Tag: ಉಡುಪಿ

  • ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗುವ ಡೋಂಗಿ ಆಸ್ತಿಕ ನಾನಲ್ಲ :ಸಿಎಂ

    ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗುವ ಡೋಂಗಿ ಆಸ್ತಿಕ ನಾನಲ್ಲ :ಸಿಎಂ

    ಉಡುಪಿ: ದೇವರನ್ನು ಕಾಶ್ಮೀರಕ್ಕೆ ಹುಡುಕಿಕೊಂಡು ಹೋಗುವ ಡೋಂಗಿ ಆಸ್ತಿಕ ನಾನಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಡಾ. ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಶ್ರೀಗಳ ನೇತೃತ್ವದಲ್ಲಿ ನಡೆದ ಬಾರ್ಕೂರು ಬಂಟ ಮಹಾಸಂಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.ಮಹಾಸಂಸ್ಥಾನ ಲೋಕಾರ್ಪಣೆ ಮಾಡಿದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾನು ದೇವರನ್ನು ನಂಬದ ನಾಸ್ತಿಕನಲ್ಲ. ಹಾಗಂತ ಕೆಲ ಆಸ್ತಿಕರ ಡೋಂಗಿತನ ನನ್ನಲ್ಲಿಲ್ಲ ಎಂದು ಅವರು ಹೇಳಿದರು. ಕಷ್ಟ ಬಂದಾಗ ನನ್ನೂರ ದೇವರು ಸಾಕು. ಮೈಸೂರಿನಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಹೋಗ್ತೇನೆ. ಎಲ್ಲಾ ಮಾಡಿ ಆತ್ಮಶುದ್ಧಿಯೇ ಇಲ್ಲದಿದ್ದರೆ ಮಾಡಿದ್ದೆಲ್ಲ ವ್ಯರ್ಥ ಎಂದು ಹೇಳಿದರು.

    ದೇವರನ್ನು ಒಲಿಸಲು ಉದ್ದುದ್ದದ ಮಂತ್ರ- ಸಂಸ್ಕೃತದ ಶ್ಲೋಕ ಹೇಳಬೇಕಾಗಿಲ್ಲ. ದೇವರ ಆರಾಧನೆ ಮಾಡಲು ಶುದ್ಧ ಮನಸ್ಸು ಬೇಕು ಎಂದರು.

    ನೂರಾರು ದೈವಗಳನ್ನು ಒಂದೇ ಸೂರಿನಡಿಯಲ್ಲಿ ನಂಬಿ- ಸೇವೆ ನೀಡುವ ವ್ಯವಸ್ಥೆಯನ್ನು ಬಾರ್ಕೂರಿನಲ್ಲಿ ಮಾಡಲಾಗಿದೆ.ಇದು ಕರಾವಳಿಯ ಬಂಟ ಸಮುದಾಯದದಲ್ಲಿ ಬಹಳ ಚರ್ಚೆಯಲ್ಲಿದೆ. ಸಂಸ್ಥಾನ- ಸ್ವಾಮೀಜಿ ನೇಮಕ ವ್ಯವಸ್ಥೆಗೆ ಭಾರೀ ವಿರೋಧವಿದೆ. ಈ ನಡುವೆ ಸಿಎಂ ಸಂಸ್ಥಾನ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.

    ಸಿದ್ದರಾಮಯ್ಯ ತುಳುನಾಡಿನ ಸಾಂಪ್ರದಾಯಿಕ ಬಂಟ ಸಮುದಾಯದ ಪೇಟ ತೊಟ್ಟು ಓಡಾಡಿದರು. ಸಂಸ್ಥಾನದಲ್ಲಿರುವ ದೈವಸ್ಥಾನ- ನಾಗನ ಗುಡಿಗಳಿಗೆ ಭೇಟಿಕೊಟ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದರು. ಈ ಸಂದರ್ಭ ತನ್ನ ಆಸ್ತಿಕತೆಯ ಬಗ್ಗೆ ಮಾತನಾಡಿದರು.


  • ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು: ಸಿಎಂ ವ್ಯಂಗ್ಯ

    ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು: ಸಿಎಂ ವ್ಯಂಗ್ಯ

    ಉಡುಪಿ: ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು. ಬಿಜೆಪಿಯಲ್ಲಿ ಶಿಸ್ತು ಇದ್ದದ್ದು ಯಾವಾಗ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಬಾರ್ಕೂರು ಮಹಾಸಂಸ್ಥಾನವನ್ನು ಲೋಕಾರ್ಪಣೆ ಮಾಡಲು ಬಂದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಮತ್ತು ತಂಡ ಪಕ್ಷದೊಳಗೆ ಇದ್ದು ಕತ್ತಿ ಮಸಿಯುತ್ತಿದ್ದಾರೆ. ಅಸಮಾಧಾನ ಯಾವಾಗ ಸ್ಪೋಟಗೊಳ್ಳುತ್ತದೆ ಗೊತ್ತಿಲ್ಲ ಎಂದರು.

    ಉಡುಪಿ ಟಾರ್ಗೆಟ್ ಕೊಡಲು ಬಿಎಸ್ ಯಡಿಯೂರಪ್ಪ ಯಾರು? ಓಟುಹಾಕುವವರು ರಾಜ್ಯದ ಜನ ಎಂದು ಹೇಳಿ ಟಾಂಗ್ ನೀಡಿದರು.

    ಕೆಂಪು ದೀಪ ತೆರವು ಮಾಡಲು ಕೇಂದ್ರ ಆದೇಶ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ ಸಿಎಂಗಳು ಕೆಂಪು ದೀಪ ತೆಗೆದಿದ್ದಾರೆ. ನಾನು ಈ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಹೇಳಿದರು.

