Tag: ಉಡುಪಿ

  • ಹಾಡಹಗಲೇ ಸಿಬ್ಬಂದಿಗೆ ಗನ್ ತೋರಿಸಿ ಉಡುಪಿ ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ದರೋಡೆ

    ಹಾಡಹಗಲೇ ಸಿಬ್ಬಂದಿಗೆ ಗನ್ ತೋರಿಸಿ ಉಡುಪಿ ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ದರೋಡೆ

    ಉಡುಪಿ: ಹಾಡಹಗಲೇ ಮೋರ್ ಸೂಪರ್ ಮಾರ್ಕೆಟ್ ದರೋಡೆಯಾಗಿದೆ. ಮಣಿಪಾಲದಲ್ಲಿರುವ ಮೋರ್ ಸೂಪರ್ ಮಾರ್ಕೆಟ್‍ಗೆ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ನುಗ್ಗಿ ಮೂರು ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.

    ಮಣಿಪಾಲದಲ್ಲಿರುವ ಸೂಪರ್ ಮಾರ್ಕೆಟ್‍ಗೆ ಮಂಕಿ ಕ್ಯಾಪ್ ಹಾಕಿಕೊಂಡು ನುಗ್ಗಿದ ಇಬ್ಬರು ಮ್ಯಾನೇಜರ್‍ಗೆ ಪಿಸ್ತೂಲ್ ತೋರಿಸಿದ್ದಾರೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೋರ್ ಸಿಬ್ಬಂದಿಗೆ ತಲವಾರನ್ನು ಸಹ ಬೀಸಿದ್ದಾರೆ. ಪಿಸ್ತೂಲ್ ತಲೆಗಿಟ್ಟು ಕಾಸು ಕೇಳಿದ್ದಾರೆ. ಈ ಸಂದರ್ಭ ಮ್ಯಾನೇಜರ್ ಕಿವಿಗೆ ಗಾಯವಾಗಿದೆ. ಹೆದರಿದ ಮ್ಯಾನೇಜರ್ ಕ್ಯಾಬಿನ್‍ನಲ್ಲಿದ್ದ ಮೂರು ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳ ಕೈಗಿಟ್ಟಿದ್ದಾರೆ. ಕಾಸು ಕೈಗೆ ಸಿಗುತ್ತಿದ್ದಂತೆ ಇಬ್ಬರು ಮುಸುಕುಧಾರಿಗಳು ಪರಾರಿಯಾಗಿದ್ದಾರೆ. ಮೋರ್ ಸಿಬ್ಬಂದಿ ಕೂಡಲೇ ಮಣಿಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಮೋರ್ ಸಿಬ್ಬಂದಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶ್ಚರ್ಯಕರ ವಿಷಯವೇನಂದ್ರೆ ಮೋರ್ ಸೂಪರ್ ಮಾರ್ಕೆಟಲ್ಲಿ ಯಾವುದೇ ಸಿಸಿಟಿವಿಯಿಲ್ಲ. ಮೋರ್ ನಿಯಮದ ಪ್ರಕಾರ ತಮ್ಮ ಸೂಪರ್ ಮಾರ್ಕೆಟ್‍ನಲ್ಲಿ ಸಿಸಿಟಿವಿ ಅಳವಡಿಸುವುದಿಲ್ಲ.

    ಮೋರ್ ಗ್ರಾಹಕರಿಗೆ ಸಿಸಿಟಿವಿ ಹಾಕಿದ್ರೆ ಅವಮಾನವಾಗುತ್ತದೆ. ಹೀಗಾಗಿ ಸಿಸಿಟಿವಿಯನ್ನು ಮಳಿಗೆಯ ಒಳಗೆ ಅಳವಡಿಸಿಲ್ಲ. ರಾಜ್ಯಾದ್ಯಂತ ಯಾವ ಮೋರ್ ಮಾರ್ಕೆಟಲ್ಲೂ ಸಿಸಿಟಿವಿ ಅಳವಡಿಸುವುದಿಲ್ಲ ಎಂದು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.

     

  • ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದಲ್ಲಿಯೇ ಹೊಸ ಪ್ರಯತ್ನ

    ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದಲ್ಲಿಯೇ ಹೊಸ ಪ್ರಯತ್ನ

    -ಉಡುಪಿಯಲ್ಲಿ ಡ್ರೋನ್ ಛಾಯಾಚಿತ್ರ ಪ್ರದರ್ಶನ

    ಉಡುಪಿ: ಜಿಲ್ಲೆಯ ಪ್ರವಾಸಿ ತಾಣಗಳ ವೈಮಾನಿಕ ನೋಟವನ್ನು ತೋರಿಸುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ವಿವಿಧ ತಾಣಗಳ ಡ್ರೋನ್ ಛಾಯಾಚಿತ್ರ ಪ್ರದರ್ಶನವನನ್ನು ಗ್ಯಾಲರಿ ಅದಿತಿ ಶನಿವಾರ ಆಯೋಜಿಸಿದೆ.

