Tag: ಉಡುಪಿ

  • ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ವ್ಯಕ್ತಿಗೆ ವೈಷ್ಣವ ದೀಕ್ಷೆ!

    ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ವ್ಯಕ್ತಿಗೆ ವೈಷ್ಣವ ದೀಕ್ಷೆ!

    – ಮಂತ್ರ ಪಠಿಸಿ, ಮುದ್ರೆ ಒತ್ತಿದ ಪೇಜಾವರ ಶ್ರೀ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ವೈಷ್ಣವ ದೀಕ್ಷೆ ನೀಡಲಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ದೀಕ್ಷೆಯನ್ನು ನೀಡಿದ್ದು ವೈಷ್ಣವತ್ವಕ್ಕೆ ಆದರದಿಂದ ಬರಮಾಡಿಕೊಂಡರು.

    ಉಡುಪಿಯ ಪಡುಬಿದ್ರೆ ಮೂಲದ ಪಾಂಡು ಎಂಬವರು ದೀಕ್ಷೆ ನೀಡಬೇಕೆಂದು 3-4 ಬಾರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನು ಹೇಳಿಕೊಂಡಿದ್ದರು. ಆದ್ರೆ ಸ್ವಾಮೀಜಿ ಅವರು ದೀಕ್ಷೆ ನೀಡುವ ಕಾರ್ಯವನ್ನು ಕೆಲ ತಿಂಗಳ ಕಾಲ ಮುಂದೆ ಹಾಕುತ್ತಾ ಬಂದಿದ್ದರು. ಇದೀಗ ದೀಕ್ಷೆ ಪಡೆಯಲು ಪಾಂಡು ಪರಿಪೂರ್ಣವಾಗಿ ಪಕ್ವವಾಗಿದ್ದಾರೆ ಎಂದು ತಿಳಿದ ಮೇಲೆ ಸ್ವಾಮೀಜಿ ಅವರು ವೈಷ್ಣವ ದೀಕ್ಷೆಯನ್ನು ಧಾರೆಯೆರೆದಿದ್ದಾರೆ.

    ಕೃಷ್ಣ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದೀಕ್ಷಾ ಮಂತ್ರಗಳನ್ನು ಪಠಿಸಿ, ಹೋಮ ನಡೆಸಿ, ಶಂಖ ಮತ್ತು ಚಕ್ರವನ್ನು ಯಜ್ಞದಲ್ಲಿ ಬಿಸಿ ಮಾಡಿ ಪಾಂಡು ಅವರ ತೋಳುಗಳ ಮೇಲೆ ಮುದ್ರೆ ಹಾಕಲಾಯ್ತು. ಮುದ್ರೆ ಹಾಕಿದ ನಂತರ ಕೆಲ ಧಾರ್ಮಿಕ ವಿಧಿ-ವಿಧಾನಗಳನ್ನು ಸ್ವಾಮೀಜಿ ಬೋಧಿಸಿದರು. ನಂತರ ನವಗ್ರಹ ಕಿಂಡಿಯ ಮೂಲಕ ಪಾಂಡು ಅವರು ಶ್ರೀಕೃಷ್ಣನ ದರ್ಶನ ಮಾಡಿದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಅವರ ಅಪೇಕ್ಷೆಯಂತೆ ವೈಷ್ಣವ ದೀಕ್ಷೆ ನೀಡಿದ್ದೇನೆ. ಹಿಂದುಳಿದವರು, ದಲಿತರು ಸಮಾಜದಲ್ಲಿ ಯಾರು ಅಪೇಕ್ಷೆ ಪಟ್ಟು ಬಂದರೂ ವೈಷ್ಣವ ದೀಕ್ಷೆ, ಭಕ್ತಿ ದೀಕ್ಷೆಯನ್ನು ಕೊಡುತ್ತೇನೆ. ಮಂತ್ರ ಜಪವನ್ನು ಬೋಧನೆ ಮಾಡಿ ಶಂಖ- ಚಕ್ರದ ಮುದ್ರೆಯನ್ನು ಇಟ್ಟು ದೀಕ್ಷೆ ನೀಡಿದ್ದೇನೆ. ಮುಂದೆ ಅವರು ವೈಷ್ಣವರಂತೆ ವಿಷ್ಣುವಿನ ಹಾಗೂ ಶ್ರೀಕೃಷ್ಣನ ಅನುಯಾಯಿಯಾಗುತ್ತಾರೆ ಎಂದು ಹೇಳಿದರು.