    ದೇವೇಗೌಡರ ಜೊತೆ ಮಾತ್ರ ಅಲ್ಲ ಬಿಎಸ್‍ವೈ ಸೇರಿದಂತೆ ಎಲ್ಲರ ಮೇಲೆ ಪ್ರೀತಿಯಿದೆ. ಯಾರೂ ಶಾಶ್ವತ ಶತ್ರುಗಳಿಲ್ಲ- ಇತ್ರರೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡಿಗೆ ಬಿಟ್ಟದ್ದು. ಸಚಿವ ಸಂಪುಟ ವಿಸ್ತರಣೆ, ಮೂರು ಎಂಎಲ್‍ಸಿಗಳ ಬಗ್ಗೆ ಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

    ನಾನು ದೇವರ ವಿರುದ್ಧ ಅಲ್ಲ – ಧಾರ್ಮಿಕ ಕಾರ್ಯಕ್ರಮಗಳ ವಿರುದ್ಧವೂ ಅಲ್ಲ. ದೇವರನ್ನು ಹುಡುಕಿಕೊಂಡು ಕಾಶ್ಮೀರದವರೆಗೆ ಹೋಗಲ್ಲ. ನಮ್ಮ ಊರಿನ ದೇವರನ್ನು ಆರಾಧಿಸುತ್ತೇನೆ ಎಂದು ಹೇಳಿದರು.

    ಸಿಎಂಗೆ ಜಿಲ್ಲಾಡಳಿತ ಕೆಂಪು ದೀಪ ಇಲ್ಲದ ಕಾರನ್ನೇ ಸಿದ್ಧಮಾಡಿತ್ತು. ಅದರಲ್ಲೇ ಹೆಲಿಪ್ಯಾಡಿನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಮಾಡಿದರು.

  • ಸರ್ಕಾರಿ ಜಮೀನನ್ನು ಸೇಲ್ ಮಾಡಿದ ಉಡುಪಿಯ ಭೂಪ!

    ಸರ್ಕಾರಿ ಜಮೀನನ್ನು ಸೇಲ್ ಮಾಡಿದ ಉಡುಪಿಯ ಭೂಪ!

    ಉಡುಪಿ: ಮೋಸ ಮಾಡೋಕೆ ಖದೀಮರು ಸಾವಿರ ದಾರಿಗಳನ್ನು ಹುಡುಕಿಕೊಳ್ತಾರೆ. ಒಂದೇ ದಾರಿಯಲ್ಲಿ ಹೋದ್ರೆ ಜನ ಎಚ್ಚೆತ್ತುಕೊಳ್ತಾರೆ ಅಂತ ಗೋಲ್ ಮಾಲ್ ಗಿರಾಕಿಗಳಿಗೆ ಗೊತ್ತಾಗಿದೆ.

    ಹೌದು. ಉಡುಪಿಯ ಹಿರಿಯಡ್ಕದ ಪುತ್ತಿಗೆ ನಿವಾಸಿ ಸುಧಾಕರ ಶೆಟ್ಟಿ ಕಾಸು ಮಾಡುವ ಗೋಜಿನಲ್ಲಿ ಸರ್ಕಾರಿ ಜಮೀನನ್ನು ಮಾರಾಟ ಮಾಡಿದ್ದಾರೆ. ತನ್ನ ಮನೆ ಪಕ್ಕದಲ್ಲಿದ್ದ ಸರ್ಕಾರಿ ಜಮೀನನ್ನು ಸೈಟ್ ಮಾಡಿ ಸೇಲ್ ಮಾಡಿದ್ದಾರೆ. 8 ಮಂದಿ ಸುಮಾರು ಒಂದು ಎಕ್ರೆಯಷ್ಟು ಜಮೀನನ್ನು ಖರೀದಿ ಮಾಡಿದ್ದಾರೆ. ಒಂದೊಂದು ಸೆಂಟ್ಸ್ ಜಮೀನಿಗೆ 10 ರಿಂದ 15 ಸಾವಿರ ರೂಪಾಯಿ ಕೊಟ್ಟು 8 ಜನ ಖರೀದಿ ಮಾಡಿದ್ದಾರೆ.

    ಎರಡು ಕುಟುಂಬ ಮನೆಕಟ್ಟಿ ಕುಳಿತಿದೆ. ಆದ್ರೆ ಸ್ಥಳೀಯ ಹಿರಿಯಡ್ಕ ಪಂಚಾಯತ್ ಅಧಿಕಾರಿಗಳು ಬಂದು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದು ಯಾಕೆ ಎಂದು ಪ್ರಶ್ನಿಸಿ ಮನೆಗಳನ್ನು ಭಾಗಶಃ ಕೆಡವಿದ್ದಾರೆ. ಸರ್ಕಾರಿ ಜಮೀನು ಸೇಲ್ ಮಾಡಿದ ಭೂಪ ಸುಧಾಕರ ಶೆಟ್ಟಿ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. ಜಾಗ ಖಾಲಿ ಮಾಡಿ ಅಂತ ಸುಧಾಕರ ಶಟ್ಟಿ ಕಿರುಕುಳ ನೀಡುತ್ತಿದ್ದಾನೆ. ಎರಡು ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದು, ನಾಲ್ಕು ಮಕ್ಕಳನ್ನು ಕಂಡರೆ ಕರುಳು ಚುರ್ ಅನ್ನುತ್ತಿದೆ. ನಾವು ಕೊಟ್ಟ ಹಣ ವಾಪಾಸ್ ಕೊಡಲಿ, ಜಮೀನಿಲ್ಲದ ನಮಗೆ ಸರ್ಕಾರ ಜಮೀನು ಮಂಜೂರು ಮಾಡಲಿ ಅಂತ ಒತ್ತಾಯಿಸುತ್ತಿದ್ದಾರೆ.

    ಎರಡು ಮಕ್ಕಳು ಶಾಲೆಗೆ ಹೋಗ್ತಾರೆ. ನಾಲ್ಕು ವರ್ಷ ಕರೆಂಟ್ ಇಲ್ಲದೆ ನಾವು ಜೀವನ ಮಾಡಿದೆವು. ಈಗ ಜಾಗ ಖಾಲಿ ಮಾಡಬೇಕು ಎಂದು ಒತ್ತಾಯ ಮಾಡುತಿದ್ದಾರೆ. ಗಂಡ ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ ಮಾಡಿ ಜಾಗಕ್ಕೆ ಹಣ ಕೊಟ್ಟಿದ್ದೇವೆ. ನಮಗೆ ರಕ್ಷಣೆ ಬೇಕು ಎಂದು ಸಮಸ್ಯೆಗೊಳಗಾದ ಗೃಹಿಣಿ ವಿಜಯ ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟಿದ್ದಾರೆ.