    ಪತ್ರಿಕಾ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಬೆಂಗಳೂರಿನ ಅರುಣ್ ಮಹೇಂದ್ರಕರ್ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ. ಉಡುಪಿಯ ಸುಮಾರು 57 ಚಿತ್ರಗಳನ್ನು ಗ್ಯಾಲರಿ ಅದಿತಿಯಲ್ಲಿ ಪ್ರದರ್ಶಿಸಲಾಗುವುದು. ಕಾಪು ದೀಪ ಸ್ತಂಭ, ಕಾರ್ಕಳದ ಬಾಹುಬಲಿ, ಸೆಂಟ್‍ಮೇರಿಸ್ ದ್ವೀಪ ಹಾಗೂ ಬಾರಕೂರು ಬಸದಿಗಳು ವಿಶೇಷ ಆಕರ್ಷಣೆಯಾಗಿವೆ. ಸೇಂಟ್ ಮೇರೀಸ್ ಅರಬ್ಬೀ ಸಮುದ , ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಮಣಿಪಾಲ್ ಮುಂತಾದ ಸ್ಥಳಗಳನ್ನು ಬಾನಿನಿಂದ ನೋಡಿದಾಗ ಅದರ ಸೊಬಗು ಅತಿ ವಿಶಿಷ್ಟವಾಗಿದೆ.

    ಶನಿವಾರ ಸಂಜೆ ಆರು ಗಂಟೆಗೆ ಡ್ರೋನ್ ಫೋಟೋಗ್ರಫಿಯ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಪೈ, ಉಡುಪಿ ಎಎಸ್‍ಪಿ ವಿಷ್ಣುವರ್ಧನ್ ಹಾಗೂ ಸಾಯಿ ರಾಧಾ ಸಮೂಹದ ಮುಖ್ಯಸ್ಥರಾದ ಮನೋಹರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಲಿದ್ದಾರೆ.

    ಅದಿತಿ ಗ್ಯಾಲರಿಗೆ ಬರುವ ಕಲಾ ರಸಿಕರಿಗೆ ಚಿತ್ರಗಳ ಪ್ರದರ್ಶನ ವೀಕ್ಷಿಸಲು ಮಾರ್ಚ್ 11 ರಂದು ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮಾರ್ಚ್ 12, ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 8ರ ತನಕ ಕಲಾಸಕ್ತರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.

     

  • ಮಣಿಪಾಲ್ ಹೆರಿಟೇಜ್ ಜನಕ ವಿಜಯನಾಥ್ ಶೆಣೈ ಇನ್ನಿಲ್ಲ

    ಮಣಿಪಾಲ್ ಹೆರಿಟೇಜ್ ಜನಕ ವಿಜಯನಾಥ್ ಶೆಣೈ ಇನ್ನಿಲ್ಲ

    ಉಡುಪಿ: ಮಣಿಪಾಲ್ ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯ್‍ನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

    ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಸ್ತ ಶಿಲ್ಪ ಟ್ರಸ್ಟ್ ಆರಂಭಿಸಿದ್ದರು. ತಮ್ಮ ಟ್ರಸ್ಟ್ ಮೂಲಕ ಮಣಿಪಾಲ್ ಹೆರಿಟೇಜ್ ನಿರ್ಮಾಣ ಮಾಡಿದ್ದರು.

    ತಮ್ಮ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಿ, ಅಂತಹುದೇ ಮಾದರಿ ಶಿಲಾ ವಿನ್ಯಾಸವನ್ನು ಮಣಿಪಾಲ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದರು. ಇದಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ ಸುಂದರ ಹಾಗೂ ಭವ್ಯವಾದ ಹೆರಿಟೇಜ್‍ನ್ನು ನಿರ್ಮಾಣ ಮಾಡಿದ್ದರು.

    ದೇಶದಲ್ಲಿ ಪಾರಂಪರಿಕ ಶೈಲಿಯ ಮನೆಗಳ ವಿನ್ಯಾಸಗಳು ಆಧುನಿಕ ಜಗತ್ತಿನಲ್ಲಿ ಕಣ್ಮರೆಯಾಗುವ ವೇಳೆಯಲ್ಲಿ ದೇಶಿ ಶೈಲಿಯ ಮನೆಗಳ ನಿರ್ಮಾಣ ಮಾಡಿ ಅವುಗಳ ಉಳಿವಿಗೆ ಕಾರಣವಾಗಿದ್ದರು. ವಿಜಯನಾಥ್ ಶೆಣೈ ಅವರ ಪರಿಶ್ರಮದ ಫಲವಾಗಿ ಮಣಿಪಾಲ್ ಹೆರಿಟೇಜ್‍ನಲ್ಲಿ 30 ಕ್ಕೂ ವಿವಿಧ ಬಗೆಯ ವಾಸ್ತು ಶೈಲಿಯನ್ನು ಕಾಣಬಹುದು. ವಿಜಯನಾಥ್ ಶೆಣೈ ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

     

