Tag: ಉಡುಪಿ

  • ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ

    ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ

    ಉಡುಪಿ: ಸಿಎಂ ಸಿದ್ದರಾಮಯ್ಯ ಇದೀಗ ಧರ್ಮಸಂಕಟಕ್ಕೆ ಸಿಲುಕಿದ್ದಾರಂತೆ. ಉಡುಪಿಯ ಕೃಷ್ಣಮಠಕ್ಕೆ ಯಾವತ್ತೂ ಭೇಟಿ ನೀಡದ ಸಿಎಂ ಇದೀಗ ಅನಿವಾರ್ಯವಾಗಿ ಮಠಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.

    ಇದೇ ಭಾನುವಾರ- ಜೂ.18 ಕ್ಕೆ ರಾಷ್ಟ್ರಪತಿಗಳು ಉಡುಪಿ ಪ್ರವಾಸ ಮಾಡಲಿದ್ದಾರೆ. ಕೃಷ್ಣಮಠ ಭೇಟಿಯೂ ಅದರಲ್ಲಿ ಒಂದು ಪ್ರಮುಖ ಕಾರ್ಯಕ್ರಮ. ಪ್ರೋಟೋಕಾಲ್ ಪ್ರಕಾರ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಜೊತೆಗೆ ಇರಬೇಕು. ಅವರ ಜೊತೆಗೆ ಕೃಷ್ಣಮಠಕ್ಕೂ ಹೋಗಬೇಕು. ಅಲ್ಲಿಂದ ಕೊಲ್ಲೂರಿಗೂ ಹೋಗಿ ದೇವಿ ಮೂಕಾಂಬಿಕೆಯ ದರ್ಶನ ಮಾಡಬೇಕು. ಕೃಷ್ಣಮಠಕ್ಕೆ ಹೋಗಲ್ಲ ಅಂತ ಮೊದಲೇ ತೀರ್ಮಾನಿಸಿರುವ ಸಿಎಂ ನಿಜಕ್ಕೂ ಈಗ ಧರ್ಮಸಂಕಟದಲ್ಲಿದ್ದಾರೆ.

    ಸಿಎಂ ಮಠಕ್ಕೆ ಬರಲೇ ಬೇಕು ಎಂದು ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದಾರೆ. ಆದರೆ ಕುರುಬ ಸಮುದಾಯದ ಅಸಮಾಧಾನದ ಭೀತಿಯಿಂದ ಸಿಎಂ ಉಡುಪಿಗೆ ಬರಲು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ರಾಷ್ಟ್ರಪತಿಗಳ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಪ್ರಮೋದ್ ಮಧ್ವರಾಜ್, ರಮೇಶ್ ಕುಮಾರ್ ಸೇರಿದಂತೆ ಮೂವರು ಸಚಿವರಿಗೆ ಸಿಎಂ ನೀಡಿದ್ದು, ಈ ಮೂಲಕ ತಾವು ಕೃಷ್ಣಮಠಕ್ಕೆ ಬರೋದ್ರಿಂದ ಜಾಣತನದಿಂದ ಜಾರಿಕೊಂಡಿದ್ದಾರೆ ಎನ್ನಲಾಗಿದೆ.

    ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಯಾಕೆ ಬರಲ್ಲ? ಅನ್ನೋ ಪ್ರಶ್ನೆಗೆ ಬಲವಾದ ಕಾರಣಗಳಿದೆ.

    ಕಾರಣ 1: ಉಡುಪಿಯ ಕೃಷ್ಣಮಠದಲ್ಲಿ ಒಂದುವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದ. ಕನಕನ ಕಿಂಡಿಯ ಮೇಲಿನ ಗೋಪುರ ಕೆಡವಿದಾಗ ಸಿದ್ದರಾಮಯ್ಯ ವಿರೋಧಿಸಿದ್ದರು. ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಸಿಎಂ ಮತ್ತು ಕೃಷ್ಣಮಠದ ಸಂಬಂಧ ಅಲ್ಲಿಂದ ಹಳಸುತ್ತಲೇ ಬಂದಿತ್ತು.

    ಕಾರಣ 2: ಕೃಷ್ಣಮಠದ ಸರ್ಕಾರಿಕರಣವಾಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಿಎಂ ಪ್ರಮುಖರು. ಹೋರಾಡುತ್ತಾ ಬಂದ ಸಿದ್ದರಾಮಯ್ಯ ಸಿಎಂ ಆದ ಬಳಿಕ ಯಾಕೋ ತಣ್ಣಗಾಗಿದ್ದರು.

    ಕಾರಣ 3: ಇನ್ನೊಂದು ಕಾರಣ ಬಹಳ ಕುತೂಹಲಕಾರಿ. ಬಾಲ್ಯದಲ್ಲಿ ಸಿದ್ದರಾಮಯ್ಯನವರು ತಂದೆಯ ಜೊತೆಗೆ ಮಠಕ್ಕೆ ಬಂದಾಗ ಆಗಿನ ಸ್ವಾಮಿಗಳು ಪ್ರಸಾದವನ್ನು ಎತ್ತರದಿಂದ ಕೈಗೆ ಹಾಕಿದ್ದರಂತೆ. ಹೀಗೆ ಪ್ರಸಾದ ಕೊಟ್ಟು ಅವಮಾನ ಮಾಡಿದ್ದಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ.