    ಸುಧಾಕರ ಶೆಟ್ಟಿ ಊರಿನವರಿಗೆ ಮಾತ್ರ ಸಮಸ್ಯೆ ಕೊಟ್ಟಿದ್ದಲ್ಲ. ತನ್ನ ಒಡಹುಟ್ಟಿದ ಅಕ್ಕ ಸರೋಜಿನಿಗೂ ಮೋಸ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಚಿಕ್ಕ ಮನೆಕಟ್ಟುತ್ತಿದ್ದಾಗಿನಿಂದ ಈ ಕ್ಷಣದವರೆಗೆ ಕಿರುಕುಳ ಕೊಡುತ್ತಿದ್ದಾರೆ. ನನಗೆ ಹೀಗಾದ್ರೆ ಮುಂದೆ ಬೇದರೆಯವರಿಗೆ ಎಷ್ಟು ಸಮಸ್ಯೆಯಾಗಲಿಕ್ಕಿಲ್ಲ ಅಂತ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಮೆಂಟ್- ಯುವಕನ ವಿರುದ್ಧ ಕೇಸ್

    ಫೇಸ್‍ಬುಕ್‍ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಮೆಂಟ್- ಯುವಕನ ವಿರುದ್ಧ ಕೇಸ್

    ಉಡುಪಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮದಿನವನ್ನ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಯ್ತು. ಅದರ ಬೆನ್ನಲ್ಲೆ ಉಡುಪಿಯಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿ ಶ್ರೀಕಾಂತ್ ನಾಯಕ್ ಫೇಸ್‍ಬುಕ್‍ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‍ಗೆ ಅವಮಾನ ಮಾಡಿದ ಆರೋಪಿ. ಅಂಬೇಡ್ಕರ್ ಲಂಡನ್‍ನ ಸಂವಿಧಾನವನ್ನು ಕಾಪಿ ಮಾಡಿದ್ದಾರೆ ಎಂದು ಕಮೆಂಟ್ ಹಾಕಿದ ಶ್ರೀಕಾಂತ್ ಮೇಲೆ ಕೇಸ್ ದಾಖಲಾಗಿದೆ.

    ಏಪ್ರಿಲ್ 14ರಂದು ಅಕ್ಷಯ್ ಶೆಟ್ಟಿ ಎಂಬವರು ಫೇಸ್‍ಬುಕ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿ 126ನೇ ಜಯಂತಿಯ ಶುಭಾಶಯ ಕೋರಿದ್ರು. ಇದಕ್ಕೆ ಶ್ರೀಕಾಂತ್ ನಾಯಕ್ ತುಳುವಿನಲ್ಲಿ `ಎಂಚಿನ ಸಂವಿಧಾನ?? ಇಂಗ್ಲೆಂಡ್ ದ ಕಾಪಿ ಮಲ್ತ್‍ದ್, ಹಿಂದುನಕ್ಲೆನ ತಿಗಲೆ ದೊಂಕಿನ ಸಾವಿಧಾನ. ನಮಕ್ ಬೊಡ್ಚಿ ಆಯೆನ ಸಾವಿಧಾನ, ಜೈ ಶ್ರೀರಾಮ್’ (ಎಂಥಾ ಸಂವಿಧಾನ? ಇಂಗ್ಲೆಂಡಿನಿಂದ ಕಾಪಿ ಮಾಡಿದ ಸಂವಿಧಾನ. ಹಿಂದುಗಳ ಎದೆಗೆ ತುಳಿದ ಸಂವಿಧಾನ ನಮಗೆ ಬೇಡ ಅವನ ಸಂವಿಧಾನ. ಜೈಶ್ರೀರಾಮ್) ಎಂದು ಕಮೆಂಟ್ ಮಾಡಿದ್ದ.

    ಚಂದ್ರ ಅಲ್ತಾರ್

    ಶ್ರೀಕಾಂತ್ ಹಾಕಿದ್ದ ಈ ಕಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಾರತದ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾನೆ ಎಂದು ಯಡ್ತಾಡಿ ಗ್ರಾಮದ ಅಲ್ತಾರು ನಿವಾಸಿ ಚಂದ್ರ ಅಲ್ತಾರ್, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಆರೋಪಿ ಶ್ರೀಕಾಂತ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

     

  • ಕೈಟ್ ಫೆಸ್ಟ್ ಮಾಡಿ ಅನಾಥ ಮಕ್ಕಳಿಗೆ 2.5 ಲಕ್ಷ ದಾನ ಮಾಡಿದ ಉಡುಪಿ ವಿದ್ಯಾರ್ಥಿಗಳು

    ಕೈಟ್ ಫೆಸ್ಟ್ ಮಾಡಿ ಅನಾಥ ಮಕ್ಕಳಿಗೆ 2.5 ಲಕ್ಷ ದಾನ ಮಾಡಿದ ಉಡುಪಿ ವಿದ್ಯಾರ್ಥಿಗಳು

    ಉಡುಪಿ: ಒಬ್ಬರಿಗೆ ಸಹಾಯ ಮಾಡಬೇಕು ಅನ್ಸಿದ್ರೆ ಅದಕ್ಕೆ ಸಾವಿರ ದಾರಿಗಳು ಇರುತ್ತವೆ. ಇದಕ್ಕೆ ಸಾಕ್ಷಿ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಎಂಐಟಿ ವಿದ್ಯಾರ್ಥಿಗಳು.