  • ಉಡುಪಿಯಲ್ಲಿ ಎಸಿಬಿ ದಾಳಿ- ಕುಂದಾಪುರದ ಫಾರೆಸ್ಟ್ ರೇಂಜರ್ ಮನೆಯಲ್ಲಿ ತಪಾಸಣೆ

    ಉಡುಪಿಯಲ್ಲಿ ಎಸಿಬಿ ದಾಳಿ- ಕುಂದಾಪುರದ ಫಾರೆಸ್ಟ್ ರೇಂಜರ್ ಮನೆಯಲ್ಲಿ ತಪಾಸಣೆ

    ಉಡುಪಿ: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ರೇಂಜರ್ ಶಿವರಾಂ ಆಚಾರಿ ಎಂಬವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಮಂಗಳೂರು ಹಾಗೂ ಉಡುಪಿಯ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದಾರು. ಶಿವರಾಂ ಆಚಾರಿ ಅವರ ಕಂಬದ ಕೋಣೆಯಲ್ಲಿರೋ ಒಂದು ಮನೆ, ಆಜ್ರಿಯಲ್ಲೊಂದು ಮನೆ, ಕೊಲ್ಲೂರಿನಲ್ಲಿರುವ ಕ್ವಾಟ್ರಸ್, ಕಿರಿ ಮಂಜೆಶ್ವರ ಗ್ರಾಮದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

    ಎಸಿಬಿ ಎಸ್‍ಪಿ ಚೆನ್ನಬಸಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಶಿವರಾಂ ಆಚಾರ್ಯ ವಿರುದ್ಧ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಶಿವರಾಂ ಮಿತಿಗಿಂತ ಸಿಕ್ಕಾಪಟ್ಟೆ ಆಸ್ತಿ ಹೊಂದಿದ್ದು, ಸಾರ್ವಜನಿಕರಿಂದ ಲಂಚ ಸ್ವೀಕಾರ, ಅರಣ್ಯದಲ್ಲಿದ್ದ ಮರಗಳನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡಿ ಕಳ್ಳದಾರಿಯಲ್ಲಿ ಹಣ ಸಂಪಾದನೆ ಮಾಡಿದ್ದಾರೆ ಎಂಬ ಆರೋಪಗಳಿವೆ.

    ಸದ್ಯ ಎಸಿಬಿ ಅಧಿಕಾರಿಗಳು ಶಿವರಾಂ ಅವರ ಮನೆಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

     

  • ಉಡುಪಿಯಲ್ಲಿ ಫಿಶಿಂಗ್ ಸ್ಪರ್ಧೆ: ಗಾಳಕ್ಕೆ ಬಿತ್ತು ಕೆಜಿಗಟ್ಟಲೆ ಮೀನು

    ಉಡುಪಿಯಲ್ಲಿ ಫಿಶಿಂಗ್ ಸ್ಪರ್ಧೆ: ಗಾಳಕ್ಕೆ ಬಿತ್ತು ಕೆಜಿಗಟ್ಟಲೆ ಮೀನು

    ಉಡುಪಿ: ಮೀನುಗಾರಿಕೆ ಇಲಾಖೆಯಿಂದ ನಗರದಲ್ಲಿ ಪ್ರಥಮ ಬಾರಿಗೆ ಫಿಶಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕ ವಿಧಾನಗಳನ್ನು ಬಳಿಸಿ ಮೀನುಗಳನ್ನು ಹಿಡಿಯುವುದು ಈ ಸ್ಪರ್ಧೆಯ ವಿಶೇಷವಾಗಿತ್ತು. ನಗರದ ಹಲವಾರು ಯುವಕರು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಸಾಂಪ್ರದಾಯಿಕ ಎರೆಹುಳು ಗಾಳಗಳ ಜೊತೆ ಆಧುನಿಕ ಗಾಳಗಳು ಕೂಡಾ ಮೀನಿನ ಬೇಟೆಯಲ್ಲಿ ತೊಡಗಿದ್ದವು. ಕೆಲವು ಗಾಳಗಳಿಗೆ ಒಂದೂ ಮೀನು ಬೀಳಲಿಲ್ಲ. ಮತ್ತೆ ಕೆಲವು ಗಾಳಗಳು ಭರ್ಜರಿ ಶಿಖಾರಿ ಮಾಡಿದವು. ದೊಡ್ಡ ದೊಡ್ಡ ಮೀನುಗಳು ಕೆಲವರಿಗೆ ಸಿಕ್ಕವು.

    ನಾಗೇಶ್ ಕುಮಾರ್ ಬರೋಬ್ಬರಿ 1 ಕೆಜಿಯ ಮೀನನ್ನು ಹಿಡಿದು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು. ಮಸ್ಕತ್‍ನಿಂದ ಮೀನಿಗೆ ಗಾಳ ಹಾಕುವ ಸ್ಪರ್ಧೆಗೆ ಬಂದಿದ್ದ ತಬ್ರೇಜ್, ಎರಡು ಮೀನು ಹಿಡಿದು ದ್ವಿತೀಯ ಸ್ಥಾನ ಪಡೆದರು. ತುಕಾರಾಂ ಮೆಂಡನ್ ಮತ್ತು ಜಾನ್ ಎಂಬವರು ಮೂರನೇ ಪ್ರಶಸ್ತಿ ಪಡೆದರು. ಸುಮಾರು 30 ಮಂದಿ ಹವ್ಯಾಸಿಗಳು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಉತ್ಸುಕತೆಯಿಂದ ಇದು ಸಾಧ್ಯವಾಯ್ತು. ಮುಂದಿನ ವರ್ಷದ ರಾಜ್ಯದ ಬೇರೆ ಭಾಗಗಳಲ್ಲೂ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕಿರಣ ಹೇಳಿದರು.

