ರಭಾರ ಎಸ್‍ಪಿ ಸೇರಿದಂತೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್- ಎಸ್‍ಐ ಮಧು ಸೇರಿದಂತೆ ಪೊಲೀಸರು ಬಸ್ಸನ್ನು ಸುಮಾರು ದೂರ ತಳ್ಳಿದರು. ವಿಪರೀತ ಜನ ಇದ್ದುದರಿಂದ ಮತ್ತಷ್ಟು ದೂರ ಬಸ್ಸನ್ನು ತಳ್ಳಿ ಜರ್ಕ್ ಹೊಡೆದು ಸ್ಟಾರ್ಟ್ ಮಾಡಿಸಬೇಕಾಯ್ತು.

    ಪೊಲೀಸರು ಬಂದೋಬಸ್ತ್ ಮಾಡುವುದರ ಜೊತೆ ಎಕ್ಸ್ಟ್ರಾ ಡ್ಯೂಟಿ ಮಾಡಬೇಕಾಗಿ ಬಂತು. ಬಂಧಿತರನ್ನು ಸ್ಥಳಾಂತರಗೊಳಿಸಿ ಬಂದ ಪೊಲೀಸರು, ಕೆಎಸ್‍ಆರ್‍ಟಿಸಿ ಚಾಲಕ ಮತ್ತು ನಿರ್ವಾಹಕನಿಗೆ ಚೆನ್ನಾಗಿಯೇ ಕ್ಲಾಸ್ ತಗೊಂಡ್ರಂತೆ. ಮೊದಲೇ ಉರಿ ಬಿಸಿಲಿನಲ್ಲಿ ಅರ್ಧ ದಿನ ನಿಂತು ಬೆಂದಿದ್ದ ಪೊಲೀಸರಿಗೆ ಬಸ್ ಚಾಲೂ ಆಗದಿದ್ದುದು ಸಿಕ್ಕಾಪಟ್ಟೆ ಗರಂ ಆಗಲು ಕಾರಣವಾಯ್ತು.

    ಉಡುಪಿಯ ಸಾಸ್ತಾನದಲ್ಲಿ ಟೋಲ್ ಗೇಟ್ ವಿಚಾರವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದೆಂದು ಪ್ರತಿಭಟನಾಕಾರರು ಟೋಲ್ ಮುತ್ತಿಗೆ ಮಾಡಿದ್ರು.

     

  • ಹೈವೇ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಿದ್ದಕ್ಕೆ ಪಡುಬಿದ್ರೆ, ಸಾಸ್ತಾನದಲ್ಲಿ ಪ್ರತಿಭಟನೆ

    -ಮುಂಜಾಗ್ರತ ಕ್ರಮವಾಗಿ ಗೇಟ್ 2 ಕಿಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿ

    ಉಡುಪಿ: ಜಿಲ್ಲೆಯ ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದೆ. ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ ಟೋಲ್ ಗೇಟ್ ವ್ಯಾಪ್ತಿಯ 2 ಕಿಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಉಡುಪಿಯಲ್ಲಿ ಹೈವೇ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆಯೇ ಟೋಲ್ ಸಂಗ್ರಹ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ವಿರುದ್ಧ ಸ್ಥಳೀಯ ಹೋರಾಟಗಾರರು ಸಿಡಿದೆದ್ದಿದ್ದಾರೆ. ಪರಿಸ್ಥಿತಿ ಕೈಮೀರಬಹುದು ಎಂಬ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ವ್ಯಾಪ್ತಿಯ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ಮತ್ತು ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನಲ್ಲಿ ಫೆಬ್ರವರಿ 9 ರಿಂದ ಟೋಲ್ ಸಂಗ್ರಹ ಮಾಡಲು ಆರಂಭಿಸಿದ್ದು, ಈ ಸಂಬಂಧ ಪ್ರತಿಭಟನೆ, ಮುಷ್ಕರ, ಬಂದ್ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಉಡುಪಿ ಜಿಲ್ಲೆಯ ಪಡುಬಿದ್ರೆ ಠಾಣಾ ಸರಹದ್ದಿನ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸೆಕ್ಷನ್ ಹಾಕಿರುವುದಾಗಿ ಹೇಳಿದ್ದಾರೆ.

