Tag: ಉಡುಪಿ

  • ಬಿಸಿಲ ಬೇಗೆಯಿಂದ ನೀರನ್ನು ಹುಡುಕುತ್ತಿದೆ ಈ ಬೆಳ್ಳಕ್ಕಿ

    ಬಿಸಿಲ ಬೇಗೆಯಿಂದ ನೀರನ್ನು ಹುಡುಕುತ್ತಿದೆ ಈ ಬೆಳ್ಳಕ್ಕಿ

    ಉಡುಪಿ: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರ ಎದುರಾಗಿದೆ. ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಜಾನುವಾರು ಮೇವಿಲ್ಲದೆ ತತ್ತರಿಸಿ ಹೋಗಿವೆ. ಇದೆಲ್ಲಾ ನಮ್ಮ ಕಣ್ಣಿಗೆ ಕಾಣುವ ಸತ್ಯ. ಗದ್ದೆ- ಹಳ್ಳಕೊಳ್ಳಗಳು ಒಣಗಿ ಹೋಗಿ ಅದೆಷ್ಟೋ ಪಕ್ಷಿಗಳಿಗೆ ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೆ ಕಂಗಾಲಾಗಿದೆ.

    ಉಡುಪಿ ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಕಂಡು ಬಂದ ದೃಶ್ಯ ಇದು. ಬೆಳ್ಳಕ್ಕಿಯೊಂದು ಬಿಸಿಲ ಬೇಗೆಗೆ ತುತ್ತಾಗಿ ನೀರನ್ನು ಹುಡುಕುತ್ತಿರುವ ಫೋಟೋ ಇದು. ಸ್ಥಳೀಯರಾದ ಫ್ಲಾಯ್ಡ್ ಡಿಸೋಜಾ ಈ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. ಆಹಾರ ಸಿಗದೇ ಸಪ್ಪೆ ಮೋರೆ ಹಾಕಿ ನಿಂತಿರುವ ಬೆಳ್ಳಕ್ಕಿ ನೀರಿಗಾಗಿ, ಹುಳು ಹುಪ್ಪಟೆಗಾಗಿ ಅರಸುತ್ತಿರುವ ಫೋಟೋ ಇದು.

    ಕರಾವಳಿ ಭಾಗದ ಗದ್ದೆಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಇರುತ್ತವೆ. ಮಳೆಗಾಲದಲ್ಲಿ ಗದ್ದೆ ಕೆರೆ-ತೊರೆ ತುಂಬಿ ಸಂಭ್ರಮದಲ್ಲಿರುತ್ತವೆ. ಆದ್ರೆ ಬೇಸಿಗೆ ಬಂದೊಡನೆ ಬೇರೆಡೆ ಹಾರಿ ಹೋಗುತ್ತವೆ.

    ನಿಮ್ಮ ಮನೆ- ಕಚೇರಿ ಅಕ್ಕಪಕ್ಕದಲ್ಲಿ ಬಾಯಾರಿದ ಪಕ್ಷಿಗಳಿಗಾಗಿ ನೀರಿಡಿ. ಮಾತು ಬಾರದ, ಕಷ್ಟ ಹೇಳಿಕೊಳ್ಳಲಾಗದ ಬಾನಾಡಿಗಳಿಗೆ ಸಹಾಯ ಮಾಡಿ ಅನ್ನೊದು ಪಬ್ಲಿಕ್ ಟಿವಿಯ ವಿನಂತಿ.

    ಇದನ್ನೂ ಓದಿ: ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

  • ಉಡುಪಿ: ಬಾನೆತ್ತರದಲ್ಲಿ ಆಚಾರ್ಯ ಮಧ್ವರು ವಿರಾಜಮಾನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ

    ಉಡುಪಿ: ಬಾನೆತ್ತರದಲ್ಲಿ ಆಚಾರ್ಯ ಮಧ್ವರು ವಿರಾಜಮಾನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ

    ಉಡುಪಿ: ಮೂರು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಆಚಾರ್ಯ ಮಧ್ವರ 32 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮಧ್ವಾಚಾರ್ಯರು ಹುಟ್ಟಿ- ಓಡಾಡಿದ ಜಾಗ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ. ಇಲ್ಲಿಗೆ ಸಮೀಪದ ಕುಂಜಾರುಗಿರಿಯ ತಪ್ಪಲು ಪ್ರದೇಶದಲ್ಲಿ ಮಧ್ವಾಚಾರ್ಯರ ಏಕಶಿಲಾ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

    40 ಅಡಿ ಎತ್ತರದ ಪೀಠದ ಮೇಲೆ 10 ಅಡಿ ಎತ್ತರದ ಪದ್ಮಪೀಠ ರಚನೆ ಮಾಡಲಾಗಿದ್ದು, ಅದರ ಮೇಲೆ ಮಧ್ವಾಚಾರ್ಯರ ಏಕಶಿಲಾ ಮೂರ್ತಿಯನ್ನು ನಿಲ್ಲಿಸಲಾಗಿದೆ. ಬೃಹತ್ ಮೂರ್ತಿಯ ಹಿಂಭಾಗದಲ್ಲಿ ದುರ್ಗಾದೇವಿ ದೇವಸ್ಥಾನ, ಮುಂಭಾಗದಲ್ಲಿ ಪರಶುರಾಮ ಬೆಟ್ಟವಿದ್ದು ಎರಡು ಬೆಟ್ಟಗಳ ಮಧ್ಯೆ ಮಧ್ವಾಚಾರ್ಯರು ವಿರಾಜಮಾನರಾಗಿ ನಿಂತಿದ್ದಾರೆ.

    ಮೂರು ಕೋಟಿ ವೆಚ್ಚ: ಎತ್ತರದಲ್ಲಿ ನಿಂತಿರುವ ಭಂಗಿಯಲ್ಲಿರುವ ಆಚಾರ್ಯರ ಮೂರ್ತಿ ಎಲ್ಲರನ್ನೂ ಸೆಳೆಯುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದು, ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಇದರ ನೇತೃತ್ವ ವಹಿಸಿದ್ದಾರೆ. ಅದಮಾರು ಮಠ ಮತ್ತು ಸ್ಥಳೀಯರ ಸಹಕಾರದಿಂದ ಸುತ್ತಲಿನ ಜಮೀನನ್ನು ಖರೀದಿಸಿ ಈ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಉಡುಪಿಗೆ ಬರುವ ಧಾರ್ಮಿಕ ಪ್ರವಾಸಿಗರಿಗೆ ಮಧ್ವಮೂರ್ತಿಯ ವಿಶೇಷ ದರ್ಶನ ಸಿಗಲಿದೆ.