    ಮಧ್ವಾಚಾರ್ಯರು ಹೇಳಿದಂತೆ ಈ ದೀಕ್ಷೆ ಪಡೆದವರು ಬ್ರಾಹ್ಮಣರಿಗೆ ಸಮಾನ. ದೀಕ್ಷೆ ಪಡೆದವರನ್ನು ಸಮಾಜದಲ್ಲಿ ಯಾರನ್ನೂ ಕೀಳಾಗಿ ನೋಡಬಾರದು. ವೈಷ್ಣವ ದೀಕ್ಷೆ ಪಡೆದವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ಹೇಳಿದರು.

    ಅಸ್ಪøಶ್ಯತೆ ನಿವಾರಣೆಗೆ ವೈಷ್ಣವ ದೀಕ್ಷೆಯೂ ಒಂದು ಮಾರ್ಗ. ಸಮಾಜದಲ್ಲಿನ ಮೇಲು ಕೀಳೆಂಬ ಅಸಮಾನತೆ ಇದರಿಂದ ಹೋಗಲಾಡಿಸಬಹುದು. ಬಯಸಿ ಬಂದ್ರೆ ಹಾಗೂ ಅಪೇಕ್ಷೆ ಪಟ್ಟರೆ ಮುಂದೆಯೂ ನಾನು ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದರು.

  • ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ.

    ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ ಈವರೆಗೆ 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

    ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿಗಳಿಗೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅಂದು ಸ್ಥಳದಲ್ಲಿದ್ದವರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‍ಪಿ ಕೆಟಿ ಬಾಲಕೃಷ್ಣ ಮಾಹಿತಿ ನೀಡಿದರು.

  • ಅಕ್ರಮ ಮರಳು ಮಾಫಿಯಾದವರ ಶೆಡ್ ತೆರವುಗೊಳಿಸಿ: ಉಡುಪಿ ಡಿಸಿ ಆದೇಶ

    ಅಕ್ರಮ ಮರಳು ಮಾಫಿಯಾದವರ ಶೆಡ್ ತೆರವುಗೊಳಿಸಿ: ಉಡುಪಿ ಡಿಸಿ ಆದೇಶ

    ಉಡುಪಿ: ಮರಳು ಮಾಫಿಯಾ ನಡೆಸುವ ಮಂದಿ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ, ಎಸ್‍ಪಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್‍ಗಳನ್ನು ಮತ್ತು ಈ ಸಂಬಂಧ ಸಂಗ್ರಹಿಸಿಟ್ಟಿರುವ ಮೂಲ ಸೌಕರ್ಯಗಳನ್ನು ತಕ್ಷಣವೇ ತೆರವುಗೊಳಿಸಲು ಪೊಲೀಸರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಅಕ್ರಮಗಳನ್ನು ತಡೆಯಲು ನದಿ ತೀರದಲ್ಲಿ ನಿರ್ಮಿಸಲಾದ ಶೆಡ್‍ಗಳನ್ನು ತೆರವುಗೊಳಿಸಿ ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದ್ದಾರೆ.

    ಕಾರ್ಯಾಚರಣೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಪೊಲೀಸರನ್ನೊಳಗೊಂಡ ತಂಡದಲ್ಲಿ ಗಣಿ ಅಧಿಕಾರಿಗಳಿದ್ದು, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಯ ನೇತೃತ್ವದಲ್ಲಿ ದಾಳಿ ನಡೆಸಲಿದ್ದಾರೆ.