    ವೀಕೆಂಡ್ ಆಗಿದ್ದರಿಂದ ನೂರಾರು ಮಂದಿ ಗಾಳ ಸ್ಪರ್ಧೆ ವೀಕ್ಷಿಸಲು ಬಂದಿದ್ದರು. ದೊಡ್ಡ ದೊಡ್ಡ ಮೀನುಗಳ ಜೊತೆ ಪ್ರಶಸ್ತಿ ನಗದು ಬಹುಮಾನವನ್ನು ಬಾಚಿಕೊಂಡರು. ಬೀಚ್‍ಗೆ ಬಂದಿದ್ದ ಜನರು ಆದಿತ್ಯವಾರ ಸಂಜೆಯನ್ನು ಸಮುದ್ರ ತೀರದಲ್ಲಿ ಕಳೆದರು.

     

     

  • ರಾಜ್ಯದಲ್ಲಿ ಬರ: ಶತಚಂಡಿಕಾಯಾಗದ ಮೂಲಕ ದೇವಿಯ ಮೊರೆ ಹೋದ ಉಡುಪಿ ಜನ

    ರಾಜ್ಯದಲ್ಲಿ ಬರ: ಶತಚಂಡಿಕಾಯಾಗದ ಮೂಲಕ ದೇವಿಯ ಮೊರೆ ಹೋದ ಉಡುಪಿ ಜನ

    ಉಡುಪಿ: ರಾಜ್ಯಾದ್ಯಂತ ಭೀಕರ ಬರದ ಪರಿಸ್ಥಿತಿಯಿದೆ. ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಕೊಟ್ಟ ಕಾಸು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ನಡುವೆ ತುಳುನಾಡಿನ ಜನ ಬರ ನೀಗಿಸಮ್ಮ ತಾಯೇ ಅಂತಾ ಶತಚಂಡಿಕಾಯಾಗದ ಮೊರೆ ಹೋಗಿದ್ದಾರೆ.

    ರಾಜ್ಯ ಹಿಂದೆಂದೂ ಕಾಣದ ಭೀಕರ ಬರಕ್ಕೆ ತುತ್ತಾಗಿದೆ. ಜನ ಹನಿ ನೀರಿಗಾಗಿ ಹತ್ತಾರು ಕಿ.ಮೀ ಅಲೆದಾಡ್ತಿದ್ದಾರೆ. ಜಾನುವಾರುಗಳು ಮೇವು, ನೀರಿಲ್ಲದೇ ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಉಡುಪಿಯ ಮಟಪಾಡಿಯ ಉಂಗ್ರಪಳ್ಳಿಯಲ್ಲಿ ಚಂಡಿಕಾ ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋದ ಜನ ಬರದಿಂದ ನಾಡನ್ನು ರಕ್ಷಿಸು ತಾಯಿ ಅಂತ ಯಾಗ ಮಾಡಿದ್ರು.

    ಶತ ಚಂಡಿಕಾಯಾಗದ ಮೂಲಕ ಪ್ರಾರ್ಥನೆ ಮಾಡಿದರೆ ಲೋಕಕಲ್ಯಾಣವಾಗುತ್ತಂತೆ. ಬೇಡಿಕೆ ಈಡೇರುತ್ತಂತೆ. ಅಂದು ಆಂಧ್ರಪ್ರದೇಶದಲ್ಲಿ ಚಂಡಿಕಾಯಾಗ ಮಾಡಿದಾಗ ಹಿಂದೆಂದೂ ಕಂಡರಿಯದ ಮಳೆ ಬಿದ್ದಿತ್ತಂತೆ. ಹೀಗಾಗಿ ಉಡುಪಿಯಲ್ಲಿಯೂ ನಡೆದ ಯಾಗದಲ್ಲಿ ಶಾಸ್ತ್ರೋಕ್ತವಾಗಿ ನೂರಾರು ಬ್ರಾಹ್ಮಣರು ಪಾಲ್ಗೊಂಡಿದ್ರು.

    ಲೋಕಕಲ್ಯಾಣಾರ್ಥವಾಗಿ ನಾವಿಂದು ಇಲ್ಲಿ ಬರ ನಿವಾರಣೆಗಾಗಿ ಶತಚಂಡಿಕಾ ಯಾಗವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಮಳೆ-ಬೆಳೆ ಕಡಿಮೆ ಇದೆ. ಹೀಗಾಗಿ ಈ ವಿಶೇಷ ಯಾಗವನ್ನು ಇಟ್ಟುಕೊಂಡಿದ್ದೇವೆ ಅಂತಾ ದೇವಸ್ಥಾನದ ಅನುಮಂಶಿಕ ಮೊಕ್ತೇಸರ ಸುಬ್ರಹ್ಮಣ್ಯ ಉಂಗ್ರಪಳ್ಳಿ ಹೇಳಿದ್ರು.

    ಮಂತ್ರದಿಂದ ಮಾವಿನಕಾಯಿ ಉದುರುತ್ತಾ ಅಂತಾ ಪ್ರಶ್ನೆ ಮಾಡುವವರು ಇದ್ದಾರೆ. ಆದ್ರೆ ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ನಾವು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲೇ ಬೇಕು.