    ಕೃಷ್ಣಮಠ ಸ್ಥಾಪಿಸಿದ ಆಚಾರ್ಯರು: ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗೋದು ಕಡೆಗೋಲು ಶ್ರೀಕೃಷ್ಣ. ಕಡೆಗೋಲು ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪನೆ ಮಾಡಿದವರು ಮಧ್ವಾಚಾರ್ಯರು. ಹೀಗಾಗಿ ಮಧ್ವಾಚಾರ್ಯರ ಜನ್ಮಸ್ಥಾನದಲ್ಲಿ ಆಚಾರ್ಯರ ಬೃಹತ್ ಪುತ್ಥಳಿ ಸ್ಥಾಪನೆ ಮಾಡಬೇಕೆಂಬ ಅಭಿಲಾಷೆಯಿಂದ ಈ ಕಾರ್ಯಕ್ಕೆ ಪಲಿಮಾರು ಮಠ ಈ ಯೋಜನೆಯನ್ನು ಹಾಕಿಕೊಂಡಿತ್ತು. ಮುಂದಿನ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯವರ ಹಲವು ಕನಸುಗಳಲ್ಲಿ ಇದೂ ಒಂದಾಗಿತ್ತು.

    ಮಧ್ವಾಚಾರ್ಯರು ನೋಡಲು ಅತೀ ಸುಂದರವಾಗಿದ್ದರು. ಆಚಾರ್ಯರನ್ನು ಹನುಮ-ಭೀಮರ ಅವತಾರ ಎಂಬ ನಂಬಿಕೆಯಿದೆ. ಶಿಲ್ಪಿಯೊಬ್ಬರಿಗೆ ಮಧ್ವರೇ ಕಲ್ಪನಾ ಮೂರ್ತಿ. 32 ಲಕ್ಷಣಗಳು ಮಧ್ವರ ದೇಹದಲ್ಲಿತ್ತು. ಅದನ್ನು ಜಗತ್ತಿಗೆ ತೋರಿಸುವ ಸಲುವಾಗಿ 32 ಅಡಿ ಎತ್ತರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸಂತ್ರಸಾರದ ಲಕ್ಷಣಗಳನ್ನು ಒಳಗೊಂಡಂತೆ ಮೂರ್ತಿಯನ್ನು ಕೆತ್ತಲಾಗಿದೆ. ಆಚಾರ್ಯರು ನಮ್ಮೆಲ್ಲರನ್ನು ಮತ್ತು ನಾವು ಆಚಾರ್ಯರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿದೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶರು ಹೇಳಿದ್ದಾರೆ.

    ಮೂರ್ತಿ ಕೆತ್ತಿದ್ದು ಯಾರು..?: ದೇಶಾದ್ಯಂತ ಹಲವು ಬೃಹತ್ ಮೂರ್ತಿಗಳನ್ನು ಕೆತ್ತಿರುವ ಹಿರಿಯ ಹಾಗೂ ಪ್ರಸಿದ್ಧ ಶಿಲ್ಪಿ ಅಶೋಕ್ ಗುಡಿಗಾರು ಮತ್ತು ತಂಡ ಈ ಸುಂದರ ಶಿಲ್ಪದ ಕೆತ್ತನೆಯನ್ನು ಮಾಡಿದೆ. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್‍ಗಳು ಮತ್ತು ಸಿಬ್ಬಂದಿ . ಸುಮಾರು 32 ತಿಂಗಳುಗಳ ಕಾಲ ಸುಂದರ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿದ್ದರು. ಸಾವಿರಾರು ಮಂದಿ ಸ್ಥಳೀಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

    ಅಮೇರಿಕನ್ ಟೆಕ್ನಾಲಜಿ: ಮಲಗಿದ್ದ ಮಧ್ವಾಚಾರ್ಯರ ಮೂರ್ತಿಯನ್ನು ಎದ್ದು ನಿಲ್ಲಿಸಲು ಅಮೇರಿಕಾದ ಕ್ರೈನ್ ಬಳಸಲಾಯ್ತು. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್‍ಗಳು- ಕಾರ್ಮಿಕರು ಮೂರು ದಿನ ಈ ಕಾರ್ಯದಲ್ಲಿ ತೊಡಗಿದರು. ಬೃಹತ್ ಕ್ರೈನ್‍ಗಳು, ರೋಡ್ ರೋಲರ್, ಜೆಸಿಬಿ, ಕಬ್ಬಿಣದ ರೋಪ್‍ಗಳ ಸಹಿತ ಹತ್ತಕ್ಕೂ ಹೆಚ್ಚು ಇಂಜಿನಿಯರ್‍ಗಳು, ಸುಮಾರು 25 ಸಿಬ್ಬಂದಿ ಮೂರ್ತಿ ಎತ್ತಿ, ಪೀಠದ ಮೇಲೆ ಪ್ರತಿಷ್ಠಾಪಿಸುವಲ್ಲಿ ತೊಡಗಿದ್ದರು.

    ಡ್ರೋನ್ ಮೂಲಕ ಪಕ್ಷಿನೋಟ: ಎರಡು ಬೆಟ್ಟಗಳು- ಸುತ್ತಲೂ ಹಚ್ಚ ಹಸುರಿನ ಕಾಡು. ಈ ನಡುವೆ ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಡ್ರೋನ್ ಕ್ಯಾಮೆರಾ ದೃಶ್ಯ ಮತ್ತು ಫೋಟೋಗಳನ್ನು, ಸುತ್ತಲ ರಮಣೀಯ ಪರಿಸರವನ್ನು ಸೆರೆಹಿಡಿದಿದ್ದು ನೋಡಲು ಸುಂದರ- ನಯನ ಮನೋಹರವಾಗಿದೆ.