    ಈ ಕಾರ್ಯಾಚರಣೆ ತಕ್ಷಣದಿಂದ ಕಾರ್ಯರೂಪಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ಶುರುಮಾಡಿದ್ದಾರೆ. ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಮರಳು ದಿಬ್ಬಗಳಿಗೆ ಭೇಟಿಕೊಟ್ಟು ಜಿಪಿಎಸ್ ಸರ್ವೇ ನಡೆಸುತ್ತಿದ್ದಾರೆ. ಹೊಸ ಸರ್ವೇ- ಹೊಸಾ ಟೆಂಡರ್ ಕರೆಯಬೇಕೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಭಾರೀ ಮರಳು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಸಿಕ್ಕಿತ್ತು. ಏಪ್ರಿಲ್ 2ರ ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಹೊರಟ ಜಿಲ್ಲಾಧಿಕಾರಿ ಪ್ರಿಯಾಂಕ, ತಮ್ಮ ಗನ್ ಮ್ಯಾನ್ ಜೊತೆ ಜಿಲ್ಲಾ ಪಂಚಾಯತ್‍ನ ಕಾರನ್ನು ತೆಗೆದುಕೊಂಡು ತೆರಳಿದ್ದರು. ಅಕ್ರಮ ಮರಳುಗಾರಿಕೆ ದಾಳಿಗೆ ಕುಂದಾಪುರ ಎಸಿ ಶಿಲ್ಪಾ ನಾಗ್, ಸ್ಥಳೀಯ ಅಂಪಾರು ಗ್ರಾಮದ ಲೆಕ್ಕಾಧಿಕಾರಿ ಜೊತೆಯಾಗಿ ತೆರಳಿದ್ದರು. ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮರಳು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಲು ಯತ್ನಿಸಿದಾಗ ಸ್ಥಳದಲ್ಲಿದ್ದ ಸುಮಾರು 40 ಜನ ಒಟ್ಟಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸಿಯವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಹತ್ಯೆಗೆ ಸ್ಥಳೀಯರು ಮುಂದಾಗಿದ್ದರು.

    ಇದನ್ನೂ ಓದಿ: ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

  • ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

    ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

    ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ, ಎಸಿ ಶಿಲ್ಪಾನಾಗ್ ಸೇರಿದಂತೆ ಏಳು ಮಂದಿಯ ಕೊಲೆ ಯತ್ನ ನಡೆದ ಕುಂದಾಪುರದ ಕಂಡ್ಲೂರು ಮರಳು ಅಡ್ಡೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸೇರಿದ್ದು ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಘುಪತಿ ಭಟ್, ಜಿಲ್ಲಾಪಂಚಾಯತ್‍ನ ಮಾಜಿ ಸದಸ್ಯರೊಬ್ಬರಿಗೆ ಸೇರಿದ ಅಡ್ಡೆಯಿದು. ಸ್ವಜನಪಕ್ಷಪಾತ ಮಾಡುವ ಕಾಂಗ್ರೆಸ್ ಸರ್ಕಾರ, ಅವರ ಹೆಸರು ಬಹಿರಂಗಪಡಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ 50ಕ್ಕೂ ಹೆಚ್ಚು ಮಂದಿ ಕೊಲೆಗೆ ಯತ್ನ ಮಾಡಿದ್ರೂ, ಕೇವಲ 7 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಕಾರ್ಮಿಕರು, ಮರಳು ಅಡ್ಡೆಯ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಇದೆ ಎಂದು ಹೇಳಿದರು.

    ಸಚಿವರೂ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವಿದೆ. ಜಿಲ್ಲಾಧಿಕಾರಿಗಳ ಕೊಲೆ ಯತ್ನ ನಡೆದರೂ ಉಸ್ತುವಾರಿ ಸಚಿವರು ಘಟನೆ ನಡೆದು ನಾಲ್ಕು ದಿನಗಳಾದರೂ ಜಿಲ್ಲೆಗೆ ಬಂದಿಲ್ಲ. ಅವರಿಗೆ ಉಪಚುನಾವಣೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

    ಕಳೆದ ನಾಲ್ಕು ವರ್ಷದಿಂದ ಮರಳುಗಾರಿಕೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕಾನೂನು ರೀತಿಯ ಮರಳು ತೆಗೆಯುತ್ತಿದ್ದದ್ದಕ್ಕೆ ಸಚಿವರ ಕಡೆಯ ಜನರಿಂದಲೇ ಕಾನೂನು ಹೋರಾಟ ಮಾಡಿಸಿ ಹಸಿರು ಪೀಠದಿಂದ ತಡೆ ತರಿಸಿದ್ದಾರೆ. ಇನ್ನೊಂದು ಕಡೆಯಿಂದ ಕಾಂಗ್ರೆಸ್ ಪಕ್ಷದವರೇ ಮರಳುಗಾರಿಕೆ ಮಾಡುತ್ತಿದ್ದಾರೆ. ಅದಕ್ಕೆ ಸಚಿವರ ಬೆಂಬಲವಿದೆ. ಇಂತಹ ಗೊಂದಲದಿಂದಲೇ ಜಿಲ್ಲಾಧಿಕಾರಿಗಳ ಮೇಲೆ ಕೊಲೆಯತ್ನ ಮಾಡಲಾಗಿದೆ. ಗ್ರಾಮಲೆಕ್ಕಾಧಿಕಾರಿ ಅವರನ್ನು ಮನಬಂದಂತೆ ಹೊಡೆದು ನೀರಿಗೆ ಬಿಸಾಕಿದ್ದಾರೆ. ಇಷ್ಟೆಲ್ಲಾ ಆದ್ರೂ ಸರಿಯಾದ ಕ್ರಮ ಆಗ್ತಾಯಿಲ್ಲ ಎಂದು ರಘುಪತಿ ಭಟ್ ಆರೋಪಿಸಿದರು.

  • ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್, ಅಂಪಾರು ಗ್ರಾಮದ ವಿಎ ಕಾಂತರಾಜ್, ಡಿಸಿ ಗನ್ ಮ್ಯಾನ್ ಸೇರಿದಂತೆ 7 ಮಂದಿ ಮೇಲೆ ಮರಳು ದಂಧೆಕೋರರು ಕೊಲೆಗೆ ಯತ್ನ ನಡೆಸಿ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಎಸ್‍ಪಿ ಕೆ.ಟಿ.ಬಾಲಕೃಷ್ಣ ಅವರಲ್ಲಿ ಕಂದಾಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದ ಪ್ರತಿಭಟನಾ ಕಟ್ಟೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರತಿಭಟಿಸಿದ್ದಾರೆ. ಇಂದು ಕಂದಾಯ ಇಲಾಖೆಯ ಯಾವುದೇ ವಿಭಾಗಗಳಲ್ಲಿ ಸಾರ್ವಜನಿಕರ ಕೆಲಸ ಆಗುವುದಿಲ್ಲ. ಯಾವುದೇ ಫೈಲ್‍ಗಳು ಮೂವ್ ಆಗುವುದಿಲ್ಲ.

    ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಒಂದೇ ದಿನ ತಮ್ಮ ಹಕ್ಕಿನ ರಜೆ ತೆಗೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಆರು ತಾಲೂಕಿನ ಎಲ್ಲಾ ಆಫೀಸರ್‍ಗಳು- ಕಚೇರಿಗಳ ಸಾವಿರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೇಲಾಧಿಕಾರಿಗಳಿಗೆ ಬೆಂಬಲ ನೀಡಿದ್ದಾರೆ.

    ತಪ್ಪಿತಸ್ಥರೆಲ್ಲರ ಬಂಧನವಾಗಬೇಕು, ಮರಳು ಮಾಫಿಯಾದ ಹಿಂದಿರುವ ಶಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ರೂಪುರೇಷೆ ಬದಲಾಯಿಸಿ- ಉಗ್ರ ಹೋರಾಟಕ್ಕೆ ಇಳಿಯಲು ಸರ್ಕಾರಿ ನೌಕರರ ಸಂಘ ನಿರ್ಧಾರ ಮಾಡಿದೆ.

  • ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಉಡುಪಿ: ಇದು ಅಂತ್ಯ ಅಲ್ಲ.., ಮರಳುಗಾರಿಕೆ ವಿರುದ್ಧದ ಹೊರಾಟದ ಆರಂಭ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುವ ಮೂಲಕ ಮರಳು ಕಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ಅಕ್ರಮದ ವಿರುದ್ಧದ ಹೋರಾಟದ ಆರಂಭ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ- ಎಸಿಯ ಮೇಲೆ ಇಂತಹ ಅಮಾನವೀಯ ಘಟನೆ ಉಡುಪಿಯಂತಹ ಜಿಲ್ಲೆಯಲ್ಲಿ ನಡೆದದ್ದು ವಿಷಾದನೀಯ. ಇದರ ಹಿಂದೆ ಮರಳು ಮಾಫಿಯಾದ ಕೈವಾಡ ಇರಬಹುದು. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು. ನಿನ್ನೆ ರಾತ್ರಿ ಕಂಡ್ಲೂರಿನ ಭಯಾನಕ ವಾತಾವರಣ ನನ್ನನ್ನು ಕೆಲಕಾಲ ಕಂಗೆಡುವಂತೆ ಮಾಡಿತು ಎಂದು ತಡರಾತ್ರಿಯ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಂಡರು.