    ಕಳೆದ ನಾಲ್ಕುವರ್ಷದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ನಾಲ್ಕು ಬಾರಿ ಉಡುಪಿಗೆ ಬಂದ್ರೂ ಒಂದು ಬಾರಿಯೂ ಕೃಷ್ಣಮಠಕ್ಕೆ ಬಂದಿಲ್ಲ.

    ಏನೇ ಆದ್ರೂ ಸಿದ್ದರಾಮಯ್ಯನವರನ್ನು ಮಠಕ್ಕೆ ಕರೆಸೋದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸವಾಲಾಗಿದೆ. ಮಠಕ್ಕೆ ಭೇಟಿ ನೀಡದೆ ಪ್ರತಿಷ್ಟೆ ಕಾಯ್ದುಕೊಳ್ಳೋದು ಸಿದ್ದರಾಮಯ್ಯನವರಿಗೂ ಸವಾಲಾಗಿದೆ. ಒಂದು ವೇಳೆ ಸಿಎಂ ಬರದೇ ಇದ್ದರೆ ಇದು ಕೇವಲ ಉಡುಪಿ ಮಠಕ್ಕಲ್ಲ ರಾಷ್ಟ್ರದ ಪ್ರಥಮ ಪ್ರಜೆಗೆ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. ರಾಷ್ಟ್ರಪತಿಯಾಗಿ ಕರ್ನಾಟಕ ರಾಜ್ಯಕ್ಕೆ ಪ್ರಣಬ್ ಮುಖರ್ಜಿ ಅವರ ಕೊನೆಯ ಭೇಟಿ ಇದು ಅನ್ನೋದು ಕೂಡಾ ಗಮನಾರ್ಹ. ರಾಷ್ಟ್ರೀಯ ಕಾಂಗ್ರೆಸ್ ನ ಅತ್ಯುನ್ನತ ನಾಯಕನಿಗೆ ಅವರದೇ ಪಕ್ಷದ ಸಿಎಂ ಒಬ್ಬರು ಮಾಡುವ ಅವಮಾನ ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.

  • 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉಡುಪಿ: ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಇದೇ ತಂಡ ನಗರದ ಬಟ್ಟೆ ಅಂಗಡಿಯೊಂದರಲ್ಲಿಯೂ ಸಾವಿರಾರು ರೂಪಾಯಿ ಮೌಲ್ಯದ ಬಟ್ಟೆಗಳನ್ನು ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.

    ಕಾರ್ಕಳ ನಗರದ ಆಭರಣ ಜ್ಯುವೆಲ್ಲರ್ಸ್‍ಗೆ ಬಂದ ಮೂವರು ನಮಗೆ ಮಾಂಗಲ್ಯ ಸರ ತೋರಿಸಿ ಎಂದು ಕೇಳಿದ್ದಾರೆ. ಡಿಸೈನ್ ನೋಡುವ ವೇಳೆ ಇದೆಲ್ಲಾ ಹಳೆಯ ವಿನ್ಯಾಸ ಎಂದು ಹೇಳಿ ಬೇರೆ ವಿನ್ಯಾಸದ ಸರವನ್ನು ತೋರಿಸುವಂತೆ ಹೇಳಿದ್ದಾರೆ. ಅಂಗಡಿಯ ಸಿಬ್ಬಂದಿ ಬೇರೆ ಡಿಸೈನ್ ತೆಗೆಯುವಷ್ಟರಲ್ಲಿ ಮಾಂಗಲ್ಯ ಸರ ಎಗರಿಸಿದ್ದಾರೆ.

    ಎರಡು ಮಾಂಗಲ್ಯ ಸರ ಕದ್ದ ಮಹಿಳೆ ಕೆಲವೇ ನಿಮಿಷದಲ್ಲಿ ಡಿಸೈನ್ ಇಷ್ಟಾಗಿಲ್ಲ. ಬೇರೆ ಕಡೆ ಹೋಗ್ತೇವೆ ಅಂತ ಅಲ್ಲಿಂದ ಎಲ್ಲರೂ ತೆರಳುತ್ತಾರೆ. ಜ್ಯುವೆಲ್ಲರಿಯಿಂದ ತೆರಳುವ ಮೊದಲು ಈ ಮೂವರು 32 ಗ್ರಾಂ ಮತ್ತು 40 ಗ್ರಾಂ ತೂಕದ ಎರಡು ಮಾಂಗಲ್ಯ ಸರವನ್ನು ಎಗರಿಸಿದ್ದರು.