    ಉಡುಪಿಯ ಪಲಿಮಾರು ಮಠ ಈ ಮೂರ್ತಿ ಮೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಮೂರ್ತಿಯ ಕೆಳಭಾಗದಲ್ಲಿ ಮುಂದಿನ ದಿನಗಳಲ್ಲಿ ಮುಂದಿ ದಿನಗಳಲ್ಲಿ ಧ್ಯಾನ- ಭಜನೆ, ಪ್ರವಚನಗಳು ನಡೆಯಲಿದೆ. ಕುಂಜಾರು ಗಿರಿಯ ತಪ್ಪಲಿನಲ್ಲಿ ಉದ್ಯಾನವನ ಸ್ಥಾಪನೆ ಮಾಡಲಿದ್ದು ಮಧ್ವಾಚಾರ್ಯರಿಗೆ ದಿನವೂ ಪೂಜೆ ಪುನಸ್ಕಾರ ನಡೆಯಲಿದೆ.

  • ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಉಡುಪಿ: ಒಬ್ಬ ಒಳ್ಳೆಯ ಶಿಕ್ಷಕ ಒಂದು ಶಾಲೆಯನ್ನು ಮಾತ್ರವಲ್ಲ ಒಂದು ಊರನ್ನೇ ಬದಲಾಯಿಸಬಹುದು ಅನ್ನೋ ಮಾತಿದೆ. ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುರಳಿ ಕಡೆಕಾರು ಮಾಸ್ಟರ್ ಸರ್ಕಾರಕ್ಕೂ ಮುನ್ನವೇ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದವರು.

    ಮುರುಳಿ ಅವರು ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹೆಡ್ ಮಾಸ್ಟರ್. ಗಣಿತ ಬೋಧಿಸುವ ಇವರು ಈ ಶಾಲೆಗೆ ಬಂದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. 2000ನೇ ಇಸವಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಶುರು ಮಾಡಿದ ಹೆಗ್ಗಳಿಕೆ ಇವರದ್ದು. ದಾನಿಗಳಿಂದ ದೇಣಿಗೆ ಪಡೆದು ಮಕ್ಕಳಿಗೆ ಗಂಜಿ ಊಟ ಶುರು ಮಾಡಿದ್ದರು. ಇದಾಗಿ ಒಂದು ವರ್ಷದ ನಂತರ ಕೃಷ್ಣಮಠದಿಂದ ಬಿಸಿಯೂಟ ಸರಬರಾಜು ಶುರುವಾಯ್ತು. ಇದಾಗಿ ಆರು ವರ್ಷದ ನಂತರ ರಾಜ್ಯ ಸರ್ಕಾರ ಮಕ್ಕಳಿಗೆ ಬಿಸಿಯೂಟ ನೀಡಿತು.

    ಇದಲ್ಲದೆ ಈ ಶಾಲೆಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಳಿತಾಯ ಖಾತೆ ತೆರೆಯಲಾಗುತ್ತದೆ. 1 ರೂಪಾಯಿಯಿಂದ ಸೇವಿಂಗ್ ಅಕೌಂಟ್ ಶುರುವಾಗುತ್ತೆ. ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿಹೋಗುವಾಗ ಸುಮಾರು 10 ರಿಂದ 20 ಸಾವಿರ ರೂಪಾಯಿ ಉಳಿಸುತ್ತಾರೆ. ಬರುವ ಬಡ್ಡಿಯಲ್ಲಿ ಅರ್ಧದಷ್ಟು ಖಾತೆ ಹೊಂದಿದ ಮಕ್ಕಳಿಗೆ ನೀಡಿದ್ರೆ, ಮಿಕ್ಕುಳಿದ ಹಣವನ್ನ ಶಾಲೆಯ ಅಭಿವೃದ್ಧಿ, ಬಡ ಮಕ್ಕಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ವಿನಿಯೋಗಿಸಲಾಗುತ್ತದೆ.

    ಶಾಲೆ ಬಿಟ್ಟ ಮೇಲೂ ಮುರಳಿ ಅವರು ಸಂಜೆ 7ರವರೆಗೆ ಕ್ಲಾಸ್ ಮಾಡ್ತಾರೆ. ಯಕ್ಷಗಾನದಲ್ಲೂ ಭಾಗಿಯಾಗ್ತಾರೆ. ಮುರಳಿ ಅವರ ಸೇವ ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಆಶಯ.

     

    https://www.youtube.com/watch?v=gArcpAAgrRA

     

  • ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.

    ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.

    ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.

    ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.

     

  • ಉಡುಪಿ: ಪೇಜಾವರ ಶ್ರೀಗಳಿಂದ `ದಿಬ್ಬಣ’ ಧ್ವನಿಸುರುಳಿ ಬಿಡುಗಡೆ

    ಉಡುಪಿ: ಪೇಜಾವರ ಶ್ರೀಗಳಿಂದ `ದಿಬ್ಬಣ’ ಧ್ವನಿಸುರುಳಿ ಬಿಡುಗಡೆ

    ಉಡುಪಿ: ಸ್ಯಾಂಡಲ್ ವುಡ್ ನಲ್ಲಿ ಒಂದೆಡೆ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿದ್ದರೆ ಇತ್ತ ಕರಾವಳಿಯಲ್ಲಿ ತುಳು ಚಿತ್ರಗಳ ಸಂಖ್ಯೆ ದಿನೇ ದಿನೆ ಜಾಸ್ತಿಯಾಗುತ್ತಿದೆ. ಈ ನಡುವೆ ಉಡುಪಿಯಲ್ಲಿ `ದಿಬ್ಬಣ’ ಅನ್ನೋ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಿದೆ.

    ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಾರಿನ್ ಕಂಬೈನ್ಸ್ ರವರ “ರಂಗ್ ರಂಗ್ ದ ದಿಬ್ಬಣ” ತುಳು ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು.

    ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಸ್ವಾಮೀಜಿ, ತುಳು ಭಾಷೆಯಲ್ಲಿ ಹಲವಾರು ಚಲನಚಿತ್ರಗಳು ಬರುತ್ತಿದೆ. ಚಲನಚಿತ್ರಗಳ ಸಂಖ್ಯೆ ಜಾಸ್ತಿಯಾಗುವುದು ಸಾಧನೆಯಲ್ಲ. ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ಧನಾತ್ಮಕ ಚಿಂತನೆಗಳನ್ನು ಕೊಡುತ್ತದೆ ಎಂಬುವುದು ಮುಖ್ಯ. ಕೃಷ್ಣಮಠದಲ್ಲಿ ಹಲವಾರು ಚಲನಚಿತ್ರಗಳ ಮುಹೂರ್ತಗಳು ನಡೆದಿದೆ. ಭಕ್ತಿಪ್ರಧಾನ ಚಿತ್ರಗಳು ಕೂಡಾ ಬರಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಿರ್ಮಾಪಕ ಶರತ್ ಕೋಟ್ಯಾನ್, ನಿರ್ದೇಶಕ ಕೃಷ್ಣ ಪ್ರಸಾದ್ ಉಪ್ಪಿನಕೋಟೆ, ಸಂಗೀತ ನಿರ್ದೇಶಕ ಎಸ್.ಪಿ.ಚಂದ್ರಕಾಂತ್, ನಾಯಕ ನಟ ನಟಿಯರಾದ ರವಿರಾಜ್ ಶೆಟ್ಟಿ, ಪ್ರಶಾಂತ್ ಸಾಮಗ, ಸ್ವಾತಿ ಬಂಗೇರ, ಸಂಹಿತಾ ಶಾ ಮುಂತಾದವರು ಉಪಸ್ಥಿತರಿದ್ದರು.

  • ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

    ಉಡುಪಿ: ಭಾರೀ ಕುತೂಹಲ ಕೆರಳಿಸಿದ್ದ ಇಲ್ಲಿನ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಮತ್ತು ದರೋಡೆ ಕೇಸನ್ನು ಪೊಲೀಸರು ಬೇಧಿಸಿದ್ದಾರೆ. ಒಂದೂವರೆ ಕೆಜಿ ಚಿನ್ನದ ಜೊತೆ ಎರಡೂವರೆ ಲಕ್ಷ ರೂಪಾಯಿ ದೋಚಿ ತಲೆಮರೆಸಿಕೊಂಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಿನ್ನದ ವ್ಯಾಪಾರಿ ಅಂತ ಪೊಲೀಸರ ಎದುರು ಪೋಸು ನೀಡಿದ್ದ ವ್ಯಕ್ತಿ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದೊಂದಿಗೆ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ಕೇರಳದ ತ್ರಿಶೂರ್ ನ ಚಿನ್ನದ ವ್ಯಾಪಾರಿ ದಿಲೀಪ್ ದರೋಡೆ ಮಾಡಿದ ಕೇಸಲ್ಲಿ ಏಳು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

    ಏನಿದು ಪ್ರಕರಣ?: ಮಾರ್ಚ್ 17ರಂದು ಉಡುಪಿಯ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್‍ಗೆ ಚಿನ್ನದ ಆಭರಣಗಳನ್ನು ಕೊಟ್ಟು ಚಿನ್ನದ ವ್ಯಾಪಾರಿ ಉಡುಪಿ ನಗರಕ್ಕೆ ಬರ್ತಾಯಿದ್ರು. ದಿಲೀಪ್ ಪ್ರಯಾಣ ಮಾಡುತ್ತಿದ್ದ ಬಸ್ಸನ್ನು ಹತ್ತಿದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಸುಮಾರು 40 ಕಿಲೋಮೀಟರ್ ದೂರದ ಪಡುಬಿದ್ರೆ ಎಂಬಲ್ಲಿಗೆ ದಿಲೀಪ್‍ರನ್ನು ಕರೆದುಕೊಂಡು ಹೋಗಿ ಚಿನ್ನದ ಜೊತೆ ಸುಮಾರು ಎರಡೂವರೆ ಲಕ್ಷ ರೂಪಾಯಿಯನ್ನು ಕಸಿದುಕೊಂಡು ವ್ಯಾಪಾರಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಚಿನ್ನದ ಜೊತೆ ಹಣವನ್ನು ಕಳೆದುಕೊಂಡ ದಿಲೀಪ್ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಚಿನ್ನ ದೋಚಿ ಬಿಟ್ಟು ಪರಾರಿಯಾದ ಸ್ಥಳವನ್ನು ಪಡುಬಿದ್ರೆ ಮತ್ತು ಕಾಪು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರಿನ ಹರಿಕೃಷ್ಣ ಭಟ್ ದರೋಡೆಯ ಪ್ರಮುಖ ಆರೋಪಿ ಆರೋಪಿಯಾಗಿದ್ದು, ಕಿಡ್ನ್ಯಾಪ್‍ಗೆ ಸಹಕರಿಸಿದ ಕುಂದಾಪುರದ ಜಾವೆದ್, ಅಶ್ರಫ್, ಇಲಾಹಿತ್, ರವಿಚಂದ್ರ, ಸುಮಂತ್ ನನ್ನು ಅರೆಸ್ಟ್ ಮಾಡಿದ್ದಾರೆ.

    ಹರಿಕೃಷ್ಣ ಎಂಬುವವನ ಜ್ಯುವೆಲ್ಲರಿ ಶಾಪ್‍ಗೆ ದಿಲೀಪ್ ಹಲವಾರು ವರ್ಷಗಳಿಂದ ಚಿನ್ನದಾಭರಣಗಳನ್ನು ಸಪ್ಲೈ ಮಾಡ್ತಾಯಿದ್ದ. ಈ ಬಾರಿ ಆತನನ್ನೇ ದರೋಡೆ ಮಾಡಲು ಯತ್ನಿಸಲಾಯ್ತು. ಆದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಹೊರಗೆ ಬಂತು. ಇದರ ಜೊತೆ ಕಾನೂನು ಬಾಹಿರವಾಗಿ ಯಾವುದೇ ಬಿಲ್ ಇಲ್ಲದ, ಟ್ಯಾಕ್ಸ್ ಕಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ಅಪರಾಧ. ಹೀಗಾಗಿ ಕೇರಳ ಮೂಲದ ವ್ಯಕ್ತಿಯ ಮೇಲೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕೂತಲ್ಲೇ ಸುಲಭದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು ಎಂಬ ಉದ್ದೇಶದಿಂದ ಆರೋಪಿಗಳೆಲ್ಲಾ ಸ್ಕೆಚ್ ಹೆಣೆದಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೈವಾಡವಿದ್ದು ಐಡಿಯಾ ಕೊಟ್ಟು ಪ್ಲ್ಯಾನ್ ರೂಪಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತಂಡ ಆ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