    ಸ್ಥಳೀಯ ಪೊಲೀಸ್ ಠಾಣೆಗಳಿಗೆ, ತಹಶೀಲ್ದಾರ್, ಎಸಿ ಕಚೇರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ದಾಳಿ ಮಾಡಿದ ಎಲ್ಲಾ ಪ್ರಕರಣಗಳು ಫೇಲ್ ಆಗಿತ್ತು. ಹೀಗಾಗಿ ಈ ಬಾರಿ ಗೌಪ್ಯವಾಗಿ ದಾಳಿ ನಡೆಸಿದ್ದೇವೆ ಎಂದರು.

    ಕುಂದಾಪುರದ ತನಕ ಸುಮಾರು 20 ಬೈಕ್‍ಗಳಲ್ಲಿ ನಮ್ಮನ್ನು ಹಿಂಭಾಲಿಸಿಕೊಂಡು ದುಷ್ಕರ್ಮಿಗಳು ಬಂದರು. ಅವರಿಂದ ತಪ್ಪಿಸಿಕೊಂಡು ಉಡುಪಿಯ ತನಕ ಬಂದಿದ್ದೇವೆ. ಈ ಘಟನೆ ದುರಾದೃಷ್ಟಕರ ಎಂದರು. ಉಡುಪಿ ಜಿಲ್ಲೆಯ ಸಚಿವ ಪ್ರಮೋದ್ ಮಧ್ವರಾಜ್, ಜನಪ್ರತಿನಿಧಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಬೆಂಬಲ ಸಿಕ್ಕಿದೆ. ಸಾರ್ವಜನಿಕರಿಂದ ಕೂಡಾ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ ಕಾನೂನಿನ ಹೋರಾಟದ ಜೊತೆ ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೇಳಿದರು.

    https://www.youtube.com/watch?v=NKGXeOVp68g

     

  • ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

    ಉಡುಪಿ: ಶ್ರೀಕೃಷ್ಣನ ಅಪ್ಪಟ ಅಭಿಮಾನಿ, ಪದ್ಮವಿಭೂಷಣ ಗಾಯಕ ಕೆ.ಜೆ. ಯೇಸುದಾಸ್ ಉಡುಪಿಯಲ್ಲಿ ತಮ್ಮ ಗಾಯನದ ಮೂಲಕ ಸಾವಿರಾರು ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗಾನಸುಧೆಯನ್ನು ಯೇಸುದಾಸ್ ಹರಿಸಿದರು.

    ಮೊದಲು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಹಾಡಿದ ಯೇಸುದಾಸ್, ನಂತರ ದೇವರ ಕೀರ್ತನೆಗಳನ್ನು ಹಾಡಿದರು. ತಮಗಿಷ್ಟದ ಆರಾಧ್ಯ ದೇವರು ಶ್ರೀಕೃಷ್ಣನ ನಾಮಗಳನ್ನು ಹಾಡಿದರು. ಇದಕ್ಕೂ ಮೊದಲು ಶ್ರೀಕೃಷ್ಣಮಠಕ್ಕೆ ಆಗಮಿಸಿದ ಅವರು ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಕುಟುಂಬ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

    ಪ್ರತೀ ವರ್ಷ ಯೇಸುದಾಸ್ ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಭೇಟಿಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ. ಸದ್ಯ ಪೇಜಾವರ ಪರ್ಯಾಯ ನಡೆಯುತ್ತಿದ್ದು, ಸ್ವಾಮೀಜಿಗಳ ಮೇಲಿನ ಗೌರವದಿಂದ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಯೇಸುದಾಸ್ ಒಪ್ಪಿದ್ದರು. ಯೇಸುದಾಸ್ ಅವರ ಬಳಗ ಕರ್ನಾಟಕ ಸಂಗೀತ ಅಭಿಮಾನಿಗಳನ್ನು ಕೆಲಕಾಲ ಸಂಗೀತ ಲೋಕದಲ್ಲಿ ತೇಲಾಡಿಸಿತು.