    ಹೌದು. ಅನಾಥ ಮಕ್ಕಳಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಎಂಐಟಿ ವಿದ್ಯಾರ್ಥಿಗಳು ಕೈಟ್ ಫೆಸ್ಟ್- ಝುಂಬಾ ಡಾನ್ಸ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

    ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಎಂಟ್ರಿ ಫೀಸ್ ಇಟ್ಟಿದ್ದರು. ಒಂದು ಉತ್ತಮ ಉದ್ದೇಶಕ್ಕೆ ನಡೆದ ಫೆಸ್ಟ್ ವಿದ್ ಡಾನ್ಸ್ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಸಾವಿರಾರು ಮಂದಿ ಪಾಲ್ಗೊಂಡರು. ವಿದ್ಯಾರ್ಥಿಗಳು ಮೈದಾನದಲ್ಲಿ ಗಾಳಿಪಟ ಹಾರಿಸಿ, ಝುಂಬಾ ಡಾನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಆದ್ರೆ ಸಿಕ್ಕಾಪಟ್ಟೆ ಗಾಳಿಯ ಹೊಡೆತ ಇದ್ದುದರಿಂದ ಗಾಳಿಪಟ ಹಾರಿಸಲು ಕಷ್ಟವಾದ್ರೂ, ಛಲ ಬಿಡದೆ ವಿದ್ಯಾರ್ಥಿಗಳು ಮತ್ತೆ ಮತ್ತೆ ಗಾಳಿಪಟ ಹಾರಿಸ್ತಾಯಿದ್ರು.

    ಈ ಕಾರ್ಯಕ್ರಮದಲ್ಲಿ ಒಟ್ಟುಗೂಡಿಸಿದ ಹಣವನ್ನು ಕುಕ್ಕಿಕಟ್ಟೆಯಲ್ಲಿರುವ ಅನಾಥ ಮಕ್ಕಳ ಶಾಲೆಗೆ ದಾನ ಮಾಡಿದ್ದಾರೆ. ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ರೂ. ಒಟ್ಟಾಗಿದೆ. ಮಣಿಪಾಲ ವಿವಿಯ ಮೈದಾನದಲ್ಲಿ ಪ್ರವೇಶದ ಸಂದರ್ಭ ಗಾಳಿಪಟಗಳನ್ನು ಕೊಡಲಾಗುತ್ತಿತ್ತು. ಗಾಳಿಪಟದ ಜೊತೆ ಝುಂಬಾ ಡಾನ್ಸ್ ಪಾಸ್, ತಂಪು ಪಾನೀಯ, ಐಸ್ ಕ್ರೀಂ ವ್ಯವಸ್ಥೆ ಮಾಡಲಾಗಿತ್ತು.

    ಝುಂಬಾ ಡಾನ್ಸ್ ನಡೆಸಿಕೊಟ್ಟ ಇಬ್ಬರು ನರ್ತಕಿಯರು ಇಡೀ ಗುಂಪನ್ನೇ ಕುಣಿಸಿದ್ರು. ಖರ್ಚೆಲ್ಲಾ ಕಳೆದು ಎರಡೂವರೆ ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಕಾಲೇಜು ಮುಗಿಯುವ ವೇಳೆಗೆ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿ ಹಾಕಿ ಅನಾಥ ಮಕ್ಕಳಿಗೆ ನೀಡುವುದಾಗಿ ಹೇಳಿದ್ದಾರೆ.

    ನಾವು ಫ್ರೆಂಡ್ಸೆಲ್ಲಾ ಒಟ್ಟಾಗಿ ಕೈಟ್ ಫೆಸ್ಟ್-ಝುಂಬಾ ಡಾನ್ಸಲ್ಲಿ ಪಾಲ್ಗೊಂಡಿದ್ದೇವೆ. ಸಮುದ್ರ ತೀರದಲ್ಲಿ ಗಾಳಿಪಟ ಹಾರಿಸಿ ಅನುಭವ ಇದೆ. ಆದ್ರೆ ಎಂಡ್ ಪಾಯಿಂಟ್‍ನಲ್ಲಿ ಸಿಕ್ಕಾಪಟ್ಟೆ ಗಾಳಿಯಿರೋದ್ರಿಂದ ಗಾಳಿಪಟ ಮೇಲೆ ಹಾರುವುದಿಲ್ಲ. ಆದ್ರೂ ಎಲ್ಲಾ ಸೇರ್ಕೊಂಡು ಎಂಜಾಯ್ ಮಾಡ್ತಿದ್ದೇವೆ ಅಂತಾರೆ ಸ್ವಾತಿ ಮತ್ತು ಶೈನಿ.

    ವರ್ಷಪೂರ್ತಿ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳು ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ. ಪ್ರತೀ ಕಾರ್ಯಕ್ರಮದ ಮೂಲಕ ಸಹಾಯ ಮಾಡ್ತಿದ್ದಾರೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಲಿ ಅನ್ನೋದು ನಮ್ಮ ಹಾರೈಕೆ.

  • ನಮ್ಮಪ್ಪನ ಬಗ್ಗೆ ನಿಮ್ಮ ತಂದೆ ಬಳಿ ಕೇಳಿ- ಓಮರ್ ಅಬ್ದುಲ್ಲಾಗೆ ಹೆಚ್‍ಡಿಕೆ ಟಾಂಗ್

    ನಮ್ಮಪ್ಪನ ಬಗ್ಗೆ ನಿಮ್ಮ ತಂದೆ ಬಳಿ ಕೇಳಿ- ಓಮರ್ ಅಬ್ದುಲ್ಲಾಗೆ ಹೆಚ್‍ಡಿಕೆ ಟಾಂಗ್

    ಉಡುಪಿ: ನನ್ನ ತಂದೆ ಪ್ರಧಾನಿಯಾಗಿದ್ದಾಗ ಏನು ಮಾಡಿದ್ದಾರೆ ಅಂತ ನಿಮ್ಮ ಅಪ್ಪನ ಬಳಿ ಕೇಳು ಅಂತ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾಗೆ ಟಾಂಗ್ ನೀಡಿದ್ದಾರೆ.

    ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸೋಮವಾರದಂದು ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ದೇವೇಗೌಡರು 10 ತಿಂಗಳು ಪ್ರಧಾನಿಯಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂದು ಫರೂಕ್ ಅಬ್ದುಲ್ಲಾ ಅವರಲ್ಲಿ ಕೇಳಿ ಎಂದು ಪ್ರತ್ಯುತ್ತರ ನೀಡಿದರು.

    ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅಂದಿನ ಪ್ರಧಾನಿ ದೇವೇಗೌಡರೇ ಕಾರಣ. ಗೌಡ್ರು ಅಧಿಕಾರದಲ್ಲಿದ್ದಾಗ ಅಬ್ದುಲ್ಲಾ ವಿದೇಶಕ್ಕೆ ಹೋಗಿದ್ದರು. ಏನೇನೂ ಗೊತ್ತಿಲ್ಲದವರು ಮಾತನಾಡಿದ್ರೆ ಹೀಗೇ ಆಗೋದು ಎಂದು ಹೇಳಿದರು.

    ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಯೋಗೇಶ್ , ಮಹಿಳಾ ವಿಭಾಗದ ಅಧ್ಯಕ್ಷರಾದ ಶಾಲಿನಿ ಶೆಟ್ಟಿ ಕೆಂಚನೂರು ಸೇರಿದಂತೆ ಹತ್ತಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಆಂಗ್ಲ ಮಾಧ್ಯಮವೊಂದು ಕುಲಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನಿಂದ ಪರ್ವೇಜ್ ಮುಷರಫ್ ಅವರನ್ನ ಸಂದರ್ಶನ ಮಾಡಿತ್ತು. ಇದಕ್ಕೆ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಈ ವಿಚಾರದ ಬಗ್ಗೆ ಮಾತನಾಡಲು ಪರ್ವೇಜ್ ಮುಷರಫ್ ಅವರನ್ನ ಕೂರಿಸಿಕೊಳ್ಳಬೇಕಿತ್ತಾ? ಕುಲಭೂಷಣ್ ಬಗ್ಗೆ ಮುಷರಫ್ ಮಾತನಾಡೋದೂ ಒಂದೇ, ಅಭಿವೃದ್ಧಿ ಬಗ್ಗೆ ದೇವೇಗೌಡರನ್ನ ಕೇಳೋದೂ ಒಂದೇ ಅಂತಾ ಅವಹೇಳನ ಮಾಡಿದ್ದರು.

  • ಉಡುಪಿ: ನೀವೆಷ್ಟೇ ಊಟ ಮಾಡಿ 20 ರೂ.ಕೊಡಿ ಅಂತಿದ್ದ ಪಬ್ಲಿಕ್ ಹೀರೋ ಅಜ್ಜಮ್ಮ ಇನ್ನಿಲ್ಲ

    ಉಡುಪಿ: ನೀವೆಷ್ಟೇ ಊಟ ಮಾಡಿ 20 ರೂ.ಕೊಡಿ ಅಂತಿದ್ದ ಪಬ್ಲಿಕ್ ಹೀರೋ ಅಜ್ಜಮ್ಮ ಇನ್ನಿಲ್ಲ

    ಉಡುಪಿ: ಇಲ್ಲಿನ ಎಂಜಿಎಂ ಕಾಲೇಜು ಮಕ್ಕಳ ಅನ್ನದಾತೆ ಅಜ್ಜಮ್ಮ ಸಾವನ್ನಪ್ಪಿದ್ದಾರೆ. 86 ವರ್ಷ ವಯಸ್ಸಿನ ಅಜ್ಜಮ್ಮ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅಜ್ಜಮ್ಮ ಕೆಫೆಯ ಮೂಲಕ ಎಲ್ಲರಿಗೆ ಆತ್ಮೀಯರಾಗಿದ್ದ ಅವರ ಪ್ರೀತಿ ಇನ್ನಿಲ್ಲವಾಗಿದೆ.

    ಉಡುಪಿಯ ಎಂಜಿಎಂ ಕಾಲೇಜು ಸಮೀಪದಲ್ಲಿ ಪುಟ್ಟ ಕ್ಯಾಂಟೀನ್ ಇಟ್ಟು ಕಡಿಮೆ ದರದಲ್ಲಿ ಮಕ್ಕಳಿಗೆ ಊಟ ಕೊಡುತ್ತಿದ್ದ ಅಜ್ಜಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ವರ್ಷದ ಹಿಂದೆ ಪಬ್ಲಿಕ್ ಟಿವಿಯ `ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಅಜ್ಜಮ್ಮ `ಪಬ್ಲಿಕ್ ಹೀರೋ’ ಆಗಿದ್ದರು. ಇವ್ರಿಗೆ ಎಂಬತ್ತಾರು ವರ್ಷವಾಗಿದ್ದು ಕೊನೆಯ ಕ್ಷಣದವರೆಗೂ ಲವಲವಿಕೆಯಿಂದ ಓಡಾಡುತ್ತಿದ್ದರು. ಉತ್ಸಾಹ ನೋಡಿದ್ರೆ ನಲ್ವತ್ತೋ- ಐವತ್ತೋ ಆಗಿರ್ಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಕಾಲೇಜಿನ ಮಕ್ಕಳಿಗೆ- ಸ್ಥಳೀಯರಿಗೆ ಇವರು ಪ್ರೀತಿಯ ಅಜ್ಜಿಯಾಗಿದ್ದರು. ದೊಡ್ಡವರಿಗೆ ಅಕ್ಕರೆಯ ಅಮ್ಮನಾಗಿದ್ದರು. ಇಳಿವಯಸ್ಸಿನಲ್ಲೂ ಇವರು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಮಧ್ಯಾಹ್ನದಷ್ಟೊತ್ತಿಗೆ ತಮ್ಮ ಕ್ಯಾಂಟೀನ್‍ನಲ್ಲಿ ತಾವೇ ಅಡುಗೆ ತಯಾರಿಸುತ್ತಿದ್ದರು. ಕಾಲೇಜು ಬಿಟ್ಟ ಕೂಡಲೇ ಮಕ್ಕಳಿಗೆ ಬಿಸಿ-ಬಿಸಿ ಊಟ ಬಡಿಸ್ತಾಯಿದ್ದರು.

    ಊಟಕ್ಕೆ ದೇಶದಲ್ಲೊಂದು ರೇಟ್ ಫಿಕ್ಸಾಗಿದ್ದರೆ ಅಜ್ಜಮ್ಮ ತನ್ನದೇ ಒಂದು ರೇಟಲ್ಲಿ ಫುಲ್ ಮೀಲ್ಸ್ ಕೊಡ್ತಾಯಿದ್ದರು. ನೀವೆಷ್ಟೇ ಊಟ ಮಾಡಿ ಮಕ್ಕಳೇ 20 ರುಪಾಯಿ ಕೊಡಿ ಅಂತ ಹೇಳಿ ಕೆನ್ನೆ ಸವರುತ್ತಿದ್ದರು. ಇದೇ ಅಜ್ಜಮ್ಮನ ಕೆಫೆಯ ಸ್ಪೆಷಾಲಿಟಿಯಾಗಿತ್ತು.