     

  • ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಉಡುಪಿ: ಡ್ರೋನ್ ಕ್ಯಾಮೆರಾ ಭಾರತ ದೇಶದ ಸೈನ್ಯದಲ್ಲಿ ಮಹತ್ವದ ಪಾತ್ರವಹಿಸ್ತಾಯಿದೆ. ಅದು ಬಿಟ್ಟರೆ ಡ್ರೋನ್ ಯೂಸ್ ಆಗೋದು ವಿಭಿನ್ನ ದೃಶ್ಯಾವಳಿಗಳ ಶೂಟಿಂಗ್‍ಗಾಗಿ. ಇದೇ ಡ್ರೋನನ್ನು ಉಪಯೋಗಿಸಿಕೊಂಡು ಕರ್ನಾಟಕದ ಬರವನ್ನು ನೀಗಿಸಿ ಮಳೆ ಬರಿಸೋದಕ್ಕೆ ಹೊರಟಿದೆ ಉಡುಪಿಯ ಒಂದು ಟೀಂ.

    ಡ್ರೋನ್..! ಕ್ಯಾಮೆರಾ ತಂತ್ರಜ್ಞಾನದ ಸದ್ಯದ ಅತ್ಯುನ್ನತ ಸಂಶೋಧನೆಗಳಲ್ಲಿ ಒಂದು. ನಿಂತಲ್ಲಿಂದ ಬರಿಗಣ್ಣಿನಲ್ಲಿ ನೋಡಲಾಗದ- ಪಕ್ಷಿನೋಟವನ್ನು ಸೆರೆ ಹಿಡಿಯುವ ವಿಭಿನ್ನ ತಂತ್ರಜ್ಞಾನ. ಭೂಮಿಯಿಂದ ವಿಮಾನದಂತೆ ಹಾರಿ ಮತ್ತೆ ಭೂಮಿಗೆ ಇಳಿಯುವ ಸಾಧನ. ಸೈನ್ಯದಲ್ಲಿ ದೇಶದ ರಕ್ಷಣೆಯಲ್ಲಿ ಈ ಡ್ರೋನ್ ಉಪಯೋಗವಾಗುತ್ತಿದೆ. ಅದು ಬಿಟ್ಟರೆ, ಸಿನೆಮಾ ಗಳಲ್ಲಿ ಸುಂದರ ದೃಶ್ಯ ಸೆರೆ ಹಿಡಿಯಲು ಫೋಟೋ ಕ್ಲಿಕ್ ಮಾಡಲು ಡ್ರೋನ್ ಬಳಕೆಯಾಗ್ತಿದೆ. ಆದ್ರೆ ಡ್ರೋನನ್ನು ಬೇರೆಯದೇ ಕಾರಣಕ್ಕೆ ಉಪಯೋಗಿಸಬಹುದು.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರತ್ನಾಕರ್ ಮತ್ತು ಪ್ರಜ್ವಲ್ ದೊಡ್ಡ ಗಾತ್ರದ ಡ್ರೋನ್ ತಯಾರಿ ಮಾಡಿದ್ದಾರೆ. ಇದು ಮಾಮೂಲಿ ಡ್ರೋನ್ ಅಲ್ಲ. ಸಿಲ್ವರ್ ಅಯೋಡೈಸ್ಟ್ ಸೆಲ್‍ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರುತ್ತದೆ. ನೀರಿಯುವ ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.

    ಕ್ಲೌಡ್ ಸೀಡಿಂಗ್ ಡ್ರೋನ್‍ನಲ್ಲಿ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು. ಇದರಲ್ಲಿ ವೇ ಪಾಯಿಂಟ್ ಟೆಕ್ನಾಲಜಿ ಅಪ್ಲೈ ಮಾಡಿದ್ದೇವೆ. 11 ಲಕ್ಷ ರೂಪಾಯಿ ಸದ್ಯ ಖರ್ಚಾಗಿದೆ. ನಾನು ಪಿಯುಸಿ ಕಲಿತವ. ಟೆಕ್ನಿಕಲಿ ನಾನು ಅಷ್ಟು ಪರಿಣಿತ ಅಲ್ಲ. ಹೀಗಾಗಿ ಏರೋನಾಟಿಕಲ್ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದೇನೆ. ಪ್ರಧಾನಿ ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಗೂ ಇದು ಅನ್ವಯವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡಿದರೆ ನಾವು ಮಾಡಿದ ಶ್ರಮ ರಾಜ್ಯ- ದೇಶದ ಜನರಿಗೆ ಉಪಯೋಗವಾಗುತ್ತದೆ ಎಂದು ಡ್ರೋನ್ ವಿನ್ಯಾಸಕ ರತ್ನಾಕರ್ ಹೇಳುತ್ತಾರೆ.

    ಡ್ರೋನ್‍ನಲ್ಲಿ ಮೋಡ ಬಿತ್ತನೆ ಮಾಡಬಹುದು. ತಯಾರಿ ಮಾಡಿರುವ ಮಷೀನ್ ಸಮರ್ಥವಾಗಿದೆ ಎಂದು ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಡ್ರೋನ್ ಉಪಯೋಗವಾಗಬೇಕಾದ್ರೆ ಅದಕ್ಕೆ ಸರ್ಕಾರದ ಸಪೋರ್ಟ್ ಬೇಕು. ಇದೊಂದು ಉತ್ತಮ ಆವಿಷ್ಕಾರ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಯಶಸ್ವಿಯಾದ್ರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆಯಾಗಲಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಿದೆ. ಸಿಎಂ ಮತ್ತು ಕೃಷಿ ಸಚಿವರಿಗೆ ಈ ತಂತ್ರಜ್ಞಾನದ ಪರಿಚಯಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

  • ಉಡುಪಿ: ನಿರೂಪಕಿ ಅನುಶ್ರೀಗೆ ಮದುವೆ!

    ಉಡುಪಿ: ನಿರೂಪಕಿ ಅನುಶ್ರೀಗೆ ಮದುವೆ!