     

  • ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ – ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ – ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಉಡುಪಿ: ಮರಳು ಮಾಫಿಯಾ ಗ್ಯಾಂಗ್ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕೊಲೆಗೆ ಯತ್ನ ನಡೆಸಿದ್ದಾರೆ.

    ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಭಾರೀ ಮರಳು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಸಿಕ್ಕಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಹೊರಟ ಜಿಲ್ಲಾಧಿಕಾರಿ ಪ್ರಿಯಾಂಕ, ತಮ್ಮ ಗನ್ ಮ್ಯಾನ್ ಜೊತೆ ಜಿಲ್ಲಾ ಪಂಚಾಯತ್‍ನ ಕಾರನ್ನು ತೆಗೆದುಕೊಂಡು ತೆರಳಿದ್ದರು. ಅಕ್ರಮ ಮರಳುಗಾರಿಕೆ ದಾಳಿಗೆ ಕುಂದಾಪುರ ಎಸಿ ಶಿಲ್ಪಾ ನಾಗ್, ಸ್ಥಳೀಯ ಅಂಪಾರು ಗ್ರಾಮದ ಲೆಕ್ಕಾಧಿಕಾರಿ ಜೊತೆಯಾಗಿ ತೆರಳಿದ್ದರು. ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮರಳು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಲು ಯತ್ನಿಸಿದಾಗ ಸ್ಥಳದಲ್ಲಿದ್ದ ಸುಮಾರು 40 ಜನ ಒಟ್ಟಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸಿಯವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದೆ.

    ಮರಳುಗಾರಿಕೆ ನಡೆಸಲು ಯತ್ನಿಸುತ್ತಿದ್ದವರು ಸ್ಥಳೀಯ ಮನೆಗಳಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಬೆನ್ನತ್ತಿದ ಜಿಲ್ಲಾಧಿಕಾರಿ ಹಾಗು ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಮನೆಯೊಳಗೆ ಜಿಲ್ಲಾಧಿಕಾರಿ ಮತ್ತು ಎಸಿ ಹೋಗಿದ್ದಾಗ ಅವರನ್ನ ಕೂಡಿಹಾಕಿ ಸ್ಥಳೀಯ ಮಹಿಳೆಯರು ಹಲ್ಲೆಗೆ ಯತ್ನ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಮರಳು ಕಳ್ಳರು, ಈ ಕಡೆ ಬಂದ್ರೆ ಕೊಂದು ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಇಬ್ಬರು ಮಹಿಳಾ ಅಧಿಕಾರಿಗಳು, ಗನ್ ಮ್ಯಾನ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಹನ ಚಾಲಕರು ತಪ್ಪಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರು ಅಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜುಗೆ ಥಳಿಸಿದ್ದಾರೆ. ಕಾರನ್ನು ಬೆನ್ನತ್ತಿ ಪೆಟ್ರೋಲ್ ಹಾಕಿ ಸುಡಲು ಪ್ರಯತ್ನಿಸಿದ್ದಾರೆ. ಸುಮಾರು 20 ಬೈಕ್‍ಗಳಲ್ಲಿ ದುಷ್ಕರ್ಮಿಗಳು ಕುಂದಾಪುರ ಸಿಟಿಯವರೆಗೆ ಬೆನ್ನತ್ತಿದ್ದಾರೆ.

    ಉಡುಪಿ ನಗರ ಠಾಣೆಗೆ ಬಂದ ಜಿಲ್ಲಾಧಿಕಾರಿಗಳು ಮತ್ತು ಎಸಿ, ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ- ಈ ಎಲ್ಲಾ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗುವವರೆಗೆ ಸುಮ್ಮನಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಗುಡುಗಿದ್ದಾರೆ.

     

  • ಉಡುಪಿ: ಹೆರಿಗೆಗೆ ಹೋದ ಉಪನ್ಯಾಸಕಿಯನ್ನ ಕೆಲಸದಿಂದ ವಜಾಗೊಳಿಸಿದ ಆಡಳಿತ ಮಂಡಳಿ

    ಉಡುಪಿ: ಹೆರಿಗೆಗೆ ಹೋದ ಉಪನ್ಯಾಸಕಿಯನ್ನ ಕೆಲಸದಿಂದ ವಜಾಗೊಳಿಸಿದ ಆಡಳಿತ ಮಂಡಳಿ

    – ಮಾನವೀಯತೆ ಮರೆತ ಕಾಲೇಜು ವಿರುದ್ಧ ದೂರು

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಭಂಡಾರ್‍ಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕಿಯೊಬ್ಬರು ಹೆರಿಗೆಗೆ ಹೋದಾಗ ಕಾಲೇಜು ಆಡಳಿತ ಮಂಡಳಿ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