    ಲಾಭ ಮಾಡುವ ಉದ್ದೇಶದಿಂದ ಇವರು ಕ್ಯಾಂಟೀನ್ ಇಟ್ಟಿರಲಿಲ್ಲ. ಮಧ್ಯಾಹ್ನ ಮಕ್ಕಳಿಗೆ- ಊರಿಗೆ ಬರುವವರಿಗೆ ರುಚಿಕರ ಊಟ ಕೊಡಬೇಕು ಅನ್ನೋ ಕಾಳಜಿಯಿಂದ ಕ್ಯಾಂಟೀನ್ ತೆರೆದಿದ್ದರು. ಬಾಳೆ ಎಲೆಯಲ್ಲಿ ಉಪ್ಪಿನಕಾಯಿ, ಸಾಂಬಾರು, ರಸಂ, ಪಲ್ಯ, ಹಪ್ಪಳ ಸೇರಿ ಫುಲ್ ಮೀಲ್ಸ್‍ಗೆ ಇಲ್ಲಾಗೋ ಬಿಲ್ ಬರೀ ಇಪ್ಪತ್ತು. ಹೆಚ್ಚು ಲಾಭ ಮಾಡದೆ. ನಷ್ಟವಾಗದಂತೆ ಕ್ಯಾಂಟೀನನ್ನು ಅಜ್ಜಮ್ಮ ನಡೆಸಿಕೊಂಡು ಹೋಗುತ್ತಿದ್ದರು.

    ಆಮ್ಲೆಟ್ ಅಜ್ಜಮ್ಮ: ಕಳೆದ 55 ವರ್ಷಗಳಿಂದ ಅಜ್ಜಮ್ಮ ಕ್ಯಾಂಟೀನ್ ನಡೆಸಿಕೊಂಡು ಬಂದಿದ್ದರು. ಅಜ್ಜಮ್ಮನ ಆಮ್ಲೆಟ್ ಅಂದ್ರೆ ವಿದ್ಯಾರ್ಥಿಗಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಎಂಜಿ ಎಂ ಕಾಲೇಜಿನ ಎದುರುಗಡೆ ಇರುವ ಅಜ್ಜಮ್ಮ ಕೆಫೆಯಲ್ಲಿ ತವಾಕ್ಕೆ ಆಮ್ಲೆಟ್ ಬಿತ್ತು ಅಂದ್ರೆ ಕ್ಲಾಸಲ್ಲಿ ಮಕ್ಕಳ ಬಾಯಲ್ಲಿ ನೀರು ಬರುತ್ತಿತ್ತು. ಬಂದವರಿಗೆ ಅಲ್ಲಿ ಬರೀ ಊಟದ ಜೊತೆ ಅಜ್ಜಿಯ ಪ್ರೀತಿಯೂ ಗಿರಾಕಿಗಳಿಗೆ ಸಿಗುತ್ತಿತ್ತು. ಇದೀಗ ನಾವು ಬರೀ ಅಜ್ಜಮ್ಮನನ್ನು ಕಳೆದುಕೊಂಡದ್ದಲ್ಲ- ಅಜ್ಜಿಯ ಪ್ರೀತಿಯನ್ನು ಕಳೆದುಕೊಂಡಿರುವುದಾಗಿ ಹೇಳುತ್ತಾರೆ ವಿದ್ಯಾರ್ಥಿ ಸುನೀಲ್.

    ಅಜ್ಜಮ್ಮನ ಬೀಡವೂ ಅಷ್ಟೇ ಸಿಕ್ಕಾಪಟ್ಟೆ ಫೇಮಸ್ಸು. ಹಸಿ ಎಲೆ- ಹೊಗೆಸೊಪ್ಪು- ಖಡಕ್ ಅಡಿಕೆ ಹಾಕಿ ಬೀಡ ಕಟ್ಟುತ್ತಾರೆ. ಈ ಹಿಂದೆ ಸಣ್ಣ ಕ್ಯಾಂಟೀನ್ ಇದ್ದು ಮೂರು ವರ್ಷದ ಹಿಂದೆ ಎಂಜಿಎಂನ ಹಳೇ ವಿದ್ಯಾರ್ಥಿಗಳು ಕ್ಯಾಂಟೀನ್‍ಗೆ ಮಾಡರ್ನ್ ಟಚ್ ಕೊಡಿಸಿದ್ದಾರೆ. ಗ್ಲಾಸ್ ಡೋರ್- ಫ್ಯಾನ್-ಟೈಲ್ಸ್- ಡಿಜಿಟಲ್ ಬೋರ್ಡ್ ಅಳವಡಿಸಿ ಅಜ್ಜಮ್ಮ ಕೆಫೆಯನ್ನು ಮೇಲ್ದರ್ಜೆಗೆ ಏರಿಸಿದ್ದರು. ದೇಹದಿಂದ ಜೀವ ಹೋಗುವ ತನಕ ನಾನು ನನ್ನ ಕಾಲಮೇಲೆಯೇ ನಿಂತಿರಬೇಕು. ಯಾರಿಗೂ ಭಾರವಾಗಬಾರದು. ನನ್ನ ಸಂಪಾದನೆಯನ್ನು ನಾನೇ ಮಾಡಬೇಕು ಅಂತ ಸದಾ ಹೇಳುತ್ತಿದ್ದ ಅಜ್ಜಮ್ಮ ಸಾರ್ಥಕ ಜೀವನವನ್ನು ಮುಗಿಸಿದ್ದಾರೆ. ಸಮಾಜಕ್ಕೆ ಆದರ್ಶಮಯ ಉಡುಪಿಯ ಅಜ್ಜಮ್ಮ.

    https://www.youtube.com/watch?v=lqGAkIWy4Q8

  • ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆ

    ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆ

    ಉಡುಪಿ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹಣದ ಹೊಳೆ ಗೆದ್ದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟ ಅವರು ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಹೇಗಾದ್ರು ಮಾಡಿ ಗೆಲ್ಲಲೇ ಬೇಕು ಎಂದು ಅಂತ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದರು. ಅದರಂತೆ ಹಣದ ಹೊಳೆಯನ್ನು ಹರಿಸಿ ಗೆದ್ದಿದ್ದಾರೆ ಎಂದು ಶೆಟ್ಟರ್ ಹೇಳಿದರು.