    ಉಡುಪಿ: ಕಿರುತೆರೆಯ ನಂಬರ್ ಒನ್ ನಿರೂಪಕಿ ಅನುಶ್ರೀಗೆ ಲವ್ವಾಗಿದ್ದು ಹಳೇ ಸುದ್ದಿ. ಉಡುಪಿಯಲ್ಲಿ ಮದುವೆಯಾಗಿದ್ದು ಬಿಸಿ ಬಿಸಿ ಸುದ್ದಿ. ಆ್ಯಂಕರ್ ಅನುಶ್ರೀ ತಾಳಿ ಕಟ್ಟಿಸಿಕೊಂಡಿದ್ದಾರೆ. ಸಪ್ತಪದಿ ತುಳಿದಿದ್ದಾರೆ. ಅನುಶ್ರಿಗೆ ಮದುವೆಯಾಗೇ ಹೋಯ್ತಾ ಅಂತ ಪಡ್ಡೆ ಹುಡುಗ್ರೆಲ್ಲ ಶಾಕ್ ಆದ್ರೆ ನಾವ್ ಜವಾಬ್ದಾರರಲ್ಲ.

    ಬಾಯಿ ತೆಗೆದ್ರೆ ಪಟಾಕಿ ತರ ಸಿಡಿಯೋ ಅನುಶ್ರೀ ಮ್ಯಾರೇಜ್ ಸ್ಟೋರಿ ಇದು. ಶಂಕರಪುರ ಮಲ್ಲಿಗೆ ಮುಡಿಗಿಟ್ಟು ಜರತಾರಿ ಸೀರೆ ಉಟ್ಟು- ಬಾಸಿಂಗ ಕಟ್ಟಿಕೊಂಡು ಅನುಶ್ರೀ ಪಕ್ಕಾ ಮದುಮಗಳ ಲುಕ್ ನಲ್ಲಿ ಕಾಣಿಸಿಕೊಂಡರು. ಆದ್ರೆ ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ.

    ಉಡುಪಿಯ ಮಣಿಪಾಲದ ಆರ್‍ಎಸ್‍ಬಿ ಸಭಾ ಭವನದಲ್ಲಿ ಮದುವೆ ಮನೆಯ ಸೆಟ್ ಹಾಕಲಾಗಿತ್ತು. ಮದುವೆಗೆ ಗಣ್ಯರ ಆಗಮನ, ಹೂವಿನಿಂದ ಸಿಂಗರಿಸಿದ್ದ ಸೆಟ್, ಓಲಗ ಎಲ್ಲಾ ಇತ್ತು. ಕೋಸ್ಟಲ್‍ವುಡ್‍ನ ಬಹು ಬಜೆಟ್ ಚಿತ್ರ `ಕೋರಿ ರೊಟ್ಟಿ’ಯಲ್ಲಿ ಅನುಶ್ರೀ ಅಭಿನಯಿಸುತ್ತಿದ್ದಾರೆ. ಉಡುಪಿಯ ರಜನೀಶ್ ನಾಯಕನಾಗಿ ನಟಿಸಿ- ನಿರ್ದೇಶನ ಮಾಡುತ್ತಿದ್ದಾರೆ. ದುಬೈ ಉದ್ಯಮಿಗಳು ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಒಂದು ತಿಂಗಳ ಕಾಲ ನಿರಂತರ ಚಿತ್ರೀಕರಣ ಉಡುಪಿ- ಮಂಗಳೂರಿನಲ್ಲಿ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್‍ನ ಚಿತ್ರೀಕರಣ ನಡೆಯಿತು.

    ಮದುವೆ ಮನೆಯ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಲಾಯ್ತು. ಮೂಲತಃ ಕರಾವಳಿಯವರಾಗಿದ್ರೂ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೀಲ್ ಮದುವೆಯಾಯ್ತು, ರಿಯಲ್ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ನಾನು ಸಿಕ್ಕಾಪಟ್ಟೆ ಯಂಗ್. ಮನೆ ಕಟ್ಟಿಯಾಯ್ತು. ಮದುವೆಗೆ ಕಾಲ ಕೂಡಿ ಬಂದಾಗ ಒಳ್ಳೆ ಹುಡುಗ ಸಿಕ್ಕಿದ ಕೂಡಲೇ ಮದುವೆಯಾಗ್ತೇನೆ. ನನ್ ಮದುವೆ ಫಿಕ್ಸಾದ ಕೂಡಲೇ ಮೊದಲು ಪಬ್ಲಿಕ್ ಟಿವಿಗೆ ಇನ್ಫರ್ಮೇಷನ್ ಕೊಡ್ತೇನೆ ಅಂತ ಹೇಳಿದ್ರು.

    ತುಳು ಚಿತ್ರರಂಗದ ಪ್ರಸಿದ್ಧ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಕನ್ನಡದ ಹಿರಿಯ ನಟ ಹರೀಶ್ ರಾಯ್, ಇಳಾ ವಿಟ್ಲ- ಸ್ಥಳೀಯ ರಂಗಭೂಮಿ ನಟ, ನಟಿಯರು ಕೋರಿ ರೊಟ್ಟಿಯಲ್ಲಿ ಬಣ್ಣಹಚ್ಚಿದ್ದಾರೆ. ಕೋರಿ ರೊಟ್ಟಿ ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳ ದಂಡೇ ಇದೆ.