    ಡಾ.ಸೌಮ್ಯ ಕಾಲೇಜಿನಿಂದ ವಜಾಗೊಂಡ ಉಪನ್ಯಾಸಕಿ. 7 ತಿಂಗಳ ಗರ್ಭಿಣಿಯಾಗಿದ್ದ ಸೌಮ್ಯಾ ಅವರು ಜನವರಿ 30 ರಂದು ಕಾಲೇಜಿನಲ್ಲಿ ಕನ್ನಡ ಕ್ಲಾಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವಿಗೆ ಒಳಗಾದರು. ಕೂಡಲೇ ಸೌಮ್ಯಾ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯ್ತು. ಸೌಮ್ಯಾ ಅವರಿಗೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಲಾಯ್ತು.

    ಮಗುವಿಗೆ ಜನ್ಮ ನೀಡಿದ ನಂತರ ಸೌಮ್ಯ ಅವರು 15 ದಿನ ಆಸ್ಪತ್ರೆಯ ಐಸಿಯುನಲ್ಲೇ ಮಗುವಿನ ಜೊತೆ ಇರಬೇಕಾಯ್ತು. ಚಿಕಿತ್ಸೆ ಪಡೆದು ಸುಧಾರಿಸಿಕೊಂಡು ಮನೆಗೆ ಬಂದ ಕೂಡಲೇ ಸೌಮ್ಯಾ ಅವರಿಗೆ ಶಾಕ್ ಕಾದಿತ್ತು. ರಜೆಯ ಬಗ್ಗೆ ಲಿಖಿತ ಮಾಹಿತಿ ನೀಡದಿರುವುದರಿಂದ ನಿಮ್ಮನ್ನು ಸೇವೆಯಿಂದ ವಜಾ ಮಾಡಿದ್ದೇವೆ ಎಂದು ನಿಷ್ಕರುಣಿ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಡಿಸ್ಮಿಸ್ ನೋಟೀಸ್ ಕಳುಹಿಸಿದ್ದಾರೆ.

    ಮಂಗಳೂರು ವಿವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರುವ ಸೌಮ್ಯಾ, ಪಿಎಚ್‍ಡಿ ಕೂಡಾ ಮಾಡಿದ್ದಾರೆ. ಗರ್ಭಿಣಿಯರಿಗೆ 6 ತಿಂಗಳು ರಜೆ ನೀಡಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ರಾಜ್ಯದ ಎಲ್ಲಾ ವಲಯಗಳಲ್ಲಿ 3 ತಿಂಗಳು ಕಡ್ಡಾಯ ರಜೆಯಿದೆ. ಆದರೆ ಬಾಣಂತಿ ಆಸ್ಪತ್ರೆಯಲ್ಲಿರುವಾಗಲೇ ಸೇವೆಯಿಂದ ವಜಾಗೊಳಿಸಿದ ಪ್ರಾಂಶುಪಾಲ ನಾರಾಯಣ ಶೆಟ್ಟಿ ಮತ್ತು ಆಡಳಿತ ಮಂಡಳಿ ವಿರುದ್ಧ ಸೌಮ್ಯಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ದೌರ್ಜನ್ಯ ತಡೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

     

  • ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಸಿಗಬೇಕು: ಪೇಜಾವರಶ್ರೀ

    ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಸಿಗಬೇಕು: ಪೇಜಾವರಶ್ರೀ

    ಉಡುಪಿ: ಸಿದ್ದಗಂಗಾಶ್ರೀಗಳಿಗೆ ಭಾರತರತ್ನ ಗೌರವ ಸಿಗಬೇಕು. ಆ ಗೌರವಕ್ಕೆ ಶಿವಕುಮಾರ ಸ್ವಾಮೀಜಿಗಳು ಅರ್ಹರು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಶ್ರೀಗಳ 110ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇಶದಲ್ಲಿ ಹಲವರಿಗೆ ಭಾರತ ರತ್ನ ಪ್ರಶಸ್ತಿಯ ಗೌರವ ಸಿಕ್ಕಿದೆ. ಅವರೆಲ್ಲರಿಗಿಂತ ಇವರ ಸಾಧನೆ ಹೆಚ್ಚಿದೆ. ಕೇಂದ್ರ ಸರ್ಕಾರಕ್ಕೆ ಹೆಸರು ಸೂಚಿಸುವ ಅವಕಾಶ ಸಿಕ್ಕರೆ ಸಿದ್ದಗಂಗಾ ಶ್ರೀಗಳ ಹೆಸರು ಸೂಚಿಸಲು ನಾನು ಸಿದ್ಧನಿದ್ದೇನೆ. ಶ್ರೀಗಳ ಸುದೀರ್ಘ ಕಾಲದ ಸಾಧನೆಗೆ ಗೌರವ ಸಿಗಬೇಕು ಎಂದು ಪೇಜಾವರಶ್ರೀ ಹೇಳಿದರು. ಬಹುಕಾಲ ಶಿವಕುಮಾರ ಸ್ವಾಮೀಜಿಯವರ ಸೇವೆ- ಮಾರ್ಗದರ್ಶನ ಮನುಕುಲಕ್ಕೆ ಸಿಗಬೇಕು ಎಂದು ಹಾರೈಸಿದರು.

    ಸಿದ್ದಗಂಗಾ ಮಠಕ್ಕೆ ಭೇಟಿನೀಡಿದ ಮತ್ತು ಈವರೆಗಿನ ಒಡನಾಟಗಳನ್ನು ನೆನಪಿಸಿಕೊಂಡ ಅವರು, ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ನಾವಿಬ್ಬರು ಜೊತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ಸಮಾಜದ ಏಳಿಗೆಗಾಗಿ ಹೋರಾಟ ಮಾಡಿದವರಲ್ಲಿ ಶಿವಕುಮಾರ ಸ್ವಾಮೀಜಿಗಳ ಪಾತ್ರ ಬಲು ದೊಡ್ಡದು ಎಂದು ಹೇಳಿದರು.

    110 ನೇ ವಯಸ್ಸಿನಲ್ಲಿ ಇಷ್ಟು ಲವಲವಿಕೆಯಿಂದ ಇದ್ದಾರೆ ಅಂದ್ರೆ ಅವರ ಇಷ್ಟು ವರ್ಷದ ಸಾಧನೆ ಮುಖ್ಯವಾಗುತ್ತದೆ. ನಾಡಿಗೆ ಶಿವಕುಮಾರ ಸ್ವಾಮೀಜಿ ನೀಡಿರುವ ಕೊಡುಗೆ ದೊಡ್ಡದು. ಅವರ ಮಾರ್ಗದರ್ಶನ ಹಲವು ವರ್ಷಗಳ ಕಾಲ ಮುಂದುವರೆಯಬೇಕು. ಈ ದೇಶದ ಅತೀ ದೊಡ್ಡ ಗೌರವ ಸಿದ್ದಗಂಗಾ ಮಠಾಧೀಶ ಶಿವಕುಮಾರಸ್ವಾಮೀಜಿ ಅವರಿಗೆ ಸಿಗಲೇಬೇಕು ಎಂದರು.

    ಧ್ಯಾನ- ಪೂಜೆ- ಆಹಾರ ಪದ್ಧತಿ ಮತ್ತು ದೇಹ ಪ್ರಕೃತಿ ಮತ್ತು ಮನದ ಆಲೋಚನೆ ಆರೋಗ್ಯಕರವಾಗಿರುವುದರಿಂದ ಶ್ರೀಗಳು ಬಹುಕಾಲ ನಮ್ಮ ಜೊತೆ ಇರುವುದಕ್ಕೆ ಸಾಧ್ಯವಾಗಿದೆ. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಇದು ದೈವದತ್ತವಾಗಿ ಬಂದಿರುವುದು ಎಂದು ಪೇಜಾವರ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ:  ಗುರು ಉದ್ದಾನ ಶ್ರೀಗಳ ಜಾತ್ಯಾತೀತ ನೀತಿ ಶ್ರೀಮಠದ ಬೆಳವಣಿಗೆಯ ಶಕ್ತಿಮೂಲ: ಸಿದ್ದಗಂಗಾ ಶ್ರೀ