    2018ರ ಚುನಾವಣೆಗೆ ಈ ರಿಸಲ್ಟ್ ದಿಕ್ಸೂಚಿಯಲ್ಲ. ಸ್ವತಃ ಸಿಎಂ ಚುನಾವಣೆಗೆ ಮುನ್ನ ಇದು ದಿಕ್ಸೂಚಿಯಲ್ಲ ಅಂತ ಹೇಳುತ್ತಿದ್ದರು. ಆದ್ರೆ ಈಗ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಇದೇ ದಿಕ್ಸೂಚಿ ಅನ್ನುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದೆಯೂ ಚುನಾವಣೆ ಎದುರಿಸ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರೋದ್ರಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ತಿಳಿಸಿದರು.

    ಶ್ರೀನಿವಾಸಪ್ರಸಾದ್ ಅವರು ಹಿರಿಯ ನಾಯಕರು, ಅವರಿಗೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ಕೊಡುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೋ ಅದರಂತೆಯೇ ಮುಂದೆಯೂ ಗೌರವದಿಂದ ನೋಡಿಕೊಳ್ಳುತ್ತೇವೆ. ಗೌರವಯುತವಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.

     

     

  • ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಉಡುಪಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ಅವರ ಗರ್ಭಿಣಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪಿ ಕುಮಾರ್ ಗೆ ಪೊಲೀಸರು ಬೆಂಬಲವಾಗಿ ನಿಂತಿರುವ ಆರೋಪ ಕೇಳಿ ಬಂದಿದೆ.

    ನಡೆದಿದ್ದೇನು?:  ಏಪ್ರಿಲ್ 5 ರಂದು ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕಾಶ್ ಪತ್ನಿ ಜ್ಯೋತಿ ಗರ್ಭಿಣಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಮೆಡಿಕಲೊಂದರ ಸಮೀಪದಲ್ಲಿ ಕುಮಾರ್ ಎಂಬ ಯುವಕ ಕಣ್ಣೊಡೆದು ಮೈತಟ್ಟುವ ಮೂಲಕ ಕಿರುಕುಳ ನೀಡಿದ್ದನು. ಇದನ್ನು ಪ್ರಶ್ನಿಸಿದ ಪ್ರಕಾಶ್ ಆತನಿಗೆ ಎರಡೇಟು ಕೊಟ್ಟಿದ್ದರು. ಅಲ್ಲದೇ ಪತ್ನಿಯ ಮೇಲೆ ಕಿರುಕುಳ ನೀಡಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಪುಂಡಾಟಿಕೆ ಮಾಡಿದ ಯುವಕ ಕುಮಾರ್ ಮೇಲೆ ಕೇಸು ದಾಖಲಿಸದಂತೆ ರಾಜಕೀಯ ನಾಯಕರ ಒತ್ತಡ ತರಲಾಗಿದೆ ಎಂದು ತಿಳಿದು ಬಂದಿದೆ.

    ಆರೋಪಿ ಕುಮಾರ್

    ಕಿರುಕುಳ ನೀಡಿದ ಯುವಕನಿಗೆ ಪೊಲೀಸ್ ಬೆಂಬಲ?: ಆರೋಪಿ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಫಿಶ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮಧ್ವರಾಜ್ ಒಡೆತನದ ರಾಜ್ ಫಿಶ್ ಮಿಲ್ ನೌಕರನಾಗಿರೋ ಕುಮಾರ್ ಘಟನೆಯ ಬಗ್ಗೆ ಸಚಿವರ ಪತ್ನಿ ಬಳಿ ದೂರು ನೀಡಿದ್ದನಂತೆ. ಅಂತೆಯೇ ಪತಿ ಪ್ರಮೋದ್ ಮಧ್ವರಾಜ್ ಗೆ ಪತ್ನಿ ದೂರು ನೀಡಿದ್ದಾರೆ.

    ಪೇದೆ ಸಸ್ಪೆಂಡ್: ಇತ್ತ ತಮ್ಮ ಪತ್ನಿಗೆ ಕಿರುಕುಳ ನೀಡಿದ ಆರೋಪಿ ಕುಮಾರ್ ವಿರುದ್ಧ ಪ್ರಕಾಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಿದ್ದಾರೆ. ಮಲ್ಪೆ ಠಾಣೆಯ ಕಾನ್‍ಸ್ಟೇಬಲ್ ಪ್ರಕಾಶ್‍ರನ್ನು ಅಮಾನತು ಮಾಡಿಸಿದ್ದಾರೆ. ಈ ಬಗ್ಗೆ ಪತ್ನಿ ಜ್ಯೋತಿ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತೇ ಇಲ್ಲ. ಏನಿದು ಪ್ರಕರಣ ಅನ್ನೋ ಉತ್ತರ ನೀಡುತ್ತಿದ್ದಾರೆ ಅಂತಾ ಹೇಳಲಾಗಿದೆ.