    ಈ ಹಿಂದಿನ ಎಲ್ಲಾ ತುಳು ಚಿತ್ರಗಳಿಗೆ ಹೋಲಿಸಿದ್ರೆ ಇದು ದೊಡ್ಡ ಬಜೆಟ್‍ನ ಚಿತ್ರ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ಮೂಡಿ ಬರಲಿದೆ. ಇಲ್ಲಿನ ಜನ ಕಾಮಿಡಿಯನ್ನು ಹೆಚ್ಚು ಇಷ್ಟಪಡುವುದರಿಂದ ಇಲ್ಲೂ ಆ ಫ್ಲೇವರ್ ಜಾಸ್ತಿ ಇರುತ್ತದೆ ಅಂತ ಚಿತ್ರದ ನಾಯಕ ನಟ, ನಿರ್ದೇಶಕ ರಜನೀಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಇನ್ನೂ ಮೂರು ದಿನ ಇದೇ ರೀತಿ ಶೃಂಗಾರ ಮಾಡಿಕೊಂಡು ಅನುಶ್ರೀ ಇರ್ತಾರಂತೆ. ಮದುವೆ ಮನೆಗೆ ರೌಡಿಗಳು ಎಂಟ್ರಿ ಕೊಟ್ಟು ಮದುವೆ ಗಂಡಿನ ಜೊತೆ ಹೊಡೆದಾಟ ಮಾಡುವ ಸೀಕ್ವೆನ್ಸ್ ಶೂಟ್ ನಡೆಯಲಿದ್ಯಂತೆ. ಕೋರಿ ರೊಟ್ಟಿಗೂ ಮೊದಲು ಸದ್ಯ ಶೂಟ್ ನಡೆಯುತ್ತಿರುವ ಸಂದರ್ಭದಲ್ಲೂ ತುಳು ಚಿತ್ರಗಳಲ್ಲಿ ನಟಿಸುವಂತೆ ಸುಮಾರು ಆಫರ್‍ಗಳು ಅನುಶ್ರೀಗೆ ಬಂದಿದೆ. ಆದ್ರೆ ಅದ್ಯಾವುದನ್ನೂ ಅವರು ಒಪ್ಪಿಕೊಂಡಿಲ್ಲವಂತೆ. ಒಳ್ಳೆ ಕಥೆ, ಒಳ್ಳೆ ಡೈರೆಕ್ಟರ್ ಸಿಕ್ಕರೆ ತುಳುವಿನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತೇನೆ ಅಂತಾರೆ ಚಟ್ ಪಟ್ ಪಟಾಕಿ ಅನುಶ್ರೀ. 

    https://www.youtube.com/watch?v=bt7ACuLnq3I&feature=youtu.be

  • ಉಡುಪಿ: ಮೀನಿನ ಬಲೆಯಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ

    ಉಡುಪಿ: ಮೀನಿನ ಬಲೆಯಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ

    ಉಡುಪಿ: ಮನೆಯ ಸಮೀಪ ಇಟ್ಟಿದ್ದ ಮೀನಿನ ಬಲೆಯಲ್ಲಿ ಆಕಸ್ಮಿಕವಾಗಿ ಸಿಲುಕಿ ಒದ್ದಾಡುತ್ತಿದ್ದ ಕೇರೆ ಹಾವನ್ನು ರಕ್ಷಿಸಲಾಗಿದೆ.

    ಜಿಲ್ಲೆಯ ಕಾಪು ನಿವಾಸಿ ಹಾಜಬ್ಬ ಎಂಬವರ ಮನೆಯ ಕಂಪೌಂಡ್ ಒಳಗೆ ಬಂದಿದ್ದ ಕೇರೆ ಹಾವು, ಬಿಲದೊಳಗೆ ಅವಿತಿದ್ದ ಇಲಿಯ ಬೇಟೆಗೆ ಇಳಿದಿತ್ತು. ಇಲಿ ಹಿಡಿಯುವ ರಭಸದಲ್ಲಿ ಹಾವು ಕಂಪೌಂಡಿನ ಮೂಲೆಯಲ್ಲಿದ್ದ ಬಲೆಗೆ ಸಿಲುಕಿಕೊಂಡಿತ್ತು.

    ಭಯಗೊಂಡ ಹಾವು ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿದರೂ ಆಗದೆ ಇನ್ನಷ್ಟು ಬಲೆಯ ಒಳಗೆ ಸಿಲುಕಿಕೊಂಡಿತ್ತು. ಒದ್ದಾಡುತ್ತಾ ಹಾವಿನ ಅರ್ಧ ಭಾಗ ಬಲೆಯಲ್ಲಿ ಬಿಗಿದು ಗಾಯಗೊಂಡಿತ್ತು. ಗಾಯದಿಂದ ಇರುವೆಗಳು ಕೂಡ ಹಾವಿನ ಮೇಲೆ ಹರಿದಾಡಿದ್ದವು. ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿ ಸುಸ್ತಾದ ಹಾವು ಅಲ್ಲೇ ಬಿದ್ದುಕೊಂಡಿತ್ತು.

    ಮಧ್ಯಾಹ್ನದ ವೇಳೆ ಮನೆಯವರು ಬಲೆಯಲ್ಲಿ ಸಿಲುಕಿದ ಹಾವನ್ನು ನೋಡಿ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ದೂರವಾಣಿ ಕರೆ ಮಾಡಿ ಹಾವನ್ನು ರಕ್ಷಿಸುವ ಕಾರ್ಯಕ್ಕೆ ಮಾರ್ಗದರ್ಶನ ಪಡೆದರು. ಕೇರೆ ಹಾವನ್ನು ಕೈಯಲ್ಲಿ ಹಿಡಿದು ಬಲೆಯನ್ನು ಕತ್ತರಿಸಿದರು. ಇತರರ ಸಹಾಯದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಡೆಸಿದ ಅವಿರತ ಪ್ರಯತ್ನದಿಂದ ಹಾವನ್ನು ಬಲೆಯಿಂದ ಸಂಪೂರ್ಣವಾಗಿ ಹೊರತೆಗೆದು ರಕ್ಷಿಸಲಾಯಿತು.

    ಹಾವಿನ ಗಾಯಗೊಂಡ ಭಾಗಕ್ಕೆ ಅರಶಿನವನ್ನು ಹಚ್ಚಿ ಆರೈಕೆ ಮಾಡಲಾಯಿತು. ಬಳಿಕ ಗೋಣಿಯಲ್ಲಿ ಹಾಕಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

     

  • ಬೆಂಕಿ ಯುದ್ಧ- ಉಡುಪಿಯ ಕೆಮ್ತೂರಿನಲ್ಲಿ ನಡೆಯುತ್ತೆ ವಿಶಿಷ್ಟ ಜಾತ್ರೆ!

    ಬೆಂಕಿ ಯುದ್ಧ- ಉಡುಪಿಯ ಕೆಮ್ತೂರಿನಲ್ಲಿ ನಡೆಯುತ್ತೆ ವಿಶಿಷ್ಟ ಜಾತ್ರೆ!