    ಬಟ್ಟೆ ಕಳ್ಳತನ: ಕಾರ್ಕಳ ನಗರದ ಬಂಡೀಮಠದ ರಿಜ್ವಾನ್ ಎಂಬುವವರ ಬಟ್ಟೆ ಅಂಗಡಿಗೆ ಇದೇ ತಂಡ ಆಗಮಿಸಿದೆ. ಇಲ್ಲೂ ಮೂರು ಜನರ ಟೀಂ. ಆದ್ರೆ ಗಂಡಸು ಮಾತ್ರ ಬೇರೆ. ಇಬ್ಬರು ಮಹಿಳೆಯರು ಅವರೇ, ಬಟ್ಟೆ ಅಂಗಡಿಗೆ ಬಂದು ನಮಗೆ ಬ್ರ್ಯಾಂಡೆಡ್ ಬಟ್ಟೆ ಬೇಕು ಅಂತ ಕೇಳ್ತಾರೆ. ಮೂರು ಜನ ಮೂರು ದಿಕ್ಕಿನಲ್ಲಿ ಬಟ್ಟೆಗಳ ಸೆಲೆಕ್ಷನ್‍ನಲ್ಲಿ ತೊಡಗುತ್ತಾರೆ. ಅಲ್ಲಿ ಚಿನ್ನ ಎಗರಿಸಿದ ಕಳ್ಳಿ ಇಲ್ಲೂ ತನ್ನ ಕೈಚಳಕ ತೋರಿಸಿದ್ದಾಳೆ.

    ಈ ಸಂಬಂಧ ಜ್ಯುವಲ್ಲರಿ ಶಾಪ್ ಮಾಲೀಕ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.

    https://youtu.be/tjbidsqO6Js

  • ಕಿಸೆಯಲ್ಲಿದ್ದ ಮೊಬೈಲ್ ಬ್ಲ್ಯಾಸ್ಟ್- ಉಡುಪಿಯ ಇಂದ್ರಾಳಿ ರೈಲುನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್!

    ಕಿಸೆಯಲ್ಲಿದ್ದ ಮೊಬೈಲ್ ಬ್ಲ್ಯಾಸ್ಟ್- ಉಡುಪಿಯ ಇಂದ್ರಾಳಿ ರೈಲುನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್!

    ಉಡುಪಿ: ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ.

    ಮಂಜುನಾಥ್ ಎಂಬವವರು ಬಳಸುತ್ತಿದ್ದ ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ಬ್ಲಾಸ್ಟ್ ಆಗಿದೆ. ಇಂದ್ರಾಳಿ ರೈಲ್ವೇ ಸ್ಟೇಷನ್ ರೋಡ್‍ನಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೈಕ್ ನಿಲ್ಲಿಸಿದ ಕಟಪಾಡಿಯ ಮಂಜುನಾಥ್ ಮೊಬೈಲನ್ನು ರಸ್ತೆಗೆ ಎಸೆದಿದ್ದಾರೆ. ಕೂಡಲೇ ಮೊಬೈಲ್ ಹೊರಗೆ ಎಸೆದಿದ್ದರಿಂದ ಅವಘಡ ತಪ್ಪಿದೆ.

    ಮೊಬೈಲ್ ಬ್ಯಾಟರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೊಬೈಲ್ ಬ್ಯಾಟರಿ ಬ್ಲ್ಯಾಸ್ಟ್ ತೀವ್ರತೆ ಎಷ್ಟಿತ್ತು ಎಂದರೆ ರಸ್ತೆಯ ಡಾಂಬರು ಕೂಡಾ ಸುಟ್ಟುಹೋಗಿದೆ.

    ಈ ಘಟನೆ ಹೇಗಾಯ್ತು ಎಂದು ಕೇಳಿದ್ದಕ್ಕೆ, ನಾನು ಪತ್ನಿ ಜೊತೆ ರೈಲು ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಲು ಕಟಪಾಡಿಯಿಂದ ಉಡುಪಿಗೆ ಬಂದಿದ್ದೆ. ಮೊಬೈಲ್ ಬ್ಯಾಟರಿ ಇಡೀ ದಿನ ಚಾರ್ಜ್ ಇರುತ್ತಿತ್ತು, ಈವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ಆದ್ರೆ ಬೈಕಿನಲ್ಲಿ ಬರುತ್ತಿದ್ದಾಗ ಕಿಸೆ ಬಿಸಿ ಬಿಸಿಯಾಗತೊಡಗಿತು. ಮೊಬೈಲ್ ಕೈಯ್ಯಲ್ಲಿ ತೆಗೆದಾಗ ಕೆಂಡ ಹಿಡಿದ ಹಾಗೆ ಆಗಿದೆ. ಕೂಡಲೇ ಮೊಬೈಲ್ ಹೊರಗೆ ತೆಗೆದು ಬಿಸಾಡಿದೆ ಎಂದು ಮಂಜುನಾಥ್ ಹೇಳಿದ್ದಾರೆ.