  • ಉಡುಪಿ: ದೇವಾಲಯಗಳ ನಗರಿಯಲ್ಲಿ ಮಾತಾ ಶ್ರೀ ಅಮೃತಾನಂದಮಯಿ ಅಮ್ಮನ ದರ್ಶನ

    ಉಡುಪಿ: ದೇವಾಲಯಗಳ ನಗರಿಯಲ್ಲಿ ಮಾತಾ ಶ್ರೀ ಅಮೃತಾನಂದಮಯಿ ಅಮ್ಮನ ದರ್ಶನ

    – ಪೇಜಾವರ ಶ್ರೀ, ಅಮೃತಾನಂದಮಯಿ ಅಮ್ಮ ಭೇಟಿ

    ಉಡುಪಿ: ಕೋಟಿ ಕೋಟಿ ಭಕ್ತರ ಆರಾಧ್ಯ ದೈವ- ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಮಾತಾ ಶ್ರೀ ಅಮೃತಾನಂದಮಯಿ ಮೊದಲ ಬಾರಿಗೆ ದೇವರ ನಾಡಿನಲ್ಲಿ ಕಾಣಿಸಿಕೊಂಡರು. ಸುಮಾರು ಐವತ್ತು ಸಾವಿರ ಮಂದಿ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು. ಭಜನೆ- ಸತ್ಸಂಗ- ಪ್ರವಚನದಲ್ಲಿ ಪಾಲ್ಗೊಂಡು ಭಕ್ತರನ್ನು ಪುಳಕಿತಗೊಳಿಸಿದರು.

    ಮಾತಾ ಅಮೃತಾನಂದಮಯಿ ದೇವರ ನಾಡು ಕೇರಳದಲ್ಲಿ ಹುಟ್ಟಿ ವಿಶ್ವದಾದ್ಯಂತ ಭಕ್ತಕೋಟಿಯನ್ನು ಸಂಪಾದಿಸಿದ ಆಧ್ಯಾತ್ಮ ಗುರು. ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಅಮೃತಾನಂದಮಯಿ ಮೊಟ್ಟ ಮೊದಲ ಬಾರಿಗೆ ದೇವಾಲಯಗಳ ನಗರಿ ಉಡುಪಿ ನಗರಕ್ಕೆ ಆಗಮಿಸಿದ್ದರು. ಅಮೃತ ವೈಭವದ ಮೂಲಕ ಸುಮಾರು 50 ಸಾವಿರ ಮಂದಿಗೆ ದರ್ಶನ ನೀಡಿದರು. ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಜನೆ- ಸತ್ಸಂಗ- ಪ್ರವಚನ ಕಾರ್ಯಕ್ರಮ ನಡೆಯಿತು. ಭಕ್ತ ಸಾಗರವನ್ನುದ್ದೇಶಿಸಿ ಮಾತಾ ಅಮೃತಾನಂದಮಯಿ ಪ್ರವಚನ ನೀಡಿದರು. ಮನುಷ್ಯ ಮನುಷ್ಯರ ನಡುವೆ ಹಗೆತನ ಇರಬಾರದು. ಮನುಷ್ಯ ಕಾಮ- ಕ್ರೋಧವನ್ನು ಜಯಿಸಿ ಬಾಳಬೇಕು ಎಂದು ಹೇಳಿದರು.

    ವೇದಿಕೆಯಲ್ಲಿ ಜನನಾಯಕರು ಸೇರದಂತೆ ಪ್ರಮುಖ ಗಣ್ಯಾತಿಗಣ್ಯರು ಪಾಲ್ಗೊಂಡು, ಅಮ್ಮನ ಗುಣಗಾನ ಮಾಡಿದರು. ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಅಮ್ಮನ ಪಾದಸ್ಪರ್ಶದಿಂದ ಉಡುಪಿ ಪಾವನವಾಯ್ತು ಎಂದು ಹೇಳಿದರು.

    ಇದಕ್ಕೂ ಮೊದಲು ಅಮೃತಾನಂದಮಯಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪೇಜಾವರ ಸ್ವಾಮೀಜಿಯವರನ್ನು ಭೇಟಿಯಾಗಿ ತಮ್ಮ ಸೇವಾಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದರು. ಪರಸ್ಪರ ಇಬ್ಬರೂ ಗೌರವ ವಿನಿಮಯ ಮಾಡಿದರು.

    ಕಾರ್ಯಕ್ರಮದಲ್ಲಿ ಸಂತೋಷ್ ಭಾರತಿ ಗುರೂಜಿ, ಸಚಿವ ರುದ್ರಪ್ಪ ಲಮಾಣಿ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಭಾಗಿಯಾಗಿ ಆಶೀರ್ವಾದ ಪಡೆದರು. ಸುಮಾರು 50 ಸಾವಿರ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ನಿರಂತರ ಎರಡು ದಿನ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ.