    ಕುಂದಾಪುರ ಸಮೀಪದ ಸಾಸ್ತಾನ ಗುಂಡ್ಮಿ ಟೋಲ್ ಗೇಟಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 10 ರ ಬೆಳಿಗ್ಗೆ 6 ರಿಂದ ಫೆಬ್ರವರಿ 15 ರ ಮಧ್ಯರಾತ್ರಿ 12 ಗಂಟೆಯವರಗೆ ಸೆಕ್ಷನ್ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೆಗೊಳಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿಗಳ ಮನವಿಯಂತೆ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಆಸ್ತಿ ಕಾಪಾಡುವ ಅವಶ್ಯಕತೆ ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಎಸ್.ಪಿ ಕೆ.ಟಿ ಬಾಲಕೃಷ್ಣ ಹೇಳಿದ್ದಾರೆ.

     

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ

    ಉಡುಪಿ: ಸ್ಯಾಂಡಲ್‍ವುಡ್‍ನ ಹಿಟ್ ಚಿತ್ರ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ಕುಂದಾಪುರದ ಕೋಟೇಶ್ವರದಲ್ಲಿ ಪ್ರಗತಿ ಸಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

    ತೀರ್ಥಹಳ್ಳಿ ಮೂಲದ ಸಾಫ್ಟ್ ವೇರ್ ಉದ್ಯೋಗಿ ಪ್ರಗತಿ ಅವರ ಜೊತೆ ರಿಷಬ್ ಶೆಟ್ಟಿ ತಮ್ಮ ಜೀವನದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಹನಾ ಕನ್ವೆನ್ಶನ್ ಹಾಲ್‍ನಲ್ಲಿ ಸ್ಯಾಂಡಲ್ ವುಡ್‍ನ ಗಣ್ಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ರಿಷಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಭಿನಯ ಚಕ್ರವರ್ತಿ- ನಟ ಸುದೀಪ್, ರಕ್ಷಿತ್ ಶೆಟ್ಟಿ, ನಟಿಯರಾದ ರಶ್ಮಿಕಾ- ಸಂಯುಕ್ತ ಹೆಗ್ಡೆ, ಯಜ್ಞಾ ಶೆಟ್ಟಿ ಸೇರಿದಂತೆ ಹತ್ತಾರು ಮಂದಿ ಸ್ಯಾಂಡಲ್ ವುಡ್ ನಟ ನಟಿಯರು ರಿಷಬ್ ದಂಪತಿಗೆ ಶುಭ ಕೋರಿದರು.

    ಕಿರಿಕ್ ಪಾರ್ಟಿ, ರಿಕ್ಕೀ, ಉಳಿದವರು ಕಂಡಂತೆ, ತುಘಲಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ರಿಷಬ್ ಸದ್ಯದ ಸ್ಯಾಂಡಲ್ ವುಡ್‍ನ ಸಕ್ಸಸ್‍ಫುಲ್ ಡೈರೆಕ್ಟರ್‍ಗಳಲ್ಲಿ ಒಬ್ಬರಾಗಿದ್ದಾರೆ.

     

  • ಅಡುಗೆ ಮನೆಯಲ್ಲಿ ಬಂದು ಕುಳಿತಿತ್ತು 14 ಅಡಿ ಉದ್ದದ ಕಾಳಿಂಗ ಸರ್ಪ

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ವೆಂಕಟರಮಣ್ ಎಂಬವರ ಮನೆಯ ಅಡುಗೆ ಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಎಲ್ಲರಲ್ಲಿ ಭಯ ಹುಟ್ಟಿಸಿದೆ.