    ಇದನ್ನೂ ಓದಿ: ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

    ಹೈವೇ ಮಧ್ಯೆಯೇ ಮೊಬೈಲ್ ಬ್ಲಾಸ್ಟ್ ಆಗಿದ್ದರಿಂದ ಇಂದ್ರಾಳಿ ಜಂಕ್ಷನ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಯ್ತ. ಸ್ಥಳದಲ್ಲಿದ್ದವರು ಏನು ನಡೆಯುತ್ತಿದೆ ಎಂದು ಕುತೂಹಲಕ್ಕಾಗಿ ಗುಂಪು ಸೇರಿದ್ದರು. ಬಸ್‍ನಿಂದ ಇಳಿದು ಜನ ಗುಂಪು ಸೇರಿದರು. ನಂತರ ಉಡುಪಿ ನಗರದ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಮಂಜುನಾಥ್ ಆರು ತಿಂಗಳ ಹಿಂದೆ 10 ಸಾವಿರ ರೂಪಾಯಿ ಕೊಟ್ಟು ಈ ಮೊಬೈಲನ್ನು ಖರೀದಿ ಮಾಡಿದ್ದರು. ಆದ್ರೆ ವಾರೆಂಟಿ ಮುಗಿಯುವ ಮೊದಲೇ ಮೊಬೈಲ್ ಬ್ಲಾಸ್ಟ್ ಆಗಿದ್ದು ಮಂಜುನಾಥ್ ಅವರಿಗೆ ಬೇಸರ ತಂದಿದೆ.

     

  • ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ.

    ಇಂದಿನಿಂದ ಜೂನ್ 16ರವರೆಗೆ ಮಳೆ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಪ್ರವಾಹ ಸ್ಥಿತಿ ಏರ್ಪಟ್ಟರೆ ಪರಿಸ್ಥಿತಿ ನೋಡಿಕೊಂಡು ಶಾಲೆಗಳಿಗೆ ರಜೆ ನೀಡುವಂತೆಯೂ ಜಿಲ್ಲಾಡಳಿತ ನಿರ್ದೇಶಿಸಿದೆ.

    ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಮುಂಗಾರು ಚುರುಕುಗೊಂಡಿದ್ದು ಜಿಲ್ಲೆಯಾದ್ಯಾಂತ ಸರಾಸರಿ 84.1 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿಯೇ ಕುಮಟಾದಲ್ಲಿ ಅತಿ ಹೆಚ್ಚು 163.4 ಮಿ.ಮೀಟರ್ ಮಳೆ ದಾಖಲಾಗಿದೆ. ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ಗುಡ್ಡ ಕುಸಿದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಬಳಸಿ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.

  • ಉಡುಪಿಯಲ್ಲಿ ಮುಂದುವರಿದ ಮುಂಗಾರು ಮಳೆ- ಹೆದ್ದಾರಿ ಕುಸಿತ, ಹೇರಿಕುದ್ರುವಿನಲ್ಲಿ ಮನೆಗಳಿಗೆ ನುಗ್ಗಿದ ನೀರು

    ಉಡುಪಿಯಲ್ಲಿ ಮುಂದುವರಿದ ಮುಂಗಾರು ಮಳೆ- ಹೆದ್ದಾರಿ ಕುಸಿತ, ಹೇರಿಕುದ್ರುವಿನಲ್ಲಿ ಮನೆಗಳಿಗೆ ನುಗ್ಗಿದ ನೀರು

    ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೆದ್ದಾರಿ ಅಲ್ಲಲ್ಲಿ ಕುಸಿದು ಹೋಗಿದೆ. ಕರಾವಳಿ ಬೈಪಾಸ್ ಬಳಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.

    ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ವಾಹನ ಸವಾರರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಪಕ್ಕದ ಡ್ರೈನೇಜ್ ಕೆಟ್ಟು ಹೋಗಿದ್ದು ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ.

    ಅತ್ತ ಕುಂದಾಪುರದ ಹೇರಿಕುದ್ರು ಎಂಬಲ್ಲಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಈ ಪ್ರದೇಶದ ಸುಮಾರು 50 ಮನೆಗಳಿಗೆ ಕೆಸರು ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಉಡುಪಿ- ಕುಂದಾಪುರ- ಕಾರವಾರ ಸಂಪರ್ಕಿಸುವ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಚರಂಡಿ ವ್ಯವಸ್ಥೆಯಿಲ್ಲದೆ ಮಳೆಯ ನೀರು ಮನೆಗಳತ್ತ ಹರಿಯುತ್ತಿದೆ. ಮೊಣಕಾಲು ಮುಳುಗುವಷ್ಟು ನೀರು ಮನೆಗಳತ್ತ ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ, ಪಡುಬಿದ್ರೆ, ಹೆಬ್ರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು ಇಂದು ದಿನಪೂರ್ತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರೆದರೆ ನದಿಗಳು ತುಂಬುವ ಸಾಧ್ಯತೆಯಿದೆ. ಮಳೆಯ ಜೊತೆ ಗಾಳಿಯೂ ಬೀಸುತ್ತಿದ್ದು ಉಡುಪಿ ನಗರದಲ್ಲೇ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ವಿದ್ಯುತ್ ವ್ಯತ್ಯಯವಾಗಿದೆ. ಕಟಪಾಡಿ, ಮಟ್ಟು ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗಿದೆ.