     

  • ಉಡುಪಿಯಲ್ಲಿ ಪಾಳು ಬಾವಿಗೆ ಬಿದ್ದಿದ್ದ ಎರಡು ಹೆಬ್ಬಾವುಗಳ ರಕ್ಷಣೆ: ವಿಡಿಯೋ ನೋಡಿ

    ಉಡುಪಿಯಲ್ಲಿ ಪಾಳು ಬಾವಿಗೆ ಬಿದ್ದಿದ್ದ ಎರಡು ಹೆಬ್ಬಾವುಗಳ ರಕ್ಷಣೆ: ವಿಡಿಯೋ ನೋಡಿ

    ಉಡುಪಿ: ಜಿಲ್ಲೆಯ ಹಾವಂಜೆ ಕಾಡಿನಲ್ಲಿರುವ ಪಾಳು ಬಾವಿಯಲ್ಲಿ ಬಿದ್ದಿದ್ದ ಎರಡು ಹೆಬ್ಬಾವುಗಳನ್ನು ಉರಗತಜ್ಞ, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

    ಹಾವಂಜೆ ಸಮೀಪದ ಜಮೀನನ್ನು ಲೆವೆಲ್ ಮಾಡುವ ಸಂದರ್ಭ ಹೆಬ್ಬಾವುಗಳು ಬಾವಿಗೆ ಬಿದ್ದಿತ್ತು. ಸುಮಾರು ಐದಾರು ತಿಂಗಳ ಕಾಲ ಯಾರ ಕಣ್ಣಿಗೂ ಹಾವುಗಳು ಕಾಣಿಸಿಕೊಂಡಿರಲಿಲ್ಲ. ವಾರಗಳ ಹಿಂದೆ ಸ್ಥಳೀಯರಿಗೆ ಹೆಬ್ಬಾವು ಇರುವುದನ್ನು ನೋಡಿದ್ದಾರೆ.

    ಉಡುಪಿಯ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕ ಮಾಡಲಾಯ್ತು. ನಿತ್ಯಾನಂದ ಒಳಕಾಡು ಉರಗತಜ್ಞ ಗುರುರಾಜ್ ಸನಿಲ್ ಮತ್ತು ಅಗ್ನಿಶಾಮಕ ದಳವನ್ನು ಕರೆಸಿದರು. ಉರಗ ತಜ್ಞ ಗುರುರಾಜ್ ಅಗ್ನಿಶಾಮಕ ದಳದ ಸಹಾಯದಿಂದ ಬಾವಿಗಿಳಿದು ಮೊದಲು ಒಂದು ಹಾವನ್ನು ರಕ್ಷಣೆ ಮಾಡಿದರು.

    ಅದಾಗ್ಲೆ ಇನ್ನೊಂದು ಗಂಡು ಹೆಬ್ಬಾವು ಬಾವಿಯೊಳಗಿದ್ದ ಬಿಲವನ್ನು ಸೇರಿತ್ತು. ಬಿಲ ಹೊಕ್ಕಿದ್ದ ಹಾವನ್ನು ಹೊರ ತೆಗೆಯಲು ಕೆಲಕಾಲ ಹರಸಾಹಸ ಪಡಬೇಕಾಯ್ತು. ಸುತ್ತಲೂ ಹೊಂಡವನ್ನು ತೋಡಿ ಇನ್ನೊಂದು ಹಾವನ್ನು ಹೊರ ತೆಗೆಯಲಾಯ್ತು.

    ಡಿಸೆಂಬರ್ ನಿಂದ ಮಾರ್ಚವರೆಗೆ ಹಾವುಗಳು ಮಿಲನ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಈ ಸಂದರ್ಭ ಹೆಬ್ಬಾವುಗಳು ಬಾವಿಗೆ ಬಿದ್ದಿರಬಹುದು ಎಂದು ಗುರುರಾಜ್ ಹೇಳಿದ್ದಾರೆ. ರಕ್ಷಿಸಲ್ಪಟ್ಟ ಜೋಡಿ ಹೆಬ್ಬಾವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗುರುರಾಜ್ ಹಸ್ತಾಂತರ ಮಾಡಿದರು.

    ಐದಾರು ತಿಂಗಳಿಂದ ಆಹಾರವಿಲ್ಲದೆ ಹೆಬ್ಬಾವುಗಳು ಸಿಕ್ಕಾಪಟ್ಟೆ ಸೊರಗಿ ಹೋಗಿದ್ದವು. ನೀರಿರುವ ಕಾಡಿನಲ್ಲಿ ಮೊಟ್ಟೆಗಳನ್ನು ನೀಡಿ ಹಾವುಗಳನ್ನು ಕೆಲದಿನ ಸಂರಕ್ಷಿಸಬೇಕು. ನಂತರ ಅರಣ್ಯಕ್ಕೆ ಹೊಂದಿಕೊಂಡ ಮೇಲೆ ಹೊರಗೆ ಬಿಡಬಹುದು ಎಂದು ಉರಗತಜ್ಞ ಗುರುರಾಜ್ ಹೇಳಿದ್ದಾರೆ. ಉರಗತಜ್ಞರು- ಅಗ್ನಿಶಾಮಕದಳ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಈ ಸಂದರ್ಭದಲ್ಲಿ ಅಭಿನಂದಿಸಿದರು.

    https://www.youtube.com/watch?v=qC22PUUNwCQ

     

     