    ಕಾರ್ಕಳ ತಾಲೂಕಿನ ಮುನಿಯಾಲುವಿನ ಐದು ಸೆಂಟ್ಸ್ ಕಾಲೊನಿಯಲ್ಲಿ ಭಾರೀ ಗಾತ್ರದ ಕಾಳಿಂಗ ಕಾಣಿಸಿಕೊಂಡಿತ್ತು. ಕಾರ್ಕಳದ ಉರಗತಜ್ಞ ಅನಿಲ್ ಪ್ರಭು ಹಾವನ್ನು ಹಿಡಿದು ಪಶ್ಚಿಮ ಘಟ್ಟಕ್ಕೆ ಬಿಟ್ಟಿದ್ದಾರೆ. ಈ ಕಳಿಂಗ ಸರ್ಪವನ್ನು ಮೂಕಾಂಬಿಕಾ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ದೊಡ್ಡ ಗಾತ್ರದ ಹಾವು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು. ಹಾವನ್ನು ಹಿಡಿದು ತೆಗೆದುಕೊಂಡು ಹೋದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಡುಪಿ ಜಿಲ್ಲೆಗೆ ಕಾಳಿಂಗ ಸರ್ಪಗಳ ಹಾವಳಿ ಜಾಸ್ತಿಯಾಗಿದೆ. ಹಾವುಗಳ ಮಿಲನ ಕಾಲ ಇದಾಗಿರುವುದರಿಂದ ಜಿಲ್ಲೆಯ ಅಲ್ಲಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುತ್ತಿದೆ ಅಂತ ಉರಗ ತಜ್ಞರು ಹೇಳಿದ್ದಾರೆ.

     

  • ಒಂದೇ ಕಲ್ಲಿನಲ್ಲಿ ಎರಡು ಪ್ರಕರಣಗಳನ್ನು ಹೊಡೆದುರುಳಿಸಿದ ಉಡುಪಿ ಪೊಲೀಸ್

    ಉಡುಪಿ: ಒಂದೇ ರಾತ್ರಿ ನಡೆದ ಎರಡು ಪ್ರಕರಣಗಳನ್ನು ಒಂದೇ ಕಲ್ಲಿನಲ್ಲಿ ಪೊಲೀಸರು ಹೊಡೆದು ಉರುಳಿಸಿದ್ದಾರೆ. ಕೋಮು ಸೂಕ್ಷ್ಮ ಪ್ರಕರಣವನ್ನು ಎರಡು ದಿನಗಳ ಒಳಗೆ ಭೇದಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಹನೀಫ್ ಮರ್ಡರ್ ಮತ್ತು ಆದಿ ಉಡುಪಿ ಮಸೀದಿ ಕಲ್ಲೆಸೆದ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ.

    ಜನವರಿ 29 ರಂದು ಆದಿ ಉಡುಪಿಯ ನೂರಾಲ್ ಮಸೀದಿಗೆ ರಾತ್ರಿ 12 ಗಂಟೆಯ ನಂತರ ಕಲ್ಲು ಬಿದ್ದಿತ್ತು. ದುಷ್ಕರ್ಮಿಯೊಬ್ಬ ಮಸೀದಿಗೆ ಕಲ್ಲೆಸೆದು ಪರಾರಿಯಾಗಿದ್ದ. ಇದಾಗಿ ಮುಕ್ಕಾಲು ಗಂಟೆಯೊಳಗೆ ಕರಾವಳಿ ಬೈಪಾಸಿನಲ್ಲಿ ಒಂದು ಕೊಲೆಯಾಗಿತ್ತು. ಮತ್ತೊಂದು ಕೊಲೆಯತ್ನ ನಡೆದಿತ್ತು. ಎರಡೂ ಘಟನೆಗಳು ನಡೆದದ್ದು ಜನವರಿ 29ರಂದು. ಎರಡೂ ಪ್ರಕರಣದಲ್ಲಿ ಆರೋಪಿ ಪರಾರಿಯಾಗಿದ್ದ.

    ಆರೋಪಿ ಅಂಕಿತ್ ಕುಂಪಲ

    ಹೈವೇ ಗಲಾಟೆಯಲ್ಲಿ ಆಟೋ ಚಾಲಕ ಹನೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಎರಡೂ ಘಟನೆಗಳು ಕೋಮು ಸೂಕ್ಷ್ಮವಾಗಿದ್ದರಿಂದ ಪೊಲೀಸರು ರಾತ್ರೋ ರಾತ್ರಿ ಕಾರ್ಯಪ್ರವೃತ್ತರಾಗಿದ್ದರು. ಘಟನೆ ನಡೆದು 48 ಗಂಟೆಗಳ ಒಳಗೆ ಎರಡೂ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಂಕಿತ್ ಕುಂಪಲ ಎಂಬತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲು ಮಸೀದಿಗೆ ಕಲ್ಲೆಸೆದು ನಂತರ ಆರೋ ಚಾಲಕನ ಜೊತೆ ಜಗಳವಾಡಿ ತನ್ನ ಜೊತೆಯಲ್ಲಿದ್ದ ಚಾಕುವಿನಿಂದ ಇರಿದಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಉಡುಪಿಯಲ್ಲಿ ಎಎಸ್‍ಪಿ ವಿಷ್ಣುವರ್ಧನ್ ಪ್ರೆಸ್ ಮೀಟ್ ಮಾಡಿದರು.