    ಕುಂದಾಪುರ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು ಸಂಚಾರಕ್ಕೆ ವ್ಯತ್ಯಯವಾಗಿದೆ. ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ಮಳೆ ಸ್ವಲ್ಪ ಕಿರಿಕಿರಿ ಕೊಡುತ್ತಿದೆ. ವಾತಾವರಣ ಪೂರ್ಣ ತಂಪಾಗಿದೆ. ಹಳ್ಳಿ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣವಿದೆ.

     

  • ಉಡುಪಿಯಲ್ಲಿ ಭಾರೀ ಮಳೆಗೆ ಮರ ಬಿದ್ದು 2 ತಿಂಗಳ ಹಿಂದೆ ನಿರ್ಮಿಸಿದ್ದ ಅಂಗಡಿ ಜಖಂ

    ಉಡುಪಿಯಲ್ಲಿ ಭಾರೀ ಮಳೆಗೆ ಮರ ಬಿದ್ದು 2 ತಿಂಗಳ ಹಿಂದೆ ನಿರ್ಮಿಸಿದ್ದ ಅಂಗಡಿ ಜಖಂ

    ಉಡುಪಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭರ್ಜರಿ ಮಳೆಯಾಗುತ್ತಿದೆ. 10 ದಿನದ ಹಿಂದೆ ಮಳೆ ಆರಂಭವಾಗಿದ್ದರೂ ಇಂದು ಸುರಿಯುತ್ತಿರುವ ಮಳೆ ಮುಂಗಾರಿನ ಪ್ರವೇಶವಾದಂತಾಗಿದೆ.

    ಭಾರೀ ಮಳೆಗೆ ಮರಗಳು ಧರೆಗುರುಳಿದ ಘಟನೆ ನಗರದ ಕುಂಜಿಬೆಟ್ಟುವಿನ ಬೈಲಕೆರೆಯಲ್ಲಿ ನಡೆದಿದೆ. ಇಸ್ಮಾಯಿಲ್ ಎಂಬವರ ಅಂಗಡಿ ಮೇಲೆ ಭಾರೀ ಗಾತ್ರದ ಮರ ಬಿದ್ದು ಅಂಗಡಿ ಸಂಪೂರ್ಣ ನಜ್ಜುಗುಜ್ಜಾಗಿದೆ.

    2 ತಿಂಗಳ ಹಿಂದೆಯಷ್ಟೇ ಇಸ್ಮಾಯಿಲ್ ಹೊಸ ಅಂಗಡಿಯನ್ನು ನಿರ್ಮಿಸಿ ವ್ಯಾಪಾರ ಶುರುಮಾಡಿದ್ದರು. ಇದೀಗ ಮೊದಲ ಮಳೆಗೆ ಅಂಗಡಿ ಜಖಂ ಆಗಿದ್ದು, ಸುಮಾರು 3 ಲಕ್ಷ ರುಪಾಯಿ ನಷ್ಟವಾಗಿದೆ ಅಂತಾ ಅಂದಾಜಿಸಲಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಮರ ತೆರವು ಕಾರ್ಯಾಚರಣೆ ಮಾಡಿದೆ. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಕೆಲವೆಡೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

  • ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಯಚೂರು/ಉಡುಪಿ: ಮಧ್ಯಪ್ರದೇಶದ ಸರ್ಕಾರ 6 ಮಂದಿ ರೈತರ ಮೇಲೆ ನಡೆಸಿದ ಗೋಲಿಬಾರ್ ಪ್ರಕರಣದ ವಿರುದ್ಧ ಹಾಗು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ರೈಲ್ ರೋಖೋ ಯತ್ನ ನಡೆಸಿದ್ದಾರೆ.

    ಉಡುಪಿ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಯಲು ಯತ್ನಿಸಿದರು. ಉಡುಪಿಯಲ್ಲಿ ಇಂದ್ರಾಣಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಂಗಳೂರು-ಮಡಗಾಂ ರೈಲನ್ನು ತಡೆಯಲು ಯತ್ನಿಸಿದರು.

    ಮಧ್ಯಪ್ರದೇಶ ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿನಲ್ಲಿ ರೈಲ್ವೇ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟಿಸಲು ಯತ್ನಿಸಿದರು. ಈ ವೇಳೆ 30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ. ಇದಕ್ಕೂ ಮುನ್ನ ನಗರದಲ್ಲಿ ಬೈಕ್ ಮೆರವಣಿಗೆ ನಡೆಸಿ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

    ಯಾದಗಿರಿಯಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರೆಲ್ವೇ ನಿಲ್ದಾಣಕ್ಕೆ ನುಗ್ಗಿ ಕೋಯಿಮತ್ತೂರ್ ಕುರ್ಲಾ ಎಕ್ಸ್‍ಪ್ರೆಸ್ ರೈಲು ತಡೆಯಲು ಯತ್ನಿಸಿದಾಗ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ.