    ಹಲ್ಲೆ ಸರಿಯಲ್ಲ: ನಮ್ಮ ಕಂಪನಿಯ ಕಾರ್ಮಿಕನ ಮೇಲೆ ಪೇದೆ ಹಲ್ಲೆ ನಡೆಸಿದ್ದು ಸರಿಯಲ್ಲ. ಹಲ್ಲೆಯಿಂದಾಗಿ ಕಂಪನಿಯ ಟ್ರ್ಯಾಕ್ಟರ್ ಚಾಲಕ ಕುಮಾರ್ ಬೆನ್ನು ಮೂಳೆಗೆ ಪೆಟ್ಟಾಗಿದೆ. ಪೊಲೀಸರು ಆ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಸಸ್ಪೆಂಡ್ ಮಾಡಿದ ಮೇಲೆ ಪೇದೆ ಪತ್ನಿ ಕಂಪ್ಲೆಂಟ್ ಮಾಡಿರಬಹುದು. ಚಾಲಕ ಕುಮಾರ್ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಾವು ನಮ್ಮ ಕಂಪನಿಯಿಂದಲೇ ಆತನ ಪರವಾಗಿ ದೂರು ನೀಡಿದ್ದೇವೆ ಅಂತಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

  • ಡಿಸಿ ಕೊಲೆ ಯತ್ನ ಪ್ರಕರಣ: ದೈಹಿಕವಾಗಿ ಉಡುಪಿಯಲ್ಲಿರಲಿಲ್ಲ, ಮಾನಸಿಕವಾಗಿದ್ದು ಮಾಹಿತಿ ಪಡ್ದಿದ್ದೀನಿ- ಪ್ರಮೋದ್ ಮಧ್ವರಾಜ್

    ಡಿಸಿ ಕೊಲೆ ಯತ್ನ ಪ್ರಕರಣ: ದೈಹಿಕವಾಗಿ ಉಡುಪಿಯಲ್ಲಿರಲಿಲ್ಲ, ಮಾನಸಿಕವಾಗಿದ್ದು ಮಾಹಿತಿ ಪಡ್ದಿದ್ದೀನಿ- ಪ್ರಮೋದ್ ಮಧ್ವರಾಜ್

    ಉಡುಪಿ: ಮರಳು ಮಾಫಿಯಾದಿಂದ ಉಡುಪಿ ಜಿಲ್ಲಾಧಿಕಾರಿ, ಎಸಿ ಸೇರಿದಂತೆ 7 ಮಂದಿಯ ಕೊಲೆಯತ್ನ ಪ್ರಕರಣ ನಡೆದು ಆರು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ಜಿಲ್ಲೆಗೆ ಆಗಮಿಸಿದ್ರು.

    ರಾಷ್ಟ್ರಮಟ್ಟದಲ್ಲಿ ಪ್ರಕರಣ ಸದ್ದು ಮಾಡಿದ್ದರೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಸಚಿವರು ಉಡುಪಿ ಜಿಲ್ಲೆಯ ಕಡೆ ತಲೆಯೇ ಹಾಕಿರಲಿಲ್ಲ. ಇಂದು ಉಡುಪಿಗೆ ಬಂದು ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದರು.

    ನಾನು ದೈಹಿಕವಾಗಿ ಉಡುಪಿಯಲ್ಲಿ ಇರಲಿಲ್ಲ. ಮಾನಸಿಕವಾಗಿ ಇಲ್ಲೇ ಇದ್ದು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ. ನಾನಿಲ್ಲಿ ಬಂದು ಮಾಡುವಂತದ್ದೇನೂ ಇಲ್ಲ. ಮುಂದೆಯೂ ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯೋದಿಲ್ಲ. ಸಭೆ ಕರೆದು ಚರ್ಚೆ ಮಾಡಿದ್ರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆ. ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪ ಬರುತ್ತದೆ. ಹೀಗಾಗಿ ಸಭೆ ಕರೆಯುವುದಿಲ್ಲ ಎಂದು ಘಟನೆ ಸಂಬಂಧ ಸಭೆ ನಡೆಸದ ಬಗ್ಗೆ ಸ್ಪಷ್ಟನೆ ನೀಡಿದರು.

    ಮರಳು ಮಾಫಿಯಾ ವಿರುದ್ಧ ಜಿಲ್ಲಾಧಿಕಾರಿ, ಎಸಿ ಮತ್ತು ಎಸ್‍ಪಿ ಅವರಿಗೆ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ. ಅಕ್ರಮ ಮತ್ತು ಕಾನೂನು ಚಟುವಟಿಕೆಗಳಿಗೆ ನನ್ನ ಬೆಂಬಲವಿಲ್ಲ. ವಿರೋಧ ಪಕ್ಷಗಳಿಗೆ ಎರಡು ನಾಲಗೆ ಬಾಯಿಗೆ ಬಂದಂತೆ ಟೀಕೆ ಮಾಡುತ್ತದೆ ಎಂದು ಹರಿಹಾಯ್ದರು. ಈ ಹಿಂದೆ ಅಕ್ರಮ ಮರಳುಗಾರಿಕೆ ನಡೆದಾಗ ನಾನೇ ಎಸಿಯವರಿಗೆ ಮತ್ತು ಗ್ರಾಮ ಪಂಚಾಯತ್‍ನ ವಿಎ ಗೆ ಫೋನ್ ಮಾಡಿ ದೂರು ನೀಡಿದ್ದೆ. ಅನಧಿಕೃತ ಮರಳುಗಾರಿಕೆ ನಡೆಯುತ್ತಿದ್ದಾಗ ಡಿಸಿಗೂ ದೂರು ನೀಡಿದ್ದೆ. ನನ್ನ ಆಪ್ತರು ಮರಳುಗಾರಿಕೆ ಮಾಡಿದ್ದಾಗಲೂ ಎಸಿಯವರಿಗೆ ದೂರು ನೀಡಿದ್ದೇನೆ. ಮಾಧ್ಯಮದವರು ಇದನ್ನು ಕ್ರಾಸ್ ಚೆಕ್ ಮಾಡ್ಬಹುದು ಎಂದು ಹೇಳಿದರು.

    ಜಿಲ್ಲಾಧಿಕಾರಿಗಳ ಕಾರ್ಯ ತತ್ಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ದಂಡಾಧಿಕಾರಿಯಾಗಿ ಜಿಲ್ಲೆಯ ಬಗೆಗಿನ ಬದ್ಧತೆಯ ಬಗ್ಗೆ ಇರುವ ಕಾಳಜಿ ಬಗ್ಗೆ ನನಗೆ ಸಂತಸವಾಗಿದೆ. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಅಕ್ರಮ ವಿರುದ್ಧದ ಕಾರ್ಯಾಚರಣೆ ಮುಂದುವರೆಸಲು ಹೇಳಿದ್ದೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.