  • ವಾಟ್ಸಪ್ ಓದುಗರು ಗ್ರೂಪ್‍ನಿಂದ ನಾಳೆ ಉಡುಪಿಯಲ್ಲಿ ಅಮರಾವತಿ ಚಿತ್ರ ಪ್ರದರ್ಶನ

    ವಾಟ್ಸಪ್ ಓದುಗರು ಗ್ರೂಪ್‍ನಿಂದ ನಾಳೆ ಉಡುಪಿಯಲ್ಲಿ ಅಮರಾವತಿ ಚಿತ್ರ ಪ್ರದರ್ಶನ

    ಉಡುಪಿ: ವಾಟ್ಸಾಪ್ ಓದುಗರು ಗ್ರೂಪ್ ಪೌರ ಕಾರ್ಮಿಕರ ಜೀವನ ಕಥೆಯುಳ್ಳ, ಬಿ.ಎಂ.ಗಿರಿರಾಜ್ ನಿರ್ದೇಶನದ “ಅಮರಾವತಿ” ಕನ್ನಡ ಚಲನಚಿತ್ರ ಪ್ರದರ್ಶನ ಫೆಬ್ರವರಿ 23 ಗುರುವಾರದಂದು ಉಡುಪಿಯ ಡಯಾನಾ ಥಿಯೇಟರಿನಲ್ಲಿ ಆಯೋಜಿಸಿದೆ.

    ಸಂಜೆ 4.30 ಹಾಗೂ 7.30 ಕ್ಕೆ ಎರಡು ಶೋಗಳು ಗುರುವಾರದಂದು ಪ್ರದರ್ಶನಗೊಳ್ಳಲಿವೆ. ಸಂಜೆ ಮತ್ತು ರಾತ್ರಿಯ ಎರಡು ಶೋಗಳಿಗಾಗಿ ಥಿಯೇಟರನ್ನು ಬುಕ್ ಮಾಡಿದ್ದು, ಟಿಕೆಟ್ ದರವನ್ನು 60 ರೂ. ಹಾಗೂ 50 ರೂ. ಯಂತೆ ನಿಗದಿ ಮಾಡಲಾಗಿದೆ.

    ಸಾಮಾಜಿಕ ಕಳಕಳಿಯ ಸಂದೇಶವಿರುವ ಅಮರಾವತಿ ಚಿತ್ರ ಪ್ರದರ್ಶನಕ್ಕೆ ಉಡುಪಿಯ ಡಯಾನಾ ಥಿಯೇಟರ್ ಕಡಿಮೆ ದರದಲ್ಲಿ ಅವಕಾಶ ನೀಡಿದೆ. ಎರಡು ಪ್ರದರ್ಶನಗಳ ನಂತರ ನಿರ್ದೇಶಕರು ಹಾಗೂ ನಟರನ್ನೊಳಗೊಂಡ ಅಮರಾವತಿ ಚಿತ್ರತಂಡ ಪ್ರದರ್ಶನದ ದಿನ ಆಗಮಿಸಲಿದೆ. ಚಿತ್ರದ ನಂತರ ಅವರೊಂದಿಗೆ ಸಂವಾದವಿದೆ ಎಂದು ಓದುಗರು ವಾಟ್ಸಾಪ್ ಗ್ರೂಪ್ ಮುಖ್ಯಸ್ಥ ಮಂಜುನಾಥ್ ಹೇಳಿದ್ದಾರೆ.

    ಪೌರ ಕಾರ್ಮಿಕರಿಗೆ ಉಚಿತ, ವಿಶೇಷ ಆಹ್ವಾನ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಉಚಿತ ಹಾಗೂ ವಿಶೇಷ ಆಹ್ವಾನ ನೀಡಲಾಗಿದೆ. ಸಂವಾದದಲ್ಲಿ ಪೌರಕಾರ್ಮಿಕರೂ ಭಾಗವಹಿಸಲಿದ್ದು ತಮ್ಮ ಜೀವನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ.

    ಉಡುಪಿ ಮೂಲದ ಓದುಗರು ಬಳಗ ವರ್ಷದ ಹಿಂದೆ ಮೊದಲ ಪ್ರಯತ್ನವಾಗಿ ಮಂಗಳಮುಖಿಯರ ಜೀವನ ಕಥೆ ಆಧರಿಸಿದ, ಲಿಂಗದೇವರು ನಿರ್ದೇಶನದ `ನಾನು ಅವನಲ್ಲ ಅವಳು’ ಸಿನಿಮಾ ಪ್ರದರ್ಶನ ಮಾಡಿಸಲಾಗಿತ್ತು. ಎರಡು ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು. ಕಲೆಕ್ಷನ್ ಆದ ಹಣದಲ್ಲಿ ಉಡುಪಿಯ ಮಂಗಳ ಮುಖಿಯರು ಶಿಕ್ಷಣ, ಉದ್ಯೋಗ ಹೀಗೆ ಸಮಾಜದ ಮುಖ್ಯವಾಹಿನಿಗೆ ಬರಲು ಬೇಕಾದ ಸಹಾಯವನ್ನು ಮಾಡಿತ್ತು.