    ದಾವಣಗೆರೆಯಲ್ಲೂ ಕೂಡ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿದ್ರು.

     

  • ಉಡುಪಿಯಲ್ಲಿ ಭಾರೀ ಮಳೆ- ಬ್ರಹ್ಮಾವರದಲ್ಲಿ ರಸ್ತೆ ತುಂಬೆಲ್ಲಾ ನೀರು

    ಉಡುಪಿಯಲ್ಲಿ ಭಾರೀ ಮಳೆ- ಬ್ರಹ್ಮಾವರದಲ್ಲಿ ರಸ್ತೆ ತುಂಬೆಲ್ಲಾ ನೀರು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭಾರೀ ಮಳೆಯಾಗಿದೆ. ಶುಕ್ರವಾರ ಮುಂಜಾನೆಯಿಂದ ಆರಂಭವಾದ ಮಳೆ ಸಂಜೆಯಾಗುತ್ತಿದ್ದಂತೆ ಬಿರುಸುಗೊಂಡಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ತುಂತುರು ಮಳೆ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಭಾರೀ ಮಳೆಯಾಗಿದೆ.

    ಮುಂಗಾರು ಮಳೆ ಜೂನ್ 1ಕ್ಕೆ ಕರಾವಳಿಗೆ ಎಂಟ್ರಿ ಕೊಟ್ಟಂತೆ ಭಾಸವಾಗಿತ್ತು. ಆದ್ರೆ ಮುಂಗಾರು ಅಬ್ಬರ ಒಂದೇ ದಿನಕ್ಕೆ ಮುಗಿದಿತ್ತು. ಶುಕ್ರವಾರದಂದು ಉಡುಪಿಯಲ್ಲಿ ಮತ್ತೆ ಮಳೆ ಶುರುವಾಗಿದೆ. ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣದಂತೆ ಭಾಸವಾಗುತ್ತಿತ್ತು. ಉಡುಪಿ- ಕುಂದಾಪುರ ಮತ್ತು ಕಾರ್ಕಳದಲ್ಲಿ ಕೂಡಾ ಭಾರೀ ಮಳೆಯಾಗಿದೆ.

    ಬತ್ತಿ ಹೋಗಿರುವ ಸ್ವರ್ಣಾ ನದಿಯಲ್ಲಿ ನೀರು ತುಂಬುವಂತಹ ಬಿರುಸಿನ ಮಳೆ ಮಾತ್ರ ಇದಲ್ಲ. ನಿರಂತರ ಎರಡು ದಿನ ಭಾರೀ ಮಳೆಯಾದರೆ ಮಾತ್ರ ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಗಾರು ವಾರಗಳ ಕಾಲ ಮುಂದೆ ಹೋಗಿದೆ. ಹೀಗಾಗಿ ಜೂನ್ ತಿಂಗಳ ಅಬ್ಬರದ ಮುಂಗಾರು ಕಾಣಿಸುತ್ತಿಲ್ಲ.

    ಉಡುಪಿ ಜಿಲ್ಲೆಯ ಬ್ರಹ್ಮಾವರ- ಮಟಪಾಡಿ- ಕುಂಜಾಲು ಭಾಗದಲ್ಲೂ ಕೂಡ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯ ಮೇಲೆ ಮಳೆ ನೀರು ನುಗ್ಗಿದೆ. ಇದೇ ರೀತಿ ಮಳೆ ಆದ್ರೆ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರು ಶುರು ಮಾಡುತ್ತಾರೆ. ಒಟ್ಟಿನಲ್ಲಿ ಬೆಳಗ್ಗೆ ಮಳೆ, ಮಧ್ಯಾಹ್ನ ಬಿಸಿಲು, ಸಂಜೆ ಮತ್ತೆ ಮಳೆಯಾಗುತ್ತಿದ್ದು ಮಳೆ ಕಣ್ಣಾಮುಚ್ಚಾಲೆ ಆಡಿದೆ.