    ಉಡುಪಿ: ತುಳುನಾಡಿನ ಸಂಸ್ಕೃತಿ, ಆಚರಣೆ, ನಂಬಿಕೆಗಳೆಂದರೆ ಬೇರೆಡೆಗಿಂತ ಕೊಂಚ ವಿಭಿನ್ನ. ಉಡುಪಿಯ ಕೆಮ್ತೂರಿನಲ್ಲಿ ವಿಶಿಷ್ಟವಾದ ಜಾತ್ರೆಯೊಂದು ನಡೆಯಿತು. ಇಲ್ಲಿ ಎರಡು ಪಂಗಡಗಳು ಉರಿಯುವ ಪಂಜನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಈ ಬೆಂಕಿಯುದ್ಧಕ್ಕೆ ಸ್ವತಃ ದೇವರೇ ಸಾಕ್ಷಿಯಾಗುತ್ತಾರೆ.

    ಈ ಫೋಟೋಗಳನ್ನು ನೋಡಿದರೆ ಇದೇನಿದು ಬೆಂಕಿ ಹಿಡಿದುಕೊಂಡು ಯುದ್ಧ ಮಾಡುತ್ತಿದ್ದಾರಾ ಅಂತ ಅನ್ನಿಸಿಬಿಡುತ್ತದೆ. ಉಡುಪಿಯ ಕೆಮ್ತೂರು ಗ್ರಾಮದಲ್ಲಿ ನಡೆಯುವ ವಿಶಿಷ್ಟ ಜಾತ್ರೆ ಇದು. ಇಲ್ಲಿನ ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜಾತ್ರೆ, ಉತ್ಸವ ನಡೆಯುತ್ತದೆ. ಜಾತ್ರೆಯ ಕೊನೆಯ ದಿನ ದೇವರ ಅಭ್ಯಂಜನ ಸ್ನಾನ ಆದ ಕೂಡಲೇ ಕಟ್ಟೆ ಪೂಜೆ ನಡೆಯುತ್ತದೆ. ಕಟ್ಟೆ ಪೂಜೆಯಾದ ಕೂಡಲೇ ಸೂಟೆದಾರೆ ಅಂದ್ರೆ ಪಂಜನ್ನು ಎಸೆಯುವ ಸಂಪ್ರದಾಯ ಶುರುವಾಗುತ್ತದೆ.

    ದೇವಸ್ಥಾನದ ಎರಡು ಇಕ್ಕೆಲೆಯ ಜನರ ನಡುವೆ ಈ ಯುದ್ಧ ನಡೆಯುತ್ತದೆ. ಆದ್ರೆ ಇದು ಕೇವಲ ಆಚರಣೆಯಷ್ಟೇ. ಹಿಂದೆ ಎಲ್ಲಾ ದೇವಸ್ಥಾನಗಳಲ್ಲಿ ಇಂತಹ ಆಚರಣೆಯಿತ್ತು. ಆದ್ರೆ ಈಗೀಗ ಇಂತಹ ಹಲವು ಸಂಪ್ರದಾಯಗಳು ನಶಿಸಿಹೋಗಿದೆ. ಆದ್ರೆ ಕೆಮ್ತೂರಿನ ಗದ್ದೆಯಲ್ಲಿ ಇಂದಿಗೂ ಸಂಪ್ರದಾಯ ಉಳಿಸಿಕೊಂಡು ಹೋಗಲಾಗುತ್ತಿದೆ. ಉಡುಪಿಯ ಪೈಕಿ ಈಗ ನಮ್ಮ ಊರಿನಲ್ಲಿ ಈ ತರಹದ ಸಂಪ್ರದಾಯ ಕಾಣಸಿಗುತ್ತದೆ. ಬೇರೆ ಕಡೆಯೂ ಮೊದಲು ಇತ್ತು. ಆದ್ರೆ ಇತ್ತೀಚೆಗೆ ಸಂಪ್ರದಾಯವನ್ನು ಜನರು ಕೈಬಿಡುತ್ತಾ ಹೋಗುತ್ತಿದ್ದಾರೆ. ಆದ್ರೆ ನಾವು ಮಾತ್ರ ನಮ್ಮ ಊರಿನಲ್ಲಿ ಉಳಿಸಿಕೊಂಡಿದ್ದೇವೆ ಎಂಬುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸ್ಥಳೀಯ ಕೃಷ್ಣ ಜತ್ತನ ಹೇಳಿದ್ದಾರೆ.

    ಕೆಮ್ತೂರಿನಲ್ಲಿ ಒಂದು ವಾರ ಜಾತ್ರಾ ಮಹೋತ್ಸವ ನಡೆದ ನಂತರ ಈ ಸೂಟೆದಾರೆ ಸಂಪ್ರದಾಯ ನಡೆಯುತ್ತದೆ. ಆದ್ರೆ ಈ ಆಚರಣೆ ಯಾಕೆ ಶುರುವಾಯ್ತು ಅನ್ನೋದಕ್ಕೆ ಯಾರಿಗೂ ಕಾರಣ ಗೊತ್ತಿಲ್ಲ. ತೆಂಗಿನ ಗರಿಯ ಪಂಜು ಮೈಮೇಲೆ ಬಿದ್ದರೂ ಯಾವುದೇ ಗಾಯ ಆಗುವುದಿಲ್ಲ. ರೋಷದಲ್ಲಿ ಬೆಂಕಿ ಎಸೆಯುತ್ತಿದ್ದಾರೆ ಎಂದು ಅನ್ನಿಸಿದರೂ ಎಲ್ಲರೂ ಅಣ್ಣತಮ್ಮಂದಿರಂತೆ ಇದ್ದೇವೆ ಎಂದು ಸ್ಥಳೀಯ ಸುಂದರ್ ಹೇಳುತ್ತಾರೆ.

    ಒಟ್ಟಿನಲ್ಲಿ ಕೆಮ್ತೂರಿನಲ್ಲಿ ನಡೆಯುವ ಈ ಸಂಪ್ರದಾಯಕ್ಕೆ ಇರುವ ಹಿನ್ನೆಲೆ ಬಗ್ಗೆ ಜನರಿಗೆ ಗೊತ್ತಿಲ್ಲ. ಸಂಪ್ರದಾಯ ಮುಂದುವರೆಸುತ್ತೇವೆ ಎಂಬ ಮಾತು ಯುವಕರಿಂದ ಕೇಳಿಬರುತ್ತಿದೆ.