    ಈ ಬಾರಿ ಅಮರಾವತಿ ಚಿತ್ರದಂತಹ ಸದಭಿರುಚಿಯ ಸಿನಿಮಾಗಳಿಗೆ ಜನ ಬರುವುದಿಲ್ಲ, ಥಿಯೇಟರ್ ಸಿಗುವುದಿಲ್ಲ ಎಂಬುದನ್ನು ಸುಳ್ಳು ಮಾಡಬೇಕು. ಪೌರ ಕಾರ್ಮಿಕರ ಸಮಸ್ಯೆ ಏನೆಂಬುದನ್ನು ಎಲ್ಲರೂ ಅರಿಯಬೇಕು. ಅವರ ಜೀವನ ಹೇಗಿದೆ ಎಂದು ತಿಳಿಯಲು ಆಯೋಜಕರು ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.

     

  • ಟೋಲ್ ವಿರೋಧಿಸಿ ಉಡುಪಿ ಬಂದ್ – ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಗಲಾಟೆ ನಡೀತಿದೆ. ಮಂಗಳೂರು- ಉಡುಪಿ- ಕುಂದಾಪುರ ನಡುವೆ ಮೂರು ಟೋಲ್ ಗೇಟ್ ನಿರ್ಮಾಣ ಮಾಡಿದ್ದೇ ಈ ಹೋರಾಟಕ್ಕೆ ಕಾರಣವಾಗಿದೆ.

    ಎರಡೂ ಟೋಲ್‍ಗಳ ಮೂಲಕ ಹೋಗಿ ಬರೋ ಎಲ್ಲಾ ವಾಹನಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಬಸ್ ಗಳು ಹೆದ್ದಾರಿಗೆ ಇಳಿದಿಲ್ಲ. ಪರಿಣಾಮ ಪ್ರಯಾಣಿಕರು ಉಡುಪಿ ಬಸ್ ನಿಲ್ದಣದಲ್ಲೇ ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದವರು ಕೂಡ ಪರದಾಟ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮಂಗಳೂರು, ಚಿಕ್ಕಮಗಳೂರು, ಕಾರವಾರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 6 ಇನ್ಸ್‍ಪೆಕ್ಟರ್, 35 ಎಸ್‍ಐ, 25 ಎಎಸ್‍ಐ, 5 ಕೆಎಸ್‍ಆರ್‍ಪಿ, 6 ಡಿಎಆರ್ ಪೊಲೀಸರು, 109 ಮಂದಿ ಹೋಮ್ ಗಾರ್ಡ್‍ಗಳನ್ನ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನೇಮಕ ಮಾಡಲಾಗಿದೆ. ಪಡುಬಿದ್ರೆ ಸಮೀಪದ ಹೆಜಮಾಡಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಕೆನರಾ ಬಸ್ ಮಾಲೀಕರ ಸಂಘ, ಟ್ಯಾಕ್ಸಿಮೆನ್ ಅಸೋಸಿಯೇಷನ್, ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘ- ಹೋಟೆಲ್ ಮತ್ತು ಬಾರ್ ಅಸೋಸಿಯೇಷನ್ ಇಂದು ಬಂದ್ ಮಾಡೋ ನಿರ್ಧಾರ ಮಾಡಿತ್ತು.

    ಹೆಜಮಾಡಿ ಮತ್ತು ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಬಂದ್ ನ ಮುಂದಾಳತ್ವ ವಹಿಸಿದೆ. ಹೈವೇಯುದ್ದಕ್ಕೂ ಅಲ್ಲಲ್ಲಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಡುಪಿ ರಿಜಿಸ್ಟ್ರೇಷನ್ ನ ಕೆ.ಎ 20 ಎಲ್ಲಾ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋದು ಹೋರಾಟಗಾರರ ಉದ್ದೇಶ. ಆಂಧ್ರ ಮೂಲದ ನವಯುಗ ಕನ್‍ಸ್ಟ್ರಕ್ಷನ್‍ಗೆ ಹೈವೇ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಜಗನ್ಮೋಹನ್ ರೆಡ್ಡಿ ಜೈಲುವಾಸದಿಂದ ಮತ್ತು ಉಡುಪಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ನದಿ- ಉಪನದಿಗಳು ಹಾದು ಹೋಗೋದರಿಂದ ಕಾಮಗಾರಿ ವಿಳಂಬವಾಗಿದೆ.

    ಇನ್ನು ಕೆಲವೆಡೆ ಸ್ಟೇ ಬಂದಿರೋದ್ರಿಂದ ಪಡುಬಿದ್ರೆ- ಕುಂದಾಪುರ ಭಾಗದಲ್ಲಿ ರಸ್ತೆಕಾಮಗಾರಿ ಪೂರ್ಣಗೊಂಡಿಲ್ಲ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಕಂಪನಿ ರಸ್ತೆ ಮಾಡಿರೋದ್ರಿಂದ ಬ್ಯಾಂಕ್ ಗೆ ಮರುಪಾವತಿ ಮಾಡಲು ಒತ್ತಡ ಬರುತ್ತಿದೆ ಅಂತ ಜಿಲ್ಲಾಡಳಿತಕ್ಕೆ ನವಯುಗ ಒತ್ತಡ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಂಕ ವಸೂಲಿಗೆ ಪರವಾನಿಗೆ ನೀಡಿದೆ. ಸೆಕ್ಷನ್ 144 ಹಾಕಿ ಹೋರಾಟ ನಡೆಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.