  • ಉಡುಪಿಯ ಹೆಬ್ರಿಯಲ್ಲಿ ಮಂಡ್ಯ ಪೊಲೀಸರ ಎಡವಟ್ಟು- ಆರೋಪಿಯೆಂದು ತಿಳಿದು ಕರವೇ ಜಿಲ್ಲಾಧ್ಯಕ್ಷರ ತಲೆಗೆ ಪಿಸ್ತೂಲಿಟ್ರು

    ಉಡುಪಿಯ ಹೆಬ್ರಿಯಲ್ಲಿ ಮಂಡ್ಯ ಪೊಲೀಸರ ಎಡವಟ್ಟು- ಆರೋಪಿಯೆಂದು ತಿಳಿದು ಕರವೇ ಜಿಲ್ಲಾಧ್ಯಕ್ಷರ ತಲೆಗೆ ಪಿಸ್ತೂಲಿಟ್ರು

    ಉಡುಪಿ: ಮಂಡ್ಯ ಪೊಲೀಸರು ಹಾಸನದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಿಗೆ ಪಿಸ್ತೂಲ್ ತಲೆಗಿಟ್ಟು ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಮರಾವತಿ ಹೋಟೆಲ್‍ನಲ್ಲಿ ಹಾಸನದ ಕರವೇ ಕಾರ್ಯಕರ್ತರು ತಿಂಡಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಮಂಡ್ಯದಿಂದ ಬಂದ ಸುಮಾರು 15 ಮಂದಿ ಪೊಲೀಸರು ಹಾಸನದ ಕರವೇ ಅಧ್ಯಕ್ಷ ಸತೀಶ್ ಪಾಟೀಲ್ ತಲೆಗೆ ಪಿಸ್ತೂಲ್ ಹಿಡಿದು ಹಲ್ಲೆ ನಡೆಸಿದರು.

    ಕೇರಳ ರಾಜ್ಯ ಸರ್ಕಾರ ಮಲಯಾಳಂ ಭಾಷೆ ಕಡ್ಡಾಯ ಮಾಡಿದ್ದ ಹಿನ್ನೆಲೆಯಲ್ಲಿ ಕರವೇ ಇಂದು ಉಡುಪಿಯಿಂದ ಕಾಸರಗೋಡು ಚಲೋ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಅದಕ್ಕಾಗಿ ರಾಜ್ಯದ ಹಲವು ಭಾಗದ ಕರವೇ ಕಾರ್ಯಕರ್ತರು ಉಡುಪಿಗೆ ಬಂದಿದ್ದರು. ಹಾಸನದಿಂದ ಬಂದ ಕರವೇ ಕಾರ್ಯಕರ್ತರು ಉಡುಪಿಯ ಗಡಿ ಭಾಗ ಹೆಬ್ರಿಯ ಅಮರಾವತಿ ಹೋಟೆಲ್‍ನಲ್ಲಿ ತಂಗಿದ್ದರು.

    ಬೆಳಗ್ಗೆ ನಿದ್ದೆಯಿಂದ ಎದ್ದು ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೀಪುಗಳಲ್ಲಿ ಬಂದ ಪೊಲೀಸರು ಸತೀಶ್ ಪಾಟೀಲ್ ಗೆ ಎರಡೇಟು ಬಿಗಿದು ಪಿಸ್ತೂಲನ್ನು ತಲೆಗೆ ಇಟ್ಟಿದ್ದಾರೆ. ಏನು ನಡೆಯುತ್ತಿದೆ ಎಂದು ಗೊತ್ತಾಗದ ಕರವೇ ಕಾರ್ಯಕರ್ತರು ಪೊಲೀಸರನ್ನು ವಿಚಾರಿಸಿದ್ದಾರೆ. ಈ ಸಂದರ್ಭ ಜೊತೆಯಲ್ಲಿದ್ದವರಿಗೂ ಪೊಲೀಸರು ಥಳಿಸಿದ್ದಾರೆ. ಒಂದೆರಡು ನಿಮಿಷ ಕಳೆಯುತ್ತಿದ್ದಂತೆ ಸತ್ಯ ಬಹಿರಂಗವಾಗಿದೆ.

     

    ಆರೋಪಿಯೆಂದು ತಪ್ಪು ತಿಳಿದ ಪೊಲೀಸರು: ಮಂಡ್ಯ ಪೊಲೀಸರು ಯಾವುದೋ ಒಂದು ಪ್ರಕರಣ ಸಂಬಂಧ ಆರೋಪಿಗಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದರು. ಪೊಲೀಸರಿಗೆ ಆರೋಪಿಯ ಲೊಕೇಶನ್ ಹೆಬ್ರಿ ಆಸುಪಾಸಿನಲ್ಲಿ ಕಾಣಿಸಿಕೊಂಡಿತ್ತು. ಸತೀಶ್ ಆರೋಪಿಯಂತೆ ಕಂಡ. ನೋಡಿದವರೇ ಪರಾರಿಯಾಗುವ ಮೊದಲು ಹಿಡಿಯೋಣ ಎಂದು ಮಂಡ್ಯ ಪೊಲೀಸರು ತಲೆಗೆ ಪಿಸ್ತೂಲ್ ಇಟ್ಟಿದ್ದಾರೆ. ಕರವೇ ಹಾಸನ ಜಿಲ್ಲಾಧ್ಯಕ್ಷನನ್ನು ಆರೋಪಿ ಎಂದು ತಪ್ಪಾಗಿ ಭಾವಿಸಿ ಇಷ್ಟೆಲ್ಲಾ ಎಡವಟ್ಟು ಮಾಡಿದ್ದಾರೆ.

    ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಗೊತ್ತಾದ ಕೂಡಲೇ ಕರವೇ ಕಾರ್ಯಕರ್ತರು ಪೊಲೀಸರ ಮೇಲೆ ಮುಗಿಬಿದ್ದರು. ಅನ್ಯಾಯವಾಯ್ತು.., ಪೊಲೀಸರು ದೌರ್ಜನ್ಯ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆಬ್ರಿ ಅಮರಾವತಿ ಹೋಟೆಲ್‍ನಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. ಮಂಡ್ಯ ಪೊಲೀಸರು ಮತ್ತು ಹಾಸನ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸ್ಥಳಕ್ಕಾಗಮಿಸಿ ಪೊಲೀಸರು ಮತ್ತು ಕಾರ್ಯಕರ್ತರ ಜಗಳ ಬಿಡಿಸಿದರು. ಮಂಡ್ಯ ಪೊಲೀಸರು ನಮ್ಮದು ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯ್ತ      

    ಕಾಸರಗೋಡು ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರವೇ ಪ್ರವೀಣ್ ಶೆಟ್ಟಿ ಬಣ ಉಡುಪಿಗೆ ಬಂದಿತ್ತು. ಹಾಸನ- ಚಿಕ್ಕಮಗಳೂರು- ಕಾರವಾರ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದ ಜನ ಉಡುಪಿಗೆ ಬಂದಿದ್ದರು. ಪೊಲೀಸರು ಕ್ಷಮೆ ಕೇಳಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ ಪೊಲೀಸರು ಕರ್ತವ್ಯದಲ್ಲಿದ್ದಾಗ ಪ್ರಜ್ಞೆಯನ್ನು ಇಟ್ಟುಕೊಳ್ಳಬೇಕು. ಅಮಾಯಕರ ಮೇಲೆ ಹಲ್ಲೆಯನ್ನು ಮಾಡಬಾರದು. ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಪ್ರವೀಣ್ ಶೆಟ್ಟಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಗೆಳೆಯರ ಜೊತೆ ಟಿ ಕುಡಿಯುತ್ತಿದ್ದೆ, ನನಗೆ ಏನಾಗ್ತಿದೆ ಅಂತ ಗೊತ್ತಾಗಿಲ್ಲ. ಪಿಸ್ತೂಲು ಕಣ್ಣಮುಂದೆ ಬಂದಾಗ ಜೀವಭಯವಾಯ್ತು. ಯಾರು ಏನು ಮಾಡುತ್ತಿದ್ದಾರೆ ಎಂದೂ ತಿಳಿಯಲಿಲ್ಲ. ಮಫ್ತಿಯಲ್ಲಿದ್ದದ್ದರಿಂದ ನನಗೆ ಬಂದವರು ಪೊಲೀಸರು ಅಂತನೂ ಗೊತ್ತಾಗಲಿಲ್ಲ. ಯಾರೋ ಆಗಂತುಕರು ಬಂದು ದಾಳಿ ನಡೆಸುತ್ತಿದ್ದಾರೆ ಎಂದು ಭಾವಿಸಿದೆ ಅಂತ ಸತೀಶ್ ಪಾಟೀಲ್ ಪಬ್ಲಿಕ್ ಟಿವಿ ಜೊತೆ ಆತಂಕದಿಂದಲೇ ಮಾತನಾಡಿದರು.

     

  • ಉಡುಪಿಯಿಂದ ತಿರುಪತಿಗೆ ಹೋಗ್ತಿದ್ದ ಟೂರಿಸ್ಟ್ ಬಸ್ ಪಲ್ಟಿ- 10 ಮಂದಿಗೆ ಗಾಯ

    ಉಡುಪಿಯಿಂದ ತಿರುಪತಿಗೆ ಹೋಗ್ತಿದ್ದ ಟೂರಿಸ್ಟ್ ಬಸ್ ಪಲ್ಟಿ- 10 ಮಂದಿಗೆ ಗಾಯ

    ಮಂಗಳೂರು: ಉಡುಪಿಯಿಂದ ತಿರುಪತಿಗೆ ಹೋಗುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿಯಲ್ಲಿ ನಡೆದಿದೆ.

    ಸುಮಾರು 32 ಮಂದಿ ಪ್ರಯಾಣಿಕರೊಂದಿಗೆ ತಿರುಪತಿಗೆ ಹೋಗುತ್ತಿದ್ದ ತಿರುಮಲ ಖಾಸಗಿ ಟೂರಿಸ್ಟ್ ಬಸ್ ಕೆಸರು ಗದ್ದೆ ಎಂಬಲ್ಲಿ ಪಲ್ಟಿಯಾಗಿದ್ದು ಹತ್ತು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಸ್ ಪಲ್ಟಿಯಾಗಿದ್ದು ಚಾಲಕ ನಿದ್ದೆಗೆ ಜಾರಿದ್ದರಿಂದ ಅಫಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.