    ಮೊದಲು ಮಸೀದಿಗೆ ಕಲ್ಲೆಸೆದು ಅಂಕಿತ್ ತನ್ನ ಸ್ಟಾರ್ ಸಿಟಿ ಬೈಕ್‍ನಲ್ಲಿ ಪರಾರಿಯಾಗಿದ್ದ. ಅಲ್ಲಿಂದ ಹೈವೇಗೆ ಬಂದಾಗ ಅಲ್ಲಿ ಆಟೋ ವನ್ ವೇಯಲ್ಲಿ ಬಂದಿದೆ. ಬೈಕ್ ಅಡ್ಡಗಟ್ಟಿ ಚಾಲಕನ ಜೊತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಅಂಕಿತ್ ಹನೀಫ್‍ಗೆ ಇರಿದಿದ್ದ. ಜಗಳ ಬಿಡಿಸಲು ಬಂದ ಹನೀಫ್ ಸಂಬಂಧಿ ಶಬ್ಬೀರ್‍ಗೂ ಚೂರಿ ಅಂಕಿತ್ ಇರಿದು ಪರಾರಿಯಾಗಿದ್ದ.

    ಆರೋಪಿ ಅಂಕಿತ್ ಕುಂಪಲ

    ಎರಡೂ ಪ್ರಕರಣಗಳಿಗೆ ತಲಾ ನಾಲ್ಕು ತಂಡಗಳನ್ನು ಪೊಲೀಸರು ರಚನೆ ಮಾಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಮಾಹಿತಿಗಳು ಸಿಗಲಾರಂಬಿಸಿತು. ಅಂಕಿತ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕೇಸುಗಳಿವೆ. ಉಳ್ಳಾಲದಲ್ಲಿ ಮಸೀದಿಗೆ ಕಲ್ಲೆಸೆತ, ಗುಂಪು ಘರ್ಷಣೆಯಲ್ಲಿ ಅಂಕಿತ್ ಫೇಮಸ್ ಆಗಿದ್ದನಂತೆ. ಗುಂಪು ಗಲಾಟೆಗಳು ಜಾಸ್ತಿಯಾದಾಗ ತನ್ನ ಮನೆಯಿಂದ ದೊಡ್ಡಮ್ಮನ ಉಡುಪಿಯ ಮನೆಗೆ ಬಂದಿದ್ದ ಎನ್ನಲಾಗಿದೆ. ಇಲ್ಲೂ ತನ್ನ ಕೂಟವನ್ನು ಬೆಳೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಸೀದಿಗೆ ಕಲ್ಲೆಸೆದ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರಿಗೆ ಮರ್ಡರ್ ಆರೋಪಿಯೂ ಸಿಕ್ಕಿಬಿದ್ದ. ಈ ಮೂಲಕ ಪ್ರಕರಣ ಕೋಮುಸೂಕ್ಷ್ಮತೆಯತ್ತ ವಾಲುವ ಮೊದಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಪತ್ತೆಯ ಜವಾಬ್ದಾರಿಯನ್ನು ಉಡುಪಿ ಡಿವೈಎಸ್‍ಪಿ ಕುಮಾರಸ್ವಾಮಿ ಮತ್ತು ಟೀಂ ಹೊತ್ತಿತ್ತು. ಉಡುಪಿ ನಗರ, ಬ್ರಹ್ಮಾವರ ಡಿಸಿಐಬಿ, ಮಣಿಪಾಲ ಪೊಲೀಸರು ಸಾಥ್ ಕೊಟ್ಟಿದ್ದಾಗಿ ಎಎಸ್‍ಪಿ ವಿಷ್ಣುವರ್ಧನ್ ಹೇಳಿದರು.